ಸ್ಮರಣೆಯೊಂದೇ ಸಾಲದೇ?
ಗೆಳೆಯ ಸುಧೀಂದ್ರ ಕನ್ನಡ ಲೇಖಕರ ನೆನಪುಗಳನ್ನು ವಿಡಿಯೋ ಮೂಲಕ ಹಂಚಿಕೊಳ್ಳುತ್ತಿದ್ದಾನೆ. ಇದು ಬಹಳ ಸಂತೋಷದ ಸಂಗತಿ. ಅವನು ನಿರಂಜನ ಮತ್ತು ಅನುಪಮಾ ಅವರನ್ನು ಕುರಿತು ಮಾತಾಡಿದ್ದು ಸ್ವಾರಸ್ಯಕರವಾಗಿದೆ. ಕೆಲವು ಖಾಸಗೀ ನೆನಪುಗಳನ್ನು ದಾಖಲಿಸುವ ಪ್ರಯತ್ನ ಇಲ್ಲಿದೆ.
ನಿರಂಜನ ಮತ್ತು ಅನುಪಮಾ ಅವರ ಸ್ಮರಣೆ ಎಂದಿಗೂ ಚೇತೋಹಾರಿ.
ನಮ್ಮ ತಂದೆಗೆ ನಿರಂಜನ ಹತ್ತಿರದ ಗೆಳೆಯರು. ಒಂದು ಕಾಲದಲ್ಲಿ ಇಬ್ಬರೂ ಕನ್ನಡ ಪತ್ರಿಕೆಗಳಿಗೆ ಬರೆದವರು. ಆದರೆ ನನ್ನ ತಂದೆಯವರ ಒಲವು ಇಂಗ್ಲಿಷ್ ಬರವಣಿಗೆಯಲ್ಲಿ ಹೆಚ್ಚಿತ್ತು. ನಿರಂಜನ ದಂಪತಿಗಳ ಮದುವೆಯಲ್ಲೂ ನಮ್ಮ ತಂದೆ ಒಂದು ಸಣ್ಣ ಪಾತ್ರ ವಹಿಸಿದ್ದರು. ನನ್ನ ತಾಯಿಗೆ ಅನುಪಮಾ ಅವರು ಗೆಳತಿಯಾಗಿದ್ದರು. ಒಮ್ಮೆ ಅವರಿಗೆ ಚಿಕಿತ್ಸೆ ಕೂಡಾ ನೀಡಿದ್ದರು. ನಮ್ಮ ತಂದೆ ದೆಹಲಿಗೆ ವರ್ಗವಾಗಿ ಹೋದಾಗ ಐದು ವರ್ಷಗಳ ಕಾಲ ಸಂಪರ್ಕಗಳು ಕಡಿಮೆಯಾದವು. ಆಗ ಇಂದಿನಂತೆ ಫೋನ್, ಸೋಷಿಯಲ್ ಮೀಡಿಯಾ ಇವೆಲ್ಲಾ ಇರಲಿಲ್ಲ. ಪತ್ರ ವ್ಯವಹಾರವೊಂದೇ ಆಗಿದ್ದ ಸಂಪರ್ಕ ಸಾಧನ!
ನಾವು ಮರಳಿ ಬೆಂಗಳೂರಿಗೆ ಬಂದಾಗ ಅವರು ನಮ್ಮ ತಂದೆಗೆ ವಿಮರ್ಶೆಗಾಗಿ ಕಳಿಸಿದ ಜ್ಞಾನಗಂಗೋತ್ರಿಯ ಸಂಪುಟಗಳನ್ನು ಓದುತ್ತಾ ನಾನು ಬೆಳೆದೆ. ಅಂಥ ದೊಡ್ಡ ಪ್ರಮಾಣದ ವಿಶ್ವಕೋಶದ ಸಂಪಾದನೆಯ ಹೊಣೆಯನ್ನು ಹೊರುವುದು ನಿರಂಜನ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಆದರೆ ಕೆಲಸದ ಒತ್ತಡ ಅವರ ಮೇಲೆ ಹೆಚ್ಚಾಯಿತು. ಸಂಪುಟದ ಬಿಡುಗಡೆಯ ದಿನವೇ ಭಾಷಣ ಮಾಡುವಾಗ ಕುಸಿದು ಬಿದ್ದರು. ಕೈಕಾಲುಗಳ ಮೇಲೆ ಸ್ವಾಧೀನ ಕಳೆದುಕೊಂಡರು. ಕೊನೆಯವರೆಗೂ ವೀಲ್ ಚೇರಿನ ಮೇಲೆ ಜೀವನ ನಡೆಸಿದರು.
ನಮ್ಮ ಮನೆಗೆ ಅವರು ಬಂದಿದ್ದು ನನಗೆ ನೆನಪಿದೆ. ಅವರು ಕಾರಿನಲ್ಲೇ ಕುಳಿತಿದ್ದರು. ಅನುಪಮಾ ಅವರು ಒಳಗೆ ಬಂದು ನಮ್ಮ ತಾಯಿಯೊಂದಿಗೆ ಹರಟೆ ಹೊಡೆದರು. ನಮ್ಮ ತಂದೆ ಕಾರಿನಲ್ಲಿ ಕುಳಿತು "ಶಿವರಾವ್" ಅವರೊಂದಿಗೆ ಹರಟೆ ಹೊಡೆದರು. ಅವರಿಗೆ ಕಾಫಿ ತಲುಪಿಸಿದ್ದು ನಾನು. ನನ್ನ ತಾಯಿ ಅನುಪಮಾ ಅವರಿಗೆ ನಾನೂ ಬರೆಯುತ್ತೇನೆಂದು ಹೇಳಿದರು. ಅವರು ನನಗೆ ಬರೆಯಲು ಉತ್ತೇಜನ ಕೊಟ್ಟರು.
ಈ ಉತ್ತೇಜನ ಮುಂದೆ ಒಂದು ನಿರ್ದಿಷ್ಟ ರೂಪ ಪಡೆದುಕೊಂಡಿತು.
ನಾನು ಪಿಯುಸಿ ಮುಗಿಸಿ ಬಿ.ಇ. ಸೇರುವ ಮುನ್ನ ಇದ್ದ ರಜೆಯಲ್ಲಿ ನನಗೆ "ಕುರಿ" ನಾಟಕದ ಭಾಷಾಂತರದ ಕೆಲಸವನ್ನು ನನ್ನ ಕನ್ನಡ ಮೇಷ್ಟ್ರು ಕೆ. ಎನ್. ನಾಗರಾಜು ವಹಿಸಿದರು. ಮುಂದೆ ಅದನ್ನು ಸಮುದಾಯ ತಂಡದವರು ಯಶಸ್ವಿಯಾಗಿ ಶ್ರೀ ಎಂ. ಎಸ್. ಸತ್ಯು ಅವರ ನಿರ್ದೇಶನದಲ್ಲಿ ಪ್ರಯೋಗ ಮಾಡಿದರು. ಇದನ್ನು ನಿರಂಜನ ಅವರು ಗಮನಿಸಿದರೆಂದು ತೋರುತ್ತದೆ. ಅವರ ಮಗಳು ತೇಜಸ್ವಿನಿ ಮತ್ತು ನಾನು ನ್ಯಾಷನಲ್ ಕಾಲೇಜಿನಲ್ಲಿ ಓದಿದವರು. ಅವಳು ಬಿ.ಎ. ವಿದ್ಯಾರ್ಥಿನಿ. ನಾನು ಪಿ.ಯು.ಸಿ. ಸೈನ್ಸ್ ವಿದ್ಯಾರ್ಥಿ. ಅವಳ ಮೂಲಕ ನನ್ನ ಭಾಷಾಂತರದ ಬಗ್ಗೆ ನಿರಂಜನ ಅವರಿಗೆ ತಿಳಿದಿರಬಹುದು. ಅವಳೂ ವಿದ್ಯಾರ್ಥಿ ದೆಸೆಯಲ್ಲೇ ಶೇಕ್ಸ್ಪಿಯರ್ ಕವಿಯ ಜೂಲಿಯಸ್ ಸೀಸರ್ ನಾಟಕವನ್ನು ಭಾಷಾಂತರ ಮಾಡಿದಳು. ಅದನ್ನು ನ್ಯಾಷನಲ್ ಕಾಲೇಜ್ ವಿದ್ಯಾರ್ಥಿಗಳು ರಂಗದ ಮೇಲೆ ಪ್ರಯೋಗ ಮಾಡಿದರು ಕೂಡಾ.
ನಿರಂಜನ ಅವರು ಈಗ "ವಿಶ್ವಕಥಾಕೋಶ" ಮಾಲಿಕೆಯ ಸಂಪಾದಕತ್ವವನ್ನು ವಹಿಸಿಕೊಂಡಿದ್ದರು! ಬೇರೆ ಯಾರಾದರೂ ಆಗಿದ್ದರೆ ಅವರ ಅನಾರೋಗ್ಯದ ಸ್ಥಿತಿಯಲ್ಲಿ ಎದೆಗುಂದುತ್ತಿದ್ದರು. ಸಾಲದು ಎಂಬಂತೆ ಅನುಪಮಾ ಅವರಿಗೆ ಕ್ಯಾನ್ಸರ್ ಕಾಯಿಲೆ ಬೇರೆ ಕಾಣಿಸಿಕೊಂಡಿತ್ತು. ಅವರಿಗೆ ಆಪರೇಷನ್ ಆಗಿದ್ದು ನ್ಯಾಷನಲ್ ಕಾಲೇಜಿನ ಹತ್ತಿರವೇ ಇರುವ ಒಂದು ಆಸ್ಪತ್ರೆಯಲ್ಲಿ. ಆಗ ಅವರನ್ನು ನೋಡಿಕೊಂಡು ಬರಲು ನನ್ನನ್ನು ನಮ್ಮ ತಂದೆ ಕಳಿಸಿದ್ದರು. "ನನಗೆ ಏನೂ ಆಗಿಲ್ಲ, ಅವರು ಸುಮ್ಮನೆ ಹೆದರಿಕೊಂಡಿದ್ದಾರೆ! ಅಮ್ಮನಿಗೆ ಹೇಳು, ಧೈರ್ಯವಾಗಿರಲಿ!" ಎಂದು ಅವರೇ ನನಗೆ ಧೈರ್ಯ ಹೇಳಿ ಕಳಿಸಿದರು!
ವಿಶ್ವಕಥಾಕೋಶದಲ್ಲಿ ೨೫ ಸಂಪುಟಗಳು! ವಿವಿಧ ದೇಶಗಳ ವಿವಿಧ ಭಾಷೆಗಳ ಕಥೆಗಳನ್ನು ಆಯ್ದು ಭಾಷಾಂತರ ಮಾಡಿಸಿ ಪ್ರಕಟಿಸುವ ಸಾಹಸ (ನವಕರ್ನಾಟಕ). ಒಂದು ದಿನ ರಾಜಾರಾಮ್ ಅವರು ನಮ್ಮ ಮನೆಗೆ ಬಂದು ಎರಡು ಸಂಪುಟಗಳ ಅನುವಾದದ ಕೆಲಸವನ್ನು ಒಪ್ಪಿಸಿದರು - ಒಂದು ನಮ್ಮ ತಂದೆಗೆ ಮತ್ತು ಒಂದು ನನಗೆ!! ಹಾಲೆಂಡ್ ದೇಶದ ಕಥೆಗಳ ಅನುವಾದ ನಮ್ಮ ತಂದೆಗೆ, ವಿಯೆಟ್ನಾಮ್ ದೇಶದ ಕಥೆಗಳ ಅನುವಾದ ನನಗೆ! ನನಗೆ ನಂಬುವುದೇ ಕಷ್ಟವಾಯಿತು. ಆಗ ಇಂದಿನ ಅನುಕೂಲಗಳು ಯಾವುವೂ ಇರಲಿಲ್ಲ. ಪತ್ರ ಬರೆದು ಲೇಖಕ/ಪ್ರಕಾಶಕರಿಂದ ಅನುಮತಿ ಪಡೆಯ ಬೇಕು, ಕಥೆಗಳನ್ನು ತರಿಸಿಕೊಳ್ಳಬೇಕು, ಇಂಗ್ಲಿಷ್ ಭಾಷೆಗೆ ಅನುವಾದ ಆಗಿರದಿದ್ದರೆ ಮೊದಲು ಅದು ಆಗಬೇಕು, ಕಥೆಯನ್ನು ಟೈಪ್ ಮಾಡಬೇಕು, ಅವುಗಳನ್ನು ಅನುವಾದಕರಿಗೆ ಕಳಿಸಿಕೊಡಬೇಕು, .... ಇವನ್ನೆಲ್ಲಾ ನಿರಂಜನರು ಅದು ಹೇಗೆ ಮಾಡಿದರೋ! ಅವರಿಗೆ ಬೆನ್ನೆಲುಬಾಗಿ ಅವರ ಮಗಳು ಸೀಮಂತಿನಿ ಇದ್ದಳು ಎಂದು ಅವರು ಹೇಳಿಕೊಂಡದ್ದು ನೆನಪಿದೆ.
ನನಗೆ ಮೊದಲು ಹತ್ತು ಕತೆಗಳ ಕಡತ ಬಂತು. ಅದನ್ನು ಅನುವಾದಿಸಿ ಮುಗಿಸುವಷ್ಟರಲ್ಲಿ ಬಹಳ ಸಂಕೋಚದಿಂದ ರಾಜಾರಾಂ ಅವರು ಹನ್ನೊಂದನೇ ಕತೆಯನ್ನು ಮನೆಗೆ ತಂದುಕೊಟ್ಟರು. "ಇದು ಬಹಳ ಅಪರೂಪದ ಕಥೆ. ಇದನ್ನು ಬಿಡುವುದಕ್ಕೆ ಮನಸ್ಸಾಗುತ್ತಿಲ್ಲ. ನಮ್ಮ ಕರಾರಿನ ಪ್ರಕಾರ ನಾವು ಹತ್ತೇ ಕಥೆಗಳನ್ನು ಕೊಡಬೇಕು ..." ಇತ್ಯಾದಿ ಹೇಳಿದರು!!
೨೫ ಸಂಪುಟಗಳನ್ನು ಐದು ಹಂತಗಳಲ್ಲಿ ಬಿಡುಗಡೆ ಮಾಡಿದರು. ನನ್ನ ಅನುವಾದ ಸಂಗ್ರಹ ಮೊದಲ ಸಮಾರಂಭದಲ್ಲೇ ಬಿಡುಗಡೆಯಾಗುವುದೆಂದು ನಿರ್ಧಾರಿತವಾಗಿತ್ತು. ಅನುವಾದ ಮುಗಿದ ನಂತರ ನಾನು ಮತ್ತು ನಮ್ಮ ತಂದೆ ಕಡತವನ್ನು ಹಿಡಿದು ನಿರಂಜನರ ಮನೆಗೆ ಹೊರಟೆವು. ಐದನೇ ಬ್ಲಾಕ್ ಜಯನಗರದ ಮನೆಗೆ ನಾವು ನಡೆದೇ ಹೋದೆವು. ನಮ್ಮ ತಂದೆ ದಾರಿಯಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ನಮ್ಮನ್ನು ಸೀಮಂತಿನಿ ಒಳಗೆ ಕರೆದುಕೊಂಡು ಹೋದಳು. ನಿರಂಜನ ಅವರು ಆತ್ಮೀಯವಾಗಿ ನಕ್ಕು ಸ್ವಾಗತಿಸಿದರು. ನನ್ನ ಅನುವಾದವನ್ನು ಪಡೆದುಕೊಂಡು ಕಣ್ಣಾಡಿಸಿ ನೋಡಿದರು. ಅವರ ಕಣ್ಣಿನ ಹೊಳಪಿನಿಂದ ಅವರಿಗೆ ತೃಪ್ತಿಯಾಗಿರಬಹುದು ಎಂದು ಊಹಿಸಿದೆ. ಅವರು ನಮ್ಮೊಂದಿಗೆ ಹರಟೆ ಹೊಡೆದರು. ನನ್ನ ಬಗ್ಗೆ ವಿಚಾರಿಸಿದರು. ನಾನೊಬ್ಬ ದೊಡ್ಡ ಲೇಖಕ ಎನ್ನುವ ಹಾಗೆ "ನೀವು" ಎಂದು ಸಂಬೋಧಿಸುತ್ತಿದ್ದರು! "ಕುರಿ" ನಾಟಕದ ಬಗ್ಗೆ ಕೇಳಿ ತಿಳಿದುಕೊಂಡರು. ನಮಗೆ ಕಾಫಿ ಬಂತು. ಅವರ ಮನೆಯ ನಾಯಿ ಅಲ್ಲೇ ಸುಳಿದಾಡುತ್ತಿತ್ತು. "ಅವನು ಏನೂ ಮಾಡೋದಿಲ್ಲ" ಎಂದು ನಿರಂಜನ ನನಗೆ ಧೈರ್ಯ ಹೇಳಿದರು! ನಮ್ಮನ್ನು ನೋಡಿ ಬೊಗಳಿದ್ದನ್ನು ನಾನಿನ್ನೂ ಮರೆತಿರಲಿಲ್ಲ! ಆಗ ಅವರು ಮೃತ್ಯುಂಜಯ ಕಾದಂಬರಿ ಮುಗಿಸುತ್ತಿದ್ದರು. (ಸಂಪಾದನೆಯ ಜೊತೆಗೆ ಕಾದಂಬರಿಯ ರಚನೆಯನ್ನೂ ಅವರು ಮಾಡಿದರು.) ತಮ್ಮ ಮನಸ್ಸಿನಲ್ಲಿರುವ ಮತ್ತೊಂದು ಕಾದಂಬರಿಯ ರೂಪುರೇಷೆಯನ್ನು ನಮಗೆ ವಿವರಿಸಿದರು. ಆ ಕಾದಂಬರಿ ಬಂತೋ ಇಲ್ಲವೋ ನನಗೆ ತಿಳಿಯದು. ಯಾವುದೋ ಮಾತಿನ ಸಂದರ್ಭದಲ್ಲಿ ನಿರಂಜನ ಬಿಕ್ಕಿ ಬಿಕ್ಕಿ ಅತ್ತುಬಿಟ್ಟರು. ನನಗೆ ದಿಕ್ಕೇ ತೋರದಂತಾಯಿತು. ಸೀಮಂತಿನಿ ಬಂದು ತಂದೆಯನ್ನು ಸಮಾಧಾನ ಮಾಡಿದಳು. ನಮ್ಮ ತಂದೆ ವಾಪಸು ಬರುವಾಗ "ಶಿವರಾವ್ ಅವರು ಮೊದಲಿನಿಂದಲೂ ಬಹಳ ಭಾವುಕ ಸ್ವಭಾವ" ಎಂದು ನನಗೆ ವಿವರಿಸಿದರು.
ಬಿಡುಗಡೆಯ ದಿನವೂ ಬಂತು. ವುಡ್ಲ್ಯಾಂಡ್ಸ್ ಹೋಟೆಲಿನಲ್ಲಿ ಬಿಡುಗಡೆ. ಮದುವೆ ಸಮಾರಂಭದ ಹಾಗೆ ಹೋಟೆಲ್ ಸಜ್ಜಾಗಿತ್ತು. ಸಾಹಿತ್ಯ ಲೋಕದ ದಿಗ್ಗಜರೆಲ್ಲಾ ಬಂದಿದ್ದರು. ದುಂಡು ಮೇಜುಗಳ ಮುಂದೆ ಜನರಿಗೆ ಕೂಡಲು ವ್ಯವಸ್ಥೆ ಮಾಡಲಾಗಿತ್ತು. ಎಲ್ಲರಿಗೂ ಉಪ್ಪಿಟ್ಟು-ಸಜ್ಜಿಗೆ-ಬೋಂಡಾ ಮತ್ತು ಕಾಫಿ ಸರಬರಾಜಾಯಿತು. ಬಹುಶಃ ಇಂಥವೆಲ್ಲಾ ಆಗ ಇರಲಿಲ್ಲ. ಎಲ್ಲರಿಗೂ ಇಂದೊಂದು ನೂತನ ಅನುಭವ. ಬಿಡುಗಡೆ ಮಾಡಲು ಮಲೆಯಾಳ ಲೇಖಕ ಜಯಕಾಂತನ್ ಬಂದಿದ್ದರು. ಕನ್ನಡ ಸಣ್ಣಕತೆಗಳಲ್ಲಿ ಅದ್ವಿತೀಯರಾದ ಮಾಸ್ತಿ ಬಂದಿದ್ದರು. ಗೋರೂರು ರಾಮಸ್ವಾಮಿ ಅಯ್ಯಂಗಾರ್ ಬಂದಿದ್ದರು. ಡಾ. ಹಾ.ಮಾ. ನಾಯಕ್ ಬಂದಿದ್ದರು. ಇವರೆಲ್ಲರೂ ಸ್ವಾರಸ್ಯವಾಗಿ ಮಾತಾಡಿದರು. ನಿರಂಜನರೂ ಕೊನೆಯಲ್ಲಿ ವೀಲ್ ಚೇರಿನಲ್ಲಿ ಕುಳಿತೇ ಮಾತಾಡಿದರು. ಅಲ್ಲಿದ್ದ ಅತ್ಯಂತ ಕಿರಿಯ ಲೇಖಕನಾದ ನನ್ನ ಬಗ್ಗೆ ಪ್ರಸ್ತಾಪ ಮಾಡಿದರು!
ಕೆಲವು ವರ್ಷಗಳ ಹಿಂದೆ ವಿಶ್ವಕಥಾಕೋಶವನ್ನು ಪುನರ್ಮುದ್ರಿಸುವ ಕೆಲಸವನ್ನು ನವಕರ್ನಾಟಕ ಕೈಗೊಂಡಿತು. ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾರಂಭವಿತ್ತು. ಅನುವಾದಕರಲ್ಲಿ ಬಹಳಷ್ಟು ಜನರು ಈಗ ಬರಿಯ ನೆನಪಷ್ಟೇ ಆಗಿ ಉಳಿದಿದ್ದರು. ನನ್ನ ತಂದೆಯವರ ಪರವಾಗಿ ನನ್ನ ತಾಯಿ ಪುಸ್ತಕಗಳ ಸಂಗ್ರಹವನ್ನು ಶ್ರೀಮತಿ ಸುಧಾ ಮೂರ್ತಿ ಅವರಿಂದ ಸ್ವೀಕರಿಸಿದರು.
ನಾನು ರಾಜಾರಾಂ ಅವರಿಗೆ ಪತ್ರ ಬರೆದು "ನೀವು ವಿಶ್ವಕಥಾಕೋಶವನ್ನು ವಿಸ್ತರಿಸಬೇಕು, ಕಳೆದ ಮೂರು ದಶಕಗಳಲ್ಲಿ ಇನ್ನೂ ಅದೆಷ್ಟು ಶ್ರೇಷ್ಠ ಕಥೆಗಳು ಸೇರಿವೆ!" ಎಂದು ನನ್ನ ಅನ್ನಿಸಿಕೆ ತಿಳಿಸಿದೆ. ಅದಕ್ಕೆ ಅವರು "ಹಾಗೆ ಮಾಡಲಾಗುವುದಿಲ್ಲ. ಅಂಥ ಕೆಲಸ ಮಾಡುವ ಸಾಮರ್ಥ್ಯ ನಿರಂಜನರೊಬ್ಬರಿಗೆ ಮಾತ್ರ ಇತ್ತು!" ಎನ್ನುವ ಅರ್ಥದ ಸಾಲುಗಳನ್ನು ಬರೆದರು. ನಿರಂಜನರ ಕೊಡುಗೆಗಳು ಹೀಗೆ ನಭೂತೋ ನ ಭವಿಷ್ಯತಿ ಎಂಬಂಥವು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ