ಪಂಥ (ಷೆಕಾಫ್ ಅವರ ಸಣ್ಣಕತೆ,)
ಪಂಥ
ಮೂಲ ಕಥೆ - ಆಂಟನ್ ಷೆಕಾಫ್
ಕನ್ನಡಕ್ಕೆ - ಸಿ. ಪಿ. ರವಿಕುಮಾರ್
ಶರತ್ಕಾಲದ ಕಡುಗಪ್ಪು ರಾತ್ರಿ. ವೃದ್ಧ ಬ್ಯಾಂಕರ್ ತನ್ನ ಬೈಠಕ್ಕಿನಲ್ಲಿ ಶತಪಥ ತಿರುಗುತ್ತಿದ್ದ. ಹದಿನೈದು ವರ್ಷಗಳ ಹಿಂದಕ್ಕೆ ಅವನ ನೆನಪು ಓಡಿತು. ಇಂಥದ್ದೇ ಶರತ್ಕಾಲದ ರಾತ್ರಿಯಂದು ತಾನು ನೀಡಿದ ಔತಣಕೂಟದಲ್ಲಿ ಅದೆಷ್ಟು ಮಂದಿ ಬುದ್ಧಿವಂತರು ಸೇರಿ ಸುರಸ ಸಂಭಾಷಣೆಗಳಲ್ಲಿ ತೊಡಗಿದ್ದರು! ಕೊನೆಗೆ ಮಾತು ಗಲ್ಲುಶಿಕ್ಷೆಯತ್ತ ಹೊರಳಿತು. ಅಲ್ಲಿ ನೆರೆದಿದ್ದ ಬಹಳ ಜನ ಬುದ್ಧಿಜೀವಿಗಳು ಮತ್ತು ಪತ್ರಕರ್ತರು ಮರಣದಂಡನೆಯನ್ನು ಬಲವಾಗಿ ಟೀಕಿಸಿದರು. ಅದೊಂದು ಪ್ರಾಚೀನ ರೀತಿಯ ಶಿಕ್ಷೆ, ಅನೀತಿಯುತವಾದದ್ದು, ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುವ ನಾಡುಗಳಲ್ಲಿ ಅಸಮ್ಮತವಾದ ಪದ್ಧತಿ ಎಂದು ಅವರು ವಾದಿಸಿದರು. ಮರಣದಂಡನೆಗೆ ಬದಲಾಗಿ ಜೀವಾವಧಿ ಕಾರಾಗೃಹವಾಸ ಶಿಕ್ಷೆಯನ್ನು ಘೋಷಿಸುವುದೇ ಸರಿಯಾದದ್ದು ಎಂದು ಕೆಲವರು ಅಭಿಪ್ರಾಯ ಕೊಟ್ಟರು.
"ನಾನು ಒಪ್ಪುವುದಿಲ್ಲ," ಎಂದು ಬ್ಯಾಂಕರ್ ಘೋಷಿಸಿದ. "ನನಗೆ ಎರಡರದ್ದೂ ಅನುಭವವಿಲ್ಲವಾದರೂ ಹೋಲಿಕೆಯಲ್ಲಿ ಮರಣದಂಡನೆಯೇ ಹೆಚ್ಚು ನೀತಿಯುಕ್ತವಾದದ್ದು, ಹೆಚ್ಚು ಮಾನವೀಯವಾದದ್ದು ಎನ್ನಿಸುತ್ತದೆ. ಮರಣದಂಡನೆ ಮನುಷ್ಯನನ್ನು ಒಂದೇ ಏಟಿಗೆ ಕೊಲ್ಲುತ್ತದೆ. ಆದರೆ ಜೀವಾವಧಿ ಶಿಕ್ಷೆ ಅವನನ್ನು ನಿಧಾನವಾಗಿ ಕೊಲ್ಲುತ್ತದೆ. ನೀವೇ ಹೇಳಿ, ಒಂದೇ ಕ್ಷಣದಲ್ಲಿ ಗಲ್ಲಿಗೇರಿಸಿ ಪ್ರಾಣ ತೆಗೆದುಬಿಡುವವನು ಉತ್ತಮನೋ ಅಥವಾ ವರ್ಷಾನುಗಟ್ಟಲೆ ಬಂಧನದಲ್ಲಿಟ್ಟು ದಿನವೂ ಇಷ್ಟಿಷ್ಟೇ ಕೊಲ್ಲುವವನೋ?"
ಅತಿಥಿಗಳಲ್ಲಿ ಒಬ್ಬನು "ಎರಡೂ ಅನೀತಿಯಿಂದಲೇ ಕೂಡಿವೆ. ಎರಡರ ಉದ್ದೇಶವೂ ಪ್ರಾಣ ತೆಗೆಯುವುದೇ. ಅಧಿಕಾರವರ್ಗವೆಂದರೆ ದೇವರಲ್ಲ. ಬೇಕೆಂದಾಗ ಪ್ರಾಣ ಕೊಡಲಾಗದ ಅಧಿಕಾರವರ್ಗಕ್ಕೆ ಪ್ರಾಣ ತೆಗೆಯುವ ಹಕ್ಕಿಲ್ಲ" ಎಂದ.
ಅತಿಥಿಗಳ ನಡುವೆ ಒಬ್ಬ ಯುವಕ ಲಾಯರ್ ಇದ್ದ. ಅವನಿಗೆ ಸುಮಾರು ಇಪ್ಪತ್ತೈದು ವರ್ಷವಿರಬಹುದು. ಅವನ ಅಭಿಪ್ರಾಯ ಕೇಳಿದಾಗ ಅವನು "ಎರಡೂ ಬಗೆಯ ಶಿಕ್ಷೆಗಳೂ ನೀತಿಸಮ್ಮತವಲ್ಲ. ಆದರೆ ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆಗಳ ನಡುವೆ ಆಯ್ಕೆ ಮಾಡಿಕೊಳ್ಳಲು ನನಗೆ ಯಾರಾದರೂ ಕೇಳಿದರೆ ನಾನು ಜೀವಾವಧಿ ಶಿಕ್ಷೆಯನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಜೀವ ಕಳೆದುಕೊಳ್ಳುವುದಕ್ಕಿಂತ ಹೇಗೋ ಜೀವದಿಂದ ಇರುವುದೇ ಮೇಲು" ಎಂದ.
ಇದು ಒಳ್ಳೆಯ ಚರ್ಚೆಗೆ ಎಡೆಮಾಡಿಕೊಟ್ಟಿತು. ಇಂದಿಗಿಂತಲೂ ಆಗಿನ್ನೂ ವಯಸ್ಸಿನಲ್ಲಿ ಚಿಕ್ಕವನಾಗಿದ್ದ ಬ್ಯಾಂಕರ್ ಆವೇಶಕ್ಕೆ ಒಳಗಾಗಿ ಮೇಜನ್ನು ಗುದ್ದುತ್ತಾ ಲಾಯರನ್ನು ಉದ್ದೇಶಿಸಿ ಕೂಗಿದ. "ಇಲ್ಲ! ಇಲ್ಲ! ಬೇಕಿದ್ದರೆ ಎರಡು ಮಿಲಿಯನ್ ಪಣ ಇಡಲು ನಾನು ತಯಾರು. ನೀನು ಐದು ವರ್ಷ ಕೂಡಾ ಏಕಾಂಗಿಯಾಗಿ ಬಂಧನದಲ್ಲಿರಲಾರೆ!"
"ನೀವು ಸತ್ಯವಾಗಿಯೂ ಪಣ ತೊಡುವುದಾದರೆ ನಾನು ಸವಾಲು ಸ್ವೀಕರಿಸಲು ಸಿದ್ಧ. ಆದರೆ ನಾನು ಐದಲ್ಲ, ಹದಿನೈದು ವರ್ಷ ಏಕಾಂತಶಿಕ್ಷೆ ಅನುಭವಿಸಬಲ್ಲೆ!" ಎಂದು ಲಾಯರ್ ಸಮಾಧಾನದಿಂದಲೇ ಹೇಳಿದ.
"ಏನು! ಹದಿನೈದು ವರ್ಷವೇ! ಆಯಿತು! ಇಗೋ ನಾನು ಎರಡು ಮಿಲಿಯನ್ ಪೋಟಿ ಕಟ್ಟಿದ್ದೇನೆ!" ಎಂದು ಬ್ಯಾಂಕರ್ ಕೂಗಿದ.
"ಒಪ್ಪಿಗೆ! ನೀವು ಎರಡು ಮಿಲಿಯನ್ ಪಣ ತೊಟ್ಟರೆ ನಾನು ನನ್ನ ಜೀವನದ ಹದಿನೈದು ವರ್ಷ ಪಣ ತೊಟ್ಟಿದ್ದೇನೆ!" ಎಂದು ಯುವ ಲಾಯರ್ ಘೋಷಿಸಿದ.
ಹೀಗೆ ಆ ಅರ್ಥರಹಿತ ಬರ್ಬರ ಪಣವನ್ನು ತೊಡಲಾಯಿತು. ಬ್ಯಾಂಕರ್ ಧನಮದದಲ್ಲಿ ಓಲಾಡುತ್ತಿದ್ದ. ಅವನ ಗ್ರಹಿಕೆಗೂ ಮೀರಿದಷ್ಟು ಹಣ ಅವನಲ್ಲಿತ್ತು. ಎರಡು ಮಿಲಿಯನ್ ಅವನಿಗೆ ಹೆಚ್ಚಿನ ಮೊತ್ತವಲ್ಲ. ಅವನಿಗೆ ತಾನು ಗೆಲ್ಲುವೆನೆಂಬ ವಿಶ್ವಾಸವಿತ್ತು. ಊಟದ ಹೊತ್ತು ಅವನು ಯುವಕನನ್ನು ಕಿಚಾಯಿಸಿದ. "ಇನ್ನೊಮ್ಮೆ ಯೋಚಿಸು, ಇನ್ನೂ ಕಾಲ ಮಿಂಚಿಲ್ಲ. ಎರಡು ಮಿಲಿಯನ್ ನನಗೇನೂ ದೊಡ್ಡ ವಿಷಯವಲ್ಲ. ಆದರೆ ನಿನ್ನ ಜೀವನದ ಮೂರೋ ನಾಲ್ಕೋ ಅತ್ಯುತ್ತಮ ಸಂವತ್ಸರಗಳನ್ನು ನೀನು ಕಳೆದುಕೊಳ್ಳುತ್ತೀ! ಮೂರೋ ನಾಲ್ಕೋ ಅಂತ ಯಾಕೆ ಹೇಳುತ್ತೇನೆ ಗೊತ್ತೇ, ಅದಕ್ಕಿಂತ ಹೆಚ್ಚು ಏಕಾಂತದಲ್ಲಿರಲು ನಿನ್ನ ಕೈಯಲ್ಲಿ ಆಗದು. ನಿನಗಿದು ತಿಳಿದಿರಲಿ - ನೀನು ಸ್ವ-ಇಚ್ಛೆಯಿಂದ ಏಕಾಂತ ಬಂಧನಕ್ಕೆ ಒಳಗಾಗುತ್ತಿದ್ದೀ. ವಿಧಿಸಲಾದ ಏಕಾಂತದ ಜೈಲುಶಿಕ್ಷೆಗಿಂತಲೂ ಇದು ಕಠಿಣ. ಯಾವಾಗ ಬೇಕಾದರೂ ಏಕಾಂತ ಶಿಕ್ಷೆಯನ್ನು ಕೊನೆಗೊಳಿಸಿ ಹೊರಗೆ ಬರಬಹುದು, ಆದರೆ ಹಣ ಕಳೆದುಕೊಳ್ಳಬೇಕಾಗುತ್ತದೆ ಎಂಬ ಚಿಂತೆ ನಿನ್ನನ್ನು ಹಣ್ಣು ಮಾಡುತ್ತದೆ! ನಿನ್ನನ್ನು ನೋಡಿದರೆ ಅಯ್ಯೋ ಅನ್ನಿಸುತ್ತಿದೆ!"
ಈಗ ತಮ್ಮ ಬೈಠಕ್ ಖಾನೆಯಲ್ಲಿ ತಿರುಗಾಡುತ್ತಾ ಬ್ಯಾಂಕರ್ ಇದೆಲ್ಲವನ್ನೂ ನೆನೆಸಿಕೊಂಡ. ಅವನು ತನ್ನನ್ನೇ ಪ್ರಶ್ನೆ ಕೇಳಿಕೊಂಡ. ಈ ಪಂದ್ಯಕ್ಕೆ ಏನಾದರೂ ಅರ್ಥವಿತ್ತೇ? ಒಬ್ಬ ಮನುಷ್ಯ ತನ್ನ ಜೀವನದ ಹದಿನೈದು ವರ್ಷಗಳನ್ನು ಕಳೆದುಕೊಳ್ಳುವುದಾಗಲೀ ನಾನು ಎರಡು ಮಿಲಿಯನ್ ಹಣ ಕಳೆದುಕೊಳ್ಳುವುದಾಗಲೀ ಯಾವ ಪುರುಷಾರ್ಥಕ್ಕೆ? ಮರಣದಂಡನೆಯು ಜೀವಾವಧಿ ಶಿಕ್ಷೆಗಿಂತ ಉತ್ತಮವೆಂದು ಈ ಪಂದ್ಯವು ಸಾಧಿಸಿ ತೋರಿಸೀತೇ? ಇಲ್ಲ, ಇಲ್ಲ, ಇದೆಲ್ಲವೂ ಅರ್ಥಹೀನ ಮತ್ತು ತರ್ಕಹೀನ! ನನ್ನ ಧನಮದ ನನ್ನಿಂದ ಈ ಕೆಲಸ ಮಾಡಿಸಿತು. ಹಣದ ದುರಾಸೆ ಅವನನ್ನು ಈ ಪಂದ್ಯಕ್ಕೆ ದೂಡಿತು.
ಭೋಜನಕೂಟದ ಸಂಜೆ ಅನಂತರ ನಡೆದದ್ದು ಅವನಿಗೆ ನೆನಪಾಯಿತು. ದೊಡ್ಡ ತೋಟದ ನಡುವೆ ಬ್ಯಾಂಕರ್ ಹೊಂದಿದ್ದ ಅನೇಕ ಮನೆಗಳಲ್ಲಿ ಒಂದರಲ್ಲಿ ಯುವಕನು ತೀಕ್ಷ್ಣ ಕಣ್ಗಾವಲಿನಲ್ಲಿ ಸ್ವಯಂಪ್ರೇರಿತ ಗೃಹಬಂಧನದಲ್ಲಿರುವುದೆಂದು ನಿರ್ಧಾರವಾಯಿತು. ಅವನು ಹದಿನೈದು ವರ್ಷ ಮನೆಯ ಹೊಸಲು ಕೂಡಾ ದಾಟಬಾರದು, ಯಾವುದೇ ಮನುಷ್ಯಪ್ರಾಣಿಯನ್ನೂ ನೋಡಬಾರದು, ಮನುಷ್ಯನ ವಾಣಿಯನ್ನೂ ಕೇಳಬಾರದು, ಪತ್ರ ವ್ಯವಹಾರವನ್ನೂ ಇಟ್ಟುಕೊಳ್ಳಬಾರದು ಎಂದು ಕರಾರಾಯಿತು. ವಾರ್ತಾಪತ್ರಿಕೆಗಳನ್ನು ತರಿಸಿಕೊಳ್ಳುವಂತಿಲ್ಲ. ಆದರೆ ಸಂಗೀತವಾದ್ಯಗಳು, ಪುಸ್ತಕಗಳನ್ನು ತರಿಸಿಕೊಳ್ಳಲು ಅವಕಾಶ ಕಲ್ಪಿಸಲಾಯಿತು. ವೈನ್ ಕುಡಿಯಬಹುದು, ಸಿಗರೆಟ್ ಸೇದಬಹುದು. ಇವನ್ನು ಸರಬರಾಜು ಮಾಡಲು ಅವನ ಕೊಠಡಿಯಲ್ಲಿ ಒಂದು ಕಿಟಕಿಯನ್ನು ನಿರ್ಮಿಸಲಾಗುವುದು. ಅವನ ಶಿಕ್ಷೆಯು ಸಂಪೂರ್ಣವಾಗಿ ಸ್ವಯಂಪ್ರೇರಿತವಾದದ್ದು ಎಂದು ದೃಢಪಡಿಸಲು ಏನೇನು ಬೇಕೋ ಎಲ್ಲ ಸಣ್ಣಪುಟ್ಟ ವಿವರಗಳನ್ನೂ ಯೋಚಿಸಿ ದಾಖಲು ಮಾಡಲಾಯಿತು. ತನಗೆ ಬೇಕಾದ ಪುಸ್ತಕಗಳು, ಆಹಾರ-ಪಾನೀಯಗಳ ವಿವರವನ್ನು ಅವನು ಒಂದು ಚೀಟಿಯಲ್ಲಿ ಬರೆದು ಕೋಣೆಯ ಕಿಟಕಿಯಲ್ಲಿ ಇಡಬೇಕು. ಕಿಟಕಿಯ ಮೂಲಕವೇ ಈ ವಸ್ತುಗಳನ್ನು ಪೂರೈಸಲಾಗುವುದು. ೧೮೭೦ನೇ ಇಸವಿಯ ನವೆಂಬರ್ ೧೪ರ ಮಧ್ಯರಾತ್ರಿ ಪ್ರಾರಂಭವಾಗುವ ಪಂದ್ಯವು ೧೮೮೫ನೇ ಇಸವಿಯ ನವೆಂಬರ್ ಹದಿನಾಲ್ಕರ ಮಧ್ಯರಾತ್ರಿಗೆ ಪೂರೈಸುವುದು. ಬಂಧಿತ ವ್ಯಕ್ತಿಯು ಈ ಅವಧಿಯಲ್ಲಿ ಯಾವುದೇ ಕರಾರುಗಳನ್ನು ಮುರಿದರೆ, ಕೇವಲ ಎರಡೇ ನಿಮಿಷಗಳ ಮುಂಚೆಯೇ ಆಗಲಿ ಹೊರಗೆ ಬಂದರೆ, ಅವನು ಪಂದ್ಯದಲ್ಲಿ ಸೋಲುತ್ತಾನೆ. ಅಂಥ ಸಂದರ್ಭ ಬಂದರೆ ಬ್ಯಾಂಕರ್ ಎರಡು ಮಿಲಿಯನ್ ತೆರಬೇಕಾಗಿಲ್ಲ.
***
ಗೃಹಬಂಧನದ ಮೊದಲ ವರ್ಷ ಕೈದಿಯು ಒಂಟಿತನ ಮತ್ತು ಖಿನ್ನತೆಯಿಂದ ಬಳಲಿದನೆಂದು ಬ್ಯಾಂಕರ್ ಬರೆದಿಟ್ಟುಕೊಂಡ ಟಿಪ್ಪಣಿ ತಿಳಿಸುತ್ತದೆ. ಹಗಲೂರಾತ್ರಿ ಅವನ ಕೋಣೆಯಿಂದ ಪಿಯಾನೋ ಧ್ವನಿ ಕೇಳುತ್ತಿತ್ತು. ವೈನ್ ಮತ್ತು ಹೊಗೆಸೊಪ್ಪುಗಳನ್ನು ಅವನು ನಿರಾಕರಿಸುತ್ತಿದ್ದ. ವೈನ್ ತನ್ನ ಕಾಮನೆಗಳನ್ನು ಹೊತ್ತಿಸುತ್ತದೆ, ಬಂಧನದಲ್ಲಿದ್ದಾಗ ಕಾಮನೆಗಳು ಕೈದಿಯ ಪರಮಶತ್ರುಗಳು ಎಂದು ಅವನು ಚೀಟಿಯಲ್ಲಿ ಬರೆದಿದ್ದ. ಉತ್ತಮ ವೈನ್ ಸೇವನೆಯ ನಂತರ ಯಾರೊಬ್ಬರನ್ನೂ ಸಂಧಿಸದಿರುವುದಕ್ಕಿಂತಲೂ ಕಷ್ಟಕರವಾದದ್ದು ಏನಿದೆ? ಇನ್ನು ಹೊಗೆಸೊಪ್ಪು ತನ್ನ ಕೊಠಡಿಯ ವಾತಾವರಣವನ್ನು ಹಾಳು ಮಾಡುತ್ತದೆ. ಅವನು ಮೊದಲ ವರ್ಷ ಕೇಳಿ ತರಿಸಿಕೊಂಡ ಪುಸ್ತಕಗಳು ಬಹಳ ಹಗುರವಾದ ವಸ್ತುಗಳನ್ನು ಹೊಂದಿದ್ದವು - ಗೋಜಲುಮಯ ಕಥಾಹಂದರವುಳ್ಳ ಪ್ರೇಮಕಾದಂಬರಿಗಳು, ಥ್ರಿಲ್ಲರ್ ಕತೆಗಳು, ಮುಂತಾದವು.
ಎರಡನೆಯ ವರ್ಷ ಪಿಯಾನೋ ಸದ್ದು ನಿಂತಿತು. ಕೈದಿ ಕೇವಲ ಉತ್ತಮವರ್ಗದ ಕಾದಂಬರಿಗಳನ್ನು ಮಾತ್ರ ಕೇಳಿ ತರಿಸಿಕೊಳ್ಳುತ್ತಿದ್ದ. ಐದನೇ ವರ್ಷ ಕಾಲಿಟ್ಟಾಗ ಪಿಯಾನೋ ಶಬ್ದ ಮತ್ತೆ ಕೇಳಿತು. ಕೈದಿ ವೈನ್ ಬೇಕೆಂದು ಚೀಟಿ ಕಳಿಸಿದ. ಅವನನ್ನು ಹೊರಗಿನಿಂದ ಕಿಟಕಿಯಿಂದಲೇ ಇಣುಕಿ ನೋಡುತ್ತಿದ್ದವರು ಇಡೀ ದಿನ ಅವನು ತಿನ್ನುವುದು ಕುಡಿಯುವುದು ಮತ್ತು ಮಂಚದ ಮೇಲೆ ಮಲಗಿಕೊಳ್ಳುವುದನ್ನು ಬಿಟ್ಟರೆ ಬೇರೇನೂ ಮಾಡುತ್ತಿಲ್ಲವೆಂದು ವರದಿ ಮಾಡಿದರು. ಆಗಾಗ ಆಕಳಿಸುವನು. ತನ್ನಷ್ಟಕ್ಕೇ ಕೋಪದಿಂದ ಬಡಬಡಿಸುವನು. ಅವನೀಗ ಪುಸ್ತಕಗಳನ್ನು ಓದುತ್ತಿರಲಿಲ್ಲ. ಕೆಲವೊಮ್ಮೆ ರಾತ್ರಿಯ ಹೊತ್ತಿನಲ್ಲಿ ಬರೆಯಲು ಕುಳಿತುಕೊಳ್ಳುವನು. ಗಂಟೆಗಟ್ಟಲೆ ಬರೆಯುವನು. ಬೆಳಗ್ಗೆ ತಾನು ಬರೆದದ್ದೆಲ್ಲವನ್ನೂ ಹರಿದುಹಾಕುವನು. ಹಲವಾರು ಸಲ ಅವನು ಅತ್ತದ್ದನ್ನು ಜನ ಕೇಳಿಸಿಕೊಂಡಿದ್ದಾರೆ.
ಆರನೇ ವರ್ಷದ ಉತ್ತರಾರ್ಧದಲ್ಲಿ ಅವನು ಅತ್ಯುತ್ಸಾಹದಿಂದ ಭಾಷಾಶಾಸ್ತ್ರ, ದರ್ಶನಶಾಸ್ತ್ರ ಮತ್ತು ಇತಿಹಾಸಗಳ ಅಧ್ಯಯನದಲ್ಲಿ ತೊಡಗಿದ. ಅವನು ಕೇಳುತ್ತಿದ್ದ ಪುಸ್ತಕಗಳನ್ನು ತರಿಸಿಕೊಡುವಷ್ಟರಲ್ಲಿ ಬ್ಯಾಂಕರ್ ಮಹಾಶಯನಿಗೆ ಸಾಕುಬೇಕಾಗುತ್ತಿತ್ತು. ನಾಲ್ಕು ವರ್ಷಗಳ ಅವಧಿಯಲ್ಲಿ ಕೈದಿ ಸುಮಾರು ಆರು ನೂರು ಗ್ರಂಥಗಳನ್ನು ತರಿಸಿಕೊಂಡು ಓದಿದ. ಈ ಕಾಲಾವಧಿಯಲ್ಲಿ ಅವನಿಂದ ಬ್ಯಾಂಕರನಿಗೆ ಬಂದ ಒಂದು ಪತ್ರ ಹೀಗಿತ್ತು.
"ನನ್ನ ಪ್ರಿಯ ಜೇಲರ್ ಸಾಹೇಬರೇ, ನಾನು ನಿಮಗೆ ಈ ಪತ್ರವನ್ನು ಆರು ವಿಭಿನ್ನ ಭಾಷೆಗಳಲ್ಲಿ ಬರೆಯುತ್ತಿದ್ದೇನೆ. ಇವನ್ನು ಆಯಾ ಭಾಷೆಗಳ ಪಂಡಿತರಿಗೆ ತೋರಿಸಿ. ಅವರು ಒಂದೇ ಒಂದು ದೋಷವನ್ನೂ ಕಂಡುಹಿಡಿಯದ ಪಕ್ಷದಲ್ಲಿ ದಯವಿಟ್ಟು ನಿಮ್ಮಲ್ಲಿ ಒಂದು ಅರಿಕೆಯಿದೆ, ಅದನ್ನು ನೆರವೇರಿಸಿ. ತೋಟದಲ್ಲಿ ಒಂದು ಗುಂಡು ಸಿಡಿಸಿ. ಅದನ್ನು ಕೇಳಿದಾಗ ನನ್ನ ಶ್ರಮ ಸಾರ್ಥಕವಾಯಿತೆಂದು ಮನಸ್ಸಿಗೆ ಸಮಾಧಾನವಾಗುತ್ತದೆ. ಎಲ್ಲಾ ಕಾಲದಲ್ಲೂ ಎಲ್ಲಾ ದೇಶಗಳಲ್ಲೂ ಮೇಧಾವಿಗಳು ಹಲವು ಭಾಷೆಗಳಲ್ಲಿ ಪರಿಣತಿ ಹೊಂದಿರುತ್ತಾರೆ. ಆರು ಭಾಷೆಗಳನ್ನು ಅರ್ಥ ಮಾಡಿಕೊಳ್ಳಬಲ್ಲೆನೆಂಬ ಅರಿವು ನನ್ನ ಆತ್ಮಕ್ಕೆ ನೀಡುತ್ತಿರುವ ಅಲೌಕಿಕ ಆನಂದವನ್ನು ನೀವು ಅನುಭವಿಸಬಲ್ಲವರಾಗಿದ್ದರೆ!"
ಕೈದಿಯ ಆಸೆಯನ್ನು ಪೂರೈಸಲಾಯಿತು. ಬ್ಯಾಂಕರ್ ಒಂದಲ್ಲದೆ ಎರಡು ಗುಂಡು ಹಾರಿಸಲು ಆದೇಶ ನೀಡಿದ.
ಹತ್ತನೇ ವರ್ಷದ ನಂತರ ಕೈದಿಯು ಮೇಜಿನ ಮುಂದೆ ಕುಳಿತು ಅತ್ತಿತ್ತ ಕದಲದೆ ಮೂರೂ ಹೊತ್ತು ದೈವವಾಣಿಯನ್ನು ಓದತೊಡಗಿದ. ಆರು ಭಾಷೆಗಳ ಮೇಲೆ ಪ್ರಭುತ್ವ ಸಾಧಿಸಿದ ಮೇಧಾವಿಯೊಬ್ಬ ಕೆಲವೇ ಪುಟಗಳ ಸಣ್ಣ ಹೊತ್ತಿಗೆಯನ್ನು ಅರ್ಥೈಸಿಕೊಳ್ಳಲು ಒಂದು ವರ್ಷದಷ್ಟು ಕಾಲ ವ್ಯಯಿಸುವುದು ವಿಚಿತ್ರವೆಂದು ಬ್ಯಾಂಕರನಿಗೆ ಅನ್ನಿಸಿತು. ದೈವವಾಣಿಯನ್ನು ಓದಿದ ನಂತರ ದೈವಶಾಸ್ತ್ರ ಮತ್ತು ಧರ್ಮಗಳ ಇತಿಹಾಸ ಕುರಿತಾದ ಪುಸ್ತಕಗಳಿಗಾಗಿ ಕೈದಿ ಬೇಡಿಕೆ ಸಲ್ಲಿಸಿದ.
ಬಂಧನದ ಕೊನೆಯ ಎರಡು ವರ್ಷಗಳಲ್ಲಿ ಕೈದಿಯು ಅಪಾರ ಸಂಖ್ಯೆಯಲ್ಲಿ ವೈವಿಧ್ಯಮಯ ಪುಸ್ತಕಗಳನ್ನು ಓದಿದ. ವಿಜ್ಞಾನ ಕುರಿತಾದ ಪುಸ್ತಕಗಳನ್ನು ಓದಿ ಮುಗಿಸಿದ ನಂತರ ಬೈರನ್ ಅಥವಾ ಶೇಕ್ಸ್ಪಿಯರ್ ಕೃತಿಗಳನ್ನು ಬೇಡುತ್ತಿದ್ದ. ಕೆಲವು ಸಲ ಒಂದೇ ಚೀಟಿಯಲ್ಲಿ ರಸಾಯನಶಾಸ್ತ್ರ ಕುರಿತಾದ ಗ್ರಂಥ, ಒಂದು ವೈದ್ಯಶಾಸ್ತ್ರ ಕೈಪಿಡಿ, ಒಂದು ಕಾದಂಬರಿ, ದರ್ಶನಶಾಸ್ತ್ರ ಕುರಿತಾದ ಒಂದು ವಿಮರ್ಶಾಗ್ರಂಥಗಳಿಗಾಗಿ ಕೋರಿಕೆ ಕಳಿಸುತ್ತಿದ್ದ. ಬಂಡೆಗಲ್ಲಿಗೆ ಘರ್ಷಿಸಿ ನುಚ್ಚುನೂರಾದ ಹಡಗಿನಿಂದ ಕಡಲಿಗೆ ಬಿದ್ದ ಮನುಷ್ಯನೊಬ್ಬ ತನಗೆ ಸಿಕ್ಕ ಮರದ ತುಂಡನ್ನೋ ಮತ್ತಾವುದೋ ಹಡಗಿನ ಭಾಗವನ್ನೋ ಆಧರಿಸಿ ಹೇಗೋ ತನ್ನ ಜೀವವನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುವಂತೆ ಕೈದಿಯ ಪ್ರಯತ್ನವು ತೋರುತ್ತಿತ್ತು.
ವೃದ್ಧ ಬ್ಯಾಂಕರ್ ಇದನ್ನೆಲ್ಲಾ ನೆನೆಯುತ್ತಾ ಹೀಗೆ ಯೋಚಿಸಿದ:
"ನಾಳೆ ಮಧ್ಯರಾತ್ರಿ ಅವನು ಮುಕ್ತನಾಗುತ್ತಾನೆ. ನಮ್ಮ ಕರಾರಿನ ಪ್ರಕಾರ ನಾನು ಅವನಿಗೆ ಎರಡು ಮಿಲಿಯನ್ ಕೊಡಬೇಕು. ಹಾಗೆ ಕೊಟ್ಟರೆ ನಾನು ಕೆಟ್ಟಂತೆಯೇ. ನಾನು ಸಂಪೂರ್ಣವಾಗಿ ನಾಶವಾಗಿಹೋಗುತ್ತೇನೆ. "
ಹದಿನೈದು ವರ್ಷಗಳ ಹಿಂದೆ ಅವನಲ್ಲಿ ಎಷ್ಟು ಮಿಲಿಯನ್ ಹಣವಿತ್ತು ಎಂಬ ಲೆಕ್ಕ ಅವನಲ್ಲಿರಲಿಲ್ಲ. ತನ್ನಲ್ಲಿದ್ದ ಆಸ್ತಿ ಹೆಚ್ಚೋ ತನ್ನ ಸಾಲಗಳು ಹೆಚ್ಚೋ ಎಂದು ಕೇಳಲೂ ಅವನಿಗೆ ದಿಗಿಲಾಗುತ್ತಿತ್ತು. ಸ್ಟಾಕ್ ವಿನಿಮಯದಲ್ಲಿ ಅವನು ಎದ್ವಾ ತದ್ವಾ ಹಣ ತೊಡಗಿಸಿದ. ಇಲ್ಲಿ ಹಣ ಹಾಕಿದರೆ ದುಪ್ಪಟ್ಟಾಗುತ್ತದೆ ಇತ್ಯಾದಿ ಕೆಟ್ಟ ಉತ್ಸಾಹವನ್ನು ಇಳಿವಯಸ್ಸಿನಲ್ಲೂ ಅವನು ತಡೆಯಲಾರದಾದ. ಅವನು ಕೂಡಿಟ್ಟ ರಾಶಿ ಕ್ರಮೇಣ ಕರಗತೊಡಗಿತು. ಹಿಂದೊಮ್ಮೆ ಹಣಕಾಸಿನ ವ್ಯವಹಾರದಲ್ಲಿ ದಿಟ್ಟತನದಿಂದ ಮುಂದುವರೆಯುತ್ತಿದ್ದವನು ಈಗ ಅವನ ಭಾಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಚಡಪಡಿಸುವನು. "ಹಾಳಾದ ಪಂಥ!" ಎಂದು ಅವನು ಶಾಪ ಹಾಕಿದ. ಹತಾಶೆಯಿಂದ ತನ್ನ ತಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಯೋಚಿಸುತ್ತಾ ಕುಳಿತ. "ಅವನಿಗೆ ಸಾವು ಬರಬಾರದಾಗಿತ್ತೇ! ಎಷ್ಟು ವಯಸ್ಸಾಯಿತು ಅವನಿಗೆ? ಇನ್ನೂ ನಲವತ್ತು! ಹಾಳಾದವನು ನನ್ನನ್ನು ಭಿಕಾರಿ ಮಾಡಿಯೇ ಹೋಗುವವನು! ಮದುವೆಯಾಗಿ ಸಂತೋಷವಾಗಿರುವವನು! ಹಣವನ್ನು ಸ್ಟಾಕ್ ವಿನಿಮಯದಲ್ಲಿ ತೊಡಗಿಸಿ ಇನ್ನಷ್ಟು ಗಳಿಸುವನು. ನಾನೋ ಭಿಕಾರಿಯಾಗಿ ಅವನ ಏಳ್ಗೆಯನ್ನು ನೋಡುತ್ತಾ ಕರುಬುವವನು. ಅವನು ನನ್ನನ್ನು ನೋಡಿ ಕನಿಕರದಿಂದ ಸ್ವಾಮೀ ನನ್ನ ಜೀವನದ ಸುಖಕ್ಕೆ ನೀವೇ ಕಾರಣ, ನಿಮಗೆ ನಾನು ಸಹಾಯ ಮಾಡಬಲ್ಲೆ ಎಂದು ಪ್ರತಿದಿನವೂ ಕಾಡುವನು. ಇಲ್ಲ, ಇದು ಅತಿಯಾಯಿತು! ನನ್ನ ಅಧಃಪತನ ಮತ್ತು ಅಪಮಾನಗಳನ್ನು ತಡೆಯಲು ಇರುವ ಒಂದೇ ಮಾರ್ಗವೆಂದರೆ ಆ ಮನುಷ್ಯನ ಸಾವು!"
***
ಗಡಿಯಾರದ ಗಂಟೆಯು ಬಾಜಿಸಿ ರಾತ್ರಿಯ ಮೂರು ಗಂಟೆಯಾಯಿತೆಂದು ಸೂಚಿಸಿತು. ಬ್ಯಾಂಕರ್ ಅದನ್ನು ಕೇಳುತ್ತಾ ಕುಳಿತಿದ್ದ. ಮನೆಯಲ್ಲಿ ಉಳಿದವರೆಲ್ಲರೂ ನಿದ್ರೆಯಲ್ಲಿದ್ದರು. ಹೊರಗೆ ಚಳಿಗಾಲಕ್ಕೆ ತಣ್ಣಗಾಗಿದ್ದ ಮರಗಳಲ್ಲಿ ಕೇಳುತ್ತಿದ್ದ ಎಲೆಗಳ ಮೂಕ ಮರ್ಮರವನ್ನು ಹೊರತು ಬೇರಾವ ಸದ್ದೂ ಇಲ್ಲ. ಅವನು ನಿಶಬ್ದವಾಗಿ ಮೇಲೆದ್ದು ತನ್ನ ಖಜಾನೆಯಲ್ಲಿ ಜೋಪಾನ ಮಾಡಿದ್ದ ಒಂದು ಕೀಲಿಕೈಯನ್ನು ಕೈಗೆತ್ತಿಕೊಂಡ. ಆ ಕೀಲಿಯನ್ನು ಹದಿನೈದು ವರ್ಷಗಳಿಂದ ಯಾರೂ ಮುಟ್ಟಿರಲಿಲ್ಲ. ಓವರ್ ಕೋಟ್ ತೊಟ್ಟು ಅವನು ಹೊರಗೆ ಬಂದ.
ಹೊರಗೆ ತೋಟದಲ್ಲಿ ಕಗ್ಗತ್ತಲು ಮತ್ತು ಚಳಿಯಿತ್ತು. ಸಣ್ಣಗೆ ಮಳೆ ಹೊಯ್ಯುತ್ತಿತ್ತು. ಮೈಯನ್ನು ಕೊರೆಯುವ ಚಳಿಗಾಳಿ ಹುಯ್ಯಲಿಡುತ್ತಾ ಬೀಸುತ್ತಿತ್ತು. ಅದರ ಆಘಾತದಿಂದ ಮರಗಳಿಗೆ ಕಿಂಚಿತ್ತೂ ಶಾಂತಿಯಿರಲಿಲ್ಲ. ಬ್ಯಾಂಕರ್ ಕಣ್ಣು ಕಿರಿದು ಮಾಡಿ ನೋಡಿದ. ಅವನಿಗೆ ಭೂಮಿಯಾಗಲೀ, ತೋಟದಲ್ಲಿದ್ದ ಬೆಳ್ಳಗಿನ ಮೂರ್ತಿಗಳಾಗಲೀ, ಲಾಡ್ಜ್ ಆಗಲೀ, ಮರಗಳಾಗಲೀ ಯಾವುದೂ ಕಾಣಿಸಲಿಲ್ಲ. ಹೇಗೋ ನಡೆದುಹೋಗಿ ಲಾಡ್ಜ್ ಇದ್ದ ಸ್ಥಳವನ್ನು ತಲುಪಿ ವಾಚ್ಮನ್ ಎಂದು ಎರಡು ಸಲ ಕೂಗು ಹಾಕಿದ. ಯಾರೂ ಉತ್ತರಿಸಲಿಲ್ಲ. ವಿಷಮ ಹವಾಮಾನದ ಕಾರಣ ವಾಚ್ಮನ್ ಅಡಿಗೆಮನೆಯಲ್ಲೋ ಉಗ್ರಾಣದಲ್ಲೋ ಮಲಗಿರಬೇಕು.
"ನಾನು ಧೈರ್ಯ ಮಾಡಿ ನನ್ನ ಮನಸ್ಸಿನಲ್ಲಿರುವುದನ್ನು ಮಾಡಿ ಮುಗಿಸಿದರೆ ಸಂಶಯದ ನೆರಳು ಮೊದಲು ವಾಚ್ಮನ್ ಮೇಲೆ ಬೀಳುತ್ತದೆ" ಎಂದು ಅವನು ಯೋಚಿಸಿದ.
ಕತ್ತಲಿನಲ್ಲೇ ಮೆಟ್ಟಿಲುಗಳನ್ನು ಹುಡುಕಿ ಅವನು ಮೇಲೇರಿದ. ಲಾಡ್ಜ್ ಪ್ರವೇಶಿಸಿ ತಡವರಿಸುತ್ತಾ ಪ್ಯಾಸೇಜಿಗೆ ಬಂದು ಒಂದು ಬೆಂಕಿಕಡ್ಡಿ ಗೀರಿದ. ಅಲ್ಲಿ ಯಾವ ನರಪಿಳ್ಳೆಯೂ ಇರಲಿಲ್ಲ. ಮಂಚವಿದ್ದರೂ ಮೇಲೆ ಹಾಸಿಗೆ ಇರಲಿಲ್ಲ. ಮೂಲೆಯಲ್ಲಿ ಒಂದು ಕಬ್ಬಿಣದ ಒಲೆ ಇತ್ತು. ಕೈದಿಯ ಕೋಣೆಗೆ ಹಾಕಿದ ಬೀಗವು ಇನ್ನೂ ಹಾಗೇ ಭದ್ರವಾಗಿತ್ತು. ಬೀಗದ ಮೇಲೆ ಹಾಕಿದ್ದ ಸೀಲ್ ಕೂಡಾ ಹಾಗೇ ಇತ್ತು.
ಬೆಂಕಿಕಡ್ಡಿ ಆರಿತು. ಭಾವುಕತೆಯಿಂದ ಬ್ಯಾಂಕರ್ ನಡುಗಿದ. ಕಿಟಕಿಯ ಕಡೆಗೆ ನಡೆದು ಒಳಗೆ ಇಣುಕಿ ನೋಡಿದ. ಕೈದಿಯ ಕೋಣೆಯಲ್ಲಿ ಒಂದು ಮೇಣದ ಬತ್ತಿಯ ಮಂದವಾಗಿ ಉರಿಯುತ್ತಿತ್ತು. ಕೈದಿ ಮೇಜಿನ ಮುಂದೆ ಕುಳಿತಿದ್ದ. ಅವನ ಬೆನ್ನು, ತಲೆಗೂದಲು ಮತ್ತು ಕೈಗಳು ಮಾತ್ರ ಕಾಣುತ್ತಿದ್ದವು. ಮೇಜಿನ ಮೇಲೆ ತೆರೆದಿಟ್ಟ ಪುಸ್ತಕಗಳು ಹರಡಿದ್ದವು. ಆರಾಮಕುರ್ಚಿಗಳ ಮೇಲೆ, ಮೇಜಿನ ಕೆಳಗೆ ರತ್ನಗಂಬಳಿಯ ಮೇಲೆ ಕೂಡಾ ಪುಸ್ತಕಗಳು ಹರಡಿದ್ದವು.
ಐದು ನಿಮಿಷಗಳು ಕಳೆದವು. ಕೈದಿಯು ಒಮ್ಮೆಯೂ ಮಿಸುಕಾಡಲೂ ಇಲ್ಲ. ಹದಿನೈದು ವರ್ಷಗಳ ಬಂಧನವು ಅವನಿಗೆ ಒಂದೆಡೆ ಸುಮ್ಮನೆ ಕೂಡುವುದನ್ನು ಕಲಿಸಿತ್ತು. ಬ್ಯಾಂಕರ್ ಕಿಟಕಿಯ ಮೇಲೆ ಬೆರಳಿನಿಂದ ತಟ್ಟಿದ. ಆದರೆ ಅದಕ್ಕೂ ಕೈದಿಯಿಂದ ಪ್ರತಿಕ್ರಿಯೆ ಬರಲಿಲ್ಲ. ಬ್ಯಾಂಕರ್ ಕೊನೆಗೆ ಹಾಕಿದ ಬೀಗದ ಮೇಲಿನ ಸೀಲ್ ಮುರಿದು ಕೀಲಿಯನ್ನು ಬೀಗದ ರಂಧ್ರದಲ್ಲಿ ತೂರಿಸಿದ. ತುಕ್ಕು ಹಿಡಿದಿದ್ದ ಬೀಗವು ಕರಕರ ಸದ್ದು ಮಾಡಿತು. ಬಾಗಿಲು ಕಿರುಗುಟ್ಟಿತು. ಹೆಜ್ಜೆಯ ಸದ್ದುಗಳು ಮತ್ತು ಆಶ್ಚರ್ಯದ ಕೂಗನ್ನು ಅಪೇಕ್ಷಿಸಿದ ಬ್ಯಾಂಕರ್ ಅವುಗಳಲ್ಲಿ ಒಂದೂ ಕೇಳಿಸದೆ ಅವಕ್ಕಾದ. ಮೂರು ನಿಮಿಷಗಳು ಕಳೆದವು. ಕೋಣೆಯಲ್ಲಿ ಮುಂಚೆ ಇದ್ದ ನೀರವತೆಯೇ ಮುಂದುವರೆಯಿತು. ಒಳಗೆ ಹೋಗುವ ನಿರ್ಧಾರ ಮಾಡಿ ಬ್ಯಾಂಕರ್ ಹೆಜ್ಜೆ ಮುಂದಿಟ್ಟ.
***
ಮೇಜಿನ ಮುಂದೆ ಅಸಾಧಾರಣ ಎನ್ನಿಸುವ ಮನುಷ್ಯನೊಬ್ಬ ಮಿಸುಕಾಡದೆ ಕುಳಿತಿದ್ದ. ಅವನೊಂದು ಎಲುಬಿನ ಗೂಡಾಗಿದ್ದ. ಚರ್ಮವು ಎಲುಬಿಗೆ ಹತ್ತಿಕೊಂಡಿತ್ತು. ಅವನ ತಲೆಗೂದಲು ಹೆಣ್ಣಿನ ತಲೆಗೂದಲಿನಂತೆ ಉದ್ದವಾಗಿ ಬೆಳೆದು ಕೆಳಗೆ ಇಳಿಬಿದ್ದಿತ್ತು. ಮುಖದ ಮೇಲೆ ಗಡ್ಡವಿತ್ತು. ಅವನ ಮುಖದ ಬಣ್ಣವು ಮಣ್ಣಿನ ಬಣ್ಣ ಮಿಶ್ರಿತ ಹಳದಿಯಾಗಿತ್ತು. ಗಲ್ಲಗಳಲ್ಲಿ ಗುಳಿ ಬಿದ್ದಿದ್ದವು. ಅವನ ಬೆನ್ನು ಸಣಕಲಾಗಿಯೂ ಉದ್ದವಾಗಿಯೂ ಇತ್ತು. ತನ್ನ ಮುಖವನ್ನು ಅವನು ಆನಿಸಿಕೊಂಡಿದ್ದ ಕೈ ಎಷ್ಟು ತೆಳ್ಳಗಿತ್ತೆಂದರೆ ಅದನ್ನು ನೋಡುವುದು ಕಷ್ಟಕರವಾಗಿತ್ತು. ಅವನ ತಲೆಗೂದಲಲ್ಲಿ ಈಗಾಗಲೇ ಬೆಳ್ಳಿಯ ರೇಖೆಗಳು ಕಾಣುತ್ತಿದ್ದವು. ಜರ್ಝರಿತವಾದ ಅವನ ಮುಖವನ್ನು ನೋಡಿದ ಯಾರೂ ಅವನಿನ್ನೂ ನಲವತ್ತು ವರ್ಷದವನೆಂದರೆ ನಂಬಲಾರರು. ಅವನು ನಿದ್ರಿಸುತ್ತಿದ್ದ. ಬಾಗಿದ್ದ ಅವನ ತಲೆಯ ಕೆಳಗೆ ಮೇಜಿನ ಮೇಲೆ ಅವನ ಕೈಬರಹದಲ್ಲಿದ್ದ ಒಂದು ಪತ್ರವಿತ್ತು.
"ಅಯ್ಯೋ ಪಾಪದ ಪ್ರಾಣಿ!" ಎಂದು ಬ್ಯಾಂಕರ್ ಕನಿಕರದಿಂದ ಮನಸ್ಸಿನಲ್ಲೇ ಉದ್ಗರಿಸಿದ. "ನಿದ್ರೆಯಲ್ಲೇ ಅವನು ಮಿಲಿಯನ್ ಹಣವನ್ನು ಕುರಿತು ಆಲೋಚಿಸುತ್ತಿರಬೇಕು! ಅರ್ಧಜೀವವಾದ ಇವನನ್ನು ಮೇಲೆತ್ತಿ ಹಾಸಿಗೆಯ ಮೇಲೆಸೆದು ದಿಂಬಿನಿಂದ ಮುಖವನ್ನು ಮುಚ್ಚಿ ಹಿಡಿದರೆ ಒಂದೆರಡು ಕ್ಷಣದಲ್ಲಿ ಜೀವ ಹೋಗುತ್ತದೆ. ನಿದ್ದೆಯಲ್ಲೇ ಸತ್ತಂತೆ ತೋರುತ್ತದೆ. ಎಂಥ ನಿಪುಣ ಪೊಲೀಸನಿಗೂ ಇಲ್ಲಿ ನಡೆದ ಹಿಂಸೆಯ ಸುಳಿವು ಸಿಕ್ಕಲಾರದು. ಆದರೆ ಅವನು ಇಲ್ಲಿ ಬರೆದಿಟ್ಟ ಪತ್ರದಲ್ಲಿ ಏನಿದೆ ಎಂದು ಮೊದಲು ನೋಡೋಣ ..."
ಮೇಜಿನ ಮೇಲಿದ್ದ ಕಾಗದವನ್ನು ಮೇಲೆತ್ತಿಕೊಂಡು ಬ್ಯಾಂಕರ್ ಓದಿದ.
"ನಾಳೆ ಹನ್ನೆರಡು ಗಂಟೆಗೆ ನಾನು ನನ್ನ ಸ್ವಾತಂತ್ರ್ಯವನ್ನು ಮತ್ತೆ ಪಡೆದುಕೊಳ್ಳುತ್ತೇನೆ. ಮನುಷ್ಯರೊಂದಿಗೆ ಮತ್ತೆ ಬೆರೆಯುವ ಹಕ್ಕನ್ನು ಮತ್ತೆ ಪಡೆದುಕೊಳ್ಳುತ್ತೇನೆ. ಆದರೆ ನಾನು ಈ ಕೋಣೆಯನ್ನು ಬಿಟ್ಟು ಹೊರಡುವ ಮುನ್ನ, ಸೂರ್ಯರಶ್ಮಿಯನ್ನು ಮತ್ತೊಮ್ಮೆ ನೋಡುವ ಮುನ್ನ, ನಿಮ್ಮೊಂದಿಗೆ ಕೆಲವು ಮಾತುಗಳನ್ನು ಹಂಚಿಕೊಳ್ಳುವುದು ಅಗತ್ಯವೆನ್ನಿಸುತ್ತಿದೆ. ಅತ್ಯಂತ ನಿಷ್ಕಲ್ಮಶ ಮನಸ್ಸಿನಿಂದ, ದೇವರ ಮುಂದೆ ನಿಂತು ನುಡಿಯುತ್ತಿರುವೆನೇನೋ ಎಂಬಂತೆ, ಹೇಳುತ್ತೇನೆ ಕೇಳಿ. ಸ್ವಾತಂತ್ರ್ಯವನ್ನು, ಬದುಕನ್ನು, ಆರೋಗ್ಯವನ್ನು, ಮತ್ತು ಪುಸ್ತಕಗಳಲ್ಲಿ ಪ್ರಪಂಚದ ಒಳಿತುಗಳೆಂದು ಕೊಂಡಾಡಲಾಗುವ ಎಲ್ಲವನ್ನೂ ನಾನು ದ್ವೇಷಿಸುತ್ತೇನೆ.
ಹದಿನೈದು ವರ್ಷಗಳಿಂದಲೂ ನಾನು ಭೂಮಿಯ ಮೇಲಿನ ಜೀವನವನ್ನು ಕುರಿತು ಅಧ್ಯಯನ ನಡೆಸುತ್ತಿದ್ದೇನೆ. ಈ ಅವಧಿಯಲ್ಲಿ ನಾನು ಭೂಮಿಯನ್ನಾಗಲಿ ಮನುಷ್ಯರನ್ನಾಗಲಿ ನೋಡಿಲ್ಲವಾದರೂ ನಿಮ್ಮ ಪುಸ್ತಕಗಳಲ್ಲಿ ಸುವಾಸನೆಯುಳ್ಳ ವೈನ್ ಸೇವಿಸಿದ್ದೇನೆ, ಹಾಡುಗಳನ್ನು ಹಾಡಿದ್ದೇನೆ, ಜಿಂಕೆಗಳನ್ನು ಮತ್ತು ಕಾಡುಹಂದಿಗಳನ್ನು ಬೇಟೆಯಾಡಿದ್ದೇನೆ, ಹೆಣ್ಣುಗಳನ್ನು ಪ್ರೀತಿಸಿದ್ದೇನೆ ... ನಿಮ್ಮ ಮೇಧಾವಿ ಕವಿಗಳು ಸೃಷ್ಟಿಸಿದ, ಮೋಡಗಳಷ್ಟೇ ಅಲೌಕಿಕವಾದ ಗಂಧರ್ವ ಕನ್ಯೆಯರು ರಾತ್ರಿ ನನ್ನ ಕಿವಿಗಳಲ್ಲಿ ಪಿಸುಗುಟ್ಟಿದ ಮಾತುಗಳಿಂದ ನನ್ನ ತಲೆಗೆ ನಶೆ ಏರಿದೆ ... ನಿಮ್ಮ ಪುಸ್ತಕಗಳಲ್ಲಿ ನಾನು ಎಲ್ಬರ್ಜ್ ಮತ್ತು ಮಾಂಟ್ ಬ್ಲಾಂಕ್ ಶಿಖರಗಳನ್ನು ಏರಿದ್ದೇನೆ ... ಅಲ್ಲಿಂದ ಸೂರ್ಯೋದಯವನ್ನು ವೀಕ್ಷಿಸಿದ್ದೇನೆ ... ಸಂಜೆ ಸೂರ್ಯಾಸ್ತ ಸಮಯದಲ್ಲಿ ಕೆಂಬೆಳಕು ಇಡೀ ಆಕಾಶವನ್ನು, ಕಡಲನ್ನು ಮತ್ತು ಪರ್ವತಶಿಖರಗಳನ್ನು ತೇಜೋಮಯಗೊಳಿಸುವುದನ್ನು ನೋಡಿದ್ದೇನೆ ... ಆ ಉತ್ತುಂಗದಲ್ಲಿ ನಿಂತು ನನ್ನ ತಲೆಯ ಮೇಲೆ ನಡೆಯುವ ಗುಡುಗು ಸಿಡಿಲುಗಳ ಆಟವನ್ನು ನೋಡಿದ್ದೇನೆ ... ಮಿಂಚಿನ ಬಳ್ಳಿಗಳು ಕಾರ್ಮೋಡಗಳನ್ನು ಕತ್ತರಿಸುವುದನ್ನು ನೋಡಿದ್ದೇನೆ ... ಹಸಿರು ವನರಾಜಿಗಳನ್ನೂ, ಹೊಲಗಳನ್ನೂ, ನದಿಗಳನ್ನೂ, ಕೆರೆಗಳನ್ನೂ, ನಗರಗಳನ್ನೂ ನೋಡಿದ್ದೇನೆ ... ಸೈರನ್ನುಗಳ ಧ್ವನಿಯನ್ನು ಕೇಳಿದ್ದೇನೆ ... ಕುರಿಗಾಹಿಗಳು ಓದುವ ಪೈಪ್ ವಾದ್ಯದ ಮಾಧುರ್ಯವನ್ನು ಸವಿದಿದ್ದೇನೆ ... ನನ್ನೊಂದಿಗೆ ದೇವರನ್ನು ಕುರಿತು ಮಾತಾಡಲು ಬಂದ ಮೋಹಕ ರಾಕ್ಷಸರ ರೆಕ್ಕೆಗಳನ್ನು ಮುಟ್ಟಿದ್ದೇನೆ ... ನಿಮ್ಮ ಪುಸ್ತಕಗಳಲ್ಲಿ ನಾನು ಅತ್ಯಂತ ಹೀನ ಪಾತಳಕ್ಕೆ ಬಿದ್ದಿದ್ದೇನೆ, ಪವಾಡಗಳನ್ನು ಮಾಡಿದ್ದೇನೆ, ಕೊಂದಿದ್ದೇನೆ, ನಗರಗಳನ್ನು ಸುಟ್ಟು ಬೂದಿ ಮಾಡಿದ್ದೇನೆ, ಹೊಸ ಧರ್ಮಗಳನ್ನು ಬೋಧಿಸಿದ್ದೇನೆ, ಇಡೀ ರಾಜ್ಯಗಳನ್ನು ಗೆದ್ದಿದ್ದೇನೆ ...
ನಿಮ್ಮ ಪುಸ್ತಕಗಳಲ್ಲಿ ನಾನು ವಿವೇಕವನ್ನು ಪಡೆದುಕೊಂಡಿದ್ದೇನೆ. ಎಂದೂ ವಿಶ್ರಾಂತಿ ಪಡೆಯದ ಮನುಷ್ಯನ ಆಲೋಚನಾ ಶಕ್ತಿಯು ಸಹಸ್ರಾರು ವರ್ಷಗಳಲ್ಲಿ ಮಾಡಿದ ಸಾಧನೆಗಳೆಲ್ಲವೂ ನನ್ನ ಮಸ್ತಿಷ್ಕದಲ್ಲಿ ಪುಟ್ಟದೊಂದು ದಿಕ್ಸೂಚಿಯಾಗಿ ಕುಳಿತಿದೆ. ನಾನೀಗ ನಿಮ್ಮೆಲ್ಲರಿಗಿಂತಲೂ ಹೆಚ್ಚು ವಿವೇಕಶಾಲಿ ಎಂದು ನನಗೆ ಗೊತ್ತಿದೆ.
ನಿಮ್ಮ ಪುಸ್ತಕಗಳನ್ನು ನಾನು ದ್ವೇಷಿಸುತ್ತೇನೆ. ನಾನು ವಿವೇಕವನ್ನೂ ಈ ಜಗತ್ತಿನ ಎಲ್ಲಾ ಅನುಗ್ರಹಗಳನ್ನೂ ದ್ವೇಷಿಸುತ್ತೇನೆ. ಇವೆಲ್ಲವೂ ಮರೀಚಿಕೆಯಷ್ಟೇ ನಿಷ್ಪ್ರಯೋಜಕ, ಭ್ರಮೆ, ವಂಚನೆ. ನೀವು ವಿವೇಕಿಗಳೆಂದು ಗರ್ವಿಸುತ್ತಿರಬಹುದು, ಆದರೆ ಸಾವು ಬಂದು ನಿಮ್ಮನ್ನು ಒಂದೇ ಕ್ಷಣದಲ್ಲಿ ಅಳಿಸಿಹಾಕುತ್ತದೆ - ನೆಲದ ಕೆಳಗೆ ಬಿಲ ತೋಡುವ ಒಂದು ಯಃಕಶ್ಚಿತ್ ಇಲಿಯೋ ಎಂಬಂತೆ ... ನಿಮ್ಮ ಮುಂದಿನ ಪೀಳಿಗೆಗಳು, ನಿಮ್ಮ ಇತಿಹಾಸ, ನಿಮ್ಮ ಅಮರ ಪ್ರತಿಭೆಗಳೆಲ್ಲ ಈ ಭೂಮಂಡಲದೊಂದಿಗೆ ಭಸ್ಮವಾಗುತ್ತಾರೆ ಅಥವಾ ಮಂಜುಗಟ್ಟುತ್ತಾರೆ.
ನೀವು ನಿಮ್ಮ ಮೂಲೋದ್ದೇಶವನ್ನು ಕಳೆದುಕೊಂಡು ತಪ್ಪು ಹಾದಿ ಹಿಡಿದಿದ್ದೀರಿ. ಸುಳ್ಳನ್ನೇ ಸತ್ಯವೆಂದು ನಂಬಿದ್ದೀರಿ. ಕುರೂಪವನ್ನೇ ಸೌಂದರ್ಯವೆಂದು ತಿಳಿದಿದ್ದೀರಿ. ಯಾವುದೋ ಕಾರಣದಿಂದ ಸೇಬು ಮತ್ತು ಕಿತ್ತಳೆ ಹಣ್ಣಿನ ಮರಗಳ ಮೇಲೆ ಹಣ್ಣುಗಳ ಬದಲಾಗಿ ಕಪ್ಪೆಗಳು ಮೀನುಗಳು ಬೆಳೆದರೆ ನೀವು ಅದನ್ನು ಕೌತುಕವೆಂದು ಸಂಭ್ರಮಿಸುತ್ತೀರಿ. ಗುಲಾಬಿಯ ಹೂವಿನಿಂದ ಕುದುರೆಯ ಬೆವರಿನ ವಾಸನೆ ಬಂದರೂ ಹೀಗೇ ವರ್ತಿಸುತ್ತೀರಿ. ಭೂಮಿಯನ್ನು ಸ್ವರ್ಗಕ್ಕಾಗಿ ವಿನಿಮಯ ಮಾಡಿಕೊಳ್ಳಲು ಹೊರಟ ನಿಮ್ಮನ್ನು ನಾನು ಇದೇ ಬಗೆಯ ಕೌತುಕದಿಂದ ನೋಡುತ್ತೇನೆ. ನಿಮ್ಮನ್ನು ಅರ್ಥೈಸಿಕೊಳ್ಳುವ ಇಷ್ಟ ನನಗೆ ಕಿಂಚಿತ್ತೂ ಇಲ್ಲ.
ನೀವು ಯಾವುದನ್ನು ಅನುಮೋದಿಸುತ್ತಾ ಬದುಕುತ್ತಿರುವಿರೋ ಅದನ್ನು ನಾನು ನಿಕೃಷ್ಟವೆಂದು ಕಡೆಗಣಿಸುತ್ತೇನೆ. ಇದನ್ನು ನಿಮಗೆ ಸಿದ್ಧಪಡಿಸಿ ತೋರಿಸಲು ನೀವು ನನಗೆ ಕೊಡಬೇಕಾದ ಎರಡು ಮಿಲಿಯನ್ ಹಣವನ್ನು ನಾನು ತ್ಯಾಗ ಮಾಡುತ್ತೇನೆ. ಹಿಂದೊಮ್ಮೆ ಆ ಹಣವನ್ನು ಸ್ವರ್ಗಸಮಾನವೆಂದು ತಿಳಿದಿದ್ದೆ. ಈಗ ನಾನು ಅದನ್ನು ತಿರಸ್ಕರಿಸುತ್ತೇನೆ. ಹಣದ ಮೇಲಿನ ನನ್ನ ಹಕ್ಕನ್ನು ಅಮಾನ್ಯ ಮಾಡಲು ನಾನು ಪಂದ್ಯದಲ್ಲಿ ಪಡಿಸಲಾದ ಸಮಯಕ್ಕಿಂತ ಐದು ಗಂಟೆ ಮುಂಚಿತವಾಗಿಯೇ ಈ ಕೋಣೆಯನ್ನು ಬಿಟ್ಟು ಹೋರಡುತ್ತೇನೆ ..."
ಪತ್ರವನ್ನು ಓದಿ ಮುಗಿಸಿದ ಬ್ಯಾಂಕರ್ ಅದನ್ನು ಮತ್ತೆ ಮೇಜಿಗೆ ಹಿಂದಿರುಗಿಸಿ ಕುಳಿತಲ್ಲೇ ನಿದ್ದೆ ಹೋಗಿದ್ದ ಆ ವಿಚಿತ್ರ ಮನುಷ್ಯನ ಹಣೆಗೆ ಬಾಗಿ ಮುತ್ತಿಟ್ಟು ಅಳುತ್ತಾ ಲಾಡ್ಜಿನಿಂದ ಹೊರಬಂದ. ಹಿಂದೆ ಯಾವ ಸಂದರ್ಭದಲ್ಲೂ, ತಾನು ಸ್ಟಾಕ್ ವಿನಿಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಕಳೆದುಕೊಂಡಾಗಲೂ, ಅವನಿಗೆ ತನ್ನ ಬಗ್ಗೆ ಇಷ್ಟೊಂದು ಜಿಗುಪ್ಸೆ ಉಂಟಾಗಿರಲಿಲ್ಲ. ಅವನು ಮನೆಗೆ ಹಿಂತಿರುಗಿ ಮಂಚದ ಮೇಲೆ ಅಡ್ಡಾದರೂ ಅವನ ಕಣ್ಣಲ್ಲಿ ಹರಿಯುತ್ತಿದ್ದ ನೀರು ಮತ್ತು ಅವನ ಭಾವೋದ್ವೇಗದ ಕಾರಣ ಅವನಿಗೆ ಅನೇಕ ಗಂಟೆಗಳ ಕಾಲ ನಿದ್ದೆ ಬರಲಿಲ್ಲ.
ಮರುದಿನ ಬೆಳಗ್ಗೆ ವಾಚ್ಮನ್ ಓಡಾಡುತ್ತಾ ಬಂದು ಪೆಚ್ಚು ಮುಖದಿಂದ ವರದಿ ಮಾಡಿದ. ಲಾಡ್ಜಿನಲ್ಲಿದ್ದ ಆಸಾಮಿ ಕಿಟಕಿಯ ಮೂಲಕ ಹೊರಬಂದು ತೋಟದೊಳಗೆ ಜಿಗಿದು ಗೇಟ್ ತೆರೆದು ಕಣ್ಮರೆಯಾದ ವಿಷಯ. ಕೂಡಲೇ ಬ್ಯಾಂಕರ್ ತನ್ನ ನೌಕರರೊಂದಿಗೆ ಲಾಡ್ಜ್ ಪ್ರವೇಶಿಸಿ ಕೈದಿಯು ಪರಾರಿಯಾದ ವಿಷಯವನ್ನು ಪರೀಕ್ಷಿಸಿ ಖಾತರಿ ಮಾಡಿಕೊಂಡ. ಅನಗತ್ಯ ಚರ್ಚೆಗಳಿಗೆ ತೆರೆ ಎಳೆಯಲು ಮೇಜಿನ ಮೇಲಿದ್ದ ಪತ್ರವನ್ನು ಕೈಗೆತ್ತಿಕೊಂಡು ಬಂದು ಮನೆಯಲ್ಲಿ ತಿಜೋರಿಯಲ್ಲಿ ಭದ್ರಪಡಿಸಿದ.

ಬಹಳ ಚೆನ್ನಾಗಿದೆ. ಪ್ರಸ್ತುತ ಕೂಡ. ಒರಿಜಿನಲ್ ಹೆಸರೇನು ?
ಪ್ರತ್ಯುತ್ತರಅಳಿಸಿಪಾಲಹಳ್ಳಿ ಅವರೇ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು! ಮೂಲ ಕಥೆಯ ಹೆಸರು "ದ ಬೆಟ್"
ಪ್ರತ್ಯುತ್ತರಅಳಿಸಿ