ವಿಜ್ಞಾನಕ್ಕೆ ಕವಿಯ ಪತ್ರ

ಅನಾದಿ ಕಾಲನ ದಿಟಪುತ್ರಿಯೆಂದರೆ ನೀನಲ್ಲವೇ  ಓ ವಿಜ್ಞಾನ!

ಬದಲಿಸದಿದ್ದುದೇನಿದೆ  ನೀನು ನಿನ್ನ ಕಣ್ಣುಗಳಿಂದ,  ವಾರೆನೋಟ 

ನೋಡುತ್ತಾ ಎವೆಯಿಕ್ಕದೆ! ಕವಿಯ ಹೃದಯವನ್ನೇಕೆ ಕುಕ್ಕುವೆ 

ಓ ರಣಪಕ್ಷಿ, ನೀರಸ ವಾಸ್ತವದ ನಿನ್ನ ರೆಕ್ಕೆಯನ್ನು ಬಡಿಯುತ್ತಾ?

ಪ್ರೀತಿಸುವನಾದರೂ ಹೇಗೆ ಕವಿ ನಿನ್ನನ್ನು?  ನಿಶೆಯಲ್ಲವನು 

ನಭದ  ನಕ್ಷತ್ರಲೋಕದ ನಿಧಿಗಳನ್ನರಸಿ ಹೊರಟರೆ 

ಕಲ್ಪನೆಯ ಗರಿ ಬಿಚ್ಚಿ ವಿಹಂಗಮದಂತೆ, ಅಯ್ಯೋ  ಹಾರಗೊಡದಲ್ಲ 

ನಿನ್ನ  ಅಡ್ಡಗಾಲು! ಧ್ರುವನನ್ನು ನೂಕಿ ಬೀಳಿಸಿದೆ ಕೆಳಕ್ಕೆ!

ಸಪ್ತಋಷಿಗಳನ್ನು ಹೆದರಿಸಿ ಮೇಲೆಬ್ಬಿಸಿದೆ ಏಳು ಏಳೆಂದು!

ಬೆದರಿಸಿ ಓಡಿಸಲಿಲ್ಲವೇ  ಶಶಾಂಕನ ಮೇಲಿದ್ದ ಮೊಲವನ್ನು?

ಪೂರ್ಣಿಮೆಗೆ ಉಕ್ಕುವ ಸಾಗರದ ಸಂಭ್ರಮಕ್ಕೂ ನಿನ್ನದೊಂದು 

ಶುಷ್ಕ ವಿವರಣೆ!  ಕದ್ದೆಯಲ್ಲ ಚಕ್ರವಾಕಗಳಿಂದ ಪ್ರೇಮಸ್ವರ್ಗವನ್ನೂ 

ನಿಷ್ಕರುಣಿ! ಕದ್ದೆಯಲ್ಲ ಕೊಳದ ಬಳಿ ಹೂ ಬಿಟ್ಟ ಹುಣಸೇ-

ಮರದಡಿಗೆ  ಬಚ್ಚಿಟ್ಟ ನನ್ನಲ್ಲಿ ಚಿಗುರಿದ್ದ ಒಂದೇ ಸಿಹಿಗನಸೇ!  


ಮೂಲ - ಎಡ್ಗರ್ ಆಲನ್ ಪೋ 

ಕನ್ನಡ ಅನುವಾದ - ಸಿ. ಪಿ. ರವಿಕುಮಾರ್ 


 Science! true daughter of Old Time thou art!

Who alterest all things with thy peering eyes.

Why preyest thou thus upon the poet’s heart,

Vulture, whose wings are dull realities?

How should he love thee? or how deem thee wise,

Who wouldst not leave him in his wandering

To seek for treasure in the jewelled skies,

Albeit he soared with an undaunted wing?

Hast thou not dragged Diana from her car,

And driven the Hamadryad from the wood

To seek a shelter in some happier star?

Hast thou not torn the Naiad from her flood,

The Elfin from the green grass, and from me

The summer dream beneath the tamarind tree?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)