ಭೂಮಿ






೨೦೨೧ರಲ್ಲಿ ಬಿಡುಗಡೆಯಾದ ಲ್ಯಾಂಡ್ ಎಂಬ ಚಲನಚಿತ್ರದ ಮುಖ್ಯಪಾತ್ರದಲ್ಲಿ ನಟಿಸಿ ಚಿತ್ರವನ್ನು ನಿರ್ದೇಶಿಸಿದವಳು ರಾಬಿನ್ ರೈಟ್ ಎಂಬ ಕಲಾವಿದೆ. ಜೆಸ್ಸಿ ಚಾಟ್ಹಾಮ್ ಮತ್ತು ಎರಿನ್ ಡಿಗ್ನಮ್ ಅವರ ಚಿತ್ರಕಥೆಯನ್ನು ಆಧರಿಸಿದ ಚಿತ್ರ. ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದ ಈ ಚಿತ್ರದ ಕಥೆಯನ್ನು ಕೆಳಗೆ ಸಂಕ್ಷೇಪವಾಗಿ ಕೊಟ್ಟಿದ್ದೇನೆ. ಈ ಚಿತ್ರವನ್ನು ನಾನು ನೆಟ್ಫ್ಲಿಕ್ಸ್ ಮೇಲೆ ನೋಡಿದೆ. ಬಹಳ ಪರಿಣಾಮಕಾರಿ ಚಿತ್ರ. ಹೆಚ್ಚು ಸಂಭಾಷಣೆ ಇಲ್ಲ. ಸೂಕ್ಷ್ಮವಾದ ವಿಷಯವನ್ನು ಕುರಿತು ಮಾಡಿದ ಗಂಭೀರ ಚಿತ್ರ. ಕಥೆ ನಿಮಗೂ ಇಷ್ಟವಾಗಬಹುದು ಎಂದು ನಂಬಿದ್ದೇನೆ.





ವಳು ತನ್ನ ನಿರ್ಧಾರವನ್ನು ಪ್ರಕಟಿಸಿದಾಗ ಅವಳ ಅಕ್ಕ ಎಮ್ಮಾ ಹೌಹಾರಿದಳು.

"ಈಡೀ! ಏನು ಮಾತಾಡ್ತಾ ಇದ್ದೀಯಾ! ನಿನ್ನಿಂದ ಆಗೋ ಕೆಲಸ ಏನು ಇದು!"

"ನಾನು ತುಂಬಾ ಯೋಚನೆ ಮಾಡಿ ಈ ನಿರ್ಧಾರಕ್ಕೆ ಬಂದಿದ್ದೇನೆ."

"ಇನ್ನೊಂದು ತಿಂಗಳು ತಡೆದುಕೋ. ಎಲ್ಲ ಮತ್ತೆ ಸರಿಯಾಗುತ್ತದೆ."

"ಇಲ್ಲ ಎಮ್ಮಾ! ಎಲ್ಲಾ ಮತ್ತೆ ಸರಿಯಾಗುವುದಿಲ್ಲ. ನಿನಗೆ ಇದು ಅರ್ಥವಾಗದು. ಅನುಭವಿಸಿದವರಿಗೆ ಮಾತ್ರ ಇದು ಅರ್ಥವಾಗುವುದು." ಹಾಗೆ ಹೇಳುತ್ತಾ ಅವಳ ಕಂಠ ಬಿಗಿಯಿತು. ಅವಳು ಮುಖ ಮುಚ್ಚಿಕೊಂಡು ಬಿಕ್ಕಿದಳು. ಎಮ್ಮಾ ಅವಳನ್ನು ತಬ್ಬಿಕೊಂಡು ಸಂತೈಸಲು ಬಂದಳು. ಆದರೆ ಈಡೀ ಅವಳ ಸಾಂತ್ವನವನ್ನು ನಿರಾಕರಿಸಿದಳು. ಎಮ್ಮಾ.ಎಷ್ಟು ಹೇಳಿದರೂ ಕೇಳದೆ ಅವಳು ತನ್ನ ಮನೆಗೆ ಹಿಂದಿರುಗಿದಳು.

ಅವಳು ತನ್ನ ಮುಂದಿನ ನಡೆಗಾಗಿ ಅನೇಕ ದಿವಸಗಳಿಂದ ತಯಾರಿ ನಡೆಸಿದ್ದಳು. ಅದೆಷ್ಟೋ ಪುಸ್ತಕಗಳನ್ನು ಓದಿ ಟಿಪ್ಪಣಿಗಳನ್ನು ಮಾಡಿಕೊಂಡು ಬೇಕಾಗುವ ಸರಂಜಾಮುಗಳ ಪಟ್ಟಿ ತಯಾರಿಸಿಕೊಂಡಿದ್ದಳು. ಓದಿ ಟಿಪ್ಪಣಿಗಳನ್ನು ಮಾಡಿಕೊಳ್ಳುವುದು ಅವಳ ಲಾಯರ್ ವೃತ್ತಿಗೆ ಸಹಜವಾದದ್ದು ತಾನೇ!

ಅನೇಕ ವೆಬ್ ತಾಣಗಳನ್ನು ನೋಡಿ ಅವಳು ಒಂದು ಕ್ಯಾಬಿನ್ ಆರಿಸಿಕೊಂಡಿದ್ದಳು. ವಯೋಮಿಂಗ್ ರಾಜ್ಯದ ಪಶ್ಚಿಮ ಪ್ರದೇಶದಲ್ಲಿ ರಾಕಿ ಪರ್ವತ ಶ್ರೇಣಿಯ ಮೇಲಿರುವ ಒಂದು ಕ್ಯಾಬಿನ್ ಅವಳಿಗೆ ಕೊನೆಗೂ ಖರೀದಿಗೆ ಸಿಕ್ಕಿತು. ಅದರ ಮಾಲೀಕ ಕ್ವಿನ್ಸಿ ಪಟ್ಟಣದಲ್ಲಿ ಒಂದು ಅಂಗಡಿ ನಡೆಸುತ್ತಿದ್ದ. ಅವಳು ಹಲವಾರು ಗಂಟೆಗಳ ಸುದೀರ್ಘ ಪ್ರಯಾಣದ ನಂತರ ಅವನ ಅಂಗಡಿಯ ಮುಂದೆ ಕಾರು ನಿಲ್ಲಿಸಿದಳು.

ಅಂಗಡಿಯಲ್ಲಿ ಹೆಚ್ಚು ಜನ ಇರಲಿಲ್ಲ. ಪರ್ವತಗಳಲ್ಲಿ ಸುತ್ತಾಡುವ ಖಯಾಲಿ ಉಳ್ಳವರಿಗೆ ಬೇಕಾದ ಎಲ್ಲಾ ಸರಂಜಾಮುಗಳು ಅಂಗಡಿಯಲ್ಲಿದ್ದವು. ಅವಳು ಅಂಗಡಿಯ ಮಾಲೀಕನನ್ನು ಕಂಡು ತನ್ನ ಪರಿಚಯ ಹೇಳಿಕೊಂಡಳು.

"ನಿಮಗೆ ಸ್ವಾಗತ, ಶ್ರೀಮತಿ ಹೊಲ್ಜರ್! ನಿಮ್ಮ ಕುಟುಂಬದವರು ಎಲ್ಲಿ?"

"ನಾನು ಒಬ್ಬಳೇ."

"ಓಹ್. ಏಕಾಂಗಿಯಾಗಿ ಕ್ಯಾಬಿನ್ನಿನಲ್ಲಿ ವಾಸ ಮಾಡುವ ಸಾಹಸವೋ! ಇನ್ನೂ ಚಳಿಗಾಲಕ್ಕೆ ಒಂದು ತಿಂಗಳಿದೆ! ನಿಮಗೆ ಒಂದು ತಿಂಗಳು ಕಳೆಯಲು ಏನೂ ತೊಂದರೆ ಆಗದು."

ಅವಳು ಸುಮ್ಮನಿದ್ದಳು. ತನ್ನ ಪರ್ಸಿಸಿಂದ ಒಂದು ಚೀಟಿಯನ್ನು ತೆಗೆದು ಅವನ ಕೈಗೆ ಕೊಟ್ಟಳು. ಅವನು ಅದನ್ನು ಆಮೂಲಾಗ್ರ ಓದಿಕೊಂಡು "ವಾಹ್, ನಿಮ್ಮ ಪ್ರವಾಸಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಂಡು ಬಂದಿದ್ದೀರಿ. ಈ ಸಾಮಾನುಗಳನ್ನೆಲ್ಲ ನಿಮ್ಮ ಕಾರಿನಲ್ಲಿ ಕೊಂಡೊಯ್ಯಲು ಸ್ಥಳ ಇದೆಯೇ?"

"ಇಲ್ಲ. ನಾನು ಒಂದು ವ್ಯಾಗನ್ ಬಾಡಿಗೆ ತೆಗೆದುಕೊಂಡು ಹೋಗುತ್ತೇನೆ."

"ನಾನು ಯು-ಹಾಲ್ ವ್ಯಾಗನ್ ಪ್ರಬಂಧ ಮಾಡಬಲ್ಲೆ."

"ಧನ್ಯವಾದ."

ಅವನು ಎಲ್ಲಾ ಸಾಮಾನುಗಳನ್ನೂ ಜೋಡಿಸಿ ಅವುಗಳನ್ನು ವ್ಯಾಗನ್ ಒಳಗೆ ತುಂಬಿಸಲು ಸಾಕಷ್ಟು ಸಮಯ ಹಿಡಿಯಿತು. ಸೌದೆ ಒಡೆಯುವ ಮಚ್ಚು. ಸುತ್ತಿಗೆ. ಹಗ್ಗ. ಬೆಚ್ಚಗಿನ ಬಟ್ಟೆಗಳು. ಒಂದೇ ಎರಡೇ! ಇದಲ್ಲದೆ ಸುಮಾರು ತಿಂಗಳಿಗೆ ಸಾಕಾಗುವಷ್ಟು ಆಹಾರ. ಕಾಫಿ ಪುಡಿ, ಹಾಲಿನ ಪುಡಿ. ತಿಂಗಳುಗಟ್ಟಲೆ ಕೆಡದಂತೆ ಕ್ಯಾನ್ ಮಾಡಿದ ಹಣ್ಣು, ಕಾಳು, ಮಾಂಸ.

ಸಾಕಷ್ಟು ದೊಡ್ಡ ಮೊತ್ತದ ಹಣವನ್ನು ಅವಳು ನಗದು ಕೊಟ್ಟು ಸಂದಾಯ ಮಾಡಿದಳು. ಕ್ಯಾಬಿನ್ ಖರೀದಿಗೆ ಈಗಾಗಲೇ ಅವಳು ಮುಂಗಡ ಪಾವತಿ ಮಾಡಿದ್ದಳು. ಉಳಿದ ಹಣಕ್ಕೆ ಚೆಕ್ ನೀಡಿದಳು.

ಯು-ಹಾಲ್ ಬಂಡಿಯನ್ನು ಅವಳ ಕಾರಿಗೆ ಭದ್ರವಾಗಿ ಜೋಡಿಸಿದ ನಂತರ ಅಂಗಡಿಯ ಮಾಲೀಕ "ನಿಮ್ಮ ಜೊತೆ ವ್ಯವಹಾರ ಮಾಡಿದ್ದು ನನಗೆ ತುಂಬಾ ಸಂತೋಷದ ವಿಷಯ ಮಿಸೆಸ್ ಹೋಲ್ಜರ್. ನೋಡಿ ಇಲ್ಲಿಂದ ಕ್ಯಾಬಿನ್ನಿಗೆ ಸುಮಾರು ಒಂದು ಗಂಟೆಯ ಪ್ರಯಾಣ. ರಸ್ತೆ ಅಷ್ಟೇನೂ ಸುಲಭವಲ್ಲ. ನಾನು ನನ್ನ ಕಾರಿನಲ್ಲಿ ಮುಂದೆ.ಹೋಗುತ್ತೇನೆ. ನೀವು ನನ್ನ ಹಿಂದೆ ಬನ್ನಿ" ಎಂದ.

ಅವಳು ಪ್ರತಿಭಟಿಸಲಿಲ್ಲ. ಅವಳ ಫೋನ್ ಕಿಣಿಕಿಣಿ ಎಂದಿತು. ಅವಳು ಕೈಯಲ್ಲಿ ಎತ್ತಿಕೊಂಡು ನೋಡಿದಳು. ಎಮ್ಮಾ. ಅವಳು ಫೋನ್ ಉತ್ತರಿಸಲಿಲ್ಲ. "ಒಂದು ನಿಮಿಷ!" ಎಂದು ಮಾಲೀಕನಿಗೆ ಹೇಳಿ ಅಂಗಡಿಯ ಬದಿಯಲ್ಲಿದ್ದ ಕಸದ ಬುಟ್ಟಿಯ ಬಳಿ ಬಂದಳು. ಫೋನ್ ಇನ್ನೂ ಬಾಜಿಸುತ್ತಿತ್ತು. ಅವಳು ಫೋನನ್ನು ನಿರ್ದಯವಾಗಿ ಕಸದ ಬುಟ್ಟಿಗೆ ಎಸೆದು ಕಾರಿನಲ್ಲಿ ಹೋಗಿ ಕೂತಳು.

ಅವಳು ಅಂಗಡಿ ಮಾಲೀಕನ ಕಾರನ್ನು ಹಿಂಬಾಲಿಸುತ್ತಾ ಜಾಗರೂಕತೆಯಿಂದ ಗಾಡಿ ಓಡಿಸುತ್ತಿದ್ದಳು. ಆಗಾಗ ಸುತ್ತಲಿನ ದೃಶ್ಯಾವಳಿಯನ್ನು ನೋಡಿ ಕಣ್ಣು ತುಂಬಿಕೊಂಡಳು. ಎತ್ತರದ ರಾಕಿ ಪರ್ವತ ಶ್ರೇಣಿಯ ಕಡಿದಾದ ರಸ್ತೆಯಲ್ಲಿ ಅವರು ಸಾಗುತ್ತಿದ್ದರು. ಸುತ್ತಲೂ ಬೆಟ್ಟಗಾಡು ಪ್ರದೇಶದಲ್ಲಿ ಮರಗಿಡಗಳ ಎಲೆಗಳು ಕೆಂಪುಬಣ್ಣಕ್ಕೆ ತಿರುಗುತ್ತಾ ಮನೋಹರವಾಗಿ ಕಂಡವು.

ಭೂಮಿ - ಭಾಗ ೨

ತೀರಾ ಅಂಕುಡೊಂಕಾದ ರಸ್ತೆಗಳಲ್ಲಿ ಕಾರ್ ಓಡಿಸುವುದು ಅವಳಿಗೆ ಕಷ್ಟ ಎನ್ನಿಸಿತು. ಕೊನೆಗೂ ಮುಂದೆ ಇದ್ದ ಕಾರು ಒಂದು ಕಿರಿದಾದ ಓಣಿಯಂತಹ ರಸ್ತೆಯಲ್ಲಿ ತಿರುಗಿತು. ಅವಳಿಗೆ ಈಗ ಮರದ ಕ್ಯಾಬಿನ್ ಕಾಣಿಸಿತು. ಅಂಗಡಿಯ ಮಾಲೀಕ ಕ್ಯಾಬಿನ್ ಸಮೀಪದಲ್ಲಿ ಗಾಡಿ ನಿಲ್ಲಿಸಿದ. ಅವಳೂ ಕಾರ್ ನಿಲ್ಲಿಸಿ ಹೊರಗೆ ಬಂದಳು.

"ಇಲ್ಲಿ ಮುಂಚೆ ಒಬ್ಬಂಟಿ ಇದ್ದ ಮುದುಕ ಕೊನೆಗೆ ಕ್ವಿಂಡಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಅಲ್ಲೇ ತೀರಿಕೊಂಡ. ಅದಾದ ಮೇಲೆ ಕ್ಯಾಬಿನ್ ಖಾಲಿ ಬಿದ್ದಿದೆ. ನಿಜ ಹೇಳಬೇಕು ಅಂದರೆ ಯಾರೂ ಒಳಗೆ ಹೋಗಿ ನೋಡಿಯೇ ಇಲ್ಲ. ಅವನಿಗೆ ಸೇರಿದ ಸಾಮಾನುಗಳು ಒಳಗೆ ಇರಬಹುದು. ಒಳಗೆ ತುಂಬಾ ಧೂಳು, ಗಲೀಜು ಸೇರಿಕೊಂಡಿರಬಹುದು. ನಾನು ನಿಮಗೆ ಸಹಾಯ ಮಾಡಬಲ್ಲೆ."

"ಪರವಾಗಿಲ್ಲ. ನನ್ನ ಹತ್ತಿರ ಅದಕ್ಕೆಲ್ಲ ಸಮಯ ಇದೆ."

"ಇಷ್ಟು ದೂರದಲ್ಲಿ ಹೀಗೆ ಒಬ್ಬಂಟಿ ಇರುತ್ತೀರಾ? ನಿಮಗೆ ಅಭ್ಯಾಸ ಇದೆಯೇ?"

"ಆಗುತ್ತೆ."

"ನನ್ನ ಫೋನ್ ನಂಬರ್ ನಿಮ್ಮ ಹತ್ತಿರ ಇದೆ. ಏನೇ ತೊಂದರೆ ಬಂದರೂ ಫೋನ್ ಮಾಡಿ."
"ನಾನು ಇಲ್ಲಿ ನನ್ನ ಪಾಡಿಗೆ ಇರಲು ಬಂದಿದ್ದೇನೆ. ಯಾರ ಜೊತೆಗೂ ಸಂಪರ್ಕ ಇಟ್ಟುಕೊಳ್ಳಲು ನನಗೆ ಇಷ್ಟ ಇಲ್ಲ."

ಅವನು ಸುಮ್ಮನಿದ್ದ.

"ನಿಮ್ಮ ಸಾಮಾನುಗಳನ್ನು ಒಳಗೆ ಇಡಲು ಸಹಾಯ ಮಾಡುತ್ತೇನೆ."

"ಬೇಡ, ನೀವು ಹೊರಡಿ. ನಾನು ನಿಧಾನವಾಗಿ ಎಲ್ಲಾ ಮಾಡಿಕೊಳ್ಳುತ್ತೇನೆ. ಅಂದಹಾಗೆ ನನಗೆ ನಮ್ಮ ಕಾರಿನ ಅವಶ್ಯಕತೆ ಇಲ್ಲ. ನಾಳೆ ಯು-ಹಾಲ್ ವ್ಯಾಗನ್ ಕೊಂಡೊಯ್ಯಲು ಯಾರನ್ನಾದರೂ ಕಳಿಸಿ. ಅವರು ನನ್ನ ಕಾರನ್ನೂ ತೆಗೆದುಕೊಂಡು ಹೋಗಲಿ."

ಅವನು ಅವಳ ಕಡೆಗೆ ವಿಭ್ರಾಂತಿಯಿಂದ ನೋಡಿದ. ನಂತರ ಏನೂ ಮಾತಾಡದೆ ಅವಳಿಗೆ ಕ್ಯಾಬಿನ್ ಬೀಗದ ಕೈ ಕೊಟ್ಟು ಕೈ ಕುಲುಕಿದ. ಅವನು ತನ್ನ ಕಾರಿನಲ್ಲಿ ಕುಳಿತು ಹೊರಟ. ಅವಳು ಕೊನೆಗೂ ತನಗೆ ದಕ್ಕಿದ ಏಕಾಕಿತನವನ್ನು ಆಸ್ವಾದಿಸುವಂತೆ ದೀರ್ಘ ಶ್ವಾಸ ಎಳೆದುಕೊಂಡು ಸುತ್ತಲೂ ನೋಡಿದಳು. ಸುತ್ತಲೂ ಕಾಣಿಸಿದ ದಟ್ಟ ಅರಣ್ಯವನ್ನು ಅವಳು ಕಣ್ಣುತುಂಬಿಕೊಂಡಳು. ಎಲ್ಲ ಕಡೆ ಮೌನ ಆವರಿಸಿತ್ತು. ನಡುನಡುವೆ ಎಲ್ಲೋ ಹಕ್ಕಿಗಳ ಕೂಗು ಕೇಳಿಸುತ್ತಿತ್ತು.

ಅವಳು ಕೂಡಲೇ ವ್ಯಾಗನ್ ಕಡೆ ಹೋಗಿ ಅಲ್ಲಿದ್ದ ಸಾಮಾನುಗಳನ್ನು ಒಳಗೆ ಸಾಗಿಸಲು ಪೆಟ್ಟಿಗೆಗಳನ್ನು ಕೆಳಕ್ಕೆ ಇಳಿಸಿದಳು.

ಅವಳು ಕ್ಯಾಬಿನ್ ಬಾಗಿಲು ತೆಗೆದು ಒಳಗೆ ಇಣುಕಿದಾಗ ಒಳಗಿನ ದೃಶ್ಯ ಅವಳನ್ನು ಕಂಗೆಡಿಸಿತು. ಎಲ್ಲವೂ ಅಸ್ತವ್ಯಸ್ತ. ಎಲ್ಲಾ ಕಡೆ ಧೂಳು. ಕಿಟಕಿಯ ಗಾಜು ಒಡೆದುಹೋಗಿತ್ತು. ಅಡುಗೆ ಮನೆಯಲ್ಲಿ ತೀರಾ ಹಳೆಯ ಆಹಾರದ ಟಿನ್ ಕಾಣಿಸಿದವು. ಫ್ರಿಜ್ ಮುಂತಾದ ಯಾವ ಯಂತ್ರಗಳೂ ಅಲ್ಲಿ ಇರಲಿಲ್ಲ. ಅಲ್ಲಿ ವಿದ್ಯುತ್ ಇರಲಿ ನೀರಿನ ಕೊಳಾಯಿ ಕೂಡಾ ಇರಲಿಲ್ಲ.

ಅವಳು ಕ್ಯಾಬಿನ್ ಹೊರಗೆ ಬಂದು ಶೌಚಾಲಯವಾಗಿದ್ದ ಇನ್ನೊಂದು ಮರದ ಗೂಡಿನ ಬಾಗಿಲನ್ನು ಮೆಲ್ಲನೆ ಸರಿಸಿದಳು. ನೊಣಗಳು ಹಾರಾಡುತ್ತಿದ್ದವು.

ಅವಳು ವ್ಯಾಗನ್ನಿನಿಂದ ಕಸಬರಿಗೆಯನ್ನು ತೆಗೆದು ಮನೆಯನ್ನು ಆದಷ್ಟೂ ಒಂದು ಸ್ಥಿತಿಗೆ ತರಲು ಹೆಣಗಿದಳು. ಹಳೆಯ ಹರಕು ಮುರುಕು ಸಾಮಾನುಗಳನ್ನು ಹೊರಗಿದ್ದ ದೊಡ್ಡ ಕಬ್ಬಿಣದ ಕಸದ ಬುಟ್ಟಿಗೆ ಎಸೆದು ಬೆಂಕಿ ಹಚ್ಚಿದಳು.

ಕಿಟಕಿಯ ಸುತ್ತ ಒಂದಿಷ್ಟು ಬಟ್ಟೆಯನ್ನು ಸೆಲ್ಲೋ ಟೇಪ್ ಹಾಕಿ ಭದ್ರಗೊಳಿಸಿದಳು.

ಪೆಟ್ಟಿಗೆಗಳನ್ನು ಒಂದೊಂದಾಗಿ ಇಳಿಸಿ ಮನೆಯ ಒಳಕ್ಕೆ ಕೊಂಡೊಯ್ದು ಇಟ್ಟಳು. ಒಂದು ಕಾರ್ಡ್ ಬೋರ್ಡ್ ಬಾಕ್ಸ್ ಕೈಗೆತ್ತಿಕೊಂಡಾಗ ಒಮ್ಮೆಲೇ ನೆನಪುಗಳು ನುಗ್ಗಿ ಅವಳ ಮುಖದಲ್ಲಿ ನೋವು ಕಾಣಿಸಿತು. ಅವಳು ಆ ಡಬ್ಬವನ್ನು ಕೈಗೆ ಸಿಕ್ಕದ ಹಾಗೆ ಅಟ್ಟದ ಮೇಲೆ ಇಟ್ಟು ಬಂದಳು.

ನೀರು ತರಲು ಎರಡು ಪ್ಲಾಸ್ಟಿಕ್ ಕ್ಯಾನ್ ಹಿಡಿದು ಹತ್ತಿರದಲ್ಲೇ ಇದ್ದ ನದಿಯನ್ನು ಹುಡುಕಿಕೊಂಡು ಹೋದಳು. ಕನ್ನಡಿಯಂತೆ ಹೊಳೆಯುತ್ತಿದ್ದ ನೀರನ್ನು ಕ್ಯಾನಿನಲ್ಲಿ ತುಂಬಿಕೊಳ್ಳಲು ಬಗ್ಗಿದಾಗ ಒಂದು ಕ್ಯಾನ್ ನದಿಯ ಸೆಳವಿಗೆ ಕೊಚ್ಚಿಕೊಂಡು ಹೋಯಿತು. ಅವಳು ನೀರಿಗೆ ಧುಮುಕಿ ಅದನ್ನು ಹೇಗೋ ಹಿಡಿದು ವಾಪಸು ತಂದಳು. ನೀರು ತುಂಬಿಕೊಂಡು ಮತ್ತೆ ಕ್ಯಾಬಿನ್ನಿಗೆ ಮರಳುವುದು ಒಂದು ಸಾಹಸವೇ ಎಂದು ಅವಳಿಗೆ ಅರಿವಾಯಿತು. ಆದರೂ ಧೃತಿಗೆಡದೆ ಮನೆಯನ್ನು ಒರೆಸಿ ಸ್ವಚ್ಛಗೊಳಿಸಿದಳು. ಆಗಲೇ ಕತ್ತಲಾಗುತ್ತಿತ್ತು. ಅವಳು ಕ್ಯಾಂಡಲ್ ಹಚ್ಚಿದಳು. ಟಿನ್ ಆಹಾರವನ್ನು ಬಿಸಿ ಮಾಡದೇ ಹಾಗೇ ತಿಂದಳು. ಆಗಲೇ ಕತ್ತಲು ಆವರಿಸಿತ್ತು. ಸ್ಲೀಪಿಂಗ್ ಬ್ಯಾಗ್ ಬಿಚ್ಚಿ ಅದರಲ್ಲಿ ಸೇರಿಕೊಂಡಳು. ಚಳಿಗಾಲಕ್ಕೆ ಇನ್ನೂ ಒಂದು ತಿಂಗಳು. ಆದರೂ ಕ್ಯಾಬಿನ್ ಒಳಗೆ ಅಸಹನೀಯ ಚಳಿ. ಜೊತೆಗೆ ಕಗ್ಗತ್ತಲು. ಉಣ್ಣೆಯ ಬಟ್ಟೆಗಳನ್ನು ಹೇರಿಕೊಂಡು ಮಲಗಿದರೂ ಕೊರೆಯುವ ಚಳಿ. ಮಧ್ಯರಾತ್ರಿ ಯಾವುದೋ ಪ್ರಾಣಿ ಕ್ಯಾಬಿನ್ ಗೋಡೆಯನ್ನು ಕೆರೆಯಿತ್ತಿದ್ದಂತೆ ಭಾಸವಾಯಿತು. ಎಲ್ಲಿಂದಲೋ ಸೀಳುನಾಯಿಗಳು ಊಳಿಟ್ಟದ್ದು ಕೇಳಿತು. ಅವಳು ಭದ್ರವಾಗಿ ಕಣ್ಣು ಮುಚ್ಚಿಕೊಂಡು ನಿದ್ದೆಮಾಡಲು ಯತ್ನಿಸಿದಳು.

ಭೂಮಿ - ಭಾಗ ೩

ಅವಳಿಗೆ ಎಚ್ಚರವಾದಾಗ ಆಗಲೇ ಬೆಳಕು ಕಿಟಕಿಯ ಮೂಲಕ ಒಳಗೆ ಹರಿದು ಬಂದಿತ್ತು. ಅವಳು ಮೇಲೆದ್ದು ಕುಳಿತು ಸುತ್ತಲೂ ನೋಡಿದಳು. ತಾನು ಇರುವುದು ವಯೋಮಿಂಗ್ ರಾಜ್ಯದಲ್ಲಿ, ಬೆಟ್ಟದ ಮೇಲಿನ ಒಂದು ಪುಟ್ಟ ಮನೆಯಲ್ಲಿ ಎಂಬ ಅರಿವು ಅವಳಿಗೆ ಆಯಿತು. ಇದು ಅವಳು ಬಹಳಷ್ಟು ಯೋಚಿಸಿ ಕೈಗೊಂಡ ನಿರ್ಧಾರ. ಒಮ್ಮೆಲೇ ಅವಳಿಗೆ ಅಕ್ಕ ಎಮ್ಮಾ ನೆನಪಾದಳು. ಎಮ್ಮಾ ಅದೆಷ್ಟು ಚಿಂತೆಗೆ ಈಡಾಗಿದ್ದದ್ದಾಳೋ ಎಂದು ಒಂದು ಕ್ಷಣ ಅವಳು ವಿಹ್ವಲಗೊಂಡಳು. ತನ್ನ ನಿರ್ಧಾರವನ್ನು ಅಕ್ಕನಿಗೆ ತಿಳಿಸಿದ್ದನ್ನು ನೆನೆದು ತನಗೆ ತಾನೇ ಸಮಾಧಾನ ತಂದುಕೊಡಳು. ಸುತ್ತಲೂ ನೋಡಿದಾಗ ಮಾಡಲು ಬೇಕಾದಷ್ಟು ಕೆಲಸವಿದೆ ಎಂಬ ಅರಿವಾಗಿ ಮೇಳೆದ್ದಳು.

ಸ್ಟವ್ ಹಚ್ಚಬೇಕೆಂದರೆ ಇಲ್ಲಿ ಗ್ಯಾಸ್ ಒಲೆ ಇಲ್ಲ. ವಿದ್ಯುತ್ ಇಲ್ಲ. ಕಟ್ಟಿಗೆ ಒಡೆದುತಂದು ಒಲೆ ಹಚ್ಚಬೇಕು. ಅವಳು ಬಾಗಿಲು ತೆರೆದು ಹೊರಗೆ ಬಂದಳು. ಗಾಳಿಯ ಶುದ್ಧತೆ ಅವಳಿಗೆ ಆಪ್ಯಾಯವೆನ್ನಿಸಿತು. ಸುತ್ತಲೂ ಕಂಡ ರಮಣೀಯ ದೃಶ್ಯ ಅವಳನ್ನು ಮಂತ್ರಮೂಢಗೊಳಿಸಿತು. ಹಕ್ಕಿಗಳ ಕೂಗಿನ ಹೊರತು ಎಲ್ಲವೂ ಮೌನವಾಗಿತ್ತು. ಅವಳು ಟೂತ್ ಬ್ರಷ್ ಮತ್ತು ಟೂತ್ ಪೇಸ್ಟ್ ಹುಡುಕಿ ಹಲ್ಲುಜ್ಜಿದಳು. ನೀರು ಮಂಜಿನಂತೆ ತಣ್ಣಗಿತ್ತು. ಸ್ನಾನ ಮಾಡಲು ನೀರು ಕಾಯಿಸಬೇಕು. ಅವಳು ಮರಗಳಿಂದ ಕೆಳಗೆ ಬಿದ್ದ ಸಣ್ಣಪುಟ್ಟ ರೆಂಬೆಗಳನ್ನು ಆಯ್ದು ತಂದಳು. ಕಷ್ಟಪಟ್ಟು ಒಲೆಹಚ್ಚಿ ಕೆಟಲಿನಲ್ಲಿ ನೀರು ತುಂಬಿ ಕಾಯಲು ಇಟ್ಟಳು. ಕ್ಯಾಬಿನ್ನಿನಲ್ಲಿದ್ದ ಬೆಂಕಿಯ ಗೂಡನ್ನು ಪುನರುಜ್ಜೀವನಗೊಳಿಸಲು ಕಟ್ಟಿಗೆ ಬೇಕು. ಕಟ್ಟಿಗೆ ಒಡೆಯಲು ಸ್ಥಾಪಿಸಲಾಗಿದ್ದ ಮರದ ದಿಮ್ಮಿಯ ಕಡೆಗೆ ಅವಳು ನೋಡಿದಳು. ತಾನು ತಂದ ಮಚ್ಚನ್ನು ಹೊತ್ತುತಂದಳು. ಒಡೆಯಲು ಮರದ ಕಟ್ಟಿಗೆ ಹುಡುಕುವುದು ಏನೂ ಕಷ್ಟವಾಗಲಿಲ್ಲ. ಆದರೆ ಕಟ್ಟಿಗೆ ಒಡೆಯುವುದು ಎಷ್ಟು ಪ್ರಯಾಸದ ಕೆಲಸ ಎಂದು ಅವಳಿಗೆ ಅರಿವಾಯಿತು. ಎಷ್ಟೇ ಗುರಿಯಿಟ್ಟು ಏಟು ಹಾಕಿದರೂ ಮಚ್ಚು ಹೋಗಿ ಕೆಳಗಿನ ದಿಮ್ಮಿಗೆ ಕಚ್ಚಿಕೊಳ್ಳುತ್ತಿತ್ತು. ಅದನ್ನು ಬಿಡಿಸುವುದು ಒಂದು ಪ್ರಯಾಸ. ಮತ್ತೆ ಪ್ರಯತ್ನ. ಮತ್ತೆ ಸೋಲು. ಕೊನೆಗೊಮ್ಮೆ ಹೇಗೋ ಏಟು ಕಟ್ಟಿಗೆಗೆ ಬಿದ್ದರೂ ಅದು ಎರಡು ಪಾಳಾಗಲಿಲ್ಲ. ಮಚ್ಚು ಕಟ್ಟಿಗೆಯಲ್ಲಿ ಸಿಕ್ಕಿಹಾಕಿಕೊಂಡಿತು. ಪ್ರಯಾಸದಿಂದ ಬಿಡಿಸಿ ತನ್ನ ಪ್ರಯತ್ನ ಮುಂದುವರೆಸಿದಳು. ಕೈ ಉರಿಯುತ್ತಿತ್ತು. ಅವಳು ಅಂಗೈಗಳಲ್ಲಿ ಬೊಬ್ಬೆ ಬಂದಿರುವುದನ್ನು ನೋಡಿಕೊಂಡಳು. ತಾನು ಕಡಿದ ಸಣ್ಣಪುಟ್ಟ ಕಟ್ಟಿಗೆ ಸೀಳುಗಳನ್ನೇ ಬಾಚಿಕೊಂಡು ಒಳಗೆ ಬಂದಳು.

ಔಷಧದ ಪೆಟ್ಟಿಗೆಯಿಂದ ಮುಲಾಮು ಹುಡುಕಿ ಅಂಗೈಗಳಿಗೆ ಹಚ್ಚಿಕೊಂಡು ಮೇಲೆ ಬ್ಯಾಂಡ್ ಏಡ್ ಹಾಕಿಕೊಂಡಳು. ಒಲೆಯ ಮೇಲಿದ್ದ ನೀರು ಮರಳುವ ಮುನ್ನವೇ ಬೆಂಕಿ ಆರಿಗೋಗಿತ್ತು. ಬೆಚ್ಚಗಿನ ನೀರಿನಲ್ಲೇ ಕಾಫಿ ತಯಾರಿಸಿ ಒಂದು ಟಿನ್ ಹುಡುಕಿ ಕೈಯಲ್ಲಿಟ್ಟುಕೊಂಡು ಕ್ಯಾಬಿನ್ ಮುಂಭಾಗದಲ್ಲಿ ಉಸ್ ಎಂದು ಕೂತಳು. ಅಲ್ಲೊಂದು ಮರದ ಕುರ್ಚಿ ಇದ್ದರೂ ಅವಳು ನೆಲದ ಮೇಲೇ ಕೂತಳು. ಕಾಫಿ ಹೀರುತ್ತಾ ಹೊರಗಿನ ದೃಶ್ಯವನ್ನು ನೋಡುತ್ತಾ ಕಣ್ಣು ತುಂಬಿಕೊಂಡಳು. ಟಿನ್ ತೆರೆದು ಅದರಲ್ಲಿದ್ದ ಸಕ್ಕರೆ ನೀರನ್ನು ಹೊರಚೆಲ್ಲಿ ಹಣ್ಣನ್ನು ತಿಂದಳು.

ಕಾರ್ ಸದ್ದಾಯಿತು. ಯು-ಹಾಲ್ ವ್ಯಾಗನ್ ಕೊಂಡೊಯ್ಯಲು ಬಂದವರು ಅವಳ ಕಾರನ್ನು ಕೂಡಾ ಕೊಂಡೊಯ್ದರು. ಕಾರ್ ಇಲ್ಲದೆ ಬದುಕುವ ತನ್ನ ಗಟ್ಟಿ ನಿರ್ಧಾರವನ್ನು ಮತ್ತೊಮ್ಮೆ ತನಗೆ ತಾನೇ ಹೇಳಿಕೊಂಡಳು.

ತಾನು ತಂದಿರುವ ಟಿನ್ ಆಹಾರ ಬಹಳ ದಿವಸ ಬಾರದು. ತಾನು ಇಲ್ಲೇ ನೆಲಸಲು ಬಂದವಳು. ಬೇಕೆಂದಾಗ ಕಾರಿನಲ್ಲಿ ಕೂತು ಅಂಗಡಿಗೆ ಹೋಗಿ ಬೇಕಾದದ್ದನ್ನು ಖರೀದಿಸಿ ತರುವ ಖಯಾಲಿಯನ್ನು ಪ್ರಯತ್ನಪೂರ್ವಕವಾಗಿ ಮರೆತು ತನ್ನ ಆಹಾರವನ್ನು ತಾನೇ ಸಂಪಾದಿಸಿಕೊಳ್ಳುವ ಹೊಸ ಜೀವನಶೈಲಿಗೆ ರೂಢಿಗೊಳ್ಳಬೇಕು. ನದಿಯಲ್ಲಿ ಮೀನುಗಳು ಬೇಕಾದಷ್ಟಿವೆ. ಕಾಡಿನಲ್ಲಿ ಜಿಂಕೆಗಳು, ಮೊಲಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಮೀನು ಹಿಡಿಯಲು ತಾನು ತಂದಿದ್ದ ಸಾಧನವನ್ನು ಹೊತ್ತು ಅವಳು ನದಿಯ ಕಡೆಗೆ ಸಾಗಿದಳು.

ನದಿಯ ನೀರು ಫಳಫಳ ಹೊಳೆಯುತ್ತಿತ್ತು. ಅದರ ಜುಳುಜುಳು ಸದ್ದು ಆಪ್ಯಾಯವೆನ್ನಿಸಿತು. ಅವಳು ಹುಡುಕಾಡಿ ಒಂದು ಹುಳುವನ್ನು ತುದಿಗೆ ಕಟ್ಟಿ ನೀರಿನೊಳಗೆ ದಾರವನ್ನು ಇಳಿಸಿ ಒಂದು ಬಂಡೆಯ ಮೇಲೆ ಕೂತು ಕಾದಳು. ಗಾಳಕ್ಕೆ ಮೀನು ಸಿಕ್ಕದಿದ್ದರೂ ಆಲೋಚನೆಗಳು ಬಂದು ಮುತ್ತಿಕೊಂಡವು. ಹಿಂದೆ ತಾನು ಗಂಡ ಮತ್ತು ಮಗನೊಂದಿಗೆ ಕ್ಯಾಂಪಿಂಗ್ ಹೋದ ನೆನಪುಗಳು ನುಗ್ಗಿಬಂದವು. ಅವಳು ಬಹಳ ಕಷ್ಟದಿಂದ ನೆನಪುಗಳನ್ನು ದೂರ ಸರಿಸಿದಳು. ತನ್ನ ನಿರ್ಧಾರವನ್ನು ಅವಳು ಮತ್ತೊಮ್ಮೆ ಗಟ್ಟಿ ಮಾಡಿಕೊಂಡಳು. ತಾನಿಲ್ಲಿ ಬಂದಿರುವುದು ಒಂದೆರಡು ದಿನಗಳ ಕ್ಯಾಂಪಿಂಗ್ ವಿಹಾರಕ್ಕಾಗಿ ಅಲ್ಲ. ಇನ್ನುಮೇಲೆ ಇದೇ ನನ್ನ ಜೀವನ. ಎಲ್ಲರಿಂದ ದೂರವಾಗಿ ತನ್ನೊಂದಿಗೆ ಮಾತ್ರ ತನ್ನ ಬದುಕು. ತನ್ನ ನೋವುಗಳು ತನ್ನದು ಮಾತ್ರ. ಅದು ಬೇರೆ ಯಾರದ್ದೂ ಅಲ್ಲ. ಅಕ್ಕ ಎಮ್ಮಾಳ ಕಳಕಳಿ ಅವಳಿಗೆ ನೆನಪಾಯಿತು. "ದಯವಿಟ್ಟು ನೀನು ದುಡುಕಿ ನಿನಗೆ ನೀನೇ ಕುತ್ತು ತಂದುಕೊಳ್ಳಬೇಡ! ನನಗಾಗಿ ಇಷ್ಟು ಮಾಡು!" ಎಂದು ಅವಳು ಗೋಗರೆದಿದ್ದು ನೆನಪಾಯಿತು.

ಕೊನೆಗೂ ಒಂದು ಮೀನು ಗಾಳಕ್ಕೆ ಸಿಕ್ಕಿತು. ಅವಳು ವಿಜಯದ ಸಂಭ್ರಮದಲ್ಲಿ ದಾರವನ್ನು ಮೇಲಕ್ಕೆ ಎಳೆದಳು. ಪುಟ್ಟ ಮೀನು. ಆದರೂ ಬರಿಗೈಯಲ್ಲಿ ಹೋಗುವುದಕ್ಕಿಂತ ಮೇಲು!

ಕ್ಯಾಬಿನ್ನಿಗೆ ಮರಳಿದಳು. ಅಲ್ಲಿ ಮಾಡಬೇಕಾದ ಕೆಲಸಗಳು ಬೇಕಾದಷ್ಟಿವೆ. ಚಳಿಗಾಲ ಬರುವ ಮುನ್ನವೇ ಒಂದಷ್ಟು ರಿಪೇರಿಗಳು ಮಾಡುವ ಅಗತ್ಯವಿದೆ. ಬೆಂಕಿಗೂಡನ್ನು ಮತ್ತೊಮ್ಮೆ ಪುನರುಜ್ಜೀವನಗೊಳಿಸುವ ಕೆಲಸವಿದೆ. ತಾನು ತಂದ ಪುಸ್ತಕಗಳನ್ನು ಜೋಡಿಸುವ ಕೆಲಸ ಇದೆ. ಮನೆಯ ಸುತ್ತಲೂ ಬೆಳೆದ ಕಾಡು ಗಿಡಗಳನ್ನು ಕಿತ್ತು ಒಂದು ಕೈದೋಟ ಮಾಡುವ ಕೆಲಸವಿದೆ.

ತಾನು ತಂದ ಮೀನನ್ನು ಬೇಯಿಸಿ ತಿನ್ನುವಷ್ಟರಲ್ಲೇ ಸಾಕಷ್ಟು ಸಮಯ ಹೋಯಿತು. ಮನೆಯನ್ನು ಮತ್ತಷ್ಟು ಓರಣಗೊಳಿಸುವಷ್ಟರಲ್ಲಿ ಆಗಲೇ ಬೆಳಕು ಕಂತತೊಡಗಿತು. ಅಂದೂ ಅವಳಿಗೆ ಬೆಂಕಿ ಹೊತ್ತಿಸಿ ಮನೆಯನ್ನು ಬೆಚ್ಚಗೆ ಇಡುವುದು ಸಾಧಿಸಲಿಲ್ಲ. ಸ್ಲೀಪಿಂಗ್ ಬ್ಯಾಗಿನಲ್ಲಿ ಸೇರಿಕೊಂಡಾಗ ಮೈಕೈ ನೋಯುತ್ತಿದೆ ಎಂದು ಅನುಭವವಾಯಿತು. ತನ್ನ ಶರೀರ ಈ ಶ್ರಮ ಜೀವನ ಬೇಡವೆಂದು ಕೊಡುವ ಸಬೂಬು! ಇದಕ್ಕೆ ಒಗ್ಗಿಕೋ ಎಂದು ಅವಳು ತನಗೆ ತಾನೇ ಹೇಳಿಕೊಂಡಳು. ಕತ್ತಲಿನಲ್ಲಿ ಸೀಳುನಾಯಿಗಳು ಊಳಿಟ್ಟ ಸದ್ದುಗಳು, ತೋಳಗಳ ಊಳಿಡುವ ಸದ್ದುಗಳು ಕೇಳಿಸಿದವು. ಆದರೆ ಆಯಾಸದಿಂದ ಅವಳಿಗೆ ನಿದ್ದೆ ಹತ್ತಿತು.

ಭೂಮಿ - ಭಾಗ ೪

ಅವಳು ಈಗ ನಿತ್ಯಚರ್ಯೆಗೆ ಹೊಂದಿಕೊಳ್ಳುತ್ತಿದ್ದಾಳೆ. ಮೀನು ಹಿಡಿಯುವ ಕೆಲಸದಲ್ಲಿ ಒಂದಿಷ್ಟು ಪ್ರಗತಿ ಸಾಧಿಸಿದ್ದಾಳೆ. ನೀರು ಹೊತ್ತು ತರುವುದು ರೂಢಿಯಾಗಿದೆ. ಆದರೆ ಸೌದೆ ಒಡೆಯುವ ಕೆಲಸ ಮಾತ್ರ ಇನ್ನೂ ಸಿದ್ಧಿಸಿಲ್ಲ. ಮನೆಯ ಸಣ್ಣ ಪುಟ್ಟ ರಿಪೇರಿ ಮಾಡಿಕೊಳ್ಳಲು ಅವಳಿಗೆ ಸಾಧ್ಯವಾಗಿದೆ. ಆದರೆ ಕಿಟಕಿಯ ಒಡೆದ ಗಾಜಿನ ಬಗ್ಗೆ ಹೆಚ್ಚೇನೂ ಮಾಡಲು ಸಾಧ್ಯವಾಗಿಲ್ಲ. ಅದರಿಂದ ತಂಪಾದ ಗಾಳಿ ಒಳಗೆ ನುಗ್ಗುತ್ತದೆ.

ಅವಳು ಒಂದು ಕೈದೋಟ ಮಾಡಲು ಮನೆಯ ಮುಂದಿನ ಜಾಗದಲ್ಲಿ ನೆಲ ಅಗೆದು ಸಮ ಮಾಡಿ ಅಲ್ಲಿ ಕೆಂಪು ಮೂಲಂಗಿ ಇತ್ಯಾದಿ ಕೆಲವು ತರಕಾರಿ ಬೀಜಗಳನ್ನು ಬಿತ್ತನೆ ಮಾಡಿದ್ದಾಳೆ. ಪ್ರತಿದಿನ ನೀರು ಹನಿಸಿ ಮೊಳಕೆ ಬಂದಿದೆಯೇ ಎಂದು ನೋಡುತ್ತಾಳೆ. ಅವಳ ನಿರೀಕ್ಷೆ ಸಫಲವಾಗಿದೆ. ಮೊಳಕೆ ಒಡೆದು ಗಿಡದಲ್ಲಿ ಎಲೆಗಳು ಚಿಗುರುತ್ತಿವೆ.

ಮನೆಯಲ್ಲಿ ಒಮ್ಮೊಮ್ಮೆ ಪುಸ್ತಕಗಳನ್ನು ಓದುತ್ತಾ ಕೂಡುತ್ತಾಳೆ. ಎಲ್ಲವೂ ಸ್ವಯಂಸಹಾಯ ಕುರಿತಾದ ಪುಸ್ತಕಗಳು. ಕೈದೋಟ ಮಾಡುವ ಬಗ್ಗೆ, ಮೀನು ಹಿಡಿಯುವ ಬಗ್ಗೆ, ಜಿಂಕೆಗಳನ್ನು ಬೇಟೆ ಆಡುವ ಬಗ್ಗೆ. ಅವಳು ಓದುತ್ತಾ ಟಿಪ್ಪಣಿ ಮಾಡಿಕೊಳ್ಳುತ್ತಾಳೆ. ಒಮ್ಮೊಮ್ಮೆ ಓದುತ್ತಾ ಕಣ್ಣಿಗೆ ನಿದ್ದೆ ಹತ್ತುವುದೂ ಉಂಟು.

ಓದುತ್ತಾ ಕುಳಿತಾಗ ಯಾರೋ ಮನೆಯಲ್ಲಿ ಓಡಿದ ಹಾಗೆ ಭಾಸವಾಯಿತು. ಯಾರೋ ಹಿಂದಿನಿಂದ ಬಂದು ಅವಳನ್ನು ತಬ್ಬಿಕೊಂಡರು. ಅವಳು ಹಿಂತಿರುಗಿ ನೋಡಿದರೆ ಅಲ್ಲಿ ಮೂರು ವರ್ಷದ ಡ್ರೂ. ಅವನ ಹಿಂದೆ ಅವನ ಅಪ್ಪ ನಿಂತಿದ್ದ. ನಲವತ್ತರ ಸ್ಫುರದ್ರೂಪಿ. ಅವಳು ಅವನನ್ನು ತಬ್ಬಿಕೊಂಡಳು.

ಅವಳಿಗೆ ಎಚ್ಚರವಾಯಿತು. ಕಣ್ಣುಗಳಿಂದ ನೀರು ಹರಿಯಿತು. ಅವಳು ಮೌನವಾಗಿ ಮೇಲೆದ್ದು ತನ್ನ ಕೆಲಸಗಳಲ್ಲಿ ತೊಡಗಿಕೊಂಡಳು. ಕೆಂಪು ಮೂಲಂಗಿ ಗಿಡ ಈಗ ದೊಡ್ಡದಾಗಿದೆ. ಮೂಲಂಗಿಗಳು ಈಗ ಸಿದ್ಧವಾಗಿರಬಹುದು ಎಂದು ಅವಳು ಹೊರಗೆ ಬಂದು ನೋಡಿದಾಗ ಅವಳಿಗೆ ಆಘಾತ ಕಾದಿದೆ. ಯಾವುದೋ ಪ್ರಾಣಿ, ಬಹುಶಃ ಜಿಂಕೆ, ಮೂಲಂಗಿ ಗಿಡಗಳನ್ನು ತಿಂದು ಧ್ವಂಸ ಮಾಡಿಹೋಗಿದೆ.

ಅಡುಗೆಮನೆಯ ಕಟ್ಟೆಯ ಮೇಲೆ ಜೋಡಿಸಿಟ್ಟ ಆಹಾರದ ಟಿನ್ನುಗಳು ಕರಗುತ್ತಿರುವುದು ಅವಳ ಗಮನಕ್ಕೆ ಬಂದಿದೆ. ಅವಳು ತನ್ನ ಗನ್ ಮೇಲೆತ್ತಿಕೊಂಡು ಬೆಚ್ಚಗಿನ ಉಣ್ಣೆಯ ಬಟ್ಟೆಗಳನ್ನು ಹಾಕಿಕೊಂಡು ತನ್ನ ಮೊದಲ ಬೇಟೆಗಾಗಿ ಹೊರಡುತ್ತಾಳೆ. ನದಿಯ ಹತ್ತಿರ ಅವಳು ನೀರಿಗೆ ಹೋದಾಗ ಅಲ್ಲಿ ನೀರು ಕುಡಿಯಲು ಬರುವ ಹರಿಣಗಳನ್ನು ಅವಳು ಹಿಂದೆ ನೀಡಿದ್ದಾಳೆ. ಅವಳು ಒಂದು ಬಂಡೆಯ ಮರೆಯಲ್ಲಿ ಕಾಯುತ್ತಾ ನಿಲ್ಲುತ್ತಾಳೆ. ಕೊನೆಗೂ ಹರಿಣಗಳ ಒಂದು ಜೋಡಿ ಕಾಣಿಸಿಕೊಳ್ಳುತ್ತದೆ. ಅವಳು ಬಂದೂಕನ್ನು ಗುರಿ ಮಾಡಿಕೊಂಡು ಕಾಯುತ್ತಾಳೆ. ಎಷ್ಟೇ ಪ್ರಯತ್ನಿಸಿದರೂ ಅವಳಿಗೆ ಗುಂಡು ಹಾರಿಸಲು ಆಗದೆ ಹತಾಶೆಯಿಂದ ಮನೆಗೆ ಹಿಂತಿರುಗಿ ಬರುತ್ತಾಳೆ.

ಅವಳು ಕ್ಯಾಬಿನ್ ಪಕ್ಕದಲ್ಲಿರುವ ಶೌಚಾಲಯಕ್ಕೆ ಹೋಗುತ್ತಾಳೆ. ಕೆಲವೇ ನಿಮಿಷದಲ್ಲಿ ಯಾವುದೋ ಪ್ರಾಣಿ ಗುರುಗುಟ್ಟಿದ ಸದ್ದು ಕೇಳುತ್ತದೆ. ಅವಳು ಶೌಚಾಲಯದ ಗೋಡೆಯ ಸಂದುಗಳಿಂದ ನೋಡುತ್ತಾಳೆ. ಅಲ್ಲೊಂದು ಕಪ್ಪು ಕರಡಿ ಗುಟುರು ಹಾಕುತ್ತಾ ನಿಂತಿದೆ. ಅವಳ ರಕ್ತ ಹೆಪ್ಪುಗಟ್ಟುತ್ತದೆ. ಅವಳು ಸದ್ದು ಮಾಡದೆ ನಿಂತಲ್ಲೇ ನಿಲ್ಲುತ್ತಾಳೆ. ಕರಡಿ ತನ್ನ ಕ್ಯಾಬಿನ್ ಒಳಗೆ ಹೋಗುವುದನ್ನು ನೋಡಿ ಅವಳು ಹೌಹಾರುತ್ತಾಳೆ.

ಕ್ಯಾಬಿನ್ ಒಳಗಿನಿಂದ ಸಾಮಾನುಗಳನ್ನು ನೆಲಕ್ಕೆ ಬೀಳಿಸಿದ, ಕುಕ್ಕಿದ ಸದ್ದುಗಳು ಅವಳನ್ನು ತಲ್ಲಣಗೊಳಿಸುತ್ತದೆ. ಕೊನೆಗೂ ಕರಡಿ ಕ್ಯಾಬಿನ್ ಒಳಗಿನಿಂದ ಬಂದು ತನ್ನ ದಾರಿ ಹಿಡಿದು ಹೊರಡುತ್ತದೆ. ಅವಳು ಧೈರ್ಯ ತಂದುಕೊಂಡು ಕ್ಯಾಬಿನ್ ಒಳಗೆ ಹೋಗಿ ನೋಡುತ್ತಾಳೆ. ಅವಳ ಹೃದಯದ ಬಡಿತ ಒಂದು ಕ್ಷಣ ನಿಲ್ಲುತ್ತದೆ. ಅವಳ ಸಾಮಾನುಗಳನ್ನೆಲ್ಲ ಕರಡಿ ಕೆಳಗೆ ಬೀಳಿಸಿ ಚೆಲ್ಲಾಪಿಲ್ಲಿ ಮಾಡಿದೆ. ಅಡಿಗೆಮನೆಗೆ ನುಗ್ಗಿ ಅಲ್ಲಿದ್ದ ಟಿನ್ ಆಹಾರವನ್ನು ಎಷ್ಟು ಸಾಧ್ಯವೋ ಅಷ್ಟು ಕಬಳಿಸಿದೆ. ಎಲ್ಲ ಅಸ್ತವ್ಯಸ್ತವಾಗಿದೆ.

ಅವಳು ಕುಸಿದು ಕುಳಿತಳು. "ಇಲ್ಲ, ಇದು ನನ್ನಿಂದ ಆಗದು! ಇದು ನನ್ನಿಂದ ಆಗದು!" ಎಂದು ಜೋರಾಗಿ ಕಿರುಚಿ ಮುಖ ಮುಚ್ಚಿಕೊಂಡು ಗಟ್ಟಿಯಾಗಿ ಅಳುತ್ತಾಳೆ. ಕೊನೆಗೆ ಸಮಾಧಾನ ಮಾಡಿಕೊಂಡು ಮನೆಯನ್ನು ಮತ್ತೊಮ್ಮೆ ಓರಣಗೊಳಿಸುವ ಕೆಲಸಕ್ಕೆ ಸಿದ್ಧತೆ ನಡೆಸುತ್ತಾಳೆ. ಅವಳಿಗೆ ಹಸಿವಾಗುತ್ತದೆ. ಉಳಿದ ಟಿನ್ ಒಂದನ್ನು ತೆರೆದು ಒಳಗಿರುವ ಕೆಂಪು ಹುರುಳಿಕಾಳನ್ನು ಬಿಸಿ ಮಾಡಿಕೊಳ್ಳಲೂ ವ್ಯವಧಾನವಿಲ್ಲದೆ ಹಾಗೇ ಸ್ಪೂನಿನಿಂದ ತಿನ್ನುತ್ತಾಳೆ.

ಹೊರಗೆ ಮಂಜು ಬೀಳುತ್ತಿದೆ. ಚಳಿಗಾಲದ ಮೊದಲ ಮಂಜು. ಕತ್ತಲು ಕವಿಯುತ್ತದೆ. ಇತ್ತ ಹಿಮಪಾತ ಭೀಷಣ ಸ್ವರೂಪ ಪಡೆದಿದೆ. ಅವಳು ಒಂದರ ಮೇಲೆ ಇನ್ನೊಂದು ಉಣ್ಣೆಯ ಉಡುಪನ್ನು ಧರಿಸಿ ಚಳಿಯನ್ನು ಸಹಿಸಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಗೂಡಿನಲ್ಲಿ ಬೆಂಕಿ ಮಾಡಲು ಅವಳಿಗೆ ಇನ್ನೂ ಸಾಧ್ಯವಾಗಿಲ್ಲ.

ಹಿಮಪಾತ ಇನ್ನಷ್ಟು ಜೋರಾಗಿದೆ. ಬೀಸುವ ಗಾಳಿಯ ಸದ್ದು ಕೇಳಲು ಭೀಕರವಾಗಿದೆ. ಸಾಲದು ಎಂಬಂತೆ ಕ್ಯಾಬಿನ್ ಛಾವಣಿಯು ಗಡಗಡ ಸದ್ದು ಮಾಡುತ್ತಿದೆ. ಅವಳು ಭಯಭೀತಳಾಗಿದ್ದಾಳೆ. ಕೊನೆಗೆ ತಾಳಲಾರದೆ ಮೇಲೆದ್ದು ಸುತ್ತಿಗೆ ಮೊಳೆಗಳ ಪೆಟ್ಟಿಗೆ ಕೈಗೆತ್ತಿಕೊಂಡು ಕಾಲಿಗೆ ಚರ್ಮದ ಶೂ ಹಾಕಿಕೊಂಡು ಕ್ಯಾಬಿನ್ನಿನ ಬಾಗಿಲು ತೆರೆಯುತ್ತಾಳೆ. ಹಿಮಗಾಳಿ ರಭಸದಿಂದ ಬೀಸುತ್ತಿದೆ. ಅವಳು ತನ್ನ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಹಗ್ಗದ ತುದಿಯನ್ನು ಬಾಗಿಲಿಗೆ ಕಟ್ಟಿ ಹೊರಗೆ ಹೆಜ್ಜೆ ಇಡುತ್ತಾಳೆ.

ರಭಸದ ಗಾಳಿಗೆ ಅವಳ ದೇಹ ತೂರಾಡುತ್ತದೆ. ಅವಳಿಗೆ ಬವಳಿ ಬಂದಂತಾಗಿ ಹೇಗೋ ಕ್ಯಾಬಿನ್ ಒಳಗೆ ಬರುತ್ತಾಳೆ. ತಲೆ ಸುತ್ತಿಬಂದು ಅವಳು ನೆಲಕ್ಕೆ ಕುಸಿಯುತ್ತಾಳೆ.

ಭೂಮಿ - ಭಾಗ ೫

ಅದೆಷ್ಟು ಹೊತ್ತು ಅವಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳೋ!ಯಾರೋ ಬಾಗಿಲು ತೆಗೆದು ಒಳಗೆ ಬಂದದ್ದು ಅವಳಿಗೆ ಮಂಪರು ಸ್ಥಿತಿಯಲ್ಲೂ ಗೊತ್ತಾಯಿತು. ಒಬ್ಬರಲ್ಲ, ಇಬ್ಬರು. ಅವರು ತಮ್ಮಲ್ಲೇ ಏನೋ ಮಾತಾಡಿಕೊಳ್ಳುತ್ತಿದ್ದಾರೆ. ಅವಳು ಮತ್ತೆ ನಿದ್ದೆಗೆ ಜಾರಿದಳು.

ಬಾಗಿಲು ತೆರೆದು ಒಳಗೆ ಬಂದವನು ಕೆಳಗೆ ಬಿದ್ದವಳನ್ನು ನೋಡಿ ಹೌಹಾರಿದ. ಅವನ ಹಿಂದೆ ಒಬ್ಬ ಹೆಂಗಸು ಒಳಗೆ ಪ್ರವೇಶಿಸಿದಳು. ಇಬ್ಬರೂ ಪರಿಸ್ಥಿತಿಯನ್ನು ಕೂಡಲೇ ಅರ್ಥ ಮಾಡಿಕೊಂಡರು. ಕೂಡಲೇ ಕಾರ್ಯತತ್ಪರರಾದರು. ಬಂದ ಹೆಂಗಸು ಒಬ್ಬಳು ನರ್ಸ್. ಈಡಿಗೆ ಬೇಕಾದ ಎಲ್ಲ ಪ್ರಥಮ ಚಿಕಿತ್ಸೆಯನ್ನೂ ಅವಳು ಮಾಡಿದಳು.

ಈಗ ಹಿಮಪಾತ ನಿಂತಿತ್ತು. ಬೆಳಕಾಗಿತ್ತು.

ಗಂಡಸು ಹೊರಗಿನಿಂದ ಸೌದೆ ಕಡಿದು ತಂದು ಮನೆಯ ಬೆಂಕಿ ಗೂಡಿನಲ್ಲಿ ದೊಡ್ಡ ಉರಿ ಮಾಡಿದ. ಮನೆಯಿಂದ ಚಳಿ ಹಾರಿಹೋಯಿತು. ಬೆಟ್ಟ ಪ್ರದೇಶದಲ್ಲಿ ಓಡಾಡುವ ನರ್ಸ್ ಕಾರಿನಲ್ಲಿ ಪ್ರಥಮ ಚಿಕಿತ್ಸೆಯ ಪೆಟ್ಟಿಗೆಯನ್ನು ಇಟ್ಟುಕೊಂಡೇ ಓಡಾಡುತ್ತಾಳೆ. ಅವಳು ಕಾರಿನಿಂದ ಪೆಟ್ಟಿಗೆಯನ್ನು ತಂದು ಈಡಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಳು. ಈಡಿಗೆ ಅಪಾರ ಶಕ್ತಿಹೀನತೆ ಇತ್ತು. ಅದಕ್ಕೆ ಕಾರಣ ಅವಳಿಗೆ ಸರಿಯಾದ ಆಹಾರ ಇಲ್ಲದಿರುವುದು ಎಂದು ನರ್ಸ್ ಊಹಿಸಿದಳು. ಮನೆಯಲ್ಲಿ ಆಹಾರದ ಕುರುಹೇ ಕಾಣಲಿಲ್ಲ. ಹಿಮಪಾತವಾಗುವಷ್ಟು ಚಳಿ ಇರುವಲ್ಲಿ ಹೊಟ್ಟೆಗೆ ಆಹಾರ ಇಲ್ಲದಿರುವುದು ಸಮಸ್ಯೆಯನ್ನು ಉಲ್ಬಣಗೊಳಿಸಿತ್ತು.

ನರ್ಸ್ ಮತ್ತು ಗಂಡಸು ಇಬ್ಬರೂ ಸೇರಿ ಈಡಿಯನ್ನು ಬೆಂಕಿಯ ಹತ್ತಿರವೇ ಮಲಗಿಸಿದರು. ನರ್ಸ್ ತನ್ನ ಪೆಟ್ಟಿಗೆಯಿಂದ ಐವಿ ಮೂಲಕ ಈಡಿಗೆ ದ್ರಾವಣ ಹೋಗುವಂತೆ ವ್ಯವಸ್ಥೆ ಮಾಡಿದಳು. ಗಂಡಸು ಮುರಿದ ಕಿಟಕಿಯ ಗಾಜನ್ನು ಮುಚ್ಚುವಂತೆ ಕಾರ್ಡ್ ಬೋರ್ಡ್ ಅಂಟಿಸಿ ಭದ್ರಗೊಳಿಸಿದ.

ಸ್ವಲ್ಪ ಹೊತ್ತಿನ ನಂತರ ಈಡಿಗೆ ಅರ್ಧ ಎಚ್ಚರ ಸ್ಥಿತಿಯಲ್ಲಿದ್ದಾಗ ಅವರ ಮಾತು ಕೇಳಿಸಿತು.

"ಅವಳನ್ನು ನಾವು ಆಸ್ಪತ್ರೆಗೆ ಕರೆದುಕೊಂಡು ಹೋಗೋಣ."

ನಿತ್ರಾಣ ಸ್ಥಿತಿಯಲ್ಲಿದ್ದರೂ ಈಡಿ "ಬೇಡ, ನನಗೆ ಆಸ್ಪತೆಗೆ ಹೋಗುವುದು ಬೇಡ" ಎಂದಳು.

ಅವರು ಪರಸ್ಪರ ನೋಡಿಕೊಂಡರು.

"ನಾನು ಮಿಗುಯೆಲ್. ನಾನೊಬ್ಬ ಬೇಟೆಗಾರ," ಎಂದು ಗಂಡಸು ಪರಿಚಯ ಹೇಳಿಕೊಂಡ.

"ನಾನು ಅಲಾವಾ ಕ್ರೋ. ನಾನು ಕ್ವಿನ್ಸಿಯ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದೇನೆ. ನೀವು ಆಸ್ಪತ್ರೆಗೆ ದಾಖಲಾಗುವುದು ಒಳ್ಳೆಯದು. ಅಲ್ಲಿ ನಿಮಗೆ ಸರಿಯಾದ ಚಿಕಿತ್ಸೆ ಸಿಕ್ಕುತ್ತದೆ" ಎಂದು ಅಲಾವಾ ಹೇಳಿದಳು. ಆದರೆ ಈಡಿ ಮತ್ತೊಮ್ಮೆ ನಿರಾಕರಿಸಿದಳು.

ಮಿಗುವೆಲ್ ಹೊರಗಿನಿಂದ ಮೊಲವನ್ನು ಬೇಟೆ ಆಡಿ ತಂದು ಅದರ ಮಾಂಸದ ಸೂಪ್ ತಯಾರಿಸಿದ. ಅದನ್ನು ಅಲಾವಾ ಸ್ಪೂನಿನ ಮೂಲಕ ಈಡಿಗೆ ಕುಡಿಸಿದಳು.

"ನಾನು ಇವಳ ರಕ್ತದ ಸ್ಯಾಂಪಲ್ ತೆಗೆದು ಕೊಂಡಿದ್ದೇನೆ. ನಾನು ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಿಸುತ್ತೇನೆ" ಎಂದು ಅಲಾವಾ ತನ್ನ ನಿರ್ಧಾರ ಪ್ರಕಟಿಸಿದಳು.

"ನೀನು ಹೋಗು. ಇಲ್ಲಿ ಇವರನ್ನು ನೋಡಿಕೊಳ್ಳಲು ನಾನು ಇರುತ್ತೇನೆ."

"ಪರವಾಗಿಲ್ಲವಾ ಮಾವ?"

"ನೀನು ಯೋಚಿಸಬೇಡ, ಹೋಗು. ಟೆಸ್ಟ್ ಮಾಡಿಸಿ ಏನು ಚಿಕಿತ್ಸೆ ಕೊಡಬೇಕೋ ಪತ್ತೆಮಾಡಿ ತಿಳಿಸು."

"ಮಾವಾ, ನಿಮ್ಮ ಹೃದಯ ಚಿನ್ನದ್ದು" ಎಂದು ಅಲಾವಾ ಹೊರಟಳು.

ಈಡಿಗೆ ಈಗ ಸ್ವಲ್ಪ ಚೈತನ್ಯ ಮರಳಿತ್ತು. ಅವಳು ಮತ್ತೊಮ್ಮೆ ನಿದ್ದೆಗೆ ಜಾರಿದಳು.

 

ಭೂಮಿ - ಭಾಗ ೬

ಒಂದು ವಾರದ ಶುಶ್ರೂಷೆಯ ನಂತರ ಅವಳು ಈಗ ಎದ್ದು ಕುಳಿತುಕೊಳ್ಳುವಷ್ಟು ಚೇತರಿಸಿಕೊಂಡಿದ್ದಾಳೆ. ಮಿಗುಯೆಲ್ ಹಗಲೂ ಇರುಳೂ ಅವಳನ್ನು ನೋಡಿಕೊಂಡಿದ್ದಾನೆ. ಅವನು ಅವಳಿಗೆ ಆರೋಗ್ಯಕರ ಗಂಜಿ ಮಾಡಿ ತಂದುಕೊಡುತ್ತಾನೆ. ಈಗ ಅವಳೇ ತಿನ್ನಬಲ್ಲಷ್ಟು ಅವಳ ಸ್ಥಿತಿ ಸುಧಾರಿಸಿದೆ.

"ನನ್ನ ಹೆಸರು ಈಡಿ" ಎಂದು ಅವಳು ಗಂಜಿ ಕುಡಿಯುವಾಗ ಅವನಿಗೆ ಹೇಳಿದಳು.

"ನನ್ನ ಹೆಸರು ಮಿಗುಯೆಲ್. ನಾನು ಬೇಟೆಗಾರ."

"ನನ್ನ ಪ್ರಾಣ ಉಳಿಸಿದ್ದಕ್ಕೆ ಧನ್ಯವಾದ."

ಅವನು ಕ್ಷೀಣವಾಗಿ ನಗುತ್ತಾನೆ. ಹೆಚ್ಚು ಮಾತಾಡುವುದು ಅವನ ಸ್ವಭಾವವಲ್ಲ. ಅವಳಿಗೂ ಅದೇ ಬೇಕಾಗಿರುವುದು. ಆದರೂ ಕುತೂಹಲ ತಡೆಯಲಾರದೆ ಅವಳು ಕೇಳುತ್ತಾಳೆ.

"ನೀವು ಇಲ್ಲಿಗೆ ಬಂದಿದ್ದು ಹೇಗೆ?"

"ನಾನು ಕಾರಿನಲ್ಲಿ ಕೆಲಸಕ್ಕೆ ಹೊರಟಿದ್ದೆ. ಹೋಗುವಾಗ ನಿಮ್ಮ ಮನೆಯ ಹೊಗೆಕೊಳವೆಯಿಂದ ಹೊಗೆ ಏಳುವುದನ್ನು ಗಮನಿಸಿದೆ. ವಾಪಸು ಬರುವಾಗ ಹೊಗೆ ಇರಲಿಲ್ಲ. ಇದು ಚಳಿಗಾಲ. ಏನೋ ತೊಂದರೆ ಇರಬೇಕು ಎಂದು ಬಂದು ನೋಡಿದೆ."

ಅವಳು ಸುಮ್ಮನಿದ್ದಳು.

"ನೀವು ಆಸ್ಪತ್ರೆಗೆ ಬರಬೇಕು. ಅಲ್ಲಿ ಅವರು ಆಮೂಲಾಗ್ರ ಪರೀಕ್ಷೆ ಮಾಡುತ್ತಾರೆ. ನಿಮಗೆ ಏನು ಔಷಧ ಬೇಕೋ ಕೊಡುತ್ತಾರೆ."

"ಬೇಡ. ನನಗೆ ಆಸ್ಪತ್ರೆಗೆ ಹೋಗುವುದು ಬೇಡ. ನಾನು ಇಲ್ಲೇ ಇರಲು ಬಂದವಳು."

ಅವನು ಏನೂ ಹೇಳಲಿಲ್ಲ.

ಅಲಾವಾ ಔಷಧಗಳನ್ನು ತರುತ್ತಿದ್ದಳು. ಮಿಗುಯೆಲ್ ಅವಳಿಗೆ ಬೇಕಾದ ಗಂಜಿ ಮಾಡಿಕೊಡುತ್ತಿದ್ದ. ಅವಳಿಗೆ ಎದ್ದು ಓಡಾಡುವಷ್ಟು ಆರೋಗ್ಯ ಸುಧಾರಿಸಿತು.

"ನಿಮ್ಮನ್ನು ಒಂಟಿ ಬಿಟ್ಟು ಹೋಗುವುದು ಕಷ್ಟ, ನೀವು ನಮ್ಮ ಮನೆಯಲ್ಲಿ ಬಂದಿರಬಹುದು."

"ಇಲ್ಲ. ನಾನು ಇಲ್ಲೇ ಒಬ್ಬಂಟಿ ಇರಲು ಬಂದವಳು."

"ಸರಿ. ನಿಮಗೆ ಈ ಪ್ರದೇಶದ ಬದುಕು ಗೊತ್ತಿಲ್ಲ. ನಿಮಗೆ ತರಬೇತಿ ಕೊಡುವಷ್ಟು ದಿವಸ ನಾನು ಇಲ್ಲೇ ಇರುತ್ತೇನೆ. ಒಪ್ಪಿಗೆ ತಾನೇ?"

ಅವಳು ಮೌನವಾಗಿ ನಕ್ಕಳು. ಅವನು ಅವಳಿಗೆ ಅದೆಷ್ಟೋ ವಿಷಯಗಳನ್ನು ಹೇಳಿಕೊಟ್ಟ. ಮನೆಯ ಹೊರಗೆ ತೋಟದ ಸುತ್ತಲೂ ಬೇಲಿ ಹಾಕಿ ಜಿಂಕೆಗಳಿಂದ ಗಿಡಗಳನ್ನು ಕಾಪಾಡುವುದು ಹೇಗೆ, ಯಾವ ಗಿಡಗಳನ್ನು ಯಾವ ಕಾಲದಲ್ಲಿ ನೆಡಬೇಕು, ಹೆಗ್ಗಣಗಳು ಗೆಡ್ಡೆಗಳನ್ನು ಕದಿಯದಿರಲು ಏನು ಉಪಾಯಗಳನ್ನು ಮಾಡಬೇಕು, ಸೌದೆ ಕಡಿಯುವ ವಿಧಾನ, ಮೀನು ಹಿಡಿಯಲು ಪ್ರಶಸ್ತವಾದ ಸ್ಥಳ, ಹೀಗೆ ಅವಳ ತರಬೇತಿ ಭರದಿಂದ ಸಾಗಿತು. ಅವಳು ಆಸಕ್ತಿಯಿಂದ ಕಲಿತಳು. ಮಚ್ಚಿನ ಒಂದೇ ಏಟಿನಿಂದ ಸೌದೆಯನ್ನು ಎರಡು ಪಾಳು ಮಾಡುವುದು ಸಾಧ್ಯವಾದಾಗ ಸಂಭ್ರಮಿಸಿದಳು. ದೊಡ್ಡ ಮೀನು ಹಿಡಿಯಲು ಸಾಧ್ಯವಾದಾಗ ಮಗುವಿನಂತೆ ಸಡಗರಗೊಂಡಳು.

ಅವನು ಅವಳಿಗೆ ಪ್ರಾಣಿಗಳ ಬೇಟೆಯ ಸೂಕ್ಷ್ಮಗಳನ್ನು ಹೇಳಿಕೊಟ್ಟ. ಮೊಲ ಮುಂತಾದ ಸಣ್ಣಪುಟ್ಟ ಪ್ರಾಣಿಗಳನ್ನು ಹಿಡಿಯಲು ದಾರದ ಬಲೆ ಕಟ್ಟುವುದು ಹೇಗೆಂದು ತೋರಿಸಿದ. ಅವಳು ಕಟ್ಟಿದ ಬಲೆಗೆ ಒಂದು ಅಳಿಲು ಸಿಕ್ಕಿಬಿತ್ತು.

"ಅಳಿಲು!" ಎಂದು ಅವಳು ಮೂಗು ಮುರಿದಳು.

"ಏನು ಹಿಡಿಯುತ್ತೀರೋ ಅದನ್ನು ತಿನ್ನಬೇಕು" ಎಂದು ಅವನು ಅವಳಿಗೆ ಅಳಿಕಿನ ಚರ್ಮ ಸುಲಿಯುವ ಬಗೆಯನ್ನು ಬೋಧಿಸಿದ.

ಅವರು ಚಿಂಕೆಯ ಬೇಟೆಗೆಂದು ಹೋದರು. ಹೇಗೆ ಗುರಿ ಇಡಬೇಕು ಎಂದು ಅವನು ತೋರಿಸಿದ. ಅವಳು ಹಿಂದೆ ಪ್ರಯತ್ನಿಸಿ ಸೋತಿದ್ದಳು. ಆದರೆ ಈಗ ಅವಳು ಮನಸ್ಸನ್ನು ಗಟ್ಟಿ ಮಾಡಿಕೊಂಡು ಗುಂಡು ಹಾರಿಸಿದಳು. ಮೃಗವು ಧರೆಗೆ ಉರುಳಿತು. "ಅಷ್ಟೇ!" ಎಂದು ಅವನು ಸಂಭ್ರಮಪಟ್ಟ. ಇಬ್ಬರೂ ಕೆಳಗೆ ಬಿದ್ದಿದ್ದ ಜಿಂಕೆಯ ಬಳಿಗೆ ಸಾಗಿದರು. ಪ್ರಾಣಿ ಇನ್ನೂ ಬದುಕಿತ್ತು. ಅದರ ಸಂಕಟವನ್ನು ತೀರಿಸುವುದು ಹೇಗೆ ಎಂದು ಅವನು ತೋರಿಸಿಕೊಟ್ಟ. ನಂತರ ಭಾರದ ಪ್ರಾಣಿಯನ್ನು ಮನೆಗೆ ಸಾಗಿಸುವ ವಿಧಾನ ತಿಳಿಸಿದ. ಕ್ಯಾಬಿನ್ ಬಳಿ ಹೊರಗೆ ಇರುವ ಮೇಜಿನ ಮೇಲೆ ಪ್ರಾಣಿಯ ಚರ್ಮ ಸುಲಿದು ಮಾಂಸ ಬೇರ್ಪಡಿಸುವ ವಿಧಾನವನ್ನು ತೋರಿಸಿದ. ಬೆಂಕಿಯ ಮೇಲೆ ಮಾಂಸ ಬೇಯಿಸುವುದು ಹೇಗೆಂದು ಹೇಳಿಕೊಟ್ಟ.

"ನೀವು ಈಗ ಇಲ್ಲಿ ಒಬ್ಬರೇ ಬದುಕಬಲ್ಲಿರಿ ಅಂತ ಅನ್ನಿಸುತ್ತಿದೆ. ನಾನೀಗ ಹೊರಡಬಹುದು. ಸ್ವಲ್ಪ ದಿನಗಳ ನಂತರ ಬಂದು ಒಂದು ಕಣ್ಣು ಹಾಯಿಸಿ ಹೋಗುತ್ತೇನೆ" ಎಂದು ಮಿಗುಯೆಲ್ ಅವಳಿಗೆ ಹೇಳಿದ. ಅವಳು ಕೃತಜ್ಞತೆಯಿಂದ ಮುಗುಳ್ನಕ್ಕಳು. ಅವನು ಕಾರಿನಲ್ಲಿ ಕುಳಿತು ಹೊರಟ. ಅವಳು ಬಾಗಿಲಿನಲ್ಲಿ ನಿಂತು ಕಾರು ಮರೆಯಾಗುವವರೆಗೂ ನೋಡುತ್ತಿದ್ದಳು.

ಬಹಳ ದಿನಗಳ ನಂತರ ಅವಳು ನೀರು ಕಾಯಿಸಿ ಮರದ ಪಾತ್ರೆಯಲ್ಲಿ ಕುಳಿತು ಸ್ನಾನ ಮಾಡಿದಳು. ತನ್ನ ನಿತ್ಯಚರ್ಯೆಗೆ ಹೊಸದಾಗಿ ಹೊಂದಿಕೊಳ್ಳತೊಡಗಿದಳು. ಅವಳ ನಡೆಯಲ್ಲಿ ಈಗ ಆತ್ಮವಿಶ್ವಾಸವಿತ್ತು. ಸೌದೆ ಕಡಿದು ತಂದು ಬೆಂಕಿಗೂಡಿನಲ್ಲಿ ಬೆಂಕಿಯ ಉರಿ ಮಾಡಿದಳು. ಅಡುಗೆ ಮಾಡಿದಳು. ಊಟ ಮಾಡುತ್ತಾ ಪುಸ್ತಕ ಓದಿದಳು.

ಭೂಮಿ - ಭಾಗ ೭

ಅವಳು ಈಗ ಕಾಡುಮೇಡುಗಳ ಬದುಕನ್ನು ರೂಢಿಸಿಕೊಂಡಿದ್ದಾಳೆ. ಮನೆಯ ಮುಂದಿನ ಕೈದೋಟದಲ್ಲಿ ಬೆಳೆದ ಕೆಂಪು ಮೂಲಂಗಿಯನ್ನು ಮೊದಲ ಸಲ ಭೂಮಿಯಿಂದ ಎಳೆದಾಗ ಅವಳಿಗೆ ಆದ ಆನಂದ ವರ್ಣಿಸಲು ಸಾಧ್ಯವಿಲ್ಲ. ಮೊಲ, ಜಿಂಕೆ, ಮೀನುಗಳನ್ನು ಹಿಡಿದು ತರುವ ಕೆಲಸ ಅವಳಿಗೆ ಈಗ ಸುಲಭವಲ್ಲದಿದ್ದರೂ ಅಸಾಧ್ಯವೇನಲ್ಲ. ಅವಳು ತನ್ನ ಊಟದ ಬಟ್ಟಲನ್ನು ತಂದು ಹೊರಗಡೆ ಜಗುಲಿಯ ಮೇಲೆ ಕುಳಿತು ತಿನ್ನುವುದು ಈಗ ರೂಢಿಯಾಗಿದೆ. ಸುತ್ತಲೂ ನಿಸರ್ಗದ ಸೌಂದರ್ಯ ಹಬ್ಬಿದೆ. ಅದನ್ನು ಆಸ್ವಾದಿಸುತ್ತಾ ಊಟ ಮಾಡುವುದು ಅವಳಿಗೆ ಅಪ್ಯಾಯಮಾನವಾಗಿದೆ

ಮನೆಯಲ್ಲಿದ್ದಾಗ ಅವಳಿಗೆ ಡ್ರೂ ನೆನಪು ಕಾಡುತ್ತದೆ. ಅವನು ಹಿಂದಿನಿಂದ ಬಂದು ಅಮ್ಮಾ ಎನ್ನುತ್ತಾ ಅವಳ ಕೊರಳಿನ ಸುತ್ತಲೂ ಕೈಗಳನ್ನು ಹಾಕಿ ಅಪ್ಪಿಕೊಂಡ ಹಾಗೆ ಭಾಸವಾಗುತ್ತದೆ. ನಿಕ್ ಜೊತೆ ಕಳೆದ ಆಪ್ತ ಕ್ಷಣಗಳ ನೆನಪಾಗಿ ಕಣ್ಣಲ್ಲಿ ನೀರು ಚಿಮ್ಮುತ್ತದೆ. ಏನಾದರೂ ಕೆಲಸ ಹುಡುಕಿಕೊಂಡು ಅವಳು ಹಳೆಯದನ್ನು ಮರೆಯುವ ಪ್ರಯತ್ನ ಮಾಡುತ್ತಾಳೆ.

ಒಂದು ಬೆಳಗ್ಗೆ ಮಿಗುಯೆಲ್ ಕಾರು ಮನೆಯ ಮುಂದೆ ಪಾರ್ಕ್ ಮಾಡಿ ಬರುವುದನ್ನು ನೋಡಿ ಅವಳಿಗೆ ಸಹಜವಾಗಿ ಸಂತೋಷವಾಯಿತು. ಅವನ ಜೊತೆ ಒಂದು ನಾಯಿ ಇತ್ತು. ಅದರ ಹೆಸರು ಪಾಟರ್ ಎಂದು ಅವನು ತಿಳಿಸಿದ.

"ನಿಮಗೆ ನಾಯಿ ಇಷ್ಟವೇ?" ಎಂದು ಅವನು ಕೇಳಿದ.

"ನನಗೆ ಬೆಕ್ಕುಗಳನ್ನು ಕಂಡರೆ ಹೆಚ್ಚು ಅಕ್ಕರೆ" ಎಂದು ಈಡಿ ಉತ್ತರಿಸಿದಳು. ಪಾಟರ್ ಅವಳ ಬಳಿ ಬಂದು ಬಾಲ ಅಲ್ಲಾಡಿಸಿತು.

"ಅವನಿಗೆ ನಿಮ್ಮನ್ನು ಕಂಡರೆ ಇಷ್ಟವೆಂದು ತೋರುತ್ತದೆ!" ಎಂದು ಮಿಗುಯೆಲ್ ನಕ್ಕ. ಅವಳು ನಾಯಿಯ ತಲೆ ನೇವರಿಸಿದಳು.

"ನಿಮ್ಮ ವೈದ್ಯಕೀಯ ಪರೀಕ್ಷೆಯ ರಿಸಲ್ಟ್ ಬಂದಿದೆ" ಎಂದು ಅವನು ಒಂದು ಕವರ್ ಅವಳಿಗೆ ಕೊಟ್ಟ. "ಎಲ್ಲವೂ ಸರಿಯಾಗಿದೆ" ಎಂದು ಸೇರಿಸಿದ.

ಅವಳು ಕವರ್ ಪಡೆದುಕೊಂಡು ಅದನ್ನು ತೆರೆಯದೆ ಹಾಗೇ ಇಟ್ಟಳು.

"ನಿಮಗೆ ಈಗ ಇಲ್ಲಿಯ ಬದುಕು ರೂಢಿ ಆಯಿತು ಎಂದು ತೋರುತ್ತಿದೆ."

"ಹೌದು, ನನಗೆ ತರಬೇತಿ ಕೊಟ್ಟಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು."

"ಅದೇನು ದೊಡ್ಡ ವಿಷಯ ಅಲ್ಲ."

"ನಿಮಗೆ ಒಂದು ಕಪ್ ಕಾಫಿ ಮಾಡುತ್ತೇನೆ."

ಅವನು ನಿರಾಕರಿಸಲಿಲ್ಲ. ಅವಳು ಕಾಫಿ ಮಾಡಿ ತಂದಳು. ಅವನು "ಹೊರಗೆ ನನ್ನ ಚೇರಿನಲ್ಲಿ ಕೂತು ಕುಡಿದರೆ ಹೆಚ್ಚು ಸುಖ" ಎಂದ.

"ನಿಮ್ಮ ಚೇರ್?!" ಎಂದು ಅವಳು ನಕ್ಕಳು.

"ಹೌದು, ನಾನು ಈ ಚೇರ್ ಮೇಲೆ ಎಷ್ಟೋ ರಾತ್ರಿ ಮಲಗಿ ನಿದ್ದೆ ಹೋಗಿದ್ದೇನೆ!" ಎಂದು ಅವನು ನಕ್ಕ.

ಅವರು ನದಿಯ ಹತ್ತಿರ ಹೊರಟರು. ಅಲ್ಲಿ ಹುಲ್ಲು ಬೆಳೆದ ಒಂದು ಸ್ಥಾನದಲ್ಲಿ ಕುಳಿತುಕೊಂಡರು. ತಾನು ಈಗ ಮೀನು ಹಿಡಿಯಬಲ್ಲೆ, ಜಿಂಕೆಯನ್ನು ಬೇಟೆಯಾಡಬಲ್ಲೆ ಎಂದು ಅವಳು ಹೇಳಿಕೊಂಡಳು. ಅವನು ಎಲ್ಲವನ್ನೂ ಕೇಳಿಸಿಕೊಂಡ.

ಮೌನ ಕವಿಯಿತು.

ಅವನು ಯಾವುದೋ ಹಾಡನ್ನು ಗುನುಗಿದ. ಅವನ ಹಾಡುಗಾರಿಕೆ ಅವಳಿಗೆ ನಗು ತರಿಸಿತು.

"ಯಾಕೆ, ನಾನು ಚೆನ್ನಾಗಿ ಹಾಡುವುದಿಲ್ಲವೇ! "

"ನೀವು ಚೆನ್ನಾಗಿ ಹಾಡುತ್ತೀರಿ ಅಂತ ನಿಮಗೆ ಯಾರಾದರೂ ಹೇಳಿದ್ದಾರಾ!"

"ಇಲ್ಲ. ಆದರೆ ನನಗೆ ಬೇಕಾದಷ್ಟು ಹಾಡುಗಳು ಗೊತ್ತು!"

ಅವನು ಹಾಡು ಮುಂದುವರೆಸಿದ. ಅವಳೂ ಅವನ ಜೊತೆ ಒಂದೆರಡು ಸಾಲು ಹಾಡಿದಳು. ಇಬ್ಬರೂ ನಕ್ಕರು.

"ನಿಮಗೆ ಇಷ್ಟು ದೂರ ಎಲ್ಲರನ್ನೂ ಬಿಟ್ಟು ಇಲ್ಲಿ ಇರಲು ಹೇಗೆ ಮನಸ್ಸು ಬರುತ್ತದೋ! ನೀವು ನಗರದಲ್ಲಿ ಹುಟ್ಟಿ ಬೆಳೆದವರು ಎಂದು ತೋರುತ್ತದೆ" ಎಂದು ಅವನು ಅವಳ ಕಡೆ ನೋಡಿದ.

"ಇಲ್ಲಿ ನಗರದ ಯಾವ ಸಮಸ್ಯೆಗಳೂ ಇಲ್ಲವಲ್ಲ."

"ಅದು ನಿಜ. ನಗರದ ರಸ್ತೆಗಳ ಟ್ರಾಫಿಕ್, ಜನಸಂದಣಿ, ಕ್ರಿಸ್ಮಸ್ ಆಚರಣೆಯ ಗಲಾಟೆ ..."

ಅವಳು ಒಮ್ಮೆಲೇ ಸೆಟೆದು ಅವನ ಕಡೆಗೆ ನೋಡಿ "ನೀವು ನನ್ನ ಬಗ್ಗೆ ಮಾಹಿತಿ ಕಲೆ ಹಾಕಿದಿರಾ? ಗೂಗಲ್ ಮಾಡಿದಿರಾ?" ಎಂದು ಕೇಳಿದಳು. ಅವನು ಅಪ್ರತಿಭನಾಗಿ "ಇಲ್ಲ, ನನಗೆ ನಿಮ್ಮ ಪೂರ್ತಿ ಹೆಸರು ಕೂಡಾ ಗೊತ್ತಿಲ್ಲ. ನಮಗೆ ಗೂಗಲ್ ಇತ್ಯಾದಿ ಬಳಸಲು ಬಾರದು" ಎಂದ. ಆದರೆ ಅವಳು ಹಾವು ಮೆಟ್ಟಿದವಳ ಹಾಗೆ ಮೇಲೆದ್ದು ಹೊರಟುಹೋದಳು. ಅವನು ಬೇರೆ ದಾರಿ ಕಾಣದೆ ಹಿಂದಿರುಗಿದ.

ಸ್ವಲ್ಪ ದಿನಗಳ ನಂತರ ಅವನು ವಾಪಸಾದ. ಅವನ ಹಿಂದೆ ಪಾಟರ್ ಕೂಡಾ ಬಂದು ಬಾಲ ಅಲ್ಲಾಡಿಸಿತು. ಅವಳು ಹೊರಗೆ ಬಂದು ಅದರ ಮೈ ನೇವರಿಸಿದಳು.

"ಅವತ್ತು ನನ್ನ ವರ್ತನೆಗೆ ನಾನು ಕ್ಷಮೆ ಬೇಡುತ್ತೇನೆ" ಎಂದು ಅವಳು ಬೇಸರದಿಂದ ಹೇಳಿದಳು.

"ನಾನು ಅದನ್ನು ಆಗಲೇ ಮರೆತಿದ್ದೇನೆ."

"ನಾನು ಹೀಗೆ ಒಬ್ಬಳೇ ನಗರದಿಂದ ದೂರ ಬಂದು ಇಲ್ಲಿರುವುದು ಯಾಕೆಂದು ನಿಮಗೆ ಕುತೂಹಲ ಇರಬಹುದು. ನಾನು ಯಾರಿಂದಲೂ ಓಡಿ ಹೋಗುತ್ತಿಲ್ಲ. ನಾನು ಪಾತಕಿಯಲ್ಲ."

ಅವನು ಸುಮ್ಮನಿದ್ದ.
"ನಿಮ್ಮ ಕುಟುಂಬ ..." ಎಂದು ಅವಳು ಕೇಳಿದಳು.

"ನಾನು ನನ್ನ ಅಕ್ಕನ ಮಕ್ಕಳ ಜೊತೆ ಇದ್ದೇನೆ." ಎಂದು ಅವನು ಉತ್ತರಿಸಿದ. ನಂತರ ತಡೆದು "ನನ್ನ ಹೆಂಡತಿ ಮತ್ತು ಮಗಳು ಇಬ್ಬರೂ ಕಾರ್ ಅಪಘಾತದಲ್ಲಿ ತೀರಿಕೊಂಡರು." ಎಂದು ಸೇರಿಸಿದ.

"ಓಹ್, ಬಹಳ ಖೇದನೀಯ."

"ನನಗೂ ಖೇದವೇ. ಆದರೆ ಅದರಿಂದ ಏನೂ ಸಿಕ್ಕದು."

ಇಬ್ಬರೂ ಮೌನ ವಹಿಸಿದರು.

"ಒಮ್ಮೆ ನನಗೂ ಒಂದು ಕುಟುಂಬ ಇತ್ತು. ನನ್ನ ಗಂಡ ಮತ್ತು ಮಗ ಇಬ್ಬರೂ ಅಪಘಾತದಲ್ಲಿ ತೀರಿಕೊಂಡರು. ಅದಾದ ನಂತರ ನನಗೆ ನಗರದಲ್ಲಿ ಬದುಕುವುದು ಅಸಹನೀಯ ಎನ್ನಿಸಿತು. ನೀವು ನಂಬುತ್ತೀರೋ ಬಿಡುತ್ತೀರೋ, ಅಲ್ಲಿ ನಾನು ಇಲ್ಲಿಗಿಂತ ಹೆಚ್ಚು ಒಂಟಿತನ ಅನುಭವಿಸುತ್ತಿದ್ದೆ."

"ನನಗೆ ಅದು ಆರ್ಥವಾಗುತ್ತದೆ" ಎಂದು ಅವನು ಭಾರವಾದ ಧ್ವನಿಯಲ್ಲಿ ಹೇಳಿದ.

"ನಾನು ಹೊರಡುತ್ತೇನೆ" ಎಂದು ಅವನು ಮೇಲೆದ್ದ. ಅವಳು "ಒಂದು ನಿಮಿಷ!" ಎಂದು ಒಳಗೆ ಹೋದಳು. ಒಂದು ಡಬ್ಬದಲ್ಲಿ ಇಟ್ಟಿದ್ದ ಹಣವನ್ನು ತಂದು "ಇದನ್ನು ನೀವು ಸ್ವೀಕರಿಸಬೇಕು" ಎಂದಳು.

"ಇಲ್ಲ ಇಲ್ಲ" ಎಂದು ಅವನು ನಿರಾಕರಿಸಿದ.

"ನೀವು ಏನಿಲ್ಲ ಎಂದರೂ ಒಂದೆರಡು ನೂರು ಡಾಲರ್ ಖರ್ಚು ಮಾಡಿದ್ದೀರಿ"

"ಇಲ್ಲ, ನಾನು ಹಣ ಪಡೆಯಲಾರೆ" ಎಂದು ಅವನು ಖಚಿತವಾಗಿ ಹೇಳಿ ಕಾರಿನಲ್ಲಿ ಕುಳಿತ. ಅವಳು ಕಾರ್ ಮರೆಯಾಗುವವರೆಗೂ ನೋಡುತ್ತಾ ನಿಂತಿದ್ದಳು.

ಭೂಮಿ - ಭಾಗ ೮

ಅಂದು ಮಿಗುಯೆಲ್ ಬೆಳಗ್ಗೆಯೇ ಬಂದ. ಅವನ ಹಿಂದೆಯೇ ಪಾಟರ್ ಕೂಡಾ ಕೆಳಗೆ ಜಿಗಿದು ಬಾಲ ಅಲ್ಲಾಡಿಸುತ್ತಾ ಕ್ಯಾಬಿನ್ ಕಡೆಗೆ ಓಡಿಬಂತು. ಅವನ ಕೈಯಲ್ಲಿ ಒಂದು ಕಾಗದದ ಮಡಿಕೆ ಇತ್ತು.
"ನನ್ನ ಅಕ್ಕನ ಮೊಮ್ಮಗಳು ಇದನ್ನು ನಿಮಗೋಸ್ಕರ ಕಳಿಸಿದ್ದಾಳೆ" ಎಂದು ಕಾಗದವನ್ನು ಅವಳ ಕೈಗೆ ಕೊಟ್ಟ. ಅವಳು ಕುತೂಹಲದಿಂದ ಬಿಡಿಸಿ ನೋಡಿದಳು. ಪುಟ್ಟ ಮಗು ಬಿಡಿಸಿದ ಚಿತ್ರ. ಬೆಟ್ಟಗಳ ವಂಕಿ ಸಾಲು. ಅಲ್ಲೊಂದು ಮನೆ. ಮನೆಯ ಮುಂದೆ ನಿಂತ ಒಬ್ಬ ಹೆಂಗಸು. ಅದು ತಾನೇ ಎಂದು ತಿಳಿಯಲು ಅವಳಿಗೆ ಹೆಚ್ಚು ಹೊತ್ತು ಬೇಕಾಗಲಿಲ್ಲ. ಅವಳ ಮುಖದಲ್ಲಿ ನಗೆ ಮೂಡಿತು.

"ಅವಳಿಗೆ ನಿಮ್ಮ ವಿಷಯ ಹೇಳುತ್ತಿರುತ್ತೇನೆ. ಅವಳಿಗೆ ನೀವು ಹೀಗೆ ಒಬ್ಬರೇ ಇರುತ್ತೀರಿ ಎಂದರೆ ನಂಬಿಕೆ ಬಾರದು." ಎಂದು ಅವನು ನಕ್ಕ.

"ಒಂದು ನಿಮಿಷ ತಾಳಿ. ಅವಳಿಗೆ ನಾನೂ ಏನಾದರೂ ಕಳಿಸುತ್ತೇನೆ. ಆಗ ಅವಳಿಗೆ ನಂಬಿಕೆ ಬರಬಹುದು!" ಹೀಗೆಂದು ಈಡಿ ಕ್ಯಾಬಿನ್ ಒಳಗೆ ಹೋದಳು.

ಅಟ್ಟದ ಮೇಲೆ ಇಟ್ಟಿದ್ದ ಕಾರ್ಡ್ ಬೋರ್ಡ್ ಪೆಟ್ಟಿಗೆಯನ್ನು ಕೆಳಗೆ ಇಳಿಸಿದಳು. ಅವಳ ಕೈಗಳು ಸಣ್ಣಗೆ ನಡುಗಿದವು. ಪೆಟ್ಟಿಗೆಯಲ್ಲಿದ್ದ ವಸ್ತುಗಳನ್ನು ಒಂದೊಂದಾಗಿ ಹುಡುಕಿದಳು. ಡ್ರೂ ಮತ್ತು ನಿಕ್ ಮತ್ತು ತನ್ನ ಹಳೆಯ ಚಿತ್ರಗಳು. ಸುಖದ ಬೆಟ್ಟದ ಮೇಲೆ ಕಳೆದ ದಿನಗಳು! ಡ್ರೂ ಹುಟ್ಟಿದಾಗ ತೆಗೆದ ಚಿತ್ರ. ನಿಕ್ ಮಗುವನ್ನು ಎತ್ತಿಕೊಂಡು ನೋಡುತ್ತಿರುವ ಚಿತ್ರ. ನಿಕ್ ತನ್ನ ಪಕ್ಕದಲ್ಲಿ ನಿಂತು ಭುಜದ ಮೇಲೆ ಕೈ ಹಾಕಿದ ಚಿತ್ರ. ಡ್ರೂ ಟ್ರೈಸಿಕಲ್ ಮೇಲೆ ಕೂತು ಆಡುವ ಚಿತ್ರ. ಅವನು ಶಾಲೆಗೆ ಹೋದ ದಿವಸ ತೆಗೆದ ಚಿತ್ರ. ಕ್ರಿಸ್ಮಸ್ ಹಬ್ಬದಲ್ಲಿ ಮೂವರೂ ಅಲಂಕೃತ ಮರದ ಮುಂದೆ ತೆಗೆಸಿಕೊಂಡ ಚಿತ್ರ. ತಾನು ಮತ್ತು ಎಮ್ಮಾ ಜೊತೆಗೆ ನಿಂತು ತೆಗೆಸಿಕೊಂಡ ಚಿತ್ರ ...

ಅವಳು ಹುಡುಕುತ್ತಿದ್ದ ವಸ್ತು ಕೊನೆಗೂ ಸಿಕ್ಕಿತು. ಡ್ರೂ ಬರೆದ ಚಿತ್ರ. ಶಾಲೆಯಲ್ಲಿ ಅವನ ಶಿಕ್ಷಕಿ ಬರೆಸಿದ ಚಿತ್ರ. "ನಾನು ದೊಡ್ಡವನಾದ ಮೇಲೆ ಎಲ್ಲಿ ವಾಸಿಸಲು ಬಯಸುತ್ತೇನೆ?" ಡ್ರೂ ತನ್ನ ಕಲ್ಪನೆಯನ್ನು ಕ್ರೆಯಾನ್ ಬಣ್ಣಗಳಲ್ಲಿ ಚಿತ್ರಿಸಿದ್ದ. ಬೆಟ್ಟದ ವಂಕಿ ಸಾಲು. ಕೆಲವು ಗಿಡಮರಗಳು. ಅಲ್ಲೊಂದು ಮನೆ.

ಅಪ್ರಯತ್ನಪೂರ್ವಕವಾಗಿ ಅವಳ ಕಣ್ಣುಗಳು ತೇವವಾದವು. ಅವಳು ಸಾವರಿಸಿಕೊಂಡು ಡ್ರೂ ಬರೆದ ಚಿತ್ರವನ್ನು ಮಡಿಕೆ ಮಾಡಿಕೊಂಡು ಹೊರಗೆ ಬಂದು ಅದನ್ನು ಮಿಗುಯೆಲ್ ಕೈಗೆ ಕೊಟ್ಟಳು. ಅವನು ಅದರಲ್ಲಿ ಏನಿದೆ ಎಂದು ನೋಡದೆ ಜೋಬಿನಲ್ಲಿ ಇಟ್ಟುಕೊಂಡ.

"ನಾನು ಕೆಲಸದ ಮೇಲೆ ಸ್ವಲ್ಪ ದಿವಸ ಹೋಗಬೇಕಾಗಿದೆ. ಪಾಟರ್ ಒಂಟಿಯಾಗುತ್ತಾನೆ. ಅವನಿಗೆ ಇಲ್ಲಿ ಬಹಳ ಒಗ್ಗುತ್ತದೆ. ಅವನನ್ನು ಇಲ್ಲಿ ಬಿಟ್ಟುಹೋದರೆ ನಿಮಗೆ ಏನೂ ಅಭ್ಯಂತರವಿಲ್ಲ ತಾನೇ?"

ಅವಳು ನಾಯಿಯ ಮೈದಡವುತ್ತಾ "ನೀವು ಮರಳುವುದು ಯಾವಾಗ?" ಎಂದು ಕೇಳಿದಳು.

"ಹೇಳುವುದು ಕಷ್ಟ. ಕೆಲಸ ಯಾವಾಗ ಮುಗಿಯುತ್ತದೋ ಹೇಳಲಾರೆ."

"ಸರಿ," ಎಂದಷ್ಟೇ ಹೇಳಿದಳು.

ಅವನು ಅವಳತ್ತ ಕೈಬೀಸಿ ನಾಯಿಯನ್ನು ಮುದ್ದಿಸಿ ಮತ್ತೊಮ್ಮೆ ಕಾರಿನಲ್ಲಿ ಕುಳಿತು ಹೊರಟುಹೋದ. ಪಾಟರ್ ಅವಳ ಬಳಿಗೆ ಬಂದು ಬಾಲ ಅಲ್ಲಾಡಿಸಿ ವುಫ್ ಎಂದಿತು. ಅವಳು "ಏನು ಹಸಿವಾಯಿತಾ? ನಡಿ, ನದಿಯ ಕಡೆಗೆ ಹೋಗಿಬರೋಣ!" ಎಂದು ಅವನೊಂದಿಗೆ ಹೊರಟಳು.

ಕ್ಯಾಬಿನ್ನಿಗೆ ಮರಳಿದ ಮೇಲೆ ಊಟದ ತಯಾರಿ ನಡೆಸಿದಳು. ಒಂದು ತಟ್ಟೆಯಲ್ಲಿ ಬಡಿಸಿ ಪಾಟರ್ ಮುಂದೆ ಇಟ್ಟಳು. ತಾನೂ ಜಗುಲಿಯ ಮೇಲೆ ಕೂತು ಊಟ ಮಾಡಿದಳು. ನಂತರ ಒಳಗೆ ಹೋಗಿ ತಾನು ಕೆಳಗೆ ಇಳಿಸಿದ ಪೆಟ್ಟಿಗೆಯಿಂದ ಕೆಲವು ಚಿತ್ರಗಳನ್ನು ಆರಿಸಿ ಕ್ಯಾಬಿನ್ ಗೋಡೆಗಳ ಮೇಲೆ ಅಂಟಿಸಿದಳು. ಎದೆಯ ಮೇಲಿದ್ದ ದೊಡ್ಡ ಕಲ್ಲೊಂದನ್ನು ಸರಿಸಿ ಹಗುರಾದಂತೆ ಭಾಸವಾಯಿತು. ಮಿಗುಯೆಲ್ ಅಪಸ್ವರದಲ್ಲಿ ಹಾಡುತ್ತಿದ್ದ ಹಾಡನ್ನೇ ಗುನುಗಿದಳು. ಅವನನ್ನು ಕೀಟಲೆ ಮಾಡಿದ್ದು ನೆನೆಸಿಕೊಂಡು ಮುಗುಳ್ನಕ್ಕಳು.

ದಿನಗಳು ಕಳೆದವು. ಹೊರಗಿನ ಚಿತ್ರ ಬದಲಾಯಿತು. ಮಳೆಗಾಲ ಪ್ರಾರಂಭವಾಯಿತು. ಗಿಡಮರಗಳು ಗಾಢ ಹಸಿರನ್ನುಟ್ಟು ಕಂಗೊಳಿಸಿದವು. ದಿನಗಳು ಕಳೆದಂತೆ ತಾಪಮಾನ ಕೆಳಮುಖವಾಯಿತು. ಗಿಡಮರಗಳಲ್ಲಿ ಎಲೆಗಳು ಕೆಂಪಾದವು. ಒಂದು ದಿನ ಲಘು ಹಿಮಪಾತವಾಯಿತು. ಭಾರೀ ಗುಡುಗು ಸಿಡಿಲುಗಳೊಂದಿಗೆ ಬಿರುಗಾಳಿ ಬೀಸಿತು.

ಮಿಗುಯೆಲ್ ನಿರೀಕ್ಷೆಯಲ್ಲಿ ತಿಂಗಳುಗಳೇ ಕಳೆದವು. "ಅವನು ಎಂದೂ ಇಷ್ಟು ತಡ ಮಾಡಿಲ್ಲ!" ಎಂದು ಅವಳು ಪಾಟರ್ ಮುಂದೆ ಹೇಳಿಕೊಂಡಳು. ಜಗುಲಿಯಲ್ಲಿದ್ದ ಕುರ್ಚಿಯ ಕಡೆ ನೋಡಿದಳು. ಅದು ಅವಳನ್ನು ಅಣಕಿಸಿದ ಹಾಗೆ ಕಂಡಿತು. ಕೋಪದಿಂದ ಅದನ್ನು ಮೇಲೆತ್ತಿಕೊಂಡು ಹೊರಗೆ ಇಟ್ಟುಬಂದಳು. ಹಿಮಪಾತದಲ್ಲೂ ಬಿಸಿಲಲ್ಲೂ ಕುರ್ಚಿ ಕ್ಯಾಬಿನ್ ಹೊರಗೆ ಯಾರದೋ ಬರವಿಗೆ ಕಾಯುತ್ತಾ ಕೂತಿತ್ತು.

ಚಳಿಗಾಲದ ಅತ್ಯಂತ ಕಠಿಣ ದಿನಗಳು ಕಳೆದವು. ಅವಳು ಬೆಂಕಿಗೂಡಿನಲ್ಲಿ ಸೌದೆ ಹಾಕಿ ಬೆಂಕಿ ಆರದ ಹಾಗೆ ನೋಡಿಕೊಂಡಳು. ಕ್ಯಾಬಿನ್ ಬೆಚ್ಚಗಿತ್ತು. ಬೇಟೆಯಾಡಿ, ಮೀನು ಹಿಡಿದು ಪ್ರತಿದಿನವೂ ಬಿಸಿ ಊಟ ಮಾಡಿದಳು. ಪುಸ್ತಕ ಓದುತ್ತಾ ನಾಯಿಯೊಂದಿಗೆ ಮಾತಾಡುತ್ತಾ ಸಮಯ ಕಳೆದಳು. ಅದೇಕೋ ತಾನು ಒಬ್ಬಂಟಿ ಎನ್ನುವ ಭಾವನೆ ಅವಳನ್ನು ಕಾಡತೊಡಗಿತು. ಇಷ್ಟು ದಿನ ಬಾಧಿಸದ ಯಾವುದೋ ನೋವು ಅವಳನ್ನು ಬಾಧಿಸತೊಡಗಿತು.

ಅವಳು ಹಿಂದಿನ ದಿನವೇ ಸಿದ್ಧತೆ ನಡೆಸಿದಳು. ನಸುಕಿನಲ್ಲೇ ಎದ್ದು ತನ್ನ ಕೈಚೀಲವನ್ನು ಹೆಗಲಿಗೆ ಏರಿಸಿದಳು. "ನಡಿ, ಹೋಗೋಣ!" ಎಂದು ನಾಯಿಯನ್ನು ಕರೆದಳು. ನಾಯಿಯ ಕುತ್ತಿಗೆಗೆ ಕಾಲರ್ ತೊಡಿಸಿ ಹಗ್ಗದ ತುದಿಯನ್ನು ಕೈಯಲ್ಲಿ ಹಿಡಿದಳು. ಇಬ್ಬರೂ ನಡೆದು ಹೊರಟರು. ತಾನು ವರ್ಷದ ಹಿಂದೆ ಕಾರಿನಲ್ಲಿ ಬಂದ ಕಿರುದಾರಿಯಲ್ಲಿ ಅವಳೆಂದೂ ಮತ್ತೆ ಹೋಗಿರಲಿಲ್ಲ. ದಾರಿಯಲ್ಲಿ ಅಲ್ಲಲ್ಲಿ ಹಿಮ ಬಿದ್ದಿತ್ತು. ಇಬ್ಬರೂ ಮೌನವಾಗಿ ನಡೆದರು.

ಕಿರುದಾರಿಯಿಂದ ಹೆದ್ದಾರಿಗೆ ಬಂದರು. ಹೆದ್ದಾರಿಯ ಒಂದು ಬದಿಯಲ್ಲಿ ಇಬ್ಬರೂ ನಡೆದುಹೋಗುತ್ತಿದ್ದರು. ಒಂದೆರಡು ಕಾರುಗಳು ಅವರ ಮುಂದೆಯೇ ಹಾದುಹೋದವು. ನಡೆದು ಸುಸ್ತಾದಾಗ ಅವಳು ಒಂದು ಕಡೆ ವಿಶ್ರಾಂತಿಗೆಂದು ಸ್ವಲ್ಪ ಹೊತ್ತು ಕುಳಿತಳು. ತಾನು ತಂದಿದ್ದ ತಿಂಡಿಯನ್ನು ನಾಯಿಗೆ ಕೊಟ್ಟಳು. ತಾನೂ ಒಂದಿಷ್ಟು ಬಾಯಿಗೆ ಹಾಕಿಕೊಂಡು ನೀರು ಕುಡಿದಳು. ನಾಯಿಗೂ ನೀರು ಕುಡಿಸಿದಳು. ಅವರ ಪ್ರಯಾಣ ಮತ್ತೊಮ್ಮೆ ಮುಂದುವರೆಯಿತು.

ಕೊನೆಗೂ ಮನುಷ್ಯರ ವಸತಿಗಳ ಕುರುಹುಗಳು ಕಾಣತೊಡಗಿದವು. ಚಳಿಗಾಲವಾದ್ದರಿಂದ ಬೆಳಕು ಬೇಗ ಕಂತಿತು. ಅಲ್ಲಲ್ಲಿ ಮನೆಗಳಲ್ಲಿ ಬೆಳಕು ಕಂಡಿತು. ಹೊಗೆಕೊಳವೆಗಳಲ್ಲಿ ಹೊಗೆ ಏಳುವುದು ಕಾಣಿಸಿತು. ಕಾರುಗಳ ಓಡಾಟ ಮುಂಚೆಗಿಂತ ಹೆಚ್ಚಿತು. ಅವಳು ಎಲ್ಲೂ ನಿಲ್ಲದೆ ಪ್ರಯಾಣ ಮುಂದುವರೆಸಿದಳು.

ಕ್ವಿನ್ಸಿ ಎಂಬ ಫಲಕ ಕಾಣಿಸಿತು. ಅವರು ಮುಂದುವರೆದರು. ಕೊನೆಗೂ ಪಟ್ಟಣದ ಗುರುತುಗಳು ಕಂಡವು. ಕಟ್ಟಡಗಳು, ಕಾರುಗಳು, ಬೀದಿದೀಪಗಳು, ಅಂಗಡಿಗಳ ಮುಂದೆ ಮಿನುಗುವ ಫಲಕಗಳು. ಕೊನೆಗೂ ಕ್ವಿನ್ಸಿಯ ಆಸ್ಪತ್ರೆಯ ಕಟ್ಟಡ ಕಂಡಿತು. ಅವಳು ಒಳಗೆ ಪ್ರವೇಶಿಸಿ ಸ್ವಾಗತಕಾರಿಣಿಯ ಕ್ಯಾಬಿನ್ ಬಳಿಗೆ ಹೋಗಿ ನಿಂತಳು. "ಇಲ್ಲಿ ಅಲಾವಾ ಎಂಬ ಹೆಸರಿನ ನರ್ಸ್ ಕೆಲಸ ಮಾಡುತ್ತಾರಲ್ಲ, ಅವರನ್ನು ಕಾಣಬೇಕು" ಎಂದಳು. ಸ್ವಾಗತಕಾರಿಣಿ ಫೋನ್ ರಿಸೀವರ್ ಎತ್ತಿಕೊಂಡು ಒಂದೆರಡು ಬಟನ್ ಒತ್ತಿದಳು. "ಹೇಯ್ ಅಲಾವಾ, ನಿನ್ನನ್ನು ಹುಡುಕಿಕೊಂಡು ಯಾರೋ ಬಂದಿದ್ದಾರೆ" ಎಂದಳು. ಈಡಿ ಅಲ್ಲೇ ಇದ್ದ ಕುರ್ಚಿಗಳ ಕಡೆಗೆ ಸಾಗಿದಳು. ದೀರ್ಘ ಪ್ರಯಾಣದ ನಂತರ ಕುರ್ಚಿಯಲ್ಲಿ ಕೂಡುವುದು ಸುಖ ಎನ್ನಿಸಿತು ಪಾಟರ್ ಅವಳ ಬಳಿಯಲ್ಲೇ ನೆಲದ ಮೇಲೆ ಮಲಗಿಕೊಂಡಿತು.

ಸ್ವಲ್ಪ ಹೊತ್ತಿನ ನಂತರ ನರ್ಸ್ ಉಡುಗೆ ತೊಟ್ಟ ಅಲಾವಾ ಅಲ್ಲಿಗೆ ಬಂದಳು. ಇವಳನ್ನು ನೋಡಿ ಅವಳ ಕಣ್ಣುಗಳು ಅರಳಿದವು. ಇಬ್ಬರೂ ಪರಸ್ಪರ ಆಲಂಗಿಸಿಕೊಂಡರು.

"ನಿಮ್ಮ ಮಾವ ಎಷ್ಟು ದಿವಸವಾದರೂ ಬರಲಿಲ್ಲ. ಎಲ್ಲಿಗೆ ಹೋಗಿದ್ದಾರೆ?" ಎಂದು ಈಡಿ ಕೇಳಿದಳು.

ನರ್ಸ್ ಅವಳ ಕಡೆಗೆ ಅನುಮಾನದಿಂದ ನೋಡಿ "ಮನೆಯಲ್ಲಿದ್ದಾರೆ" ಎಂದಳು.

ಈಡಿ "ಮನೆಯ ಅಡ್ರೆಸ್ ಕೊಟ್ಟರೆ ನಾನು ಹೋಗಿ ಕಾಣುತ್ತೇನೆ" ಎಂದಳು.

"ಇನ್ನು ಸ್ವಲ್ಪ ಹೊತ್ತಿನಲ್ಲಿ ನನ್ನ ಶಿಫ್ಟ್ ಮುಗಿಯುತ್ತದೆ. ನನ್ನ ಜೊತೆಗೇ ನೀವು.ಬರಬಹುದು."

ಈಡಿ ಮತ್ತು ಪಾಟರ್ ಮತ್ತಷ್ಟು ಹೊತ್ತು ಕಾದರು. ಅಲಾವಾ ಕೊನೆಗೂ ಬಂದು "ಹೋಗೋಣ" ಎಂದಳು. ಅದೆಷ್ಟೋ ದಿನಗಳ ನಂತರ ಅವಳು ಕಾರಿನಲ್ಲಿ ಕುಳಿತಳು. ಪ್ರಯಾಣ ಮೌನವಾಗಿ ಸಾಗಿತು. ಅರ್ಧ ಗಂಟೆಯ ನಂತರ ಅಲಾವಾ ಕಾರನ್ನು ಒಂದು ಮನೆಯ ಮುಂಭಾಗದಲ್ಲಿ ನಿಲ್ಲಿಸಿದಳು.

ಅಲಾವಾಗಾಗಿ ಕಾಯದೆ ಈಡಿ ಕೆಳಗಿಳಿದು ಹೋದಳು. ಪರಿಚಿತ ತಾಣಕ್ಕೆ ಬಂದ ಪಾಟರ್ ಅವಳಿಗಿಂತಲೂ ಮುಂಚೆ ಬಾಗಿಲಿನ ಮುಂದೆ ಹೋಗಿ ನಿಂತಿತು. ಅವಳು ಬಾಗಿಲು ತಟ್ಟಿದಳು. ಒಬ್ಬ ಮಧ್ಯವಯಸ್ಸಿನ ಮಹಿಳೆ ಬಾಗಿಲು ತೆರೆದು ಅವಳ ಕಡೆಗೆ ಪ್ರಶ್ನಾರ್ಥಕವಾಗಿ ನೋಡಿದರು.

"ಹೆಲೋ! ನನ್ನ ಹೆಸರು ಈಡಿ. ನಾನು ಮಿಗುಯೆಲ್ ಅವರ ಸ್ನೇಹಿತೆ."

"ಓಹ್, ನಿಮ್ಮ ಬಗ್ಗೆ ಕೇಳಿ ಗೊತ್ತು. ಒಳಗೆ ಬನ್ನಿ!" ಎಂದು ಆಕೆ ಆದರದಿಂದ ಕರೆದರು.

"ಮಿಗುಯೆಲ್ ಎಲ್ಲಿ?"

"ಬನ್ನಿ, ಅವನು ಇನ್ನೂ ಎಚ್ಚರವಾಗಿದ್ದಾನೆ" ಎಂದು ಆಕೆ ಒಳಗಿನ ಕೋಣೆಯ ಕಡೆಗೆ ಹೋದರು.

ಒಂದು ಮಂಚದ ಮೇಲೆ ಮಿಗುಯೆಲ್ ಮಲಗಿದ್ದ. ಅವನ ಮೂಗಿನ ಬಳಿ ಟೇಪ್ ಬಳಸಿ ನಳಿಕೆಯನ್ನು ಜೋಡಿಸಲಾಗಿತ್ತು.

ಇವಳನ್ನು ನೋಡಿ ಅವನು ಕ್ಷೀಣವಾಗಿ ನಕ್ಕ. "ನೀವು ಬರುತ್ತೀರೋ ಇಲ್ಲವೋ ಎಂದು ಎಷ್ಟು ದಿವಸದಿಂದ ಕಾಯುತ್ತಿದ್ದೇನೆ!" ಎಂದ. ಅವನ ಧ್ವನಿಯಲ್ಲಿ ಎಂದಿನ ಚೈತನ್ಯವಿರಲಿಲ್ಲ.

ಅವಳು ಸುಮ್ಮನಿದ್ದಳು. ಅವನೇ ಮುಂದುವರೆಸಿ "ಕ್ಯಾನ್ಸರ್" ಎಂದ.

ಅವಳು ಈಗಲೂ ಏನೂ ಮಾತಾಡಲಿಲ್ಲ. ಅವನೇ ಸ್ವಲ್ಪ ತಡೆದು "ಗಂಟಲಿನ ಕ್ಯಾನ್ಸರ್. ಮುಂಚೆಯೇ ಹಿಡಿಯಬೇಕಾಗಿತ್ತು. ಹಿಡಿಯಲಿಲ್ಲ" ಎಂದ. ಬೇಟೆಗಾರರು ಮೃಗವನ್ನು ಹಿಡಿಯಲಾಗದೆ ಬರಿಗೈಯಲ್ಲಿ ಬಂದ ಹತಾಶೆ ಅವನ ಧ್ವನಿಯಲ್ಲಿತ್ತು.

ಅವಳಿಗೆ ಮಾತು ಹೊರಡಲಿಲ್ಲ.

ಅವನು ಗೊಗ್ಗರು ಧ್ವನಿಯಲ್ಲೇ ತಾನು ಹಿಂದೆ ಗುನುಗಿದ ಹಾಡನ್ನು ಮತ್ತೊಮ್ಮೆ ಗುನುಗಿದ. ಇಬ್ಬರೂ ನಕ್ಕರು.

ಮೇಜಿನ ಮೇಲಿಟ್ಟ ಸೆಲ್ ಫೋನ್ ಕಡೆಗೆ ಅವನು ನೋಡಿದ. "ಅದು ನನ್ನ ಫೋನ್. ಅದರಲ್ಲಿ ನನ್ನ ಮ್ಯೂಸಿಕ್ ಇದೆ. ಅದನ್ನು ನೀವು ತೆಗೆದುಕೊಳ್ಳಬೇಕು."

"ಇಲ್ಲ ಇಲ್ಲ" ಎಂದು ಅವಳು ಪ್ರತಿಭಟಿಸಿದಳು

"ನನ್ನ ಧ್ವನಿಯಲ್ಲಿ ಹಾಡಿದ್ದು ಅಷ್ಟೇ ಅಲ್ಲ, ನನ್ನ ಇಷ್ಟದ ಹಾಡುಗಳ ಸಂಗ್ರಹ ಇದೆ. ಅದೂ ಬೇಡವಾ!" ಎಂದು ಅವನು ನಕ್ಕು ಫೋನ್ ಕಡೆಗೆ ಕೈ ಚಾಚಿದ. ಅವಳು ಬಾಗಿ ಫೋನ್ ಕೈಗೆತ್ತಿಕೊಂಡು "ಆಗಲಿ" ಎಂದಳು.

ನಂತರ ಅವನು ಏಕಾಕಿಯಾಗಿ "ಅವತ್ತು ನಾನೇ ಡ್ರೈವ್ ಮಾಡುತ್ತಿದ್ದೆ" ಎಂದ.

ಅವಳು ಅರ್ಥವಾಗದೆ ಅವನ ಕಡೆಗೆ ನೋಡಿದಳು.

"ನನ್ನ ಕುಟುಂಬದವರು ಅಪಘಾತದಲ್ಲಿ ಸತ್ತಾಗ ನಾನೇ ಗಾಡಿ ಓಡಿಸುತ್ತಿದ್ದೆ. ಆಗ ನಾನು ತುಂಬಾ ಕುಡಿಯುತ್ತಿದ್ದೆ" ಎಂದು ಅವನು ಕಷ್ಟಪಟ್ಟು ಹೇಳಿದ. ಅವನ ಮುಖದಲ್ಲಿದ್ದ ನೋವು ಅವಳ ಮುಖದಲ್ಲೂ ಪ್ರತಿಫಲನಗೊಂಡಿತು.

"ನನ್ನ ಗಂಡ ಮತ್ತು ಮಗ ಇಬ್ಬರೂ ಗುಂಡೇಟಿಗೆ ಬಲಿಯಾದರು. ನಾವು ಒಂದು ಸಂಗೀತ ಕಾರ್ಯಕ್ರಮಕ್ಕೆ ಹೋದಾಗ ಯಾರೋ ನಿಷ್ಕಾರಣ ಗುಂಡು ಹಾರಿಸಿದಾಗ ಸತ್ತವರಲ್ಲಿ ಅವರೂ ಇದ್ದರು"

ಅವನ ಮುಖ ನೋವಿನಲ್ಲಿ ಕಿವಿಚಿತು. ಅವನು ಬಿಕ್ಕಿದ. ಅವಳು ಅಲ್ಲಿರಲಾರದೆ ಹೊರಗೆ ಬಂದಳು. ಅವಳು ಮನೆಯಿಂದ ಹೊರಗೆ ಬಂದಾಗ ಮನೆಯವರು ಅವನ ಕೋಣೆಗೆ ಧಾವಿಸಿದ್ದು ಕೇಳಿತು. ಅವರು ತಮ್ಮ ರೆಡ್ ಇಂಡಿಯನ್ ಪದ್ಧತಿಯ ಅನುಸಾರವಾಗಿ ಅವನ ಮುಂದೆ ಬಾಗಿ ಏನೋ ಮಂತ್ರಗಳನ್ನು ಪಠಿಸಿದರು.

ಈಡಿ ಮೌನವಾಗಿ ನಡೆಯುತ್ತಾ ಒಂದು ಪಾರ್ಕಿಗೆ ಬಂದಳು. ಕತ್ತಲಾದ ಕಾರಣ ಅಲ್ಲಿ ಯಾರೂ ಇರಲಿಲ್ಲ. ಅವಳು ಒಂದು ಉಯ್ಯಾಲೆಯ ಮೇಲೆ ಸ್ವಲ್ಪ ಹೊತ್ತು ಮೌನವಾಗಿ ಕುಳಿತಳು.

ತಾನು ಬ್ಯಾಗಿನಲ್ಲಿ ಇಟ್ಟುಕೊಂಡ ಮಿಗುಯೆಲ್ ಕೊಟ್ಟ ಸೆಲ್ ಫೋನನ್ನು ಅವಳು ತೆಗೆದಳು. ನೆನಪಿನಿಂದ ಒಂದು ಸಂಖ್ಯೆಯನ್ನು ಡಯಲ್ ಮಾಡಿದಳು. ಒಂದೆರಡು ಕ್ಷಣಗಳ ನಂತರ "ಹೆಲೋ" ಎಂಬ ಧ್ವನಿ ಕೇಳಿತು.

"ಎಮ್ಮಾ, ನಾನು, ಈಡಿ" ಎಂದಳು.

"ಈಡಿ, ಓ ಮೈ ಗಾಡ್!" ಎಂಬ ಹರ್ಷೋದ್ಗಾರ ಆಕಡೆಯಿಂದ ಕೇಳಿತು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)