ಆಟೋ
ಇದು ಈ ವರ್ಷ ಬಿಡುಗಡೆಯಾದ ಟಾಮ್ ಹ್ಯಾಂಕ್ಸ್ ಅಭಿನಯಿಸಿರುವ "ಆಟೋ" ಚಿತ್ರದ ಕಥೆಯನ್ನು ಸಂಗ್ರಹಿಸುವ ಪ್ರಯತ್ನ. ಇನ್ನೂ ಪೂರ್ಣವಾಗಿಲ್ಲ. ಸಮಯ ಸಿಕ್ಕಾಗ ಪೂರೈಸುವೆ.
ಅವನು ಹಾರ್ಡ್ವೇರ್ ಅಂಗಡಿಯ
ಒಂದು ಮೂಲೆಯಲ್ಲಿ ತನಗೆ
ಬೇಕಾದ ಹಗ್ಗವನ್ನು ಹುಡುಕಿ
ಐದು ಯಾರ್ಡ್ ಅಳತೆಯನ್ನು ಕತ್ತರಿಸಲು ಸಿದ್ದನಾಗುತ್ತಿದ್ದಂತೆ ಅಂಗಡಿಯಲ್ಲಿ ಕೆಲಸ
ಮಾಡುವ ಹುಡುಗ ಓಡಿ
ಬಂದು "ನಿಮಗೆ ನಾನು
ಸಹಾಯ ಮಾಡಲೇ?" ಎನ್ನುತ್ತಾ ಮುಗುಳ್ನಗುತ್ತಾನೆ.
ಇವನು ಮುಖ ಗಂಟು
ಹಾಕಿಕೊಂಡು "ನನಗೆ
ಹಗ್ಗ ಕತ್ತರಿಸಲು ಆಗದು
ಅಲ್ಲವೇ!" ಎಂದು ಕಹಿಯಾಗಿ ಮರುಪ್ರಶ್ನೆ ಹಾಕುತ್ತಾನೆ.
"ಹಾಗಲ್ಲ"
ಎಂದು ಹುಡುಗ ಹೇಳುವಷ್ಟರಲ್ಲಿ ಇವನು ಹಗ್ಗವನ್ನು ಕತ್ತರಿಸಿ "ಇದರ
ಬಿಲ್ ಮಾಡುವುದು ಯಾರು?"
ಎಂದು ಕೇಳುತ್ತಾನೆ.
"ನಾನೇ!
ಹಿಂಬಾಲಿಸಿ ಮಿಸ್ಟರ್ ..." ಎಂದು ವಾಕ್ಯವನ್ನು ಅರ್ಧದಲ್ಲೇ ನಿಲ್ಲಿಸಿ ನಿಮ್ಮ ಹೆಸರೇನು ಎಂಬಂತೆ
ನೋಡುತ್ತಾನೆ.
"ಆಟೋ."
ಹುಡುಗ ದಿಗ್ಭ್ರಮೆಯಿಂದ ಇವನ
ನೋಡುತ್ತಾನೆ.
"ಓ
ಟೀ ಟೀ ಓ...
ಆಟೋ" ಎಂದು ಇವನು
ಉತ್ತರಿಸುತ್ತಾನೆ.
ಹುಡುಗ ಹಗ್ಗವನ್ನು ಅಳೆದು
ಬಿಲ್ ಮಾಡುತ್ತಾನೆ.
"ನೀನು
ತಪ್ಪು ಲೆಕ್ಕ ಹಾಕಿದ್ದೀಯ!" ಎಂದು ಆಟೋ
ಹರಿಹಾಯುತ್ತಾನೆ.
"ಇಲ್ಲ
ಸರ್, ಇದು ನಮ್ಮ
ಕಂಪ್ಯೂಟರ್ ಲೆಕ್ಕ
ಹಾಕಿದ್ದು"
"ಐದು
ಯಾರ್ಡ್ ಅಳತೆಯ ಹಗ್ಗಕ್ಕೆ ಎಷ್ಟು ಬೆಲೆ ಅನ್ನೋದನ್ನೂ ಈಗ ಕಂಪ್ಯೂಟರ್ ಲೆಕ್ಕ
ಹಾಕಬೇಕೆಂದು ಕಾಣುತ್ತೆ. ಇನ್ನೇನು ಅಪೇಕ್ಷೆ ಇಟ್ಟುಕೊಳ್ಳಲು ಸಾಧ್ಯ!
ನೋಡು, ಒಂದು ಯಾರ್ಡ್
ಅಳತೆಗೆ ಇಪ್ಪತ್ತೆಂಟು ಸೆಂಟ್
ಅಂದರೆ ಐದು ಯಾರ್ಡ್
ಅಳತೆಗೆ ಒಂದು ಡಾಲರ್
ನಲವತ್ತು ಸೆಂಟ್.
ಎಂಟು ಪರ್ಸೆಂಟ್ ತೆರಿಗೆ.
ಹನ್ನೆರಡು ಸೆಂಟ್.
ಒಟ್ಟು ಒಂದು ಸಾಲರ್
ಐವತ್ತೆರಡು ಸೆಂಟ್.
ನೀನು ಒಂದು ಡಾಲರ್
ಅರವತ್ತೆಂಟು ಸೆಂಟ್,
ಮೇಲೆ ಎಂಟು ಪರ್ಸೆಂಟ್ ತೆರಿಗೆ ಹಾಕಿ ಒಟ್ಟು
ಒಂದು ಡಾಲರ್ ಎಂಬತ್ತ
ನಾಲ್ಕು ಸೆಂಟ್ ಬಿಲ್
ಮಾಡಿದ್ದೀಯ. ಮೂವತ್ತೆರಡು ಸೆಂಟ್ ಹೆಚ್ಚು."
"ವಾವ್,
ನೀವು ಗಣಿತದಲ್ಲಿ ಬಹಳ
ಹುಷಾರು ಸರ್. ಆದರೆ
ಇಲ್ಲಿ ಮೂರು ಯಾರ್ಡ್
, ಆರು ಯಾರ್ಡ್, ಒಂಬತ್ತು ಯಾರ್ಡ್ ಹೀಗೆ ಖರೀದಿ
ಮಾಡಬೇಕು. ಐದು
ಯಾರ್ಡ್ ಖರೀದಿ ಮಾಡಿದರೂ ನಿಮಗೆ ಆರು ಯಾರ್ಡ್
ಬೆಲೆ ಕಟ್ಟಬೇಕಾಗುತ್ತೆ."
"ಇದೆಂಥ
ಮೂರ್ಖತನ. ನಿನ್ನ
ಮ್ಯಾನೇಜರ್ ಯಾರು?
ಕರಿ ಅವನನ್ನ!" ಆಟೋ
ಕೂಗಾಡಿದ. ಅವನ
ಹಿಂದೆ ಕ್ಯೂ ನಿಂತಿದ್ದ ಮನುಷ್ಯ ಕಣ್ಣು ಗುಡ್ಡೆ
ಮೇಲೆ ಮಾಡಿದ. "ನೋಡಿ
ಸರ್, ಇಗೊಳ್ಳಿ ಮೂವತ್ತು ಸೆಂಟ್ ನಾನು ಕೊಡುತ್ತೇನೆ. ಹೋಗಲಿ ಬಿಡಿ" ಎಂದ.
"ನೀವು
ಮಧ್ಯ ಬಾಯಿ ಹಾಕಬೇಡಿ. ಇದು ಮೂವತ್ತು ಸೆಂಟ್
ಪ್ರಶ್ನೆ ಅಲ್ಲ.
ಇದು ನಿಯಮದ ಪ್ರಶ್ನೆ. ಕರಿಯಪ್ಪ , ನಿನ್ನ
ಮ್ಯಾನೇಜರ್ ಯಾರು!"
ಎಂದು ಆಟೋ ಅಬ್ಬರಿಸಿದ.
ಆ ಹುಡುಗನ ವಯಸ್ಸಿನ ಒಂದು ಹುಡುಗಿ ಬಂದಳು.
"ಏನಾಯಿತು ಟಾಮ್?" ಎಂದು ಕೇಳಿದಳು.
ಹುಡುಗ ಮಾತಾಡುವ ಮುನ್ನವೇ ಆಟೋ ಎಲ್ಲವನ್ನೂ ಹೇಳಿ
"ನನಗೆ ಮೂವತ್ತು ಸೆಂಟ್
ಹೆಚ್ಚು ಚಾರ್ಜ್ ಮಾಡಿದ್ದೀರಿ! ಮತ್ತೆ ಹೊಸದಾಗಿ ಬಿಲ್
ಮಾಡಿ!" ಎಂದು ಕೂಗಾಡಿದ.
ಮ್ಯಾನೇಜರ್ ಹುಡುಗಿ
"ಸಾರಿ ಸರ್, ನಾವು
ಬಿಲ್ ಬದಲಾಯಿಸಲು ಆಗದು,
ಬೇಕಾದರೆ ನಿಮಗೆ
ಇನ್ನೊಂದು ಯಾರ್ಡ್
ಹಗ್ಗ ಕೊಡುತ್ತೇನೆ, ಆಗಬಹುದಾ!"
ಆಟೋ ಎಲ್ಲರಿಗೂ ಬೈದು
ತನ್ನ ಖರೀದಿಯನ್ನು ಕೈಯಲ್ಲಿ ಹಿಡಿದು ಪಿಟಿಪಿಟಿ ಬೈಯ್ಯುತ್ತಾ ಹೊರಟ. ಯಾವ ಕೆಲಸಕ್ಕೆ ಎಷ್ಟು ಬೇಕೋ ಅಷ್ಟೇ
ಉಪಯೋಗಿಸುವುದು ಅವನ
ತರಬೇತಿ ಮತ್ತು ಮನೋಭಾವ.
ದುಂದು ಮಾಡುವುದನ್ನು ಅವನು
ಖಂಡಿಸುತ್ತಾನೆ. ಅವನಿಗೆ
ಇಂದಿನ ಯುವಪೀಳಿಗೆಯ ಮೇಲೆ
ಒಂದಿಷ್ಟೂ ಭರವಸೆ
ಇಲ್ಲ.
ಅವನು ಮನೆಗೆ ವಾಪಸ್
ಬಂದು ಗರಾಜಿನಲ್ಲಿ ಕಾರನ್ನು ಜಾಗರೂಕತೆಯಿಂದ ಪಾರ್ಕ್
ಮಾಡಿ ಮನೆಯೊಳಗೆ ಬರುತ್ತಾನೆ. ತಾನು ತಂದ ಹಗ್ಗವನ್ನು ಟೇಬಲ್ ಮೇಲಿಟ್ಟು ಅವನು.
ಕತ್ತು ಮೇಲೆತ್ತಿ ತಾರಸಿಯ
ಕಡೆಗೆ ನೋಡುತ್ತಾನೆ. "ಐದು
ಗಜ ಸಾಕು" ಎಂದು
ಗಟ್ಟಿಯಾಗಿ ಹೇಳಿಕೊಳ್ಳುತ್ತಾನೆ.
ಹಿಂದಿನ ದಿನ ನಡೆದ
ಘಟನೆ ಅವನಿಗೆ ನೆನಪಾಗುತ್ತದೆ. ಅವನು ನಲವತ್ತು ವರ್ಷ
ಕೆಲಸ ಮಾಡಿದ ಕಂಪನಿಯಿಂದ ಅವನು ನೆನ್ನೆ ನಿವೃತ್ತಿ ಹೊಂದಿದ್ದಾನೆ. ಅವನಿಗಾಗಿ ಅವನ ಹೊಸ ಮ್ಯಾನೇಜರ್ ಒಂದು ಬೀಳ್ಕೊಡುಗೆ ಪಾರ್ಟಿ
ಇಟ್ಟುಕೊಂಡಿದ್ದ. ಇವನು
ಬರುವ ಮುಂಚೆ ಎಲ್ಲರೂ
ಸೇರಿದ್ದರು. ಇವನ
ಚೆಹರೆಯನ್ನು ಮುದ್ರಿಸಿದ ಕೇಕ್ ಟೇಬಲ್ ಮೇಲೆ
ಕೂತಿತ್ತು. ಎಲ್ಲರೂ
ಇವನು ಬರುವುದನ್ನೇ ಎದುರು
ನೋಡುತ್ತಿದ್ದರು.
ಮ್ಯಾನೇಜರ್ "ಆಟೋ
ನಮ್ಮ ನಿಷ್ಟಾವಂತ ಕೆಲಸಗಾರ. ಅವರು ನಿವೃತ್ತಿ ಹೊಂದುತ್ತಿರುವುದು ಬಹಳ ನೋವಿನ
ಸಂಗತಿ" ಎಂದು ಆಟೋ
ಕೆಲಸವನ್ನು ಹೊಗಳಿ
"ನೀವು ಒಂದೆರಡು ಮಾತು
ಹೇಳಿ" ಎಂದ.
"ನಿವೃತ್ತಿ ಹೊಂದಬೇಕೆಂದು ನಾನೆಲ್ಲಿ ಕೇಳಿದೆ! ನನ್ನ ಕೆಲಸ
ಬದಲಾಯಿಸಿ ಕೆಳಕ್ಕೆ ತಳ್ಳಿದೆ. ನಂತರ
ನನ್ನ ಕೆಲಸದ ಅವಧಿ
ಕಡಿಮೆ ಮಾಡಿ ಸಂಬಳ
ಕಡಿತ ಮಾಡಿದೆ. ಈಗ
ಏನೋ ಎಂದೂ ಇಲ್ಲದ
ಹೊಗಳಿಕೆ ಹಾಡುತ್ತಿದ್ದೀಯ!" ಎಂದು ಆಟೋ
ಸಿಡುಕಿದ.
"ನೀವು
ಹಾಗೆ ಅಪಾರ್ಥ ಮಾಡಿಕೊಳ್ಳುವುದು ಖೇದನೀಯ."
"ಇನ್ನು
ಹೇಗೆ ಅರ್ಥ ಮಾಡಿಕೋಬೇಕು, ಮಣ್ಣು!" ಎಂದು ಆಟೋ
ಅಲ್ಲಿ ನಿಲ್ಲದೆ ಹೊರಟುಬಿಟ್ಟ.
ಮ್ಯಾನೇಜರ್ "ಕೇಕ್
ಯಾರಿಗೆ ಬೇಕು!" ಎಂದು
ಕೂಗಿದ್ದು ಮತ್ತು
ಉಳಿದವರು ಹೋ
ಎಂದು
ನಗುತ್ತಾ ಕೇಕ್
ತಿನ್ನಲು ಮುಂದಾಗಿದ್ದು ಅವನಿಗೆ ಕೇಳಿಸಿತು.
ಇದೆಲ್ಲವನ್ನೂ ನೆನೆದು
ಅವನು ನೋವಿನಿಂದ ಮನೆಯ
ಮುಂಬಾಗಿಲಿನ ಹತ್ತಿರ
ಇದ್ದ ಕೋಟ್ ಹ್ಯಾಂಗರ್ ಕಡೆಗೆ ನೋಡಿದ. ಪಿಂಕ್
ಬಣ್ಣದ ಕೋಟ್ ಅವನನ್ನು ನೋಡಿ ಮೆಲ್ಲನೆ ನಕ್ಕಂತೆ ಅವನಿಗೆ ಭಾಸವಾಯಿತು. ಒಂದೇ
ಕ್ಷಣದಲ್ಲಿ ಅವನ
ಕಣ್ಣುಗಳು ಮಂಜಾದವು. ಅವನು ಮತ್ತೊಮ್ಮೆ ದೃಢ
ನಿರ್ಧಾರದಿಂದ ತಾರಸಿಯ
ಕಡೆಗೆ ನೋಡಿದ.
***
ಅವನು ಇಡೀ ರಸ್ತೆಯ ಅನಧಿಕೃತ ರಾಜ ಎನ್ನುವ ಹಾಗಿದ್ದಾನೆ. ಅವನು ದಬಾಯಿಸದ ಜನರಿಲ್ಲ. ಆಕ್ಷೇಪಿಸದ ವಿಷಯವಿಲ್ಲ. ಬೆಳಗ್ಗೆ ಅವನ ದಿನಪತ್ರಿಕೆಯನ್ನು ಮನೆಯ ಮುಂದೆ ಎಸೆದು ಹೋಗುವ ಹುಡುಗನನ್ನು ಬೈದುಕೊಳ್ಳುವುದರಿಂದ ಅವನ ದಿವಸ ಪ್ರಾರಂಭವಾಗುತ್ತದೆ. ಹುಡುಗ ದಿನಪತ್ರಿಕೆಯನ್ನು ಲೇಟಾಗಿ ಹಾಕುತ್ತಾನೆ ಎಂಬುದು ಒಂದು ದೂರಾದರೆ ಅವನು ಎಸೆದ ದಿನಪತ್ರಿಕೆ ಬೆಕ್ಕಿನ ಕಕ್ಕದ ಮೇಲೆ ಬೀಳುತ್ತದೆ ಎಂಬದು ಇನ್ನೊಂದು. ಈ ಬೆಕ್ಕಿನ ವಿಷಯದಲ್ಲೂ ಕೂಡಾ ಅವನಿಗೆ ದೂರಿದೆ. ಅದು ಸದಾ ಅವನ ಗರಾಜ್ ಮುಂದೆ ಕೂಡುವುದು ಯಾಕೆ? ಅವನನ್ನು ದುರುಗುಟ್ಟಿಕೊಂಡು ನೋಡುವುದು ಯಾಕೆ? ಅದೊಂದು ಪುಂಡು ಬೆಕ್ಕು. ಯಾರೂ ಸಾಕಿದ್ದಲ್ಲ. ಬೂದಿ ಬಣ್ಣದ ಮೈ ಮೇಲೆ ಕಪ್ಪು ಬಣ್ಣದ ಗೆರೆಗಳು. ಸುಮ್ಮನೆ ಒಂದು ಕಡೆ ಬಿದ್ದಿರುತ್ತದೆ. ಯಾವಾಗ ಎಲ್ಲಿಂದ ಆಹಾರ ಸಂಪಾದಿಸಿಕೊಂಡು ತಿನ್ನುತ್ತದೋ. ಆದರೆ ಟಾಯ್ಲೆಟ್ ಮಾಡಬೇಕಾದರೆ ಇವನ ಮನೆಯ ಮುಂದಿನ ಹುಲ್ಲೇ ಆಗಬೇಕು.
ಅವನ ಬೀದಿಯಲ್ಲೇ ವಾಸ ಮಾಡುವ ಮಾರ್ಕ್ ಇನ್ನೊಬ್ಬ ವಿಚಿತ್ರ ವ್ಯಕ್ತಿ. ದಿನ ಬೆಳಗಾದರೆ ಚಡ್ಡಿ ಹಾಕಿಕೊಂಡು ಬೀದಿಯ ತುಂಬಾ ಸುತ್ತಾಡುವುದು ಅವನ ಕೆಲಸ. ಡಾಕ್ಟರ್ ವ್ಯಾಯಾಮ ಹೇಳಿದ್ದಾರೆ ಎಂದು ಅದೇನು ಕೈ ಕಾಲು ಅಲ್ಲಾಡಿಸುವುದು, ಹೆಜ್ಜೆಯನ್ನು ಎತ್ತೆತ್ತಿ ಹಾಕುತ್ತಾ ಓಡಾಡುವುದು! ಕಂಡವರನ್ನೆಲ್ಲಾ ಮಾತಾಡಿಸಲು ನಿಲ್ಲುವುದು! ವ್ಯಾಯಾಮ ಏನು ಬಂತು, ಮಣ್ಣು! ಹೇಗೆ ಕರಗಬೇಕು ಮೈ! ಅವನ ಜೊತೆಗೆ ವಾಸವಾಗಿರುವ ಗೆಳತಿಗೆ ಆಟೋ ಇದರ ಬಗ್ಗೆ ದೂರು ಕೊಟ್ಟಾಗಿದೆ.
ಅವರ ಬೀದಿಯಲ್ಲಿ ರೀಸೈಕ್ಲಿಂಗ್ ಮಾಡಲು ಮೂರು ದೊಡ್ಡ ಅಲ್ಯೂಮಿನಂ ಡಬ್ಬಿಗಳನ್ನು ಇಟ್ಟಿದ್ದಾರೆ. ಒಂದರಲ್ಲಿ ಬಾಟಲ್ ಇತ್ಯಾದಿ ಪ್ಲಾಸ್ಟಿಕ್ ವಸ್ತುಗಳನ್ನು ಹಾಕಬೇಕು. ಇನ್ನೊಂದರಲ್ಲಿ ಕ್ಯಾನ್ ಮುಂತಾದ ಲೋಹದ ವಸ್ತುಗಳು. ಮತ್ತೊಂದರಲ್ಲಿ ದಿನಪತ್ರಿಕೆ ಇತ್ಯಾದಿ ಕಾಗದ. ಆದರೆ ಈ ಜನರಿಗೆ ತಲೆಯಲ್ಲಿ ಮಿದುಳು ಅನ್ನೋದು ಇದ್ದರೆ ತಾನೇ! ಎಲ್ಲೆಂದರಲ್ಲಿ ಯಾವುದೇ ವಸ್ತುವನ್ನು ಎಸೆದು ಹೋಗುತ್ತಾರೆ! ಪ್ರತಿದಿನ ಆಟೋ ಹೋಗಿ ಪರೀಕ್ಷಿಸುತ್ತಾನೆ. ಬಾಟಲಿಯನ್ನು ದಿನಪತ್ರಿಕೆಗಳ ಡಬ್ಬಿಯಲ್ಲಿ ಎಸೆದು ಹೋದವರನ್ನು ಶಪಿಸಿ ಅದನ್ನು ಎತ್ತಿ ಸರಿಯಾದ ಡಬ್ಬಿಗೆ ಹಾಕುತ್ತಾನೆ. ಇದು ಅವನ ದೈನಂದಿನ ಕೆಲಸ. ಮಾರ್ಕ್ ಮುಂತಾದ ಎಲ್ಲರಿಗೂ ಇದು ಗೊತ್ತು. ಅವರು ತಪ್ಪು ಮಾಡುತ್ತಾರೆಂದು ಇವನು ತಿದ್ದುತ್ತಾನೋ ಅಥವಾ ಇವನು ಹೇಗೂ ತಿದ್ದುತ್ತಾನೆ ಎಂದು ಅವರು ತಪ್ಪು ಮಾಡುತ್ತಾರೋ ಯಾರಿಗೆ ಗೊತ್ತು!
ಅವರ ಬೀದಿಯಲ್ಲಿ ಟ್ರಕ್ ಇತ್ಯಾದಿಗಳನ್ನು ಎರಡೂ ದಿಕ್ಕುಗಳಲ್ಲಿ ಓಡಿಸುವ ಹಾಗಿಲ್ಲ. ಬೀದಿಯಲ್ಲಿ ವಾಸಿಸುವ ಜನ ತಮ್ಮ ಕಾರಿನಲ್ಲಿ ಹೋಗುವಾಗ ಬೀದಿಯ ಕೊನೆಯಲ್ಲಿರುವ ಗೇಟ್ ತೆಗೆದು ನಂತರ ಮುಚ್ಚಿ ಸಾಗಬೇಕು. ಆದರೆ ಇದಕ್ಕೆಲ್ಲ ಅವರಿಗೆ ಪುರುಸೊತ್ತು ಎಲ್ಲಿದೆ! ಗೇಟ್ ತೆಗೆದು ಹೋಗಿಬಿಡುತ್ತಾರೆ ನಾಲಾಯಕ್ಕುಗಳು! ಪೋಸ್ಟ್ ಹಂಚಲು ಬರುವ ಕೇಟ್ ಬೀದಿಯ ಪ್ರದಕ್ಷಿಣೆ ಹಾಕಿಕೊಂಡು ಬರಲು ಸೋಮಾರಿತನ ಪಟ್ಟು ವಿರುದ್ಧ ದಿಕ್ಕಿನಲ್ಲೇ ಟ್ರಕ್ ಓಡಿಸಿಕೊಂಡುಬಂದು ರಾಜಾರೋಷವಾಗಿ ಇವನ ಮನೆಯ ಮುಂದೆಯೇ ನಿಲ್ಲಿಸಿ ಆಂಚೆ ಡಬ್ಬಿಗಳಲ್ಲಿ ಕಾಗದಗಳನ್ನು ಹಾಕಿ ಹೋಗುತ್ತಾಳೆ. ಇವನು ಛಲ ಬಿಡದೆ ಅವಳು ಕಂಡಾಗಲೆಲ್ಲ ಅವಳೊಂದಿಗೆ ಜಗಳ ಆಡುತ್ತಾನೆ. ಅವಳಿಗೆ ಅದು ಈಗ ರೂಢಿ ಯಾಗಿಹೋಗಿದೆ. ಇವನು ಏರುದನಿಯಲ್ಲಿ ಕೂಗಾಡಿದರೂ ಅವಳು ಏನೋ ಮಣಮಣ ಬಾಯಲ್ಲೇ ಪಠಿಸಿ ಹೊರಟುಬಿಡುತ್ತಾಳೆ.
ನೆನ್ನೆ ಇವನ ಮನೆಯ ಮಂದಿರುವ ಮನೆಗೆ ಹೊಸಬರು ಬಂದಿದ್ದಾರೆ. ಏನು ಮನುಷ್ಯನೋ, ಅವನಿಗೆ ಕಾರ್ ಪಾರ್ಕ್ ಮಾಡಲು ಬಾರದು. ಇವನು ಗಮನಿಸುತ್ತಲೇ ಇದ್ದಾನೆ. ಅವನು ಬೀದಿಯಲ್ಲಿ ರಸ್ತೆಯ ಒಂದು ಪಕ್ಕದಲ್ಲಿ ಕಾರ್ ಪಾರ್ಕ್ ಮಾಡಲು ಅದೇನು ಸಾಹಸ ಪಡುತ್ತಿದ್ದಾನೆ! ಕಾರ್ ಮುಂದೆ ತೊಗೊಂಡು ಹೋಗುತ್ತಾನೆ. ಅದನ್ನು ಹಿಂದೆ ತರುವಾಗ ಇನ್ನೇನು ಯಾರನ್ನಾದರೂ ಬಲಿ ತೆಗೆದುಕೊಂಡು ಬಿಡುತ್ತಾನೆ ಎನ್ನುವ ಹಾಗೆ ಬರುತ್ತಾನೆ. ಇದು ಈಗಾಗಲೇ ಒಂದೆರಡು ಸಲ ಪುನರಾವರ್ತನೆ ಆಗಿದೆ. ಕೊನೆಗೆ ಆಟೋ ತಡೆಯಲಾರದೆ ಅವನ ಕಾರಿಗೆ ಗುದ್ದಿ ನಿಲ್ಲಿಸುತ್ತಾನೆ.
"ಇಳೀರಿ ಕೆಳಗೆ!"
ಹೊಸ ನೆರೆಯಾತ ನಲವತ್ತರ ವಯಸ್ಸಿನವನು. ಅವನ ಹೆಂಡತಿ ಅವನ ಪಕ್ಕದಲ್ಲಿ ಕೂತಿದ್ದಾಳೆ. ಇವನನ್ನು ನೋಡಿ ಅವಳು ಮುಗುಳ್ನಗೆ ನಗುತ್ತಾಳೆ. ನೆರೆಯಾತ ಏನು ಮಾಡಬೇಕೆಂದು ತೋಚದೇ ಕಣ್ಣು ಪಿಳಿಪಿಳಿ ಬಿಡುತ್ತಿದ್ದಾನೆ.
"ಹೇಳಿದ್ದು ಕೆಳಲಿಲ್ಲವಾ! ಇಬ್ಬರೂ ಕೆಳಗೆ ಇಳೀರಿ!" ಎಂದು ಆಟೋ ಅಬ್ಬರಿಸುತ್ತಾನೆ. ನೆರೆಯವನು ಮಾತಿಲ್ಲದೆ ಕೆಳಕ್ಕೆ ಇಳಿಯುತ್ತಾನೆ. ಅವನ ಹೆಂಡತಿಯೂ ಇಳಿದು ಬಾಗಿಲು ಮುಚ್ಚಿ "ಏನು?" ಎಂಬಂತೆ ನೋಡುತ್ತಾಳೆ.
"ಕೊಡಿ ಚಾಬಿ!"
ನೆರೆಯವನು ಮರುಮಾತಿಲ್ಲದೆ ಪಾಲಿಸುತ್ತಾನೆ.
ಆಟೋ ಬಾಯಲ್ಲೇ ಶಾಪ ಹಾಕುತ್ತಾ ಕಾರಿನ ಒಳಗೆ ಕೂತು ಕೀಲಿಯ ಕೈಯನ್ನು ರಂಧ್ರದೊಳಗೆ ಸೇರಿಸಿ ಯಂತ್ರವನ್ನು ಸೂಕ್ಷ್ಮವಾಗಿ ನೋಡುತ್ತಾನೆ. ಹಿಂದೆ ಯಾರೋ ನಕ್ಕಿದ್ದು ಕೇಳುತ್ತದೆ. ಅವನು ಹಿಂದಕ್ಕೆ ತಿರುಗುತ್ತಾನೆ. ಇಬ್ಬರು ಹೆಣ್ಣು ಮಕ್ಕಳು. ಒಂದು ಆರು ವರ್ಷದ್ದು. ಇನ್ನೊಂದು ಹತ್ತು ವರ್ಷದ್ದು. ಇವನ ಕಡೆ ನೋಡಿ ಆರು ವರ್ಷದ ಮಗು ನಗುತ್ತದೆ. ಅವಳ ಕೈಯಲ್ಲಿ ಒಂದು. ಬೊಂಬೆ ಇದೆ.
ಇವನು ಅವರನ್ನು ಕಡೆಗಣಿಸಿ ಕಾರನ್ನು ಮುಂದಕ್ಕೆ ಡ್ರೈವ್ ಮಾಡಿ ಒಂದು ಕಡೆ ನೀಟಾಗಿ ಕಟ್ ಮಾಡಿ ಗಾಡಿಯನ್ನು ಹಿಂದಕ್ಕೆ ತಂದು ನೆರೆಮನೆಯ ಮುಂದೆ ಚಾಕಚಕ್ಯತೆಯಿಂದ ನಿಲ್ಲಿಸುತ್ತಾನೆ. ನೆರೆಯಾತ ಮತ್ತು ಅವನ ಹೆಂಡತಿ ಇಬ್ಬರೂ "ಧನ್ಯವಾದಗಳು!" ಎಂದು ಮುಗುಳ್ನಗುತ್ತಾರೆ. ಇವನು ಮರುಮಾತಾಡದೆ ತನ್ನ ಮನೆಯ ಕಡೆಗೆ ಹೊರಡುತ್ತಾನೆ.
ಮನೆಗೆ ಬಂದು ಅವನು ತಾನು ಮರುದಿನ ಮಾಡಬೇಕಾದ ಮುಖ್ಯ ಕೆಲಸಕ್ಕೆ ತಯಾರಿ ನಡೆಸುತ್ತಾನೆ. ಈಗಾಗಲೇ ಅವನು ಟೆಲಿಫೋನ್ ಕಂಪನಿಗೆ ಕನೆಕ್ಷನ್ ಕತ್ತರಿಸಲು ಫೋನ್ ಮಾಡಿ ಆಗಿದೆ. ಹಾಗೇ ಗ್ಯಾಸ್ ಕಂಪನಿಗೆ.
ಇಂದು ಅವನು ಅಂಗಡಿಯಿಂದ ಹಗ್ಗವನ್ನು ಕೊಂಡುತಂದು ಛಾವಣಿಯ ಕಡೆಗೆ ನೋಡುತ್ತಾ ಒಂದು ಕುರ್ಚಿಯನ್ನು ಕೋಣೆಯ ನಡುವಿಗೆ ಎಳೆದುತಂದು ಅದರ ಮೇಲೆ ಹತ್ತುತ್ತಾನೆ. ಕೈಯಲ್ಲಿರುವ ಡ್ರಿಲ್ಲಿಂಗ್ ಯಂತ್ರದಿಂದ ಮರದ ಛಾವಣಿಯಲ್ಲಿ ತೂತು ಕೊರೆದು ಹಗ್ಗ ಹಾಕಲು ಬೇಕಾದ ಕೊಕ್ಕೆಯನ್ನು ಛಾವಣಿಯಲ್ಲಿ ಸೇರಿಸುತ್ತಾನೆ.
***
ಕುಣಿಕೆಯನ್ನು ಕುತ್ತಿಗೆಗೆ ಹಾಕಿಕೊಳ್ಳುವಾಗ ಅವನು ನಿರ್ವಿಕಾರ ಭಾವವನ್ನು ಹೊಂದಿದ್ದಾನೆ. ಕೆಲಸ ಪೂರೈಸಬೇಕೆಂಬ ಛಲ ಮಾತ್ರ ಅವನಲ್ಲಿದೆ. ಅವನು ನಿಂತಿದ್ದ ಕುರ್ಚಿಯನ್ನು ಒದ್ದಾಗ ಕುಣಿಕೆ ಅವನ ಕತ್ತಿನ ಸುತ್ತ ಬಿಗಿಯತೊಡಗುತ್ತದೆ. ಅವನಿಗೆ ಒಂದು ಕ್ಷಣ ತನ್ನ ಬದುಕು ಕಣ್ಣಮುಂದೆ ಹಾದು ಹೋದಂತೆ ಭಾಸವಾಗುತ್ತದೆ.
ಇಪ್ಪತ್ತರ ತರುಣನೊಬ್ಬ ವೈದ್ಯರ ತಪಾಸಣೆಗೆಂದು ಬಂದಿದ್ದಾನೆ. ಬಿಳಿ ಕೋಟ್ ತೊಟ್ಟ ವೈದ್ಯ ಅವನಿಗೆ ಹೇಳುತ್ತಿದ್ದಾರೆ. "ನಿನಗೆ ಹೈಪರ್ ಟ್ರೋಫಿಕ್ ಕಾರ್ಡಿಯೋ ಮತೋಪತಿ ಎಂಬ ಸಮಸ್ಯೆ ಇದೆ"
"ಗೊತ್ತು. ನನ್ನ ಅಪ್ಪನಿಗೂ ಇತ್ತು"
"ಬದುಕಿರಲು ಏನೂ ಸಮಸ್ಯೆ ಇಲ್ಲ. ಆದರೆ ಸೇನೆಗೆ ಸೇರುವ ಆಸೆ ಬಿಟ್ಟುಬಿಡು."
ತರುಣನ ಆಶಾಗೋಪುರ ಕೆಳಗೆ ಉರುಳುತ್ತದೆ. ಅವನು ಮೌನವಾಗಿ ಅಲ್ಲಿಂದ ಹೊರಟು ತನ್ನ ಊರಿಗೆ ಮರಳಲು ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾನೆ.
ಮಧ್ಯಾಹ್ನದ ಸಮಯ. ಹೆಚ್ಚು ಜನಸಂದಣಿ ಇಲ್ಲ.
ಎದುರುಗಡೆಯ ಪ್ಲಾಟ್ಫಾರ್ಮ್ ಮೇಲೆ ಒಬ್ಬಳು ಯುವತಿ ರೈಲು ಹಿಡಿಯಲು ಓಡುತ್ತಿದ್ದಾಳೆ. ಅವಳ ಕೈಯಿಂದ ಒಂದು ಪುಸ್ತಕ ಜಾರಿ ನೆಲದ ಮೇಲೆ ಬೀಳುತ್ತದೆ. ಯುವಕ ಅಲ್ಲಿಂದಲೇ "ನಿಮ್ಮ ಪುಸ್ತಕ, ನಿಮ್ಮ ಪುಸ್ತಕ!" ಎಂದು ಕೂಗುತ್ತಾನೆ.
ಅವಳಿಗೆ ಕೇಳುತ್ತಿಲ್ಲ. ಯುವಕ ಓಡುತ್ತಾ ಹೋಗಿ ಎದುರುಗಡೆಯ ಪ್ಲಾಟ್ಫಾರ್ಮ್ ಸೇರಿ ಪುಸ್ತಕವನ್ನು ಕೈಗೆ ಬಾಚಿಕೊಂಡು ಯುವತಿಯು ಕೂತಿದ್ದ ಗಾಡಿಯನ್ನು ಹಿಡಿಯುತ್ತಾನೆ. ಅದು ವಿರುದ್ಧ ದಿಕ್ಕಿನಲ್ಲಿ ಹೋಗುವ ಗಾಡಿ ಎಂಬ ಪರಿವೆಯೂ ಅವನಿಗೆ ಇಲ್ಲ.
ಯುವತಿಯನ್ನು ಹುಡುಕುತ್ತಾ ಅವನು ಕಂಪಾರ್ಟ್ಮೆಂಟ್ಗಳಲ್ಲಿ ಸಂಚರಿಸುತ್ತಾನೆ. ಕೊನೆಗೂ ಅವಳು ಕಣ್ಣಿಗೆ ಬೀಳುತ್ತಾಳೆ. ಅವಳು ಕಿಟಕಿಯ ಪಕ್ಕದ ಸೀಟ್ ಹಿಡಿದು ಕೂತಿದ್ದಾಳೆ. ಅಕ್ಕಪಕ್ಕದ ಸೀಟುಗಳು ಖಾಲಿ ಇವೆ. ಇವನು ಅವಳ ಮುಂದೆ ಹೋಗಿ ನಿಲ್ಲುತ್ತಾನೆ. ಅವಳು ಇವನ ಕಡೆಗೆ ನೋಡಿ ಮುಗುಳ್ನಗೆ ನಗುತ್ತಾಳೆ. ಇವನು ನಿಂತೇ ಇದ್ದಾನೆ. ಅವಳು ಒಂದು ಕ್ಷಣ ಅಪ್ರತಿಭಳಾಗುತ್ತಾಳೆ. ಅವನ ಕೈಯಲ್ಲಿರುವ ಪುಸ್ತಕ ನೋಡಿ "ಅದು ನನ್ನ ಪುಸ್ತಕವೇ?!" ಎಂದು ಆಶ್ಚರ್ಯದಿಂದ ಕೇಳುತ್ತಾಳೆ.
"ಹೌದು, ನೀವು ಬೀಳಿಸಿಕೊಂಡಿರಿ" ಎಂದು ಅವನು ಕೈಚಾಚುತ್ತಾನೆ.
ಅವಳು ಪುಸ್ತಕವನ್ನು ಪಡೆದುಕೊಂಡು "ಧನ್ಯವಾದ! ಕೂತುಕೊಳ್ಳಿ" ಎನ್ನುತ್ತಾಳೆ.
"ನೀವು ಎಲ್ಲಿಗೆ?" ಎನ್ನುತ್ತಾಳೆ.
"ನನಗೆ ಸೇನೆಯಲ್ಲಿ ಕೆಲಸ, ಕೆಲಸಕ್ಕೆ ರಿಪೋರ್ಟ್ ಮಾಡಿಕೊಳ್ಳಲು ಹೋಗುತ್ತಿದ್ದೇನೆ" ಎಂದು ಅವನು ಸುಳ್ಳು ಹೇಳುತ್ತಾನೆ.
"ಓಹ್! ನಾನು ನನ್ನ ತಂದೆಯನ್ನು ನೋಡಲು ಹೋಗುತ್ತಿದ್ದೇನೆ. ಪ್ರತಿ ಗುರುವಾರ ಹೋಗುತ್ತೇನೆ. ನನ್ನ ಹೆಸರು ಸೋನ್ಯಾ."
ಅವಳು ಕೈ ಕುಲುಕಲು ಕೈ ಮುಂದೆ ಮಾಡುತ್ತಾಳೆ. ಇವನು ಕೈಕುಲುಕಿ "ನನ್ನ ಹೆಸರು ಆಟೋ. ಓ ಟೀ ಟೀ ಓ, ಆಟೋ" ಎನ್ನುತ್ತಾನೆ.
ಅಷ್ಟರಲ್ಲಿ ಟಿಕೆಟ್ ಕಲೆಕ್ಟರ್ ಆಗಮನವಾಗುತ್ತದೆ. ಯುವಕನ ಹತ್ತಿರ ಟಿಕೆಟ್ ಇಲ್ಲ. "ಈ ಟ್ರೈನ್ ಎಲ್ಲಿಗೆ ಹೋಗುತ್ತದೆ?" ಎಂದು ಕೇಳುತ್ತಾನೆ. ತನ್ನ ಊರಿಗೆ ವಿರುದ್ಧ ದಿಕ್ಕಿನಲ್ಲಿ ಪ್ರಯಾಣ ಮಾಡುತ್ತಿದ್ದೇನೆ ಎಂಬ ಅರಿವು ಅವನಿಗೆ ಮೂಡಿ "ನಾನು ಮುಂದಿನ ಸ್ಟೇಷನ್ನಿನಲ್ಲಿ ಇಳಿದುಕೊಳ್ಳುತ್ತೇನೆ. ಟಿಕೆಟ್ ಹಣ ಎಷ್ಟು?" ಎನ್ನುತ್ತಾನೆ.
ಒಂದು ಡಾಲರ್ ಚಿಲ್ಲರೆ.
ಇವನು ವಾಲೆಟ್ ತೆಗೆದು ಅಲ್ಲಿರುವ ಪುಡಿಗಾಸು ಎಣಿಸುತ್ತಾನೆ.
ಸೋನ್ಯಾ
"ತಾಳಿ, ನನ್ನ ಹತ್ತಿರ ಚಿಲ್ಲರೆ ಇದೆ!" ಎಂದು ಕೊಡಲು ಮುಂದಾಗುತ್ತಾಳೆ.
ಏನೋ ಸದ್ದಾಗುತ್ತಿದೆ. ಅದೇನು ರೈಲಿನ ಸದ್ದೇ? ...
ಇಲ್ಲ, ಯಾರೋ ಬಾಗಿಲು ಬಡಿಯುತ್ತಿದ್ದಾರೆ. ಯಾರದು, ಇಷ್ಟು ಹೊತ್ತಿನಲ್ಲಿ!
ಛಾವಣಿಯಲ್ಲಿ ಆಟೋ ಡ್ರಿಲ್ ಮಾಡಿ ಸೇರಿಸಿದ್ದ ಕೊಕ್ಕೆ ಅವನ ದೇಹದ ಭಾರವನ್ನು ಹೊರಲಾರದೆ ಕಿತ್ತುಕೊಂಡು ಬಂತು. ಅವನು ಕೆಳಗೆ ಬಿದ್ದ. ಯಾರೋ ಒಂದೇ ಸಮನೆ ಬಾಗಿಲು ತಟ್ಟುತ್ತಿದ್ದಾರೆ.
ಅವನು ಮೇಲೆದ್ದು ಕುತ್ತಿಗೆಯಲ್ಲಿದ್ದ ಹಗ್ಗವನ್ನು ತೆಗೆದು ಛಾವಣಿಯಲ್ಲಿ ಕಾಣುತ್ತಿರುವ ತೂತನ್ನು ಪೆಚ್ಚಾಗಿ ನೋಡುತ್ತಾನೆ. ಸಾವರಿಸಿಕೊಂಡು ಬಾಗಿಲು ತೆರೆದಾಗ ಅವನು ಕಾರ್ ಪಾರ್ಕ್ ಮಾಡಲು ಸಹಾಯ ಮಾಡಿದ ದಂಪತಿ ನಿಂತಿದ್ದಾರೆ.
"ಹೆಲೋ! ನಾನು ನಿಮ್ಮ ನೆರೆಯವಳು, ಮಾರಿಸಾಲ್. ಇವನು ನನ್ನ ಗಂಡ ಟಾಮಿ! ನಾನು ಸ್ಪೇನ್ ದೇಶದವಳು." ಎಂದು ಪರಿಚಯ ಹೇಳಿಕೊಂಡು ಕೈಯಲ್ಲಿದ್ದ ಡಬ್ಬಿಯನ್ನು ಮುಂದೆ ಹಿಡಿಯುತ್ತಾಳೆ.
ಆಟೋ ಮುಖ ಸಿಂಡರಿಸಿ "ಇದೇನು?" ಎನ್ನುತ್ತಾನೆ.
"ನಿಮಗೆ ತಿನ್ನಲು ಏನೋ ತಂದಿದ್ದೇನೆ. ಇದು ಸ್ಪೇನ್ ದೇಶದ ವಿಶೇಷ."
"ಮಾರಿಸಾಲ್ ಅಡುಗೆ ತುಂಬಾ ಚೆನ್ನಾಗಿ ಮಾಡುತ್ತಾಳೆ. ನಾನು ಅವಳು ಮಾಡಿದ್ದನ್ನೆಲ್ಲ ಪಟ್ಟಾಗಿ ಹೊಡೆಯುತ್ತೇನೆ" ಎಂದು ಅವಳ ಗಂಡ ನಗುತ್ತಾನೆ.
ಅನುಮಾನದಿಂದಲೇ ಡಬ್ಬಿಯನ್ನು ಕೈಯಲ್ಲಿ ಪಡೆದುಕೊಂಡು ಆಟೋ ಬಾಗಿಲು ಮುಚ್ಚುತ್ತಾನೆ.
ಮತ್ತೆ ಬಾಗಿಲು ಬಡಿಯುವ ಸದ್ದು.
"ಈಗ ಮತ್ತೆ ಏನು!?" ಎಂದು ಆಟೋ ಜೋರಾಗಿ ಕೇಳುತ್ತಾನೆ.
"ನಾವು ನೆರೆಯವರು ಒಬ್ಬರಿಗೊಬ್ಬರು ಆಗದಿದ್ದರೆ ಹೇಗೆ? ನಿಮ್ಮ ಹತ್ತಿರ ಆಲ್ವಿನ್ ರೆಂಚ್ ಇದ್ದರೆ ಸ್ವಲ್ಪ ಕೊಟ್ಟಿರಿ. ನಾಳೆ ವಾಪಸ್ ಕೊಡುತ್ತೇನೆ."
"ಯಾವ ರೆಂಚ್ ಬೇಕಿತ್ತು?"
"ಆಲ್ವಿನ್ ರೆಂಚ್!"
"ರೀ ಸ್ವಾಮೀ! ಅದು ಆಲೆನ್ ರೆಂಚ್. ಹೆಸರು ಹೇಳಲು ಕೂಡಾ ಬರೋದಿಲ್ಲವಲ್ಲ. ಅದನ್ನು ಉಪಯೋಗಿಸೋದು ಇನ್ನೆಷ್ಟು ಬರುತ್ತೋ!"
ನೆರೆಯವನು
"ನಮ್ಮ ಮನೆಯಲ್ಲಿ ಒಂದಿಷ್ಟು ರಿಪೇರಿ ಇತ್ತು" ಎಂದು ಹಲ್ಲು ಕಿರಿದ.
ಆಟೋ ತನ್ನ ಗರಾಜಿಗೆ ಅವರೊಂದಿಗೆ ಹೋಗಿ ತಾನು ನೀಟಾಗಿ ಜೋಡಿಸಿಟ್ಟ ಉಪಕರಣಗಳ ಮಧ್ಯದಿಂದ ಆಲೆನ್ ರೆಂಚ್ ತೆಗೆದು ಕೊಡುತ್ತಾ "ಹೇಳಿದ ಸಮಯಕ್ಕೆ ಸರಿಯಾಗಿ ವಾಪಸ್ ತಂದುಕೊಡಬೇಕು." ಎಂದು ಗದರಿದ.
ಮನೆಗೆ ಬಂದು ಬಾಗಿಲು ಮುಚ್ಚಿ ಮತ್ತೊಮ್ಮೆ ಛಾವಣಿಯಲ್ಲಿ ಉಂಟಾಗಿದ್ದ ತೂತನ್ನು ನೋಡಿದ. ಹಸಿವಾಗುತ್ತಿತ್ರು. ಮಾರಿಸಾಲ್ ಕೊಟ್ಟಿದ್ದ ಡಬ್ಬಿಯನ್ನು ಅನುಮಾನದಿಂದ ತೆಗೆದು ನೋಡಿದ. ಒಳಗಿದ್ದ ಅಪರಿಚಿತ ಭಕ್ಷ್ಯವನ್ನು ಮೂಸಿ ನೋಡಿದ. ಒಂದು ಚಮಚ ಬಾಯಲ್ಲಿ ಇಟ್ಟುಕೊಂಡು ರುಚಿ ನೋಡಿದ. "ಪರವಾಗಿಲ್ಲ!" ಎಂದು ತನಗೆ ತಾನೇ ಹೇಳಿಕೊಂಡ.
***
ಅವನು ಹಾಸಿಗೆಯ ಮೇಲೆ ಮಲಗಿ ಯೋಚಿಸುತ್ತಾನೆ. ಅಭ್ಯಾಸವೋ ಎಂಬಂತೆ ಅವನ ಕೈ ಬೆರಳುಗಳು ಪಕ್ಕಕ್ಕೆ ಸರಿದು ಪಕ್ಕದಲ್ಲಿ ಮಲಗಿದ ಸೋನ್ಯಾಳ ಕೈಬೆರಳುಗಳನ್ನು ಹುಡುಕುತ್ತವೆ. ಆದರೆ ಯಾವ ಕೈಬೆರಳುಗಳೂ ಅವನ ಕೈ ಬೆರಳುಗಳನ್ನು ಸ್ಪರ್ಶಿಸುವುದಿಲ್ಲ. ಅವನ ಕಣ್ಣಿನ ಮುಂದೆ ಇನ್ನಷ್ಟು ಚಿತ್ರಗಳು ಹಾದುಹೋಗುತ್ತವೆ.
ಇಪ್ಪತ್ತರ ಹರೆಯದ ತರುಣ ಮತ್ತೊಮ್ಮೆ ರೇಲ್ವೆ ಸ್ಟೇಷನ್ನಿನಲ್ಲಿ ಮೈಯೆಲ್ಲಾ ಕಣ್ಣಾಗಿ ಕಾಯುತ್ತಿದ್ದಾನೆ. ಕೊನೆಗೂ ಆ ಯುವತಿ ಕಣ್ಣಿಗೆ ಬೀಳುತ್ತಾಳೆ. ಅವಳು ರೈಲು ಹತ್ತುವ ಮುನ್ನವೇ ಇವನು ಓಡಿಹೋಗಿ ಅವಳ ಮುಂದೆ ನಿಂತು ಹೆಲೋ ಎನ್ನುತ್ತಾನೆ. ಅವಳ ಕಣ್ಣುಗಳು ಅರಳುತ್ತವೆ.
ಅವಳು
"ಓಹ್ ನೀವು ಸೇನೆಗೆ ಕೆಲಸಕ್ಕೆ ಹೊರಟಿರಬೇಕು!" ಎನ್ನುತ್ತಾಳೆ.
"ಇಲ್ಲ, ನಿಮ್ಮನ್ನು ಕಾಣಲೆಂದು ಬಂದೆ. ಪ್ರತಿ ಗುರುವಾರ ನೀವು ಈ ರೈಲು ಹಿಡಿಯುತ್ತೀರಿ ಅಂತ ಹೇಳಿದ್ದು ನೆನಪಿತ್ತು."
"ಓಹ್!"
"ನಿಮಗೆ ಹಣ ವಾಪಸ್ ಕೊಡಬೇಕಿತ್ತು" ಎಂದು ಅವನು ಕೈ ಮುಂದೆ ಮಾಡಿದ.
"ಅದರ ಬದಲು ನನ್ನನ್ನು ಒಂದು ಸಂಜೆ ಎಲ್ಲಿಗಾದರೂ ಊಟಕ್ಕೆ ಕರೆಯಬಹುದು, ಅಲ್ಲವೇ?" ಎಂದು
ಅವಳು ಅವನ ಕಣ್ಣಲ್ಲಿ ಕಣ್ಣಿಟ್ಟು ಕೇಳಿದಳು.
ಅವನು ಪೆಚ್ಚಾದರೂ ತೋರಗೊಡದೆ "ಅದಕ್ಕೇನು! ನಾವು ಮಾರಿಯೋಸ್ ರೆಸ್ತೊರಾಂಗೆ ಹೋಗಬಹುದು. ನಾಳೆ ಸಂಜೆ, ಆರು ಗಂಟೆಗೆ ಆಗಬಹುದಾ?" ಎಂದು ಅವನು ವಿಳಾಸ ಹೇಳಿದ.
ಮರುದಿನ ಸಂಜೆ ಅವಳು ರೆಸ್ಟೋರಾಂ ಎದುರಿಗೆ ಕಾಯುತ್ತಿದ್ದಳು. ಅವರು ಒಳಗೆ ಹೋದರು. ಅವನು ಅವಳನ್ನು ಎದುರಿನ ಕುರ್ಚಿಯಲ್ಲಿ ಕುಳ್ಳಿರಿಸಿ ತಾನೂ ಕೂತ. ಅವಳಿಗೆ ಮೆನು ಕಾರ್ಡ್ ಕೊಟ್ಟು ಆರ್ಡರ್ ಮಾಡಲು ಹೇಳಿದ.
ಅವಳು ಯಾವುದೋ ಮೆಕ್ಸಿಕನ್ ಊಟದ ಪದಾರ್ಥವನ್ನು ಆರಿಸಿಕೊಂಡು ಅದರ ಹೆಸರು ಹೇಳಿದಳು.
"ನಿಮಗೆ?"
ಎಂದು ಕೇಳಿದಳು.
"ನನಗೆ ಹಸಿವಿಲ್ಲ. ನಾನು ಏನೂ ಆರ್ಡರ್ ಮಾಡುವುದಿಲ್ಲ."
ಅವಳು ಸುಮ್ಮನಿದ್ದಳು. ಅವಳ ಆರ್ಡರ್ ಬಂತು. ಅವಳು ತಿನ್ನುತ್ತಾ ಹರಟೆ ಹೊಡೆದಳು. ನಡುವೆ "ನಿಮಗೆ ಏನೂ ಬೇಡವೇ? ಊಟ ಬಹಳ ರುಚಿಯಾಗಿದೆ" ಎಂದಳು.
"ಇಲ್ಲ,ಹಸಿವಿಲ್ಲ."
"ಅದು ಹೇಗೆ ಸಾಧ್ಯ?"
"ನಾನು ಮನೆಯಿಂದ ಹೊರಡುವಾಗ ಊಟ ಮಾಡಿಯೇ ಹೊರಟೆ."
ಅವಳು ಅವನನ್ನೇ ನೋಡುತ್ತಾ "ನೀವು ಮನೆಯಲ್ಲಿ ಯಾಕೆ ಊಟ ಮಾಡಿದಿರಿ?" ಎಂದಳು.
ಅವನು ತಡವರಿಸುತ್ತಾ "ನೋಡಿ, ನಾನು ನಿಮಗೆ ಸುಳ್ಳು ಹೇಳಿದೆ. ನಾನು ಸೇನೆಯಲ್ಲಿ ಕೆಲಸದಲ್ಲಿಲ್ಲ. ನನ್ನನ್ನು ಸೇರಿಸಿಕೊಳ್ಳಲಿಲ್ಲ. ನನ್ನ ಹೃದಯದ ಊತದ ಸಮಸ್ಯೆ ಇದೆ. ನನ್ನ ತಂದೆಗೂ ಈ ಸಮಸ್ಯೆ ಇತ್ತು. ಅವರು ಹೋದ ತಿಂಗಳು ತೀರಿಕೊಂಡರು. ನಾನು ಒಬ್ಬನೇ ಇದ್ದೇನೆ. ನಾನು ನಿಮಗೆ ಸುಳ್ಳು ಹೇಳಿದ್ದಕ್ಕೆ ಕ್ಷಮಿಸಿ." ಎಂದು ಅಲ್ಲಿಂದ ಎದ್ದು ಹೊರಟ.
ಅವಳು ಮೇಲೆದ್ದು "ಒಂದು ನಿಮಿಷ!" ಎಂದಳು. ಅವನು ಹಿಂದಕ್ಕೆ ತಿರುಗಿದಾಗ ಅವನನ್ನು ಬಿಗಿದಪ್ಪಿ ಚುಂಬಿಸಿದಳು. ಅಕ್ಕಪಕ್ಕದ ಟೇಬಲುಗಳಲ್ಲಿ ಕೂತವರು ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಸಿದರು.
ಅವನಿಗೆ ಎಚ್ಚರವಾಗುತ್ತದೆ. ಎದ್ದು ತನ್ನ ದೈನಂದಿನ ಕೆಲಸಗಳಲ್ಲಿ ತೊಡಗುತ್ತಾನೆ. ಚಳಿಗಾಲ ಪ್ರಾರಂಭವಾಗುತ್ತಿದೆ. ಬೆಕ್ಕು ಅವನ ಗರಾಜ್ ಎದುರು ಕೂತು ಅವನನ್ನು ನೋಡುತ್ತಿದೆ. ಅವನು ಅದರ ಕಡೆ ನೋಡಿ ಗುರ್ರ್ ಎಂದು ಹೆದರಿಸಿ "ನೀನು ಇಲ್ಲಿಂದ ಜಾಗ ಖಾಲಿ ಮಾಡು!" ಎಂದು ಹೆದರಿಸುತ್ತಾನೆ. ಆದರೆ ಬೆಕ್ಕು ಅಲ್ಲೇ ಕೂತು ಅವನನ್ನು ನಿರ್ಲಕ್ಷಿಸುತ್ತದೆ.
ತನ್ನ ಮಾಮೂಲು ಜಗಳಗಳನ್ನು ಮುಗಿಸಿ ಅವನು ಹಿಂತಿರುಗಿದಾಗ ಮಾರಿಸಾಲ್ ಅವನ ಮನೆಯ ಮುಂದೆ ನಿಂತಿದ್ದಾಳೆ. ಅವಳ ಕೈಯಲ್ಲಿ ಡಬ್ಬಿ ಇದೆ.
ಅವನು
"ಈಗ ಏನಾಯಿತು?" ಎಂದು ಕೇಳುತ್ತಾನೆ.
“ಆಟೋ, ನಿನ್ನಿಂದ ನನಗೆ ಒಂದು ಉಪಕಾರ ಆಗಬೇಕು₹ ಎನ್ನುತ್ತಾಳೆ.
ಅವನು ಅನುಮಾನದಿಂದ ನೋಡುತ್ತಾನೆ.
"ನನಗೆ ಕಾರ್ ಡ್ರೈವಿಂಗ್ ಬರುವುದಿಲ್ಲ. ನೀನು ಹೇಳಿಕೊಡಬೇಕು."
"ಅಸಾಧ್ಯ! ನನ್ನಿಂದ ಆಗದು!"
"ಹಾಗೆ ಹೇಳಬೇಡ. ನೆರೆಯವರು ಒಬ್ಬರಿಗೊಬ್ಬರು ಆಗಿ ಬರದೇ ಹೋದರೆ ಹೇಗೆ? ನೀವು ಅವತ್ತು ಪಾರ್ಕ್ ಮಾಡಿದ ರೀತಿ ನೋಡಿಯೇ ನಾನು ಅಂದುಕೊಂಡೆ. ಕಲಿತರೆ ನಿಮ್ಮಿಂದ ಕಲಿಯಬೇಕು ಅಂತ."
ಅವಳು ದುಂಬಾಲು ಬಿದ್ದು ಕೊನೆಗೂ ಅವನನ್ನು ಒಪ್ಪಿಸಿದಳು. "ನಮ್ಮ ಕಾರಿನಲ್ಲಿ ಹೋಗೋಣ. ಅದರಲ್ಲಿ ಆಟೋಮ್ಯಾಟಿಕ್ ಗೇರ್ ಇದೆ."
"ಊಹೂಂ. ಕಲಿತರೆ ಸ್ಟಿಕ್ ಶಿಫ್ಟ್ ಗೇರ್ ಇರುವ ಕಾರಲ್ಲಿ ಕಲಿಯಬೇಕು. ನನ್ನ ಕಾರಿನಲ್ಲಿ ಹೋಗೋಣ."
ಅವಳು ಅನುಮಾನಿಸಿದಳು.
"ಕೂತುಕೋ!!"
ಎಂದು ಅವನು ಅವಳನ್ನು ಡ್ರೈವರ್ ಸೀಟಿನಲ್ಲಿ ಕೂಡಿಸಿ ತಾನು ಪಕ್ಕದಲ್ಲಿ ಕೂತ. ಬ್ರೇಕ್, ಗ್ಯಾಸ್, ಗೇರ್ ಎಂದು ಅವಳಿಗೆ ತಿಳಿಸಿ ಹೊರಡು ಎಂದ. ಅವಳು ನಂಬಲು ಸಾಧ್ಯವಾಗದೆ ಚಾಬಿಯನ್ನು ತಿರುಗಿಸಿದಳು. ಅವನು ಬ್ರೇಕ್, ಗ್ಯಾಸ್ ಎಂದು ಕೂಗುತ್ತಲೇ ಇದ್ದ. ಅವಳು ಗೊಂದಲದಿಂದ ಗ್ಯಾಸ್ ಎಂದಾಗ ಬ್ರೇಕನ್ನೂ ಬ್ರೇಕ್ ಎಂದಾಗ ಗ್ಯಾಸ್ ಪೆಡಲನ್ನೂ ಒತ್ತುತ್ತಿದ್ದಳು. ಕಾರು ಗಡಗಡ ಎಂದು ನಡುಗುತ್ತಾ ಸಾಗಿತು. ಕೆಂಪು ಸಿಗ್ನಲ್ ಬಂದಾಗ ಅವನು ಬ್ರೇಕ್ ಬ್ರೇಕ್ ಎಂದು ಕೂಗಿದ. ಅವಳು ಆತುರದಲ್ಲಿ ಗ್ಯಾಸ್ ಒತ್ತಿದಳು. ಅವನು ಬ್ರೇಕ್ ಎಂದು ಮತ್ತೆ ಕೂಗಿದ. ಅವಳು ಬ್ರೇಕ್ ಒತ್ತಿದಾಗ ಅವರ ಕಾರು ಮುಂದಿದ್ದ ಕಾರಿಗೆ ಬಹಳ ಸಮೀಪದಲ್ಲಿ ಹೋಗಿ ನಿಂತಿತು. ಅವಳು ಥರಥರ ನಡುಗುತ್ತಿದ್ದಳು.
ಕೆಂಪು ಸಿಗ್ನಲ್ ಹೋಗಿ ಹಸಿರು ಬಂತು. ಹಿಂದೆ ಇದ್ದ ಕಾರಿನ ಡ್ರೈವರ್ ಅಸಹನೆಯಿಂದ ಹಾರ್ನ್ ಮಾಡಿದ.
ಮಾರಿಸಾಲ್ ಗಲಿಬಿಲಿಗೊಂಡಳು. ಅವಳಿಗೆ ಕೈಕಾಲು ಹೊರಡದು. ಹಿಂದಿನ ಕಾರಿನ ಡ್ರೈವರ್ ಹಾರ್ನ್ ಮಾಡುತ್ತಲೇ ಇದ್ದಾನೆ. ಆಟೋಗೆ ಸಹನೆ ಮೀರಿ ಅವನು ಕೆಳಗಿಳಿದು ಹಿಂದಿನ ಕಾರಿನ ಡ್ರೈವರ್ ಬಳಿ ಸಾಗಿದ.
"ನಿನಗೆ ಮಾನ ಮರ್ಯಾದೆ ಏನೂ ಇಲ್ಲವಾ! ಮುಂದೆ ಒಬ್ಬಳು ಹೆಣ್ಣುಮಗಳು ಡ್ರೈವ್ ಮಾಡುತ್ತಿದ್ದಾಳೆ ಅನ್ನೋದು ಕಾಣುತ್ತಾ ಇಲ್ಲವೇನೋ ನಾಯಿಮಗನೇ!" ಎಂದು ಅವನ ಕಾಲರ್ ಪಟ್ಟಿಗೆ ಕೈಹಾಕಿ
"ಅವಳು ಮುಂದೆ ಹೋಗುವ ತನಕ ನೀನು ಕಮಕ್ ಕಿಮಕ್ ಅಂದರೆ ನೋಡು!" ಎಂದು ಹೂಂಕರಿಸಿ ವಾಪಸ್ ಬಂದು ಕಾರಲ್ಲಿ ಕೂತ.
ಅವಳು ಕಾರ್ ಸ್ಟಾರ್ಟ್ ಮಾಡಿ ಹೊರಟರೂ ಭಯಗೊಂಡು "ಇದು ನನ್ನಿಂದ ಆಗದು. ಭಯಂಕರ ಆಕ್ಸಿಡೆಂಟ್ ಆಗುವುದರಲ್ಲಿ ತಪ್ಪಿತು" ಎಂದು ಅಳುದನಿಯಲ್ಲಿ ಹೇಳಿದಳು.
ಅವನು ಕೋಪಗೊಂಡು "ಎಂತೆಂಥ ಮೂರ್ಖ ಶಿಖಾಮಣಿಗಳು ಡ್ರೈವಿಂಗ್ ಕಲಿತಿವೆ. ನೀನು ಮೂರ್ಖ ಶಿಖಾಮಣಿ ಏನು! ಎರಡು ಮಕ್ಕಳನ್ನು ಹಡೆದಿದ್ದೀ. ಅವರನ್ನು ಬೆಳೆಸಿದ್ದೀ. ನಿನ್ನ ಅಯೋಗ್ಯ ಗಂಡನನ್ನು ನೀನೇ ನೋಡಿಕೊಳ್ಳುತ್ತೀ. ನೀನು ಮೂರ್ಖಶಿಖಾಮಣಿ ಅಲ್ಲ." ಎಂದು ಕೂಗಾಡಿದ.
ಅವಳ ಕಣ್ಣುಗಳಲ್ಲಿ ಕಣ್ಣೀರು ಹರಿಯಿತು.
ಅವಳು ಈಗ ಹೆಚ್ಚು ಮನಸ್ಸಿಟ್ಟು ಕಾರ್ ಓಡಿಸಿದಳು. ಕಾರು ಸಲೀಸಾಗಿ ಓಡಿತು. ಅವನು ಒಂದು ಕೆಫೆಯ ಎದುರು ಕಾರ್ ನಿಲ್ಲಿಸಲು ಹೇಳಿದ. ವಾಚ್ ನೋಡಿಕೊಂಡು "ನೋಡು ಸಮಯಕ್ಕೆ ಸರಿಯಾಗಿ ಬಂದಿದ್ದೇವೆ. ಈಗ ಒಂದು ಗಂಟೆ." ಎಂದ.
ಅವಳಿಗೆ ಆ ಕೆಫೆಯ ವಿಶೇಷ ತಿಂಡಿ ಆರ್ಡರ್ ಮಾಡಿದ. ಅವಳು ಇಷ್ಟಪಟ್ಟು ತಿಂದಳು.
"ನಾನು ಮತ್ತು ಸೋನ್ಯಾ ಪ್ರತಿ ಶನಿವಾರ ಇದೇ ಸಮಯಕ್ಕೆ ಬರುತ್ತಿದ್ದೆವು. ಇಲ್ಲಿ ತಿಂಡಿ ತಿಂದು ಎರಡು ಗಂಟೆಗೆ ವಾಪಸ್ ಹೋಗುತ್ತಿದ್ದೆವು. ಮನೆಗೆ ಹೋಗಿ ಲಾಂಡ್ರಿ ಇತ್ಯಾದಿ ಕೆಲಸ ಮಾಡುತ್ತಿದ್ದೆ. ಅವಳು ಪುಸ್ತಕ ಓದುತ್ತಿದ್ದಳು." ಎಂದು ಅವನು ನೆನಪಿಸಿಕೊಂಡ. ಅವಳು ಸೋನ್ಯಾ ಬಗ್ಗೆ ಒಂದೆರಡು ಪ್ರಶ್ನೆ ಕೇಳಿದಳು.
"ನನ್ನದು ಕಪ್ಪು ಬಿಳುಪು ಜೀವನ. ಅದರಲ್ಲಿ ಬಣ್ಣ ತುಂಬಿಸಿದವಳು ಸೋನ್ಯಾ" ಎಂದು ಅವನು ಬೇರೆಡೆಗೆ ನೋಡಿದ.
***
ತಾನು ಮಾಡಬೇಕೆಂದು ಯೋಚಿಸಿದ ಕೆಲಸ ಪೂರೈಸದೇ ಹೋದದ್ದು ಆಟೋ ಮನಸ್ಸನ್ನು ಚುಚ್ಚುತ್ತದೆ. ಅವನು.ಬೇರೊಂದು ಉಪಾಯವನ್ನು ಯೋಚಿಸಿದ್ದಾನೆ. ತನ್ನ ಗರಾಜಿನಲ್ಲಿರುವ ಕಾರಿನಲ್ಲಿ ಅವನು ಬಂದು ಕೂತಿದ್ದಾನೆ. ಕಾರಿನ ಏರ್ ಕಂಡೀಷನರ್ ಚಾಲೂ ಮಾಡಿದ್ದಾನೆ. ಅವನು ಮೆಕ್ಯಾನಿಕಲ್ ಇಂಜಿನಿಯಿಂಗ್ ಪದವೀಧರ. ಕಾರುಗಳ ಬಗ್ಗೆ.ಅವನಿಗೆ ಬೇಕಾದಷ್ಟು ತಿಳಿವಳಿಕೆ ಇದೆ. ಕಾರಿನ ಇಂಧನವು ಉರಿಯುವಾಗ ಬಿಡುಗಡೆಯಾಗುವ ಕಾರ್ಬನ್ ಮಾನಾಕ್ಸೈಡ್ ಒಂದು ವಿಷಾನಿಲ. ಕಾರನ್ನು ಒಂದು ಪುಟ್ಟ ಆವರಣದಲ್ಲಿ ನಿಲ್ಲಿಸಿ ಏರ್ ಕಂಡೀಷನರ್ ಚಾಲೂ ಮಾಡಿದರೆ. ಬಿಡುಗಡೆಯಾಗುವ ವಿಷಾನಿಲ ತನ್ನ ಕೆಲಸ ಮಾಡುತ್ತದೆ.
ಅವನು ಬೆಳಗಿನ ಕೆಲಸಗಳನ್ನು ಪೂರೈಸಿ ಎಲ್ಲವನ್ನೂ ಒಂದು ಹದಕ್ಕೆ ತಂದು ತಾನು ಪ್ರತಿದಿನ ತೊಡುವ ಕೋಟನ್ನು ತೊಟ್ಟು ಕಾರಿನಲ್ಲಿ ಕೂತಿದ್ದಾನೆ. ಕ್ರಮೇಣ ಅವನು ನಿದ್ದೆಗೆ ಜಾರುತ್ತಿದ್ದಾನೆ. ಅವನ ಮನಸ್ಸಿನಲ್ಲಿ ಅರೆಬರೆ ಚಿತ್ರಗಳು ಮೂಡಿ ಮಾಯವಾಗುತ್ತಿವೆ.
ಯೂನಿವರ್ಸಿಟಿಯ ಪದವಿಪ್ರದಾನ ಸಮಾರಂಭ ನಡೆಯುತ್ತಿದೆ. ಅವನು ಪದವಿ ಪಡೆಯುವುದನ್ನು ನೋಡಲು ಸೋನ್ಯಾ ಬಂದಿದ್ದಾಳೆ. ಕೊನೆಗೂ ಅವನು ಕಪ್ಪು ಗೌನ್ ಮತ್ತು ಟೋಪಿ ತೊಟ್ಟು ತನ್ನ ಸರ್ಟಿಫಿಕೇಟ್ ಸುರುಳಿ ಹಿಡಿದು ಬರುತ್ತಾನೆ. ಅವಳು ಅವನನ್ನು ತಬ್ಬಿಕೊಂಡು ಚುಂಬಿಸುತ್ತಾಳೆ. ಅವನ ಮನಸ್ಸು ಸಂತೋಷದಿಂದ ಬೀಗುತ್ತಿದೆ.
ಕಾರ್ಬನ್ ಮಾನಾಕ್ಸೈಡ್ ಕಾರಿನಲ್ಲಿ ತುಂಬಿಕೊಳ್ಳುತ್ತಿದೆ. ಅವನಿಗೆ ನಿದ್ದೆ ಆವರಿಸುತ್ತಿದೆ. ಕನಸುಗಳು ಮೂಡುತ್ತಿವೆ.
ಅವರು ಕಾರಿನಲ್ಲಿ ಕೂತಿದ್ದಾರೆ. ಅವಳು "ಕೊಡು ನಿನ್ನ ಸರ್ಟಿಫಿಕೇಟ್, ನೋಡೋಣ!" ಎಂದು ಕೇಳಿ ಅದನ್ನು ಬಿಡಿಸಿ ನೋಡುತ್ತಾಳೆ. ಅವನು ಇಂಜಿನಿಯರಿಂಗ್ ಪದವಿಗೆ ಬೇಕಾದ ಎಲ್ಲಾ ಅಗತ್ಯಗಳನ್ನೂ ಪೂರೈಸಿದ್ದಾನೆ ಎಂದು ಬರೆದಿದೆ. ಅವಳು ಸಂತೋಷದಿಂದ ಅವನನ್ನು ತಬ್ಬಿಕೊಳ್ಳುತ್ತಾಳೆ. ಅವನು ಪದವಿಗಾಗಿ ಓದಲು ಪ್ರಾರಂಭ ಮಾಡಿದಾಗಿನಿಂದ ಅವರು ಜೊತೆಗೆ ವಾಸ ಮಾಡುತ್ತಿದ್ದಾರೆ. ಅವಳು ಶಾಲೆಯಲ್ಲಿ ಪಾಠ ಮಾಡಿ ಸಂಪಾದಿಸುವ ಹಣ ಹೆಚ್ಚಲ್ಲ. ಅದೆಷ್ಟೋ ತ್ಯಾಗಗಳನ್ನು ಇಬ್ಬರೂ ಮಾಡಿದ್ದಾರೆ. ಕೊನೆಗೂ ಅವರ ಕಷ್ಟದ ದಿನಗಳು ಮುಗಿದಿವೆ. ಪಿಟ್ಸ್ಬರ್ಗ್ ಪಟ್ಟಣದಲ್ಲಿ ಸ್ಟೀಲ್ ಉತ್ಪಾದನೆಯ ಫ್ಯಾಕ್ಟರಿಯಲ್ಲಿ ಅವನಿಗೆ ಈಗಾಗಲೇ ಕೆಲಸ ಸಿಕ್ಕಿದೆ. ಅವಳನ್ನು ತಬ್ಬಿಕೊಂಡೇ ಅವನು "ನಿನಗೆ ಎಂದಾದರೂ ಮದುವೆ ಆಗುವ ಖಯಾಲಿ ಬಂದಿಲ್ಲವೇ?" ಎನ್ನುತ್ತಾನೆ. ಅವಳು "ಅದನ್ನು ಸರಿಯಾಗಿ ಕೇಳು!" ಎನ್ನುತ್ತಾಳೆ. ಅವನು ಅವಳ ಕೈ ಹಿಡಿದು "ಸೋನ್ಯಾ, ನನ್ನನ್ನು ಮದುವೆ ಆಗುತ್ತೀಯಾ?" ಎಂದು ಕೇಳುತ್ತಾನೆ. ಅವಳು "ಒಪ್ಪಿಗೆ!" ಎಂದು ನಗುತ್ತಾ ಅವನನ್ನು ಮತ್ತೊಮ್ಮೆ ತಬ್ಬಿಕೊಳ್ಳುತ್ತಾಳೆ. ಕಾರಿನ ಹಾರ್ನ್ ಕುಟ್ಟಿ ತನ್ನ ಸಂತೋಷವನ್ನು ವ್ಯಕ್ತಪಡಿಸುತ್ತಾಳೆ.
ಅವಳು ಹಾಗೇ. ಜೀವನವೆಂದರೆ ಒಂದು ಸಂಭ್ರಮ ಎಂದು ನಂಬಿದವಳು.
ಕಾರ್ಬನ್ ಮಾನಾಕ್ಸೈಡ್ ಕಾರಿನ ಎಕ್ಸ್ಹಾಸ್ಟ್ ಮೂಲಕ ಬರುತ್ತಲೇ ಇದೆ. ಅವನ ಕನಸುಗಳನ್ನು ಯಾರೋ ಭಂಗಗೊಳಿಸುತ್ತಿದ್ದಾರೆ. ಏನದು ಸದ್ದು? ಯಾರೋ ತನ್ನ ಹೆಸರು ಕೂಗುತ್ತಿದ್ದಾರೆ. ಬಾಗಿಲನ್ನು ಜೋರಾಗಿ ತಟ್ಟುತ್ತಿದ್ದಾರೆ. ಯಾರು? ಸೋನ್ಯಾ ? ಅವನು ಬಹಳ ಕಷ್ಟ ಪಟ್ಟು ತನ್ನ ಸೀಟ್ ಬೆಲ್ಟ್ ಬಿಚ್ಚಿದ. ಕಣ್ಣಲ್ಲಿ ತುಂಬಿಕೊಂಡ ನಿದ್ದೆಯ ಮಂಪರಿನಲ್ಲಿ ಹೇಗೋ ಬಾಗಿಲು ತೆರೆದ. ಸ್ವಚ್ಛ ಗಾಳಿ ಒಳಗೆ ನುಗ್ಗಿತು. ಅವನು ತಲೆ ಕೊಡವಿಕೊಂಡ. ಯಾರೋ ಬಾಗಿಲು ಬಡಿಯುತ್ತಲೇ ಇದ್ದಾರೆ.
ಅವನು ಜಾಗರೂಕತೆಯಿಂದ ಮೇಲೆದ್ದು ಗರಾಜಿನ ಬಾಗಿಲು ತೆಗೆದ. ಹೊರಗೆ ಟಿಮ್ಮಿ ಮತ್ತು ಮಾರಿಸಾಲ್ ನಿಂತಿದ್ದರು.
***
"ನಿಮ್ಮ ಏಣಿ ಬೇಕಾಗಿತ್ತು. ನಮ್ಮ ಕಿಟಕಿ ರಿಪೇರಿ ಮಾಡಬೇಕು" ಎಂದು ಮಾರಿಸಾಲ್ ಕೇಳಿದಳು.
ಅವನಿಗೆ ಕೋಪ ಬಂತು.
"ಈ ನಿನ್ನ ಗಂಡನಿಗೆ ಏಣಿ ಹತ್ತಿ ಕಿಟಕಿ ರಿಪೇರಿ ಮಾಡೋದಕ್ಕೆ ಬರುತ್ತಾ ಕೇಳು!" ಎಂದು ಸಿಡುಕಿದ.
ಹಾಗೆ ಹೇಳಿದರೂ ಅವನು ಅವರಿಗೆ ಏಣಿಯನ್ನು ಕೊಟ್ಟು ಕಳಿಸಿದ.
ಚಳಿ ಪ್ರಾರಂಭವಾಗಿತ್ತು. ಬೆಕ್ಕು ಅವನ ಗರಾಜಿನ ಒಳಗೆ ಬಂದು ಸೇರಿಕೊಂಡಿತು. ಅವನು ಅದನ್ನು ಗದರಿಸಿ ಹೊರಗೆ ಕಳಿಸಿದ.
ಮಾರನೇ ದಿವಸ ಬೆಳಗ್ಗೆ ಅವನು ಹೊರಗೆ ಬಂದಾಗ ಗರಾಜ್ ಪಕ್ಕದಲ್ಲಿ ಬೆಕ್ಕು ಚಳಿಯಲ್ಲಿ ಇಡೀ ರಾತ್ರಿ ಕಳೆದು ಮುದುರಿಕೊಂಡಿತ್ತು.
ಅಲ್ಲಿಗೆ ಬಂದ ಮಾರಿಸಾಲ್ "ಅಯ್ಯೋ! ಬೆಕ್ಕು ಸತ್ತೇ ಹೋಯಿತೇನೋ!" ಎಂದು ಪೇಚಾಡಿದಳು.
"ಆಟೋ ಈ ಬೆಕ್ಕನ್ನು ನೀನು ಸಾಕಿಕೋಬಾರದೇ?" ಎಂದಳು.
"ನಾನು ಯಾಕೆ ಅದನ್ನ ಸಾಕಲಿ! ಬೇಕಾದರೆ ನೀನು ಕರೆದುಕೊಂಡು ಹೋಗು!" ಎಂದ.
"ನಾನು ಈಗ ಗರ್ಭಿಣಿ. ಈಗಾಗಲೇ ಎರಡು ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಇದೆ. ಇದನ್ನು ಹೇಗೆ ನೋಡಿಕೊಳ್ಳಲಿ?" ಎಂದು ಮಾರಿಸಾಲ್ ಕೇಳಿದಳು.
ಅಷ್ಟರಲ್ಲಿ ಮಾರ್ಕ್ ಅಲ್ಲಿಗೆ ಕೈಕಾಲು ಬೀಸುತ್ತಾ ವ್ಯಾಯಾಮ ಮಾಡುತ್ತಾ ಆಗಮಿಸಿದ. ಇವರು ಏನು ಮಾತಾಡಿಕೊಳ್ಳುತ್ತಿದ್ದಾರೆ ಎಂಬ ಕುತೂಹಲದಿಂದ ನಿಂತ.
"ಅಯ್ಯೋ ಈ ಬೆಕ್ಕು ಸತ್ತೇ ಹೋಯಿತಾ!" ಎಂದು ಬೆಕ್ಕನ್ನು ಕೈಗೆತ್ತಿಕೊಂಡು ತನ್ನ ಕೋಟಿನಲ್ಲಿ ಅದನ್ನು ಹುದುಗಿಸಿ ಬೆಚ್ಚಗಿರಿಸಲು ಪ್ರಯತ್ನಿಸಿದ. ಸದ್ಯ, ಬೆಕ್ಕಿನ ಜವಾಬ್ದಾರಿ ತನಗೆ ಬರಲಿಲ್ಲ ಎಂದು ಆಟೋ ಸಮಾಧಾನ ಪಟ್ಟುಕೊಂಡ.
ಮಾರಿಸಾಲ್ ತಾನು ಆಟೋಗಾಗಿ ತಂದಿದ್ದ ತಿಂಡಿಯನ್ನು ಒಳಗೆ ತೆಗೆದುಕೊಂಡು ಹೋದಳು.
"ಇಲ್ಲಿ ಇಷ್ಟು ಚಳಿ ಯಾಕಿದೆ? ಹೀಟಿಂಗ್ ಇಲ್ಲವೇ?" ಎಂದಳು.
ಆಟೋ ಸುಮ್ಮನಿದ್ದ.
ಅಷ್ಟರಲ್ಲಿ ಮಾರ್ಕ್ ಒಳಗೆ ಬಂದು "ನಾನು ಈ ಬೆಕ್ಕನ್ನು ನೋಡಿಕೊಳ್ಳಲು ಆಗದು" ಎಂದ. ಅವನ ಕುತ್ತಿಗೆಯ ಭಾಗದಲ್ಲಿ ಚರ್ಮ ಕೆಂಪಗಾಗಿತ್ತು. ಅವನಿಗೆ ಬೆಕ್ಕಿನ ಅಲರ್ಜಿ. ಅವನು ಬೆಕ್ಕನ್ನು ಒಂದು ಬಾಕ್ಸ್ ಒಳಗೆ ಇಟ್ಟುಕೊಂಡು ಬಂದಿದ್ದ.
ಮಾರಿಸಾಲ್
"ಚರ್ಮವನ್ನು ಕೆರಿಯಬೇಡಿ! ಅದರಿಂದ ಅಲರ್ಜಿ ಇನ್ನಷ್ಟು ಹರಡುತ್ತೆ" ಎಂದು ಕಾಳಜಿ
ತೋರಿಸಿದಳು.
"ಅಯ್ಯೋ ಏನು ಮಾಡಲಿ! ಭಯಂಕರ ತಿನಿಸು!" ಎಂದು ಮಾರ್ಕ್ ಚಡಪಡಿಸಿದ.
"ನನ್ನ ಗಂಡನಿಗೂ ಹಿಂದೆ ಆಗಿತ್ತು. ಆವಾಗ ಡಾಕ್ಟರ್ ಕೊಟ್ಟ ಔಷಧದ ಪ್ರಿಸ್ಕ್ರಿಪ್ಷನ್ ಇರಬೇಕು. ಬಾ, ನಾನು ಹುಡುಕಿ ಕೊಡುತ್ತೇನೆ! ಆಟೋ, ಬೆಕ್ಕನ್ನು ನೀನೇ ನೋಡಿಕೊಳ್ಳಬೇಕು!" ಎನ್ನುತ್ತಾ ಮಾರಿಸಾಲ್ ಹೊರಟೇ ಹೋದಳು. ಮಾರ್ಕ್ ಅವಳನ್ನು ಹಿಂಬಾಲಿಸಿದ.
ಈ ಬೆಕ್ಕಿನ ಹೊಣೆ ನನ್ನ ಮೇಲೆ ಹೇಗೆ ಬಂತು ಎಂದು ಆಟೋ ಯೋಚಿಸಿದ. ಬೆಕ್ಕು ಕಾರ್ಡ್ ಬೋರ್ಡ್ ಪೆಟ್ಟಿಗೆಯಿಂದ ಹೊರಗೆ ಬಂತು. "ಊಹೂಂ! ವಾಪಸ್!!" ಎಂದು ಆಟೋ ಗರ್ಜಿಸಿದ. ಬೆಕ್ಕು ಹೆದರಿ ವಾಪಸ್ ಪೆಟ್ಟಿಗೆಗೆ ಸೇರಿತು.
ರಾತ್ರಿ ಮಲಗುವಾಗ ಬೆಕ್ಕು ಅವನ ಮಂಚವನ್ನು ಏರಿ ಕೂತಿತು. "ಅದೆಲ್ಲಾ ಇಲ್ಲಿ ನಡೆಯೋದಿಲ್ಲ. ನೀನು ನಿನ್ನ ಬಾಕ್ಸ್ ಸೇರಿಕೋ. ನಿನಗೆ ಬೇಕಾದರೆ ಒಂದು ಹೊದಿಕೆ ಕೊಡುತ್ತೇನೆ!" ಎಂದು ಆಟೋ ಬೆಕ್ಕನ್ನು ಕೆಳಗಿಳಿಸಿ ಅದಕ್ಕೆ ಒಂದು ಹೊದಿಕೆ ಹೊದಿಸಿದ.
ಮಲಗಿದಾಗ ತಾನು ಬೇರೆ ಏನಾದರೂ ಮಾರ್ಗ ಕಂಡುಕೊಳ್ಳಬೇಕು ಎಂದು ಅವನ ಮನಸ್ಸು ಯೋಚಿಸುತ್ತಿತ್ತು. ಅವನು ಒಂದು ನಿರ್ಧಾರಕ್ಕೆ ಬಂದ.
ಬಹಳ ವರ್ಷಗಳ ಹಿಂದೆ ಸೋನ್ಯಾಳನ್ನು ಎಲ್ಲಿ ಸಂಧಿಸಿದದ್ದನೋ ಅದೇ ರೇಲ್ವೆ ಸ್ಟೇಷನ್ನಿಗೆ ಆಟೋ ಬಂದಿದ್ದಾನೆ. ಅವನು ಪ್ಲಾಟ್ ಫಾರ್ಮ್ ಟಿಕೆಟ್ ಕೊಂಡು ಒಳಗೆ ಹೋಗಿ ನಿಲ್ಲುತ್ತಾನೆ ಒಂದು ರೈಲು ಈ ನಿಲ್ದಾಣದ ಮೂಲಕ ಹಾದುಹೋಗುವ ಸೂಚನೆ ಬಂತು. ಅವನು ಜಾಗರೂಕತೆಯಿಂದ ಪ್ಲಾಟ್ ಫಾರ್ಮ್ ತುದಿಗೆ ಬಂದು ನಿಂತ. ರೈಲು ಬರಲು ಇನ್ನೂ ನಾಲ್ಕೈದು ನಿಮಿಷಗಳು ಇರಬಹುದು. ತಾನು ಸರಿಯಾದ ಸಮಯಕ್ಕೆ ಕಂಬಿಯ ಮೇಲೆ ಧುಮುಕಿದರೆ ಕಾರ್ಯ ಸಾಧಿಸುತ್ತದೆ.
ಅವನ ಪಕ್ಕದಲ್ಲಿ ಇವನಿಗಿಂತ ವಯಸ್ಸಿನಲ್ಲಿ ಬಹಳ ಹಿರಿಯರಾದ ಮುದುಕರೊಬ್ಬರು ಬಂದು ನಿಲ್ಲುತ್ತಾರೆ. ರೈಲಿನ ಗಡಗಡ ಕೇಳುತ್ತಿದೆ. ಒಮ್ಮೆಲೇ ಮುದುಕರು ಆಯಾ ತಪ್ಪಿ ಕೆಳಗೆ ಬಿದ್ದುಬಿಟ್ಟರು. ನೇರವಾಗಿ ರೈಲು ಕಂಬಿಯ ಮೇಲೆ ಹೋಗಿಬಿದ್ದರು. ಸುತ್ತಲೂ ಇದ್ದ ಜನರು ಓ ಮೈ ಗಾಡ್ ಇತ್ಯಾದಿ ಉದ್ಗಾರಗಳನ್ನು ಮಾಡಿದರು. ತಮ್ಮ ಮೊಬೈಲ್ ಹೊರಗೆ ತೆಗೆದು ವಿಡಿಯೋ ಮಾಡತೊಡಗಿದರು.
"ಥತ್ ನಿಮ್ಮ ಜನ್ಮಕ್ಕೆ!" ಎಂದು ಅವರಿಗೆ ಶಾಪ ಹಾಕಿ ಆಟೋ ತಾನೂ ಕೆಳಗೆ ಧುಮುಕಿದ. ಮುದುಕರು ಏಳಲಾರದೆ ಚಡಪಡಿಸುತ್ತಿದ್ದರು.
"ನನ್ನ ಕೈ ಹಿಡಿದುಕೊಳ್ಳಿ. ಏಳಿ! ಎದ್ದೇಳಿ!" ಎಂದು ಅವರನ್ನು ಎಬ್ಬಿಸಿದ.
ಜನ ಚಪ್ಪಾಳೆ ತಟ್ಟಿದರು. ವಿಡಿಯೋ ಮಾಡುವುದನ್ನು ಮುಂದುವರೆಸಿದರು. "ಯಾರಾದರೂ ಇವರನ್ನು ಮೇಲಕ್ಕೆ ಎಳೆದುಕೊಳ್ತೀರೋ ಅದನ್ನೂ ಹೇಳಬೇಕೋ!" ಎಂದು ಆಟೋ ಸಿಡುಕಿದ. ಒಂದಿಬ್ಬರು ಮುಂದೆ ಬಂದು ಮುದುಕರನ್ನು ಮೇಲೆಳೆದರು. ಎಲ್ಲರ ಗಮನವೂ ಮುದುಕರತ್ತ ಹೋಯಿತು.
ಆಟೋ ಮೇಲೆ ಬರಲಿಲ್ಲ. ರೈಲು ವಿಷಲ್ ಕೂಗಿ ಎರಡೇ ನಿಮಿಷಗಳಲ್ಲಿ ಬರುವ ಸೂಚನೆ ನೀಡಿತು. ಆಟೋ ರೈಲ್ವೆ ಕಂಬಿಯ ಮೇಲೆ ನಿಂತ. ತನ್ನ ಯೋಜನೆ ಕೊನೆಗೂ ಫಲಿದುವಂತೆ ತೋರಿತು. ಅವನು ಕಣ್ಣು ಮುಚ್ಚಿದ.
ಅಷ್ಟರಲ್ಲಿ ಯಾರೋ ಅವನನ್ನು ಜೋರಾಗಿ ಕರೆದಂತೆ ಭಾಸವಾಯಿತು. "ನನ್ನ ಕೈ ಹಿಡಿದುಕೋ! ನನ್ನ ಕೈ ಹಿಡಿದುಕೋ!"
ಅವನು ಕಣ್ಣು ತೆರೆದ. ಪ್ಲಾಟ್ ಫಾರ್ಮ್ ಮೇಲೆ ಒಬ್ಬ ಮನುಷ್ಯ ಅವನತ್ತ ಕೈಚಾಚಿ "ಹಿದಿದುಕೊಳ್ಳಿ!" ಎಂದು ಕೂಗಿದ. ರೈಲಿನ ಸದ್ದು ಜೋರಾಗಿ ಕೇಳಿಸಿತು. ಯಾವುದೋ ಮಾಯದಲ್ಲಿ ಅವನು ತನ್ನ ಕೈ ಚಾಚಿದ. ಮೆಲಿದ್ದವನು ಅವನ ಕೈಹಿಡಿದು ಮೇಲಕ್ಕೆ ಎಳೆದುಕೊಂಡ.
"ನೀವು ಹೀರೋ! ಒಬ್ಬ ಮನುಷ್ಯನ ಪ್ರಾಣ ಉಳಿಸಿದಿರಿ!" ಎಂದು ಎಷ್ಟೋ ಜನರು ಆಟೋ ಹಿಂದೆ ಬಂದು ಅವನ ಫೋಟೋ ತೆಗೆದುಕೊಂಡರು. ಅವನು ಸರಸರನೆ ನಡೆಯುತ್ತಾ ನಿಲ್ದಾಣದಿಂದ ಹೊರಗೆ ಬಂದ.
***
ಅವನು ಬೆಳಗ್ಗೆ ಎದ್ದು ದಿನಪತ್ರಿಕೆಯನ್ನು ಎದುರು ನೋಡುತ್ತಿದ್ದ. ಪತ್ರಿಕೆ ಹಾಕುವ ಹುಡುಗ ಸೈಕಲ್ ಮೇಲೆ.ಬಂದು ಪತಿಕೆಯ ಸುರುಳಿಯನ್ನು ಎಸೆದ. ಆಟೋ ಕೂಡಲೇ "ಏಯ್! ನಿಂತುಕೋ!" ಎಂದು ಅವನನ್ನು ಗಟ್ಟಿಯಾಗಿ ಕರೆದ. ಅವನಿಗೆ ತನ್ನ ದೂರುಗಳನ್ನು ಹೇಳಲು ಕೊನೆಗೂ ಅವಕಾಶ ಸಿಕ್ಕಿತಲ್ಲ ಎಂದು ಆಟೋ ಹಿಗ್ಗಿದ.
ಅವನು ಏನಾದರೂ ಹೇಳುವ ಮೊದಲೇ ಹುಡುಗ "ಸರ್, ನೀವು ಮಿಸ್ ಸೋನ್ಯಾ ಅವರ ಗಂಡ ಅಲ್ಲವೇ?" ಎಂದ.
ಇವನು ಏನು ಹೇಳಲೂ ಅನುಮಾನಿಸಿದ.
"ನೀವು ನಮ್ಮ ಸ್ಕೂಲಿಗೆ ಬಂದಿದ್ದಿರಿ. ಮಕ್ಕಳಿಗೆ ನಿಮ್ಮ ಉದ್ಯೋಗದ ಬಗ್ಗೆ ತಿಳಿವಳಿಕೆ ಕೊಟ್ಟಿದ್ದಿರಿ. ಮಿಸ್ ಸೋನ್ಯಾ ಹೇಗಿದ್ದಾರೆ?"
"ಅವಳು ತೀರಿಕೊಂಡಳು."
"ಓಹ್. ಅವರನ್ನು ನಾನು ಸದಾ ಕೃತಜ್ಞತೆಯಿಂದ ನೆನೆಯುತ್ತೇನೆ. ಬಹಳ ಒಳ್ಳೆಯ ಟೀಚರ್. ನಾನು ಬೇರೆಯವರಿಗಿಂತ ಭಿನ್ನ ಎಂದು ನಾನು ಉದ್ವೇಗಕ್ಕೆ ಒಳಗಾಗಿದ್ದೆ. ನನ್ನ ಸ್ವಂತ ತಂದೆಯೇ ನನ್ನನ್ನು ಪ್ರೀತಿಸಲಿಲ್ಲ. ನಾನೊಬ್ಬ ಟ್ರಾನ್ಸ್ ಜೆಂಡರ್ ಎಂದು ನನ್ನನ್ನು ಕೀಳಾಗಿ ಕಂಡರು. ಮಿಸ್ ಸೋನ್ಯಾ ನನ್ನನ್ನು ಪ್ರೀತಿಸಿದರು. ನನ್ನಲ್ಲಿ ಧೈರ್ಯ ತುಂಬಿದರು. ಅವರನ್ನು ಎಂದೂ ಮರೆಯಲಾಗದು. ನನಗೆ ಅವರು ಮಾಲ್ಕಮ್ ಎಂಬ ಹೊಸ ಹೆಸರು ಕೊಟ್ಟರು. ಹೊಸ ಜೀವನ ಕೊಟ್ಟರು."
ಆಟೋ ಕಂಠ ಉಬ್ಬಿಬಂತು. ಸೋನ್ಯಾ ಅದೆಷ್ಟು ಜನರ ಜೀವನದಲ್ಲಿ ಬೆಳಕು ತಂದವಳು!
"ನಾನು ಬರುತ್ತೇನೆ!" ಎಂದು ಮಾಲ್ಕಂ ಹೊರಟ.
ಅಂದು ಮಧ್ಯಾಹ್ನ ಅವನು ಸೋನ್ಯಾಳ ಸಮಾಧಿಗೆ ಹೋಗಿ ಅಲ್ಲಿ.ಬಹಳ ಹೊತ್ತು ಕುಳಿತಿದ್ದ. ಅಲ್ಲಿ ಎಲ್ಲವನ್ನೂ ಅರಿಕೆ ಮಾಡಿಕೊಂಡು ಹೃದಯವನ್ನು ಹಗುರ ಮಾಡಿಕೊಂಡ.
ಅಂದು ಸಂಜೆ ಮಾರಿಸಾಲ್ ಮತ್ತು ಅವಳ ಗಂಡ.ಅವನ ಬಾಗಿಲು ತಟ್ಟಿದರು. ಅವನು "ಇವತ್ತೇನು ಬೇಕಾಗಿತ್ತು?" ಎಂದು ಅನುಮಾನದಿಂದ ಕೇಳಿದ.
"ನಾವು ಗಂಡ ಹೆಂಡತಿ ಬಹಳ ದಿನಗಳಿಂದ ಎಲ್ಲೂ ಹೊರಗೆ ಹೋಗಿಲ್ಲ. ನೀವು ನಮ್ಮ ಮಕ್ಕಳ ಜೊತೆಗೆ ಸಂಜೆ ಇದ್ದರೆ ನಾವು ಒಂದೆರಡು ತಾಸು ಹೋಗಿ ಬರುತ್ತೇವೆ."
ಅವರೊಂದಿಗೆ ವಾದ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಅವನಿಗೆ ಈಗ ಗೊತ್ತಾಗಿದೆ. "ನಾನು ನಿಮಗೆ ವಿಶೇಷ ತಿನಿಸು ಮಾಡಿಕೊಡುತ್ತೇನೆ" ಎಂದು ಮಾರಿಸಾಲ್ ಅವನಿಗೆ ಪ್ರಲೋಭನೆ ನೀಡಿದ್ದಾಳೆ.
ಸಂಜೆ ಅವನು ಬಂದಾಗ ಮಾರಿಸಾಲ್ ವಿಶೇಷ ಉಡುಗೆ ತೊಟ್ಟು ಮೇಕಪ್ ಮಾಡಿಕೊಂಡು ತಯಾರಾಗಿದ್ದಳು. ಅವಳ ಗಂಡನೂ ಸೂಟ್ ತೊಟ್ಟು ರೆಡಿಯಾಗಿದ್ದ. ಮಕ್ಕಳು ಎಷ್ಟು ಹೊತ್ತಿಗೆ ಊಟ ಮಾಡುತ್ತಾರೆ, ಎಷ್ಟು ಹೊತ್ತಿಗೆ ನಿದ್ದೆ ಮಾಡುತ್ತಾರೆ ಇತ್ಯಾದಿ ವಿವರಗಳನ್ನು ಮಾರಿಸಾಲ್ ಪದೇಪದೇ ಹೇಳಿದಳು.
ಮಕ್ಕಳು ಅವನನ್ನು ಹಚ್ಚಿಕೊಂಡರು. ಅವರ ಜೊತೆ ಅವನು ಒಂದಿಷ್ಟು ಆಟ ಆಡಿದ. ಅವರಿಗೆ ಊಟ ಬಡಿಸಿಕೊಟ್ಟ. ಅಡುಗೆಮನೆಯಲ್ಲಿ ಮೂಲೆಯಲ್ಲಿ ಅನಾಥವಾಗಿ ಬಿದ್ದಿದ್ದ ಯಂತ್ರವನ್ನು ಕುರಿತು ಕೇಳಿದ. "ಅದು ನಮ್ಮ ಡಿಶ್ ವಾಶರ್. ಕೆಟ್ಟು ಹೋಗಿದೆ.
ಅಮ್ಮ.ಅದನ್ನು ಬಳಸುವುದಿಲ್ಲ.".ಎಂದು ಚಿಕ್ಕವಳು.ಹೇಳಿದಳು.
ಮಕ್ಕಳು ಮಲಗಿದ ಮೇಲೆ ಅವನು ತನ್ನ ಮನೆಯಿಂದ ಟೂಲ್ ಬಾಕ್ಸ್ ತಂದು ಅವರ ಅಡುಗೆಮನೆಗೆ ಹೋಗಿ ಡಿಶ್ ವಾಶರನ್ನು ಬಿಚ್ಚಿ ರಿಪೇರಿ ಮಾಡಿದ.
ಮಾರಿಸಾಲ್ ಮತ್ತು ಅವಳ ಗಂಡ ಹಿಂದಿರುಗಿದಾಗ ಎಲ್ಲವೂ ಸ್ತಬ್ಧವಾಗಿತ್ತು. ಆಟೋ ಅವರ ಸೋಫಾ ಮೇಲೆ ಮಗುವಿನಂತೆ ನಿದ್ದೆ ಹೋಗಿದ್ದ. ಅವರು ಬಂದಿದ್ದು ಕೇಳಿ ಅವನಿಗೆ ಎಚ್ಚರವಾಯಿತು. ಅವನು ಅವರಿಗೆ ವಿದಾಯ ಹೇಳಿ ಮನೆಗೆ ಬಂದ.
ಮರುದಿನ ಮಾರಿಸಾಲಳ ಗಂಡ ಬೆಳಗಿನ ಉಪಾಹಾರ ತಯಾರಿಸಲು ಹೋದಾಗ ಡಿಶ್ ವಾಷರ್ ಸುಸ್ಥಿತಿಯಲ್ಲಿರುವುದು ಕಂಡು ಆನಂದದಿಂದ "ಇದು ಆಟೋ ಮಾಡಿದ ಕೆಲಸವೇ ಇರಬೇಕು?" ಎಂದು ಉದ್ಗರಿಸಿದ.
***
ಮಾರಿಸಾಲ್ ಬಂದು ಬಾಗಿಲು ಬಡಿದಾಗ ಆಟೋ "ಈಗ ಏನಾಯಿತು!?" ಎಂದು ಸಿಡುಕುತ್ತಾ ಕೇಳುತ್ತಾನೆ.
"ಟಾಮಿ ಏಣಿಯಿಂದ ಬಿದ್ದು ಕಾಲು ಮುರಿದುಕೊಂಡಿದ್ದಾನೆ. ಅವನು ಆಸ್ಪತ್ರೆಯಲ್ಲಿ ಇದ್ದಾನೆ. ಅವನನ್ನು ನೋಡಲು ಆಸ್ಪತ್ರೆಗೆ ಹೋಗಬೇಕು. ಇಲ್ಲ ಅನ್ನಬೇಡ!" ಎಂದು ಅವಳು ಬೇಡಿಕೊಂಡಳು.
"ನಾನು ಹೇಳಿದೆ, ನೀವು ಕೇಳಲಿಲ್ಲ. ಅವನ ಕೈಯಲ್ಲಿ ಈ ಕೆಲಸಗಳೆಲ್ಲ ಆಗುವುದಿಲ್ಲ."
"ಈಗ ನೀನು ಬರುತ್ತೀಯೋ ಅಥವಾ ನಾನು ಬಸ್ಸಿನಲ್ಲಿ ಹೋಗಬೇಕೋ?"
ಅವನು ಮುಖ ಗಂಟು ಹಾಕಿಕೊಂಡು ತನ್ನ ಕಾರನ್ನು ಅವಳ ಮನೆಯ ಮುಂದೆ ನಿಲ್ಲಿಸಿದ. ಅವಳ ಮಕ್ಕಳೂ ಜೊತೆಗೆ ಬಂದರು. ಅಪ್ಪ ಆಸ್ಪತ್ರೆಯಲ್ಲಿ ಇದ್ದಾನೆ ಎಂಬ ಅರಿವಿಲ್ಲದೆ ಚಿಕ್ಕವಳು ತನ್ನ ಆಟಿಕೆಯೊಂದಿಗೆ ಆಡುತ್ತಿದ್ದಳು.
ಆಸ್ಪತ್ರೆಯಲ್ಲಿ ಮೂವರನ್ನೂ ವೇಟಿಂಗ್ ರೂಮಿನಲ್ಲಿ ಬಿಟ್ಟು ಮಾರಿಸಾಲ್ ಗಂಡನನ್ನು ನೋಡಲು ಒಳಗೆ ಹೋದಳು. ಕಿರಿಯ ಮಗಳು ತನ್ನ ಆಟಿಕೆಯೊಂದಿಗೆ ಆಟ ಮುಂದುವರೆಸಿದಳು. ಹಿರಿಯ ಮಗಳೂ ಅವಳೊಂದಿಗೆ ಸೇರಿದಳು. ತಮ್ಮ ಬಾಕ್ಸರ್ ಬೊಂಬೆಗಳ ನಡುವೆ ಕುಸ್ತಿ ಆಡಿಸುವ ಆಟ.
ಆಟೋ ಸ್ವಲ್ಪ ಹೊತ್ತು ಗಮನಿಸಿ "ಇವರೇನು ಸೂಪರ್ ಪವರ್ ಉಳ್ಳವರಾ?" ಎಂದ.
ಕಿರಿಯವಳು
"ಹೌದು, ಹೌದು" ಎಂದಳು. ಆಟೋ ಕೂಡಾ ಅವಳನ್ನು ಸೇರಿಕೊಂಡ.
ಕಿರಿಯ ಹುಡುಗಿ ತಾನು ತಂದ ಕಥೆ ಪುಸ್ತಕವನ್ನು ತೆಗೆದಳು. ಒಂದೊಂದು ಪುಟದಲ್ಲಿ ಒಂದೇ ವಾಕ್ಯ. ಅದನ್ನು ಓದಿ ಹೇಳುವಂತೆ ಆಟೋಗೆ ಹೇಳಿದಳು. ಇಂಥ ಕೆಲಸವನ್ನು ಅವನು ಎಂದೂ ಮಾಡಿಲ್ಲ. ಅವನು ವಾಕ್ಯವನ್ನು ಓದಿದ. "ನೀನು ಮರದ ಹಿಂದೆ ಅಡಗಿಕೊಂಡು ಕೂತಿದ್ದೀಯಾ ಅಲ್ಲವಾ?"
"ಅದನ್ನು ಕರಡಿಯ ಹಾಗೆ ಓದಿ ಹೇಳಬೇಕು" ಎಂದು ಹಿರಿಯ ಹುಡುಗಿ ನಕ್ಕಳು.
ಆಟೋ ಮತ್ತೊಮ್ಮೆ ಪ್ರಯತ್ನಿಸಿ ಕರಡಿಯ ಕಠೋರ ಧ್ವನಿಯಲ್ಲಿ ವಾಕ್ಯವನ್ನು ಓದಿದ. ಕಿರಿಯ ಹುಡುಗಿ ಕಥೆಯಲ್ಲಿ ತಲ್ಲೀನಳಾಗಿ ಕೂತಳು. "ಇಲ್ಲ, ಇಲ್ಲ, ಮರದ ಹಿಂದೆ ಇರುವುದು ಹಕ್ಕಿ!" ಎಂದು ಚಪ್ಪಾಳೆ ತಟ್ಟಿದಳು ಅವಳು ಹಿಂದೆ ಅನೇಕ ಸಲ ಕೇಳಿದ್ದ ಕಥೆ. ಆದರೂ ಅವಳು ಮೊದಲನೇ ಸಲ ಕೇಳುತ್ತಿರುವ ಹಾಗಿತ್ತು ಅವಳ ಉತ್ಸಾಹ.
ಅಷ್ಟರಲ್ಲಿ ಒಬ್ಬ ಸರ್ಕಸ್ ಜೋಕರ್ ಅಲ್ಲಿಗೆ ಬಂದ. ಅವನು ಬಣ್ಣ ಬಣ್ಣದ ಬಟ್ಟೆ ತೊಟ್ಟು ಮುಖಕ್ಕೆ ಮುಖವಾಡ ತೊಟ್ಟಿದ್ದ.
"ಇಲ್ಲಿ ಮ್ಯಾಜಿಕ್ ಯಾರಿಗೆ ಇಷ್ಟ" ಎನ್ನುತ್ತಾ ಅವನು ದೊಡ್ಡ ಧ್ವನಿಯಲ್ಲಿ ಕೇಳುತ್ತಾ ಒಳಗೆ.ಬಂದ.
"ನನಗೆ! ನನಗೆ!" ಎಂದು ಕಿರಿಯ ಹುಡುಗಿ ಕುಪ್ಪಳಿಸಿದಳು.
"ನಿಮಗೆ ಇಷ್ಟ ಇಲ್ಲವಾ?!" ಎಂದು ಜೋಕರ್ ಉಳಿದ ಇಬ್ಬರನ್ನು ಕೇಳಿದ.
"ನಾನು ಮಕ್ಕಳಿಗೆ ಕಥೆ ಓದಿ ಹೇಳುತ್ತಿದ್ದೆ!" ಎಂದು ಆಟೋ ಅಸಮಾಧಾನದಿಂದ ಹೇಳಿದ.
"ಸರ್, ನಿಮ್ಮ ಹತ್ತಿರ ಒಂದು ಕಾಯಿನ್ ಇದ್ದರೆ ಕೊಡಿ. ನಾನು ಮ್ಯಾಜಿಕ್ ತೋರಿಸುತ್ತೇನೆ!"
ಆಟೋ ಅನುಮಾನಿಸಿದ. ಆದರೆ ಮಕ್ಕಳು ಮ್ಯಾಜಿಕ್ ನೋಡಲು ಕಾತುರದಿಂದ ಕಾಯುತ್ತಿದ್ದರು.
ಆಟೋ ಮನಸ್ಸಿಲ್ಲದೆ ತನ್ನ ವಾಲೆಟ್ ತೆಗೆದು ಅದರಲ್ಲಿ ಜೋಪಾನ ಮಾಡಿದ ಕ್ವಾರ್ಟರ್ ನಾಣ್ಯವನ್ನು ತೆಗೆದು ಕೊಟ್ಟ. ಅದು ಅವನ ಭಾಗ್ಯಶಾಲಿ ನಾಣ್ಯ. ಸೋನ್ಯಾ ಅವನಿಗೆ ಮೊದಲ ಭೇಟಿಯಲ್ಲಿ ಕೊಟ್ಟದ್ದು. ಅದನ್ನು ಅವನು ಸದಾ ತನ್ನ ಜೊತೆಗೆ ಇಟ್ಟುಕೊಳ್ಳುತ್ತಾನೆ.
ನಾಣ್ಯವನ್ನು ಪಡೆದು ಏನೋ ಮಂತ್ರ ಹೇಳಿ ಜೋಕರ್ ಅದನ್ನು ಮಾಯ ಮಾಡಿದ. ಮಕ್ಕಳ ಉತ್ಸಾಹ ಹೇಳತೀರದು.
"ಈಗ ಕಾಯಿನ್ ವಾಪಸ್ ತರಿಸಿ ಕೊಡುತ್ತೇನೆ ನೋಡಿ!" ಎಂದು ಗಾಳಿಯಲ್ಲಿ ಕೈಯನ್ನು ಬೀಸಿ ಒಂದು ಕಾಯಿನ್ ಹಿಡಿದು ಮಕ್ಕಳಿಗೆ ತೋರಿಸಿದ. ಅವರು ಚಪ್ಪಾಳೆ ತಟ್ಟಿದರು. ನಾಣ್ಯವನ್ನು ಆಟೋ ಕೈಗೆ ಕೊಟ್ಟು ಜೋಕರ್ ಹೊರಟ.
"ತಾಳು!"
ಎಂದು ಆಟೋ ಅಬ್ಬರಿಸಿದ. ಜೋಕರ್ ಅವಾಕ್ಕಾಗಿ ನಿಂತ.
"ಇದು ನನ್ನ ಕಾಯಿನ್ ಅಲ್ಲ. ನನ್ನದು ಹತ್ತೊಂಬತ್ತು ನೂರಾ ಅರವತ್ತ ನಾಲ್ಕರ ಕಾಯಿನ್. ಇದು ಬೇರೆ!"
ಜೋಕರ್ ಅವನ ಕಡೆ ದಿಗ್ಭ್ರಮೆಯಿಂದ ನೋಡಿದ.
ಆಟೋ ಸಿಟ್ಟಿನಿಂದ "ನನ್ನ ಕಾಯಿನ್ ಏನು ಮಾಡಿದೆ! ಮೂರ್ಖ!" ಎಂದು ಕೂಗಾಡಿದ. ಜೋಕರ್ ಕಾಲರ್ ಪಟ್ಟಿ ಹಿಡಿದು "ಕೊಡು ನನ್ನ ಕಾಯಿನ್!" ಎಂದು ಅಬ್ಬರಿಸಿದ.
ಕೂಗಾಟ ಕೇಳಿ ಸೆಕ್ಯೂರಿಟಿ ಗಾರ್ಡ್ ಓಡಿ ಬಂದ. ಜೋಕರ್ ಹೆದರಿಕೊಂಡು ನಡುಗುತ್ತಿದ್ದ. ಅಷ್ಟರಲ್ಲಿ ಮಾರಿಸಾಲ್ ಬಂದಳು.
"ಸರ್, ಈತ ಜೋಕರ್ ವೇಷ ತೊಟ್ಟು ಪ್ರತಿ ದಿವಸ ಬಂದು ಅಸ್ಪತೆಯಲ್ಲಿರುವ ಮಕ್ಕಳನ್ನು ರಂಜಿಸುತ್ತಾರೆ." ಎಂದು ಗಾರ್ಡ್ ಆಟೋಗೆ ವಿವರಣೆ ನೀಡಿದ. ಆದರೆ ತನ್ನ ಕಾಯಿನ್ ವಾಪಸು ಸಿಕ್ಕ ನಂತರವೇ ಆಟೋಗೆ ಸಮಾಧಾನವಾಗಿದ್ದು.
***
ಸೋನ್ಯಾಳನ್ನು ಸೇರಬೇಕೆಂಬ ತವಕ ಅವನನ್ನು ಕಾಡುತ್ತಿದೆ. ಈ ದಿಕ್ಕಿನಲ್ಲಿ ಅವನ
ಮೂರು ಪ್ರಯತ್ನಗಳು ವಿಫಲವಾಗಿವೆ. ಅವನು ಮತ್ತೊಂದು.ಪ್ರಯತ್ನವನ್ನು ಮಾಡಬೇಕೆಂದು ಅವನು
ಯೋಚಿಸುತ್ತಿದ್ದಾನೆ.
ಮಾರಿಸಾಲ್ ಜೊತೆ
ಸೋನ್ಯಾಳ ಅಚ್ಚುಮೆಚ್ಚಿನ ಬೇಕರಿಗೆ ಹೋದಾಗ
ಅವನು ಮಾತಿನ ನಡುವೆ
ಸೋನ್ಯಾ ಬಗ್ಗೆ ಹೇಳುತ್ತಿರುತ್ತಾನೆ. ಅವರ ಬೀದಿಯಲ್ಲೇ ಇರುವ ರೂಬೆನ್ ಮತ್ತು
ಅನಿಟಾ ಬಗ್ಗೆ ಅವನು
ಒಂದು ದಿನ ಹೇಳಿದ.
ಈ ಬೀದಿಯ ಮೊದಲ
ನಿವಾಸಿಗಳು ಆಟೋ
ಮತ್ತು ಸೋನ್ಯಾ ಹಾಗೂ
ರೂಬೆನ್ ಮತ್ತು ಅನಿಟಾ.
ಬಹಳ ಅನ್ಯೋನ್ಯವಾಗಿದ್ದವರು. ಬೀದಿಯಲ್ಲಿ ಒಂದು ವ್ಯವಸ್ಥೆ ತರಲು
ಅವರು ಬಹಳ ಶ್ರಮ
ಪಟ್ಟವರು. ಮನೆ
ಮಾಲೀಕರ ಸಂಘವನ್ನು ಕಟ್ಟಿದವರು. ಅದಕ್ಕೆ ಆಟೋ ಅಧ್ಯಕ್ಷನಾಗಿದ್ದ. ಎಲ್ಲವೂ ಚೆನ್ನಾಗಿತ್ತು. ಆದರೆ ಕ್ರಮೇಣ ರೂಬೆನ್
ಬದಲಾದ. . ತಾನು ಟೊಯೋಟಾ
ಮತ್ತು ಫೋರ್ಡ್ ಕಾರುಗಳನ್ನು ಖರೀದಿಸಿದ ನಂತರ
ಆಟೋ ಬಳಿ ಇದ್ದ
ಶೇವ್ರಲೇ ಕಾರನ್ನು ಟೀಕಿಸುವ ಮಟ್ಟಕ್ಕೆ ಇಳಿದ. ಅಷ್ಟು ಸಾಲದು
ಎಂಬಂತೆ ಮನೆ ಮಾಲೀಕರ
ಸಂಘದ ಅಧ್ಯಕ್ಷ ಪದವಿಯಿಂದ ಆಟೊನನ್ನು ಉಚ್ಚಾಟಿಸಲು ಗುಟ್ಟಾಗಿ ಸಭೆಗಳನ್ನು ನಡೆಸಿದ. ಅವರ ಸ್ನೇಹ
ಮುರಿದು ಬಿತ್ತು.
ವರ್ಷಗಳು ಕಳೆದವು.
ಇಬ್ಬರೂ ವೃದ್ಧಾಪ್ಯದ ಕಡೆಗೆ
ಜಾರಿದರು. ಒಂದು
ದಿವಸ ಆಟೋಗೆ ಹಳೆಯ
ಜಗಳವನ್ನು ಮುಗಿಸೋಣ ಎಂದು ಮನಸ್ಸಾಯಿತು. ಅವನು
ಉಡುಗೊರೆಯ ಸ್ವರೂಪವಾಗಿ ಒಂದು ಬಾಟಲ್ ವೈನ್
ಕೊಂಡೊಯ್ದು ರೂಬೆನ್
ಮನೆಯ ಕಡೆಗೆ ಹೋದ.
ರೂಬೆನ್ ತನ್ನ ಗರಾಜಿನ
ಬಾಗಿಲು ಮುಚ್ಚಿ ಹೊರಗೆ
ಬರುತ್ತಿದ್ದ.
"ರೂಬೆನ್,
ನಮ್ಮಿಬ್ಬರಿಗೂ ವಯಸ್ಸಾಯಿತು. ಇನ್ನು ಈ ಮನಸ್ತಾಪ ಮುಂದುವರೆಸುವ ಅಗತ್ಯ
ಏನಿದೆ?" ಎಂದು ಆಟೋ
ಕೇಳಿದ. ಕೈಯಲ್ಲಿದ್ದ ವೈನ್
ಬಾಟಲನ್ನು ರೂಬೆನ್
ಕೈಗೆ ಕೊಟ್ಟ.
"ನನ್ನ
ಹೊಸ ಕಾರು ನೋಡುತ್ತೀಯಾ?" ಎಂದು ರೂಬೆನ್
ಕೇಳಿದ. ವೈನ್ ಬಾಟಲನ್ನು ಕೆಳಗಿಟ್ಟು ಗರಾಜಿನ
ಬಾಗಿಲು ತೆರೆದ. ಅಲ್ಲಿ
ಟೊಯೋಟಾ ಹೊಸ ಮಾದರಿಯ
ಕಾರ್ ಇತ್ತು. ಅದರ
ಇಂಜಿನ್ ಎಷ್ಟು ಸಿಸಿ,
ಅದರ. ವೇಗ ಎಷ್ಟು
ಇತ್ಯಾದಿಯನ್ನು ಕೊಚ್ಚಿಕೊಂಡು "ಶೆವ್ರಲೇ ಕಾರಲ್ಲಿ ಇದೆಲ್ಲಾ ಸಿಕ್ಕದು" ಎಂದ. ಆಟೋ
ನೆಲದ ಮೇಲಿದ್ದ ವೈನ್
ಬಾಟಲನ್ನು ಕೈಗೆತ್ತಿಕೊಂಡು ಏನೂ ಮಾತಾಡದೆ ಹೊರಟು ಬಂದ.
ಇದಾದ ಕೆಲವು ತಿಂಗಳ
ನಂತರ ರೂಬೆನ್ ಆರೋಗ್ಯ
ಬಿಗಡಾಯಿಸಿತು. ಅವನಿಗೆ
ಹೃದಯನಸ್ತಂಭನವಾಗಿ ಅವನು
ನಿಶ್ಚೇಷ್ಟಿತನಾಗಿ ವ್ಹೀಲ್
ಚೇರ್ ಮೇಲೆ ಜೀವನದ
ಕಡೆಯ ದಿನಗಳನ್ನು ಕಳೆಯಬೇಕಾಗಿ ಬಂತು. ಒಮ್ಮೊಮ್ಮೆ ಆಟೋ
ಅವನ ಮನೆಗೆ ಹೋಗುತ್ತಾನೆ. ಅನಿಟಾ ಜೊತೆ ಅದೂ
ಇದೂ ಮಾತಾಡುತ್ತಾನೆ. "ನಾವು
ಮಾತಾಡುವುದು ಅವನಿಗೆ
ಕೆಳುತ್ತದೋ ಇಲ್ಲವೋ?"
ಎಂದು ರೂಬೆನ್ ಕಡೆಗೆ
ಕೈ ಮಾಡಿ ಕೇಳುತ್ತಾನೆ. ಅನಿಟಾ ಒಬ್ಬಂಟಿಯಾಗಿ ಗಂಡನನ್ನು ನೋಡಿಕೊಳ್ಳುತ್ತಾಳೆ. ಅವರ
ಒಬ್ಬನೇ ಮಗ ಬೇರೆ
ದೇಶದಲ್ಲಿ ಇದ್ದಾನೆ. ಅವನು ಇವರ ಜೊತೆ
ಹೆಚ್ಚಿನ ಸಂಪರ್ಕ
ಇಟ್ಟುಕೊಂಡಿಲ್ಲ.
ಆಟೋ ಮನೆಗೆ ಬಂದಾಗ
ಅವನ ಮನೆಯ ಮುಂದೆ
ಒಂದು ಕಾರ್ ಬಂದು
ನಿಲ್ಲುತ್ತದೆ. ಒಳಗಿನಿಂದ ಇಪ್ಪತ್ತರ ತರುಣಿ
ಇಳಿದು ಬಂದು "ನೀವು
ಆಟೋ ಆಂಡರ್ಸನ್ ಅಲ್ಲವೇ?"
ಎನ್ನುತ್ತಾ ಕೈ
ಮುಂದೆ ಚಾಚುತ್ತಾಳೆ. ಆಟೋ."ನೀವು
ಯಾರು?" ಎಂದು ಅನುಮಾನದಿಂದ ಕೇಳುತ್ತಾನೆ.
"ಶರೀ
ಕೆಂಜಿ ಅಂತ ನನ್ನ
ಹೆಸರು. ನಾನೊಬ್ಬ ಸಾಮಾಜಿಕ ಮಾಧ್ಯಮ ಪತ್ರಕರ್ತೆ."
"ಏನು
ಹಾಗಂದರೆ? ಅಂತಹದೊಂದು ಕೆಲಸವೂ ಇದೆಯಾ?" ಎಂದು
ಆಟೋ ಕೇಳಿದ.
***
ಶರೀ ಕೆಂಜಿ ಇಪ್ಪತ್ತರ ಹರೆಯದ ತರುಣಿ. ಪಟಪಟ
ಮಾತಾಡುತ್ತಾಳೆ. ಅವಳು
"ಸರ್, ನೀವು ಒಬ್ಬರು
ಹೀರೋ. ಒಬ್ಬ ಮನುಷ್ಯನ ಜೀವ ಉಳಿಸಿದ್ದೀರಿ. ಆಟೋ
ಆಂಡರ್ಸನ್ ನೀವೇ
ಅಲ್ಲವೇ!?" ಎಂದು ಕೇಳಿದಳು.
ಅವನು "ನಿನಗೆ ಎಲ್ಲೋ
ಭ್ರಾಂತಿ!" ಎಂದು
ಅವಳನ್ನು ನಿರ್ಲಕ್ಷ್ಯ ಮಾಡಿದ.
"ತಾಳಿ,
ಇದು ನೀವಲ್ಲ ಅಂತ
ಹೇಗೆ ಹೇಳುತ್ತೀರಿ? ನಿಮ್ಮ
ವೀಡಿಯೋ ವೈರಲ್ ಆಗಿದೆ.
ನೀವು ರೈಲ್ವೆ ಸ್ಟೇಷನ್ನಿನಲ್ಲಿ ಒಬ್ಬ ಮನುಷ್ಯನ ಜೀವ ಉಳಿಸಿದ್ದಕ್ಕೆ ಪುರಾವೆ
ಇದೆ!" ಎಂದು ತನ್ನ
ಕೈಯಲ್ಲಿದ್ದ ಮೊಬೈಲ್
ಝಳಪಿಸಿದಳು.
"ಏನು?
ವಿಡಿಯೋ ಇದೆಯಾ?" ಎಂದು
ಆಟೋ ಕೇಳಿದ. ರೈಲ್ವೆ
ಸ್ಟೇಷನ್ನಿನಲ್ಲಿ ಮುದುಕರು ಕೆಳಗೆ ಬಿದ್ದಾಗ ಜನ
ವಿಡಿಯೋ ಮಾಡಿಕೊಳ್ಳುಟ್ಟಿರುವುದು ಅವನಿಗೆ
ನೆನಪಾಯಿತು.
ಅವನು ತನ್ನ ಗರಾಜಿನ
ಒಳಗೆ ಹೋದ. ಶರಿ
ಅವನನ್ನು. ಹಿಂಬಾಲಿಸಿದಳು.
"ನಿಮ್ಮನ್ನು ಬಹಳ ಕಷ್ಟ ಪಟ್ಟು
ಹುಡುಕಿದ್ದೇನೆ ಮಿಸ್ಟರ್ ಆಂಡರ್ಸನ್. ನನಗೆ
ನಿಮ್ಮ ಇಂಟರ್ವ್ಯೂ ಬೇಕಾಗಿದೆ. ನಾನು ಸಾಮಾಜಿಕ ಮಾಧ್ಯಮದಲ್ಲಿ ವರದಿಗಾರ್ತಿ. ನನ್ನದೇ
ನ್ಯೂಸ್ ವೆಬ್ ಸೈಟ್
ಇದೆ. ನಾನು ಸ್ಥಳೀಯ
ಸುದ್ದಿಗಳನ್ನು ಕವರ್
ಮಾಡುತ್ತೇನೆ. ಇಲ್ಲ
ಅನ್ನಬೇಡಿ."
"ಖಂಡಿತಾ
ಆಗದು. ನೀನು ಬಂದ
ದಾರಿ ಹಿಡಿದು ವಾಪಸ್
ಹೋಗುವುದು ಒಳ್ಳೆಯದು."
"ಒಂದು
ನಿಮಿಷ ಯೋಚಿಸಿ. ನಿಮ್ಮಿಂದ ಯುವ ಜನಾಂಗ ಎಷ್ಟೊಂದು ಕಲಿಯಬಹುದು! ನಿಮ್ಮ
ಜೀವದ ಮೇಲೆ ಆಸೆ
ಬಿಟ್ಟು ನೀವು ಒಬ್ಬ
ಮನುಷ್ಯನ ಜೀವ
ಉಳಿಸಿದ್ದೀರಿ!"
"ನನ್ನಿಂದ ಯುವ ಜನಾಂಗ ಏನೂ
ಕಲಿಯಬೇಕಾಗಿಲ್ಲ. ನೀನು
ಹೋಗಬಹುದು."
ಅವಳು ದುಂಬಾಲು ಬಿದ್ದಳು. ಅವನು ಗರಾಜಿನ ಷಟರ್
ಮುಚ್ಚಿ ಹೊರಗೆ ಬಂದ.
ಒಳಗಿದ್ದ ಶರೀ
ಭೀತಿಯಿಂದ "ಅಯ್ಯಯ್ಯೋ! ಮಿಸ್ಟರ್ ಆಂಡರ್ಸನ್! ನನ್ನನ್ನು ನೀವು
ಹೀಗೆ ಕೂಡಿಹಾಕೋದು ಸರಿಯಲ್ಲ!" ಎಂದು ಬಾಗಿಲನ್ನು ಕುಟ್ಟಿದಳು.
ಅವನು ಒಂದೆರಡು ನಿಮಿಷ
ಕಾದು "ನಾನೇನೂ ನಿನ್ನನ್ನು ಕೂಡಿ ಹಾಕಿಲ್ಲ. ಇಲ್ಲಿರುವ ಬಾಗಿಲಿನ ಹಿಡಿ
ತಿರುಗಿಸಿದ್ದರೆ ಬಾಗಿಲು
ತೆಗೆಯುತ್ತಿತ್ತು. ಅದೆಂಥ
ಪತ್ರಕರ್ತೆಯೋ?!" ಎಂದು
ಆಟೋ ಹಾಸ್ಯ ಮಾಡಿದ.
"ನನ್ನ
ವೆಬ್ ಸೈಟಿಗೆ ಮೂರು
ಸಾವಿರ ಫಾಲೋವರ್ಸ್ ಇದ್ದಾರೆ ಮಿಸ್ಟರ್ ಆಂಡರ್ಸನ್. ಇದು ನನ್ನ ವಿಸಿಟಿಂಗ್ ಕಾರ್ಡ್. ನಾನು ನಿಮ್ಮ
ಸಂಪರ್ಕದಲ್ಲಿ ಇರುತ್ತೇನೆ!" ಎಂದು ಅವಳು
ತನ್ನ ಕಾರಿನಲ್ಲಿ ಕೂತು
ಹೊರಟಳು.
ಅವಳನ್ನು ಮತ್ತೆ
ಸಂಪರ್ಕಿಸುವ ಸಂದರ್ಭ
ಬರಬಹುದೆಂದು ಆಟೋ
ಯೋಚಿಸಿರಲಿಲ್ಲ.
ಅವಳು ಹೊರಟ ನಂತರ
ಅವನು ಮನೆಯೊಳಗೆ ಹೋಗುವಾಗ ಮಾರಿಸಾಲ್ ಬಂದಳು.
ತನ್ನ ಎರಡನೇ ಮಗಳು
ಬರೆದ ಚಿತ್ರವನ್ನು ಆಟೋಗೆ
ಕೊಟ್ಟಳು. ಇಬ್ಬರು
ಹುಡುಗಿಯರ ನಡುವೆ
ಒಬ್ಬ ಮನುಷ್ಯನ ಚಿತ್ರ.
ಮನುಷ್ಯ ಕೋಟ್ ತೊಟ್ಟಿದ್ದ ಎಂದು ಹೇಳಬಹುದಾಗಿತ್ತು. ಅದಕ್ಕೆ
ಕ್ರೆಯಾನ್ ಬಳಸಿ
ಬಣ್ಣ ಹಾಕಿತ್ತು.
"ಅವಳು
ಯಾವಾಗಲೂ ನಿನ್ನ
ಚಿತ್ರಕ್ಕೆ ಮಾತ್ರ
ಬಣ್ಣ ಹಾಕುತ್ತಾಳೆ!" ಎಂದು
ಮಾರಿಸಾಲ್ ಹೇಳಿದಳು. "ಯಾವಾಗಲೂ ಅಂದರೆ?!"
ಎಂದು ಅವನು ಪ್ರಶ್ನಾರ್ಥಕವಾಗಿ ನೋಡಿದ.
ಅವರು ಒಳಗೆ ಹೋದಾಗ
ಅವನು ಕೋಟ್ ತೆಗೆದು
ಹ್ಯಾಂಗರಿನ ಮೇಲೆ
ತೂಗು ಹಾಕಿದ. ಅಲ್ಲಿ
ಪಿಂಕ್ ಬಣ್ಣದ ಹೆಂಗಸರ
ಕೋಟ್ ಕೂಡಾ ತೂಗು
ಹಾಕಿತ್ತು.
ಮಾರಿಸಾಲ್ ಹೋಗಿ
ಪಿಂಕ್ ಬಣ್ಣದ ಕೋಟನ್ನು ತೆಗೆದು ಕೈಯಲ್ಲಿ ಇಟ್ಟುಕೊಂಡಳು.
"ಇದು
ಸೋನ್ಯಾ ಅವರ ಕೋಟ್
ಅಲ್ಲವೇ?" ಎಂದು ಕೇಳಿದಳು.
"ಅದನ್ನು
ಅಲ್ಲೇ ಇಡು! ಅದನ್ನು
ತೆಗೆಯಲು ಯಾರು
ಹೇಳಿದರು?" ಎಂದು
ಅವಳ ಕೈಯಿಂದ ಕೋಟ್
ಕಿತ್ತುಕೊಂಡು ಅವನು
ಕೋಟನ್ನು ವಾಪಸ್
ಕೋಟ್ ಸ್ತಾಂಡಿನ ಮೇಲೆ
ತೂಗು ಹಾಕಿದ. .
"ನೆನಪುಗಳನ್ನು ಮರೆಯುವುದು ಒಳ್ಳೆಯದು ಆಟೋ. ಇದು ಇಲ್ಲಿ
ತೂಗಿ ಹಾಕಿದ್ದರೆ ನೀವು
ಸೋನ್ಯಾ ಅವರನ್ನು ಮರೆಯುವುದು ಹೇಗೆ?"
"ಅವಳನ್ನು ನಾನು ಮರೆಯಲು ಪ್ರಯತ್ನಿಸುತ್ತಿಲ್ಲ!" ಎಂದು ಅವನು
ರೇಗಿದ. "ನನಗೆ ನಿನ್ನ
ಸಲಹೆ ಬೇಕಾಗಿಲ್ಲ!"
ಅವಳು ಹೊರಟಳು. ಅವನು
ಬಾಗಿಲನ್ನು ರಪ್ಪನೆ
ಮುಚ್ಚಿದ.
***
ಬೆಳಗ್ಗೆ ಮಾಲ್ಕಂ ತನ್ನ ಸೈಕಲ್ ಮೇಲೆ ಬಂದು ದಿನಪತ್ರಿಕೆಯ ಸುರುಳಿಯನ್ನು ಸರಿಯಾಗಿ ಎಸೆದಾಗ ಅಲ್ಲೇ ನಿಂತಿದ್ದ ಆಟೋ ಅವನ ಕಡೆಗೆ ನೋಡಿ ಕೈ ಆಡಿಸುತ್ತಾನೆ. ಮಾಲ್ಕಂ ಸೈಕಲ್ಲಿಗೆ ಬ್ರೇಕ್ ಹಾಕಿ ನಿಲ್ಲಿಸಿ ಆಟೋ ಜೊತೆ ಒಂದೆರಡು ಸೌಜನ್ಯದ ಮಾತಾಡುತ್ತಾನೆ. ಅವನು ಮತ್ತೆ ಸೈಕಲ್ ಏರಿದಾಗ ಅದು ಕಟಕಟ ಸದ್ದು ಮಾಡುವುದನ್ನು ಕೇಳಿ "ಅದೇನು ಸದ್ದು?" ಎಂದು ಆಟೋ ಕೇಳುತ್ತಾನೆ.
"ನನ್ನ ಸೈಕಲ್ ಹಳೆಯದು ಸರ್. ಕೆಟ್ಟುಹೋಗಿದೆ. ಹೊಸ ಸೈಕಲ್ ಕೊಳ್ಳಲು ನನ್ನ ಬಳಿ ಹಣ ಇಲ್ಲ."
"ಕೆಟ್ಟಿದೆ ಅಂತ ನೀನು ಹೇಳಿದರೆ ಅದು ಕೆಟ್ಟುಹೋಗಿದೆ ಎಂದು ಅರ್ಥವೋ!?"
"ನೀವೇ ನೋಡಿದಿರಲ್ಲ. ಹೇಗೆ ಕಟಕಟ ಸದ್ದು ಮಾಡುತ್ತಾ ಇದೆ ಅಂತ!"
"ನನ್ನ ಗರಾಜಿಗೆ ತಂದರೆ ಏನಾಗಿದೆ ಎಂದು ನೋಡುತ್ತೇನೆ!"
ಆಟೋ ಸೈಕಲ್ಲಿನ ಚೇನ್ ಬಿಚ್ಚಿ ಅದನ್ನು ಸರಿಯಾಗಿ ಜೋಡಿಸಿ ಎಣ್ಣೆ ಹಾಕಿ ಪೆಡಲ್ ಓಡಿಸಿರಾಗ ಸೈಕಲ್ ಚಕ್ರಗಳು ಯಾವ ಕಿರಿಕಿರಿ ಇಲ್ಲದೆ ಸಲೀಸಾಗಿ ಓಡಿದವು. ಮಾಲ್ಕಂ ಮುಖ ಅರಳಿತು. "ವಾವ್, ನನ್ನ ಸೈಕಲ್ ರಿಪೇರಿ ಆಯಿತು!" ಎಂದು ಅವನು ಸಂಭ್ರಮ ಪಟ್ಟ. ಅವನ ಸಂತೋಷದ ಒಂದು ಭಾಗ ಆಟೋ ಮುಖದ ಮೇಲೂ ಹರಡಿತು.
ಅವನು ಮಾಲ್ಕಂನನ್ನು ಬೀಳ್ಕೊಟ್ಟು ರೂಬೆನ್ ಮತ್ತು ಅನಿಟಾಳನ್ನು ನೋಡಿ ಬರಲು ಅವರ ಮನೆಗೆ ಹೋದ. ಅವರ ಮನೆಯ ಕಡೆಯಿಂದ ಒಂದು ಕಾರ್ ಬಂದಿದ್ದನ್ನು ನೋಡಿ ಆಟೋ ಅದನ್ನು ತಡೆದ. ಕಾರ್ ಒಳಗಿದ್ದ ಮನುಷ್ಯ ಒಂದು ರಿಯಲ್ ಎಸ್ಟೇಟ್ ಏಜೆನ್ಸಿಯ ಪ್ರತಿನಿಧಿ. ಅವನು ಆಟೋಗೆ ಪರಿಚಿತನೇ. ಆಟೋ ಅವನನ್ನು ತಡೆದು "ಈ ಬೀದಿಯಲ್ಲಿ ಕಾರು ತರಲು ನಿನ್ನ ಹತ್ತಿರ ಪರ್ಮಿಟ್ ಇದೆಯಾ?" ಎಂದ.
"ಆಟೋ, ನೀನು ಮತ್ತೆ ಅದೇ ಜಗಳ ಶುರು ಮಾಡಬೇಡ."
"ಪರ್ಮಿಟ್ ಇದೆಯಾ ಹೇಳು!"
"ನಿನ್ನದು ಅತಿ ಆಯಿತು ಎಂದು ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. ನಿನ್ನ ಬಗ್ಗೆ ದೂರುಗಳ ದೊಡ್ಡ ಪಟ್ಟಿಯನ್ನೇ ಮನೆ ಮಾಲೀಕರ ಸಂಘ ಇಟ್ಟಿದೆ. ಅದು ಈಗ ದಪ್ಪ ಪುಸ್ತಕ ಆಗಿದೆ."
"ಪರ್ಮಿಟ್ ಇದೆಯಾ ಹೇಳು ಅಂದೆ!!" ಎಂದು ಆಟೋ ಕೂಗಿದ. ಅವನಿಗೆ ಆಯಾಸದಿಂದ ತಲೆ ಸುತ್ತಿದ ಹಾಗಾಯಿತು. ಅವನು ಕಾರನ್ನು ಆಧಾರವಾಗಿ ಹಿಡಿದುಕೊಂಡ.
"ನಿನ್ನ ಹೃದಯದ ಕಡೆ ಗಮನ ಇರಲಿ!" ಎಂದು ರಿಯಲ್ ಎಸ್ಟೇಟ್ ಏಜೆನ್ಸಿಯ ಮನುಷ್ಯ ಎಚ್ಚರಿಸಿದ.
"ನನ್ನ ಹೃದಯದ ಬಗ್ಗೆ ನಿನಗೆ ಏನು ಗೊತ್ತು?" ಎಂದು ಆಟೋ ಕೂಗಿದ. ಅವನ ಎದೆಯ ಬಡಿತ ಜೋರಾಗಿತ್ತು. ಅವನು ಅಲ್ಲೇ ಕುಸಿದ. ರಿಯಲ್ ಎಸ್ಟೇಟ್ ಏಜೆನ್ಸಿಯ ಮನುಷ್ಯ ಕಾರನ್ನು ಓಡಿಸಿಕೊಂಡು ಹೊರಟುಹೋದ.
ಆಟೋ ಸಾವರಿಸಿಕೊಂಡು ಮೇಲೆದ್ದ.
ಅನಿಟಾ ಎಂದಿನಂತೆ ಮುಗುಳುನಗೆ ನಕ್ಕು ಅವಳನ್ನು ಒಳಗೆ ಕರೆದಳು. ರೂಬೆನ್ ಎಂದಿನಂತೆ ತಲೆ ಬಗ್ಗಿಸಿಕೊಂಡು ವ್ಹೀಲ್ ಚೇರಿನಲ್ಲಿ ಕೂತಿದ್ದ. ಮಾತಿನ ನಡುವೆ ತಾವು ಈ ಮನೆಯನ್ನು ಬಿಟ್ಟು ವೃದ್ಧಾಲಯಕ್ಕೆ ಹೋಗುವ ನಿರ್ಧಾರಕ್ಕೆ ಬಂದಿರುವುದನ್ನು ಅನಿಟಾ ತಿಳಿಸಿದಳು. ಡೈ ಆಂಡ್ ಮೆರಿಕಾ ರಿಯಲ್ ಎಸ್ಟೇಟ್ ಏಜೆನ್ಸಿಯ ಪ್ರತಿನಿಧಿ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾನೆ ಎಂದು ಸೇರಿಸಿದಳು.
ಡೈ ಆಂಡ್ ಮೆರೀಕಾ ಜೊತೆಗೆ ಆಟೋ ಸಂಬಂಧ ಎಂದೂ ಚೆನ್ನಾಗಿರಲಿಲ್ಲ. ಅವರು ಮನೆಗಳನ್ನು ಕಟ್ಟಲು ಮರಗಳನ್ನು ಕಡಿದುಹಾಕುವುದನ್ನು ಅವನು ವಿರೋಧಿಸಿದ. ತಮ್ಮ ಮನೆಯ ಹತ್ತಿರ ಇದ್ದ ಎಷ್ಟೊಂದು ಬರ್ಚ್ ಮರಗಳನ್ನು ಅವರು ಕಡಿದು ಹಾಕಿದರು! "ಮರಗಳು ಮನುಷ್ಯನ ಮೇಲೆ ಏನು ಪ್ರಭಾವ ಬೀರುತ್ತವೆ ಎಂದು ನನಗೆ ಆಗಲೇ ಅರ್ಥವಾಗಿದ್ದು." ಎಂದು ರೂಬೆನ್ ಕಡೆಗೆ ನೋಡುತ್ತಾ ಆಟೋ ಹೇಳಿದ. ಡೈ ಮತ್ತು ಮೆರಿಕಾ ಸಿಬ್ಬಂದಿಗೆ ಆಟೋ ಕಂಡರೆ ಅಸಹನೆ ಬೆಳೆಯಿತು. ಆಗ ಆಟೋ ಮನೆ ಮಾಲೀಕರ ಸಂಘದ ಮಾಲೀಕನಾಗಿದ್ದ. ರಾಜಕೀಯ ನಡೆಸಿ ಅವನನ್ನು ಆ ಪದವಿಯಿಂದ ಅವರು ಪದಚ್ಯುತಗೊಳಿಸಿದರು.
ಆಟೋ ಮಾತಾಡುತ್ತಾ ಅನಿಟಾ ಕಡೆಗೆ ನೋಡಿದ. ಅವಳ ಮುಖದಲ್ಲಿ ಆತಂಕ ಕಾಣುತ್ತಿತ್ತು. "ನನ್ನಿಂದ ಏನಾದರೂ ಮುಚ್ಚಿಡುತ್ತಿದ್ದೀಯಾ?"
ಎಂದು ಕೇಳಿದ. ಅನಿಟಾ ಈಚೆಗೆ ಮಾರಿಸಾಲ್ ಒಡನೆ ಹಂಚಿಕೊಂಡ ಗುಟ್ಟನ್ನು ಮಾರಿಸಾಲ್ ಆಟೋಗೆ ಹೇಳಿದ್ದಳು.
ಅನಿಟಾ ತಮಗೆ ಅಲ್ಹೈಮರ್ಸ್ ಕಾಯಿಲೆ ಇದೆಯೆಂದು ಡಾಕ್ಟರ್ ಪತ್ತೆ ಹಚ್ಚಿದ್ದಾರೆಂದು ತಿಳಿಸಿದಳು. ಹೀಗಾಗಿ ತಾವು ವೃದ್ಧಾಶ್ರಮಕ್ಕೆ ಹೋಗುವುದೇ ಒಳ್ಳೆಯದು ಎಂದು ಅವಳು ಸಮರ್ಥಿಸಿಕೊಂಡಳು.
"ನೀನು ಟೆಸ್ಟ್ ಇತ್ಯಾದಿ ಯಾವಾಗ ಮಾಡಿಸಿದೆ? ನನಗೆ ಗೊತ್ತಾಗದೆ?"
"ಡೈ ಆಂಡ್ ಮೆರಿಕಾ ಪ್ರತಿನಿಧಿ ಎಲ್ಲಾ ಪ್ರಬಂಧ ಮಾಡಿದ"
ಆಟೋ ಸುಮ್ಮನಿದ್ದ. ನಂತರ ರೂಬೆನ್ ಕಡೆಗೆ ನೋಡಿ "ನೀನು ಯೋಚಿಸಬೇಡ. ನಾನು ಇದನ್ನು ಸುಮ್ಮನೆ ಬಿಡುವುದಿಲ್ಲ!"ಎಂದ. ರೂಬೆನ್ ಮುಖದಲ್ಲಿ ಒಂದು ಬಗೆಯ ಕೃತಾರ್ಥ ಭಾವ ಮಿಂಚಿ ಮಾಯವಾಯಿತು.
***
ಶರಿ ಕೆಂಜಿಯನ್ನು ಆಟೋ
ಹೇಗೆ ನಿಪಟಾಯಿಸಿದ ಎಂಬುದನ್ನು ಮಾರಿಸಾಲ್ ಗಮನಿಸಿದಳು. ಅವಳು ಆಟೋನನ್ನು ಹುಡುಕಿಕೊಂಡು ಬಂದಿದ್ದಳು. ಪ್ರತಿದಿನ ಅವನಿಂದ ಏನಾದರೂ ಸಹಾಯ
ಬೇಡುವುದು ಅವಳ
ಮುಜುಗರದ ವಿಷಯವಾಗಿತ್ತು. ಅವಳಾದರೂ ಏನು
ಮಾಡುವ ಹಾಗಿದೆ? ಅವಳೀಗ
ತುಂಬು ಗರ್ಭಿಣಿ. ಅವಳ
ಗಂಡ ಟಿಮ್ ಅವಳ
ಸಹಾಯಕ್ಕೆ ಬಂದರೆ
ಅದರಿಂದ ತೊಂದರೆಯೇ ಹೆಚ್ಚು!
ಅವನು ಕಾಲು ಮುರಿದುಕೊಂಡು ಮನೆಯಲ್ಲಿ ಕ್ರಚ್
ಹಿಡಿದು ಕೊಂಡು ಓಡಾಡುತ್ತಿದ್ದಾನೆ. ಅವನನ್ನು ನೋಡಿಕೊಳ್ಳುವ ಕೆಲಸವೂ ಇವಳಿಗೆ ಬಂದಿದೆ.
ಹೀಗಾಗಿ ಏನೇ ಕಷ್ಟ
ಎನ್ನಿಸಿದಾಗಲೂ ಅವಳು
ಆಟೋ ಎಂದು ಓಡಿ
ಬರುತ್ತಾಳೆ.
"ನಿಮ್ಮಿಂದ ಪ್ರತಿದಿನ ಏನಾದರೂ
ಕೇಳಿ ಮಾಡಿಸಿಕೊಳ್ಳುವುದು ನನಗೆ
ಬಹಳ ಸಂಕೋಚ. ನಿಮಗೆ
ನಾನು ಪ್ರತಿಯಾಗಿ ಏನಾದರೂ
ಮಾಡಬೇಕಲ್ಲ?"
"ಏನೂ
ಬೇಡ" ಎಂದು ಆಟೋ
ಮೊಟಕಾಗಿ ಹೇಳಿದ.
"ನಿಮಗೆ
ಒಮ್ಮೊಮ್ಮೆ ನಾನು
ಏನಾದರೂ ಅಡುಗೆ ಮಾಡಿ
ತಂದುಕೊಡಬಹುದು."
"ನೀನು
ಆವತ್ತು ಕೊಟ್ಟಿದ್ದೆಯಲ್ಲ, ಕುಕ್ಕಿ,
ಅದು ಪರವಾಗಿಲ್ಲ."
"ನಿಮಗೆ
ಇಷ್ಟ ಆಯಿತು ಅನ್ನಿ!
ಮತ್ತೆ ಮಾಡಿಕೊಡುತ್ತೇನೆ! ಹಾಗೇ
ನಿಮ್ಮ ಮನೆಯನ್ನು ಒಂದಿಷ್ಟು ಓರಣ ಮಾಡಿಕೊಡಲೇ?"
"ಬೇಕಾಗಿಲ್ಲ."
"ನೋಡಿ,
ನೀವು ಸೋನ್ಯಾ ಅವರ
ವಸ್ತುಗಳನ್ನು ಒಳಗೆ
ಇಟ್ಟರೆ ಒಳ್ಳೆಯದು. ನಾನು
ಬಂದು ಅದನ್ನೆಲ್ಲ ಮಾಡಿಕೊಡುತ್ತೇನೆ."
"ಬೇಕಾಗಿಲ್ಲ."
"ನನ್ನ
ತಂದೆ ಸತ್ತಾಗ ನನ್ನ
ತಾಯಿ ಕೂಡಾ ಇದೇ
ತಪ್ಪು ಮಾಡಿದಳು. ಅವಳು
ಬದುಕುವುದನ್ನೇ ಬಿಟ್ಟಳು. ನೀವು ಸೋನ್ಯಾ ಅವರನ್ನು ಮರೆತು ಮುಂದೆ ಹೋಗಬೇಕು."
"ನೀನು
ಸ್ವಲ್ಪ ಬಾಯಿ ಮುಚ್ಚು!!"
ಅವಳು ಬಾಯಿಗೆ ಕೈ
ಅಡ್ಡ ಹಿಡಿದು "ನಿಮಗೆ
ನೋವಾಗಿದ್ದರೆ ಕ್ಷಮಿಸಿ!" ಎಂದಳು.
"ನಾನು
ಸೋನ್ಯಾಳನ್ನು ನನ್ನ
ಬದುಕಿನಿಂದ ಹೊರಗೆ
ಹಾಕಲು ಪ್ರಯತ್ನಿಸುತ್ತಿಲ್ಲ. ನನ್ನ
ಜೀವನದಲ್ಲಿ ಅವಳಿಗೆ
ಮುಂಚೆ ಯಾರೂ ಇರಲಿಲ್ಲ. ಅವಳ ನಂತರವೂ ಯಾರೂ
ಇರುವುದಿಲ್ಲ. ಅವಳ
ಹೊರತು ನನಗೆ ಜೀವನದಲ್ಲಿ ಯಾವುದಕ್ಕೂ ಬೆಲೆ
ಇಲ್ಲ!"
"ನಾನು?
ನನಗೆ ಸ್ವಲ್ಪವಾದರೂ ಬೆಲೆ
ಇಲ್ಲವೇ?" ಎಂದು ಮಾರಿಸಾಲ್ ಕೇಳಿದಳು. ತಂದೆಯನ್ನು ಮಗಳು ಬೇಡಿಕೊಳ್ಳುವ ಧ್ವನಿಯಲ್ಲಿ.
ಅವನಿಗೆ ಡೈ ಅಂಡ್
ಮೆರೀಕಾ ಪ್ರತಿನಿಧಿ ಕಾರಿನಲ್ಲಿ ಬರುತ್ತಿರುವುದು ಕಂಡಿತು.
"ಈ
ನಾಯಿಮಗನಾ ನಮ್ಮ
ರಸ್ತೆಯ ಗೇಟ್ ಮುಚ್ಚದೆ ಹೋಗಿದ್ದು!" ಎಂದು
ಅಬ್ಬರಿಸಿ ಅವನ
ಕಾರನ್ನು ಅಡ್ಡಗಟ್ಟಿದ.
"ನಿಲ್ಲಿಸೋ ಕಾರನ್ನ! ನೀನೇ ತಾನೇ
ಗೇಟ್ ಮುಚ್ಚದೆ ಒಳಗೆ
ಬಂದಿದ್ದು?"
ಪ್ರತಿನಿಧಿ ಸುಮ್ಮನಿದ್ದ.
"ನೀನೇ
ತಾನೇ! ನಿನಗೆ ರೂಲ್ಸ್
ಗೊತ್ತಿಲ್ಲವಾ!!" ಎಂದು
ಆಟೋ ಕೋಪಾವಿಷ್ಟನಾಗಿ ಕೂಗಾಡಿದ. ಅವನ ಹೃದಯ ವೇಗವಾಗಿ ಬಡಿದುಕೊಂಡಿತು.
"ಆಟೋ!
ಸುಮ್ಮನೆ ಕೂಗಾಡಬೇಡ. ನಿನ್ನ ಬಗ್ಗೆ ಸಾಕಷ್ಟು ಕೇಳಿದ್ದೇನೆ. ನಮ್ಮ
ಹತ್ತಿರ ದೊಡ್ಡ ಫೈಲ್
ಇದೆ ನಿನ್ನ.ಬಗ್ಗೆ.
ನಿನಗೆ ಎಲ್ಲಿ ನೋಡಿದರೂ ತಪ್ಪು ಕಾಣುತ್ತೆ. ನಿನ್ನ
ಹೆಂಡತಿ ಸೋನ್ಯಾಗೆ ಉಂಟಾದ
ಸ್ಥಿತಿಗೂ ನೀನು
ಯಾರು ಯಾರನ್ನು ದೂರುತ್ತೀ ಎಂದು ಬಲ್ಲೆ."
"ಮುಚ್ಚು
ಬಾಯಿ! ಇನ್ನೊಂದು ಮಾತು
ಆಡಿದರೆ ನನ್ನಷ್ಟು ಕೆಟ್ಟವರು ಯಾರೂ ಇರೋದಿಲ್ಲ!"
ಆಟೋ ತನ್ನ ಹೃದಯವನ್ನು ಗಟ್ಟಿಯಾಗಿ ಹಿಡಿದುಕೊಂಡ.
"ನಿನಗೆ
ಕೋಪ ಬರಿಸುವುದು ನನ್ನ
ಉದ್ದೇಶ ಆಗಿರಲಿಲ್ಲ. ನೀನು
ಕೋಪ ಮಾಡಿಕೊಂಡು ಕೂಗಾಡುವುದು ನಿನ್ನ ಹೃದಯಕ್ಕೆ ಒಳ್ಳೆಯದಲ್ಲ."
"ನನ್ನ
ಹೃದಯದ ಬಗ್ಗೆ ನಿನಗೆ
ಏನೋ ಗೊತ್ತು! ಏನು
ಗೊತ್ತು!!" ಎಂದು ಆಟೋ
ಕೂಗಿದ. ಹಾಗೆ ಕೂಗುವಾಗ ಹೃದಯದಲ್ಲಿ ನೋವು
ಕಾಣಿಸಿಕೊಂಡು ಅವನು
ಕುಸಿದ.
ಮಾರಿಸಾಲ್ "ಏನಾಯಿತು?" ಎಂದು ಓಡಿ ಬಂದಳು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ