ವಿಲಿಯಂ ಹರ್ಷಲ್
ವಿಲಿಯಂ ಹರ್ಷಲ್ ಮೂಲತಃ ಒಬ್ಬ ಸಂಗೀತಗಾರ. ೧೭೩೮ರಲ್ಲಿ ಜರ್ಮನಿಯ ಹ್ಯಾನೋವರ್ ನಗರದಲ್ಲಿ ಹುಟ್ಟಿದ. ಹತ್ತೊಂಬತ್ತರ ವರ್ಷದಲ್ಲಿ ಅವನಿಗೆ ಮಿಲಿಟರಿ ಸೇವೆಗೆ ಕರೆ ಬಂತು. ಅದನ್ನು ತಪ್ಪಿಸಿಕೊಂಡು ಇಂಗ್ಲೆಂಡ್ ದೇಶಕ್ಕೆ ಓಡಿಹೋದ. ಈಗಾಗಲೇ ಅವನು ಜರ್ಮನಿಯಲ್ಲಿ ಉತ್ತಮ ಸಂಗೀತಗಾರ ಎನ್ನಿಸಿಸಿಕೊಂಡಿದ್ದ. ತನ್ನ ಸಂಗೀತ ವೃತ್ತಿಯನ್ನು ಇಂಗ್ಲೆಂಡ್ ದೇಶದಲ್ಲಿ ಮುಂದುವರೆಸಿದ. ಇಪ್ಪತ್ತೆಂಟನೇ ವರ್ಷದಲ್ಲಿ ಅವನಿಗೆ ಬಾತ್ ಚರ್ಚಿನಲ್ಲಿ ಸಂಗೀತ ನುಡಿಸುವ ಕೆಲಸ ಸಿಕ್ಕಿತು. ಇಲ್ಲಿ ಅವನಿಗೆ ಒಳ್ಳೆಯ ಸಂಬಳ ಕೂಡಾ ಸಿಕ್ಕುತ್ತಿತ್ತು. ಹೀಗಾಗಿ ಖಗೋಳ ಶಾಸ್ತ್ರದಲ್ಲಿ ತನಗಿದ್ದ ಆಸಕ್ತಿಯನ್ನು ಮುಂದುವರೆಸಲು ಅನುಕೂಲವಾಯಿತು. ಅವನ ಸಹೋದರಿ ಕ್ಯಾರೊಲಿನ್ ೧೭೭೨ರಲ್ಲಿ ಅವನ ಜೊತೆ ವಾಸ ಮಾಡಲು ಬಂದಳು. ಖಗೋಳ ಶಾಸ್ತ್ರ, ಗಣಿತ, ಮತ್ತು ದೃಷ್ಟಿವಿದ್ಯೆಯ ಬಗ್ಗೆ ನೂರಾರು ಪುಸ್ತಕಗಳನ್ನು ವಿಲಿಯಂ ಈಗಾಗಲೇ ಓದಿದ್ದ. ಒಂದು ಟೆಲಿಸ್ಕೋಪ್ ಕೊಂಡುಕೊಂಡಿದ್ದ. ರಾತ್ರಿಯ ಹೊತ್ತು ಆಕಾಶವನ್ನು ನೋಡುತ್ತಾ ಬಹಳ ಹೊತ್ತು ಕುಳಿತುಕೊಳ್ಳುತ್ತಿದ್ದ. ಖಗೋಳದಲ್ಲಿ ತನ್ನ ಅಣ್ಣನ ಆಸಕ್ತಿಯನ್ನು ಕಂಡ ಕ್ಯಾರೊಲಿನ್ ತಾನೂ ಅದೇ ಕ್ಷೇತ್ರದ ಬಗ್ಗೆ ಉತ್ಸಾಹ ತಳೆದಳು. ಅವಳೂ ಸಂಗೀತದಲ್ಲಿ ಪರಿಣತಿ ಹೊಂದಿದ್ದವಳು. ಅಣ್ಣನಿಗೆ ಚರ್ಚಿನಲ್ಲಿ ಸಹಾಯ ಮಾಡಲು ಅವಳು ಮುಂದಾದಳು. ಅವನು ಆರ್ಕೆಸ್ಟ್ರಾ ರಚಿಸಿದಾಗ ಸಂಗೀತವನ್ನು ಬರೆದಿಡುವುದು ಮುಂತಾದ ಕೆಲಸಗಳಲ್ಲಿ ಅವಳು ನೆರವಾಗುತ್ತಿದ್ದಳು. ಕ್ಯಾ