ಗೋಲಿ ಆಟ
ಜನವರಿಯ ಒಂದು ಸಂಜೆ. ಮೈ ಮರಗಟ್ಟುವ ಚಳಿ. ಅಮ್ಮ ನನ್ನ ಅತ್ತಿಗೆಯನ್ನು ಕರೆದು “ಎಲ್ಲರಿಗೂ ಶುಂಠಿ ಹಾಕಿ ಚಹಾ ಮಾಡಿಕೊಂಡು ಬಾ”ಎಂದಳು. ಅತ್ತಿಗೆ ಅಡುಗೆಕೋಣೆಗೆ ಹೊರಟರು. ಮದುವೆಯಾಗಿ ಕಳೆದ ವಾ ನಮ್ಮ ಮನೆಗೆ ಕಾಲಿಟ್ಟಿದ್ದ ನನ್ನ ಹೆಂಡತಿ ಅವರನ್ನು
ಹಿಂಬಾಲಿಸಿ ಹೋದಳು. ಸ್ವಲ್ಪ ಹೊತ್ತಿನ ನಂತರ ಇಬ್ಬರೂ ತಲೆಯ ಮೇಲೆ ಸೆರಗು ಹೊದ್ದು ಕೈಯಲ್ಲಿ ಟ್ರೇ ಹಿಡಿದು ಬಂದರು. ಹೊಗೆಯಾಡುವ ಚಹಾ ಜೊತೆಗೆ ತಿನ್ನಲು ಬಿಸ್ಕೆಟ್ ಇಟ್ಟುಕೊಂಡು ಎಲ್ಲರಿಗೂ ಸರಬರಾಜು ಮಾಡಿದರು. ಅಪ್ಪನಿಗೆ, ಅಮ್ಮನಿಗೆ, ಅಣ್ಣನಿಗೆ, ನನಗೆ, ತಂಗಿಗೆ. ನಂತರ ತಾವೂ ಚಹಾ ಕುಡಿಯಲು ಅಡುಗೆ ಮನೆಗೆ ಹೋದರು.
ಅಪ್ಪ ಟಿವಿ ಮೇಲೆ ನ್ಯೂಸ್ ನೋಡುತ್ತಾ ಚಹಾ ಕುಡಿಯುತ್ತಿದ್ದರು. ಅಣ್ಣ ಮೊಬೈಲ್ ಮೇಲೆ ಏನೋ ನೋಡುತ್ತಿದ್ದ. ನಾನು ಟೇಬಲ್ ಮುಂದೆ ಕುಳಿತು ಒಂದು ಕವಿತೆಯ ಕೈಯನ್ನು ನಾಜೂಕಾಗಿ ಹಿಡಿದು ನಡೆಸುವ ಹುನ್ನಾರದಲ್ಲಿದ್ದೆ.
ಹೊರಗೆ ಮಕ್ಕಳು ಗೋಲಿ ಆಟ ಆಡುತ್ತಿದ್ದರು. ಅವರ ಗದ್ದಲ ನಮಗೆ ಕೇಳುತ್ತಿತ್ತು. ತಂಗಿ ಮತ್ತು ನನ್ನ ಹೆಂಡತಿ ಬಾಗಿಲಲ್ಲಿ ಮಕ್ಕಳ ಆಟ ನೋಡುತ್ತಾ ನಿಂತರು.
ಒಮ್ಮೆಲೇ ಅಮ್ಮನ ಉದ್ಗಾರ ಕೇಳಿಸಿತು. “ಅಯ್ಯೋ, ನೋಡಿ! ನಮ್ಮ ಸೊಸೆ ಮಕ್ಕಳ ಜೊತೆ ಸೇರಿಕೊಂಡು ಗೋಲಿ ಆಡ್ತಿದ್ದಾಳೆ!”
ಅವಳ ಧ್ವನಿಯಲ್ಲಿ ನಗುವಿತ್ತು, ಒಂದು ಮಗೆಯ ಸಂತೋಷವಿತ್ತು. ಆದರೆ ನನ್ನ ಕಡೆ ನೋಡಿ “ನೋಡಿದವರು ಏನೆಂದುಕೊಂಡಾರು, ಹೊಸದಾಗಿ ಮನೆಗೆ ಬಂದ ಸೊಸೆ …” ಎಂದಾಗ ಅವಳನ್ನು ತಡೆ ಎನ್ನುವ ಆಗ್ರಹವೂ ಅವಳ ಧ್ವನಿಯಲ್ಲಿತ್ತು.
ನಾನು ಹೊರಗೆ ಬಂದು ನೋಡಿದೆ. ಅವಳು ಮಕ್ಕಳ ಜೊತೆ ಆಡುತ್ತಿದ್ದುದು ನಿಜ. ಒಂದು ಕೈಯಿಂದ ಹಣೆಯ ಮೇಲಿದ್ದ ಸೆರಗನ್ನು ಜಾರದಂತೆ ಹಿಡಿದುಕೊಂಡಿದ್ದಳು. ಇನ್ನೊಂದು ಕೈಯಲ್ಲಿ ಗೋಲಿ ಇಟ್ಟುಕೊಂಡು ಗುರಿ ಸಾಧಿಸುತ್ತಿದ್ದಳು.
ತಂಗಿ ನಗುತ್ತಾ “ಅಲ್ಲಿ ಎಲ್ಲಿ ನೋಡ್ತಿದ್ದೀರಿ ಅತ್ತಿಗೆ, ಈ ಕಡೆ ನೋಡಿ!” ಎಂದು ಮೊಣಕೈಯಿಂದ ನನ್ನನ್ನು ತಿವಿದಳು.
ನಾನು ಒಳಗೆ ಇಣುಕಿದೆ. ಅಪ್ಪ ಮೌನವಾಗಿ ಟಿವಿ ನೋಡುತ್ತಿದ್ದರು. ಅಣ್ಣ ನಾನು ಏನಾದರೂ ಹೇಳಬಹುದು ಎಂದು ನನ್ನ ಕಡೆಗೆ ನೋಡುತ್ತಿದ್ದ. ಅಮ್ಮನ ಮುಖದಲ್ಲಿ ನಗುವಿನ ಜೊತೆಗೇ ಇದನ್ನು ತಡೆಯುವುದೇ ಮೇಲೆಂಬ ಭಾವನೆ.
ನಾನು ಜೋರಾಗಿ “ಲೇ …” ಎಂದೆ.
ಅವಳು ನನ್ನ ಕಡೆಗೆ ತಿರುಗಿ “ಏನು?” ಅಷ್ಟೇ ಜೋರಾಗಿ ಕೇಳಿದಳು. ಏನು ಎಂಬ ಪ್ರಶ್ನೆಯ ಜೊತೆಗೆ ಗೋಲಿಗಳ ಖಣಖಣದಂಥ ನಗೆಯ ಅಲೆ. ನನಗೂ ನಗು ಬಂತು. “ಇಲ್ಲ, ಏನಿಲ್ಲ” ಎಂದು ಸುಮ್ಮನಾದೆ.
ಸ್ವಲ್ಪ ಹೊತ್ತಿನ ನಂತರ ಆಟ ಮುಗಿಸಿಕೊಂಡು ಅವಳು ಹಿಂತಿರುಗಿ ಬಂದಳು. ಬಂದವಳೇ ನನ್ನನ್ನು ಕುರಿತು “ಯಾಕೆ ಕೂಗಿದ್ದು?” ಎಂದು ಕೇಳಿದಳು.
“ನೀನು ಮಾನ ಕಳೀತೀಯ! ಸೋತುಕೊಂಡು ಬಂದೆ ತಾನೇ? ನಾನು ಯಾವತ್ತೂ ಗೋಲಿ ಆಟದಲ್ಲಿ ಸೋತಿಲ್ಲ!” ನಾನೆಂದೆ.
“ಏ, ಹೆಲೋ! ಏನು ಅಂತ ತಿಳಿದುಕೊಂಡಿದೀರಿ! ನಾನು ಗೆದ್ದುಕೊಂಡು ಬಂದಿದೀನಿ! ನೋಡಿ ಬೇಕಾದರೆ!” ಎಂದು ಹೊರಗೆ ನಿಂತಿದ್ದ ಮಕ್ಕಳ ಕಡೆಗೆ ಬೆರಳು ಮಾಡಿದಳು.
ಮಕ್ಕಳು ಗೋಲಿ ಆಟದಲ್ಲಿ ಸೋತು ಸಪ್ಪಗೆ ಮುಖ ಮಾಡಿಕೊಂಡು ನಿಂತಿದ್ದರು. ನಾನು ನೋಡಿದಾಗ ಎಲ್ಲರೂ ಹೋ ಎಂದು ನಕ್ಕರು.
(ಹಿಂದಿಯ ಯುವಕವಿ, ಈ ವರ್ಷ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಸಾಹಿತಿ ಪ್ರಶಸ್ತಿಗೆ ಭಾಜನರಾದ ಗೌರವ್ ಪಾಂಡೆ ಅವರ ಕವಿತೆಯನ್ನು ಆಧರಿಸಿ)
ಚೆನ್ನಾಗಿದೆ
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿದೆ
ಪ್ರತ್ಯುತ್ತರಅಳಿಸಿ