ಗುರುತು



ಸಣ್ಣ ಊರಿನ ಶಾಲೆಯಲ್ಲಿ ಐಡಿ ಕಾರ್ಡ್ ನಿಜಕ್ಕೂ ಬೇಕೋ ಬೇಡವೋ! ಶಾಲೆಯ ಅಧಿಕಾರವರ್ಗದವರು ಎಲ್ಲಾ ಮಕ್ಕಳಿಗೂ ಐಡಿ ಕಾರ್ಡ್ ಕೊಟ್ಟು ಅದರಲ್ಲಿ ಹೆಸರು ಬರೆದು ಪ್ರತಿನಿತ್ಯವೂ ಹಾಕಿಕೊಂಡು ಬರಬೇಕೆಂದು ಮಕ್ಕಳಿಗೆ ಹೇಳಿಕಳಿಸಿದರು.ಮೂರನೇ ಕ್ಲಾಸು ಓದುವ ತಂಗಿಗೆ ನಾನೇ ಅವಳ ಹೆಸರನ್ನು ಬರೆದುಕೊಟ್ಟೆ. ಮಾಲೆಯಂತೆ ಅವಳ ಕೊರಳಿಗೆ ಅವಳ ಗುರುತಿನ ಕಾರ್ಡನ್ನು ಹಾಕಿ  "ಇನ್ನು ಮುಂದೆ ಎಲ್ಲರೂ ನಿನ್ನನ್ನು ಇದೇ ಹೆಸರಿನಿಂದ ಕರೆಯುತ್ತಾರೆ!" ಎಂದು ಅವಳ ಬೆನ್ನು ಚಪ್ಪರಿಸಿದೆ. ಯಾವುದೋ ನಿಧಿ ದೊರೆತಂತೆ ಅವಳು ಬೀಗಿದಳು.

ಮಧ್ಯಾಹ್ನ ಹಿಂದಿರುಗಿದವಳು ಐಡಿ ಕಾರ್ಡ್ ತೆಗೆದು ಜೋಪಾನ ಮಾಡಿದಳು. "ನೀನು ಹೇಳಿದ್ದು ನಿಜ, ಅಣ್ಣ! ಇವತ್ತು ನನ್ನ ಗುರುತಿನ ಚೀಟಿ ನೋಡಿ ನೀನು ಪಾಂಡೆ ಅವರ ಮಗಳೇ ಎಂದು ಇಬ್ಬರು ಕೇಳಿದರು!" ಎಂದು ಉತ್ಸಾಹದಿಂದ ಹೇಳಿ ಊಟಕ್ಕೆ ಹೋದಳು.  ನಾನು ಓದಿನಲ್ಲಿ ಮಗ್ನನಾದೆ.

ಸ್ವಲ್ಪ ಹೊತ್ತಿನ ಬಳಿಕ ಅವಳು ಮತ್ತೆ ಬಂದು "ಅಣ್ಣಾ!" ಅಂದಳು.

ನಾನು ಪುಸ್ತಕದಿಂದ ಕಣ್ಣು ಸರಿಸಿ ಏನೆಂದು ಕೇಳಿದೆ.

"ನಿನ್ನ ಹತ್ತಿರವೂ ಗುರುತಿನ ಚೀಟಿ ಇದೆಯಾ ಅಣ್ಣ?" ಎಂದಳು.

"ಇಲ್ಲ" ಎಂದು ಸುಮ್ಮನಾದೆ.

"ಮತ್ತೆ ನೀನು ಯಾರು ಅಂತ ಹೇಗೆ ಗೊತ್ತಾಗತ್ತೆ ಎಲ್ಲರಿಗೂ?"

ನಾನು ಪುಸ್ತಕ ಕೆಳಗಿಟ್ಟು ದೀರ್ಘ ಶ್ವಾಸ ಎಳೆದುಕೊಂಡೆ.

"ನಿಜ! ಇವತ್ತು ನನ್ನನ್ನು ಯಾರೂ ಗುರುತಿಸುವುದಿಲ್ಲ" ಎಂದೆ. ನನ್ನ ಧ್ವನಿಯಲ್ಲಿ ಎಲ್ಲೋ ಒಂದು ನೋವಿನ ಎಳೆಯಿತ್ತು. ಮನುಷ್ಯನ ಗುರುತು ಎಂದರೇನು ಎಂಬ ದಾರ್ಶನಿಕ ಪ್ರಶ್ನೆ ನನ್ನನ್ನು ಕಾಡಿತು. ಅವಳು ಪೆಚ್ಚಾಗಿ ನನ್ನ ಕಡೆ ನೋಡಿದಳು. ನಂತರ ಮೌನವಾಗಿ ಹೊರಟು ಹೋದಳು. ನಾನು ನನ್ನ ಓದು ಮುಂದುವರೆಸಿದೆ.

ಸ್ವಲ್ಪ ಹೊತ್ತಿನ ನಂತರ ಅವಳು ಮತ್ತೆ ನನ್ನ ಕೋಣೆಯ ಬಾಗಿಲಲ್ಲಿ ಇಣುಕಿ "ಅಣ್ಣಾ!" ಎಂದಳು.

"ಈಗ ಏನಾಯಿತು ಮೇಡಂ?" ಎಂದೆ.

"ಅಣ್ಣಾ ನೋಡು ನಾನು ಏನು ಮಾಡಿಕೊಂಡು ಬಂದಿದ್ದೀನಿ ಅಂತ!"

ಅವಳ ಕೈಯಲ್ಲಿ ಅವಳೇ ತಯಾರಿಸಿದ ಒಂದು ಐಡಿ ಕಾರ್ಡ್ ಇತ್ತು.  ರಟ್ಟಿನ ಕಾಗದವನ್ನು ಕತ್ತರಿಸಿ ಅದರಲ್ಲಿ ರಂಧ್ರಗಳನ್ನು ಕೊರೆದು ಹುರಿ ದಾರವನ್ನು ಪೋಣಿಸಿ ಮಾಡಿದ ಐಡಿ ಕಾರ್ಡ್. ಅವಳು ಬಲವಂತವಾಗಿ ನನ್ನ ತಲೆಯನ್ನು ಬಗ್ಗಿಸಿ ಐಡಿ ಕಾರ್ಡನ್ನು ನನ್ನ ಕೊರಳಿಗೆ ತೊಡಿಸಿದಳು. 

"ಈಗ ಎಲ್ಲರೂ ನಿನ್ನನ್ನು ಗುರುತಿಸುತ್ತಾರೆ!" ಎಂದು ಹೇಳಿ ಆಟಕ್ಕೆ ಓಡಿಹೋದಳು. 

ನಾನು ಐಡಿ ಕಾರ್ಡ್ ಕೈಯಲ್ಲಿ ತೆಗೆದುಕೊಂಡು ಅದರಲ್ಲಿದ್ದ ಬಾಲಬರಹ ಓದಿದೆ.

"ಶಿಖಾಳ ಅಣ್ಣ ಗೌರವ್" ಎಂದು ಬರೆದಿತ್ತು.

(ಈ ವರ್ಷ ಕೇಂದ್ರ ಸಾಹಿತ್ಯ ಅಕಾಡೆಮಿಯ ಹಿಂದಿ ಭಾಷೆಯ ಯುವ ಸಾಹಿತಿ ಪುರಸ್ಕಾರ ಪಡೆದ ಕವಿ ಗೌರವ್ ಪಾಂಡೆ ಅವರ ಹಿಂದಿ ಕವಿತೆಯನ್ನು ಆಧರಿಸಿ)


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)