ನವವಧು


ಅಮ್ಮ ಮನೆಯ ನೆಲವನ್ನು ನೆನ್ನೆ ಸಗಣಿಯಿಂದ ಸಾರಿಸಿದ್ದಾಳೆ. ಇವತ್ತು ಮನೆಯ ಹೊಸಲಿಗೆ ಕೆಮ್ಮಣ್ಣು ಬಳಿಯುವ ಕೆಲಸ ಮಾಡುತ್ತಿದ್ದಾಳೆ. ನಾಳೆ ಮನೆಯ ಗೋಡೆಗೆ ಕೆರೆಯ ಮಣ್ಣನ್ನು ಸಾರಿಸುವ ಕೆಲಸ ಇಟ್ಟುಕೊಂಡಿದ್ದಾಳೆ.  ಮನೆಗೆ ಸೊಸೆಯನ್ನು ಕರೆತರಲು ತಯಾರಿ ನಡೆದಿದೆ. ಮಣ್ಣಿನ ಹಣತೆಗಳು ಅಟ್ಟದ ಡಬ್ಬದಿಂದ ಕೆಳಗಿಳಿದಿವೆ. ಅಮ್ಮನ ಕೆಲಸ ನೋಡುತ್ತಾ ನನ್ನಲ್ಲಿರುವ ಕವಿ ಜಾಗೃತನಾಗುತ್ತಾನೆ.  ಒಂದೆರಡು ಸಾಲುಗಳು ನನ್ನ ಮನಸ್ಸಿನಲ್ಲಿ ಮೂಡುತ್ತವೆ. “ಸೊಸೆಯ ಸ್ವಾಗತಕ್ಕೆ ಅಮ್ಮ ಮಾಡುತ್ತಿದ್ದಾಳೆ ಮನೆಯ ಗತಕಾಲಕ್ಕೆ ಸಾರಣೆ, ವರ್ತಮಾನಕ್ಕೆ ಲೇಪನ ಮತ್ತು ಮನೆಯ ಉಜ್ವಲ ಭವಿಷ್ಯಕ್ಕಾಗಿ ಹಣತೆಗಳ ಪ್ರಕ್ಷಾಲನ”.


ಎಷ್ಟೋ ವರ್ಷಗಳ ಹಿಂದೆ ಅಮ್ಮ ಇದೇ ಮನೆಗೆ ಕಾಲಿಟ್ಟಳು. ಅವಳ ಅತ್ತೆ ಅವಳನ್ನು ಬರಮಾಡಿಕೊಳ್ಳಲು ಹೀಗೇ ಮನೆಯನ್ನು ಸಾರಿಸಿ ಬಳಿದು ಸ್ವಚ್ಛಗೊಳಿಸಿ ರಂಗವಲ್ಲಿ ಬಿಡಿಸಿದ್ದಳು. ಎಲ್ಲಿ ಹಜ್ಜೆ ಇಡಲೆಂದು ತೋರದೆ ಅಮ್ಮ ಅಪ್ಪನ ಹಿಂದೆ ಹಿಂದೆ ಒಳಗೊಳಗೇ ಕಂಪಿಸುತ್ತಾ ಹಗುರವಾಗಿ ನಡೆಯುತ್ತಿರುವ ಚಿತ್ರ ನನ್ನ ಮನೋಭಿತ್ತಿಯ ಮೇಲೆ ಮಸುಕಾಗಿ ಮೂಡಿತು. ಅವಳು ಹದಿನಾರು ವರ್ಷದ ಹುಡುಗಿ. ಮನೆಯ ಏಕಮಾತ್ರ ಸೊಸೆ. ಇಡೀ ಮನೆಯ ಜವಾಬ್ದಾರಿಯನ್ನು ಅವಳೇ ಹೊರಬೇಕು. ಅದೆಷ್ಟು ಹೊಸ ಕೆಲಸಗಳನ್ನು ಕಲಿಯಬೇಕು, ಹೊಸ ಅನುಭವಗಳಿಗೆ ತನ್ನನ್ನು ಒಡ್ಡಿಕೊಳ್ಳಬೇಕು! ಅವಳು ಒಳಗೊಳಗೇ ಕಂಪಿಸಿದ್ದರೆ ಅದರಲ್ಲಿ ಏನು ಆಶ್ಚರ್ಯವಿದೆ? ಅವಳು ಇವನ್ನೆಲ್ಲ ಸಂಭಾಳಿಸಿಕೊಂಡು ಸಾಗಬಲ್ಲಳೇ? ಬಿದ್ದು ಎದ್ದು ಸಂಭಾಳಿಸಿ ಮುಂದೆ ಹೋದಳು ಎಂಬುದಕ್ಕೆ ಪುರಾವೆಯಂತಿವೆ ಇನ್ನೂ ಭದ್ರವಾಗಿರುವ ಈ ಮನೆಯ ಹಸಿ ಗೋಡೆಗಳು. ನನ್ನ ಮನಸ್ಸಿನಲ್ಲಿ ಕವಿತೆಯ ಇನ್ನೊಂದೆರಡು ಸಾಲುಗಳು ಮೂಡಿದವು. “ಮನೆಯ ಮಣ್ಣಿನ ಗೋಡೆಗಳ ಬಳಿ ನಿಂತು ಮೌನವಾಗಿ ಕೇಳಿಸಿಕೊಂಡರೆ ಕಿವಿಗೆ ಬೀಳುತ್ತವೆ ಅಮ್ಮನ ನಗು ಹಾಗೂ ನೋವಿನ ಕೂಗು.”


ಅಂಗಳದಲ್ಲಿರುವ ಬೇವಿನ ಮರ ಅಂದೂ ಇತ್ತು. ಅಮ್ಮ ಕಣ್ಣೀರು ಹಾಕಿದಾಗ ಮರವೂ ಅಂಗಳದಲ್ಲಿ ತನ್ನ ಎಲೆಗಳನ್ನು ಉದುರಿಸುತ್ತಿತ್ತು. ಅಮ್ಮ  ಕಟ್ಟೆಯ ಮುಂದೆ ನಿಂತು ತುಳಸಿಯ ಗಿಡಕ್ಕೆ ತನ್ನ ಕಷ್ಟಸುಖಗಳನ್ನು ಹೇಳಿಕೊಂಡಳು. ಅದೇಕೋ ಗಿಡಗಳಲ್ಲಿ ಮೊಗ್ಗುಗಳು ಅರಳುವುದಿಲ್ಲವೆಂದು ಹಠ ತೊಟ್ಟಂತೆ ಭಾಸವಾಗುತ್ತಿತ್ತು.


ಆದರೂ ವಸಂತಗಳು ಕಾಲಿಟ್ಟವು. ಮರಗಳಲ್ಲಿ ಉಯ್ಯಾಲೆಗಳು ಆಡಿದವು. ತನ್ನ ಗೆಳತಿಯರ ಲೋಕದಿಂದ ಬಹಳ ದೂರ ಉಳಿದು ಅಮ್ಮ ತನ್ನ ಮನೆಯ ಕೆಲಸಗಳ ಸಾಣೇಕಲ್ಲಿನ ಮೇಲೆ ತನ್ನನ್ನು ತಾನೇ ತೇದುಕೊಂಡಳು.


ನಾಟಕದ ಹೊಸ ಪಾತ್ರಗಳ ಹಾಗೆ ನಾವು ಪ್ರವೇಶಿಸಿದೆವು.  ಹೊಸ ಭರವಸೆಗಳೊಂದಿಗೆ, ಹೊಸ ಕಷ್ಟ ಕಾರ್ಪಣ್ಯಗಳನ್ನು ಹೊತ್ತುಕೊಂಡು ಬಂದೆವು. ಅಮ್ಮ ಆಗಾಗ ನೆನೆಸಿಕೊಂಡು ಹೇಳುವುದುಂಟು. ಹಿಂದೊಮ್ಮೆ ಆಸುಪಾಸಿನ ಹಳ್ಳಿಗಳಲ್ಲಿ ಎಂಥದ್ದೋ ಭಯಂಕರ ಸಾಂಕ್ರಾಮಿಕ ರೋಗ ಬಂದೆರಗಿತು. ಪಶುಪಕ್ಷಿಗಳು ಎಲ್ಲೆಂದರಲ್ಲಿ ಸತ್ತು ಬಿದ್ದವು. ಕೊನೆಗೆ ಈ ರೋಗ ಮನುಷ್ಯರಿಗೂ ಹರಡಿತು. ಮನೆಗಳಲ್ಲಿ ಮಕ್ಕಳು ಸತ್ತರು. ಅವಳು ನಮ್ಮನ್ನು ಎದೆಗೆ ಅವಚಿಕೊಂಡು ಸುಡುವ ಬಿಸಿಲಲ್ಲಿ ಆಸ್ಪತ್ರೆಗೆ ಪ್ರತಿದಿನ ನಡೆದುಕೊಂಡು ಹೋಗುತ್ತಿದ್ದಳು. ನನ್ನನ್ನು ಉಳಿಸಿಕೊಳ್ಳಲು ಅವಳ ಕೊರಳಿನ ಸರ ಮಾರಬೇಕಾಯಿತು. ತಂಗಿಯನ್ನು ಉಳಿಸಿಕೊಳ್ಳುವ ಸನ್ನಾಹದಲ್ಲಿ ಕಡಗಗಳು ಕೈಬಿಟ್ಟವು. ಈ ದುಃಖಗಳನ್ನೆಲ್ಲ ಹೇಳಿಕೊಂಡು ಅಮ್ಮ ಕೊನೆಗೆ ಹೇಳುವ ಮಾತು, “ನಿಮ್ಮಿಬ್ಬರ ಮುಖ ನೋಡಿಕೊಂಡು ಹೇಗೋ ಬದುಕಿದೆ ನೋಡು.”


ಇಂದು ಮನೆಯ ಎಲ್ಲ ನಿಯಮ ಕಾಯಿದೆಗಳೂ ಅಮ್ಮನ ಕೈಯಲ್ಲಿವೆ. ಮಕ್ಕಳ ಸುಖಸಂತೋಷಗಳನ್ನು ತಾನೂ ಅನುಭವಿಸುತ್ತಾ ಅಮ್ಮ ನಿತ್ಯವೂ ಯುವತಿಯಾಗುತ್ತಿದ್ದಾಳೆ. ಕಟ್ಟೆಯಲ್ಲಿ ತುಳಸಿ ಸಮೃದ್ಧವಾಗಿ ಬೆಳೆಯುತ್ತಿದೆ.  ಅಂಗಳದಲ್ಲಿ ಬೇವಿನ ಮರದಿಂದ ಹೂವುಗಳು ಉದುರುತ್ತಿವೆ. ಪ್ರತಿಬೆಳಗ್ಗೆಯೂ ಅವಳ ಹಣೆಯಲ್ಲಿ ಕುಂಕುಮ ಇಡುತ್ತಾನೆ ಉದಿಸುವ ಸೂರ್ಯ.  ರಾತ್ರಿ ಉದಿಸುವ ಚಂದ್ರ ಅವಳನ್ನು ಸಿಂಗರಿಸಲು ಉತ್ಸುಕನಾದಂತೆ ತೋರುತ್ತದೆ. ಹೀಗೆ ಯೋಚಿಸುತ್ತಾ ಕವಿತೆಯ ಕೊನೆಯ ಸಾಲುಗಳು ನನಗೆ ಹೊಳೆಯುತ್ತವೆ. “ಅಪ್ಪನಲ್ಲಿ ಒಂದೇ  ದೂರು ನನ್ನದು, ನವವಧುವಿನಂತೆ ಸಿಂಗರಿಸಿಕೊಂಡಿದ್ದು ನೋಡಿಲ್ಲ ಅಮ್ಮನನ್ನು ಎಂದೂ.”


(ಈ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿಯ ಶ್ರೇಷ್ಠ ಯುವ ಹಿಂದಿ ಸಾಹಿತಿ ಪುರಸ್ಕಾರಕ್ಕೆ ಪಾತ್ರರಾದ ಗೌರವ್ ಪಾಂಡೆ ಅವರ ಕವಿತೆಯನ್ನು ಆಧರಿಸಿದ ಸಣ್ಣಕತೆ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)