ವಿಲಿಯಂ ಹರ್ಷಲ್


ವಿಲಿಯಂ ಹರ್ಷಲ್ ಮೂಲತಃ ಒಬ್ಬ ಸಂಗೀತಗಾರ.  ೧೭೩೮ರಲ್ಲಿ ಜರ್ಮನಿಯ ಹ್ಯಾನೋವರ್ ನಗರದಲ್ಲಿ ಹುಟ್ಟಿದ. ಹತ್ತೊಂಬತ್ತರ ವರ್ಷದಲ್ಲಿ ಅವನಿಗೆ ಮಿಲಿಟರಿ ಸೇವೆಗೆ ಕರೆ ಬಂತು. ಅದನ್ನು ತಪ್ಪಿಸಿಕೊಂಡು ಇಂಗ್ಲೆಂಡ್ ದೇಶಕ್ಕೆ ಓಡಿಹೋದ.  ಈಗಾಗಲೇ ಅವನು ಜರ್ಮನಿಯಲ್ಲಿ ಉತ್ತಮ ಸಂಗೀತಗಾರ ಎನ್ನಿಸಿಸಿಕೊಂಡಿದ್ದ. ತನ್ನ ಸಂಗೀತ ವೃತ್ತಿಯನ್ನು ಇಂಗ್ಲೆಂಡ್ ದೇಶದಲ್ಲಿ ಮುಂದುವರೆಸಿದ. ಇಪ್ಪತ್ತೆಂಟನೇ ವರ್ಷದಲ್ಲಿ ಅವನಿಗೆ ಬಾತ್ ಚರ್ಚಿನಲ್ಲಿ ಸಂಗೀತ ನುಡಿಸುವ ಕೆಲಸ ಸಿಕ್ಕಿತು.  ಇಲ್ಲಿ ಅವನಿಗೆ ಒಳ್ಳೆಯ ಸಂಬಳ ಕೂಡಾ ಸಿಕ್ಕುತ್ತಿತ್ತು. ಹೀಗಾಗಿ ಖಗೋಳ ಶಾಸ್ತ್ರದಲ್ಲಿ ತನಗಿದ್ದ ಆಸಕ್ತಿಯನ್ನು ಮುಂದುವರೆಸಲು ಅನುಕೂಲವಾಯಿತು.  ಅವನ ಸಹೋದರಿ ಕ್ಯಾರೊಲಿನ್ ೧೭೭೨ರಲ್ಲಿ ಅವನ ಜೊತೆ ವಾಸ ಮಾಡಲು ಬಂದಳು. ಖಗೋಳ ಶಾಸ್ತ್ರ, ಗಣಿತ, ಮತ್ತು ದೃಷ್ಟಿವಿದ್ಯೆಯ ಬಗ್ಗೆ ನೂರಾರು ಪುಸ್ತಕಗಳನ್ನು ವಿಲಿಯಂ ಈಗಾಗಲೇ ಓದಿದ್ದ.  ಒಂದು ಟೆಲಿಸ್ಕೋಪ್ ಕೊಂಡುಕೊಂಡಿದ್ದ. ರಾತ್ರಿಯ ಹೊತ್ತು ಆಕಾಶವನ್ನು ನೋಡುತ್ತಾ ಬಹಳ ಹೊತ್ತು ಕುಳಿತುಕೊಳ್ಳುತ್ತಿದ್ದ. 


ಖಗೋಳದಲ್ಲಿ ತನ್ನ ಅಣ್ಣನ ಆಸಕ್ತಿಯನ್ನು ಕಂಡ ಕ್ಯಾರೊಲಿನ್ ತಾನೂ ಅದೇ ಕ್ಷೇತ್ರದ ಬಗ್ಗೆ ಉತ್ಸಾಹ ತಳೆದಳು.  ಅವಳೂ ಸಂಗೀತದಲ್ಲಿ ಪರಿಣತಿ ಹೊಂದಿದ್ದವಳು. ಅಣ್ಣನಿಗೆ ಚರ್ಚಿನಲ್ಲಿ ಸಹಾಯ ಮಾಡಲು ಅವಳು ಮುಂದಾದಳು.  ಅವನು ಆರ್ಕೆಸ್ಟ್ರಾ ರಚಿಸಿದಾಗ ಸಂಗೀತವನ್ನು ಬರೆದಿಡುವುದು ಮುಂತಾದ ಕೆಲಸಗಳಲ್ಲಿ ಅವಳು ನೆರವಾಗುತ್ತಿದ್ದಳು. ಕ್ಯಾರೋಲಿನಳ ಸಹಾಯ ಪಡೆದು ವಿಲಿಯಂ ಒಂದು ಟೆಲಿಸ್ಕೋಪ್ ನಿರ್ಮಿಸಿದ.  ಇದರ ಸಾಫಲ್ಯದಿಂದ ಉತ್ಸಾಹಿತರಾಗಿ ಅವರು ಇನ್ನೂ ದೊಡ್ಡ ಟೆಲಿಸ್ಕೋಪ್ ನಿರ್ಮಿಸಿದರು.  ಆ ಸಾಧನದಲ್ಲಿ ಬಹಳ ದೊಡ್ಡ ಗಾತ್ರದ ಕನ್ನಡಿಯನ್ನು ಅಳವಡಿಸಿದ್ದರು. ಹೀಗೇಕೆ ಎಂದು ಕೇಳಿದರೆ ಕನ್ನಡಿ ಎಷ್ಟು ದೊಡ್ಡದೋ ಅಷ್ಟು ಹೆಚ್ಚು ಬೆಳಕನ್ನು ಸಂಗ್ರಹಿಸಿಕೊಡುತ್ತದೆ, ಇದರಿಂದ ಹೆಚ್ಚು ನಕ್ಷತ್ರಗಳನ್ನು ನೋಡಬಹುದು ಎಂದು ವಿಲಿಯಂ ಉತ್ತರಿಸುತ್ತಿದ್ದ. 


ವಿಲಿಯಂ ಬಹಳ ತಾಳ್ಮೆಯುಳ್ಳ ವ್ಯಕ್ತಿ. ಚಂದ್ರನ ಮೇಲಿರುವ ನೂರು ಹಳ್ಳಗಳನ್ನು ಅವನು ಗಮನಿಸಿ ಲೆಕ್ಕ ಬರೆದಿಟ್ಟ. ಈ ಲೆಕ್ಕವನ್ನು ಮೂರು ಸಲ ಮಾಡಿ ತಾಳೆ ಹಾಕಿದ.  ಅವನಿಗೆ ಹೊಸ ಶೋಧನೆಯಲ್ಲಿ ಬಹಳ ಆಸಕ್ತಿ ಇತ್ತು. ರಾತ್ರಿಯ ಆಕಾಶವು ಒಂದು ಅಗಾಧ ಸಮುದ್ರದಂತೆ. ಎಲ್ಲಿ ಏನು ಸಿಕ್ಕುವುದೋ! ಅವನು ಪ್ರತಿ ರಾತ್ರಿಯೂ ಆಕಾಶದ ಸ್ವಲ್ಪ ಭಾಗವನ್ನು ಮಾತ್ರ ನೋಡುತ್ತಿದ್ದ. ಹೆಚ್ಚೆಂದರೆ ಎರಡು ಡಿಗ್ರಿಗಳಷ್ಟು ಅವನ ಟೆಲಿಸ್ಕೋಪ್ ಚಲಿಸುತ್ತಿತ್ತು.  ತಾನು ಗಮನಿಸಿದ್ದು ಸರಿಯೋ ಇಲ್ಲವೋ ಎಂದು ಪುನಃ ತಾಳೆ ಹಾಕಿ ಅನಂತರ ನಿದ್ದೆ ಹೋಗುತ್ತಿದ್ದ.


ಮಾರ್ಚ್ ೧೭೮೧ರಲ್ಲಿ ಅವನು ಒಂದು ಅಪೂರ್ವ ಖಗೋಳ ಕಾಯವನ್ನು ಗಮನಿಸಿದ. ಶನಿಗ್ರಹಕ್ಕೂ ಆಚೆಗಿನ ಗ್ರಹ.  ಅದಕ್ಕೆ ಯುರೇನಸ್ ಎಂಬ ಹೆಸರು ಬಂದಿತು. ಗ್ರೀಕ್ ಪುರಾಣದಲ್ಲಿ ಆಕಾಶದ ಅಧಿದೇವತೆಯ ಹೆಸರನ್ನೇ ಗ್ರಹಕ್ಕೂ ನೀಡಲಾಯಿತು.  ಇನ್ನಿತರ ಖಗೋಳಶಾಸ್ತ್ರಜ್ಞರು ಯುರೇನಸ್ ಗ್ರಹವನ್ನು ಗಮನಿಸಿದ್ದರೂ ಅದೊಂದು ನಕ್ಷತ್ರ ಎಂದು ಅದಕ್ಕೆ ವಿಶೇಷ ಮಹತ್ವವನ್ನು ನೀಡಿರಲಿಲ್ಲ.  ಆದರೆ ತಾಳ್ಮೆಯ ಪ್ರತಿರೂಪವಾಗಿದ್ದ ವಿಲಿಯಂ ತನ್ನ ನಿತ್ಯಚರಿಯಿಂದ ಸಾವಿರಾರು ನಕ್ಷತ್ರಗಳ ಸ್ಥಾನಗಳನ್ನು ನೆನಪಿಟ್ಟುಕೊಂಡಿದ್ದ. ತನಗೆ ಕಾಣಿಸಿದ ಬೆಳಕಿನ ಚುಕ್ಕೆಯನ್ನು ಅವನು ಆಸಕ್ತಿಯಿಂದ ನೋಡಿದ.ಎಲಾ ಅಲ್ಲಿ ಯಾವ ನಕ್ಷತ್ರವೂ ಇರಲಿಲ್ಲವಲ್ಲ?  ಚುಕ್ಕೆಯನ್ನು ಒಂದು ಅಲೆಮಾರಿ ಎಂದು ಅವನು ಕೂಡಲೇ ಗ್ರಹಿಸಿದ. ತನ್ನ ಶೋಧನೆಯನ್ನು ಗುರುತು ಹಾಕಿಕೊಂಡು ಅದರ ಬಗ್ಗೆ ಒಂದು ಪತ್ರವನ್ನು ರಾಜನ ಖಗೋಳಶಾಸ್ತ್ರಿಗೆ ಕಳಿಸಿ "ಇದು ಒಂದು ಗ್ರಹವೇ?" ಎಂದು ಪ್ರಶ್ನೆ ಕೇಳಿದ. ಕೆಲವು ವಾರಗಳ ನಂತರ ಹೌದೆಂದು ಉತ್ತರ ಬಂತು. ಯುರೇನಸ್ ಗ್ರಹದ ಆವಿಷ್ಕಾರದಿಂದ ಸೌರಮಂಡಲ ಎಷ್ಟು ದೊಡ್ಡದು ಎಂಬ ಹಿಂದಿನ ತಿಳುವಳಿಕೆಗಂತಲೂ ಅದು ಎರಡು ಪಟ್ಟು ದೊಡ್ಡದು ಎಂಬ ನಿರ್ಧಾರಕ್ಕೆ ವಿಜ್ಞಾನಿಗಳು ಬಂದರು. ವಿಲಿಯಂ ಹರ್ಷಲ್ ಒಮ್ಮೆಲೇ ಪ್ರಖ್ಯಾತನಾಗಿಹೋದ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)