ಅವಳ ಹಾಡು

ಮೂಲ ಇಂಗ್ಲಿಷ್ ಕವಿತೆ: ವಿಲಿಯಂ ವರ್ಡ್ಸ್ ವರ್ತ್ 
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್


ನೋಡಲ್ಲಿ! ಕಾಣಿಸಿತೆ? ಹೆಣ್ಣುಮಗಳೊಬ್ಬಳು,
ಮೇಡುಗಳ ಮೇಲಿರುವ ಹೊಲದಲ್ಲಿ ಒಬ್ಬಳೇ
ಹಾಡುತ್ತ ಏನೋ ತನ್ನ ಪಾಡಿಗೆ ತಾನೇ,
ಕಡಿಯುತ್ತ ಪೈರನ್ನು, ಕಟ್ಟುತ್ತ ತೆನೆ!

ನಿಲ್ಲು ಒಂದೆರಡು ಕ್ಷಣ! ಕೇಳಿಸಿಕೋ! ಏನವಳು
ಸೊಲ್ಲೆತ್ತಿ ಹಾಡುತಿಹ ದುಃಖಗೀತೆ?
ಎಲ್ಲೆಡೆಗೆ ಹರಡುತಿದೆ, ಕಣಿವೆಯೊಳು ತುಂಬುತಿದೆ
ಮೆಲ್ಲಮೆಲ್ಲನೆ ಅವಳ ಗಾನದೊರತೆ

ಮರಳುಗಾಡಿನಲೊಬ್ಬ ಬಸವಳಿದ ಯಾತ್ರಿಕನು
ನೆರಳನ್ನು ಕಂಡು ಮೈಚಾಚಿ ಮಲಗಿರಲು
ಕೊರಳೆತ್ತಿ ಹಾಡಿ ಕಾಜಾಣವೊಂದು
ತರುವ ಸುಖವನ್ನೂ ಮೀರಿಸುವ ಹಾಡು

ಯಾವ ಕೋಗಿಲೆ ಕೂಡಾ ಕುಹೂ ಕೂಹೂ ಎನ್ನುತ್ತ
ನವವಸಂತನು ಬಂದ ಸಂಭ್ರಮಕ್ಕೆ
ದಿವ್ಯಕಂಠದಿ ಹೀಗೆ ಹಾಡಿರಲು ಸಾಧ್ಯವೇ
ಭಾವಪೂರ್ಣತೆಯಿಂದ ಇವಳು ಹಾಡಿದಂತೆ

ನಾನರಿಯೆ ಇವಳಾವ ಹಾಡು ಹಾಡುತ್ತಿಹಳೋ
ಮನವ ಕಲಕುತ್ತಿದೆ ಇವಳ ಆರ್ತಗಾನ
ನೆನೆದು ಹಾಡುವಳೇನೋ ಹಳೆಯ ಕತೆ ಯಾವುದೋ
ರಣರಂಗದಲ್ಲೆಂದೋ ನಡೆದ ಯುದ್ಧ

ಇವಳದೇ ಬಾಳಿನಲಿ ನಡೆದಿರುವ ಯಾವುದೋ
ನೋವಿಂದು ಹಾಡಾಗಿ ಹರಿಯುತಿಹುದೇ?
ನಾವೆ ಮುಳುಗಿರಬಹುದು, ಇನಿಯ ಮುನಿದಿರಬಹುದು,
ಸಾವುನೋವಿನ ನೆನಪು ಕಣ್ಣಲ್ಲಿ ತುಳುಕಿತೇ?

ಕಾಡುತ್ತಿರುವ ನೋವು ಯಾವುದಾದರೂ ಇರಲಿ
ಹಾಡುತ್ತಿಹಳು ಇವಳು ಕೊನೆಯಿಲ್ಲದಂತೆ
ನಡುಬಗ್ಗಿಸಿ ಕೈಯಲ್ಲಿ ಹಿಡಿದು ಕುಡುಗೋಲನ್ನು
ದುಡಿಯುತ್ತ ಹೊಲದಲ್ಲಿ ಜೊತೆಗಾರರಿಲ್ಲದೆ

ಕೇಳುತ್ತ ಶಿಲೆಯಾಗಿ ನಿಂತಿದ್ದೆ ನಿಂತಲ್ಲೇ
ಇಳಿದಿತ್ತು ನನ್ನೆದೆಗೆ ಅವಳ ಹಾಡು
ಜಲಧಾರೆಯೊಲು ಸುರಿದ ಗಾಯನವು ನಿಂತರೂ
ಮೇಲೆ ಹತ್ತಲು ಯಾಕೋ ಕಾಲೇಳದು

==============    
ವಿಲಿಯಂ ವರ್ಡ್ಸ್ ವರ್ತ್ ಒಬ್ಬ "ನಿಸರ್ಗ ಕವಿ." ಕಣ್ಣಿಗೆ ಕಂಡ ಬೆಟ್ಟ, ನದಿ, ಹೂವು, ಎಲ್ಲವೂ ಇವನ ಕಾವ್ಯಕ್ಕೆ ವಸ್ತು. ಸಾಮಾನ್ಯ ಅನುಭವದಲ್ಲೂ ವಿಶಿಷ್ಟವಾದ್ದನ್ನು ಅನುಭವಿಸುವ ಕವಿ. "ದ ಸಾಲಿಟರಿ ರೀಪರ್" ಎಂಬ ಕವಿತೆಯಲ್ಲಿ ಒಂದು ಸರಳ ಕಥಾನಕವಿದೆ. ಒಂದು ದಿನ ಕವಿ ಬೆಟ್ಟ ಹತ್ತಿ ಎಲ್ಲೋ ಹೋಗುತ್ತಿದ್ದಾಗ ಅವನ ಕಿವಿಗೆ ಒಬ್ಬ ಹೆಣ್ಣು ಆಳು ಹೊಲದಲ್ಲಿ ದುಡಿಯುವಾಗ ಹಾಡಿಕೊಳ್ಳುವುದು ಕೇಳುತ್ತದೆ. ಆ ಹಾಡಿನಲ್ಲಿ ಅವನಿಗೆ ಆಳವಾದ ದುಃಖ ವ್ಯಕ್ತವಾಗುತ್ತದೆ. ಅವಳ ಹಾಡು ಅವನ ಕವಿತೆಗೆ ಸ್ಫೂರ್ತಿ ನೀಡುತ್ತದೆ. ಅವನಿಗೆ ಹಿಂದೆ ಬರೆದ ಕವಿಗಳು ಯುದ್ಧದಲ್ಲಿ ಶೌರ್ಯವನ್ನು ಮೆರೆದವರ ಬಗ್ಗೆ ಬರೆಯುತ್ತಿದ್ದರು. ಒಬ್ಬ ಸಾಮಾನ್ಯ ಹೆಣ್ಣಿನ ಬಗ್ಗೆ ಇಲ್ಲಿ ವರ್ಡ್ಸ್ ವರ್ತ್ ಬರೆದಿದ್ದಾನೆ.

Kannada translation by C,P. Ravikumar of "The Solitary Reaper" by William Wordsworth

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)