ನಿಮ್ಮೊಳಗಿರುವ ರಾಕ್ಷಸ


bubbles,devils,evils,faces,heads,hell,Satan,horns,people

ಸಿ.ಪಿ. ರವಿಕುಮಾರ್


ಕೆ.ವಿ. ಐಯ್ಯರ್ ಅವರು ಬರೆದ "ರೂಪದರ್ಶಿ" ಕಾದಂಬರಿ ಬಹಳ ಜನಪ್ರಿಯವಾದದ್ದು. ಇಟಲಿ ದೇಶದ ಪ್ರಸಿದ್ಧ ಚಿತ್ರಕಾರ ಹಾಗೂ  ಮೂರ್ತಿಕಾರನಾದ ಮೈಕೆಲ್ ಏಂಜೆಲೋ ಈ ಕತೆಯಲ್ಲಿ ಒಂದು ಪಾತ್ರ. ಅವನು ಬಾಲ ಏಸುವಿನ ಚಿತ್ರಕ್ಕಾಗಿ ಒಬ್ಬ ರೂಪದರ್ಶಿಯ ಹುಡುಕಾಟದಲ್ಲಿದ್ದಾಗ ಕರುಣೆ ಮತ್ತು ನಿಷ್ಕಪಟತೆಗಳೇ ಮೂರ್ತಿವೆತ್ತಂಥ ಒಬ್ಬ ಬಾಲಕ ಅವನಿಗೆ ಎದುರಾಗುತ್ತಾನೆ; ಅವನನ್ನು ರೂಪದರ್ಶಿಯನ್ನಾಗಿ ಮೈಕೆಲ್ ಬಳಸಿಕೊಳ್ಳುತ್ತಾನೆ. ಮುಂದೆ ಸಮಾಜದ ಅನೇಕ ಅನ್ಯಾಯಗಳಿಗೆ ತುತ್ತಾಗಿ ಆ ಬಾಲಕನ ಚಹರೆ ಭಯಂಕರವಾಗಿ ಮಾರ್ಪಾಟಾಗುತ್ತದೆ. ತಾನು ಬರೆಯಲಿರುವ ಸೈತಾನನ ಚಿತ್ರಕ್ಕೆ ರೂಪದರ್ಶಿಯನ್ನು ಹುಡುಕುತ್ತಿರುವಾಗ ಮೈಕೆಲ್ ಏಂಜೆಲೋ ಗೆ ಅದೇ ವ್ಯಕ್ತಿ ಎದುರಾಗುತ್ತಾನೆ.  ವೃದ್ಧ ಮೂರ್ತಿಕಾರನಿಗೆ ಈ ವ್ಯಕ್ತಿಯೇ ತಾನು ಹಿಂದೆ ಬಾಲ ಏಸುವಿನ ಚಿತ್ರಕ್ಕೆ ಬಳಸಿದ ರೂಪದರ್ಶಿ ಎಂದು ಗೊತ್ತಿಲ್ಲ. ಮುಂದೆ ನಾಟಕೀಯ ಬೆಳವಣಿಗೆಯಲ್ಲಿ  ಅದು ಗೊತ್ತಾದಾಗ ಅವನಿಗೆ ಆಘಾತವಾಗುತ್ತದೆ.

ಇದೇ ರೀತಿಯ ಇನ್ನೊಂದು ಕತೆ. ಇದನ್ನು ಬರೆದಿರುವುದು ಜೆಫ್ರಿ ಆರ್ಚರ್. ಒಂದು ಮಗುವಿನ ಜನನದ ವೃತ್ತಾಂತ ಅದರಲ್ಲಿ ಬರುತ್ತದೆ. ಎಲ್ಲ ಮಕ್ಕಳು ಹುಟ್ಟುವ ಹಾಗೆ ಆ ಮಗು ಹುಟ್ಟಿತು. ತಾಯಿ ಹೆರಿಗೆ ನೋವನ್ನು ತಿಂದು ಮಗುವನ್ನು ಹೆತ್ತಳು. ಆದರೆ ತನ್ನ ಮಗುವಿನ ಮುಗ್ಧ ಮುಖವನ್ನು ನೋಡಿದಾಗ ನೋವನ್ನು ಮರೆತಳು. ಆ ಮಗು ಮುಂದೆ ಹೋಗಿ ಅಡಾಲ್ಫ್ ಹಿಟ್ಲರ್ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು.

ಬಾಲ ಏಸುವಿನ ಚಿತ್ರಕ್ಕೆ ಸ್ಫೂರ್ತಿ ನೀಡಿದ ಮಗುವೇ ಮುಂದೆ ಬೆಳೆದು ಸೈತಾನನಾಗಿದ್ದು ಏಕೆ? ಎಲ್ಲ ಶಿಶುಗಳ ಹಾಗೇ ಹುಟ್ಟಿದ ಮಗು ಮುಂದೆ ಅಡಾಲ್ಫ್ ಹಿಟ್ಲರ್ ಆಗಿದ್ದು ಹೇಗೆ?

ನೆನ್ನೆ ನ್ಯಾಯಾಲಯದ ತೀರ್ಪು ಹೊರಗೆ ಬಿದ್ದಿದೆ. ನಾಲ್ವರಿಗೆ ಗಲ್ಲು ಶಿಕ್ಷೆಯಾಗಿದೆ. ಅವರನ್ನು ರಾಕ್ಷಸರು, ಸೈತಾನರು ಎಂದೆಲ್ಲಾ ಜನರು ಬಣ್ಣಿಸುತ್ತಿದ್ದಾರೆ.  ಅವರು ಮಾಡಿದ ಕೃತ್ಯ ಪೈಶಾಚಿಕವಾದುದೇ ಎಂಬುದನ್ನು  ಅಲ್ಲಗಳೆಯುವುದು ಸಾಧ್ಯವಿಲ್ಲ.  ಆದರೆ ಅವರು ಹುಟ್ಟುತ್ತಲೇ ರಾಕ್ಷಸರಾಗಿ ಹುಟ್ಟಿದರೆ? ಅವರೂ ಹುಟ್ಟಿದಾಗ ಅತ್ತರು. ತಾಯಿಯ ಮಡಿಲಲ್ಲಿ ಬೆಳೆದರು. ಅಂಬೆಗಾಲಿಟ್ಟರು. ತೊದಲಿ ನುಡಿದರು. ತಪ್ಪು ಹೆಜ್ಜೆ ಇಡುತ್ತಾ ನಡೆಯುವುದನ್ನು ಕಲಿತರು.

ಅವರಿಗೆ ತಾಯಿ ಊಡಿಸಿದ್ದು ಅಮೃತವನ್ನೇ. ಆದರೆ ವಿಷವನ್ನು ಊಡಿಸಿ ಅವರನ್ನು ಪಿಶಾಚಿಗಳನ್ನಾಗಿ ಮಾಡಿದ್ದು ಯಾರು?

ಇಂದು ಅವರನ್ನು ದೂಷಿಸುವ ಚಾನೆಲ್ ಗಳಲ್ಲಿ  ಬರುವ ಜಾಹೀರಾತುಗಳಲ್ಲಿ, ಸೀರಿಯಲ್ ಗಳಲ್ಲಿ  ಹೆಣ್ಣನ್ನು ಹೇಗೆ ಪ್ರತಿಬಿಂಬಿಸುತ್ತಿದ್ದಾರೆ? ಮದ್ಯಪಾನ ಮೊದಲಾದ ನಶೆಗಳನ್ನು ಹೇಗೆ ವಾಚಾಮಗೋಚರವಾಗಿ ತೋರಿಸುತ್ತಿದ್ದಾರೆ? ಮದ್ಯವು ಇಂದು ಹೇಗೆ ಎಲ್ಲರಿಗೂ ಸುಲಭವಾಗಿ ಸಿಕ್ಕುವಂತೆ ಸರಕಾರವೇ ಏರ್ಪಾಟು ಮಾಡಿದೆ! ಎಲ್ಲೆಲ್ಲೂ ಕಣ್ಣು ಕುಕ್ಕುವ  ಸಿನಿಮಾ ಜಾಹೀರಾತುಗಳಲ್ಲಿ ಹೆಣ್ಣನ್ನು ಹೇಗೆ ಪ್ರದರ್ಶಿಸುತ್ತಿದ್ದಾರೆ?  ಸೆನ್ಸಾರ್ ಮಂಡಳಿ ವಯಸ್ಕರಿಗೆ ಮಾತ್ರ ಎಂದು ವಿಭಾಗೀಕರಿಸುವ ಚಿತ್ರಗಳು ದೂರದರ್ಶನದಲ್ಲಿ ಪುಟ್ಟಮಕ್ಕಳೂ ನೋಡುತ್ತಿದ್ದಾರೆ - ಇದಕ್ಕೆ ಯಾರು ಕಾರಣ? ದೂರದರ್ಶನದಲ್ಲಿ ಅದನ್ನು ತೋರಿಸದಿದ್ದರೇನು, ಇಂದು ಮಾಹಿತಿ ತಂತ್ರಜ್ಞಾನ ಎಲ್ಲವನ್ನೂ ನಿಮ್ಮ ಮುಂದಿರುವ ತೆರೆಗೆ ತಂದು ತೋರಿಸುವ ಸಾಧನವಾಗಿದೆಯಲ್ಲ!

ನಿಮ್ಮ  ದಿನಪತ್ರಿಕೆಯಲ್ಲಿ ಬಲಾತ್ಕಾರವನ್ನು ವಿರೋಧಿಸಿ ಸಂಪಾದಕೀಯಗಳು ಬಂದಿವೆ. ಅದೇ ದಿನಪತ್ರಿಕೆಯ ಬೇರೆ ಪುಟಗಳಲ್ಲಿ ಯಾವ ಜಾಹೀರಾತುಗಳು ಮತ್ತು ಸುದ್ದಿಗಳು ಬಂದಿವೆ? ಅವುಗಳಲ್ಲಿ ಸೆಕ್ಸ್ ಮತ್ತು ವಯೊಲೆನ್ಸ್ ಎಷ್ಟಿದೆ? ಸೆಕ್ಸ್ ಕುರಿತಾದ ಎಷ್ಟು ವಿಭಿನ್ನ ಪ್ರಾಡಕ್ಟ್ಸ್ ಬಗ್ಗೆ ಈ ದಿನಪತ್ರಿಕೆಯಲ್ಲಿ ಪ್ರತಿದಿನ ಸಚಿತ್ರ ಜಾಹೀರಾತುಗಳು  ಬರುತ್ತಿವೆ? ಕೊಲೆ ಮೊದಲಾದ ಸುದ್ದಿಗಳನ್ನು ಉಪ್ಪುಕಾರಗಳ ಜೊತೆ ದಿನನಿತ್ಯ ಅವನ್ನು ಬಡಿಸುತ್ತಿರುವುದು ಯಾರು?

ನಾಲ್ವರನ್ನು ನೇಣು ಹಾಕಿ ಸಮಾಜ ಸಮಾಧಾನದ ನಿಟ್ಟುಸಿರು ಬಿಡುತ್ತದೆ.  ಗಂಗೆಯಲ್ಲಿ ಒಮ್ಮೆ ಮುಳುಗು ಹಾಕಿದರೆ ನಮ್ಮ ಪಾಪಗಳೆಲ್ಲಾ ತೊಳೆದು ಹೋಗುತ್ತವೆ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)