ರಾಧೆಗೆ ಸಾಂತ್ವನ
ಸಿ.ಪಿ. ರವಿಕುಮಾರ್
ನಾಳೆಯ ಚಿಂತೆ ಕೆಲವರಿಗೆ; ಉಳಿಯುತ್ತದೆಯೇ ಮುಂದಿನ ಪೀಳಿಗೆಗೆ ಇಳೆ?
ಗಾಳಿ ಕಲುಷಿತವಾಗುತ್ತಿದೆ ಇತ್ತ, ಅತ್ತ ಸಾಲುಮರಗಳ ಕೊಲೆ
ಮಾಲಿನ್ಯ ಹರಡುತ್ತಿದೆ ನಾನಾ ತ್ಯಾಜ್ಯಗಳಿಂದ ಅಂತರ್ಜಲಕ್ಕೆ
ಕೇಳಲಾಗದು ನಿಶಬ್ದವನೆಂಬಂತೆ ವ್ಯೋಮದಲ್ಲಿ ಶಬ್ದಗಳ ಸಂತೆ
ಬಾಲಕ್ಕೆ ಬೆಂಕಿ ಹಚ್ಚಿದ ಕಪಿಯಂತೆ ಮಾನವನ ನಡತೆ
ಬಾಳುವಳೇ ಸೀತೆ, ಮತ್ತವಳ ಜನ್ಮದಾತೆ, ಹೀಗೆ ಬೀಳುತ್ತಿರುವಾಗ ಲಂಕೆ?
ನಾಳೆಯ ಚಿಂತೆ ಇಲ್ಲ ಕೆಲವರಿಗೆ; ಇಂದು ತುಂಬಿತೇ ತುತ್ತಿನ ಚೀಲ?
ಗಾಳಿಗೆ ತೂರಿಬಿಡು ಚಿಂತೆ! ಸುಧಾಮನಾಗಲಿಲ್ಲವೇ ಒಮ್ಮೆಲೇ ಕುಚೇಲ?
ತಾಳಿದವನು ಬಾಳಿಯಾನು; ಜನ್ಮ ತಾಳಿದವನು ಬಾಳದಿರಲಾರ
ಮೇಲೆ ಮರಕ್ಕೆ ಕಟ್ಟಿ ಹಗ್ಗದ ಕುಣಿಕೆ ಜೋಳಿಗೆಯಲ್ಲಿ ಹಾಕಿ ಬಿಡು ಭಾರ
ತಾಳಿ ಕಟ್ಟಿದವನು ನೋಡು ಸೆರೆಯ ತೋಳಲ್ಲಿ ಮರೆತು ಮಲಗಿಹನು
ಮೇಲೇಳುವನು ಇವನು ಯಾವಾಗ? ಎಂದು ಎದ್ದು ಮೈ ಕೊಡಹುವನು?
ಆಳಾಗಬಲ್ಲವನು ಅರಸಾಗಬಲ್ಲ! ಬರಿದೆ ಹುರಿದುಂಬಿಸುವುದು ಗಾದೆ
ಬಾಲಗೋಪಾಲನ ಮಧುರ ಸ್ಮೃತಿಯಲ್ಲೇ ದಿನವನ್ನು ದೂಡುವಳು ರಾಧೆ
(ಈ ಕವಿತೆ "ಮಯೂರ" ಕನ್ನಡ ಮಾಸಪತ್ರಿಕೆ, ಡಿಸೆಂಬರ್ ೨೦೧೩ - ಇದರಲ್ಲಿ ಪ್ರಕಟವಾಗಿದೆ. ಪ್ರಕಟಿತ ಕವಿತೆಯ ಪೂರ್ಣಪಾಠ ಇಲ್ಲಿದೆ.)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ