ಎಲ್ಲಿಗೆ ಹೊರಟಿರುವೆ ಯಾತ್ರಿಕ?

ಸಿ. ಪಿ. ರವಿಕುಮಾರ್ "ವ ಹಾಂನ್ ಕೌನ್ ಹೈ ತೇರಾ ಮುಸಾಫಿರ್ ಜಾಯೇಗಾ ಕಹಾಂನ್? "ಅಲ್ಲಿ ಯಾರಿದ್ದಾರೆ ನಿನ್ನವರೆಂದು? ಎಲ್ಲಿಗೆ ಹೊರಟಿರುವೆ ಯಾತ್ರಿಕ?" ಈ ಗೀತೆಯಿಂದ ಪ್ರಾರಂಭವಾಗುತ್ತದೆ ಹಿಂದಿ ಚಲನಚಿತ್ರ ಗೈಡ್ . ಅದೇ ಶೀರ್ಷಿಕೆಯ ಆರ್. ಕೆ. ನಾರಾಯಣ್ ಬರೆದ ಕಾದಂಬರಿಯನ್ನು ಸ್ಥೂಲವಾಗಿ ಆಧರಿಸಿ ತಯಾರಿಸಿದ ಚಿತ್ರಕಥೆಯನ್ನು ವಿಜಯ್ ಆನಂದ್ ತೆರೆಯ ಮೇಲೆ ಮೋಹಕವಾಗಿ ಬಿಡಿಸಿದ್ದಾರೆ. ಅವರ ಚಿತ್ರನಿರ್ದೇಶನಕ್ಕೆ ಪೂರಕವಾಗಿದೆ ಎಸ್. ಡಿ. ಬರ್ಮನ್ ಅವರ ಸಂಗೀತ, ದೇವ್ ಆನಂದ್ ಮತ್ತು ವಹೀದಾ ರಹಮಾನ್ ಅವರ ಅಭಿನಯ. ಚಿತ್ರದ ಒಂದೊಂದೂ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ. ಇವುಗಳಲ್ಲಿ ಸ್ವತಃ ಎಸ್ ಡಿ ಬರ್ಮನ್ ಹಾಡಿರುವ "ವಹಾಂನ್ ಕೌನ್ ಹೈ ತೇರಾ ... " ಹಾಡು ನಮ್ಮನ್ನು ವಿಭಿನ್ನ ಲೋಕಕ್ಕೆ ಕರೆದೊಯ್ಯುತ್ತದೆ. ಚಿತ್ರದ ನಾಯಕ ರಾಜೂ ಒಬ್ಬ ರೊಮ್ಯಾಂಟಿಕ್ ಸ್ವಭಾವದ ತರುಣ. ಇವನು ಒಂದು ಪಾಳು ದೇವಾಲಯದಲ್ಲಿ ಗೈಡ್ ಆಗಿ ಹೊಟ್ಟೆ ಹೊರೆಯುತ್ತಿದ್ದರೂ ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಾನೆ. ದೇವಾಲಯಕ್ಕೆ ಒಮ್ಮೆ ಒಬ್ಬ ಪ್ರಸಿದ್ಧ ಪುರಾತತ್ತ್ವ ವಿಜ್ಞಾನಿ (ಆರ್ಕಿಯಾಲಜಿಸ್ಟ್) ಮತ್ತು ಅವನ ಹೆಂಡತಿ ರೋಸಿ ಬರುತ್ತಾರೆ. ವಿಜ್ಞಾನಿಗೆ ಹಳೆಯ ಅವಶೇಷಗಳಲ್ಲಿ ಆಸಕ್ತಿ. ತನ್ನ ನವವಿವಾಹಿತೆ ಪತ್ನಿಯೊಂದಿಗೆ ಅವನದು ಔಪಚಾರಿಕ ಎಂಬಂಥ ಸಂಬಂಧ. ರೋಸಿ ಚೆಲುವೆ, ನ...