ಗುಲ್ಜಾರ್ ಅವರಿಗೆ ಪುಷ್ಪಗುಚ್ಛ


ಸಿ. ಪಿ. ರವಿಕುಮಾರ್ 


ಗುಲ್ಜಾರ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿರುವುದು ಗುಣಕ್ಕೆ ನಮ್ಮಲ್ಲಿ ಇನ್ನೂ ಪುರಸ್ಕಾರವಿದೆ ಎಂಬ ಸಮಾಧಾನವನ್ನು ತಂದುಕೊಟ್ಟಿದೆ. ಗುಲ್ಜಾರ್ ಒಬ್ಬ ಅಸಾಮಾನ್ಯ ಕವಿ, ಕತೆಗಾರ, ಚಲನಚಿತ್ರ ನಿರ್ದೇಶಕ.  ೧೯೩೪ ರಲ್ಲಿ ಅವಿಭಾಜಿತ ಭಾರತದ ಪಂಜಾಬ್ ಪ್ರಾಂತದಲ್ಲಿ ಹುಟ್ಟಿದವರು. ಅವರ ನಿಜವಾದ ಹೆಸರು ಸಂಪೂರನ್ ಸಿಂಗ್ ಕಾಲ್ರಾ; ಮೂಲತಃ ಸಿಖ್ ಧರ್ಮಿಗಳು. ಪಂಜಾಬಿನ ವಿಭಜನೆಯ ಸಮಯದಲ್ಲಿ ಇನ್ನೂ ಹದಿಹರೆಯದ ಹುಡುಗನಾಗಿದ್ದ ಗುಲ್ಜಾರ್ ಮನಸ್ಸಿನ ಮೇಲೆ ಆ ಕಾಲದ ಘಟನೆಗಳು ಆಳವಾದ ಮುದ್ರೆಯನ್ನೊತ್ತಿದವು. ಮುಂದೆ ತಮ್ಮ ತಂದೆಯ ಇಚ್ಛೆಯ ವಿರುದ್ಧವಾಗಿ ಸಿನಿಮಾ ಪ್ರಪಂಚವನ್ನು ಪ್ರವೇಶಿಸಿದರು. ತಮ್ಮ ಹಲವಾರು ಕತೆಗಳಲ್ಲಿ ಅವರು ಭಾರತದ ವಿಭಜನೆಯನ್ನು ವಸ್ತುವನ್ನಾಗಿ ಆರಿಸಿಕೊಂಡಿದ್ದಾರೆ. ಮುಂದೆ ಪಂಜಾಬ್ ಪ್ರಾಂತದಲ್ಲಿ ಉಗ್ರವಾದಿ ಗುಂಪುಗಳು ಪ್ರತ್ಯೇಕ ಖಾಲಿಸ್ತಾನ್ ದೇಶಕ್ಕೆ ಆಗ್ರಹಿಸಿ ಹೋರಾಟ ಪ್ರಾರಂಭಿಸಿದಾಗ ಉಗ್ರರ ವ್ಯಥೆಗೆ ಕಾರಣಗಳನ್ನು ಹುಡುಕುವ ಮಾಚಿಸ್ ಎಂಬ ಚಿತ್ರವನ್ನು ನಿರ್ದೇಶಿಸಿದರು. 

ಗುಲ್ಜಾರ್ ಅವರು ಪ್ರಸಿದ್ಧ ನಿರ್ದೇಶಕರಾದ ಬಿಮಲ್ ರಾಯ್ ಅವರೊಂದಿಗೆ ಸಹನಿರ್ದೇಶಕರಾಗಿ ಪಳಗಿದವರು.  ಮುಂದೆ ಸ್ವತಂತ್ರವಾಗಿ ನಿರ್ದೇಶಿಸುವ ಅವಕಾಶಗಳು ಸಿಕ್ಕಾಗ ಅನೇಕ ಕಾಲ ನೆನಪಿನಲ್ಲಿಟ್ಟುಕೊಳ್ಳುವ ಚಿತ್ರಗಳನ್ನು ನಮಗೆ ಕೊಟ್ಟರು.  ಒಬ್ಬ ಮೂಕ ಇನ್ನೊಬ್ಬ ಮೂಕಿಯನ್ನು  ಪರಸ್ಪರ ಪ್ರೀತಿಸಿ ಜೀವನದಲ್ಲಿ ಮುಂದುವರೆಯಲು ಪ್ರಯತ್ನಿಸುವ ಕೋಶಿಶ್.  ರಾಜಕಾರಣದಲ್ಲಿ ಮುಂದಾಳುತನ ವಹಿಸುವ ಒಬ್ಬ ಹೆಣ್ಣು ತನ್ನ ವ್ಯಕ್ತಿಗತ ಜೀವನದಲ್ಲಿ ಅನುಭವಿಸುವ ಸೋಲು ಮತ್ತು ಅದರಿಂದ ಹೊರಬರಲು ಅವಳ ಹೆಣಗಾಟವನ್ನು ವಸ್ತುವಾಗುಳ್ಳ ಆಂಧಿ.  ಹಳ್ಳಿಯಲ್ಲಿ ಸಂಧಿಸಿದ ಒಬ್ಬ ಯುವತಿಯೊಂದಿಗೆ ಸಂಬಂಧ ಬೆಳೆಸಿ ಕಾರಣಾಂತರಗಳಿಂದ ಅವಳನ್ನು ಮದುವೆಯಾಗದೆ ಅವಳಿಗೆ ಹುಟ್ಟಿದ ಮಗಳು ಮುಂದೆ ವೇಶ್ಯಾವೃತ್ತಿಯಲ್ಲಿ ಇದ್ದಾಳೆಂದು ತಿಳಿದು ಮಗಳನ್ನು ಮನೆಗೆ ಕರೆತಂದು ಅವಳ ಪುನರುಜ್ಜೀವನಕ್ಕಾಗಿ ಹೆಣಗಾಡುವ ತಂದೆಯ ಕತೆಯುಳ್ಳ ಮೌಸಮ್. 

 ಶೈಲೇಂದ್ರ,ಸಾಹಿರ್ ಲುಧಿಯಾನ್ವಿ, ಕೈಫಿ ಆಜ್ಮಿ, ಮಜರೂಹ್ ಸುಲ್ತಾನ್ ಪುರಿ ಮೊದಲಾದ ಕವಿಗಳು ಹಿಂದಿ ಚಿತ್ರಗಳಿಗೆ ಗೀತೆಗಳನ್ನು ರಚಿಸುತ್ತಿರುವಾಗಲೇ ಅವರ ನಡುವೆ  ಗುಲ್ಜಾರ್ ತಮ್ಮದೇ ಆದ ಶೈಲಿಯನ್ನು ರೂಪಿಸಿಕೊಂಡು ಕವಿತೆಗಳನ್ನು ಬರೆದರು.  ಅವರು ನಿರ್ದೇಶಿಸಿದ ಚಿತ್ರಗಳಿಗೆ ಸ್ವತಃ ಅವರೇ ಸಾಹಿತ್ಯವನ್ನೂ ರಚಿಸುತ್ತಿದ್ದರು. ಗುಲ್ಜಾರ್ ಅವರದು ನವಿರಾದ ಭಾಷೆ.  ಬೇರೆಯವರಿಗೆ ಕಂಡಿದ್ದರಲ್ಲೇ ಅಸಾಮಾನ್ಯವದುದನ್ನು ಏನೋ ಕಂಡು ಅದರ ಕುರಿತು  ಬರೆಯುತ್ತಾರೆ. ಒಂದು ಹಿಂದಿ ಚಿತ್ರಗೀತೆಯನ್ನು ಕೇಳಿದರೆ ಅದು ಗುಲ್ಜಾರ್ ಅವರದೇ   ಎಂದು ಖಚಿತವಾಗಿ ಹೇಳಿಬಿಡುವಷ್ಟು  ಸ್ವಂತಿಕೆ ಅವರ ರಚನೆಗಳಲ್ಲಿದೆ. ಜಂಗಲ್ ಬುಕ್ ಕಥೆಯನ್ನು ಹಿಂದಿಯಲ್ಲಿ ತಯಾರಿಸಿದಾಗ ಅದಕ್ಕೆ ಬರೆದ ಶೀರ್ಷಿಕೆ ಗೀತೆಯಲ್ಲಿ ಬರುವ ಸಾಲನ್ನು ನೋಡಿ:
 "ಪಿಸುಮಾತಾಡುತ್ತಿದೆ  ಕಾಡಿಗೆ ಕಾಡೇ! ಗೊತ್ತಾಗಿದೆ ಎಲ್ಲರಿಗೂ!ಅರಳಿದೆಯಂತೆ ಇಲ್ಲೊಂದು ಚಡ್ಡಿ ಹಾಕಿಕೊಂಡ ಹೂವು!" 
ಮಗು ಮೋಗ್ಲಿಯನ್ನು "ಚಡ್ಡಿ ಹಾಕಿಕೊಂಡ ಹೂವು" ಎಂಬ ರೂಪದಲ್ಲಿ ಕಾಣಲು ಗುಲ್ಜಾರ್ ಕಣ್ಣಿಗೆ ಮಾತ್ರ ಸಾಧ್ಯ! 

ನನ್ನ ಬ್ಲಾಗ್ ಓದುಗರೊಂದಿಗೆ ಹಿಂದೆ ನಾನು ಅವರ ಕೆಲವು ರಚನೆಗಳನ್ನು ಅನುವಾದ ಮಾಡಿ ಹಂಚಿಕೊಂಡಿದ್ದೇನೆ. ಈ ಸಂದರ್ಭದಲ್ಲಿ ಈ ಅನುವಾದಗಳನ್ನು ಪುಷ್ಪಗುಚ್ಚದ ರೂಪದಲ್ಲಿ ಒಂದುಗೂಡಿಸಿ  ಕೊಡುತ್ತಿದ್ದೇನೆ.  ನಿಮಗೆ ಇಷ್ಟವಾಗಬಹುದೆಂದು ನಂಬಿದ್ದೇನೆ. 





Gulzar wins Phalke Award
Kannada Translations of Gulzar's poems
(c) C.P. Ravikumar

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)