ಎಲ್ಲಿಗೆ ಹೊರಟಿರುವೆ ಯಾತ್ರಿಕ?

ಸಿ. ಪಿ. ರವಿಕುಮಾರ್ 



"ವಹಾಂನ್ ಕೌನ್ ಹೈ ತೇರಾ ಮುಸಾಫಿರ್ ಜಾಯೇಗಾ ಕಹಾಂನ್? "ಅಲ್ಲಿ ಯಾರಿದ್ದಾರೆ ನಿನ್ನವರೆಂದು? ಎಲ್ಲಿಗೆ ಹೊರಟಿರುವೆ ಯಾತ್ರಿಕ?" ಈ ಗೀತೆಯಿಂದ ಪ್ರಾರಂಭವಾಗುತ್ತದೆ ಹಿಂದಿ ಚಲನಚಿತ್ರ ಗೈಡ್. ಅದೇ ಶೀರ್ಷಿಕೆಯ ಆರ್. ಕೆ. ನಾರಾಯಣ್  ಬರೆದ ಕಾದಂಬರಿಯನ್ನು ಸ್ಥೂಲವಾಗಿ ಆಧರಿಸಿ ತಯಾರಿಸಿದ ಚಿತ್ರಕಥೆಯನ್ನು ವಿಜಯ್ ಆನಂದ್ ತೆರೆಯ ಮೇಲೆ ಮೋಹಕವಾಗಿ ಬಿಡಿಸಿದ್ದಾರೆ. ಅವರ ಚಿತ್ರನಿರ್ದೇಶನಕ್ಕೆ ಪೂರಕವಾಗಿದೆ  ಎಸ್. ಡಿ. ಬರ್ಮನ್  ಅವರ ಸಂಗೀತ, ದೇವ್ ಆನಂದ್ ಮತ್ತು ವಹೀದಾ ರಹಮಾನ್ ಅವರ ಅಭಿನಯ. ಚಿತ್ರದ ಒಂದೊಂದೂ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ. ಇವುಗಳಲ್ಲಿ ಸ್ವತಃ ಎಸ್ ಡಿ ಬರ್ಮನ್ ಹಾಡಿರುವ "ವಹಾಂನ್ ಕೌನ್ ಹೈ ತೇರಾ ... " ಹಾಡು ನಮ್ಮನ್ನು ವಿಭಿನ್ನ ಲೋಕಕ್ಕೆ ಕರೆದೊಯ್ಯುತ್ತದೆ. 
 ಚಿತ್ರದ ನಾಯಕ ರಾಜೂ ಒಬ್ಬ ರೊಮ್ಯಾಂಟಿಕ್ ಸ್ವಭಾವದ ತರುಣ. ಇವನು ಒಂದು ಪಾಳು ದೇವಾಲಯದಲ್ಲಿ ಗೈಡ್ ಆಗಿ ಹೊಟ್ಟೆ ಹೊರೆಯುತ್ತಿದ್ದರೂ ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಾನೆ. ದೇವಾಲಯಕ್ಕೆ ಒಮ್ಮೆ ಒಬ್ಬ ಪ್ರಸಿದ್ಧ ಪುರಾತತ್ತ್ವ ವಿಜ್ಞಾನಿ (ಆರ್ಕಿಯಾಲಜಿಸ್ಟ್)  ಮತ್ತು ಅವನ ಹೆಂಡತಿ ರೋಸಿ ಬರುತ್ತಾರೆ. ವಿಜ್ಞಾನಿಗೆ ಹಳೆಯ ಅವಶೇಷಗಳಲ್ಲಿ ಆಸಕ್ತಿ. ತನ್ನ ನವವಿವಾಹಿತೆ ಪತ್ನಿಯೊಂದಿಗೆ ಅವನದು ಔಪಚಾರಿಕ ಎಂಬಂಥ ಸಂಬಂಧ. ರೋಸಿ ಚೆಲುವೆ, ನರ್ತಕಿ, ಜೀವನೋಲ್ಲಾಸ ತುಂಬಿ ತುಳುಕುವ ತರುಣಿ. ಅವಳಲ್ಲಿ ರಾಜೂ ಅನುರಕ್ತನಾಗುತ್ತಾನೆ. ರೋಸಿಯೂ ಅವನ ರೊಮ್ಯಾಂಟಿಕ್ ಸ್ವಭಾವಕ್ಕೆ ಮರುಳಾಗುತ್ತಾಳೆ. ಇಬ್ಬರೂ ಓಡಿಹೋಗುವ ನಿರ್ಧಾರಕ್ಕೆ ಬರುತ್ತಾರೆ. ರೋಸಿಯ ನರ್ತನ ಪ್ರತಿಭೆಯನ್ನು ಬಂಡವಾಳ ಮಾಡಿಕೊಂಡು ರಾಜೂ ಮನರಂಜನೆಯ ವ್ಯಾಪಾರಕ್ಕೆ ಇಳಿಯುತ್ತಾನೆ. ರೋಸಿಯ ಪ್ರಸಿದ್ಧಿ ಕ್ರಮೇಣ ಏರುತ್ತದೆ. ಅವಳ ಮ್ಯಾನೇಜರ್ ಆದ ರಾಜೂ ಈಗ ಅವಳ ಕಣ್ಣಿಗೆ ಅಷ್ಟೊಂದು ಆಕರ್ಷಕನಾಗಿ ಕಾಣುತ್ತಿಲ್ಲ; ಅವರಿಬ್ಬರ ನಡುವೆ ಬಿರುಕು ಉಂಟಾಗುತ್ತದೆ. ಮುಂದೆ ರಾಜೂ ಮೇಲೆ ಕಳ್ಳತನದ ಆರೋಪ ಬಂದು ಅವನು ಪರಾರಿಯಾಗುತ್ತಾನೆ. ಹಾಗೆ  ಓಡಿ ಹೋಗುವಾಗ "ಎಲ್ಲಿ ಹೋಗುವೆ ಯಾತ್ರಿಕ?" ಎಂಬ ಗೀತೆ ಹಿನ್ನೆಲೆಯಲ್ಲಿ ಉಪಯೋಗಿಸಲಾಗಿದೆ. ಜಗತ್ತಿನಲ್ಲಿ ರಾಜೂ ಈಗ ಒಬ್ಬಂಟಿ.  ರೋಸಿ ಅವನ ಸರ್ವಸ್ವವಾಗಿದ್ದವಳು, ಅವಳನ್ನು ಕಳೆದುಕೊಂಡಿದ್ದಾನೆ. ತನ್ನ ಸ್ವಗ್ರಾಮಕ್ಕೆ ಹಿಂದಿರುಗುವ ಧೈರ್ಯವಿಲ್ಲ.  ಮಾರ್ಗದರ್ಶಿ ರಾಜೂ  ಸ್ವತಃ ತಾನೇ ದಿಕ್ಕೆಟ್ಟಿದ್ದಾನೆ.  ದಾರಿ  ಕರೆದುಕೊಂಡು ಹೋದ ಕಡೆ ಹೋಗುತ್ತಿದ್ದಾನೆ. ಅವನ ಮನಸ್ಸಿನಲ್ಲಿ ನಡೆಯುತ್ತಿರುವ ಘರ್ಷಣೆಗಳನ್ನು ಕವಿ ಶೈಲೇಂದ್ರ ಬಹಳ ಸರಳವಾದ ಭಾಷೆಯಲ್ಲಿ ಹಿಡಿದಿಟ್ಟಿದ್ದಾರೆ. ಎಸ್ ಡಿ ಬರ್ಮನ್ ನೋವು ತುಂಬಿದ ಧ್ವನಿಯಲ್ಲಿ ಬೇರಾರೂ ಹಾಡಲಾರದ ರೀತಿಯಲ್ಲಿ  ಹಾಡಿದ್ದಾರೆ ... ನೀವೂ ಹಾಡನ್ನು ಕೇಳಿ ಮತ್ತು ಗೀತೆಯ ಅನುವಾದವನ್ನು ಓದಿ: 


ಎಲ್ಲಿಗೆ ಹೊರಟಿರುವೆ ಯಾತ್ರಿಕ?

ಮೂಲ ಹಿಂದಿ ಕವಿತೆ - ಶೈಲೇಂದ್ರ 
ಕನ್ನಡ ಅನುವಾದ - ಸಿ. ಪಿ. ರವಿಕುಮಾರ್ 


ಲ್ಲಿ ಯಾರಿದ್ದಾರೆ ನಿನ್ನವರೆಂದು?
ಎಲ್ಲಿಗೆ ಹೊರಟಿರುವೆ ಯಾತ್ರಿಕ?
ಕುಳಿತು ದಣಿವಾರಿಸಿಕೋ  ಎರಡು ಕ್ಷಣ
ಈ ನೆರಳು ಸಿಗುವೊದೋ ಸಿಕ್ಕದೋ ಬಳಿಕ!

ಸವೆದುಹೋಯಿತು ಬಾಳು
ಕನಸಾದವು ರಾತ್ರಿಗಳು
ಕಳೆದಾಗ ಪ್ರೀತಿ ಕ್ಷಣಿಕ
ಮರೆತುಬಿಟ್ಟರು ಅವರು
ಮರೆತುಬಿಡು ನೀನೂ
ಪ್ರೇಮ ಒಂದು ಕನಸೆಂದು

ಎಲ್ಲವೂ  ದೂರ, ಎಲ್ಲ ಅಂಧಕಾರ!
ಯಾತ್ರಿಕ, ಎಲ್ಲಿ ಹೊರಟಿದ್ದೀಯ ದೂರ?

ನಿನ್ನನ್ನು ಯಾರೂ
ಎದುರು ನೋಡುತ್ತಿಲ್ಲ
ಕಾದು ಕುಳಿತವರಿಲ್ಲ  ಯಾರೂ
ನಿನ್ನ ನೋವನ್ನು
ಯಾರೂ ಹಂಚಿಕೊಂಡವರಿಲ್ಲ
ಯಾರೂ ಕರೆದವರಿಲ್ಲ ಕಣ್ಣೀರು

ಯಾರನ್ನು ಕರೆಯುತ್ತಿದೆ  ನಿನ್ನ ಮಮಕಾರ?
ಯಾತ್ರಿಕ, ಎಲ್ಲಿ ಹೊರಟಿದ್ದೀಯ ದೂರ?

ಹೇಳುತ್ತಾರೆ ತಿಳಿದವರು
ಈ ಲೋಕ ಸುಳ್ಳೆಂದು
ನೀರ ಮೇಲಿನ ಬರಹದಂತೆ
ಕಂಡರೂ ಕಣ್ಣಿಗೆ
ತಿಳಿದರೂ ಬುದ್ಧಿಗೆ
ಕೈಗೆ ಹತ್ತದು ನೋಡು, ಅಂಥ ಸಂತೆ!

ನಿನ್ನದೆಂಬುದು  ಇಲ್ಲಿ ಇದೆಯೇ ಏನಾರ?
ಯಾತ್ರಿಕ, ಎಲ್ಲಿ ಹೊರಟಿದ್ದೀಯ ದೂರ?

ಕಾಮೆಂಟ್‌ಗಳು

  1. The original song by Shailendra -
    (Courtesy - http://hindilyricspratik.blogspot.in/2011/01/wahan-kaun-hai-tera-sdburman.html)
    वहां कौन है तेरा - Wahan Kaun Hai Tera (S.D.Burman)
    Movie/Album : गाईड (1965)
    Music By : एस.डी.बर्मन
    Lyrics By : शैलेन्द्र
    Performed By : एस.डी.बर्मन

    वहां कौन है तेरा
    मुसाफिर जाएगा कहाँ
    दम ले ले घड़ी भर
    ये छइयां पाएगा कहाँ

    बीत गए दिन
    प्यार के पल-छीन
    सपना बनी ये रातें
    भूल गए वो
    तू भी भुला दे
    प्यार की वो मुलाकातें
    सब दूर आंधेरा
    मुसाफिर...

    कोई भी तेरी
    राह ने देखे
    नैन बिछाए न कोई
    दर्द से तेरे
    कोई ना तड़पा
    आँख किसी की ना रोई
    कहे किसको तू मेरा
    मुसाफिर...

    कहते हैं ज्ञानी
    दुनिया है पानी
    पानी पे लिखी लिखाई
    है सबकी देखी
    है सबकी जानी
    हाथ किसी के ना आनी
    कुछ तेरा ना मेरा
    मुसाफिर...

    ಪ್ರತ್ಯುತ್ತರಅಳಿಸಿ
  2. ಕನ್ನಡ ಅನುವಾದ ಚೆನ್ನಾಗಿದೆ ಸರ್...ಟ್ರಾನ್ಸಲೇಟರ್ ಬಳಸಿದ್ರೆ :) ;) ನಿಮಗೆ ಗೊತ್ತಲ್ವ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)