ತಪ್ಪು ಹೆಜ್ಜೆ ಇಟ್ಟು ನಡೆದ ಬಾಲ ರಾಮಚಂದ್ರ!
ಕವಿತೆ ಓದುವ ಮುನ್ನ ...
ಕನ್ನಡದಲ್ಲಿ ಪುರಂದರದಾಸರು ಹೇಗೆ ಕೃಷ್ಣನ ಬಾಲ್ಯವನ್ನು ನವಿರು ಹಾಸ್ಯದಿಂದ ಚಿತ್ರಿಸಿದ್ದಾರೋ ಅದೇ ಬಗೆಯ ನವಿರು ಹಾಸ್ಯವನ್ನು ತುಲಸೀದಾಸರ ಈ ಗೀತೆಯಲ್ಲಿ ಕಾಣಬಹುದು. ರಾಮನ ಬಾಲ್ಯವನ್ನು ಕವಿ ವರ್ಣಿಸುತ್ತಿದ್ದಾನೆ. ಕವಿಯ ಒಳಗಣ್ಣಿಗೆ ಮಗು ಶ್ರೀರಾಮನು ತಪ್ಪು ಹೆಜ್ಜೆ ಇಡುತ್ತಾ ನಡೆಯಲು ಕಲಿಯುವ ಚಿತ್ರ ಗೋಚರಿಸುತ್ತಿದೆ. ಹಾಗೆ ನಡೆಯುವಾಗ ಅವನ ಪುಟ್ಟ ಕಾಲಿಗೆ ಕಟ್ಟಿದ ಗೆಜ್ಜೆಯ ಘಲ್ ಘಲ್ ಸದ್ದು ಕವಿಯ ಕಿವಿಗೆ ಕೇಳುತ್ತಿದೆ. ನಡೆಯುವ ರಭಸದಲ್ಲಿ ರಾಮ ಧೊಪ್ಪನೆ ಬಿದ್ದಾಗ ಅವನತ್ತ ತಾಯಿ-ತಂದೆಯರು ಧಾವಿಸಿ ಬರುತ್ತಾರೆ. ರಾಮನು ಪುತ್ರಕಾಮೇಷ್ಟಿ ಯಾಗವನ್ನೇ ಮಾಡಿ ಪಡೆದ ಪುತ್ರ! ಅಯ್ಯೋ, ಮಗುವಿಗೆ ಏನಾಯಿತೋ ಎಂದು ದಶರಥ ಪರಿತಪಿಸುತ್ತಾನೆ! ತಂದೆ ತಾಯಿ ಹೀಗೆ ಕಂಗಾಲಾದಾಗ ಮಗುವೂ ಪೆಚ್ಚಾಗಿ ಅಳುತ್ತದೆ! ಕವಿಯ ಕಲ್ಪನೆಯಲ್ಲಿ ಸಾಕ್ಷಾತ್ ಶ್ರೀರಾಮಚಂದ್ರನೇ ಅಳುತ್ತಿದ್ದಾನೆ! ತಂದೆ ತನ್ನ ಉತ್ತರೀಯದ ಸೆರಗಿನಿಂದಲೇ ಧೂಳನ್ನು ಝಾಡಿಸಿ ಒರೆಸಿ ಮಗುವಿಗೆ ಪರಿಪರಿಯಾಗಿ ಸಮಾಧಾನ ಮಾಡುತ್ತಿದ್ದಾನೆ! ಗಲ್ಲ ನೇವರಿಸಿ ಕೂದಲು ಸರಿಮಾಡಿ ಅಳಬಾರದೆಂದು ಗೋಗರೆಯುತ್ತಿದ್ದಾನೆ! ಈ ಬಗೆಯ ಕಕ್ಕುಲತೆಯಿಂದ ಸಮಾಧಾನಗೊಂಡ ಮಗುವಿನ ತುಟಿಯಲ್ಲಿ ಕೊನೆಗೂ ನಗು ಅರಳುತ್ತದೆ. ಜೇನು ಸುರಿಯುವಂತೆ ತೋರುವ ಹವಳದಂಥ ತುಟಿಗಳಿಂದ ಜೇನಿನಷ್ಟೇ ಸವಿಯಾದ ತೊದಲು ಮಾತುಗಳನ್ನು ಕೇಳಿ ದಶರಥ-ಕೌಸಲ್ಯೆ ಮುಗ್ಧರಾಗಿದ್ದಾರೆ! ಕೆಳಗೆ ಬಿದ್ದು ಅತ್ತು ರಂಪ ಮಾಡಿದ ಮಗುವಿನ ಮೂಗು ಸೋರುತ್ತಿದೆ! ಆದರೇನು, ಈ ತುಲಸೀದಾಸರ ಈ ಮಾನಸಚಿತ್ರದ ಸೌಂದರ್ಯಕ್ಕೆ ಕುಂದು ಬರುವುದೇ? ಈ ಚಿತ್ರದ ಸೌಂದರ್ಯವನ್ನು ಕಡೆದು ಹಿಡಿಯಲು ಯಾವ ಚಿತ್ರಕಾರನಿಗೆ ಸಾಧ್ಯ? ಹೀಗೆ ಯೋಚಿಸುತ್ತಾ ಕವಿಯ ಮನಸ್ಸು ಆನಂದತುಂದಿಲವಾಗಿ ಮುಖವು ಮಂದಹಾಸ ಬೀರುತ್ತಿದೆ!
"ಠುಮಕ್ ಚಲತ್ ರಾಮಚಂದ್ರ!" ಎಂಬ ಗೀತೆಯನ್ನು ಡಿ ವಿ ಪಲುಸ್ಕರ್ (ಮತ್ತು ನಂತರ ಲತಾ ಮಂಗೇಶ್ಕರ್) ಅತ್ಯಂತ ಮಧುರವಾಗಿ ಹಾಡಿದ್ದಾರೆ. ಇಂಟರ್ ನೆಟ್ ಮೇಲೆ ಈ ಗೀತೆಗಳನ್ನು ನೀವು ಕೇಳಿ ಆನಂದಿಸಬಹುದು. ಗೀತೆಯ ಅನುವಾದ ನಿಮ್ಮ ಸೌಂದರ್ಯಾಸ್ವಾದನೆಯನ್ನು ಹೆಚ್ಚಿಸಬಹುದೆಂದು ಆಶಿಸುತ್ತೇನೆ!
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್
ತಪ್ಪು ಹೆಜ್ಜೆ ಇಟ್ಟು ನಡೆದ ಬಾಲ ರಾಮಚಂದ್ರ!
ತಪ್ಪು ಹೆಜ್ಜೆ ಇಟ್ಟು ನಡೆದ, ಗೆಜ್ಜೆ ಸದ್ದು ಮಧುರ!
ಎತ್ತಿ ಎತ್ತಿ ಹಾಕಿ ಹೆಜ್ಜೆ ಬಿದ್ದ ಧೊಪ್ಪನೆಂದು ಮತ್ತೆ
ಎತ್ತಿ ಮುತ್ತನಿಟ್ಟು ರಮಿಸೆ ಅಳುವನು ಅರಗುವರ!
ಸೆರಗಿನಿಂದ ಒರೆಸಿ ಧೂಳು, ಮುದ್ದುಮಾತನಾಡಿ ನೂರು,
ನೇವರಿಸುತ ಗಲ್ಲ-ಕುರುಳು ಅರಳುವ ಮೃದು ಅಧರ!
ನೇವರಿಸುತ ಗಲ್ಲ-ಕುರುಳು ಅರಳುವ ಮೃದು ಅಧರ!
ಜೇನು ಸುರಿವ ತುಟಿಗಳಿಂದ ಜೇನಿನಂಥ ತೊದಲು ನುಡಿವ
ಸೋರುತಿರುವ ಮೂಗನೊರಸೆ ಮುಖ ತಿರುವಿದ ಪೋರ!
ಧ್ಯಾನಿಸುತಿಹ ತುಲಸಿದಾಸ, ತುಟಿಯಮೇಲೆ ಮಂದಹಾಸ!
ಎಲ್ಲಿಹನೀ ಚೆಲ್ವ ಬಿಡಿಸಬಲ್ಲ ಚಿತ್ರಕಾರ!
ಸೋರುತಿರುವ ಮೂಗನೊರಸೆ ಮುಖ ತಿರುವಿದ ಪೋರ!
ಧ್ಯಾನಿಸುತಿಹ ತುಲಸಿದಾಸ, ತುಟಿಯಮೇಲೆ ಮಂದಹಾಸ!
ಎಲ್ಲಿಹನೀ ಚೆಲ್ವ ಬಿಡಿಸಬಲ್ಲ ಚಿತ್ರಕಾರ!
ಅದ್ಭುತ
ಪ್ರತ್ಯುತ್ತರಅಳಿಸಿನಿಮಗೆ ಇಷ್ಟವಾಗಿದ್ದು ಸಂತೋಷ!
ಅಳಿಸಿ