ಚಾರ್ಲಿ ಉವಾಚ

ಸಿ. ಪಿ. ರವಿಕುಮಾರ್


ಏಪ್ರಿಲ್ ೧೬, ೨೦೧೪ - ಚಾರ್ಲಿ ಚಾಪ್ಲಿನ್ನನ ನೂರಾ ಇಪ್ಪತ್ತೈದನೇ ಹುಟ್ಟುಹಬ್ಬ. ದುಂಡು ಮೇಜಿನ ಪರಿಷತ್ತಿಗೆ ಗಾಂಧೀಜಿ ಲಂಡನ್ನಿಗೆ ಭೇಟಿಯಿತ್ತಾಗ ಅಲ್ಲಿ ಅವರು ಸಂಧಿಸಿ ಮಾತಾಡಿಸಿದ ಕೆಲವೇ ಗಣ್ಯರ ಪೈಕಿ ಚಾರ್ಲಿ ಚಾಪ್ಲಿನ್ನನೂ ಒಬ್ಬ. ಅವನ ಜೀವನ ಚರಿತ್ರೆಯನ್ನು ನಮ್ಮ ತಂದೆ ಬ್ರಿಟಿಷ್ ಕೌನ್ಸಿಲ್ ಲೈಬ್ರರಿಯಿಂದ ತಂದು ಓದುತ್ತಿದ್ದಾಗ ನಾನೂ ಅದರ ಮೇಲೆ ಕಣ್ಣಾಡಿಸಿದ ನೆನಪಿದೆ. ಒಬ್ಬ ರಂಗ ಅಭಿನೇತ್ರಿಯ ಮಗನಾಗಿ ಹುಟ್ಟಿದ ಚಾರ್ಲಿಯ ಬಾಲ್ಯ ಬಡತನ ಮತ್ತು ಒಂಟಿತನದಲ್ಲಿ ಕಳೆಯಿತು. ಒಮ್ಮೆ ಅವನ ತಾಯಿ ಪುಟ್ಟ ಚಾರ್ಲಿಯನ್ನು ಯಾರ ಸುಪರ್ದಿನಲ್ಲೂ ಬಿಟ್ಟಿರಲಾಗದೆ ಅವನನ್ನು ನಿರ್ವಾಹವಿಲ್ಲದೆ ರಂಗದ ಮೇಲೆ ಕರೆದೊಯ್ಯುತ್ತಾಳೆ. ಪುಟ್ಟ ಬಾಲಕ ರಂಗದ ಮೇಲೆ ಹೋ ಎಂದು ಅಳಲು ಪ್ರಾರಂಭಿಸುತ್ತಾನೆ! ಇದನ್ನು ನೋಡಿ ಸಭಿಕರು ಹೋ ಎಂದು ನಕ್ಕು ಕರತಾಡನ ಮಾಡುತ್ತಾರೆ!  ತನ್ನ ನೋವಿನಿಂದ ಜಗತ್ತಿಗೆ ನಗೆಯನ್ನು ಹಂಚುವ ಪ್ರವೃತ್ತಿ ಹೀಗೆ ಪ್ರಾರಂಭವಾಯಿತು! ಉದ್ದಕ್ಕೂ ಕ್ಲೌನ್ (ನಕಲಿ ವೇಷಧಾರಿ) ಪಾತ್ರಗಳಲ್ಲಿ ಕಾಣಿಸಿಕೊಂಡ ಚಾರ್ಲಿ ಚಾಪ್ಲಿನ್ ನಿಜಕ್ಕೂ ಒಬ್ಬ ಅಪೂರ್ವ ಪ್ರತಿಭೆಯ ಸಾಹಿತಿ, ಚಿತ್ರ ನಿರ್ದೇಶಕ, ನಟ. ಅವನ ಕೆಲವು ಜಾಣ್ನುಡಿಗಳನ್ನು ಇಲ್ಲಿ ಕನ್ನಡಿಸಿದ್ದೇನೆ. ನಮ್ಮ ಮೆಚ್ಚಿನ ಕಲಾವಿದನಿಗೆ ಇದೊಂದು ಬಗೆಯ ಶ್ರದ್ಧಾಂಜಲಿ!



"ಜೀವನವು ಸುಂದರ ಮತ್ತು ವಿರಾಟ್ ಸ್ವರೂಪದ್ದು -  ನೀರಿನಲ್ಲಿ ತೇಲುವ ಜೆಲಿ ಫಿಶ್ ಗೂ ಕೂಡಾ"

"ನೆಲದ ಕಡೆಗೇ ನೋಡುತ್ತಾ ನಡೆದರೆ ಕಾಣಿಸುವುದಾದರೂ ಹೇಗೆ ಕಾಮನಬಿಲ್ಲು?"

"ಮಳೆಯಲ್ಲಿ ನಡೆಯುವುದು ನನಗಿಷ್ಟ; ಆಗ ಯಾರಿಗೂ ನನ್ನ ಕಣ್ಣೀರು ಕಾಣಿಸದು."

\"ಮನುಷ್ಯನ ನಿಜವಾದ ಸ್ವರೂಪ ಬಯಲಾಗುವುದು ಅವನು ಪಾನಮತ್ತನಾದಾಗಲೇ."

"ಈ ಕ್ರೂರ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ, ನಮ್ಮ ಕಷ್ಟಗಳು ಕೂಡಾ."

"ನಾವು ಯೋಚಿಸುವುದು ಹೆಚ್ಚು, ಗ್ರಹಿಸುವುದು ಕಮ್ಮಿ."

"ಬರಿದೆ ಮುಗುಳ್ನಕ್ಕರೆ ಸಾಕು, ಜೀವನವು ಜೀವಸಲು ಅರ್ಹ ಎಂದು ತೋರುತ್ತದೆ."

"ಸೋಲಿಗೆ ಪ್ರಾಮುಖ್ಯತೆ ಇಲ್ಲ. ಎಲ್ಲರ ಮುಂದೆ ಮೂರ್ಖರಾಗಲೂ ಧೈರ್ಯ ಬೇಕು."


"ನಿಜವಾಗಲೂ ನಗಬೇಕೆಂದರೆ ನಮ್ಮ ದುಃಖವನ್ನು ಎತ್ತಿಕೊಂಡು ಅದರೊಂದಿಗೆ ಆಟವಾಡಿದಾಗಲೇ ಸಾಧ್ಯ."

"ನನ್ನ ನೋವು ಬೇರೊಬ್ಬರ ನಗೆಗೆ ಕಾರಣವಾಗಬಹುದೇನೋ; ಆದರೆ ನನ್ನ ನಗೆ ಬೇರೊಬ್ಬರ ನೋವಿಗೆ ಎಂದೂ ಕಾರಣ ಗದಿರಲಿ."

"ಹತ್ತಿರದಿಂದ ನೋಡಿದಾಗ ಬಾಳು ದುರಂತ ದೃಶ್ಯ; ದೂರದಿಂದ ನೋಡಿದರೆ ಸುಖಾಂತ."

"ಪರಿಪೂರ್ಣ ಪ್ರೀತಿ ಎಂಬುದು ಅತ್ಯಂತ ಸುಂದರವಾದ ಸಂಕಟ; ಏಕೆಂದರೆ ಅದು ಅಭಿವ್ಯಕ್ತಿಗೆ ಮೀರಿದ್ದು."

"ಯಾವುದೇ ಕ್ರಿಯೆಯಲ್ಲಿ ತೊಡಗದ ಕಲ್ಪನೆ ನಿರರ್ಥಕ."

"ಅರ್ಥ ಯಾಕೆ ಹುಡುಕುತ್ತೀಯ? ಬದುಕು ಒಂದು ಬಯಕೆ, ಅದಕ್ಕೆ ಅರ್ಥವಿಲ್ಲ."

"ಎಲ್ಲರಂತೆ ನಾನೂ ನನಗಿಂತ ಹೆಚ್ಚಲ್ಲ, ನನಗಿಂತ ಕಮ್ಮಿಯಿಲ್ಲ ಎಂಬಂತಿರುವ ವ್ಯಕ್ತಿ.  ಎಲ್ಲರಂತೆ ನನ್ನದೂ ಅನನ್ಯವಾದ ವ್ಯಕ್ತಿತ್ವ. ನನ್ನ ಹಿಂದಿನ ತಲೆಮಾರುಗಳ ಆಶೋತ್ತರಗಳು ನನ್ನ ಬೆನ್ನಿಗಿರುವ ಚರಿತ್ರೆ.  ಈ ಚರಿತ್ರೆಯಲ್ಲಿ ಹಿಂದಿನವರ ಕನಸುಗಳಿವೆ, ಕಾಮನೆಗಳಿವೆ, ವಿಶಿಷ್ಟ ಅನುಭವಗಲಿವೆ. ಇವೆಲ್ಲವುಗಳ ಒಟ್ಟು ಮೊತ್ತ ನಾನು."

"ಹೆದರದೆ ಇದ್ದರೆ  ಜೀವನ ಒಂದು ಅಧ್ಭುತವಾದ ಅನುಭವ. ಇಂಥ ಜೀವನಕ್ಕೆ ನಿಮಗೆ ಬೇಕಾದದ್ದು ಬಹಳವೆನಿಲ್ಲ - ಸ್ವಲ್ಪ ಧೈರ್ಯ, ಸ್ವಲ್ಪ ಕಲ್ಪನೆ ಮತ್ತು ಸ್ವಲ್ಪ ದುಡ್ಡು, ಅಷ್ಟೆ."

"ಜಗತ್ತಿನಲ್ಲಿರುವ ಐಬು ಎಂದರೆ ಅದೇ - ನಾವೆಲ್ಲರೂ ನಮ್ಮನಮ್ಮನ್ನು ದ್ವೇಷಿಸುವುದೇ."

"ನಿನ್ನ ನಗ್ನ ಆತ್ಮವನ್ನು ಯಾರು ಪ್ರೀತಿಸುತ್ತಾರೋ ಅವರಿಗೆ ಮಾತ್ರ ನಿನ್ನ ನಗ್ನ ಶರೀರದ ಮೇಲೆ ಹಕ್ಕಿರಬೇಕು."

"ಅಂತ್ಯದಲ್ಲಿ ಎಲ್ಲವೂ ಬಾಯಿಗೆ ತುರುಕಿದ ಬಟ್ಟೆಯೇ."

"ಜನ ನಿಮ್ಮನ್ನು ನಿಮ್ಮ ಪಾಡಿಗೆ ಬಿಟ್ಟರೆ ಜೀವನ ಭವ್ಯವಾಗಿರುವುದರಲ್ಲಿ ಸಂಶಯವಿಲ್ಲ."

"ನಾನು ಎಂದಿದ್ದರೂ ಒಬ್ಬನೇ - ಒಬ್ಬ ನಕಲಿ. ಹೀಗಾಗಿ ನನ್ನದು ಯಾವುದೇ ರಾಜಕಾರಣಿಗಿಂತ ಎತ್ತರದ ಸ್ತರ."

"ಮಾತುಗಳು ಅಗ್ಗ. ಇಷ್ಟಾದರೂ ನಿನ್ನ ಬಾಯಲ್ಲಿ ಬರುವ ದೊಡ್ಡ ಮಾತೆಂದರೆ ಆನೆ ಅಷ್ಟೇ."

"ನಮ್ಮ ನಮ್ಮ ಹಮ್ಮುಗಳ ಬೆಳಕಿನಲ್ಲಿ ನೋಡಿದರೆ ನಾವೆಲ್ಲರೂ ಸಿಂಹಾಸನ ಕಳೆದುಕೊಂಡ ಚಕ್ರವರ್ತಿಗಳೇ."

"ಏನಾದರೂ ಹಾನಿ ಉಂಟು ಮಾಡಬೇಕೆಂಬ ಉದ್ದೇಶವಿದ್ದರೆ ಮಾತ್ರ ನಿಮಗೆ ಅಧಿಕಾರ ಬೇಕು;  ಉಳಿದದ್ದನ್ನೆಲ್ಲಾ ಪ್ರೇಮದಿಂದ ಸಾಧಿಸಬಹುದು."

"ಇಂದು ನಾವು ಯೋಚಿಸುವುದು ಹೆಚ್ಚು, ಗ್ರಹಿಸುವುದು ಕಡಿಮೆಯಾಗಿದೆ. ನಮಗೆ ಯಂತ್ರಗಳಿಗಿಂತ ಹೆಚ್ಚಾಗಿ ಬೇಕಾಗಿರುವುದು ಮನುಷ್ಯತ್ವ.  ಜಾಣ್ಮೆಗಿಂತಲೂ ಹೆಚ್ಚಾಗಿ ಬೇಕಾಗಿರುವುದು ವಿನಯ ಮತ್ತು ಕರುಣೆ.  ಈ ಗುಣಗಳಿಲ್ಲದೆ ಜೀವನವು ಉಗ್ರವಾಗಿ ಸರ್ವನಾಶವಾಗುತ್ತದೆ."

"ಯಾವುದನ್ನು ವಿವರಿಸುವ ಅಗತ್ಯವಿದೆಯೋ ಅಂತಹ ಚೆಲುವಿನ ವಸ್ತುವಿನ ಕುರಿತು ನನಗೆ ಅಷ್ಟೇನೂ ಸಹನೆಯಿಲ್ಲ. ಬೇರೊಬ್ಬರು ಅದನ್ನು ಕುರಿತು ಅರ್ಥವಿಶ್ಲೇಷಣೆ ಮಾಡಬೇಕಾದ ಅನಿವಾರ್ಯವಿದ್ದಲ್ಲಿ ಆ ವಸ್ತುವಿನ ಉದ್ದೇಶ ಪೂರ್ಣವಾಗಿದೆಯೇ ಎಂಬುದನ್ನು ನಾನು ಪ್ರಶ್ನಿಸುತ್ತೇನೆ."


(c) C.P. Ravikumar, 2014

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)