ಉನ್ಮಾದ




ಉನ್ಮಾದ (ಹಿಸ್ಟೀರಿಯಾ)


ಕವಿತೆ ಓದುವ ಮುನ್ನ 
ಟಿ. ಎಸ್. ಈಲಿಯಟ್ ಕನ್ನಡಕ್ಕೆ ಮುಖ್ಯನಾದ ಕವಿ; ಏಕೆಂದರೆ ಕನ್ನಡದ ನವ್ಯ ಕವಿಗಳು ಅವನ ಕಾವ್ಯದಿಂದ ಪ್ರಭಾವಿತರಾದವರು. ಪ್ರಸ್ತುತ ಕವಿತೆ "ಹಿಸ್ಟೀರಿಯಾ" ಎಂಬ ಅವನ ಮೂಲ ಕವಿತೆಯ ಅನುವಾದ.  ಇಲ್ಲಿ ಒಂದು ಸಂದರ್ಭದ ವಿವರಣೆ ಇದೆ. ಅದರ ಹಿನ್ನೆಲೆ ಏನು ಮೊದಲಾದ ವಿವರಗಳನ್ನು ಕವಿ ನಮಗೆ ನೀಡುವುದಿಲ್ಲ. ಒಬ್ಬ ಯುವಕ ಮತ್ತು ಅವನ ಹೆಣ್ಣು ಸಂಗಾತಿ ಇಬ್ಬರೂ ಮಧ್ಯಾಹ್ನದ ಊಟಕ್ಕೆ ಯಾವುದೋ ರೆಸ್ತರಾಂಗೆ ಹೋಗಿದ್ದಾರೆ. ಊಟದ ನಂತರ ಚಹಾ ಬರಲು ಕಾಯುತ್ತಿದ್ದಾರೆ. ಆಗ ಯಾವುದೋ ಕಾರಣಕ್ಕಾಗಿ ಹೆಣ್ಣು ಸಂಗಾತಿ ನಗಲು ಪ್ರಾರಂಭಿಸುತ್ತಾಳೆ. ಅದೊಂದು ಉನ್ಮಾದದ ನಗೆ. ಕವಿತೆಯಲ್ಲಿ ಈ ನಗೆಯಿಂದ ಯುವಕ ಸಂಗಾತಿಯ ಮೇಲೆ ಯಾವ ಪರಿಣಾಮ ಉಂಟಾಯಿತು ಎಂಬ ವಿವರಗಳು ಬರುತ್ತವೆ.  ಆ ಯುವತಿ ಯಾಕೆ ನಕ್ಕಳು? ಅವಳ ನಗೆಯ ಹಿಂದೆ ಏನಾದರೂ ದುಃಖ ಅಡಗಿದೆಯೇ? ಅವರಿಬ್ಬರ ನಡುವೆ ಇದ್ದ ಸಂಬಂಧವೇನು? ಅವರ ನಡುವೆ ನಡೆದ ಸಂಭಾಷಣೆ ಏನು? ಇದ್ದಕ್ಕಿದ್ದ ಹಾಗೆ ಅವಳ ಹಾಗೆ ನಗಲು ಏನು ಕಾರಣ? ಒಂದು ವಿಲಕ್ಷಣವಾದ ರೀತಿಯಿಂದ ಕವಿತೆ ನಮ್ಮನ್ನು ಕಾಡುತ್ತದೆ.  ಇಂಥ ಮುಜುಗರದ ಸಂದರ್ಭಗಳನ್ನು ನಾವೂ ಯಾವಾಗಲಾದರೂ ಅನುಭವಿಸಿರುತ್ತೇವೆ; ಕವಿ ನಮ್ಮನ್ನು ಅಂತಹ ಅನುಭವ ಪ್ರಪಂಚಕ್ಕೆ ಹೇಗೆ ಕರೆದೊಯ್ಯುತ್ತಾನೆ! 


ಮೂಲ ಇಂಗ್ಲಿಷ್ ಕವಿತೆ: ಟಿ. ಎಸ್. ಎಲಿಯಟ್ 
ಕನ್ನಡ ಭಾಷಾಂತರ: ಸಿ. ಪಿ. ರವಿಕುಮಾರ್ 

ವಳು ನಗುತ್ತಿದ್ದಾಗ ಆ ನಗುವಿನಲ್ಲಿ 
ನಾನು ತೊಡಗಿಕೊಳ್ಳುತ್ತಿದ್ದೇನೆ ಎಂಬ ಅರಿವು 
ಅವಳ ಹಲ್ಲುಗಳು  ಕವಾಯತು ಮಾಡುವ 
ಹಠಾತ್ ತಾರೆಗಳಾದಾಗ ಮಾಯವಾಯಿತು. 
ಅದರ ಸಣ್ಣ ತೇಕುಗಳಲ್ಲಿ ನಾನು ಜಾರಿದೆ,
ಮಧ್ಯೆ ಮಧ್ಯೆ ಒಂದೆರಡು ಕ್ಷಣಗಳ ಬಿಡುವಿನಲ್ಲಿ ಉಸಿರಾಡಿದೆ,
ಕೊನೆಗೆ ಅವಳ ಗಂಟಲಿನ ಕತ್ತಲು ಗವಿಯಲ್ಲಿ 
ಕಳೆದು ಹೋಗಿ ಕಾಣದ ಸ್ನಾಯುಗಳ ಅದುರಾಟಕ್ಕೆ 
ಘಾಸಿಗೊಂಡೆ. ಒಬ್ಬ ವಯಸ್ಸಾದ ವೇಟರ್ 
ತುಕ್ಕಿನಿಂದ ಹಸಿರಾದ ಮೇಜಿನ ಮೇಲೆ 
ನಡುಗುವ ಕೈಗಳಿಂದ ಹರಡುತ್ತಾ 
ನಸುಗೆಂಪು ಮತ್ತು ಬಿಳಿ ಪಟ್ಟೆಪಟ್ಟೆ ಹೊದಿಕೆಯನ್ನು 
 "ಶ್ರೀಮತಿ ಮತ್ತು ಶ್ರೀಮಾನ್ ಅವರು 
ತೋಟದಲ್ಲಿ ಚಹಾ ತೊಗೊಳ್ಳುವರೆ,
ಶ್ರೀಮತಿ ಮತ್ತು ಶ್ರೀಮಾನ್ ಅವರು 
ತೋಟದಲ್ಲಿ  ಚಹಾ ತೊಗೊಳ್ಳುವರೆ ..." ಎಂದು ಬಡಬಡಿಸುತ್ತಿದ್ದ. 
ಅವಳ  ಸ್ತನಗಳು ನಡುಗುವುದು ನಿಲ್ಲಿಸಿದರೆ
ಛಿದ್ರವಾದ ಮಧ್ಯಾಹ್ನದ ಚೂರುಪಾರನ್ನು 
ಒಗ್ಗೂಡಿಸಬಹುದು ಎನ್ನಿಸಿ ನಾನು ಈ ನಿಮಿತ್ತ 
ನಯನಾಜೂಕಿನಿಂದ  ತತ್ಪರನಾದೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)