ರಾಮರತ್ನವೆಂಬ ನಿಕ್ಷೇಪ

ಮೂಲ ಭೋಜಪುರಿ ಗೀತೆ - ಮೀರಾ ಬಾಯಿ 
ಕನ್ನಡ ಅನುವಾದ - ಸಿ. ಪಿ. ರವಿಕುಮಾರ್ 
ಈ ಮೀರಾ-ಭಜನೆಯನ್ನು ನೀವೆಲ್ಲರೂ ಕೇಳಿರುತ್ತೀರಿ. "ಪಾಯೋ ಜೀ ಮೈನೆ ರಾಮ್ ರತನ್ ಧನ್ ಪಾಯೋ!" ... ಅನೇಕಾನೇಕ ಗಾಯಕ/ಗಾಯಕಿಯರು ಹಾಡಿರುವ ಭಜನೆ. ಯೂ ಟ್ಯೂಬಿನಲ್ಲಿ ಹುಡುಕಿದರೆ ರೆಕಾರ್ಡಿಂಗ್ ಸಿಕ್ಕುತ್ತದೆ, ಕೇಳಿ. ಈ ಭಜನೆಯನ್ನು ಕುರಿತು ಯೋಚಿಸುತ್ತಿದ್ದೆ. ಜನರಿಗೆ ಎಲ್ಲಾ ಕಾಲದಲ್ಲೂ ನಾಳೆಯ ಚಿಂತೆ ಇದ್ದೇ ಇತ್ತೆಂದು ತೋರುತ್ತದೆ. ಈಗಂತೂ ಕೆಲವರು ಇನ್ಷೂರೆನ್ಸ್, ಇನ್ವೆಸ್ಟ್ ಮೆಂಟ್, ರಿಯಲ್ ಎಸ್ಟೇಟ್ ಇವನ್ನು ಬಿಟ್ಟರೆ ಬೇರೆ ಮಾತೇ ಆಡುವುದಿಲ್ಲ ಎನ್ನುವುದನ್ನು ನೀವೂ ಗಮನಿಸಿರುತ್ತೀರಿ. ಈ ಕವಿತೆಯನ್ನು ರಚಿಸಿದಾಗ ಮೀರಾಬಾಯಿಗೂ ಭವಿಷ್ಯದ ಯೋಚನೆಯಾಗಿರಬಹುದು - "ನಾಳೆಯ ಗತಿ ಏನು?" ಎಂದು ಯಾರಾದರೂ ಅವಳನ್ನು ಚುಚ್ಚಿರಬಹುದು. ಅವರಿಗೆ ಉತ್ತರದ ರೂಪದಲ್ಲಿ ಮೀರಾಬಾಯಿ ಈ ಕವಿತೆ ಬರೆದಿದ್ದಾಳೆ. "ನನ್ನಲ್ಲಿ ಅಪಾರವಾದ ಧನವಿದೆ -ರಾಮನಾಮವೆಂಬ ಧನ!" ಎಂದು ಅವಳು ತನ್ನ ಶ್ರೀಮಂತ್ರಿಕೆಯನ್ನು ಮೆರೆಯುತ್ತಿದ್ದಾಳೆ. "ಭವಸಾಗರವನ್ನು ಹೇಗಪ್ಪಾ ದಾಟುವುದು?" ಎಂದು ಹಲುಬುವವರಿಗೆ ಅವಳ ಉತ್ತರ - "ಸತ್ಯವೆಂಬ ದೋಣಿ ಇದೆ, ಸದ್ಗುರುಗಳೇ ಅಂಬಿಗರಾಗಿದ್ದಾರೆ, ದಾಟಿಸುತ್ತಾರೆ, ಸಂತೋಷವಾಗಿರು!" ಈಗ ಅನುವಾದವನ್ನು ಓದಿ.

ಸಿಕ್ಕಿಬಿಟ್ಟಿತು ನನಗೆ ರಾಮರತ್ನವೆಂಬ ನಿಕ್ಷೇಪ ಅಪಾರ -
ದಾನವಿತ್ತರು ಸದ್ಗುರುಗಳು, ಮರೆಯಲಾರೆ ಉಪಕಾರ!

ಜನ್ಮಜನ್ಮಗಳ ಬಡ್ಡಿ ದೊರಕಿತು ಈ ನಿಧಿಗೆ,
ಕಳೆದುಹೋದರೇನು ಜಗದ ಎಲ್ಲ ಆಧಾರ!

ವ್ಯಯಿಸಿದರೆ ಕ್ಷೀಣಿಸದು, ಕಳ್ಳರಿಗೆ ಕಾಣಿಸದು,
ದಿನ-ದಿನೇ ವೃದ್ಧಿಸುವ ಧನಪ್ರಕಾರ!

ಸತ್ಯವೆಂಬ ನಾವೆಯಲ್ಲಿ ಸದ್ಗುರು ಅಂಬಿಗನಾಗಿ
ದಾಟಿಸುವನು ನನ್ನನ್ನು ಭವಸಾಗರ!

ಹರ್ಷ ಉತ್ಕರ್ಷದಲ್ಲಿ ಹಾಡುವಳು ಮೀರಾ
ಅವಳ ಏಕೈಕ ಪ್ರಭು ಗಿರಿಧರ ನಾಗರ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)