ಮಕ್ಕಳಿಗೊಂದು ಬೇಸಗೆ ತರಬೇತಿ ಶಿಬಿರ

 ಸಿ  ಪಿ ರವಿಕುಮಾರ್

ಬೇಸಗೆ ರಜೆಯಲ್ಲಿ ಈ ವರ್ಷ ಮಕ್ಕಳಿಗಾಗಿ ಒಂದು ವಿಶೇಷ ಕಾರ್ಯಕ್ರಮವನ್ನು “ಟೆಕ್ಸಾಸ್ ಇನ್ಸ್ ಟ್ರುಮೆಂಟ್ಸ್” ಸಂಸ್ಥೆ ಆಯೋಜಿಸಿತ್ತು.  1985ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಗೊಂಡ ಸಂಸ್ಥೆಯ ಭಾರತೀಯ ಕಚೇರಿಗೆ ಮೂವತ್ತು ವರ್ಷಗಳು ತುಂಬಿರುವ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿತ್ತು. ಏಪ್ರಿಲ್ 6-7 ನಡೆದ ಈ ಬೇಸಗೆ ಶಿಬಿರದಲ್ಲಿ ಸಂಸ್ಥೆಯ ಆಧಾರ ಸೇವೆಗಳನ್ನು ಒದಗಿಸುವ ಉದ್ಯೋಗಿಗಳ ಮಕ್ಕಳಿಗಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ 11ರಿಂದ 18 ವರ್ಷದ ಮೂವತ್ತೈದು ಮಕ್ಕಳು ಪಾಲ್ಗೊಂಡರು.  “ಡಿಜಿಟಲ್ ಡಿವೈಡ್” ಎಂಬುದು ಇಂದಿನ ಬಹುದೊಡ್ಡ ಸಮಸ್ಯೆ. ಮನೆಗಳಲ್ಲಿ ಕಂಪ್ಯೂಟರ್  ಮತ್ತು ಇಂಟರ್ ನೆಟ್ ಉಳ್ಳ ಮಕ್ಕಳಿಗೆ ಜ್ಞಾನದ ದೊಡ್ಡ ಭಂಡಾರವೇ ಲಭ್ಯವಾಗುತ್ತದೆ.  ಇದಕ್ಕೆ ವ್ಯತಿರಿಕ್ತವಾಗಿ ಕೆಲವು ಮಕ್ಕಳಿಗೆ ಶಾಲೆಗಳಲ್ಲೂ ಕಂಪ್ಯೂಟರ್ ಮತ್ತು ಇಂಟರ್ ನೆಟ್ ಬಳಕೆ ದುರ್ಲಭವಾಗಿರುತ್ತದೆ.  ಎರಡು ದಿನಗಳ ಕಾರ್ಯಕ್ರಮದಲ್ಲಿ ಶಾಲಾಮಕ್ಕಳಿಗೆ ಕಂಪ್ಯೂಟರ್ ತರಬೇತಿ ನೀಡಲಾಯಿತು.  

ಮೊದಲ ದಿವಸ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮದ ಮೂಲಕ ಕಂಪ್ಯೂಟರ್ ಕುರಿತು ಮೂಲಭೂತ ವಿಷಯಗಳನ್ನು ಹೇಳಿಕೊಡಲಾಯಿತು.  ಪ್ರಶ್ನೆಗಳನ್ನು ಉತ್ತರಿಸಲು ಉತ್ತೇಜನ ನೀಡಿ ಎಲ್ಲರ ಮುಂದೆ ಆತ್ಮವಿಶ್ವಾಸದಿಂದ ಮಾತಾಡುವುದರ ಮೇಲೆ ಒತ್ತು ನೀಡಲಾಯಿತು. ಕಂಪ್ಯೂಟರ್ ಬಳಸಿ ಡ್ರಾಯಿಂಗ್ ತಯಾರಿಕೆ, ಪ್ರಾದರ್ಶಿಕೆಗಳ ತಯಾರಿಕೆ, ಲೇಖನಗಳನ್ನು ಟೈಪ್ ಮಾಡುವುದು, ಸ್ಪ್ರೆಡ್ ಶೀಟ್ ಬಳಕೆ, ಇಂಟರ್ ನೆಟ್ ಬಳಕೆಗಳನ್ನು ಹೇಳಿಕೊಡಲಾಯಿತು. ಪ್ರತಿಯೊಬ್ಬ ಮಗುವಿಗೂ ಪ್ರತ್ಯೇಕ ಕಂಪ್ಯೂಟರ್ ಬಳಸಲು ಕೊಟ್ಟಿದ್ದರಿಂದ ಎಲ್ಲರೂ ಆತ್ಮವಿಶ್ವಾಸದಿಂದ ಕಲಿಯಲು ಅನುಕೂಲವಾಯಿತು.  ಎಲೆಕ್ಟ್ರಾನಿಕ್ ಉಪಕರಣಗಳ ಪ್ರದರ್ಶನ ಮತ್ತು ಅವುಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ಕುರಿತು ಮಾಹಿತಿ ನೀಡಲಾಯಿತು.  ಎರಡು ದಿನಗಳ ತಮ್ಮ ಅನುಭವ ಕುರಿತು ಮಕ್ಕಳಿಗೆ ವರ್ಣಚಿತ್ರ ಬರೆಯುವ ಸ್ಪರ್ಧೆ ಏರ್ಪಡಿಸಲಾಯಿತು. 

ಪಾಠಗಳ ನಡುವೆ ಆಟಗಳೂ ಇದ್ದವು.  ಬೋಲಿಂಗ್ ಆಟದ ಒಂದು ಸರಳ ಅವತರಣಿಕೆ ಹೀಗಿತ್ತು. ಕಾಗದದಿಂದ ಮಾಡಿದ ಹದಿನೈದು ಲೋಟಗಳನ್ನು 5 + 4 + 3 + 2 + 1 ಮಾದರಿಯಲ್ಲಿ ಒಂದರ ಮೇಲೊಂದು ಪೇರಿಸಿಡುವುದು.  ಮಗು ಸ್ವಲ್ಪ ದೂರದಲ್ಲಿ ನಿಂತು ರಬ್ಬರ್ ಬ್ಯಾಂಡ್ ಎಳೆದು ಬಿಟ್ಟು ಈ ಲೋಟಗಳನ್ನು ಉರುಳಿಸಬೇಕು. ಒಂದು ನಿಮಿಷದ ಗಡುವಿನಲ್ಲಿ ಎಷ್ಟು ಪ್ರಯತ್ನಗಳನ್ನು ಬೇಕಾದರೂ ಮಾಡಬಹುದು! ಪಾಠ ಮಾಡುವ ಕೋಣೆಯಲ್ಲೇ ಆಡಬಹುದಾದ ಇಂಥ ಸುಲಭವಾದ ಆಟಗಳು ಮಕ್ಕಳಲ್ಲಿ ಉತ್ಸಾಹ ಮೂಡಿಸಿದವು. ಬೈಟೂ ಕಾಫಿ ಫಿಲ್ಮ್ಸ್ ಸಂಸ್ಥೆ ತಯಾರಿಸಿದ ಕಿರುಚಿತ್ರಗಳ ಪ್ರದರ್ಶನ ಮತ್ತು ಅವುಗಳನ್ನು ಕುರಿತು ಚರ್ಚೆ ಕೂಡಾ ಮಕ್ಕಳಿಗೆ ಆಪ್ಯಾಯವಾಯಿತು. “ಆಸರೆ” ಎಂಬ ಒಂದು ಚಿತ್ರದಲ್ಲಿ ತನ್ನ ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟ ಒಬ್ಬ ಯುವಕ ಅವಳನ್ನು ನೋಡಲು ಹೋಗಲು ನಿರಾಕರಿಸಿದರೂ ಫೇಸ್ ಬುಕ್ ನಲ್ಲಿ “ಹ್ಯಾಪಿ ಮದರ್ಸ್ ಡೇ” ಎಂಬ ಸಂದೇಶ ಕಳಿಸುತ್ತಾನೆ! ಅವನನ್ನು ಕಾಣದ ಕೊರಗಿನಲ್ಲೇ ಅವನ ತಾಯಿ ಸತ್ತಾಗ ಅವನಿಗೆ ಆಘಾತವಾಗುತ್ತದೆ. ಈ ಚಿತ್ರ ನೋಡಿದ ಮಕ್ಕಳಲ್ಲಿ ಹಲವರು ತಮ್ಮ ತಾಯಿಯನ್ನು ಇನ್ನು ಮುಂದೆ ಗೋಳು ಹೊಯ್ದು ಕೊಳ್ಳುವುದಿಲ್ಲ ಎಂದು ಪ್ರಮಾಣ ಮಾಡಿದರು!

ಕಂಪನಿಯ ನಿರ್ದೇಶಕರಾದ ಸಂತೋಷ್ ಕುಮಾರ್ ಮಕ್ಕಳಿಗೆ ಬಹುಮಾನ ಮತ್ತು ಪ್ರಶಸ್ತಿಪತ್ರ ವಿತರಣೆ ಮಾಡಿದರು. “ನಾನು ಕಂಪ್ಯೂಟರ್ ಬಳಸಲು ಪ್ರಾರಂಭಿಸಿದ್ದು ನನಗೆ ಹದಿನೆಂಟು ವರ್ಷ ತುಂಬಿದಾಗ, ಇಂಜಿನಿಯರಿಂಗ್ ಕಾಲೇಜ್ ಸೇರಿದ ಮೇಲೆ. ನೀವು ಅದನ್ನು ಕಿರಿಯ ವಯಸ್ಸಿನಲ್ಲೇ ಮಾಡುತ್ತಿರುವುದು ಸಂತೋಷ. ಇಂದು ತಾರತಮ್ಯಗಳು ಮಾಯವಾಗುತ್ತಿವೆ.  ಎಲ್ಲಾ ದೇಶದ, ಎಲ್ಲಾ ಹಿನ್ನೆಲೆಯ ಜನರಿಗೂ ಆಡಲು ಒಂದು ಸಮತಟ್ಟಾದ ಕ್ರೀಡಾಸ್ಥಳವನ್ನು ಇಂದಿನ ತಂತ್ರಜ್ಞಾನಗಳು ಒದಗಿಸುತ್ತವೆ” ಎಂದು ಅವರು ಅಭಿಪ್ರಾಯಪಟ್ಟರು.

ಮಕ್ಕಳು ತಮ್ಮ ಅನುಭವಗಳನ್ನು ಹಂಚಿಕೊಂಡರು. “ನಿಜ ಹೇಳಬೇಕೆಂದರೆ ಇಂಥ ಕಾರ್ಯಕ್ರಮಕ್ಕೆ ಬರಲು ನನಗೆ ಇಷ್ಟವಿರಲಿಲ್ಲ. ಇಲ್ಲಿ ಕೆಲಸ ಮಾಡುವ ನಮ್ಮ ತಾಯಿಯ ಒತ್ತಾಯದ ಮೇರೆಗೆ ಬಂದೆ. ಆದರೆ ತುಂಬಾ ತೃಪ್ತಿಯಿಂದ ಹಿಂತಿರುಗುತ್ತಿದ್ದೇನೆ,” ಎಂದು ಒಬ್ಬ ವಿದ್ಯಾರ್ಥಿನಿ ನುಡಿದಳು. “ಸಾಫ್ಟ್ ವೇರ್ ಕುರಿತು ನಾನು ಕೇವಲ ಕೇಳಿ ತಿಳಿದಿದ್ದೆ. ಈಗ ನಾನೇ ಬಳಸಿದ್ದರಿಂದ ನನಗೆ ಅವುಗಳನ್ನು ಕುರಿತು ಅಳುಕು ಮಾಯವಾಗಿದೆ, ಇನ್ನೂ ಕಲಿಯುವ ಆಸೆ ಬಂದಿದೆ” ಎಂದು ಇನ್ನೊಬ್ಬ ವಿದ್ಯಾರ್ಥಿ ಆತ್ಮವಿಶ್ವಾಸದಿಂದ ಹೇಳಿದ.  ಕಾರ್ಯಕ್ರಮ ಆಯೋಜಿಸಿದ ಎಲ್ಲರಿಗೂ ಮಕ್ಕಳ ಉತ್ಸಾಹದಿಂದ ಅಪೂರ್ವವಾದ ತೃಪ್ತಿಯುಂಟಾಯಿತು.




ಚಿತ್ರ: ಬೋಲಿಂಗ್ ಮಾಡೋದಕ್ಕೆ ಮಾಲ್ ಯಾಕೆ ಬೇಕು? ಪೇಪರ್ ಕಪ್ಸ್ ಸಾಕು!


ಚಿತ್ರ : ಕಂಪ್ಯೂಟರ್ ಕಲಿಕೆಯಲ್ಲಿ ಮಗ್ನರಾದ ಮಕ್ಕಳು



ಚಿತ್ರ: ಸರಳ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಅವುಗಳನ್ನು ಕುರಿತು ಮಾಹಿತಿ ಪಡೆದ ಮಕ್ಕಳು 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)