ಎಸ್. ಕೃಷ್ಣಮೂರ್ತಿ ಅವರ ನೆನಪು



ಶ್ರೀ ಎಸ್. ಕೃಷ್ಣಮೂರ್ತಿ ಅವರ ನಿಧನದ ಸುದ್ದಿ ಬಂದಿದೆ. ನನ್ನ ತಂದೆಗೆ ಇವರು ಆಪ್ತ ಮಿತ್ರರಾಗಿದ್ದರು. ಶ್ರೀ ಕೃಷ್ಣಮೂರ್ತಿ ಆಲ್ ಇಂಡಿಯಾ ರೇಡಿಯೋ ಬೆಂಗಳೂರಿಗೆ ನಿರ್ದೇಶಕರಾಗಿದ್ದರು. ಕವಿ ಕೆ. ಎಸ್. ನರಸಿಂಹಸ್ವಾಮಿ ಏಜೀಸ್ ಆಫೀಸಿನಲ್ಲಿ ಗುಮಾಸ್ತರಾಗಿದ್ದರು. ಇವರೆಲ್ಲರೂ ಒಂದೇ ಬಸ್ಸಿನಲ್ಲಿ ತಮ್ಮ ಕಚೇರಿಗಳಿಗೆ ಹೋಗಿಬರುತ್ತಿದ್ದರು. ಯಾವ ತಾರತಮ್ಯವೂ ಆಗ ಇರಲಿಲ್ಲ. ನಮ್ಮ ತಂದೆಯವರಿದ್ದಾಗ ಮನೆಗೆ ಆಗಾಗ ಬರುತ್ತಿದ್ದರು. ನಮ್ಮ ತಾಯಿ ಕೊಟ್ಟ ಕಾಫಿಯನ್ನು ಹೊಗಳುತ್ತಿದ್ದರು.

ಶ್ರೀ ಕೃಷ್ಣಮೂರ್ತಿ ಅವರು ಪ್ರಸಿದ್ಧ ಸಂಗೀತ ವಿದ್ವಾಂಸ ವಾಸುದೇವಾಚಾರ್ಯ ಅವರ ಮೊಮ್ಮಗ. ತಮ್ಮ ತಾತನ ಮತ್ತು ಅವರ ಸಹ-ಸಂಗೀತಜ್ಞರನ್ನು ಕುರಿತು ನೆನಪುಗಳನ್ನು ಅನೇಕ ಪುಸ್ತಕಗಳಲ್ಲಿ ದಾಖಲಿಸಿದ್ದಾರೆ. ಇವು ತುಂಬಾ ಸ್ವಾರಸ್ಯವಾಗಿವೆ. ಸಂಗೀತ ಗೊತ್ತಿಲ್ಲದ ನಾನೂ ಕೂಡಾ ಇವುಗಳನ್ನು ಆಸ್ವಾದಿಸಿದ್ದೇನೆ. ಉದಾಹರಣೆಗೆ ವಾಸುದೇವಾಚಾರ್ಯ ಅವರು ಸಂಗೀತ ಕಲಿಯಲು ತಮಿಳುನಾಡಿಗೆ ಹೋದಾಗ ಅಲ್ಲಿ ಅವರ ಗುರುಗಳು ಮತ್ತು ಅವರ ನೆರೆಯವರೇ ಆದ ಇನ್ನೊಬ್ಬ ಸಂಗೀತ ವಿದ್ವಾಂಸರ ನಡುವೆ ಪೈಪೋಟಿಯ ವಿಷಯ ಓದಿದ ನೆನಪು ಇನ್ನೂ ಹಸಿರಾಗಿದೆ. ಅನೇಕ ಸಂಗೀತ ದಿಗ್ಗಜರ ನಡುವೆ ಬೆಳೆದ ಶ್ರೀ ಎಸ್. ಕೃಷ್ಣಮೂರ್ತಿ ಅವರನ್ನೆಲ್ಲಾ ಬಹಳ ಹತ್ತಿರದಿಂದ ಕಂಡವರು. ಅವರ ಸಂಗೀತದ ಉಪಾಸನೆಯ ಬಗ್ಗೆ ಬಹಳ ಸ್ವಾರಸ್ಯವಾಗಿ ಬರೆದಿದ್ದಾರೆ. ಅವರು ಕೂಡಾ ಸಂಗೀತದಲ್ಲಿ ಉತ್ತಮ ಸಾಧನೆ ಮಾಡಿದ್ದರು. ಸುಬ್ಬಾಶಾಸ್ತ್ರಿ ಚಿತ್ರದ "ಕೃಷ್ಣನ ಕೊರಳಿನ ಕರೆ" ಎಂಬ ಗೀತೆ ನೀವು ಕೇಳಿರಬಹುದು. ಈ ಗೀತೆಯನ್ನು ಬರೆದವರು ಕವಿ ಪು.ತಿ. ನರಸಿಂಹಾಚಾರ್ಯ. ಅದಕ್ಕೆ ಸಂಗೀತ ನಿರ್ದೇಶನ ಮಾಡಿದವರು ಕೃಷ್ಣಮೂರ್ತಿ ಮತ್ತು ದೊರೆಸ್ವಾಮಿ ಅಯ್ಯಂಗಾರ್ ಅವರು. ಈ ಗೀತೆಯನ್ನು ಎಷ್ಟು ಕೇಳಿದರೂ ಮತ್ತೆ ಕೇಳಬೇಕು ಅನ್ನಿಸುತ್ತದೆ.


ಶ್ರೀ ಎಸ್. ಕೃಷ್ಣಮೂರ್ತಿಯವರ ಶ್ರೀಮತಿ ದೇವಕಿ ಮೂರ್ತಿ ಅವರು ತಮ್ಮ "ಉಪಾಸನೆ" ಕಾದಂಬರಿಯಿಂದ ಪ್ರಸಿದ್ಧರಾದರು. ಈ ಕಾದಂಬರಿಯನ್ನು ಪುಟ್ಟಣ್ಣ ಕಣಗಾಲ್ ಚಿತ್ರ ಮಾಡಿದರು.

ನಮ್ಮ ಮನೆಗೆ ಬಂದಾಗ ನನ್ನನ್ನು ತುಂಬಾ ಅಭಿಮಾನದಿಂದ ಮಾತಾಡಿಸುತ್ತಿದ್ದರು. ಆಗಿನ್ನೂ ಹದಿವಯಸ್ಸಿನವನಾದ ನನಗೆ "ನೀವು" ಎಂದು ಸಂಬೋಧಿಸುತ್ತಿದ್ದರು. ಜಯನಗರದಲ್ಲಿ ಅವರ ಮನೆಯ ಗೃಹಪ್ರವೇಶ ಮಾಡಿದಾಗ ನಾನು ಹೋಗಿದ್ದು ನೆನಪಿದೆ. ಅದಾದ ನಂತರ ಕೂಡಾ ಒಮ್ಮೆ ಅವರ ಮನೆಗೆ ಹೋದಾಗ ಕಾದಂಬರಿಕಾರ್ತಿಯವರು ಮಾಡಿಕೊಟ್ಟ ಕಾಫಿ ಸವಿದಿದ್ದೇನೆ.

ಬಹಳ ಈಚೆಗೆ ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದ ಲೇಖಕಿ ಎಚ್. ಎಸ್. ಪಾರ್ವತಿ ಅವರು ನಿಧನರಾದ ಸುದ್ದಿ ಬಂದಿತ್ತು. ಈಗ ಶ್ರೀ ಕೃಷ್ಣಮೂರ್ತಿ ಅವರ ನಿಧನದ ಸುದ್ದಿ ಬಂದಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)