ಆಚಾರವಿಲ್ಲದ ನಾಲಿಗೆ (ಹರಟೆ)
////////////////////////// ಸಿ.ಪಿ. ರವಿಕುಮಾರ್ /////////////////////////// ಇಂದು "ಆಚಾರ"ದ ಬಗ್ಗೆ ಮನಸ್ಸು ಹೊರಳಿದ್ದು ಒಬ್ಬ ಮಿತ್ರರು "ಖಾರದ ಹೂರಣ" ಇಟ್ಟು ಹೋಳಿಗೆ ಮಾಡಬಹುದೇ ಎಂದು ಕೇಳಿದಾಗ. ಅಯ್ಯೋ ಆಚಾರವಿಲ್ಲದ ನಾಲಿಗೆಯೇ! ಸಿಹಿ ಹೋಳಿಗೆಯನ್ನು ಕೊಟ್ಟರೂ ಮೇಲೆ ತುಪ್ಪಹಾಲುಗಳನ್ನು ಸುರಿದರೂ ನಿನಗೆ ತೃಪ್ತಿಯಿಲ್ಲವೇ! ಬೇರೇನನ್ನೋ ಬಯಸುತ್ತಿರುವೆಯಲ್ಲ! ಅಂದಹಾಗೆ ಆಚಾರ ಮತ್ತು ನಾಲಿಗೆಗಳನ್ನು ಒಂದೇ ವಾಕ್ಯದಲ್ಲಿ ಪ್ರಯೋಗ ಮಾಡಿದ್ದು ಪುರಂದರದಾಸರೇ ಇರಬಹುದು. ಆಚಾರ ಎಂದರೆ ಅವರ ಅರ್ಥದಲ್ಲಿ ಸದಾಚಾರವೇ ಆಗಿರಬೇಕು. ಏಕೆಂದರೆ ನಾಲಗೆಗೆ ಅನೇಕ ದುರಾಚಾರಗಳೂ ಇವೆ. ಬಿಸಿಜಾಮೂನಿನ ಮೇಲೆ ತಣ್ಣನೆಯ ಐಸ್ ಕ್ರೀಂ, ಕಾರದ ಚಕ್ಕುಲಿಗೆ ಮೊಸರು, ಸಿಹಿ ಮೊಸರನ್ನಕ್ಕೆ ಉಪ್ಪಿನಕಾಯಿ, ಸಿಹಿ ಒಬ್ಬಟ್ಟಿನ ಮೇಲೂ ಉಪ್ಪಿನಕಾಯಿ ... ಹೀಗೆ ನಂಜನ್ನು ಬೆರೆಸಿ ತಿನ್ನುವುದಕ್ಕೆ "ನಂಜಿಕೊಂಡು ತಿನ್ನು" ಎಂಬ ಪದಪುಂಜವನ್ನೇ ಸೃಷ್ಟಿಸಿ ಈ ಕ್ರಿಯೆಯನ್ನು ನ್ಯಾಯಸಮ್ಮತವನ್ನಾಗಿ ಮಾಡಿಬಿಟ್ಟಿದ್ದಾರೆ ನಮ್ಮವರು! "ಉಪ್ಪಿಲ್ಲದ ಊಟ, ತಾಯಿಲ್ಲದ ತವರು" - ಇದೇನೋ ಸರಿ, ಒಪ್ಪಿಕೊಳ್ಳೋಣ. ಆದರೆ ಉಪ್ಪಿನಕಾಯಿಲ್ಲದ ಊಟವನ್ನೇ ಒಲ್ಲದವರೂ ಇದ್ದಾರೆ. ಶ್! ನಮ್ಮ ಮನೆಯಲ್ಲೇ ಒಬ್ಬರು ಇದ್ದಾರೆ. ನಮ್ಮ ಮನೆಯಲ್ಲಿ ಮಾವಿನಕಾಯಿ ಕಾಲದಲ್ಲಿ ಹಾಕಿದ ಅಷ್ಟೂ ಉಪ್ಪಿನಕಾಯಿಯನ್ನು ಅವರೊಬ್ಬರೇ ಖಾಲಿ ಮಾಡುತ್ತಾರೆ. ಸಾಲದೆಂಬಂತೆ...