ನಮ್ಮಂಥ ಹೊಸಬರಿಗೆ ಏನಾದರೂ ಸಲಹೆ
ಮೂಲ : ರಾನ್ ಕಾರ್ಜ್ (ಅಮೆರಿಕಾ ಸಂಸ್ಥಾನ)
ನಿಮ್ಮ ಮೇಜಿನ ಮೇಲೆ ಕರ್ತವ್ಯಕ್ಕಾಗಿ ಕುಳಿತುಕೊಳ್ಳುವುದನ್ನು ಬಿಡಿ.
ನಿಮ್ಮ ಮನೆ ಬಿಟ್ಟು ಹೊರಡಿ. ಹೊರಗಿನ ಜಗತ್ತಿಗೆ ಕಾಲಿಡಿ.
ಬೇಕಾದರೆ ಕೈಯಲ್ಲಿ ಒಂದು ನೋಟ್ ಬುಕ್ ಇರಲಿ, ಆದರೆ
ಅಗ್ಗದ ಬೆಲೆಯದಾಗಿರಲಿ, ಪುಟಗಳು ನೀರುನೀರಾದ ಚಹಾ ಬಣ್ಣದ್ದು,
ಮೇಲಿನ ಹೊದಿಕೆಯ ಮೇಲೆ ಬೆಕ್ಕಿನಮರಿ ಅಥವಾ ವ್ಯೋಮನೌಕೆ ಇರುವವಂಥದ್ದು.
ಮೂರಕ್ಕಿಂತಲೂ ಹೆಚ್ಚು ಮಂದಿ ಕುತ್ತಿಗೆ ಮುಚ್ಚುವ ಸ್ವೆಟರ್ ತೊಟ್ಟಿರುವ
ಯಾವುದೇ ಕೋಣೆಯಲ್ಲಿ ಇರಬೇಡಿ.
ಹಿಮದಲ್ಲಿ ಹೂತುಹೋದ ಟೆನಿಸ್ ಕೋರ್ಟಿನ ಮೇಲೆ
ಜಿಂಕೆಯ ಹೆಜ್ಜೆಗಳು ಕಂಡರೆ ಜೋಪಾನ.
ಬರೆಯಲು ಲೈಬ್ರರಿ ಅತ್ಯುತ್ತಮ ಸ್ಥಳವೆಂದು ಹೇಳಬೇಕಾಗಿಲ್ಲ.
ಅದರಲ್ಲೂ ಕಿಟಕಿಯಿಂದ ದೂರವಿರುವ ಕುರ್ಚಿಯ ಮೇಲೆ ಕುಳಿತುಕೊಳ್ಳುವುದು ವಾಸಿ.
ಅಲ್ಲೊಂದು ಮಗು, ವರ್ಷದ್ದೋ ಎರಡು ವರ್ಷದ್ದೋ, ಆಡುತ್ತಿದೆ
ಮತ್ತು ಅದರ ತಾಯಿ ಸತ್ತು ಸ್ವರ್ಗವಾದ ಲೇಖಕರ ಕೃತಿಗಳನ್ನು ತಿರುವಿಹಾಕುತ್ತಿದ್ದಾಳೆ.
ಪುಟ್ಟಮಗು ಕೆಳಗಿನ ಕಪಾಟಿನಿಂದ ಪುಸ್ತಕಗಳನ್ನು ಸೆಳೆದುಕೊಳ್ಳುತ್ತದೆ.
ಪುಸ್ತಕದ ಶೀರ್ಷಿಕೆ, ಲೇಖಕನ ಹೆಸರು, ಹಿಂಬದಿಯಲ್ಲಿ ಮುದ್ರಿಸಿದ
ಲೇಖಕನ ಆಲೋಚನಾಮಗ್ನ ಪಟ, ಇವು ಯಾವುದೂ ಮುಖ್ಯವಲ್ಲ.
ಕೆಂಪು ಪುಸ್ತಕ, ಕಪ್ಪು ಪುಸ್ತಕ, ಕಂದು ಪುಸ್ತಕ, ಎಲ್ಲವನ್ನೂ ಪೇರಿಸುತ್ತದೆ ಮಗು.
ಎತ್ತರ ಹೆಚ್ಚಿದಷ್ಟೂ ಹಿಗ್ಗುತ್ತದೆ ಮಗುವಿನ ನಗು.
ಸಲಹೆ ಕೇಳಿದೆಯಲ್ಲ ನೀನು, ಇಗೋ ಕೇಳು. ಪುಸ್ತಕದ ಕೋಟೆ
ಕೆಳಗೆ ಉರುಳಿದಾಗ ಆ ಮಗುವಿನ ಹಾಗೆ ವರ್ತಿಸು.
ಜೋರಾಗಿ ನಗು. ಎಷ್ಟು ಜೋರಾಗಿ ಎಂದರೆ ಜಗತ್ತಿನ ಎಲ್ಲರೂ
ಹುಬ್ಬು ಗಂಟಿಕ್ಕಿ "ಶ್!" ಎಂದು ಉಚ್ಚರಿಸುವಂತೆ.
ಅನಂತರ ಪುನರಪಿ ಪ್ರಯತ್ನಿಸು.
ರಾನ್ ಕಾರ್ಜ್ (Ron Koertge) ಒಬ್ಬ ಪ್ರಸಿದ್ಧ ಅಮೇರಿಕನ್ ಲೇಖಕ. ವಿಶೇಷವಾಗಿ ಹದಿಹರೆಯದ ಮಕ್ಕಳಿಗೆ ಅವನು ಸಾಹಿತ್ಯ ರಚನೆ ಮಾಡಿದ್ದಾನೆ. ಈ ಪದ್ಯವನ್ನು ಅವನು ಹೈಸ್ಕೂಲ್ ಮಕ್ಕಳಿಗಾಗಿ ಬರೆದಿದ್ದಾನೆ. ಶಾಲೆ-ಕಾಲೇಜುಗಳಿಗೆ ಭೇಟಿ ನೀಡಿದಾಗ "ನಮ್ಮ ಭವಿಷ್ಯಕ್ಕಾಗಿ ಏನಾದರೂ ಸಲಹೆ ನೀಡಿ" ಎಂದು ಕೇಳುವುದು ವಾಡಿಕೆ. ಅಂತಹ ಸಂದರ್ಭದಲ್ಲಿ ಕವಿ ತಮಾಷೆಯ ಉತ್ತರದಿಂದ ಪ್ರಾರಂಭಿಸುತ್ತಾನೆ. "ಸಲಹೆ" ಎಂದರೆ ಏನು ಬೇಕಾದರೂ ಕೊಡಬಹುದಲ್ಲ! "ಇಂಥ ಬಗೆಯ ನೋಟ್ ಬುಕ್ ಬಳಸಿ" ಎನ್ನುವುದೂ ಒಂದು ಸಲಹೆಯೇ! ಕವಿತೆಯ ಕೊನೆಗೆ ಅವನು ಮಕ್ಕಳಿಗೆ ಅವನು ಒಂದು ನಿಜವಾದ ಸಲಹೆ ನೀಡುತ್ತಾನೆ. ಅದೇನು? ಮಗುವಿನ ಮುಗ್ಧತೆಯನ್ನು ಕಳೆದುಕೊಳ್ಳಬೇಡ ಎಂಬುದೇ? ಜೀವನದಲ್ಲಿ ಸದಾ ಆಸಕ್ತನಾಗಿರು ಎಂಬುದೇ? ಬೀಳುತ್ತದೆ ಎಂದು ಗೊತ್ತಿದ್ದರೂ ಪುಸ್ತಕದ ಕೋಟೆ ಕಟ್ಟಿ ಬಿದ್ದಾಗ ಸಂತೋಷಿಸುವ ಮಗುವಿನ ಚರ್ಯೆ ಏನು ಸೂಚಿಸುತ್ತದೆ? ಮಗುವಿನ ತಾಯಿ "ಸತ್ತು ಸ್ವರ್ಗವಾದ ಲೇಖಕರನ್ನು ಓದುತ್ತಿದ್ದಾಳೆ" ಎಂಬ ಸಾಲು ಕವಿತೆಯಲ್ಲಿ ಯಾಕಿದೆ? ಯೋಚಿಸಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ