ಆಚಾರವಿಲ್ಲದ ನಾಲಿಗೆ (ಹರಟೆ)



//////////////////////////
ಸಿ.ಪಿ. ರವಿಕುಮಾರ್
///////////////////////////



ಇಂದು "ಆಚಾರ"ದ ಬಗ್ಗೆ ಮನಸ್ಸು ಹೊರಳಿದ್ದು ಒಬ್ಬ ಮಿತ್ರರು "ಖಾರದ ಹೂರಣ" ಇಟ್ಟು ಹೋಳಿಗೆ ಮಾಡಬಹುದೇ ಎಂದು ಕೇಳಿದಾಗ. ಅಯ್ಯೋ ಆಚಾರವಿಲ್ಲದ ನಾಲಿಗೆಯೇ! ಸಿಹಿ ಹೋಳಿಗೆಯನ್ನು ಕೊಟ್ಟರೂ ಮೇಲೆ ತುಪ್ಪಹಾಲುಗಳನ್ನು ಸುರಿದರೂ ನಿನಗೆ ತೃಪ್ತಿಯಿಲ್ಲವೇ! ಬೇರೇನನ್ನೋ ಬಯಸುತ್ತಿರುವೆಯಲ್ಲ! ಅಂದಹಾಗೆ ಆಚಾರ ಮತ್ತು ನಾಲಿಗೆಗಳನ್ನು ಒಂದೇ ವಾಕ್ಯದಲ್ಲಿ ಪ್ರಯೋಗ ಮಾಡಿದ್ದು ಪುರಂದರದಾಸರೇ ಇರಬಹುದು. ಆಚಾರ ಎಂದರೆ ಅವರ ಅರ್ಥದಲ್ಲಿ ಸದಾಚಾರವೇ ಆಗಿರಬೇಕು. ಏಕೆಂದರೆ ನಾಲಗೆಗೆ ಅನೇಕ ದುರಾಚಾರಗಳೂ ಇವೆ. ಬಿಸಿಜಾಮೂನಿನ ಮೇಲೆ ತಣ್ಣನೆಯ ಐಸ್ ಕ್ರೀಂ, ಕಾರದ ಚಕ್ಕುಲಿಗೆ ಮೊಸರು, ಸಿಹಿ ಮೊಸರನ್ನಕ್ಕೆ ಉಪ್ಪಿನಕಾಯಿ, ಸಿಹಿ ಒಬ್ಬಟ್ಟಿನ ಮೇಲೂ ಉಪ್ಪಿನಕಾಯಿ ... ಹೀಗೆ ನಂಜನ್ನು ಬೆರೆಸಿ ತಿನ್ನುವುದಕ್ಕೆ "ನಂಜಿಕೊಂಡು ತಿನ್ನು" ಎಂಬ ಪದಪುಂಜವನ್ನೇ ಸೃಷ್ಟಿಸಿ ಈ ಕ್ರಿಯೆಯನ್ನು ನ್ಯಾಯಸಮ್ಮತವನ್ನಾಗಿ ಮಾಡಿಬಿಟ್ಟಿದ್ದಾರೆ ನಮ್ಮವರು!


"ಉಪ್ಪಿಲ್ಲದ ಊಟ, ತಾಯಿಲ್ಲದ ತವರು" - ಇದೇನೋ ಸರಿ, ಒಪ್ಪಿಕೊಳ್ಳೋಣ. ಆದರೆ ಉಪ್ಪಿನಕಾಯಿಲ್ಲದ ಊಟವನ್ನೇ ಒಲ್ಲದವರೂ ಇದ್ದಾರೆ. ಶ್! ನಮ್ಮ ಮನೆಯಲ್ಲೇ ಒಬ್ಬರು ಇದ್ದಾರೆ. ನಮ್ಮ ಮನೆಯಲ್ಲಿ ಮಾವಿನಕಾಯಿ ಕಾಲದಲ್ಲಿ ಹಾಕಿದ ಅಷ್ಟೂ ಉಪ್ಪಿನಕಾಯಿಯನ್ನು ಅವರೊಬ್ಬರೇ ಖಾಲಿ ಮಾಡುತ್ತಾರೆ. ಸಾಲದೆಂಬಂತೆ ನಾನೇನಾದರೂ ಉತ್ತರಭಾರತಕ್ಕೆ ಹೋದರೆ "ಪಂಚರಂಗೀ ಅಚಾರ್ ಸಿಕ್ಕರೆ ತನ್ನಿ" ಎಂದು ಸಂದೇಶ ರವಾನಿಸುತ್ತಾರೆ. ಮಸಾಲೆ ಉಪ್ಪುಗಳನ್ನು ಸಮೃದ್ಧವಾಗಿ ಬೆರೆಸಿ ಮಾಡಿದ ಉಪ್ಪಿನಕಾಯಿಯಂತೂ ಈ ನಂಜುಗಳ ರಾಜ! ಸಾಲದೆಂಬಂತೆ ಅದಕ್ಕೆ ಒಗ್ಗರಣೆ! ಇನ್ನೊಂದು ವಿಶೇಷವನ್ನು ಕೇಳಿರಿ - ಈ ಉಪ್ಪಿನಕಾಯಿಗೆ ಉತ್ತರಭಾರತೀಯರು "ಆಚಾರ" ಎಂದು ಹೆಸರು ಕೊಟ್ಟಿದ್ದಾರೆ! ಆಹಾ! ಇದಲ್ಲವೇ ಆಚಾರ! ಉಪ್ಪುಕಾರಗಳನ್ನು ಧಂಡಿಯಾಗಿ ಸುರಿದು ಚಪ್ಪರಿಸುವುದು!


"ಅದು ಆಚಾರವಲ್ಲ ರೀ, ಅಚಾರ!" ಎಂದು ನಿಮ್ಮಲ್ಲಿ ಕೆಲವರು ಈಗಾಗಲೇ ಕಾಮೆಂಟ್ ಹಾಕಲು ಸಿದ್ಧರಾಗುತ್ತಿದ್ದೇರೆಂದು ನನಗೆ ಗೊತ್ತಿಲ್ಲವೇ? ನೋಡಿಯೇ ಬಿಡೋಣ ಈ ಅಚಾರದ ಮೂಲ ಎಂದು ನಾನು ವಿಕಿಪೀಡಿಯಾಗೆ ಮೊರೆಹೋದೆ. ಓಹೋ! ಈ ಅಚಾರವು ಪರ್ಶಿಯಾ ದೇಶದಿಂದ ನಮ್ಮಲ್ಲಿಗೆ ಬಂದದ್ದಂತೆ. ಸಕಲ ಅಕಲ ವಿಕಲ ಪಾತಾಳಗಳನ್ನು ಹುಡುಕಿದರೂ ಈ ಹಾಳು ಪಿಕಲ ಇಲ್ಲದ ಸ್ಥಳವೇ ಇದ್ದಂತಿಲ್ಲ. ಪಿಕಳ ಎಂದರೆ ಕಾಗೆಯಂತೆ. ಪಿಕಳವಿಲ್ಲದ ಸ್ಥಳವಾದರೂ ಇದ್ದೀತು, ಪಿಕಲವಿಲ್ಲದ ಸ್ಥಳವಿಲ್ಲ ಎಂಬ ಗಾದೆಯನ್ನು ಇದೋ ನಾನು ನಿಮಗೆ ನೀಡುತ್ತಿದ್ದೇನೆ. ಪರ್ಶಿಯಾ ದೇಶದಲ್ಲಿ ಏನೇನು ಇರಲಿಲ್ಲ ಹೇಳಿ! ಪರ್ಶಿಯನ್ ಕಾರ್ಪೆಟ್ ಜಗತ್ತಿನಲ್ಲೇ ಪ್ರಸಿದ್ಧ. ರೂಮಿ ಎಂಬ ಕವಿ-ದಾರ್ಶನಿಕನು ಪರ್ಶಿಯಾದವನೇ. ಈ ಯಾವುದಾದರನ್ನೂ ನಾವು ಸ್ವೀಕರಿಸಿದೇವೇ! ಇಲ್ಲ! ನಾವು ಸ್ವೀಕರಿಸಿದ್ದು ಅವರ ಅಚಾರ!


ನಾನು ದೆಹಲಿಯ ಐ.ಐ.ಟಿ.ಯಲ್ಲಿ ಪ್ರಾಧ್ಯಾಪಕನಾಗಿದ್ದಾಗ ಹಾಸ್ಟೆಲ್ ಒಂದರ ವಾರ್ಡನ್ ಕೆಲಸಕ್ಕೆ ನನ್ನನ್ನು ದೂಡಿದರು. ನನ್ನ ಪಾಡಿಗೆ ಪಾಠ ಹೇಳಿಕೊಂಡು ರಿಸರ್ಚ್ ಮಾಡಿಕೊಂಡು ನನ್ನದೇ ಜಗತ್ತಿನಲ್ಲಿದ್ದ ನನಗೆ ಇನ್ನೊಂದು ಜಗತ್ತನ್ನು ಪರಿಚಯಿಸುವ ಆಸೆ ಮೇಲಧಿಕಾರಿಗಳಿಗೆ ಆಗಿರಬೇಕು. ಆಗಾಗ ನಮ್ಮ ವಾರ್ಡನ್ ಮೀಟಿಂಗ್ ನಡೆಯುತ್ತಿತ್ತು. ಈ ಸಭೆಗಳಲ್ಲಿ ಚರ್ಚೆಯಾಗುತ್ತಿದ್ದ ವಿಷಯಗಳು, ಅಂಕಿ-ಅಂಶಗಳು ನನಗೆ ದಿಗ್ಭ್ರಮೆ ಮೂಡಿಸುತ್ತಿದ್ದವು. ಒಮ್ಮೆ ಯಾರಿಗೋ  ವಿದ್ಯಾರ್ಥಿನಿಯರ ಹಾಸ್ಟೆಲಿನ ತಿಂಗಳಿನ ಊಟದ ಸರಾಸರಿ ಖರ್ಚು ಹುಡುಗರ ಹಾಸ್ಟೆಲ್ ಊಟದ ಸರಾಸರಿ ಖರ್ಚಿಗೆ ಹೋಲಿಸಿದರೆ ಕಡಿಮೆ ಇದೆ ಎನ್ನುವ ಅಂಕಿ-ಅಂಶ ಸಿಕ್ಕಿತು. ಸರಿ, ಅದೇ ಒಂದು ಚರ್ಚೆಯ ವಿಷಯವಾಯಿತು. ಎಲ್ಲ ಹಾಸ್ಟೆಲುಗಳ ಮೆಸ್ ಸೂಪರ್ವೈಸರ್ ಗಳನ್ನು ಕೂಡಾ ಚರ್ಚೆಗೆ ಕರೆದರು. ಹುಡುಗರ ಹಾಸ್ಟೆಲಿನ ಮೆಸ್ ಸೂಪರ್ವೈಸರ್ ಗಳು ಇದನ್ನು ತಮಗೆ ಮಾಡಿದ ಅಪಮಾನವೆಂದೇ ತಿಳಿದು ವಾದಿಸಲು ಬಂದಹಾಗಿತ್ತು! "ಸಾಬ್ ಜೀ, ಹೆಣ್ಣು ಮಕ್ಕಳು ಊಟ ಮಾಡುವುದೇ ಕಡಿಮೆ. ನೀವು ಬೇಕಾದರೆ ಹೋಗಿ ನೋಡಿ. ನಮ್ಮ ಹುಡುಗರು ರೋಟಿ ಚೆನ್ನಾಗಿಲ್ಲ, ತುಂಬಾ ದಪ್ಪ ಎಂದು ಕಂಪ್ಲೇಂಟ್ ಮಾಡುತ್ತಲೇ ನಾಲಕ್ಕು ರೋಟಿ ಇಳಿಸುತ್ತಾರೆ. ಇನ್ನು ನಾವು ಮೆತ್ತಗೆ ಲಟ್ಟಿಸಿದ ತವಾ ರೋಟಿ ಮಾಡಿದರೆ ಏನಾಗಬಹುದು ನೀವೇ ಯೋಚಿಸಿ!" ಎಂದು ಒಬ್ಬನು ಧ್ವನಿ ಎತ್ತರಿಸಿ ಭಾಷಣ ಮಾಡಿದನು. ಇನ್ನೊಬ್ಬನು "ಸಾಬ್ ಜೀ! ಒಂದು ವಿಷಯವನ್ನು ನಾನು ಹೇಳಲೇ ಬೇಕು. ಬೇಕಾದರೆ ಗಂಡುಮಕ್ಕಳ ಹಾಸ್ಟೆಲಿನಲ್ಲಿ ಎಷ್ಟು ಬಾಟಲ್ ಉಪ್ಪಿನಕಾಯಿ ಖರ್ಚಾಗುತ್ತದೆ, ಹೆಣ್ಣುಮಕ್ಕಳ ಹಾಸ್ಟೆಲಿನಲ್ಲಿ ಎಷ್ಟು ಖರ್ಚಾಗುತ್ತದೆ ಲೆಕ್ಕ ಹಾಕಿರಿ! ನನ್ನ ಹತ್ತಿರ ಅಂಕಿ-ಅಂಶಗಳಿವೆ! ಸರಾಸರಿ ಹೆಣ್ಣುಮಕ್ಕಳ ಹಾಸ್ಟೆಲಿನಲ್ಲಿ ನಾಲ್ಕು ಪಟ್ಟು ಉಪ್ಪಿನಕಾಯಿ ಖರ್ಚಾಗುತ್ತದೆ! ಅವರು ಉಪ್ಪಿನಕಾಯಿ ಅಷ್ಟೊಂದು ತಿನ್ನುವುದರಿಂದಲೇ ಬೇರೇನನ್ನೂ ತಿನ್ನುವುದಿಲ್ಲ!" ಎಂದು ವಿಜಯದ ನಗೆ ನಕ್ಕನು.


ಚಾರ್ ಧಾಮ್ ಯಾತ್ರಾ ಎಂಬ ಸಂಭ್ರಮವೊಂದಿದೆ. ಬದರಿನಾಥ, ಪುರಿ, ರಾಮೇಶ್ವರ, ದ್ವಾರಕಾ - ಈ ನಾಲ್ಕು ಧಾಮಗಳ ಯಾತ್ರೆಯನ್ನು ಮಾಡಲೇಬೇಕು ಎಂದು ಕೆಲವರು ಹಣ ಕೂಡಿಡುವುದನ್ನು ನೀವೂ ನೋಡಿರಬಹುದು. ನಾನೂ ಉತ್ತರಭಾರತದಲ್ಲಿದ್ದಾಗ ಬದರಿನಾಥ ಯಾತ್ರೆ ಮುಗಿಸಿಬಂದಿದ್ದೇನೆ. ಹಿಮಾಲಯದಲ್ಲಿರುವ ಈ ಚಳಿಪ್ರದೇಶಕ್ಕೆ ಯಾತ್ರಿಗಳಲ್ಲದೆ ಬೇರೆ ಯಾರೂ ಹೋಗಲಾರರು. ಆದರೆ ನನ್ನ ಅನುಭವವನ್ನು ನಿಮಗೆ ಹೇಳುತ್ತೇನೆ ಕೇಳಿರಿ. ಬದರಿನಾಥ ಮಂದಿರದ ದರ್ಶನಕ್ಕೆ ಹೋಗುವಾಗಲೇ ನಮಗೆ ಎದುರಾದದ್ದೇನು! ಸಾಲು-ಸಾಲು ಖಾನಾವಳಿಗಳು! ದೊಡ್ಡ ದೊಡ್ಡ ಕಡಾಯಿಗಳಲ್ಲಿ ಕೊತಕೊತ ಎಣ್ಣೆಯಲ್ಲಿ ಪೂರಿ-ಕಚೋರಿ-ಸಮೋಸಾಗಳನ್ನು ಕರಿಯುವ ಭೈಯ್ಯಾಗಳು. ಅಲ್ಲೇ ಅಂಗಡಿಯ ಮುಂದೆ ನಿಂತು ಪೂರಿ ತಿನ್ನುತ್ತಾ "ಆಮ್ ಕಾ ಅಚಾರ್ ಔರ್ ದೇನಾ ಭೈಯ್ಯಾ," ಎಂದು ಕೇಳುವ ಒಬ್ಬ ಭಕ್ತೆ. ಈ ಪುಣ್ಯಧಾಮಗಳಲ್ಲಿ ಎಲ್ಲಿ ಹೋದರೂ ಉಪ್ಪಿನಕಾಯಿಗಳ ಮಾರಾಟ ಜೋರಾಗಿರುವುದನ್ನು ನೀವೂ ನೋಡಿರುತ್ತೀರಿ. "ನಮ್ಮ ವಿಶೇಷ ಮಸಾಲೆ ಹಾಕಿದ ಉಪ್ಪಿನಕಾಯಿ ಖರೀದಿಸಲು ಮರೆಯಬೇಡಿ" ಎಂಬ ಫಲಕಗಳನ್ನು ನೋಡಿ ವಿಚಲಿತರಾಗದವರು ಇದ್ದಾರೆಯೇ? ಚಾರ್ ಧಾಮ್ ಎಂಬುದು ನಿಜಕ್ಕೂ ಅಚಾರ್ ಧಾಮ್ ಎಂದಿರಬೇಕಾಗಿತ್ತೇ ಎಂಬ ಅನುಮಾನ ನನ್ನನ್ನು ಆಗ ಕಾಡಿತು.


"ಆಚಾರವಿಲ್ಲದ ನಾಲಿಗೆ" ಎಂದು ಪುರಂದರದಾಸರು ಯಾಕೆ ಹಾಡಿರಬಹುದು ಎಂದು ಯೋಚಿಸಿದಾಗ ಬೇರೆಬೇರೆ ಉತ್ತರಗಳು ಹೊಳೆಯುತ್ತವೆ. ಉಪ್ಪಿನಕಾಯಿ ತಿನ್ನುವ ಮೊದಲು ಹೊಳೆಯುವ ಉತ್ತರವೇ ಬೇರೆ. ಉಪ್ಪಿನಕಾಯಿ ತಿಂದ ನಂತರ ಹೊಳೆಯುವ ಉತ್ತರವೇ ಬೇರೆ. ಪಾಪ! ಅವರಿವರಿಂದ ಬೇಡಿ ಊಟ ಮಾಡುತ್ತಿದ್ದ ದಾಸರಿಗೆ ಉಪ್ಪಿನಕಾಯಿಯನ್ನು ಯಾರೂ ಭಿಕ್ಷೆಯಲ್ಲಿ ಕೊಟ್ಟಿರಲಾರರು. ಉಪ್ಪಿನಕಾಯಿಯನ್ನು ಬೇಡಿಯೂ ತಿನ್ನಬಹುದು ಎಂಬ ಅಂಶ ದಾಸರಿಗೆ ಹೊಳೆದಿರಲಾರದು. ಬೂತಯ್ಯನ ಮಗ ಅಯ್ಯು ಚಿತ್ರವನ್ನು ಅವರು ನೋಡಿರಲಿಲ್ಲ. ಸಪ್ಪೆ ಊಟವನ್ನೇ ತಿಂದು ದಾಸರ ಬಾಯಿಗೆ ಅರುಚಿಯಾದಾಗಲೇ ಅವರು "ಆಚಾರವಿಲ್ಲದ ನಾಲಿಗೆ" ಎಂಬ ಸಾಲುಗಳನ್ನು ಬರೆದರೇ ಎಂಬ ಆಲೋಚನೆ ನನಗೆ ಬರುತ್ತಿದೆ. ಇದಕ್ಕೆ ನಾನು ಊಟದಲ್ಲಿ ತಿಂದ ಮಾವಿನಕಾಯಿ ಉಪ್ಪಿನಕಾಯಿ ಕಾರಣವಿರಬಹುದೇ ಎಂದು ನನ್ನ ಮನಸ್ಸಿನ ಇನ್ನೊಂದು ಭಾಗ ಕೇಳುತ್ತಿದೆ. ಅಯ್ಯೋ ಯಾಕೆ ಎದ್ದಿರಿ? ಅಡಿಗೆಮನೆಯ ಕಡೆಗೇಕೆ ಹೊರಟಿರಿ? ಊಟದ ಹೊತ್ತಾಯಿತೆ? ಸರಿ, ಇನ್ನೊಮ್ಮೆ ಮಾತಾಡೋಣ.

ಕಾಮೆಂಟ್‌ಗಳು

  1. ಈ ಬರಹಕ್ಕೆ ನನ್ನ ಮೈಸೂರಿನ ಮಿತ್ರ ಸೀತಾರಾಂ ಕಳಿಸಿದ ಉತ್ತರವು ಊಟಕ್ಕೆ ಉಪ್ಪಿನಕಾಯಿಯ ಹಾಗಿರುವುದರಿಂದ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

    ಊಟದ ಸಮಯಕ್ಕೆ ಸರಿಯಾಗಿ ನನಗೆ ಧೂಮ್‍ಧಾಮ್ ’ಅಚಾರ್‍’ ಧಾಮ್ ಯಾತ್ರೆ ಮಾಡಿಸಿ ನೀವು ಉಪ್ಪುಕಾರ ಮಾಡಿರುವಿರಿ. (ತಡವಾಗಿದ್ದರೆ, ’ಊಟಕ್ಕಿಲ್ಲದ ಉಪ್ಪಿನಕಾಯಿ’ ಎಂದು ಗೊಣಗಬೇಕಾಗುತ್ತಿತ್ತು ). ಚಪ್ಪರಿಸುವ ಚಪಲತೆಗೆ ಹೊರತಾದ ’ಚಪ್ಪೆ’ ನಾಲಗೆಯೇನೂ ನನ್ನದಾಗದಿದ್ದರೂ, ನಾನು pickle-minded ಎನ್ನಿಸಿಕೊಳ್ಳುವ ಮಟ್ಟದ ’ಅಚಾರವಂತ’ ಅಂತೂ ಅಲ್ಲ. (ಆದರೆ, ನೀವು ಸೂಚಿಸಿರುವ ಚಪಲವಿಕಾರಗಳಲ್ಲಿ ಒಂದಕ್ಕಂತೂ ನಾನು ಬಲಿಯಾಗಿರುವುದನ್ನು ನಿಮ್ಮಲ್ಲಿ ಗುಟ್ಟಾಗಿ ಈಗಲೇ ಒಪ್ಪಿಕೊಂಡುಬಿಡುತ್ತೇನೆ: ಉಪ್ಪಿನಕಾಯನ್ನು ಸೋಂಕಿಸಿದ ’ಸೆಪ್ಟಿಕ್ ಒಬ್ಬಟ್ಟನ್ನು’ ಸವಿಯುವ ’ನಂಜು’ ಜಾಡ್ಯ!). ’ವ್ಯಂಜನ’ ನನ್ನ ’mother-tongue’ಗೂ ಮೂಲಭೂತವೇ ಆಗಿದ್ದರೂ, ಅದಿನ್ನೂ ನಂಜುವಗೂಡಾಗಿಲ್ಲ. ಹಾಗಾಗಿ, ಯಾವುದೇ ’ಉಪ್ಪಿನಕಾಯಿ ಸತ್ಯಾಗ್ರಹ’ದ ಪರವಾಗಿಯೂ ನಾನು ’’ನಾಲಿಗೆ ಮಾಡಲಾರೆ”. ಎಷ್ಟಾದರೂ, ನಾಲಿಗೆಯನ್ನು ಕಟ್ಟುಸಾರಿನ ಕಟ್ಟುಪಾಡಿಗೊಳಪಡಿಸುವಷ್ಟು ಕೆಟ್ಟವನು ಮಾತ್ರ ನಾನಾಗಿಲ್ಲದ ಕಾರಣ, ನೀವಿತ್ತಿರುವ ತ್ರಿರಸೋಪೇತ - ಆಮ್ಲ (ಹುಳಿ(), ಕ್ಷಾರ (ಉಪ್ಪು) ಮತ್ತು ಕಟು (ಕಾರ) - ಭೋಜನವನ್ನು ಸಂತೋಷದಿಂದಲೇ ಸವಿದಿದ್ದೇನೆ . ನೀವು "ಬ್ಲಾಗ್ಯವಂತ" ಆಗಿರುವುದಕ್ಕೆ ಅಭಿನಂದಿಸುತ್ತ, ಇದೇ ಮಾದರಿ ರುಚಿರುಚಿ-ಘಮಘಮ-ಬಿಸಿಬಿಸಿ ತಿನಸುಗಳು ನಿಮ್ಮ ಬ್ಲಾಗ್-ಪಾಕಶಾಲೆಯಿಂದ ಹೊರಬರುತ್ತ, ನನ್ನಂಥವರ ಆಚಾರವಿಲ್ಲದ ನಾಲಿಗೆಗಳನ್ನು ಮತ್ತಷ್ಟು ಅನಾಚಾರಿಯಾಗಿಸಲಿ ಎಂದು, ಸಕಲ ಚರ-ಅಚರ-ಅಚಾರ-ಆಚಾರ ವಸ್ತು/ಜೀವಿಗಳನ್ನೂ ನಡೆಸುವ ಶಕ್ತಿಯಲ್ಲಿ ಕೋರುವೆ. - ಉಪ್ಪೇರಿಯಪ್ಪ ನಂಜುನಾಥ ’ಅ’ಚಾರ್ಯ, ಉಪ್ಪಿನಂಗಡಿ.
    * ಅತಲ, ವಿತಲ, ಸುತಲ...ಪಾತಾಲ ಎನ್ನುವಾಗ, ’ರಸಾತಲ’ ಎಂಬ ಒಂದು deep ಘಟ್ಟವನ್ನು ಇಲ್ಲಿ ಸೂಚಿಸಿದ್ದರೆ apt ಆಗುತ್ತಿತ್ತು.
    * Bulbul ಹಕ್ಕಿಗೆ ’ಪಿಕಳಾರ’ ಎನ್ನುವರೆಂದು ಕೇಳಿದ್ದೇನೆ. ’ಪಿಕ’ ಎಂದರೆ, of course, ಕೋಗಿಲೆ. ಆದರೆ ’ಪಿಕಳೆ’ ಎಂದರೆ ’ಕಾಗೆ’ ಎನ್ನುವುದನ್ನು ನಾನೀವರೆಗೆ ಕೇಳಿರಲಿಲ್ಲ. In fact, ಗೌಡ ಸಾರಸ್ವತರಲ್ಲಿ "ಪಿಕಳೆ" ಎಂಬ ಉಪನಾಮವು ಜನಪ್ರಿಯ; ಇವರಲ್ಲಿ ’ಶಾಂತಾರಾಮ್ ಪಿಕಳೆ’ ಎಂಬುವರು ಪ್ರಸಿದ್ಧ ವಕೀಲರೂ, ದಾನಿಗಳೂ ಆಗಿದ್ದರು.
    * ಉಪ್ಪಿನಕಾಯಿಗೆ "ಊರುಗಾಯಿ" ಎನ್ನುವುದೂ ಉಂಟು. ರುಚಿ ಊರುವಂತೆ ಉಪ್ಪಿನಕಾಯಿಗಳನ್ನು "ಊರಹಾಕು’ತ್ತಿದ್ದರಿಂದಾಗಿ ಈ ಹೆಸರು ಬಂದಿರಬಹುದು. ಹೀಗೆ ಊರಿಡುತ್ತಿದ್ದ ’ಜಾಡಿ’ ಮತ್ತು jar ನಡುವೆ ಇರುವ ಶಬ್ದಸಾಮ್ಯವೂ ಇಲ್ಲಿ ಆಸಕ್ತಿಕರವೆನಿಸಬಹುದು.
    * ಹಿಂದಿನ ಕಾಲವೊಂದರಲ್ಲಿ British Navyಯಲ್ಲಿ, Cat of nine tails ಎಂಬ ಒಂಬತ್ತು ಉದ್ದ, ಗಂಟುಹಾಕಿದ ಎಳೆಗಳನ್ನುಳ್ಳ ಚಾವಟಿಯಿಂದ ಖೈದಿಗಳಿಗೆ ಬಾರಿಸುತ್ತಿದ್ದರಂತೆ, ಬಳಿಕ ಗಾಯಗಳು ಕೊಳೆಯದಂತೆ ಅವುಗಳೊಳಕ್ಕೆ ಉಪ್ಪು/ಉಪ್ಪಿನಕಾಯಿ ಉಜ್ಜುತ್ತಿದ್ದರಂತೆ. "Rub salt into someone's wounds" ಎನ್ನುವ ಮಾತಿನ ಮೂಲವನ್ನು ಕೆಲವರು ಇಲ್ಲಿ ಕಾಣುತ್ತಾರೆ.
    * ನಾಲಿಗೆಯನ್ನು ಕಟ್ಟಿಕಟ್ಟಿ ಸಾಕಾಗಿದ್ದ ಸ್ವಾಮಿ ಶಿವಾನಂದರು ಒಮ್ಮೆ ನಡುರಾತ್ರಿಯಲ್ಲಿ ತಮ್ಮ ಆಶ್ರಮದ ಅಡಿಗೆಮನೆಯಲ್ಲಿ ಉಂಡೆಉಂಡೆ ಉಪ್ಪಿನಕಾಯಿಗಳಿಂದ ತಮ್ಮ ಅಂತರಾತ್ಮದ ಅನ್ನಬ್ರಹ್ಮನನ್ನು ಗುಟ್ಟಾಗಿ ತಣಿಸಿಕೊಳ್ಳುತ್ತಿದ್ದು ಸಿಕ್ಕಿಬಿದ್ದ ಸಂಗತಿಯನ್ನು ಹಿಂದೊಮ್ಮೆ ಎಲ್ಲೋ ಓದಿದ್ದ ನೆನಪು.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)