ಅಮ್ಮ

ಮೂಲ ಇಂಗ್ಲಿಷ್ ಕವಿತೆ: ತಬೀಶ್ ಖೈರ್ (ಭಾರತ) 
ಕನ್ನಡಕ್ಕೆ: ಸಿ. ಪಿ. ರವಿಕುಮಾರ್ 


Image result for old lady walking  wikipedia
ಪ್ಲಾಸ್ಟರ್ ಕಿತ್ತು ಉದುರುವ ಈ ಮನೆಯ ಮೆಟ್ಟಿಲುಗಳನ್ನು ಇಳಿಯುವಾಗ  
ಅದರ ಕೋಣೆಗಳ ಆಪ್ಯಾಯಮಾನ ಖಾಲೀತನದಲ್ಲಿ ಸುತ್ತುವಾಗ 
ಮರುಧ್ವನಿಸುತ್ತದೆ ಅಜ್ಜಿ,  ನಿನ್ನ  ಮೆಲ್ಲನೆಯ ಹೆಜ್ಜೆಯ ಸಪ್ಪಳ ಮತ್ತು ನಡುವಣ ಮೌನ. 

ಥೇಟ್ ಹಾಗೇ, ಹೇಗೆ ಅನುರಣಿಸುತ್ತಿದ್ದವೋ ಬೇಸಗೆಯ ಮಧ್ಯಾಹ್ನಗಳಲ್ಲಿ 
ಕೋಣೆಯ ಸುತ್ತಲೂ ತೊಯ್ಯಿಸಿದ ಖಸ್ ಪರದೆಗಳ  ನಡುವೆ 
ಮಾವು ನಿಂಬೆಗಳ ತಂಪುಪಾನೀಯಗಳಿಂದ, ಕಲ್ಲಂಗಡಿ ಚೂರುಗಳಿಂದ  ಕಾದುವಾಗ ಬಿಸಿಲನ್ನ. 

ನಿಧಾನವಾಗಿ ತೂರಾಡಿಕೊಂಡು ಓಡಾಡುತ್ತಾ ನೀನು ಗಮನಿಸುತ್ತೀಯೆ  
ಪರದೆಗಳಲ್ಲಿ ಎಷ್ಟು ಕಡೆ ಹರಿದಿದೆ ಹೊಸದಾಗಿ,  ಬೇಸಗೆಯಿಂದ ಬಿಡುವು ಸಿಕ್ಕರೆ ತಾನೇ,
ಯಾವಾಗ ಬಂದೀತೋ ಮುಂಗಾರು ಮಳೆ, ಯಾವಾಗ ಮಾಡುವೆನೋ ಹೊಲೆದು ಜೋಪಾನ.  

ಕೀಲುನೋವಿನ ನಡುವೆಯೇ ನೀನು ಓಡಾಡುವೆ ಕೋಣೆಯಿಂದ ಕೋಣೆಗೆ,
ಲೆಕ್ಕ ಹಾಕುತ್ತಾ ಉರುಳುವ ಸಂವತ್ಸರಗಳು ಎಲ್ಲೆಲ್ಲಿ ಎಷ್ಟೆಷ್ಟು ಹಾನಿ ಮಾಡಿವೆ,
ಎಂದು ಭೂತವು ಕುಸಿದು ಬೀಳುತ್ತದೋ  ಮತ್ತು ಎಷ್ಟು ಕಾಲ ಬಾಳುತ್ತದೋ ವರ್ತಮಾನ

ನೀನಗೆಂದೂ ಬೇಕಾಗದು ಕನ್ನಡಕ ಮನೆಯ ಸುತ್ತ ಓಡಾಡುವುದಕ್ಕೆ,
ಮೊಮ್ಮಕ್ಕಳನ್ನು ದೂರದಿಂದ ಗುರುತಿಸಲಾರೆಯಾದರೂ,  ರವಿಕೆ 
ತಳಕಂಪಳಕ ಧರಿಸಿದ್ದೆ ಒಮ್ಮೆ! ಬದಲಾಗಿಲ್ಲ ಅಜ್ಜಿ, ಇಲ್ಲ, ಏನೂ ಬದಲಾಗಿಲ್ಲ ಇನ್ನಾ; 

ನಿನ್ನ ಪುಟ್ಟ ಹೆಜ್ಜೆಗಳು ಎಂದೂ ಕೊಂಡೊಯ್ಯದಿದ್ದರೂ ತಿರುವಿಗೆ ನಿನ್ನನ್ನು,
ಗಂಜಿ ಹಾಕಿದ ಬಿಳಿ ಸೀರೆ ಮತ್ತು ಸೋಪ್ ಪರಿಮಳ ನಿನ್ನನ್ನು ಸುತ್ತಿಕೊಂಡಿವೆ ಇನ್ನೂ. 
ಯಾವ ಕಾಲವಾಯಿತೋ ಕೆಳಗಿಳಿಸಿ ಎಲ್ಲಾ ಪರದೆಗಳನ್ನ. 


ಕವಿತೆಯ ಸ್ವಾರಸ್ಯ: ಇದು ಕವಿ ತನ್ನ ಅಜ್ಜಿಯನ್ನು ನೆನೆದು ಬರೆದ ಕವಿತೆ. ತನ್ನ ಬಾಲ್ಯದಲ್ಲಿ ಅಜ್ಜಿಯ ಮನೆಯಲ್ಲಿ ಕಳೆದ ದಿನಗಳ ನೆನಪು ಕವಿಗಿದೆ. ತನ್ನ ಜೀವನದ ಉದ್ದಕ್ಕೂ ತಾನು ಕಂಡ ಅಜ್ಜಿ ತನ್ನ ಭೂತ-ವರ್ತಮಾನಗಳನ್ನು ಆಕ್ರಮಿಸಿಕೊಂಡಿದ್ದಾಳೆ; ಅವಳು ತನ್ನ ಹಳೆಯ ಮನೆಯಲ್ಲಿ ಓಡಾಡುವಾಗ ಅವಳ ಹೆಜ್ಜೆಯ ಸಪ್ಪಳ ಕಿವಿಯಲ್ಲಿ ಇನ್ನೂ ಕೇಳುತ್ತಿದೆ. ಅವಳು ಹೀಗೇ ಇದ್ದುಬಿಡುತ್ತಾಳೆಯೇ, ಎಲ್ಲವೂ ಹೀಗೇ ಯಥಾಸ್ಥಿತಿಯಲ್ಲಿ ಇದ್ದುಬಿಡುತ್ತದೆಯೇ ಎಂಬ ಅನುಮಾನ ಕವಿಗೆ ಬರುತ್ತದೆ.  ಅದೊಂದು ಹಿತಕರವಾದ ಆಲೋಚನೆ.  ಅಜ್ಜಿಯ ಹೆಜ್ಜೆಗಳು ನಿಧಾನವಾದರೂ ಖಚಿತವಾದವು. ಅವುಗಳಿಗೆ ಒಂದು ಧ್ಯೇಯವಿದೆ. ಅವಳು ಮನೆಯನ್ನು ಸುಸ್ಥಿತಿಯಲ್ಲಿಡಲು ಹೆಣಗಾಡುತ್ತಾಳೆ. ಹರಿದ ಪರದೆಗಳಿಗೆ ತೇಪೆ ಹಾಕುತ್ತಾಳೆ. ಎಲ್ಲಿ ಯಾವ ರಿಪೇರಿ ಮಾಡಿಸಬೇಕೆಂದು ಲೆಕ್ಕ ಹಾಕುತ್ತಾಳೆ. ಆದರೆ ಅವಳ ಮುಂದಿನ ಪೀಳಿಗೆಗೆ ಅವಳ ಹಳೆಯ ಮನೆಯ ಬಗ್ಗೆ ಅಷ್ಟೇ ಆಸ್ಥೆ ಇದೆಯೇ?  ಅಜ್ಜಿಯು ಒಂದು ಪೀಳಿಗೆಯ, ಒಂದು ಸಂಪ್ರದಾಯದ ದ್ಯೋತಕವಾಗಿ ಕೂಡಾ ನಿಮಗೆ ಕಾಣಬಹುದು.  ಕೊನೆಯ ಸಾಲನ್ನು ಮತ್ತೊಮ್ಮೆ ಓದಿ. "ಪರದೆಗಳನ್ನು ಕೆಳಗಿಳಿಸಿ ಎಷ್ಟೋ ಕಾಲವಾಗಿದೆ" ಎಂಬುದರ ಅರ್ಥವೇನು?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)