ಸ್ನೇಹಿತ
ಮೂಲ: ಹೆಕ್ಟರ್ ರೋಜಾಸ್ ಹೆರಾಜೋ (ಸ್ಪಾನಿಷ್ ಭಾಷೆ, ಕೊಲಂಬಿಯಾ ರಾಷ್ಟ್ರ)
ಇಂಗ್ಲಿಷ್ ಭಾಷೆಗೆ: ನಿಕೋಲಾಸ್ ಸೂಸ್ಕುನ್
ಕನ್ನಡಕ್ಕೆ: ಸಿ. ಪಿ. ರವಿಕುಮಾರ್
ನನ್ನ ಕಡೆಗೆ ಅವನು ಒಮ್ಮೆಲೇ ನೋಡಿದ
ಎಲ್ಲರಿಗಿಂತ ಹೆಚ್ಚು ಏಕಾಂತದಲ್ಲಿ.
ಅವನು ನನ್ನ ಕಡೆ ನೋಡಿದ ತನ್ನ ಕಣ್ಣುಗಳಿಂದ, ತನ್ನ ಮೂಳೆಗಳಿಂದ,
ಪಾದರಕ್ಷೆಗಳೊಳಗಿನ ತನ್ನ ಬರಿಪಾದಗಳಿಂದ.
ನನಗೆ ತಡೆದುಕೊಳ್ಳಲಾಗಲಿಲ್ಲ. (ನಾವು ತಡೆಯಲಾರೆವು
ನಮ್ಮ ಆಳಕ್ಕೆ ಇಣುಕುವ ಯಾವುದನ್ನೂ.)
ಅವನ ಹಿಂದೆ ಇತ್ತು ಸ್ವರ್ಗ
ಅಲ್ಲಿದ್ದರು ರಾಕ್ಷಸರು,
ಕೊತಕೊತ ಕುಡಿಯುವ ಎಣ್ಣೆಯ ಕೊಪ್ಪರಿಗೆ
ಮತ್ತು ಸಾಬೂನಿನ ಗುಳ್ಳೆಗಳನ್ನು ಊದುತ್ತಿರುವ ದೇವಪಿತ.
ಈ ಕಡೆ ಇತ್ತು ಕಂಪ್ಯೂಟರ್ ಮೇಜು,
ಫರ್ನಿಚರ್ ಸಾಮಾನು, ಕೋಣೆಯ ಮತ್ತೆಲ್ಲಾ ಸಾಕ್ಷಿಗಳು.
ಸ್ನೇಹಿತನು ಕುಳಿತಿದ್ದ ಪುಟ್ಟ ಕುರ್ಚಿಯ ಮೇಲೆ,
ನನ್ನ ಕಡೆ ನೋಡುತ್ತಾ, ಕುಳಿತುಕೊಂಡು, ಉಸಿರಾಡುತ್ತಾ.
ಕವಿತೆಯ ಸ್ವಾರಸ್ಯ: ಇಲ್ಲಿ ಕವಿತೆಯ ನಾಯಕನಿಗೆ ಕಾಣುವ ಸ್ನೇಹಿತ ಬೇರೊಬ್ಬನೇ ಆಗಿರಬೇಕಾಗಿಲ್ಲ. ಸ್ವತಃ ನಾಯಕನೇ ಆಗಿರಬಹುದು ಎಂಬ ಸುಳಿವಿನೊಂದಿಗೆ ಕವಿತೆಯನ್ನು ಮತ್ತೊಮ್ಮೆ ಓದಿ. ಕಂಪ್ಯೂಟರ್ ತೆರೆಯ ಹಿಂದೆ ಕಾಣುತ್ತಿರುವ "ಸ್ವರ್ಗ"ದಲ್ಲಿ ನರಕವಾಸಿಗಳಾದ ರಾಕ್ಷಸರು, ಎಣ್ಣೆಯ ಕೊಪ್ಪರಿಗೆ ಇವೆಲ್ಲಾ ಯಾಕಿವೆ? ಕಂಪ್ಯೂಟರ್ ತೆರೆಯ ಕನ್ನಡಿಯಲ್ಲಿ ತನ್ನನ್ನೇ ಕಂಡಾಗ ನಾಯಕನಿಗೆ ತಡೆದುಕೊಳ್ಳಲು ಯಾಕೆ ಕಷ್ಟವಾಗುತ್ತದೆ?
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ