ನೀಲಿ ಬಟ್ಟಲು
ಮೂಲ ಅಮೆರಿಕನ್ ಪದ್ಯ: ಜೀನ್ ಕೀನ್ಯನ್ (ಅಮೆರಿಕಾ ಸಂಸ್ಥಾನ)
ಕನ್ನಡಕ್ಕೆ : ಸಿ. ಪಿ. ರವಿಕುಮಾರ್
ಪ್ರಾಚೀನ ರೀತಿಯೋ ಎಂಬಂತೆ ಹೂತೆವು ಬೆಕ್ಕನ್ನು,
ಅದರ ಜೊತೆ ಇಟ್ಟು ಅದರ ನೀಲಿ ಬಟ್ಟಲು.
ಬರಿಗೈಯಿಂದಲೇ ಬಗೆದು ಮರಳನ್ನು
ವಾಪಸು ಹಾಕಿದೆವು ಹಳ್ಳದಲ್ಲಿ ಸುತ್ತಲೂ.
ಚುಸ್ ಎಂದು ಸದ್ದು ಮಾಡುತ್ತಾ ಮರಳು ಥಡ್ ಎಂದು
ಬಿತ್ತು ಬೆಕ್ಕಿನ ಪಕ್ಕ, ಕೆಂಪು ತುಪ್ಪಟದ ಮೇಲೆ,
ಕಾಲ್ಬೆರಳ ಸಂದಿಗಳ ಬೆಳ್ಳನೆಯ ಪುಕ್ಕದ ಮೇಲೆ,
ಚೂಪಾದ ನೀಳ ಮೂಗಿನ ಮೇಲೆ.
ತಡವಿದೆವು ಒಬ್ಬರನ್ನೊಬ್ಬರು ನಾವು
ಅಲ್ಲೇ ನಿಂತು ಸ್ವಲ್ಪ ಹೊತ್ತು
ಇದಕ್ಕಿಂತಲೂ ಆಳವಾದ ದುಃಖಗಳು
ಇರುತ್ತವೆಂಬುದು ಗೊತ್ತು.
ಉಳಿದ ದಿವಸ ಮೌನವಾಗಿ ಸಾಗಿಸಿದೆವು ಕೆಲಸ:
ಊಟ, ಪರಸ್ಪರ ದೀರ್ಘ ನೋಟ, ನಿದ್ರೆ.
ರಾತ್ರಿ ಎಲ್ಲಾ ಮಳೆ ಜೋರಾಗಿ ಸುರಿದು
ಇದೀಗ ಮೋಡಗಳು ಚದುರುತ್ತಿವೆ.
ಉಲಿಯುತ್ತಿದೆ ಅಲ್ಲೊಂದು ರಾಬಿನ್ ಹಕ್ಕಿ
ತೊಟ್ಟಿಕ್ಕುವ ಎಲೆಗಳ ನಡುವೆ ಕುಳಿತು -
ನೆರೆಮನೆಯವನ ಹಾಗೆ, ಹೃದಯ ಒಳ್ಳೆಯದಾದರೂ
ಅವನು ಬಾಯಿ ತೆರೆದರೆ ಮಾತ್ರ ವಕ್ರ ಮಾತು.
ಕವಿತೆಯ ಸ್ವಾರಸ್ಯ: ಮಕ್ಕಳು ಸಾಕಿದ ಪ್ರೀತಿಯ ಬೆಕ್ಕು ಸತ್ತುಹೋಗಿದೆ. ಅದನ್ನು ಅವರು ಮಣ್ಣು ಮಾಡಿ ಮನೆಗೆ ಬಂದಿದ್ದಾರೆ. ತಮಗೆ ಆಪ್ತವಾಗಿದ್ದ ಬೆಕ್ಕಿನ ಸಾವಿನ ದುಃಖವನ್ನು ಹೇಗೆ ಪ್ರಕಟಿಸಬೇಕೆಂದು ಮಕ್ಕಳಿಗೆ ಗೊತ್ತಾಗುತ್ತಿಲ್ಲ. ತಾವು ಎಂದಿನಂತೆ ಊಟ ಮಾಡಬಹುದೇ? ಎಂದಿನಂತೆ ನಿದ್ರಿಸಬಹುದೇ? ಅವರು ಮೌನವಾಗಿ ದಿನವನ್ನು ದೂಡುತ್ತಾರೆ. ಮರುದಿನ ಅವರು ನಿದ್ದೆಯಿಂದ ಎದ್ದಾಗ ರಾತ್ರಿ ಇಡೀ ಸುರಿದ ಮಳೆ ನಿಂತಿದೆ; ಪೊದೆಯಲ್ಲಿ ರಾಬಿನ್ ಹಕ್ಕಿ ಹಾಡುತ್ತಿದೆ. ನಿಸರ್ಗವು ಎಂದಿನಂತೆ ತನ್ನ ಕೆಲಸ ನಡೆಸುತ್ತಿದೆಯಲ್ಲಾ ಎನ್ನುವುದು ಮಕ್ಕಳಿಗೆ ಸ್ವಲ್ಪ ಅಸಭ್ಯವೆಂಬಂತೆ ತೋರುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ