ಸತ್ಯಭಾಮೆ ಮತ್ತು ಪಾರಿಜಾತ


ಸಿ. ಪಿ. ರವಿಕುಮಾರ್

 Image result for parijata
ಆಭರಣದ ಪೆಟ್ಟಿಗೆಯನ್ನು ಕೈಯಲ್ಲಿ ಹಿಡಿದು
ಕೋರೈಸುವ ವಜ್ರವನ್ನು ಮೆಲ್ಲನೆ ಹೊರತೆಗೆದು
ಅಂಗೈಯಲ್ಲಿಟ್ಟು ನೋಡಿದಳು ಸತ್ಯಭಾಮೆ.

ಅದು ಅವಳಿಗೆ ಬಂದ ಪಿತ್ರಾರ್ಜಿತ ಆಸ್ತಿ:
ತಂದೆ ಸತ್ರಾರ್ಜಿತನು ಕೊಟ್ಟ ಸ್ಯಮಂತಕ!
ಸತ್ಯವಂತರು ದಿನವೂ ಪೂಜೆ ಮಾಡಿದರೆ
ಕೊಡುತ್ತದಂತೆ ದಿನವೂ ಚಿನ್ನ ಒಂದು ತೂಕ!

ಹೇಗೆ ತಪಸ್ಸು ಮಾಡಿರಬಹುದು ಅಪ್ಪ
ಕಣ್ಮಿಟುಕಿಸದೆ ನೋಡುತ್ತಾ ಸೂರ್ಯನನ್ನು!
ತಪಸ್ಸಿಗೆ ಮೆಚ್ಚಿ ಸೂರ್ಯನೇ ಕೊಟ್ಟ ವರ -
ಸೂರ್ಯನ ಮರಿಯಂತಿರುವ ಈ ಸ್ಯಮಂತಕ:
ಇದನ್ನು ನೋಡಿದರೂ ಕೋರೈಸುತ್ತದೆ ಕಣ್ಣು!

ಸ್ಯಮಂತಕ ಬೇಡುತ್ತದೆ ಕಠಿಣ ವ್ರತ,
ಕಟ್ಟುನಿಟ್ಟಾದ ನೇಮನಿಷ್ಠೆ.
ನನ್ನಿಂದಾಗದು! ಎಂದು ದಿಟ್ಟತನದಿಂದ
ಆಭರಣದ ಪೆಟ್ಟಿಗೆಯಲ್ಲಿ ಮುಚ್ಚಿಟ್ಟುಬಿಟ್ಟೆ.

ಬೀಸಿದ ಗಾಳಿಗೆ ತೇಲಿ ಬಂದ ಸುಗಂಧ
ಆಘ್ರಾಣಿಸಿ ಮುದಗೊಂಡಳು ಸತ್ಯಭಾಮೆ
ಕಿಟಕಿಯಿಂದ ಇಣುಕಿ ನೋಡಿದರೆ ಕಾಣಿಸಿತು:  
ದೇವಲೋಕದಿಂದ ತಂದು ನೆಡಿಸಿದ್ದು ನಾನೇ!

ಪ್ರತಿದಿನವೂ ನೀಡುತ್ತದೆ ನಿರ್ವಂಚನೆಯಿಂದ
ಒಂದು ತೂಕ ಚಿನ್ನದಷ್ಟು ಹೂ, ಪಾರಿಜಾತ!
ಮುಟ್ಟಿದರೂ ಬಾಡುವ ಮೃದು ಹೂವಿಗೆ ಕೇಸರಿ
ತಿಲಕವನ್ನು ಹೇಗಿಟ್ಟನೋ ಕಾಣೆ, ವಿಧಾತ!

ಬೇಡದು ಯಾವುದೇ ನೇಮ, ನಿಷ್ಠೆ ಕಠಿಣವ್ರತ!
ಸುರಿಸುವುದು ಬೆಳಬೆಳಗ್ಗೆ, ಪಾರಿಜಾತ!
ಕೊಳಲು ನುಡಿಸುತ ತನ್ಮಯತೆಯಿಂದ
ಮುಗ್ಧ ಮುಗುಳ್ನಗೆ ಸೂಸುವಂತೆ, ನನ್ನಾತ!

ಬಾಗಿ ಕೈಗೆತ್ತಿಕೊಂಡು ಒಂದೆರಡು ಕುಸುಮಗಳ
ಯೋಚಿಸಿದಳು ಒಂದು ಕ್ಷಣ ಸತ್ಯಭಾಮೆ –
ಇದ್ದರೆ ಇರಬೇಕು ಮರಳಿ ಏನನ್ನೂ ಬೇಡದೆ

ಹರ್ಷ ಸುರಿಸುವ ಪಾರಿಜಾತದಂತೆ. 

(c) ೨೦೧೭, ಸಿ. ಪಿ. ರವಿಕುಮಾರ್ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)