ಪರಿತ್ಯಾಗ (ಜಾನಪದ ಕತೆ)
ಪರಿತ್ಯಾಗ (ಜಪಾನ್ ದೇಶದ ಒಂದು ಕತೆ) ಬಹಳ ಬಹಳ ಹಿಂದಿನ ಮಾತು. ಒಬ್ಬ ರೈತ ತನ್ನ ವಯೋವೃದ್ಧ ವಿಧವೆ ತಾಯಿಯೊಂದಿಗೆ ಬೆಟ್ಟದ ತಪ್ಪಲಿನ ಪುಟ್ಟ ಮಣ್ಣಿನ ಮನೆಯಲ್ಲಿ ವಾಸವಾಗಿದ್ದ. ಅವರಿಗೆ ಸೇರಿದ ಒಂದು ತುಂಡು ಜಮೀನಿತ್ತು. ಹೀಗಾಗಿ ಉಣ್ಣಲು ಕೊರತೆ ಇರಲಿಲ್ಲ. ಅವರ ಜೀವನ ನೆಮ್ಮದಿಯಿಂದ ಸಾಗುತ್ತಿತ್ತು. ಆ ಹಳ್ಳಿಯು ಯಾವ ಪಾಳೆಯಕ್ಕೆ ಸೇರಿತ್ತೋ ಅದರ ಪಾಳೇಗಾರನು ಬಹಳ ದುರಹಂಕಾರದ ಸ್ವಭಾವದವನು. ಸ್ವತಃ ವೀರಯೋಧನಾದರೂ ಅವನಿಗೆ ವೃದ್ದಾಪ್ಯ ಮತ್ತು ಅನಾರೋಗ್ಯಗಳೆಂದರೆ ವಿಪರೀತ ಭಯವಿತ್ತು. ತನ್ನ ಆಡಳಿತ ಇರುವ ಪ್ರದೇಶದಲ್ಲಿ ಎಲ್ಲೂ ವೃದ್ಧರೂ ರೋಗಿಷ್ಠರೂ ಇರಬಾರದೆಂದು ಅವನು ನಿರ್ಧರಿಸಿದ. ತನ್ನ ನಿರ್ಧಾರವನ್ನು ಕಾರ್ಯರೂಪಕ್ಕೆ ತರುವುದೆಷ್ಟು ಹೊತ್ತು! ಅವನು ಊರಿನಲ್ಲಿ ಎಲ್ಲರಿಗೂ ಓಲೆ ಕಳಿಸಿದ. ಮನೆಯಲ್ಲಿರುವ ವಯೋವೃದ್ಧರನ್ನೂ ಅನಾರೋಗ್ಯ ಪೀಡಿತರನ್ನೂ ಈಗಿಂದೀಗಲೇ ಕೊಲ್ಲಬೇಕೆಂಬ ಕಠಿಣ ಆದೇಶವನ್ನು ಕಂಡು ರೈತನ ಎದೆ ನಡುಗಿತು. ಆಗಿನ ಕಾಲದಲ್ಲಿ ವಯಸ್ಸಾದವರನ್ನು ಕಾಡಿನಲ್ಲಿ ಬಿಟ್ಟು ಬರುವುದು ಸಾಮಾನ್ಯ ವಿಷಯವಾಗಿತ್ತು. ತನ್ನ ತಾಯಿಯನ್ನು ರೈತ ಬಹಳ ಆದರದಿಂದ ಕಾಣುತ್ತಿದ್ದ. ಅವಳನ್ನು ಮೃತ್ಯುವಿಗೆ ದೂಡುವುದೇ! ಬೇರೆ ಮಾರ್ಗವೇ ಇಲ್ಲ! ತಾಯಿಯನ್ನು ಕೊನೆಗಾಣಿಸಲು ಅತ್ಯಂತ ದಯಾಮಯವಾದ ಮಾರ್ಗವೇನು? ಹೀಗೆ ಯೋಚಿಸುತ್ತಾ ಅವನು ನಿದ್ದೆ ಬಾರದೆ ಹಾಸಿಗೆಯಲ್ಲಿ ಹೊರಳಾಡುತ್ತಾ ನಿಡುಸುಯ್ದ. ಬೆಳಗ...