ಬಾಳೆಹಣ್ಣು ಮತ್ತು ಕಲೆ



ಸಿ.ಪಿ. ರವಿಕುಮಾರ್

Yellow Banana on Hand
ಪ್ರಸಿದ್ಧ ಆರ್ಟ್ ಗ್ಯಾಲರಿಯಲ್ಲೊಬ್ಬ ಭೂಪ
ತಿಂದುಬಿಟ್ಟನಂತೆ ಒಂದು ಬಾಳೆಹಣ್ಣು, ಪಾಪ!
ಪಾಪ ಎಂದಿದ್ದು ಅವನಿಗಲ್ಲ, ಬಾಳೆಹಣ್ಣಿಗೆ
ಸಾಧಾರಣ ಎನ್ನಿಸುತ್ತಿತ್ತು ಎಲ್ಲರ ಕಣ್ಣಿಗೆ!
ಆದರೆ ಕಲಾವಿದನೊಬ್ಬ ಅಸಾಧಾರಣ
ಕಲೆಯನ್ನು ಕಂಡನು ಹಣ್ಣಿನಲ್ಲಿ, ಜಾಣ!
ಟೇಪ್ ಹಾಕಿ ಅಂಟಿಸಿ ಗೋಡೆ ಮೇಲೆ
ಕಲೆಗೆ ಅವನಿಟ್ಟ ಹೆಸರು "ನಗೆಗಾರ."
ನೋಡಿದ ಜನರಲ್ಲಿ ವಾವ್‌ವಾವ್‌ಕಾರ!

ಬಂದನೊಬ್ಬನು ನಕಲೀಶಾಮ ಗ್ಯಾಲರಿಗೆ
ನೋಡಿ ಬಾಳೆಹಣ್ಣು ಹಣೆಯಲ್ಲಿ ನೆರಿಗೆ!
ಎಡದಿಂದ ನೋಡಿದನು  ಬಲದಿಂದ ನೋಡಿದನು!
ಸನಿಹದಿಂ ನೋಡಿದನು ದೂರದಿಂ ನೋಡಿದನು!
ಉದ್ದನೆಯ ಬಾಳೆಹಣ್ಣು, ಹಳದಿ ಸಿಪ್ಪೆ! ಕಣ್ಣಗಲಿಸಿ
ಏನದರ ಸಿಂಬಾಲಜಿ ಎಂದು ಗೂಗಲಿಸಿ
ನೋಡಿದನು ತಿರುತಿರುಗಿ!
ಅರ್ಥವಾಗದೆ ಮರುಗಿ!
"ಏನು ಹೇಳಲು ಬಯಸುತ್ತಿದ್ದೀರಾ ಕಲೆಯಲ್ಲಿ?"
ಎಂದು ಕೇಳಿಯೇ ಬಿಟ್ಟ ಕೊನೆಯಲ್ಲಿ.

ಶ್ ಶ್ ಶ್ ಎಂದಿಟ್ಟು ಬಾಯಮೇಲ್ ಬೆರಳು
"ಯಾರಿವನು, ಅರಸಿಕ ಹೊರಗಟ್ಟಿ ಮೊದಲು!"
"ಕಲೆಯೆಂದರೆ ಕಲೆ!" "ಕಲೆಗಾಗಿ ಕಲೆ!"
"ಇವನಿಗೇನು ಅರ್ಥವಾದೀತು, ಅವನ ತಲೆ!"
ಎಂದು ಕಲಾವಿಮರ್ಶಕರೆಲ್ಲ ಸೇರಿ  ಗದರಿ
ಸುಮ್ಮನಾದನು ಕಲಾಪ್ರೇಮಿಯೂ ಹೆದರಿ!

ಕಟ್ಟಲಾಗದು ಬೆಲೆ, ಆದರೂ ಕೇಳುವೆವು ಕ್ಷಮಿಸಿ!
ಮಂತ್ರಮುಗ್ಧ ಜನರೆಂದರು ಕಲಾವಿದನನ್ನು ರಮಿಸಿ
ನಾನು ಹೇಳುವುದಿಲ್ಲ, ನೀವೇ ಬೆಲೆ ಕಟ್ಟಿ!
ಎಂದು ಕಲಾವಿದನು ನೋಡಿದನು ಭಿತ್ತಿ.
ಆಕ್ಷನ್ ಮೂವಿಯಲ್ಲಿ ಇರುವಂತೆ ಆಕ್ಷನ್
ಸರಸರನೆ ಆಯೋಜಿತವಾಯ್ತು ಆಕ್ಷನ್!
ಹತ್ತು ಸಾವಿರ ಎಂದು ಕೂಗಿದನು ಒಬ್ಬ!
ಇಪ್ಪತ್ತು ಎಂದು ಕೂಗಿದ ಇನ್ನೊಬ್ಬ!
ಇಪ್ಪತ್ತು ನಲವತ್ತು ಎಂಬತ್ತು ನೂರು
ಕೊನೆಗೂ ನಿಂತಿತು ನೂರಿಪ್ಪತ್ತಕ್ಕೆ ತೇರು!

ನೂರಾ ಇಪ್ಪತ್ತು ಸಾವಿರ ಡಾಲರ್ ಏ!
ಅದೂ ಒಂದು ಯಃಕಶ್ಚಿತ್ ಬಾಳೇಹಣ್ಣಿಗೆ!
ಎಂದು ಕಣ್ ಕಣ್ ಬಿಟ್ಟು ನೋಡಿದನು ಇವನು
ಕಲೆಯ ಕನೆಕ್ಷನ್ ಕೇಳಿದ ಕಾಮೆಡಿಯನ್ನು!

ತಡೆಯಲಾಗದೆ ಕೆಟ್ಟ ಕುತೂಹಲ
ಟೇಪ್ ಬಿಚ್ಚಿ ತೆಗೆದು ಕದಳೀಫಲ
ಸುಲಿದು ತಿಂದೇ ಬಿಟ್ಟ ಎಲ್ಲರೆದುರು
ನೋಡುತ್ತಿರುವಾಗ ಎಲ್ಲರೂ ದುರುದುರು!
ನುಂಗಿ ಬಾಳೇಹಣ್ಣು ಕೊನೆಗೆ ಸಿಪ್ಪೆ
ಸೇರಿತು ಕಸದಬುಟ್ಟಿಯಲ್ಲಿ ತಿಪ್ಪೆ

ತಾಳಲಾರದೆ ಆಘಾತ ಪಾಪ ಛೇ
ಹೋದರೆಷ್ಟೋ ಕಲಾರಸಿಕಮಣಿ ಮೂರ್ಛೆ!
ಕಲಾವಿಮರ್ಶಕರು ಕಣ್ಣಲ್ಲಿ ಕಾರಿದರು ಬೆಂಕಿ!
(ಇನ್ನೂ ತೆತ್ತಿರಲಿಲ್ಲ ಗಿರಾಕಿ ಆರಂಕಿ)
ಎಲ್ಲಿ ಕರೆಯಿರಿ ಸೆಕ್ಯೂರಿಟಿ ಗಾರ್ಡ್
ಎಂದು ಕೂಗಿದರು ಕಲಾಜಗತ್ತಿನ ಲಾರ್ಡ್!
ಎಲ್ಲಾ ಕಡೆಗೂ ಗೊಂದಲವೋ ಗೊಂದಲ!
ನಡೆದಂತೆ ಆರ್ಟ್ ಗ್ಯಾಲರಿಯಲ್ಲಿ ಕಂಬಳ!

ಗಾರ್ಡ್ ಬಂದು ಕರೆದೊಯ್ದನು ವಿದೂಷಕನನ್ನು
ಸೆಳೆದುಕೊಳ್ಳುವ ಮುನ್ನ ಯಾರಾದರೂ ಗನ್ನು!
ಹೊರನಡೆದ ವಿದೂಷಕ ತೋರದೆ ಪ್ರತಿಭಟನೆ
ಏನೂ ಆಗಿಲ್ಲವೆಂಬಂತೆ ಮಾಡುತ್ತ ನಟನೆ
"ಚೆನ್ನಾಗಿತ್ತು ನಿಮ್ಮ ಆರ್ಟ್ ಗ್ಯಾಲರಿಯ ಬನಾನಾ!
ತೊಗೋ ಅದರ ಬೆಲೆ ಒಂದು ಡಾಲರ್, ಸರೀನಾ?"

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)