ಮುಳ್ಳು ಹೂವಿನ ಹಾಸಿಗೆ

(ಗಿಯ್ ಡಿ ಮೂಪಸಾನ ಕಥೆಯನ್ನು ಆಧರಿಸಿ)
Grayscale Photo of Woman Peeking on Planks

ನಾನೊಮ್ಮೆ ನನ್ನ ಗೆಳೆಯರೊಂದಿಗೆ ಕೆಲವು ದಿನ ಕಾಲ ಕಳೆಯಲು ಚಿಕ್ಕಮಗಳೂರಿನ ಎಸ್ಟೇಟಿಗೆ ಹೋದೆ. ನನ್ನ ಬಾಲ್ಯಸ್ನೇಹಿತರು, ಅವಳಿಜವಳಿ ಸೋದರರು, ನನ್ನನ್ನು ಗೇಟಿನ ಬಳಿಯೇ ಬಂದು ಆದರದಿಂದ ಬರಮಾಡಿಕೊಂಡರು.

ಈ ಸ್ನೇಹಿತರು ಏನಾದರೂ ತರಲೆ ಕಿತಾಪತಿ ಮಾಡುವುದರಲ್ಲಿ ಸಿದ್ಧಹಸ್ತರು. ಹಾಗಿಲ್ಲದಿದ್ದರೆ ನಾನು ಅವರ ಸ್ನೇಹ ಬಯಸುತ್ತಲೂ ಇರಲಿಲ್ಲ.

ಅವರು ಈ ಸಲ ನನ್ನನ್ನು ಬೇಸ್ತು ಬೀಳಿಸಲು ಹೊಸದಾಗಿ ಏನು ತರಲೆ ಮಾಡಲಿದ್ದಾರೆ ಎಂಬ ಪ್ರಶ್ನೆ ನನ್ನನ್ನು ಕೊರೆಯುತ್ತಿತ್ತು. ನಾನು ಗೇಟನ್ನು ಬಹಳ ಸಾವಧಾನವಾಗಿ ಪ್ರವೇಶಿಸಿದೆ. ಅತ್ತಿತ್ತ ನೋಡುತ್ತಲೇ ಒಳಗೆ ಹೋದೆ. ಗೆಳೆಯರು ನನ್ನನ್ನು ಅಪ್ಪಿಕೊಂಡಿದ್ದು, ಅದೇಕೆ ಇಷ್ಟು ದಿನಗಳಿಂದ ನಾಪತ್ತೆಯಾಗಿದ್ದೆ ಎಂದು ದೂರಿದ್ದು, ಹೆಗಲ ಮೇಲೆ ಕೈಹಾಕಿ ತಮ್ಮ ಗಾಡಿಯ ಬಳಿ ಕರೆದೊಯ್ದಿದ್ದು, ಎಲ್ಲವೂ ನನ್ನಲ್ಲಿ ಸಂಶಯ ಮೂಡಿಸಿದವು. ನಾನು ಕಾರಿನಲ್ಲಿ ಕೂಡುವ ಮುನ್ನ ಸೀಟನ್ನು ಒಮ್ಮೆ ಮುಟ್ಟಿ ಪರೀಕ್ಷಿಸಿದೆ. ಗೆಳೆಯರು ಏನೋ ಹಳೆಯದನ್ನು ನೆನೆದು ನಗುತ್ತಿದ್ದರು. ಆದರೆ ನನಗೆ ಅದರ ಮೇಲೆ ಗಮನವಿರಲಿಲ್ಲ.

ಮನೆಯಲ್ಲಿ ನನಗೆ ಅದೇನು ಅದ್ಧೂರಿಯ ಸ್ವಾಗತ! ನನಗಾಗಿ ಮಹಡಿಯಲ್ಲಿ ಒಂದು ಕೋಣೆಯನ್ನು ರೆಡಿ ಮಾಡಿಸಿದ್ದರು. ಅದೊಂದು ಹೋಟೆಲ್ ಕೋಣೆಯಂತೆ ಸುಸಜ್ಜಿತವಾಗಿತ್ತು. ಸ್ನಾನ ಮಾಡಿ ಬಾ, ತಿಂಡಿ ರೆಡಿಯಾಗಿದೆ ಎಂದು ಅವರು ಕೆಳಗೆ ಹೋದರು.  ಬಿಸಿನೀರಿನ ಮತ್ತು ತಣ್ಣೀರಿನ ನಲ್ಲಿಗಳು ಅದಲು ಬದಲಾಗಿವೆಯೋ ಎಂದು ನಾನು ಅಂಜುತ್ತಾ ಪರೀಕ್ಷಿಸಿದೆ. ಹಾಗೇನೂ ಆಗಿರಲಿಲ್ಲ. ಸ್ನಾನ ಮುಗಿಸಿ ಬಂದಾಗ  ಕೋಣೆಯನ್ನು ಮತ್ತೊಮ್ಮೆ ಪರೀಕ್ಷಿಸಿದೆ.  ಏನೂ ಸಂಶಯಾಸ್ಪದವಾದದ್ದು ತೋರಲಿಲ್ಲ.  ಬಟ್ಟೆ ಧರಿಸಿ ಕೆಳಗೆ ಬಂದೆ. ಗೆಳೆಯರು ಮೇಜಿನ ಮುಂದೆ ಕುಳಿತು ನನಗಾಗಿ ಕಾದಿದ್ದರು.  ಅವರ ಜೊತೆ ಅವರ ತಂಗಿಯೂ ಕುಳಿತಿದ್ದಳು. ಹಿಂದೆ ಪುಟ್ಟ ಹುಡುಗಿಯಾದಾಗ ಅವಳನ್ನು ನೋಡಿದ್ದು. ಈಗ ಅವಳನ್ನು ನೋಡಿ ದಂಗಾದರೂ ತೋರಿಸಿಕೊಳ್ಳದಿರಲು ನಾನು ಹೆಣಗಾಡಿದೆ.8

ಸ್ಟೀಲ್ ಡಬ್ಬಗಳಲ್ಲಿ ತಿಂಡಿಗಳನ್ನು ಮುಚ್ಚಿಟ್ಟಿದ್ದರು. ಸ್ನೇಹಿತರು ಬಡಿಸಲು ಮುಂದಾದಾಗ ನಾನು ತಡೆದು ಅವರ ಕೈಯಿಂದ ಸೌಟು ಕಸಿದುಕೊಂಡೆ.  ತಂಗಿಗೆ ಇದು ಮೋಜೆನ್ನಿಸಿ ನಕ್ಕಳು. ಕೇಸರೀಭಾತ್ ಘಮಘಮ ಎನ್ನುತ್ತಿತ್ತು.  ಹಿಂದೊಮ್ಮೆ ಕೇಸರೀಭಾತ್‌ನಲ್ಲಿ ಉಪ್ಪುಖಾರ ಬೆರೆಸಿ ನನ್ನನ್ನು ಬೇಸ್ತು ಬೀಳಿಸಿದ್ದು ನೆನಪಾಯಿತು. ಆದರೆ ಕೇಸರೀಭಾತ್ ನಿಜವಾಗಲೂ ದಿವ್ಯವಾಗಿತ್ತು. ಈರುಳ್ಳಿಯ ಪಕೋಡ ಬಡಿಸಲು ಬಂದಾಗಲೂ ನಾನು ತಡೆದೆ. ಪಕೋಡದ ಬದಲು ಏನಾದರೂ ಕಲ್ಲೋ ಪ್ಲಾಸ್ಟಿಕ್ ಉಂಡೆಯೋ ಇದ್ದರೆ! ಅಂಜುತ್ತಲೇ ನಾನು ಅದನ್ನು ಪರೀಕ್ಷಿಸಿ ಬಾಯೊಳಗಿಟ್ಟೆ. ಆದರೆ ಪಕೋಡವೂ ರಾಜಯೋಗ್ಯವಾಗಿತ್ತು.  ಬಿಸಿಬಿಸಿ ಹೊಗೆಯಾಡುವ ಕಾಫಿ ಬಂತು. ನಾನು ನನ್ನ ಪಟ್ಟು ಬಿಡದೆ ಲೋಟವನ್ನು ಅಘ್ರಾಣಿಸಿ ಹೆದರುತ್ತಲೇ ಸ್ವೀಕರಿಸಿದ ಕಾಫಿಯೋ ಅಮೃತಸಮಾನವಾಗಿತ್ತು.

ತಿಂಡಿಯ ನಂತರ ನನ್ನನ್ನು ಬ್ಯಾಡ್ಮಿಂಟನ್ ಆಟಕ್ಕೆ ಕರೆದರು. ಇಲ್ಲಿ ಖಂಡಿತ ಏನಾದರೂ ವಕ್ರ ಮಾಡಿಯೇ ಇರುತ್ತಾರೆಂದು ನನ್ನ ಮನಸ್ಸು ಹೇಳಿತು. . ಆದರೆ ಅಲ್ಲೂ ಏನೂ ಕಾಣಲಿಲ್ಲ. ಅವರ ತಂಗಿಯನ್ನು ನನಗೆ ಜೊತೆ ಮಾಡಿ ಗೆಳೆಯರು ಸೇರಿ ಒಂದು ತಂಡ ಮಾಡಿಕೊಂಡರು ಸಂದೇಹದ ಕಾರಣ ನನಗೆ ಚೆನ್ನಾಗಿ ಆಡಲು ಸಾಧ್ಯವಾಗಲಿಲ್ಲ. ನಾವು ಹೀನಾಯಕರವಾಗಿ ಸೋತೆವು. ತಂಗಿಗೆ ಸ್ವಲ್ಪ ಕೋಪ ಬಂದಂತೆ ಕಂಡಿತು. ನಾನು ಪೆಚ್ಚಾಗಿದ್ದೆ.

ಊಟಕ್ಕೆ ಕುಳಿತಾಗ ಈಗ ಏನಾದರೂ ನಡೆದೇ ತೀರುತ್ತದೆ ಎಂದು ನನ್ನ ಮನಸ್ಸು ಹೇಳಿತು. ಬಾಳೆಯ ಎಲೆಯನ್ನು ಎತ್ತಿ ಪರೀಕ್ಷಿಸಿದೆ. ಲೋಟವನ್ನು ಎತ್ತಿ ಪರೀಕ್ಷಿಸಿದೆ. ಖೀರಿನ ಬಟ್ಟಲನ್ನು ಕೂಡಾ ಮೇಲೆತ್ತಿ ನೋಡಿದೆ. ತಂಗಿ ಇದನ್ನೆಲ್ಲಾ ಗಮನಿಸಿ ನನ್ನನ್ನು ಗುಮಾನಿಯಿಂದ ನೋಡಿದಂತೆ ನನಗೆ ಭಾಸವಾಯಿತು.


ರಾತ್ರಿಯ ಊಟವು ಮದುವೆಮನೆಯ ಔತಣದಂತಿತ್ತು. ಪೂರಿ, ಸಾಗು, ಕೋಸಂಬರಿ, ಪಾಯಸ, ಜಿಲೇಬಿ ಎಲ್ಲವೂ ಇದ್ದವು. ನಾನು ಪ್ರತಿಯೊಂದು ತುತ್ತನ್ನು ಬಾಯಿಗೆ ಹಾಕಿಕೊಳ್ಳುವಾಗಲೂ ಈಗ ಏನಾದರೂ ಆಗುತ್ತದೆ, ಪಾಯಸದಲ್ಲಿ ಉಪ್ಪಿರುತ್ತದೆ, ಕೋಸಂಬರಿಯಲ್ಲಿ ಕಲ್ಲಿರುತ್ತದೆ ಎಂದೆಲ್ಲಾ ಕಲ್ಪಿಸಿಕೊಳ್ಳುತ್ತಾ ಗೆಳೆಯರ ಮುಖ ನೋಡುತ್ತಾ ಊಟ ಮಾಡಿದೆ. ಅವರು "ಯಾಕೆ ಹಸಿವಿಲ್ಲವೇ?" ಎಂದು ಕೇಳಿದಾಗ ನನ್ನ ಅನುಮಾನ ಬಲವಾಗುತ್ತಿತ್ತು. ಗೆಳೆಯರ ತಂಗಿಯೇ ನಮಗೆ ಬಡಿಸಿದಳು. ನಾನು ಎಲೆಯಲ್ಲಿ ಬಡಿಸಿದ್ದನ್ನು ಕೆದಕಿ ಕೆದಕಿ ಊಟ ಮಾಡುವುದನ್ನು ಅವಳು ಗಮನಿಸಿದಂತೆ ಕಂಡಿತು. ಇದರಿಂದ ಅವಳಿಗೆ ಕೋಪ ಬಂದಂತೆ ನನಗೆ ತೋರಿತು. ಅಡಿಗೆ ಮಾಡಿದ್ದು ನಮ್ಮ ತಂಗಿಯೇ ಎಂದು ಗೆಳೆಯರು ಹೇಳಿದಾಗ ನಾನು ಹೌದೇ, ಎಲ್ಲ ಅಡಿಗೆಯೂ ಬಹಳ ರುಚಿಯಾಗಿತ್ತು ಎಂದರೂ ತಂಗಿ ಮುಖ ಊದಿಸಿಕೊಂಡೇ ಅಡಿಗೆಮನೆಗೆ ಹೋದಳು.  ಒಳಗಿನಿಂದ ಬೆಳ್ಳಿಯ ತಟ್ಟೆಯಲ್ಲಿ ಎಲೆ ಅಡಿಕೆ ತಂದು ನಮ್ಮ ಮುಂದೆ ಕುಕ್ಕಿ ಹೊರಟುಹೋದಳು.

ಅಪ್ಪ, ಅಮ್ಮ ಇಬ್ಬರೂ ಊರಿನಲ್ಲಿಲ್ಲ, ಇಬ್ಬರೂ ತೀರ್ಥಯಾತ್ರೆಗೆ ಹೋಗಿದ್ದಾರೆ, ಎಲ್ಲಾ ಜವಾಬ್ದಾರಿ ತಂಗಿಯ ಮೇಲೆ ಬಂದಿದೆ ಎಂದು ಗೆಳೆಯರು ಹೇಳಿದರು. ನಾನು ತಾಂಬೂಲವನ್ನು ಕೂಡಾ ಸೂಕ್ಷ್ಮವಾಗಿ ನೋಡಿ ಮಡಿಸಿ ಬಾಯಿಗೆ ಇಟ್ಟುಕೊಂಡೆ.

ನಾವು ಹರಟೆ ಹೊಡೆಯುತ್ತಾ ಕೂತೆವು.  ಹಳೆಯ ಘಟನೆಗಳನ್ನು  ನೆನೆದು ಗೆಳೆಯರು ನಕ್ಕರು. ನಾನೂ ಅವರ ನಗೆಯಲ್ಲಿ ಭಾಗಿಯಾದೆ. ರಾತಿಯ ಹನ್ನೆರಡು ಹೊಡೆದಾಗ ನನ್ನ ಕಣ್ಣು ಮುಚ್ಚಲಾರಂಭಿಸಿತು. ಗೆಳೆಯರು ಇದನ್ನು ಗಮನಿಸಿ "ಸರಿ, ಇವತ್ತಿಗೆ ಹರಟೆ ಸಾಕು, ನೀನು ಮಲಗಿಕೋ, ನಾಳೆ ತೋಟಕ್ಕೆ ಹೋಗೋಣ" ಎಂದರು. ನಾನು ಮೆಟ್ಟಿಲುಗಳನ್ನೇರಿ ನನ್ನ ಕೋಣೆಗೆ ಬಂದಾಗ ಒಮ್ಮೆಲೇ ಕತ್ತಲಾಯಿತು.

ಕೆಳಗಿನಿಂದ "ಓ, ಪವರ್ ಕಟ್ ಆಯಿತು. ಇದು ಪ್ರತಿದಿನವೂ ಆಗುವ ಪವರ್ ಕಟ್! ಅಲ್ಲಿ ರೂಮಿನಲ್ಲಿ ಟೇಬಲ್ ಡ್ರಾನಲ್ಲಿ ಮೇಣದ ಬತ್ತಿ ಇದೆ, ನೋಡು!" ಎಂದು ಗೆಳೆಯ ಕೆಳಗಿನಿಂದ ಕೂಗಿ ಹೇಳಿದ. ನನ್ನಲ್ಲಿ ಈಗ ಸಂದೇಹ ಬಲವಾಯಿತು.  ಖಂಡಿತ ಕೋಣೆಯಲ್ಲಿ ಏನೋ ಕಿತಾಪತಿ ಮಾಡಿದ್ದಾರೆ!  ಬೇಕೆಂದೇ ಲೈಟ್ ಆರಿಸಿ ಪವರ್ ಕಟ್ ಎಂದು ನಾಟಕ ಆಡುತ್ತಿದ್ದಾರೆ!

ನಾನು ಬಹಳ ಜಾಗರೂಕತೆಯಿಂದ ಕೋಣೆಯ ಬಾಗಿಲು ತೆರೆದೆ. ಬಾಗಿಲ ಮೇಲಿಂದ ನೀರು ತುಂಬಿದ ಪಾತ್ರೆ ಬೀಳಬಹುದು ಎಂದು ಅಪೇಕ್ಷಿಸಿದೆ. ಹಾಗೇನೂ ಆಗಲಿಲ್ಲ. ಒಳಗೆ ಕಾಲಿಡುವಾಗಲೂ ಗೋಡೆ ಹಿಡಿದುಕೊಂಡೇ ಹೋದೆ.  ಕೋಣೆಯಲ್ಲಿ ಕ್ಷೀಣವಾದ ಬೆಳದಿಂಗಳಿತ್ತು.  ಕಿಟಕಿಯ ಬಳಿಯಿದ್ದ ಮೇಜಿನ ಬಳಿಗೆ ತಡವರಿಸುತ್ತಲೇ ಹೋದೆ.  ಮೇಜಿನ ಡ್ರಾ ತೆಗೆಯಲು ಹಿಂಜರಿದೆ. ಅಲ್ಲಿ ಇಲಿಯೋ ಹೆಗ್ಗಣವೋ ಇದ್ದರೆ! ಕೋಣೆಯ ಹೊರಗೆ ಯಾರೋ ಓಡಾಡಿದಂತೆ, ಪಿಸಪಿಸ ಮಾತಾಡಿದಂತೆ ಅನ್ನಿಸಿತು. ಖಂಡಿತವಾಗಿಯೂ ಇವರು ಏನೋ ತರಲೆ ಯೋಜನೆಯನ್ನು ರೂಪಿಸಿದ್ದಾರೆ!

ನೆನ್ನೆ ತಾನೇ ಅಮಾವಾಸ್ಯೆ ಇದ್ದದ್ದರಿಂದ ಚಂದ್ರನ ಬೆಳಕು ಬಹಳ ಮಂದವಾಗಿತ್ತು. ನಾನು ಮಲಗುವ ಮುನ್ನ ಬಟ್ಟೆ ಬದಲಾಯಿಸಲು ಮೇಣದ ಬತ್ತಿ ಹಚ್ಚಲೇ ಬೇಕಾಗಿತ್ತು. ಬಹಳ ಜಾಗರೂಕತೆಯಿಂದ ನಾನು ಮೇಜಿನ ಸೆಳೆಖಾನೆಯನ್ನು ತೆರೆದೆ.

ನನ್ನ ಸಂದೇಹ ಸುಳ್ಳಾಯಿತು. ಯಾವುದೇ ವಸ್ತು ಸೆಳೆಖಾನೆಯಿಂದ ಹೊರಗೆ ನುಗ್ಗಿ ಬರಲಿಲ್ಲ. ಸೆಳೆಖಾನೆಯಲ್ಲಿ ಮೇಣದ ಬತ್ತಿ ಮತ್ತು ಬೆಂಕಿಪೆಟ್ಟಿಗೆ ಎರಡೂ ಇದ್ದವು. ಬೆಂಕಿಕಡ್ಡಿ ಕೊರೆಯುವಾಗಲೂ ನನಗೆ ಏನಾದರೂ ಮೋಸವಿದೆ ಎನ್ನಿಸುತ್ತಿತ್ತು. ಆದರೆ ಗೀರಿದ ಕೂಡಲೇ ಬೆಂಕಿಕಡ್ಡಿ ಹೊತ್ತಿಕೊಂಡಿತು. ನಾನು ಎಲ್ಲ ಮೇಣದ ಬತ್ತಿಗಳನ್ನೂ ಹಚ್ಚಿದೆ. ಕೋಣೆಯ ಸುತ್ತಲೂ ಬೆಳಕು ಹರಡಿತು. ನನ್ನದೇ ನೆರಳು ಗೋಡೆಯ ಮೇಲೆ ದೊಡ್ಡದಾಗಿ ಬಿದ್ದು ಭಯವುಂಟು ಮಾಡಿತು.

ನಾನೀಗ ಮಲಗುವ ತಯಾರಿ ನಡೆಸಿದೆ. ಮಂಚದ ಮೇಲೆ ಹಾಸಿದ ಹಾಸಿಗೆಯ ಕಡೆ ನಾನು ಅನುಮಾನದಿಂದ ನೋಡಿದೆ. ಇಲ್ಲಿ ಮೋಸ ಮಾಡಲು ಏನೆಲ್ಲ ಸಾಧ್ಯತೆಗಳಿದ್ದವು! ಹಾಸಿದ ಚಾದರದ ಕೆಳಗೆ ಏನಾದರೂ ಇರಬಹುದು! ಕೀಚ್ ಕೀಚ್ ಎಂದು ಸದ್ದು ಮಾಡಿ ನನ್ನನ್ನು ಬೆಚ್ಚಿಬೀಳಿಸುವ ಆಟಿಕೆಯೋ, ನನ್ನನ್ನು ಚುಚ್ಚಿ ಭೀತಗೊಳಿಸುವ ಹಣಿಗೆಯೋ! ನಾನು ಚಾದರವನ್ನು ಮೆಲ್ಲನೆ ಒಂದು ಕಡೆಯಿಂದ ಸರಿಸಿದೆ. ಏನಾದರೂ ನಡೆಯಬಹುದು ಎಂಬ ಕಾತರದಿಂದ ಬಹಳ ಜಾಗರೂಕತೆಯಿಂದ ಎಳೆದೆ. ಇಲ್ಲ, ಚಾದರದ ಕೆಳಗೆ ಹಾಸಿಗೆಯ ಹೊರತು ಬೇರೇನೂ ಇರಲಿಲ್ಲ.

ಹಾಸಿಗೆಯಲ್ಲೇ ಏನೋ ಇದ್ದರೆ! ನನ್ನ ಗೆಳೆಯರನ್ನು ನೀವು ಬಲ್ಲವರಲ್ಲ. ಅವರು ಇಂಥ ಚೇಷ್ಟೆ ಕೆಲಸಗಳಲ್ಲಿ ನಿಷ್ಣಾತರು! ಹಾಸಿಗೆಯನ್ನು ಬಿಚ್ಚಿ ಅದರಲ್ಲಿ ಹತ್ತಿಯ ಬದಲು ನೀರು ತುಂಬಿದ ಬೆಲೂನುಗಳನ್ನು ಬಚ್ಚಿಟ್ಟರೂ ಆಶ್ಚರ್ಯವಿಲ್ಲ! ನಾನು ಹಾಸಿಗೆಯನ್ನು ಕೈಯಿಂದ ಒತ್ತಿದೆ. ಏನೂ ಆಗಲಿಲ್ಲ. ಕೋಣೆಯಲ್ಲಿ ಹುಡುಕಿ ಒಂದು ಪೊರಕೆಯನ್ನು ತಂದು ಅದರಿಂದ ಹಾಸಿಗೆಗೆ ಏಟು ಹಾಕಿದೆ. ಥಪ್ ಎಂಬ ಶಬ್ದದ ಹೊರತೂ ಬೇರೇನೂ ಘಟಿಸಲಿಲ್ಲ! ನಾನು ರೋಷದಿಂದ ಹಾಸಿಗೆಗೆ ಪೋರಕೆಯ ಪ್ರಹಾರ ಮಾಡಿದೆ. ಥಪ್! ಥಪ್! ಥಪ್! ಉಹೂಂ, ಏನೂ ಆಗಲಿಲ್ಲ.

ಈಗ ನನಗೆ ದಿಗಿಲೇ ಆಯಿತು. ಈ ಹಾಸಿಗೆಯ ಮೇಲೆ ಮಲಗುವುದು ಕ್ಷೇಮವಲ್ಲ ಎನ್ನಿಸಿತು. ಅಂಜುತ್ತಲೇ ಹಾಸಿಗೆಯ ಮೇಲೆ ಅಡ್ಡಾಗಿ ಮೇಲೆ ನೋಡಿದೆ. ಫ್ಯಾನ್ ಕಾಣಿಸಿತು. ಹಳೆಯ ಕಾಲದ ಹಂಚಿನ ಮನೆಯಾದ್ದರಿಂದ ನಾಡಹಂಚುಗಳು ಕಂಡವು. ಓಹೋ, ಈ ಹಂಚಿನಿಂದ ನನ್ನ ಮೇಲೆ ಏನೋ ಬೀಳಿಸುವ ಪ್ರಯತ್ನ ನಡೆದಿದೆ ಎಂದು ನನ್ನ ಮನಸ್ಸು ಹೇಳಿತು. ನಾನು ಕೂಡಲೇ ಮಂಚದಿಂದ ಕೆಳಗೆ ಜಿಗಿದೆ!

ಹಾಸಿಗೆಯನ್ನು ಎರಡೂ ಕೈಗಳಿಂದ ಎಳೆದು ಕೆಳಗೆ ಇಳಿಸಿದೆ.  ಅದೇನೋ ಸುಲಭದ ಕೆಲಸವಾಗಿರಲಿಲ್ಲ. ಹಾಸಿಗೆಯನ್ನು ನೂಕುತ್ತಾ ಅದನ್ನು ಕೋಣೆಯ ಮತ್ತೊಂದು ಮೂಲೆಗೆ ತಂದೆ. ಚಾದರವನ್ನು ಝಾಡಿಸಿ ಹೇಗೋ ನನಗೆ ಬಂದಷ್ಟು ಕಲೆಗಾರಿಕೆಯಿಂದ ಹಾಸಿ ಎಲ್ಲೆಡೆ ಸಿಕ್ಕಿಸಿದೆ. ಹೊದ್ದಿಕೆಯನ್ನೂ ಝಾಡಿಸಿ ಅದರಲ್ಲಿ ಏನೂ ಇಲ್ಲವೆಂದು ಖಾತರಿ ಪಡಿಸಿಕೊಂಡೇ ಹಾಸಿಗೆಯ ಮೇಲೆ ಹಾಸಿದೆ. ಈಗ ನನಗೆ ಆಯಾಸವಾಗಿತ್ತು. ಹಾಸಿಗೆಯ ಮೇಲೆ ಬಿದ್ದುಕೊಂಡು ಹೊದಿಕೆ ಹೊದ್ದೆ. ಆದರೇನು, ನಿದ್ದೆಯ ಸುಳಿವಿಲ್ಲ!

ಮುಂದೆ ಏನಾದೀತೋ ಎಂಬ ಕುತೂಹಲ ಮಿಶ್ರಿತ ಭಯ ನನ್ನನ್ನು ಕಾಡುತ್ತಿತ್ತು! ಏನೋ ಘಟಿಸಲಿದೆ! ಏನೋ ದೊಡ್ಡ ಯೋಜನೆಯನ್ನೇ ಇವರು ಹಾಕಿದ್ದಾರೆ! ನಿದ್ದೆ ಬಾರದೆ ಹೊರಳಾಡಿದೆ! ಕೋಣೆಯ ಸುತ್ತಲೂ ಸುಳಿವಿಗಾಗಿ ಹುಡುಕಿದೆ. ಏನೂ ಕಾಣಿಸಲಿಲ್ಲ. ಕೈಗಡಿಯಾರ ನೋಡಿದೆ. ಒಂದು ಗಂಟೆ ದಾಟಿತ್ತು. ಎಲ್ಲೋ ಒಂದು ನಾಯಿ ಬೊಗಳಿತು. ನಾನು ಬೆಚ್ಚಿದೆ! ಒಂದೆರಡು ನಿಮಿಷಗಳ ನಂತರ ಬೊಗಳಿಕೆಯೂ ನಿಂತಿತು. ಸ್ತಬ್ಧತೆ ಕವಿಯಿತು! ಇಂಥ ನಿಶಬ್ದತೆಯನ್ನು ನಾನೆಂದೂ ಕೇಳಿರಲಿಲ್ಲ. ಜೀರುಂಡೆಗಳ ಜೀವ್ ಎಂಬ ಹಿನ್ನೆಲೆ ಸದ್ದಿನ ಹೊರತು ಬೇರೇನೂ ಇಲ್ಲ! ನನಗೆ ನಿದ್ದೆ ಬಾರದೆ ಹುಚ್ಚು ಹಿಡಿಯುವಂತಾಯಿತು! ಮೇಲೆದ್ದು ನೀರು ಕುಡಿಯಲು ಹೂಜಿಗೆ ಇನ್ನೇನು ಕೈಹಾಕುವಷ್ಟರಲ್ಲಿ ಮನಸ್ಸು ಎಚ್ಚರಿಸಿತು. ಬಹಳ ಜಾಗರೂಕತೆಯಿಂದ ನೀರು ಬಗ್ಗಿಸಿ ಅದನ್ನು ಮೇಲೆತ್ತಿ ನೋಡಿ ಮೂಸಿ ಪರೀಕ್ಷಿಸಿದ ನಂತರವೇ ಕುಡಿದೆ. ಮತ್ತೆ ಹಾಸಿಗೆಯಲ್ಲಿ ಉರುಳಾಡಿದೆ. ಅಯ್ಯೋ ಪ್ರತಿದಿನವೂ ನಾನು ಬೇಡವೆಂದರೂ ಕಾಡುವ ನಿದ್ದೆಯೇ, ಇಂದು ಎಲ್ಲಿಗೆ ಹೋದೆ!

ಒಮ್ಮೆಲೇ ಧಡಾರ್ ಎಂಬ ಸದ್ದಾಯಿತು. ಠಣ್‌ಠಣ್  ಎಂದು ಸದ್ದಾಯಿತು. ನನ್ನ ಮೈಮೇಲೆ ಏನೋ ಬಿಸಿ ದ್ರಾವಣವು ಬಿತ್ತು. ನನ್ನ ಮೈಮೇಲೆ ಯಾವುದೋ ಮೃಗವು ಬಿದ್ದಿತ್ತು!

ನಾನು ಗಾಬರಿಯಿಂದ ಮೇಲೆದ್ದು ಮೃಗವನ್ನು ಹಿಡಿಯಲು ಹೋದಾಗ ಅದರ ಕೂದಲು ಕೈಗೆ ಬಂತು. ನಾನು ಹಚಹಚ ಎಂದು ಕೂಗುತ್ತಾ ಮೃಗಕ್ಕೆ ಗುದ್ದಿದೆ. ಮೃಗವೂ ನನಗೆ ಗುದ್ದಿ 'ಛೇ, ಬಿಡ್ರೀ!' ಎಂದು ಕೂಗಿತು!

ನಾನು ಗಾಬರಿಯಿಂದ ಕಣ್ಣುಬಿಟ್ಟೆ.

ಕೋಣೆಯಲ್ಲಿ ಸೂರ್ಯೋದಯದ ಬೆಳಕು ಹರಡಿತ್ತು! ಹಾಸಿಗೆಯಲ್ಲಿ ನನ್ನಿಂದ ಗುದ್ದಿಸಿಕೊಂಡ ಮೃಗವು ತನ್ನ ಸೀರೆ ಮತ್ತು ಕೂದಲು ಸರಿಪಡಿಸಿಕೊಳ್ಳುತ್ತಾ ಮೇಲೆದ್ದು ನನ್ನೆಡೆಗೆ ದುರುದುರು ನೋಡಿ ಹೊರಟುಹೋಯಿತು! ಅಲ್ಲೇ ಬಿದ್ದಿದ್ದ ಕಾಫಿಯ ಲೋಟ ಮತ್ತು ಟ್ರೇ ನನ್ನ ಕಡೆ ನೋಡಿ ನಕ್ಕವು. ನಾನು ರಾತ್ರಿ ನನ್ನ ಹಾಸಿಗೆಯನ್ನು ಸರಿಸಿದಾಗ ಬಾಗಿಲಿನ ಪಕ್ಕಕ್ಕೇ ಅದನ್ನು ಹಾಸಿದ್ದು ನನ್ನ ಪರಿವೆಗೆ ಬಂದಿರಲಿಲ್ಲ. ಬೆಳಗ್ಗೆ ನನಗೆ ಕಾಫಿ ಕೊಡಲೆಂದು ಒಳಗೆ ಬಂದ ಗೆಳೆಯರ ತಂಗಿ ನೋಡದೆ ಮುಗ್ಗರಿಸಿ ನನ್ನ ಮೇಲೆ ಟ್ರೇ ಕಾಫಿ ಸಮೇತ ಬಿದ್ದ ಕಥೆಯನ್ನು ನನ್ನ ಮನಸ್ಸು ಕಟ್ಟಿಕೊಟ್ಟಿತು.

ಅಂದು ನನ್ನನ್ನು ಅವರೆಲ್ಲರೂ ಸೇರಿ ಅದೆಷ್ಟು ಗೇಲಿ ಮಾಡಿದರೋ! ನನ್ನವಳಾದರೂ ಅವಳು ಕೂದಲು ಎಳೆದದ್ದಕ್ಕೆ, ಗುದ್ದಿದ್ದಕ್ಕೆ ಇಂದಿಗೂ ನನ್ನನ್ನು ಕ್ಷಮಿಸಿಲ್ಲ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)