ಗೋಬಿ ಮಂಚೂರಿ (ಕಥನಕವನ)

ಸಿ.ಪಿ. ರವಿಕುಮಾರ್

Man Holding Drinking Glass
ನೆಲಮಂಗಲದ ರೈತ
ಬಂದಿದ್ದಾನೆ ಬೆಂಗಳೂರಿಗೆ
ಜಮೀನು ಕುರಿತಾದ ವ್ಯಾಜ್ಯ
ಪರಿಹಾರಕ್ಕಾಗಿ ಬಂದಿದ್ದಾನೆ
ವ್ಯಾಜ್ಯಗಳ ನಗರಿಗೆ

ಅವನ ತಾಯಿಯೂ
ಬಂದಿದ್ದಾಳೆ ಜೊತೆ
ಎಂಬತ್ತು ದಾಟಿದರೂ
ದಾಟಲು ಹೆದರುತ್ತಾಳೆ
ಬೆಂಗಳೂರಿನ ರಸ್ತೆ

ನೋಡೋ ಬಿದ್ದಿವೆ
ಬಾಳೇಹಣ್ಣಿನ ಸಿಪ್ಪೆ
ಬಿಸಾಡಿ ಹೋಗಿದ್ದಾರೆ
ಎತ್ತಿಕೊಡು ಆಕಳಿಗೆ
ಮೇಯುತ್ತಿದೆ ಪ್ಲಾಸ್ಟಿಕ್ ತಿಪ್ಪೆ

ಸುಮ್ಮನಿರಕ್ಕ ನಿನಗೇನು ಗೊತ್ತು
ಇದು ನಗರ, ಇಲ್ಲೇ ಬೇರೆ ಥರ,
ನಡಿ ನಿನಗೆ ಕೊಡಿಸುತ್ತೇನೆ
ನೀನು ತಿಂದಿಲ್ಲ ಯಾವತ್ತೂ
ಗೋಬಿ ಮಂಚೂರಿ ಉಪ್ಪುಸಿಹಿಕಾರ

ಘಮಘಮ  ಪರಿಮಳದ ಗಾಳಿ
ಉಸಿರಾಡಿದಾಗ ಮಣ್ಣಿನ ಧೂಳಿ
ಹೊಕ್ಕವು ಎದೆಯೊಳಗೆ
ಜೊತೆಗೆ ವಾಹನಗಳ ಹೊಗೆ
ಬಂತು ಗಾಳಿಯಲ್ಲಿ ತೇಲಿ

ಎಷ್ಟಂತೆ ಕೇಳು ಮೊದಲು
ಎಂದು ಅಜ್ಜಿ ಪಿಸುಗುಟ್ಟಿದಳು
ತಂದಿದೀನಿ ಡಬ್ಬಿಯಲ್ಲಿ ಉಪ್ಪಿಟ್ಟು
ಹಾಕಿದ್ದೆ ಕಣೋ ಬೇಕಾದಷ್ಟು
ನಮ್ಮ ಹೊಲದ ಅವರೆಕಾಳು

ಅಮ್ಮಾ, ಸುಮ್ಮನಿರು ದಯವಿಟ್ಟು
ದಿನಾ ಇದ್ದಿದ್ದೇ ನಿನ್ನ ಉಪ್ಪಿಟ್ಟು
ತಿನ್ನೋಣ ಏನಾದರೂ ಬೇರೆ ಇವತ್ತು
ಇಲ್ಲೂ ಉಪ್ಪಿಟ್ಟು ತಿಂದರೇನು ಬಂತು
ಎಷ್ಟಿದ್ದೀತು ಬೆಲೆ ಐವತ್ತು ಅರವತ್ತು

ವಿಪರೀತ ಜನ ಗಲ್ಲಾಪೆಟ್ಟಿಗೆ ಹತ್ತಿರ
ಪ್ರಶ್ನೆಗೆ ಯಾರೂ ಕೊಡವಲ್ಲರು ಉತ್ತರ
ನೆಲದ ಮೇಲೇ ಕೂತಳು ಅಜ್ಜಿ
ಘಮಘಮಾ ಉಪ್ಪೇರಿ, ಬಟಾಟೆ ಬಜ್ಜಿ
ಎಲ್ಲಾ ನೋಡುತ್ತಾ ಏನೇನು ಥರಥರ

ಬಂತು ಮಗನ ಸರತಿ ಕಾದು ಕಾದು
ಕಣ್ಣಿನಲ್ಲೇ ಕೇಳಿ ಏನು ಬೇಕೆಂದು
ಎಷ್ಟು ಹೇಳಪ್ಪ ಗೋಬಿ ಮಂಚೂರಿ
ಎರಡು ಪ್ಲೇಟ್ ಎನ್ನುವಾಗ ಬಾಯಲ್ಲಿ ನೀರೂರಿ
ಕಾದನು ಏನುತ್ತರ ಬರುವುದೋ ಎಂದು

ನೂರಾ ನಲವತ್ತು ಜೀಎಸ್ಟಿ ಸೇರಿ
ಎಂದಾಗ ರೈತನಿಗೆ ಕಾವೇರಿ
ನಾನೆಲ್ಲಿ ಕೇಳಿದೆ ನಿನ್ನನ್ನು ಟೀ
ಸುಮ್ಮನೇ ಯಾತಕ್ಕೆ ಟೀ ಸೇರಿಸ್ತೀ
ನಮಗೇನಿದ್ದರೂ ಕಾಫಿಯೇ ಸರಿ

ನೋಡುತ್ತಾ ಇವನನ್ನು ಅನುಮಾನದಿಂದ
ಗಲ್ಲಾಪೆಟ್ಟಿಗೆಯವನು ಹೀಗೆಂದ
ಕಾಫಿಯೂ ಸೇರಿದರೆ ಇನ್ನೂರಾ ಹತ್ತು
ಪಾಪ ರೈತನ ಮುಖಕ್ಕೆ ಹೊಡೆದಂತಿತ್ತು
ಖಾಲಿಕೈಯಲ್ಲೇ ಅಮ್ಮನ ಬಳಿಗೆ ಬಂದ

ಅಕ್ಕಾ ನಾನು ತಂದಿದ್ದು ಐನೂರು
ಟಿಕೀಟು ಹೋಗಿ ಮಿಕ್ಕಿದ್ದು ಇನ್ನೂರು
ಇದೆಯಾ ಹೇಳು ಹತ್ತು ರೂಪಾಯಿ?
ಸೀರೆ ತುದಿಗಂಟನ್ನು ಬಿಡಿಸಿದಳು ತಾಯಿ
ಎಣಿಸಿಕೊಟ್ಟಳು ನಾಣ್ಯ ತುಂಬಾ ಹುಷಾರು

ಈಗ ಹೋದನು ನೆಲಮಂಗಲದ ರೈತ
ಇನ್ನೂರಾಹತ್ತು ರೂಪಾಯಿ ಸಹಿತ
ಮತ್ತೊಮ್ಮೆ ಸಾಲಿನಲ್ಲಿ ನಿಂತು
ಕಾಯಬೇಕಾಗಿ ಬಂತು
ಹೊಟ್ಟೆಯಲ್ಲಿ ಹಸಿವಿನ ಕುಣಿತ

ಗಲ್ಲಾಪೆಟ್ಟಿಗೆಯಲ್ಲಿದ್ದ ಹೊಸ ಮಾನವನಿಗೆ
ಗೊತ್ತಿಲ್ಲ ಬೇಕೇನಿವನಿಗೆ
ಏರಿಸಿ ಹುಬ್ಬು ಏನು
ಎಂದು ಕೇಳಿದಾಗ ಇವನು
ಮತ್ತೆ ಹೇಳಬೇಕಾದದ್ದು ದೊಡ್ಡ ರೇಜಿಗೆ

ನಗದು ಕೊಡಲು ಹೋದಾಗ ಅಂಕಲ್ ಜೀ
ಕ್ಯಾಷ್ ನಹೀಂ ಚಲೇಗಾ ಎಂದಾಗ ಅಂಜಿ
ಏನಪ್ಪಾ ನೀನು ಏನಂದಿ
ಅರ್ಥವಾಗದು ಹಿಂದಿ
ಬೇಗ ಕೊಡು ನೋಡು ಹಸಿದಿದ್ದಾಳೆ ಅಜ್ಜಿ

ಒಳಗಿಂದ ಬಂದ ಬೇರೊಬ್ಬ ಇಸಮು
ಕನ್ಡಾದಲ್ಲೇ ಬೋಲುತಿದ್ದವನು
ಕ್ಯಾಷ್ ಇಲ್ಲ ಕಣ್ರೀ, ಎಲ್ಲ ಡಿಜಿಟಲ್ಲು
ಎಂದು ಅಸಹಾಯಕನಾಗಿ ಬೀರಿದನು ಹಲ್ಲು
ಆಪ್ ಇದೆಯಾ, ಹಂಗರ್ ಬಾಕ್ಸ್, ರೂಪೇ,ಪೇಟಿಎಮ್ಮು

ಹಂಗರ್ ಪೆಟ್ಟಿಗೆ ಹೊತ್ತು ಕುಳಿತ ಅಮ್ಮ
ನೆನಪಾಗಿ ನೆಲಮಂಗಲದ ಈ ನಮ್ಮ
ರೈತ ಮರಳಿದ ಸಪ್ಪೆ ಮುಖ ಹೊತ್ತು
ಬಾರಮ್ಮಾ ಯಾಕೋ ಸರಿಯಿಲ್ಲ ಹೊತ್ತು
ಇಬ್ಬರೂ ಎತ್ತಿಕೊಂಡರು ಗಂಟು ತಮ್ಮತಮ್ಮ

ಪಾರ್ಕಿನಲ್ಲಿ ಹುಲ್ಲ ಮೇಲೆ ಕುಳಿತು
ಇಬ್ಬರೂ ತಿಂದರು ಅಜ್ಜಿ ತಂದ ಉಪ್ಪಿಟ್ಟು
ನಲ್ಲಿ ನೀರನ್ನು ಬೊಗಸೆಯಲ್ಲಿ ಹಿಡಿದು
ತೃಪ್ತಿ ಪಡೆದರು ಮತ್ತೆ ಮತ್ತೆ ಕುಡಿದು
ಬೀದಿನಾಯಿಗೆ ಹಾಕಲೂ ತಿಂಡಿ ಉಳಿದಿತ್ತು

ಕೇಳದೆ ಯಾವ ರೂಪೇ ಪೇಟಿಎಮ್ಮು
ಕೊಟ್ಟಿತು ಕಾಳನ್ನು ಹೊಲದ ಮಣ್ಣು
ಕೊಟ್ಟಳು ಅಮ್ಮ ಧಾರಾಳ
ಎಂದು ನಿದ್ರಿಸಿದನು ನಿರಾಳ
ತೊಡೆಯಾಗಿಸಿಕೊಂಡು ಭೂಮಿಯನ್ನು

(ಮುಗಿಯಿತು)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)