ಪರಿತ್ಯಾಗ (ಜಾನಪದ ಕತೆ)


ಪರಿತ್ಯಾಗ
(ಜಪಾನ್ ದೇಶದ ಒಂದು ಕತೆ)


ಬಹಳ ಬಹಳ ಹಿಂದಿನ ಮಾತು. ಒಬ್ಬ ರೈತ ತನ್ನ ವಯೋವೃದ್ಧ ವಿಧವೆ ತಾಯಿಯೊಂದಿಗೆ ಬೆಟ್ಟದ ತಪ್ಪಲಿನ ಪುಟ್ಟ ಮಣ್ಣಿನ ಮನೆಯಲ್ಲಿ ವಾಸವಾಗಿದ್ದ.  ಅವರಿಗೆ ಸೇರಿದ ಒಂದು ತುಂಡು ಜಮೀನಿತ್ತು. ಹೀಗಾಗಿ ಉಣ್ಣಲು ಕೊರತೆ ಇರಲಿಲ್ಲ.  ಅವರ ಜೀವನ ನೆಮ್ಮದಿಯಿಂದ ಸಾಗುತ್ತಿತ್ತು.

ಆ ಹಳ್ಳಿಯು ಯಾವ ಪಾಳೆಯಕ್ಕೆ ಸೇರಿತ್ತೋ ಅದರ ಪಾಳೇಗಾರನು ಬಹಳ ದುರಹಂಕಾರದ ಸ್ವಭಾವದವನು. ಸ್ವತಃ ವೀರಯೋಧನಾದರೂ ಅವನಿಗೆ ವೃದ್ದಾಪ್ಯ ಮತ್ತು ಅನಾರೋಗ್ಯಗಳೆಂದರೆ ವಿಪರೀತ ಭಯವಿತ್ತು.  ತನ್ನ ಆಡಳಿತ ಇರುವ ಪ್ರದೇಶದಲ್ಲಿ ಎಲ್ಲೂ ವೃದ್ಧರೂ ರೋಗಿಷ್ಠರೂ ಇರಬಾರದೆಂದು ಅವನು ನಿರ್ಧರಿಸಿದ. ತನ್ನ ನಿರ್ಧಾರವನ್ನು ಕಾರ್ಯರೂಪಕ್ಕೆ ತರುವುದೆಷ್ಟು ಹೊತ್ತು! ಅವನು ಊರಿನಲ್ಲಿ ಎಲ್ಲರಿಗೂ ಓಲೆ ಕಳಿಸಿದ.  ಮನೆಯಲ್ಲಿರುವ ವಯೋವೃದ್ಧರನ್ನೂ ಅನಾರೋಗ್ಯ ಪೀಡಿತರನ್ನೂ  ಈಗಿಂದೀಗಲೇ ಕೊಲ್ಲಬೇಕೆಂಬ ಕಠಿಣ ಆದೇಶವನ್ನು ಕಂಡು ರೈತನ ಎದೆ ನಡುಗಿತು. ಆಗಿನ ಕಾಲದಲ್ಲಿ ವಯಸ್ಸಾದವರನ್ನು ಕಾಡಿನಲ್ಲಿ ಬಿಟ್ಟು ಬರುವುದು ಸಾಮಾನ್ಯ ವಿಷಯವಾಗಿತ್ತು.  ತನ್ನ ತಾಯಿಯನ್ನು ರೈತ ಬಹಳ ಆದರದಿಂದ ಕಾಣುತ್ತಿದ್ದ.  ಅವಳನ್ನು ಮೃತ್ಯುವಿಗೆ ದೂಡುವುದೇ! ಬೇರೆ ಮಾರ್ಗವೇ ಇಲ್ಲ! ತಾಯಿಯನ್ನು ಕೊನೆಗಾಣಿಸಲು ಅತ್ಯಂತ ದಯಾಮಯವಾದ ಮಾರ್ಗವೇನು? ಹೀಗೆ ಯೋಚಿಸುತ್ತಾ ಅವನು ನಿದ್ದೆ ಬಾರದೆ ಹಾಸಿಗೆಯಲ್ಲಿ ಹೊರಳಾಡುತ್ತಾ ನಿಡುಸುಯ್ದ.

ಬೆಳಗ್ಗೆ ಅವನು ಬೇಗ ಎದ್ದು ಅನ್ನ ಬೇಯಿಸಿದ. ಅದನ್ನು ಆರಲು ಬಿಟ್ಟು ನಂತರ ಒಂದು ಚೌಕದಲ್ಲಿ ಕಟ್ಟಿಕೊಂಡು ತನ್ನ ಕುತ್ತಿಗೆಯಲ್ಲಿ ಇಳಿಬಿಟ್ಟ. ಸೋರೆಬುರುಡೆಯಲ್ಲಿ ಸಿಹಿನೀರು ತುಂಬಿಕೊಂಡು ಅದನ್ನೂ ಕುತ್ತಿಗೆಗೆ ಕಟ್ಟಿಕೊಂಡ. ಅನಂತರ ಹಕ್ಕಿಯಂತೆ ಹಗುರವಾಗಿದ್ದ ತಾಯಿಯನ್ನು ಬೆನ್ನಮೇಲೆ ಹೊತ್ತುಕೊಂಡು ಬೆಟ್ಟವನ್ನೇರತೊಡಗಿದ. ಬಿಸಿಲು ಏರಿದಾಗ ಪ್ರಯಾಣ ದುಸ್ತರವಾಯಿತು. ಆದರೂ ಅವನು ನಿಲ್ಲದೆ ಮೇಲೇರಿದ.  ಬೇಡರು ಮಾಡಿದ ಹಾದಿಯಲ್ಲಿ ನಡೆದುಹೋದ. ಕೆಲವೆಡೆ ದಾರಿ ಕವಲಾಯಿತು. ಆದರೆ ಅವನಿಗೆ ಅದರ ಪರಿವೆ ಇರಲಿಲ್ಲ. ಮೇಲೆ ಹೋಗಿ ಸೇರುವುದೇ ಅವನ ಗುರಿಯಾಗಿತ್ತು. ಬೆಟ್ಟದ ತುದಿಯಲ್ಲಿದ್ದ ಪರಿತ್ಯಾಗಗಿರಿಯಲ್ಲಿ ವೃದ್ಧರನ್ನು ಬಿಟ್ಟುಬರುವ ವಾಡಿಕೆ ಇತ್ತು.

ವಯಸ್ಸಾದ ತಾಯಿಯ ಕಣ್ಣುಗಳಲ್ಲಿ ಬೆಳಕು ಮಂದವಾಗಿದ್ದರೂ ತನ್ನ ಮಗ ಒಂದು ಹಾದಿಯಿಂದ ಇನ್ನೊಂದಕ್ಕೆ ಅಡ್ಡಾದಿಡ್ಡಿ ಹೋಗುತ್ತಿರುವುದನ್ನು ಅವಳು ಗಮನಿಸದೇ ಇರಲಿಲ್ಲ.  ದಾರಿಯಲ್ಲಿ ಅಕ್ಕಪಕ್ಕದಲ್ಲಿದ್ದ ಪೊದೆಗಳಿಂದ ಅವಳು ಕಡ್ಡಿಗಳನ್ನು ಮುರಿದುಕೊಂಡು ಅಲ್ಲಲ್ಲಿ ಅವುಗಳನ್ನು ಕೆಳಕ್ಕೆ ಬೀಳಿಸುತ್ತಾ ಸಾಗುತ್ತಿದ್ದಳು. ಕೊನೆಗೂ ಪರಿತ್ಯಾಗಗಿರಿಯನ್ನು ಅವರು ಮುಟ್ಟಿದರು. ರೈತನು ತಾಯಿಯನ್ನು ಮೆಲ್ಲನೆ ಕೆಳಕ್ಕಿಳಿಸಿ ಕೂಡಿಸಿದ. ಅವಳು ಕೊನೆಯ ದಿನಗಳನ್ನು ಕಳೆಯ ಬೇಕಾದ ಸ್ಥಳವನ್ನು ಸಿದ್ಧಮಾಡತೊಡಗಿದ. ಕಲ್ಲನ್ನು ಶುಚಿಗೊಳಿಸಿ ಅದರ ಮೇಲೆ ಎಲೆಗಳನ್ನು ಹರಡಿ ಹಾಸಿಗೆ ಸಿದ್ಧಪಡಿಸಿ ತಾಯಿಯನ್ನು ಮೆಲ್ಲಗೆ ಎತ್ತಿ ಮಲಗಿಸಿದ. ಅವಳ ಶಾಲನ್ನು ಮತ್ತಷ್ಟು ಭದ್ರವಾಗಿ ಸುತ್ತಿದ.  ನಾನಿನ್ನು ಹೊರಡುತ್ತೇನೆ ಎಂದು ಹೇಳುವಾಗ ಅವನ ಕಣ್ಣುಗಳು ತುಂಬಿಕೊಂಡವು.

ರೈತನ ತಾಯಿಯ ನಡುಗುವ ಧ್ವನಿಯಲ್ಲಿ ಪುತ್ರಪ್ರೇಮ ತುಂಬಿತ್ತು. "ಮಗೂ, ಕಣ್ಣೀರಿನಿಂದ ನಿನ್ನ ಕಣ್ಣು ಮಂಜಾಗಿವೆ. ಮರಳಿ ಹೋಗುವಾಗ ಜಾಗ್ರತೆ! ಹಾದಿ ತಪ್ಪಬೇಡ. ನಾವು ಬಂದ ಹಾದಿಯಲ್ಲಿ ನಾನು ಅಲ್ಲಲ್ಲಿ ಗಿಡಗಳ ಕಡ್ಡಿಗಳನ್ನು ಕೆಳಗೆಸೆದಿದ್ದೇನೆ. ಅವುಗಳನ್ನು ಅನುಸರಿಸಿ ಹೋಗಿ ಕ್ಷೇಮವಾಗಿ ಮನೆಯನ್ನು ಸೇರಿಕೋ."

ರೈತ ಆಶ್ಚರ್ಯದಿಂದ ತಾಯಿಯ ಕಡೆ ನೋಡಿದ. ಅವಳ ಕೈಗಳಲ್ಲಿದ್ದ ತರಚಿದ ಗಾಯಗಳು ಅವನಿಗೆ ಕಂಡವು. ತನ್ನ ಕ್ಷೇಮವನ್ನು ಹೊರತಾಗಿ ಬೇರೇನನ್ನೂ ಬೇಡದ ತಾಯಿಯ ಪ್ರೀತಿ ಅವನ ಹೃದಯವನ್ನು ಅಲ್ಲೋಲ ಕಲ್ಲೋಲ ಮಾಡಿತು.  ಅವನು ಅವಳ ಪಾದಗಳಲ್ಲಿ ಕುಸಿದು "ಅಮ್ಮಾ, ನಾನು ನಿನ್ನನ್ನು  ಬಿಟ್ಟು ಎಲ್ಲೂ ಹೋಗುವುದಿಲ್ಲ! ನಡೆ, ಬಂದ ದಾರಿಯಲ್ಲಿ ನಾವು ಮರಳಿ ಹೋಗೋಣ. ಆದದ್ದಾಗಲಿ!" ಎಂದು ತಾಯಿಯನ್ನು ಬೆನ್ನಿನ ಮೇಲೆ ಕೂಡಿಸಿಕೊಂಡು ಬೆಟ್ಟ ಇಳಿದು ಹೊರಟ. ಬೆನ್ನಿನ ಮೇಲಿನ ಹೊರೆ ಈಗ ಅದೆಷ್ಟು ಹಗುರವೆನ್ನಿಸಿತು!  ಬೆಳದಿಂಗಳಲ್ಲಿ ಕಡ್ಡಿಗಳು ಚೆಲ್ಲಿದ ಹಾದಿಯನ್ನು ಅನುಸರಿಸಿ ಅವರು ರಾತ್ರಿ ಕಳೆಯುವುದರ ಒಳಗಾಗಿ ತಮ್ಮ ಮನೆಯನ್ನು ಸೇರಿದರು. ಮನೆಯಲ್ಲಿ ಅಡುಗೆ ಕೋಣೆಗೆ ಹೊಂದಿಕೊಂಡ ಒಂದು ಉಗ್ರಾಣವಿತ್ತು. ರೈತ ತಾಯಿಯನ್ನು ಉಗ್ರಾಣದಲ್ಲಿ ಅಡಗಿಸಿದ. ಅಲ್ಲಿ ಅವಳಿಗೆ ಬೇಕಾದುದನ್ನು ಸರಬರಾಜು ಮಾಡುತ್ತಾ ಅವಳ ಯೋಗಕ್ಷೇಮ ನೋಡಿಕೊಳ್ಳತೊಡಗಿದ.

ಕ್ರಮೇಣ ರೈತನ ಮನಸ್ಸಿನಲ್ಲಿದ್ದ ಭಯ ಕರಗಿತು.  ಆದರೆ ಪಾಳೇಗಾರನ ಅರಮನೆಯಿಂದ ಮತ್ತೊಂದು ಓಲೆ ಬಂದು ಸೇರಿತು. ಅದನ್ನು ಓದಿ ಅವನು ಮತ್ತೆ ಭೀತನಾದ.  ಪಾಳೇಗಾರ ತನ್ನ ಅಧಿಕಾರದರ್ಪ ಮೆರೆಯಲು ಎಲ್ಲ ಪ್ರಜೆಗಳಿಗೂ ಓಲೆ ಕಳಿಸಿದ್ದ. ಅಲ್ಲಿ ಒಂದು ಆದೇಶವಿತ್ತು. "ಬೂದಿಯಿಂದ ತಯಾರಿಸಿದ ಹಗ್ಗವನ್ನು ತಂದು ಒಪ್ಪಿಸಬೇಕು" ಎಂಬ ಒಕ್ಕಣಿಕೆ ಪತ್ರದಲ್ಲಿತ್ತು.

ಇಡೀ ಪಾಳೇಪಟ್ಟಿನ ಜನರು ಚಿಂತಿತರಾದರು. ರಾಜಾಜ್ಞೆಯನ್ನು ಪಾಲಿಸಲೇಬೇಕು! ಆದರೆ ಬೂದಿಯಿಂದ ಹಗ್ಗ ಹೊಸೆಯುವುದು ಸಾದ್ಯವೇ! ಏನೂ ತೋರದೆ ಜನ ಕೈಕೈ ಹಿಸುಕಿಕೊಂಡರು. ರಾತ್ರಿಯಾದಾಗ ತನ್ನ ಉದ್ವೇಗವನ್ನು ತಾಳಲಾರದೆ ರೈತ ತಾಯಿಗೆ ಸಮಸ್ಯೆಯನ್ನು ಕುರಿತು ಪಿಸುಮಾತಿನಲ್ಲಿ ತಿಳಿಸಿ "ನಾನೀಗ ಏನು ಮಾಡಬಲ್ಲೆ!" ಎಂದು ಪರಿತಪಿಸಿದ.

"ತಾಳು! ಎದೆಗುಂದಬೇಡ! ನಾನು ಏನಾದರೂ ಯೋಚಿಸುತ್ತೇನೆ!"  ಎಂದು ತಾಯಿ ಅವನಿಗೆ ಧೈರ್ಯ ಹೇಳಿದಳು. ಮರುದಿನ ಬೆಳಗ್ಗೆ ತಾಯಿ ಮಗನಿಗೆ ಒಂದು ಉಪಾಯ ಸೂಚಿಸಿದಳು. "ಒಣಗಿದ ಹುಲ್ಲನ್ನು ತಿರುಚಿ ಹಗ್ಗವನ್ನು ಹೊಸೆದು ತಯಾರು ಮಾಡು. ಅದನ್ನು ಒಂದು ಸಪಾಟು ಕಲ್ಲಿನ ಮೇಲಿಟ್ಟು ಗಾಳಿಯಿಲ್ಲದ ಸ್ಥಳದಲ್ಲಿಟ್ಟು ಹಗ್ಗದ ತುದಿಗೆ ಬೆಂಕಿಯಿಡು."

ಮಗ ತಾಯಿಯ ನಿರ್ದೇಶವನ್ನು ಪಾಲಿಸಿದ. ಹಗ್ಗವು ಉರಿದು ಭಸ್ಮವಾಯಿತು. ಬೂದಿಯಲ್ಲಿ ಹಗ್ಗದಲ್ಲಿದ್ದ ಒಂದೊಂದೂ ಗೆರೆ ಕಾಣುತ್ತಿತ್ತು. ಅದು ಬೂದಿಯಿಂದಲೇ ತಯಾರಿಸಿದ ಹಗ್ಗದಂತೆ ಕಾಣುತ್ತಿತ್ತು. ಕಲ್ಲನ್ನು ಜೋಪಾನವಾಗಿ ಕೊಂಡೊಯ್ದು ರೈತನು ಪಾಳೇಗಾರನಿಗೆ ತೋರಿಸಿದ. 

ಯುವಕನ ಜಾಣ್ಮೆಯಿಂದ ಪ್ರಭಾವಿತನಾದ ಪಾಳೇಗಾರ ಅವನನ್ನು ನೇರದೃಷ್ಟಿಯಿಂದ ನೋಡುತ್ತಾ "ಹೇಳು, ಈ ಉಪಾಯವನ್ನು ಎಲ್ಲಿಂದ ಕಲಿತೆ?" ಎಂದು ಕೇಳಿದ. ರೈತನು ಪಾಳೇಗಾರನ ಕಾಲಿಗೆ ಬಿದ್ದು "ಸ್ವಾಮೀ, ನಾನು ನಿಜ ಹೇಳುತ್ತೇನೆ. ದಯವಿಟ್ಟು ನನ್ನನ್ನು ಮನ್ನಿಸಿ!" ಎಂದು ನಡೆದದ್ದನ್ನು ಹೇಳಿದ.

ಪಾಳೇಗಾರನ ಹಣೆಯಲ್ಲಿ ನೆರಿಗೆಗಳು ಮೂಡಿದವು.

"ನಾನು ನನ್ನ ಪಾಳೆಯದಲ್ಲಿ ಶಕ್ತಿಶಾಲಿ ಯುವಕರು ಮಾತ್ರ ಇರಬೇಕೆನ್ನುವ ಆಸೆಯಲ್ಲಿ ದುಡುಕಿದೆ. ತಲೆಗೂದಲಿನಲ್ಲಿ ಬೆಳ್ಳಿಗೆರೆಗಳು ಕಾಣಿಸಿಕೊಂಡಾಗಲೇ ವಿವೇಕ ಮೂಡುತ್ತದೆಂಬ ನಾಣ್ಣುಡಿಯನ್ನು ಮರೆತೆ!" ಎಂದು ತಾನು ಹೊರಡಿಸಿದ ಕ್ರೂರ ಆಜ್ಞೆಯನ್ನು ಹಿಂಪಡೆದುಕೊಂಡ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)