ಶ್ರೀರಾಮಚಂದ್ರ ಕೃಪಾಳು ಭಜಮನ - ಕನ್ನಡದಲ್ಲಿ ಅರ್ಥ



ಶ್ರೀರಾಮಚಂದ್ರ ಕೃಪಾಳು ಭಜಮನ ಹರಣ ಭವಭಯ ದಾರುಣಮ್
ನವಕಂಜ ಲೋಚನ ಕಂಜಮುಖ ಕರಕಂಜ ಪದಕಂಜಾರುಣಮ್ 

ಮನಸ್ಸೇ, ಕೃಪಾಳುವಾದ ರಾಮಚಂದ್ರನನ್ನು ಭಜಿಸು -  ದಾರುಣವಾದ ಭವಭಯಗಳು ನಾಶವಾಗುತ್ತವೆ. ಶ್ರೀರಾಮನನ್ನು ಕಲ್ಪಿಸಿಕೋ - ಅವನ ಕಣ್ಣುಗಳು ಈಗತಾನೇ ಅರಳಿದ ಕಮಲಗಳಂತಿವೆ. ಅವನ ಮುಖವೂ ಕಮಲದಂತೆ ಅರಳಿದೆ. ಕೈಗಳೂ ಕಮಲದಂತೆ, ಪಾದಗಳೂ ಕೆಂಪುಕಮಲಗಳಂತಿವೆ.

ಕಂದರ್ಪ ಅಗಣಿತ ಅಮಿತ ಛವಿ ನವನೀಲ ನೀರಜ ಸುಂದರಮ್ 
ಪಟಪೀತ ಮಾನಹು ತಡಿತ ರುಚಿ-ಶುಚಿ ನೌಮಿ ಜನಕಸುತಾವರಮ್  

ಶ್ರೀರಾಮನ ಸೌಂದರ್ಯವು ಅಗಣಿತ ಸಂಖ್ಯೆಯ ಮನ್ಮಥರಿಗಿಂತಲೂ ಮೀರಿದ್ದು! ನೀರಿನಿಂದ ತುಂಬಿದ ನೀಲಮೇಘದ ಮೈಬಣ್ಣ.  ಹಳದಿಬಣ್ಣದ ವಸ್ತ್ರಗಳೋ  ಮೇಘಗಳ ಅಂಚಿನ ಮಿಂಚಿನಂತಿವೆ!  ಜನಕನ ಮಗಳಾದ ಸೀತೆಯನ್ನು ವರಿಸಿದ ಶ್ರೀರಾಮನ ಪಾವನಮೂರ್ತಿಗೆ ನಮಸ್ಕರಿಸು!

ಭಜ ದೀನಬಂಧು ದಿನೇಶ ದಾನವ ದೈತ್ಯ ವಂಶನಿಕಂದನಮ್ 
ರಘುನಂದ ಆನಂದಕಂದ ಕೋಸಲಚಂದ ದಶರಥನಂದನಮ್

ಮನಸ್ಸೇ, ದೀನಬಂಧುವಾದ ರಾಮನನ್ನು ಭಜಿಸು!  ದೈತ್ಯರ ವಂಶವನ್ನು ತನ್ನ ಪ್ರಖರತೆಯಿಂದ ಬೇರುಸಹಿತ ನಿರ್ಮೂಲನ ಮಾಡಿದವನು.  ರಘುವಂಶದಲ್ಲಿ ಹುಟ್ಟಿದವನೂ ಎಲ್ಲ ಸಂತೋಷಕ್ಕೂ ಮೂಲ ಕಾರಣನಾದವನೂ,  ಕೋಸಲದೇಶವೆಂಬ ಆಕಾಶದಲ್ಲಿ  ಚಂದ್ರನಂತೆ ತಂಪಾಗಿ ಹೊಳೆಯುತ್ತಿರುವವನೂ ಆದ ಶ್ರೀರಾಮನನ್ನು ನೆನೆಸು!

ಸಿರ ಮುಕುಟ ಕುಂಡಲ ತಿಲಕ ಚಾರು ಉದಾರ ಅಂಗ ವಿಭೂಷಣಮ್
ಆಜಾನುಭುಜ ಶರ ಚಾಪಧರ ಸಂಗ್ರಾಮಜಿತ ಖರದೂಷಣಮ್

ತಲೆಯ ಮೇಲೆ ಮುಕುಟವನ್ನು ಧರಿಸಿ, ಕಿವಿಗಳಲ್ಲಿ ಕುಂಡಲಗಳನ್ನು ಧರಿಸಿ, ಹಣೆಯಲ್ಲಿ ತಿಲಕವಿಟ್ಟು ಸೌಂದರ್ಯದ ಗಣಿಯಂತೆ ಶೋಭಿಸುತ್ತಿದಾನೋ ಅದೇ ಶ್ರೀರಾಮನ ಬಾಹುಗಳು ನೋಡು, ಮಂಡಿಯವರೆಗೂ ಇಳಿಬಿದ್ದಿವೆ, ತನ್ನ  ಹೆಗಲಿನ ಮೇಲೆ ಬಿಲ್ಲುಬಾಣಗಳನ್ನು ಧರಿಸಿದ್ದಾನೆ! ಸಂಗ್ರಾಮದಲ್ಲಿ ಖರದೂಷಣರನ್ನು ಗೆದ್ದವನಾದ ರಾಮನನ್ನು ನೆನೆಸು!

ಇತಿ ವದತಿ ತುಲಸೀದಾಸ ಶಂಕರ ಶೇಷ ಮುನಿ ಮನರಂಜನಮ್ 
ಮಮ ಹೃದಯಕಂಜ ನಿವಾಸ ಕುರು ಕಾಮಾದಿ ಖಲದಲಗಂಜನಮ್ 

ಯಾರು ಶಂಕರ, ಶೇಷನಾಗ ಮತ್ತು ಮುನಿಜನರ ಮನಸ್ಸಿಗೆ ಹರ್ಷವನ್ನು ಉಂಟು ಮಾಡುತ್ತಾನೋ, ಯಾರು ಕ್ರೋಧ-ಕಾಮ ಮೊದಲಾದ ಶತ್ರುಗಳನ್ನು ವಿನಾಶ ಮಾಡುತ್ತಾನೋ, ಆ ಶ್ರೀರಾಮನು ನನ್ನ ಹೃದಯಕಮಲದಲ್ಲಿ ನೆಲೆಸಲಿ ಎಂಬುದೇ ತುಲಸೀದಾಸನ ಪ್ರಾರ್ಥನೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)