ಶಕುಂತಲಾದೇವಿ ಅವರ ನೆನಪು
ನಾನು ಪಿಎಚ್.ಡಿ. ಮಾಡುತ್ತಿದ್ದ ದಿನಗಳು. ಒಮ್ಮೆ ಕಂಪ್ಯೂಟರ್ ವಿಭಾಗದಲ್ಲಿ ಭಾರತೀಯ ಮೂಲದ ಶಕುಂತಲಾದೇವಿ ಅವರೊಂದಿಗೆ ಒಂದು ಕಾರ್ಯಕ್ರಮ ಆಯೋಜಿಸಲಾಗಿದೆ ಎಂಬ ಪ್ರಕಟಣೆ ನೋಡಿ ನನಗೆ ಮತ್ತು ನನ್ನ ಭಾರತೀಯ ಮಿತ್ರರಿಗೆ ಎಲ್ಲಿಲ್ಲದ ಕುತೂಹಲ ಮತ್ತು ಸಂಭ್ರಮ ಉಂಟಾಯಿತು. ಶಕುಂತಲಾದೇವಿ ಅವರನ್ನು ಕುರಿತು ಸಾಕಷ್ಟು ಕೇಳಿದ್ದೆ. ಪತ್ರಿಕೆಗಳಲ್ಲಿ ಅವರ ಬಗ್ಗೆ ಸಾಕಷ್ಟು ವರ್ತಮಾನಗಳು ಪ್ರಕಟವಾಗುತ್ತಿದ್ದವು. ಅವರು ಒಬ್ಬ ಅಸಾಮಾನ್ಯ ವ್ಯಕ್ತಿ. ದೈವದತ್ತವಾಗಿದ್ದ ಅಸಾಧಾರಣ ಸ್ಮೃತಿಶಕ್ತಿಯನ್ನು ಬೆಳೆಸಿಕೊಂಡು ಅದರಿಂದಲೇ ಜೀವನೋಪಾಯ ಮಾರ್ಗವನ್ನು ಕಂಡುಕೊಂಡವರು. ಅವರಲ್ಲಿ ಶೋಮನ್ ಶಿಪ್ ಕೂಡಾ ಉತ್ತಮವಾಗಿತ್ತು. ಸಭಿಕರ ಮೇಲೆ ತಮ್ಮ ಸಮ್ಮೋಹನಾ ಶಕ್ತಿ ಬೀರುತ್ತಿದ್ದರು. ಬಹುಶಃ ಚಿಕ್ಕಂದಿನಿಂದ ಶೋಗಳಲ್ಲಿ ಭಾಗವಹಿಸಿ ಅವರಿಗೆ ಇದು ಕರಗತವಾಗಿತ್ತು.
ನಾನು ಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ನಾವು ದೆಹಲಿಯಲ್ಲಿ ಕೆಲವು ವರ್ಷ ಇದ್ದೆವು. ಆಗ ನಮ್ಮ ತಂದೆ ಅಲ್ಲಿಯ ಪತ್ರಿಕೆಗಳಾದ ಹಿಂದೂಸ್ತಾನ್ ಟೈಮ್ಸ್, ಈವನಿಂಗ್ ನ್ಯೂಸ್ ಮುಂತಾದ ಪತ್ರಿಕೆಗಳಿಗೆ ಬರೆಯುತ್ತಿದ್ದರು. ಕರ್ನಾಟಕದ ಅನೇಕಾನೇಕ ಕಲಾವಿದರು ಮತ್ತು ಸಾಹಿತಿಗಳನ್ನು ಕುರಿತು ಅವರು ಬರೆದರು. ಶಕುಂತಲಾದೇವಿ ಅವರು ಒಮ್ಮೆ ದೆಹಲಿಗೆ ಭೇಟಿ ಕೊಟ್ಟರು. ನಮ್ಮ ತಂದೆ ಅವರನ್ನು ಭೇಟಿಯಾಗಿ ಅವರೊಂದಿಗೆ ಸಂದರ್ಶನ ನಡೆಸಿ ಪತ್ರಿಕೆಯಲ್ಲಿ ಲೇಖನ ಬರೆದರು. ಅದರಲ್ಲಿ ಶಕುಂತಲಾದೇವಿ ತಮ್ಮ ತಂದೆಯಿಂದ ಗಣಿತ ಕಲಿತರು ಎಂಬ ಅರ್ಥದ ವಾಕ್ಯವಿತ್ತು. ಶಕುಂತಲಾದೇವಿ ಅವರನ್ನು ಈ ಮಾತು ಕೆರಳಿಸಿತು. ಅವರಿಗೆ ತಮ್ಮ ತಂದೆ ಕುರಿತು ಸಿಟ್ಟಿತ್ತು. ನಮ್ಮ ತಂದೆಗೆ ಫೋನ್ ಮಾಡಿ "ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ" ಎಂದು ಕೂಗಾಡಿದರು! ನಮ್ಮ ತಂದೆ "ಹೂಡಬಹುದುಜ್ ಆದರೆ ನನ್ನಿಂದ ನಿಮ್ಮ ಲಾಯರ್ ಏನನ್ನೂ ಕಕ್ಕಿಸಲಾರ. ನಿಮ್ಮ ಲಾಯರ್ ಫೀ ಅದಕ್ಕಿಂತ ಜಾಸ್ತಿಯಾದೀತು" ಎಂದರು. ಅಲ್ಲಿಗೆ ಈ ಪ್ರಕರಣ ಮುಗಿಯಿತು.
ಶಕುಂತಲಾದೇವಿ ಅವರನ್ನು ನೋಡುವ ಕುತೂಹಲ ನನಗೆ ಈ ಕಾರಣದಿಂದಲೂ ಇಮ್ಮಡಿಯಾಗಿತ್ತು. ನಮ್ಮ ವಿಭಾಗವಿದ್ದ ಹೆನ್ರಿ ಸ್ಯಾಲ್ವೆಟೊರಿ ಕಟ್ಟಡದ ವಿಶಾಲ ಬೋಧನಾಕೋಣೆಯಲ್ಲಿ ಕಾರ್ಯಕ್ರಮ. ಸುಮಾರು ಮುನ್ನೂರು ಜನ ಕೂಡಲು ಅವಕಾಶವಿರುವ ಕೋಣೆ. ಇಳಿಜಾರು ಇರುವುದರಿಂದ ಅಷ್ಟು ಜನ ವಿದ್ಯಾರ್ಥಿಗಳಿಗೂ ಪಾಠ ಮಾಡುವ ಬೋಧಕರನ್ನು ಮತ್ತು ಅವರು ತೋರಿಸಬಹುದಾದ ಸ್ಲೈಡ್ ಶೋ ಅಡಚಣೆಯಿಲ್ಲದೆ ಕಾಣುತ್ತದೆ. ವಾತಾನುಕೂಲವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸದ್ದು ಕಲಸುಮೇಲೋಗರವಾಗದಂತೆ ಶಬ್ದವಿಜ್ಞಾನವನ್ನು ಗಮನದಲ್ಲಿಟ್ಟುಕೊಂಡು ಕೊಠಡಿಯನ್ನು ವಿನ್ಯಾಸ ಮಾಡಲಾಗಿದೆ. ನಮ್ಮ ಶಾಲಾಕಾಲೇಜುಗಳಲ್ಲಿ ಇದೊಂದು ದೊಡ್ಡ ಸಮಸ್ಯೆ. ದೊಡ್ಡ ಕೊಠಡಿಗಳೇನೋ ಇರುತ್ತವೆ. ಆದರೆ ಅಲ್ಲಿ ಮಾರ್ದನಿಯ ಸಮಸ್ಯೆ. ಕೆಲವು ಕಡೆ ಮಾರ್ದನಿಯ ಸಮಸ್ಯೆ ಇಲ್ಲದಿದ್ದರೂ ಫ್ಯಾನ್ ಹಚ್ಚಿದರೆ ಬೋಧಕನ ಪಾಠ ಯಾರಿಗೂ ಕೇಳುವುದಿಲ್ಲ. ಈಗೀಗ ಕೆಲವು ಕಡೆ ಕ್ಲಾಸಿನಲ್ಲಿ ಬೋಧಕರಿಗೆ ಮೈಕ್ರೊಫೋನ್ ಮತ್ತು ಧ್ವನಿವರ್ಧಕ ಲಭ್ಯವಾಗುತ್ತಿದೆ. ಆದರೂ ಶಿಕ್ಷಕರಿಗೆ ಪಾಠ ಆತ್ಮತೃಪ್ತಿಯಾಗುವಂತೆ ಮಾಡಲು ಸರಿಯಾದ ಬೋಧನಾ ಕೊಠಡಿಯಿಲ್ಲದೆ ಸಾಧ್ಯವಿಲ್ಲ.
ನಾನು ಮತ್ತು ಸ್ನೇಹಿತ ಮಂಜುನಾಥ್ ಮೊದಲ ಸಾಲಿನಲ್ಲಿ ಕೂತಿದ್ದೆವು. ಶಕುಂತಲಾದೇವಿ ಬಂದರು. ಅವರದ್ದು ಪಾದರಸದಂಥ ವ್ಯಕ್ತಿತ್ವ. ಅವರು ಒಂದು ಕಡೆ ನಿಲ್ಲುತ್ತಿರಲಿಲ್ಲ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಬಿರುಸು ಹೆಜ್ಜೆ ಹಾಕುತ್ತಾ ಓಡಾಡುತ್ತಲೇ ಇದ್ದರು. ಅವರು ಹೆಚ್ಚಿನ ಮಾತಾಡದೆ ನೇರವಾಗಿ ಪ್ರಶ್ನೋತ್ತರಕ್ಕೆ ಜಿಗಿದರು. ವಿದ್ಯಾರ್ಥಿಗಳು ಅಂಕಿಗಳನ್ನು ಕೊಟ್ಟರೆ ಅದರ ವರ್ಗಮೂಲ ಇತ್ಯಾದಿಗಳನ್ನು ಚಾಕಚಕ್ಯತೆಯಿಂದ ಹೇಳಿ ಎಲ್ಲರನ್ನೂ ದಂಗು ಮಾಡಿದರು. ನಾನು ಮತ್ತು ಮಂಜುನಾಥ್ ಒಂದು ಎಂಟೋ ಹತ್ತೋ ಅಂಕಿಯನ್ನು ತೆಗೆದುಕೊಂಡು ಅದನ್ನು ಅದೇ ಅಂಕಿಯಿಂದ ಗುಣಿಸಿದೆವು. ಈ ಮಹಾನ್ ಅಂಕಿಯನ್ನು ಅವರಿಗೆ ಓದಿ ಹೇಳುವುದೇ ಒಂದು ಪ್ರಯಾಸವಾಯಿತು. ಅವರು ಕೇಳಿಕೊಂಡು "ಸರಿ, ಬರೆದುಕೊಳ್ಳಿ ನಿಮಗೆ ಬೇಕಾದ ವರ್ಗಮೂಲ!" ಎಂದು ಎಡಗಡೆಯಿಂದ ಪ್ರಾರಂಭಿಸಿಯೇ ಬಿಟ್ಟರು. ಮಧ್ಯೆ ಮಧ್ಯೆ ನಿಲ್ಲಿಸಿ ಬೇರೆ ಒಂದೆರಡು ಸುಲಭದ ಪ್ರಶ್ನೆಗಳನ್ನು ಕೂಡಾ ಬಿಡಿಸಿದರು. ನಂತರ ನಮ್ಮ ಪ್ರಶ್ನೆಗೆ ಹಿಂತಿರುಗಿ "ಓಹ್, ಬಹಳ ಸ್ವಾರಸ್ಯಕರವಾಗಿದೆ!" ಎಂದು ಉದ್ಗರಿಸಿ ಮುಂದುವರೆಸಿದರು. ಸರಿಯಾಗಿದೆಯಾ ಎಂದು ನಮ್ಮ ಕಡೆ ಕುತೂಹಲದಿಂದ ನೋಡುತ್ತಾ ಕೇಳಿದರು. ಅವರು ಮುಗಿಸಿದಾಗ ನಾವು ಸರಿಯಾಗಿದೆ ಎಂದಾಗ ಇಡೀ ಕೋಣೆಯಲ್ಲಿ ದೊಡ್ಡ ಕರತಾಡನ. ಶಕುಂತಲಾದೇವಿ ಅವರಿಗೆ ಹಾಸ್ಯಪ್ರಜ್ಞೆ ಚೆನ್ನಾಗಿತ್ತು. ಪ್ರಶ್ನೆ ಕೇಳಿದವರ ಹೆಸರು ಕೇಳುತ್ತಿದ್ದರು. ಆಯ್ಡು ಎಂದೋ ಏನೋ ಹೆಸರುಳ್ಳ ಒಬ್ಬ ಕೊರಿಯಾ ದೇಶದ ವಿದ್ಯಾರ್ಥಿಗೆ "ಏನು, ನಾಯ್ಡು ಎಂದೇ! ಅದು ಭಾರತದಲ್ಲಿ ಪ್ರಚಲಿತವಾದದ್ದು!" ಎಂದರು. ಆ ವಿದ್ಯಾರ್ಥಿ "ಇಲ್ಲ ಆಯ್ಡು" ಎಂದು ತಿದ್ದಿದಾಗ "ಓಹ್, ಮದುವೆಯಲ್ಲಿ ಹೇಳುವ ಹಾಗೆ ಐ ಡೂ ಎಂದಲ್ಲವೇ!" ಎಂದು ಬಿಂಕದಿಂದ ಹೇಳಿದಾಗ ಹೋ ಎಂದು ನಗು. ಹೀಗೆ ಒಂದು ಗಂಟೆಯ ಕಾರ್ಯಕ್ರಮ ಮುಗಿದಾಗ ಎಲ್ಲರ ಮುಖದಲ್ಲೂ ಉತ್ಸಾಹ ಕಾಣುತ್ತಿತ್ತು. ಭಾರತೀಯ ವಿದ್ಯಾರ್ಥಿಗಳ ಮುಖದಲ್ಲಿ ಹೆಮ್ಮೆಯೂ ಕಾಣುತ್ತಿತ್ತು.
ಶಕುಂತಲಾದೇವಿ ಬಹಳ ಹಿಂದೆಯೇ ಹೋಮೋಸೆಕ್ಷುಯಾಲಿಟಿ ಕುರಿತ ಪುಸ್ತಕ ಬರೆದರು. ಇಂಥ ವಿಷಯದ ಬಗ್ಗೆ ಬರೆಯಲು ಸಾಕಷ್ಟು ದಿಟ್ಟತನದ ಅಗತ್ಯವಿದೆ. ಅವರು ಗಣಿತದ ಬಗ್ಗೆ ಕೂಡಾ ಒಂದಿಷ್ಟು ಪುಸ್ತಕಗಳನ್ನು ಬರೆದಿದ್ದಾರೆ.
ಈಗ ಅವರನ್ನು ಕುರಿತ ಬಯೋ ಪಿಕ್ ಬಂದಿದೆಯಂತೆ. ಅದರ ಟ್ರೇಲರ್ ನೋಡಿಯೇ ನನಗೆ ಕಸಿವಿಸಿಯಾಯಿತು. ಅವರ ವೈಯಕ್ತಿಕ ಬದುಕನ್ನು ಕಟ್ಟಿಕೊಂಡು ನಮಗೆ ಮಾಡಬೇಕಾದದ್ದಾದರೂ ಏನು! ಅದನ್ನೇ ದೊಡ್ಡದು ಮಾಡಿದರೆ ಅವರ ಅಸಾಧಾರಣ ಸಾಧನೆಗೆ ಮಸಿ ಬಳಿದ ಹಾಗೆ. ನಾನು ಚಿತ್ರ ನೋಡಿಲ್ಲ. ಆದರೂ ಹೀಗೆ ರೋಲ್ ಮಾಡೆಲ್ ಎಂದು ಜನ ಪರಿಗಣಿಸುವವರಿಗೆಲ್ಲಾ ತೇಜೋವಧೆ ಮಾಡುವುದು ಬಹಳ ದೊಡ್ಡ ತಪ್ಪು.
ಸಿ.ಪಿ. ರವಿಕುಮಾರ್
ಆಗಸ್ಟ್ 2, 2020
ಭಾಗ 2
ಶಕುಂತಲಾದೇವಿ ಚಿತ್ರದ ಟ್ರೇಲರ್ ನೋಡಿದಾಗ ಚಿತ್ರವನ್ನು ನೋಡಬಾರದು ಎಂದುಕೊಂಡಿದ್ದೆ. ಆದರೆ ನನ್ನ ಹೆಂಡತಿ ನೋಡಲು ಪ್ರೇರೇಪಿಸಿದಳು. ಪುಸ್ತಕದ ಕವರ್ ಹೇಗೆ ಪುಸ್ತಕದ ಹೂರಣವನ್ನು ಪ್ರತಿನಿಧಿಸುವುದಿಲ್ಲವೋ ಹಾಗೇ ಟ್ರೇಲರ್ ಕೂಡಾ ಚಿತ್ರವನ್ನು ಪ್ರತಿನಿಧಿಸುವುದಿಲ್ಲ.
ಚಿತ್ರದ ಆಶಯ ನಾವು ಬಯಸುವುದಕ್ಕಿಂತ ಸ್ವಲ್ಪ ಭಿನ್ನ. ಆದರೆ ನಾವು ಪೂರ್ವಗ್ರಹವಿಲ್ಲದೆ ನೋಡಿದರೆ ಚಿತ್ರ ಚೆನ್ನಾಗಿದೆ ಮತ್ತು ತನ್ನ ಆಶಯವನ್ನು ಬಿತ್ತುವುದರಲ್ಲಿ ಸಫಲವಾಗಿದೆ.
ಒಬ್ಬ ಗಂಡು ಸಾಧಕನಾಗಿದ್ದರೆ ಅವನ ಹೆಂಡತಿ ಮಕ್ಕಳ ಜವಾಬ್ದಾರಿ ಹೊತ್ತು ಅವನು ಹೋದ ಕಡೆಗೆಲ್ಲಾ ಅವನನ್ನು ಹಿಂಬಾಲಿಸುವುದನ್ನು ಸಮಾಜ ಒಪ್ಪುತ್ತದೆ. ಆದರೆ ಹೆಣ್ಣು ತನ್ನ ಸಾಧನೆಯಲ್ಲಿ ತೊಡಗಿದರೆ ಅವಳು ತನ್ನ ತಾಯಿಯ ಕರ್ತವ್ಯಗಳನ್ನು ಮರೆತಳೆಂದು ಸಮಾಜ ದೂರುತ್ತದೆ. ಪುಟ್ಟ ಹುಡುಗಿ ಶಕುಂತಲಾ ಬಾಲ್ಯದಲ್ಲೇ ತನ್ನ ಅಸಾಧಾರಣ ಸಾಮರ್ಥ್ಯದ ಬಗ್ಗೆ ಎಲ್ಲರೂ ಕೌತುಕ ಮಾಡುವುದನ್ನು ಅನುಭವಿಸಿದವಳು. ಶಾಲೆಗಳಲ್ಲಿ ಅವಳು ನೀಡುತ್ತಿದ್ದ ಪ್ರದರ್ಶನಗಳಿಂದಲೇ ಮನೆಯ ರಥ ಸಾಗುತ್ತದೆ ಎಂದು ತಿಳಿದಿದ್ದವಳು. ತನ್ನ ತಂದೆ ತನ್ನನ್ನು ಶಾಲೆಗೆ ಕಳಿಸದೆ ತನ್ನನ್ನು ಹಣದ ಗಿಡದಂತೆ ಕಾಣುವುದು ಅವಳಲ್ಲಿ ದ್ವೇಷ ಹುಟ್ಟಲು ಕಾರಣವಾಗುತ್ತದೆ. ತನ್ನ ತಾಯಿ ಬಾಯೇ ಬಿಡದೆ ಮೂಕೆತ್ತಿನಂತೆ ತಂದೆಯ ಮಾತನ್ನು ಮೀರಲಾಗದೆ ಒಳಗೊಳಗೇ ಕೊರಗುವುದು ಅವಳಲ್ಲಿ ಜುಗುಪ್ಸೆ ಹುಟ್ಟಿಸುತ್ತದೆ. ತಾನು ಇಂಥ ತಾಯಿಯಾಗಬಾರದು, ತಾನು ಗಟ್ಟಿ ಧ್ವನಿಯ ದಿಟ್ಟ ಹೆಣ್ಣಾಗಬೇಕು ಎಂಬ ಛಲ ಅವಳಲ್ಲಿ ಬೆಳೆಸುತ್ತದೆ. ಮನೆಯ ವಾತಾವರಣಕ್ಕಿಂತ ತಾನು ಪ್ರದರ್ಶನ ನೀಡುವ ಸ್ಟೇಜ್ ಅವಳಿಗೆ ಹೆಚ್ಚು ಆಪ್ಯಾಯವಾಗುತ್ತದೆ. ಸಂಖ್ಯೆಗಳೊಂದಿಗೆ ಆಟ, ಎದುರು ಕುಳಿತವರಿಂದ ಹೊಮ್ಮುವ ಪ್ರಶಂಸೆ ಅವಳಿಗೆ ಹೆಚ್ಚು ಪ್ರಿಯವಾಗುತ್ತದೆ.
ಚಿತ್ರದಲ್ಲಿರುವ ಸನ್ನಿವೇಶಗಳಲ್ಲಿ ಎಲ್ಲವೂ ನಿಜವೋ ಅಥವಾ ಒಂದಷ್ಟು ಕಾಲ್ಪನಿಕವೋ ಹೇಳಲಾರೆ. ಶಕುಂತಲಾ ಜೀವನದಲ್ಲಿ ಮೂವರು ಪುರುಷರು ಪ್ರವೇಶಿಸುತ್ತಾರೆ. ಒಬ್ಬ ಅವಳನ್ನು ಶೋಷಿಸುವ ವ್ಯಕ್ತಿ. ಇನ್ನೊಬ್ಬ ಅವಳನ್ನು ಬೆಳೆಸಿ ಅವಳಿಗೆ ದೊಡ್ಡ ಹೆಸರು ತಂದುಕೊಟ್ಟವನು. ಮೂರನೆಯವನು ಅವಳನ್ನು ನಿಜವಾಗಲೂ ಪ್ರೀತಿಸಿ ಅವಳನ್ನು ಮದುವೆಯಾದವನು. ಅವಳನ್ನು ಪೂರ್ಣವಾಗಿ ಅರ್ಥ ಮಾಡಿಕೊಂಡವನು. ಅವಳೊಂದಿಗೆ ವಿಚ್ಛೇದನ ಪಡೆದರೂ ಅವಳನ್ನು ಒಂದಿಷ್ಟೂ ದ್ವೇಷಿಸದ ಉದಾರ ವ್ಯಕ್ತಿತ್ವದವನು.
ತನ್ನ ತಂದೆತಾಯಿಯನ್ನು ದ್ವೇಷಿಸುವ ಶಕುಂತಲಾ ತಾನೂ ಒಂದು ಮಗುವಿನ ತಾಯಿಯಾಗಿ ತನಗೆ ಸಿಕ್ಕದ ಬಾಲ್ಯವನ್ನು ಆ ಮಗುವಿಗೆ ನೀಡುವ ಅಭಿಲಾಷೆ ಹೊಂದಿದ್ದಾಳೆ. ಮಗುವಿಗಾಗಿ ತಾನು ಪರಿತೋಷನೊಂದಿಗೆ ಸಂಬಂಧ ಬಯಸುವುದಾಗಿ ಅವಳು ಅವನಿಗೆ ನೇರವಾಗಿ ಹೇಳುತ್ತಾಳೆ. ಅವನು ನಕ್ಕು ಮದುವೆಯ ಮಾರ್ಗ ಸೂಚಿಸುತ್ತಾನೆ. ಅವರಿಗೆ ಹೆಣ್ಣುಮಗುವಾಗುತ್ತದೆ. ಆದರೆ ಸದಾ ದೇಶವಿದೇಶ ಸುತ್ತುವ ಶಕುಂತಲಾಳಿಗೆ ಮಗುವನ್ನು ನೋಡಿಕೊಳ್ಳುವುದು ಕಷ್ಟ. ಮೊದಲ ಐದಾರು ವರ್ಷ ಮಗುವನ್ನು ಅವಳ ಪತಿಯೇ ನೋಡಿಕೊಳ್ಳುತ್ತಾನೆ. ಅವರಿಬ್ಬರೂ ತನ್ನೊಂದಿಗೆ ಪ್ರವಾಸಗಳಿಗೆ ಬರಲಿ ಎಂದು ಶಕುಂತಲಾ ಎಷ್ಟೇ ಕೇಳಿದರೂ ಇದಕ್ಕೆ ಪರಿತೋಷ್ ಒಪ್ಪುವುದಿಲ್ಲ. ಕೊನೆಗೆ ಮಗಳನ್ನು ಅವನಿಂದ ಬಲವಂತವಾಗಿ ಕಸಿದುಕೊಂಡು ಶಕುಂತಲಾ ಅವಳನ್ನು ತಾನೇ ಬೆಳೆಸುತ್ತಾಳೆ. ತನ್ನ ಬಗ್ಗೆ ಅಪಾರ ಆತ್ಮವಿಶ್ವಾಸವಿದ್ದ ಶಕುಂತಲಾ ತಾನು ಮಾಡುತ್ತಿರುವುದು ತಪ್ಪೆಂದು ಅನ್ನಿಸುವುದೇ ಇಲ್ಲ. ಮಗುವನ್ನು ತನ್ನ ಇಷ್ಟದಂತೆ ಬೆಳೆಸುತ್ತಾಳೆ. ಆ ಮಗುವಿಗೂ ಸ್ಕೂಲ್ ಪ್ರಾಪ್ತವಾಗುವುದಿಲ್ಲ. ಒಂದು ಅರ್ಥದಲ್ಲಿ ಅವಳು ತನ್ನ ತಂದೆ ಮಾಡಿದ ತಪ್ಪನ್ನೇ ಪುನರಾವರ್ತಿಸುತ್ತಾಳೆ.
ತಾಯಿಯ ಬಗ್ಗೆ ಮಗಳು ಅನು ದ್ವೇಷ ಬೆಳೆಸಿಕೊಳ್ಳುತ್ತಾಳೆ. ಕೊನೆಗೂ ತನ್ನ ತಾಯಿಯನ್ನು ಒಂದು ನಾರ್ಮಲ್ ಜೀವನ ನಡೆಸಲು ಒಪ್ಪಿಸಿ ಲಂಡನ್ ನಗರದಲ್ಲಿ ಭವ್ಯ ಬಂಗಲೆಯಲ್ಲಿ ತಾಯಿಯೊಂದಿಗೆ ವಾಸ್ತವ್ಯ ಹೂಡುತ್ತಾಳೆ. ಅವಳ ಆಸಕ್ತಿ ಇರುವುದು ಇಂಟೀರಿಯರ್ ಡೆಕೊರೇಟರ್ ಆಗುವುದರಲ್ಲಿ. ಮಗಳ ಈ ಆಸೆಗೆ ಶಕುಂತಲಾದೇವಿ ಪೋಷಣೆ ನೀಡುತ್ತಾರೆ. ತಾಯಿಮಗಳು ಈ ಬಿಸಿನೆಸ್ಸಿನಲ್ಲಿ ಯಶಸ್ಸು ಕಾಣುತ್ತಾರೆ. ಅನುವನ್ನು ಮೆಚ್ಚಿ ಮದುವೆಯಾದ ಹುಡುಗನನ್ನು ಶಕುಂತಲಾ ಮನೆ ಅಳಿಯ ಮಾಡಿಕೊಳ್ಳುವ ಕನಸು ಕಾಣುತ್ತಾರೆ. ಆದರೆ ಅವನಿಗೆ ಮತ್ತು ಅನುವಿಗೆ ತಮ್ಮದೇ ಕನಸುಗಳಿವೆ. ಮಗಳು ಜಗಳವಾಡಿ ಬೆಂಗಳೂರಿಗೆ ಹೊರಟುಹೋಗುತ್ತಾಳೆ. ತಾನು ಅಪಾರವಾಗಿ ಪ್ರೀತಿಸುವ ಮಗಳನ್ನು ಮತ್ತೆ ಸಂಪರ್ಕಿಸಲು ಶಕುಂತಲಾ ಹೆಣಗುತ್ತಾಳೆ.
ಅನು ಮೊದಲು ತಾಯಿಯಾಗಲು ನಿರಾಕರಿಸುತ್ತಾಳೆ. ಆದರೆ ಅವಳಿಗೆ ಹೆಣ್ಣುಮಗುವಾಗುತ್ತದೆ. ಮಗುವಿನ ಲಾಲನೆಗೆ ಅತ್ತೆಯಿಂದ ನೆರವು ಪಡೆದು ಬಿಸಿನೆಸ್ ಮುಂದುವರೆಸುತ್ತಾಳೆ. ಆದರೆ ಅವಳನ್ನು ಸದಾ ತಾನು ಮಾಡುತ್ತಿರುವುದು ತಪ್ಪೆನ್ನುವ ಅಪರಾಧಿ ಭಾವನೆ ಕಾಡುತ್ತದೆ. ಅವಳ ಅತ್ತೆ ಅವಳಿಗೆ "ಯಾವ ತಾಯಿಯೂ ಸಂಪೂರ್ಣಳಲ್ಲ. ಮಕ್ಕಳನ್ನು ಕಡಿಮೆ ಪ್ರೀತಿಸಿದರೂ ತಪ್ಪಾಗುತ್ತದೆ. ಹೆಚ್ಚು ಪ್ರೀತಿಸಿದರೂ ತಪ್ಪಾಗುತ್ತದೆ" ಎಂದು ಸಂತೈಸುತ್ತಾರೆ.
ತಾಯಿಮಗಳ ದ್ವೇಷ ಮುಂದುವರೆಯುತ್ತದೆ. ಇದು ತಾರಕಕ್ಕೆ ಹೋಗಿ ಕೋರ್ಟಿಗೆ ಬರುವ ಸನ್ನಿವೇಶ ಉತ್ಪನ್ನವಾಗುತ್ತದೆ. ಕೊನೆಗೆ ಎಲ್ಲವೂ ಸುಖಾಂತವಾಗುತ್ತದೆ ಎನ್ನುವುದು ಸಮಾಧಾನಕರ ವಿಷಯ.
ತನ್ನ ಕಾಲಮಾನಕ್ಕಿಂತ ತುಂಬಾ ಮುಂದಿದ್ದ ಶಕುಂತಲಾದೇವಿಯವರ ಬಗ್ಗೆ ಒಂದು ಚಿತ್ರವನ್ನು ಕಟ್ಟಿಕೊಡುವುದರಲ್ಲಿ ಚಿತ್ರ ಗೆಲ್ಲುತ್ತದೆ. ವಿದ್ಯಾ ಬಾಲನ್ ಅವರ ಅಭಿನಯ ಅಮೋಘವಾಗಿದೆ. ಎಲ್ಲ ಪೋಷಕ ಪಾತ್ರಧಾರಿಗಳೂ ಸಮರ್ಪಕವಾಗಿ ನಟಿಸಿದ್ದಾರೆ. ಚಿತ್ರದ ಎಲ್ಲ ತಾಂತ್ರಿಕ ಅಂಶಗಳೂ ಅತ್ಯುತ್ತಮವಾಗಿವೆ.
ಶಕುಂತಲಾ ಅವರು ಕನ್ನಡಿಗರು, ಚಿತ್ರದಲ್ಲಿ ಕನ್ನಡಕ್ಕೆ ಸೂಕ್ತ ಪ್ರಾತಿನಿಧ್ಯವಿಲ್ಲ ಎಂಬ ಆಕ್ಷೇಪಣೆಯನ್ನು ಮರೆತುಬಿಡೋಣ. ಇದೊಬ್ಬ ಸಾಧಕಿಯ ಚಿತ್ರ, ಪುರುಷಪ್ರಧಾನ ಸಮಾಜದಲ್ಲಿ ತನ್ನದೇ ನಿಯಮಗಳನ್ನು ಅನುಸರಿಸಿ ಧೈರ್ಯದಿಂದ ಬಾಳಿದ ಒಬ್ಬ ಮಹಿಳೆಯ ಕುರಿತ ಚಿತ್ರ ಎಂದು ನೋಡಿ. ನಿಮಗೆ ಚಿತ್ರ ಇಷ್ಟವಾಗುತ್ತದೆ.
ಆಗಸ್ಟ್ 3, 2020
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ