ಗೊಂಡಾರಣ್ಯಕ್ಕೆ ಪ್ರವಾಸ

People at the Train Station

ನಾನು ದೆಹಲಿ ಐಐಟಿ ಸೇರಿದ ಹೊಸತು. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಇಂದೂಲ್ಕರ್ ನನ್ನನ್ನು ಕರೆದು "ನೋಡಿ, ಪ್ರತಿವರ್ಷ ಬಿ.ಟೆಕ್ ವಿದ್ಯಾರ್ಥಿಗಳು ಬೇಸಗೆ ತರಬೇತಿಗಾಗಿ ಯಾವುದಾದರೂ ಕಂಪನಿಗೆ ಹೋಗುತ್ತಾರೆ. ಅವರ ಪ್ರಾಜೆಕ್ಟ್ ನೋಡಿ ಅವರಿಗೆ ಸಲಹೆ ಕೊಡಲು ನಮ್ಮ ಕಡೆಯಿಂದ ಒಬ್ಬ ಉಪಾಧ್ಯಾಯರು ಹೋಗಬೇಕು. ಇಲ್ಲಿ ಲಿಸ್ಟ್ ಇದೆ. ನಿಮಗೆ ಇಷ್ಟವಾದದ್ದು ಯಾವುದಾದರೂ ಕಂಪನಿ ಇದ್ದರೆ ಆರಿಸಿಕೊಳ್ಳಿ" ಎಂದರು. ಈಗಾಗಲೇ ಬೆಂಗಳೂರು, ಬಾಂಬೆ, ಮದ್ರಾಸ್ ಮುಂತಾದ ಸಿಟಿಗಳಲ್ಲಿರುವ ಕಂಪನಿಗಳನ್ನು ಯಾರೋ ಆರಿಸಿಕೊಂಡುಬಿಟ್ಟಿದ್ದರು. ನನಗೆ ಆಗಿನ್ನೂ "ಸಾರಿ ಸರ್, ಇವು ಯಾವುದೂ ನನಗಿಷ್ಟವಿಲ್ಲ" ಎನ್ನುವಷ್ಟು ತಿಳಿವಳಿಕೆ ಇರಲಿಲ್ಲ.  ನನಗೆ ಆಗ ಇನ್ನೂ ಮದುವೆ ಆಗಿರಲಿಲ್ಲ. ಹೀಗಾಗಿ ಇವನು ಎಲ್ಲಿಗಾದರೂ ಹೋಗಲು ತಯಾರಾಗುತ್ತಾನೆ ಎಂದು ಅವರಿಗೆ ಅನ್ನಿಸಿರಬಹುದು! ನನಗೆ ಸಿಕ್ಕ ಎರಡು ಇಂಡಸ್ಟ್ರಿಗಳಲ್ಲಿ ಒಂದು ಉತ್ತರಪ್ರದೇಶದ ಗೊಂಡಾ ಎಂಬ ಕಡೆ ಇರುವ ಐಟಿಐ ಮತ್ತು ಇನ್ನೊಂದು ಅಲಾಹಾಬಾದಿನ ಹತ್ತಿರ ಇರುವ ನೈನಿ ಎಂಬಲ್ಲಿರುವ ಐಟಿಐ!  ಗೊಂಡಾ ಎಂಬ ಹೆಸರೇ ನಾನು ಕೇಳಿರಲಿಲ್ಲ. ಇದಾವುದೋ ಗೊಂಡಾರಣ್ಯದ ಅವಶೇಷವೇನೋ ಎಂದು ನನಗೆ ಅನ್ನಿಸಿತು. ನೈನಿ ಎಂಬ ಹೆಸರು ಕೇಳಿದ್ದು ಮಸುಕಾಗಿ ನೆನಪಿತ್ತು. ಆಗ ಇಂಟರ್ನೆಟ್ ಇರಲಿಲ್ಲ. ಅನಂತರ ನೈನಿ ಪ್ರಸಿದ್ಧವಾಗಿರುವುದು ಅಲ್ಲಿಯ ಜೈಲಿಗೆ ಎಂದು ತಿಳಿಯಿತು. ಅಲಾಹಾಬಾದಿನಲ್ಲಿ ಹುಟ್ಟಿದ ನೆಹರೂ ಮತ್ತು ಅವರ ಕುಟುಂಬದವರನ್ನು ಬ್ರಿಟಿಷರು ಬಂಧಿಸಿದಾಗ ಇಡುತ್ತಿದ್ದದ್ದು ನೈನಿ ಜೈಲಿನಲ್ಲಿ. 


ಈ ಗೊಂಡಾ ಮತ್ತು ನೈನಿಗೆ ಹೇಗೆ ಹೋಗಬೇಕು ಎಂಬುದೂ ನನಗೆ ಗೊತ್ತಿರಲಿಲ್ಲ. ಹೇಳುವವರೂ ಯಾರೂ ಇರಲಿಲ್ಲ. ಎಲ್ಲವನ್ನೂ ಇಂಟರ್ನೆಟ್ ಮೂಲಕ ತಿಳಿದುಕೊಳ್ಳುವ ಇಂದಿನ ದಿನಗಳಲ್ಲಿ ಇಂಥ ಪರಿಸ್ಥಿತಿ ನಿಮಗೆ ಊಹಿಸಲೂ ಸಾಧ್ಯವಿಲ್ಲ. ನಾನು ನನ್ನ ಲ್ಯಾಬ್ ಅಸಿಸ್ಟೆಂಟ್ ಆಗಿದ್ದ ಫತೇಹ್ ಸಿಂಗ್ ಅವರನ್ನು ಕೇಳಿದೆ. ಅವನು ವಿಚಾರಿಸಿ "ಗೊಂಡಾ ಇರುವುದು  ಉತ್ತರಪ್ರದೇಶದ ಅಯೋಧ್ಯಾ ಹತ್ತಿರ. ಅಲ್ಲಿಗೆ ಟ್ರೇನ್ ಹೋಗುತ್ತದೆ" ಎಂದು ತಿಳಿಸಿದ. ಅಲ್ಲಿಂದ ಅಲಾಹಾಬಾದಿಗೆ ಇನ್ನೊಂದು ಟ್ರೇನ್ ಹೋಗುತ್ತದೆ ಎಂದು ಗೊತ್ತಾಯಿತು.  ರಾತ್ರಿ ರೈಲು ಪ್ರಯಾಣದ ನಂತರ ಸ್ನಾನ ಇತ್ಯಾದಿಗೆ ಐಟಿಐ ಗೆಸ್ಟ್ ಹೌಸ್ ಸೌಕರ್ಯ ಕಲ್ಪಿಸುತ್ತದೆ ಎಂದು ತಿಳಿಯಿತು. ಆಗೆಲ್ಲಾ ರೈಲ್ವೆ ರಿಸರ್ವೇಶನ್  ಒಂದು ದೊಡ್ಡ ಯಜ್ಞದಂತೆ. ಪುಣ್ಯವಶಾತ್ ಒಬ್ಬ ಲ್ಯಾಬ್ ಅಸಿಸ್ಟೆಂಟ್ ನನ್ನ ಟಿಕೆಟ್ ರಿಸರ್ವ್ ಮಾಡಿಸಿಕೊಂಡು ಬಂದ. ನಾನು ಬರುವ ದಿನ ಯಾವುದು ಎಂದು ತಿಳಿಸಿ ಗೆಸ್ಟ್ ಹೌಸಿನಲ್ಲಿ ಕೋಣೆ ಬೇಕಾಗುತ್ತದೆ ಎಂದು ಐಟಿಐಗೆ  ಕಾಗದ ಬರೆದು ಕಳಿಸಿದ್ದಾಯಿತು.  

ಉತ್ತರಭಾರತದ ಕೆಟ್ಟ ಬೇಸಗೆ. ನಾನು ರಾತ್ರಿಯ ರೈಲಿನಲ್ಲಿ ಕಂಡರಿಯದ ಗೊಂಡಾಗೆ ಹೊರಟೆ.  ಈ ರೈಲುಗಳಲ್ಲಿ ಸಮಯದ ನಿಯಮಗಳು ಅಷ್ಟೇನೂ ಪಾಲಿಸುವುದಿಲ್ಲ. ತೂಕಡಿಸುತ್ತಾ ರೈಲು ಹೊರಟಿತು. ನನಗೆ ಅಸಿಸ್ಟೆಂಟ್  ಏಸಿ ದ್ವಿತೀಯ ಟಯರ್ ಸೀಟ್ ಕಾದಿರಿಸಿದ್ದ. ನನಗೆ ಮೇಲಿನ ಸೀಟ್ ಸಿಕ್ಕಿತು. ದಿಂಬು, ಚಾದರಗಳನ್ನು ಒಬ್ಬ ಕಾರ್ಮಿಕ ಕೊಟ್ಟು ಹೋದ. ಗೊಂಡಾ ಜಂಕ್ಷನ್ ಎಷ್ಟು ಹೊತ್ತಿಗೆ ತಲುಪುತ್ತದೆ ಎಂದು ನಾನು ಟಿಟಿಯನ್ನು ಕೇಳಿದೆ. ಬೆಳಗಿನ ಐದು ಎಂದೋ ಏನೋ ಹೇಳಿದ. ನನಗೆ ಈ ಸ್ಟೇಷನ್ ತಪ್ಪಿದರೇನು ಗತಿ ಎಂದು ನಿದ್ದೆಯೂ ಸರಿಯಾಗಿ ಬರಲಿಲ್ಲ. ಆಗ ಮೊಬೈಲ್ ಇರಲಿಲ್ಲ, ಫೋನಿನಲ್ಲಿ ಅಲಾರಂ ಹಾಕಿಕೊಂಡು ನಿದ್ರಿಸುವ ಸೌಕರ್ಯ ಇರಲಿಲ್ಲ. ರೈಲು ಅಲ್ಲಲ್ಲಿ ನಿಲ್ಲುತ್ತಿತ್ತು. ಜನ ಏರುವುದು, ಇಳಿಯುವುದು, ತಗ್ಗಿದ ದನಿಯಲ್ಳಿ ಮಾತಾಡುವುದು ಕೇಳುತ್ತಿತ್ತು.

ರೈಲು ಕೊನೆಗೂ ಗೊಂಡಾ ಜಂಕ್ಷನ್ ತಲುಪಿತು. ಬೆಳಗಿನ ಆರು ಗಂಟೆಯಾಗಿತ್ತೇನೋ. ಆಗಲೇ ಬೆಳಕಾಗಿತ್ತು. ನಾನು ಇಳಿದೆ. ಈಗ ಐಟಿಐಗೆ ಹೋಗುವುದು ಹೇಗೆ? ಆಗ ಓಲಾ, ಊಬರ್ ಇವೆಲ್ಲಾ ಯಾವುದೂ ಇರಲಿಲ್ಲ. ನಾನು ರೈಲ್ವೆ ಅಧಿಕಾರಿಯೊಬ್ಬರಿಗೆ ವಿಳಾಸ ತೋರಿಸಿದೆ. ಇಲ್ಲೇ ಬಸ್ ಸಿಕ್ಕುತ್ತದೆ ಎಂದರು. ಬಸ್ ನಿಲ್ದಾಣ ಅಲ್ಲೇ ಹತ್ತಿರದಲ್ಲಿತ್ತು. ನಾನು ಹೋದಾಗ ಒಂದು ಬಸ್ ನಿಂತಿತ್ತು.  ನಾನು ಓಡಿ ಹೋಗಿ ಇದು ಐಟಿಐಗೆ ಹೋಗುತ್ತದೆಯೇ ಎಂದು ಕೇಳಿದೆ. ಬೈಠೋ ಎಂದು ಕಂಡಕ್ಟರ್ ಹೇಳಿದಾಗ ನನ್ನ ಆನಂದಕ್ಕೆ ಪಾರವೇ ಇಲ್ಲ. ನಾನು ಕಿಟಕಿ ಬದಿಯ ಸೀಟ್ ಹುಡುಕಿ ಕುಳಿತೆ. ಜನ ಕಡಿಮೆ ಇದ್ದರು. ಕಂಡಕ್ಟರ್ ಟಿಕೆಟ್ ಎಂದು ಬಂದಾಗ ಇದು ಯಾವಾಗ ಹೊರಡುತ್ತೆ ಎಂದು ಕೇಳಿದೆ. ಇನ್ನೇನು ಹೊರಡುತ್ತೆ ಎಂದು ಮುಂದೆ ಹೋದ.

ಅಭೀ ಅಂದರೆ ಅಭೀ ಅಲ್ಲ, ಸ್ವಲ್ಪ ಹೊತ್ತಿನಲ್ಲಿ ಎಂದು ನನಗೆ ನಂತರ ತಿಳಿಯಿತು. ಅನಂತರ ಈ ಸ್ವಲ್ಪ ಹೊತ್ತೆಂದರೆ ಅಷ್ಟೇನೂ ಸ್ವಲ್ಪವಲ್ಲ ಎಂದೂ ತಿಳಿಯಿತು. ಬಸ್ ತುಂಬುವವರೆಗೂ ಅದು ಕದಲುವುದಿಲ್ಲ ಎಂದು ಗೊತ್ತಾಯಿತು. ತುಂಬುವುದು ಎಂದರೆ ಉಸಿರಾಡಲು ಕೂಡಾ ಸಾಧ್ಯವಾದಷ್ಟು ಎಂದೂ ತಿಳಿಯಿತು. ಒಂದು ಬಸ್ಸಿನಲ್ಲಿ ಇಷ್ಟೊಂದು ಜನರನ್ನು ತುರುಕಬಹುದು ಎಂದು ನನಗೆ ಕಲ್ಪನೆಯೇ ಇರಲಿಲ್ಲ. 

ಕೊನೆಗೂ ಬಸ್ ಕದಲಿತು. ಸದ್ಯ ನನಗೆ ಕಿಟಕಿ ಸೀಟ್ ಸಿಕ್ಕಿದ್ದರಿಂದ ಒಂದಿಷ್ಟು ಗಾಳಿಯಾಡಿ ನನಗೆ ಜೀವ ಬಂದಹಾಗಾಯಿತು. ಬಸ್ಸು ಎಲ್ಲ ಕಡೆಗೂ ನಿಂತು ನಿಂತು ಸಾಗಿತು. ಕಂಡಕ್ಟರ್ ಇನ್ನೂ ಜನರನ್ನು ಹತ್ತಿಸಿಕೊಳ್ಳುತ್ತಲೇ ಇದ್ದ!  ನನ್ನ ಸ್ಟಾಪ್ ಯಾವಾಗ ಬರುತ್ತೆ ಎಂದು ನಾನು ಅಕ್ಕಪಕ್ಕರವರನ್ನು ಕೇಳುತ್ತಲೇ ಇದ್ದೆ. ಕೊನೆಗೂ ಬಸ್ಸಿನಲ್ಲಿ ಇಕ್ಕಟ್ಟು ಕಡಿಮೆಯಾಗತೊಡಗಿತು. ನನ್ನ ಸ್ಟಾಪ್ ಕೂಡಾ ಬಂತು. ನಾನು ಇಳಿದಾಗ ಆಗಲೇ ಸೂರ್ಯ ಮೇಲೇರಿದ್ದ. ಒಂಬತ್ತು ಗಂಟೆಯಾಗಿತ್ತೇನೋ! ಮೈಯೆಲ್ಲಾ ಬೆವರು. ನಾನು ಗೆಸ್ಟ್ ಹೌಸ್ ಹುಡುಕಿಕೊಂಡು ಹೊರಟೆ.


* * *


ಗೊಂಡಾ ಖಂಡಿತ ಹಿಂದೊಮ್ಮೆ ಗೊಂಡಾರಣ್ಯವೇ ಆಗಿರಬಹುದು. ಎಲ್ಲಿ ನೋಡಿದರೂ ವೃಕ್ಷಸಮೃದ್ಧಿ.  ಬಸ್ಸಿನ ಕಿಟಕಿಯಿಂದ ನನಗೆ ಕಂಡಿದ್ದೂ ಈ ಸಸ್ಯರಾಶಿಯೇ. ಎಲ್ಲೆಲ್ಲೂ ಮಾವಿನಮರಗಳ ಸಾಲು. ಬೇಸಗೆಯ ದಿನಗಳಾದ್ದರಿಂದ ಮರಗಳಲ್ಲಿ ತೂಗಾಡುವ ಮಾವಿನಕಾಯಿಗಳು.  ಅಯೋಧ್ಯೆಯಿಂದ ಸುಮಾರು ಐವತ್ತು ಕಿಲೋಮೀಟರ್ ದೂರದಲ್ಲಿರುವ ಸ್ಥಳ. ಆಗ ಅಯೋಧ್ಯೆ ವಿವಾದ ತುತ್ತತುದಿಯಲ್ಲಿದ್ದ ದಿನಗಳು (1992). ಹೀಗಾಗಿ ಅಯೋಧ್ಯೆಗೆ ಪ್ರಯಾಣಿಸುವುದು ಸಾಧ್ಯವಿರಲಿಲ್ಲ. ಇದನ್ನು ಕುರಿತು ನನ್ನ ಲ್ಯಾಬ್ ಅಸಿಸ್ಟೆಂಟ್ ಫತೇಹ್ ಸಿಂಗ್ ನನಗೆ ಈಗಾಗಲೇ ಎಚ್ಚರಿಕೆ ನೀಡಿದ್ದ.  ಅಯೋಧ್ಯಾ ನೋಡಲೂ ಆಗದ ಅಯೋಗ್ಯನಾದೇನಲ್ಲಾ ಎಂದು ನಾನು ಬೇಸರ ಪಟ್ಟುಕೊಂಡೆ.  ಜಿಲ್ಲೆಯ ಹೆಸರು ಫೈಜಾಬಾದ್. ಫೈಜಾಬಾದ್ ಕೂಡಾ ನನಗೆ ಸಾಹಿತ್ಯದ ಮೂಲಕ ಪರಿಚಿತವಾದ ಸ್ಥಳ.  ಮಿರ್ಜಾ ರುಸ್ವಾ ಅವರು ಬರೆದ ಉಮ್ ರಾವ್ ಜಾನ್ ಅದಾ ಕಾದಂಬರಿಯಲ್ಲಿ ಆಕೆಯ ಬಾಲ್ಯ ಕಳೆಯುವುದು ಫೈಜಾಬಾದ್ ಪಟ್ಟಣದಲ್ಲೇ. ಅಲ್ಲೇ ಅವಳ ಅಪಹರಣವಾಗುವುದು. ಇವನ್ನೆಲ್ಲಾ ನೆನೆಸಿಕೊಂಡು ನಾನು ಐಟಿಐ ಗೆಸ್ಟ್ ಹೌಸ್ ಹುಡುಕಿಕೊಂಡು ಹೊರಟೆ.

ಗೆಸ್ಟ್ ಹೌಸಿಗೆ ನಾನು ಬರುವ ಸೂಚನೆಯನ್ನು ಈಗಾಗಲೇ ಕೊಡಲಾಗಿತ್ತು.  ಹೀಗಾಗಿ ನನಗೆ ಕೋಣೆ ಕಾದಿರಿಸಿದ್ದರು. ಬಹುಶಃ ಅಲ್ಲಿಗೆ ಹೆಚ್ಚು ಅತಿಥಿಗಳು ಬರುತ್ತಿರಲಿಲ್ಲವೇನೋ! ಅದೂ ಈ ರಣಬಿಸಿಲಿನಲ್ಲಿ ಯಾವ ಅತಿಥಿಗೆ ಇಲ್ಲಿಗೆ ಬರುವ ಜರೂರು ಇದ್ದೀತು!  ಉತ್ತರಭಾರತದ ಗೆಸ್ಟ್ ಹೌಸುಗಳೆಲ್ಲಾ ಸುಮಾರು ಒಂದೇ ತರಹ ಇರುತ್ತವೆ. ಅಲ್ಲಿ ಒಂದು ಬಗೆಯ ಬಿಗುಮಾನದ ಮೌನ ಆವರಿಸಿಕೊಂಡಿರುತ್ತದೆ. ದೆಹಲಿ ಐಐಟಿಯ ಗೆಸ್ಟ್ ಹೌಸಿನಲ್ಲಿ ಐದು ತಿಂಗಳು ವಾಸವಾಗಿದ್ದ ನನಗೆ ಗೆಸ್ಟ್ ಹೌಸ್ ವಾಸ್ತವ್ಯವೆಂದರೇನೆಂದು ಚೆನ್ನಾಗಿ ಗೊತ್ತು.  ನಾನು ಸ್ನಾನ ಮುಗಿಸಿ ರೆಡಿಯಾಗಿ ಉಪಾಹಾರಕ್ಕೆಂದು ಹೋದೆ. ಗೆಸ್ಟ್ ಹೌಸ್ ಉಪಾಹಾರವೆಂದರೆ ಏಕರೀತಿ. ಬ್ರೆಡ್ ಟೋಸ್ಟ್, ಬೆಣ್ಣೆ, ಜಾಮ್, ಚಹಾ.  ಚಹಾಗೆ ಸಕ್ಕರೆಯನ್ನು ಪ್ರತ್ಯೇಕವಾಗಿ ತಂದಿಡುತ್ತಾರೆ. ಬೇಕಾದವರಿಗೆ ಆಮ್ಲೆಟ್. ತುಂಬಾ ಜನ ಅತಿಥಿಗಳಿದ್ದರೆ ಪೂರಿ ಪಲ್ಯದ ಭಾಗ್ಯ. ಕೆಲವೊಮ್ಮೆ ಆಲೂ ಪರಾಠಾ.  

ನಾನು ಉಪಾಹಾರ ಮುಗಿಸಿ ಫ್ಯಾಕ್ಟರಿಗೆ ಹೊರಟೆ.  ಇಬ್ಬರು ವಿದ್ಯಾರ್ಥಿಗಳು ಸದ್ಯಕ್ಕೆ ಅಲ್ಲಿ ತರಬೇತಿಗೆ ಬಂದಿದ್ದರು. ಯಾವ ವಿದ್ಯಾರ್ಥಿಗೆ ಯಾವ ಕಂಪನಿಯಲ್ಲಿ ತರಬೇತಿಗೆ ಕಳಿಸಲಾಗುತ್ತದೆ ಎಂಬುದು ಆಯಾ ವಿದ್ಯಾರ್ಥಿಯ ಅಂಕಸ್ಥಾನದ ಮೇಲೆ ಅವಲಂಬಿತ. ದೊಡ್ಡ ನಗರಗಲ್ಲಿರುವ ಪ್ರತಿಷ್ಠಿತ ಕಂಪನಿಗಳಿಗೆ ಮೇಲಂಕಿ ಗಳಿಸಿದ ವಿದ್ಯಾರ್ಥಿಗಳಿಗೆ ಅವಕಾಶ. ಇಂಥ ಗುಡ್ಡಗಾಡು ಪ್ರದೇಶಕ್ಕೆ ಬರುವ ವಿದ್ಯಾರ್ಥಿಗಳ ಅಂಕಸ್ಥಾನ ಅಷ್ಟೇನೂ ಉತ್ತುಂಗ ಶಿಖರಪ್ರಾಯವಲ್ಲವೆಂದು ಧಾರಾಳವಾಗಿ ಹೇಳಬಹುದು. ಐಐಟಿಗೆ ಬರುವ ವಿದ್ಯಾರ್ಥಿಗಳನ್ನು  ಕೆನೆಪದರ ಎಂದೆಲ್ಲಾ ಕರೆಯುತ್ತಾರಲ್ಲವೇ? ಇವರನ್ನೂ ಅಂಕಗಳ ಮೂಲಕ ಎ, ಬಿ, ಸಿ, ಡಿ, ಇ, ಎಫ್ ಎಂಬ ವರ್ಗಗಳಲ್ಲಿ ವಿಂಗಡಿಸುವ ಚಾಕಚಕ್ಯತೆಯನ್ನು ಉಪಾಧ್ಯಾಯರು ಸಿದ್ಧಪಡಿಸಿದ್ದಾರೆ! ಐಐಟಿಗೆ ಬಂದು ಯಾರು ಎ ಅಂಕಗಳನ್ನು ಗಳಿಸುತ್ತಾರೋ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಇನ್ನು ಸಿ ಸ್ತರದಿಂದ ಕೆಳಗಿಳಿದವರು ಉಳಿದಿದ್ದರಲ್ಲೇ ತೃಪ್ತಿ ಪಡಬೇಕಾಗುತ್ತದೆ!

ನಾನು ಹೊಸದಾಗಿ ಸೇರಿದ ಕಾರಣ ಪ್ರಸಕ್ತ ವಿದ್ಯಾರ್ಥಿಗಳಿಗೆ ಪಾಠ ಹೇಳಿರಲಿಲ್ಲ. ಅವರು ನನಗೆ ಪರಿಚಿತರೂ ಅಲ್ಲ. ನಾನು ಅವರನ್ನು ವಿಚಾರಿಸಿದಾಗ ರಿಸೆಪ್ಷನಿಸ್ಟ್ ಅವರಿಗೆ ಹೇಳಿ ಕಳಿಸಿದಳು. ಕೆಲವೇ ನಿಮಿಷಗಳಲ್ಲಿ ಅವರು ಹಾಜರಾದರು. ನನ್ನನ್ನು ಆದರದಿಂದ ಮಾತಾಡಿಸಿ ನಿಮ್ಮ ಪ್ರಯಾಣ ಹೇಗಿತ್ತು, ನಿಮ್ಮ ಗೆಸ್ಟ್ ಹೌಸ್ ವಾಸ್ತವ್ಯ ಚೆನ್ನಾಗಿದೆಯೇ ಎಂದು ವಿಚಾರಿಸಿಕೊಂಡರು. ನೀವು ನಮಗೆ ಪಾಠ ಮಾಡಿಲ್ಲ, ಆದರೆ ನಿಮ್ಮ ಬಗ್ಗೆ ನಾವು ಕೇಳಿದ್ದೇವೆ ಎಂದು ಗೌರವ ತೋರಿಸಿದರು.

ನಾನು ಅವರನ್ನು ಇಲ್ಲಿ ನಿಮಗೆ ಯಾವ ರೀತಿಯ ತರಬೇತಿ ಕೊಡುತ್ತಿದ್ದಾರೆಂದು ಕೇಳಿದೆ. ಅವರು ತಮಗೆ ಗೊತ್ತಿದ್ದನ್ನು ಹೇಳಿದರು.  ಸರಕಾರದ ಫ್ಯಾಕ್ಟರಿಗಳಲ್ಲಿ ತರಬೇತಿಗೆಂದು ಪ್ರತಿ ವರ್ಷವೂ ನೂರಾರು ಸಂಖ್ಯೆಗಳಲ್ಲಿ ವಿದ್ಯಾರ್ಥಿಗಳು ಬರುತ್ತಾರೆ. ಇವರೆಲ್ಲರಿಗೂ ಪ್ರತ್ಯೇಕ ಪ್ರಾಜೆಕ್ಟ್ ಕೊಡುವುದು ಸಾಧ್ಯವಿಲ್ಲ. ಎಲ್ಲರಿಗೂ "ನೋಡಿ ಕಲಿ"ಯುವ ಅವಕಾಶ ಮಾತ್ರ. ಒಂದು ಫ್ಯಾಕ್ಟರಿಯಲ್ಲಿ ಏನೇನು ತಯಾರಿಸುತ್ತಾರೆ, ಆ ತಯಾರಿಕೆಯ ವಿಧಿವಿಧಾನ ಇವುಗಳನ್ನು ವಿದ್ಯಾರ್ಥಿ ನೋಡಿ ಕಲಿಯಬೇಕು. ಇವರಿಗೆ ಇಂಥ ವಿಭಾಗದಲ್ಲಿ ಇಷ್ಟು ದಿವಸ ಎಂದು ರೂಪರೇಷೆ ಹಾಕಿಕೊಡುತ್ತಾರೆ. ಪ್ರತಿ ವಿಭಾಗದಲ್ಲೂ ಒಂದಿಷ್ಟು ದಿನ ಇದ್ದು ವರದಿ ಬರೆದುಕೊಂಡು ಅದಕ್ಕೆ ಸಹಿ ಹಾಕಿಸಿಕೊಂಡು ಐಐಟಿಗೆ ಒಪ್ಪಿಸಬೇಕು.  ನೀವು ಐಐಟಿ ಹುಡುಗರು, ಯಾಕೆ ಯಾವುದಾದರೂ ಪ್ರಾಜೆಕ್ಟ್ ಮಾಡಲು ಉತ್ಸಾಹ ತೋರಿಸಲಿಲ್ಲವೇ ಎಂದು ನಾನು ಕೇಳಿದೆ. ಅವರು ಸುಮ್ಮನೆ ನಕ್ಕರು. ವ್ಯವಸ್ಥೆಯಲ್ಲಿ ಅದು ಸಾಧ್ಯವಿರಲಿಲ್ಲವೋ ಅಥವಾ ಇವರಿಗೆ ಆಸಕ್ತಿ ಇರಲಿಲ್ಲವೋ! ಅವರು ತೋರಿಸಿದ ವರದಿಯನ್ನು ನೋಡಿದೆ. ಏನೋ ಒಂದಿಷ್ಟು ಫ್ಯಾಕ್ಟರಿ ಪದಗಳನ್ನಾದರೂ ಕಲಿತಿದ್ದಾರಲ್ಲ ಎಂದು ಸಮಾಧಾನ ಪಟ್ಟುಕೊಂಡೆ. ಮೇಧಾವಿಗಳಾದ ವಿದ್ಯಾರ್ಥಿಗಳನ್ನು ತರಬೇತಿಗೆ ತೆಗೆದುಕೊಂಡು ಅವರ ಕೌಶಲವನ್ನು ಬಳಸಿಕೊಳ್ಳುವುದೂ ಮತ್ತು ಅದನ್ನು ಬೆಳೆಸುವುದೂ ಒಂದು ಮಹತ್ತರ ಸವಾಲು.

ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದಕ್ಕೆ ಸರಕಾರವೂ ಏನೇನೋ ಯೋಜನೆಗಳನ್ನು ಹಮ್ಮಿಕೊಳ್ಳುತ್ತದೆ.  ನಮ್ಮ ದೇಶದ ಜನಸಂಖ್ಯೆ ದೊಡ್ಡದಾದ ಕಾರಣ ಈ ಯೋಜನೆಗಳು ಫಲಪ್ರದವಾಗುವುದು ಭಾಗಶಃ ಮಾತ್ರ. ಟ್ರೇನಿಂಗ್ ನೀಡುವವರ ಕೊರತೆ ಒಂದು ಕಡೆ. ಟ್ರೇನಿಂಗ್ ನೀಡುವವರಿಗೆ ಸೂಕ್ತ ತರಬೇತಿ ಇಲ್ಲದಿರುವುದು ಇನ್ನೊಂದು ಸಮಸ್ಯೆ. ತರಬೇತಿದಾರರಿಗೆ ಸೂಕ್ತ ಮನ್ನಣೆಯಾಗಲಿ ಪುರಸ್ಕಾರವಾಗಲಿ ಸಿಕ್ಕದಿರುವುದು ಅದಕ್ಕಿಂತ ದೊಡ್ಡ ಸಮಸ್ಯೆ. ಇನ್ನೂ ದೊಡ್ಡ ಸಮಸ್ಯೆ ಎಂದರೆ ಟ್ರೇನಿಂಗ್ ಪಡೆದವರು ಬೇರೆ ದೇಶಕ್ಕೋ ಬೇರೆ ಕಂಪನಿಗೋ ಹೊರಟುಹೋಗಬಹುದು ಎಂಬ ಭಯ.  ಉದಾಹರಣೆಗೆ ಐಐಟಿ ವಿದ್ಯಾರ್ಥಿಗಳಲ್ಲಿ ಬಹುಪಾಲು ಜನ ಬೇರೆ ದೇಶಗಳಿಗೆ ಹೋಗುವುದರತ್ತ ಜನ ಬೆರಳು ಮಾಡಿ ತೋರಿಸುತ್ತಾರೆ. ಈ ಮಾತನ್ನು ಐಐಟಿ ವಿದ್ಯಾರ್ಥಿಗಳಿಗೆ ಹೇಳಿ ನೋಡಿ. ಅವರು ತಮ್ಮ ತರಬೇತಿ ಸಮಯದಲ್ಲಿ ತಮಗೆ ದೊರಕಿದ ದುರವಸ್ಥೆಯನ್ನು ದೂರುತ್ತಾರೆ. ಹಲವು ಐಐಟಿ ವಿದ್ಯಾರ್ಥಿಗಳು ಭಾರತದಲ್ಲೇ ಕಂಪನಿಗಳನ್ನು ಸೇರಿ ಅಲ್ಲಿ ಅವರಿಗೆ ಮನ್ನಣೆ ದೊರೆಯದೆ ಬೇರೆ ದೇಶಗಳಿಗೆ ಹೋದ ಉದಾಹರಣೆಗಳು ನಿಮಗೆ ಸಾಕಷ್ಟು ಸಿಕ್ಕುತ್ತವೆ. ಹೀಗಾಗಿ ಸಮಸ್ಯೆಯ ಮೂಲ ಯಾವುದು ಎನ್ನುವುದು ಗೋಜಲಾಗಿದೆ.  

ಆಗ ಇನ್ನೂ ಐಟಿ ಕ್ರಾಂತಿ ನಮ್ಮ ದೇಶಕ್ಕೆ ಕಾಲಿಟ್ಟಿರಲಿಲ್ಲ. ಅಮೆರಿಕಾದಲ್ಲಿ ನೆಟ್ ಸ್ಕೇಪ್ ಎಂಬ ಇಂಟರ್ನೆಟ್ ಬ್ರೌಸರ್ ಮಾತ್ರ ಇತ್ತು. ಇಂಟರ್ನೆಟ್ ಇಷ್ಟು ವಿಶಾಲವಾಗಿ ಇನ್ನೂ ಹಬ್ಬಿರಲಿಲ್ಲ. ಈ ಸಂದರ್ಭದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೆಲಸ ಕೊಡುತ್ತಿದ್ದುದು ಭಾರತೀಯ ಕಂಪನಿಗಳೇ. ಐಐಟಿಗಳಲ್ಲಿ ಅಂಕದ ಸ್ಪರ್ಧೆಯಲ್ಲಿ ಮನ್ನಣೆ ಗಳಿಸದ ವಿದ್ಯಾರ್ಥಿಗಳು ಐಏಎಸ್ ಕನಸು ಕಾಣುತ್ತಿದ್ದರು. ಇದಕ್ಕೆ ಅವರ ತಂದೆತಾಯಿಯರ ಒತ್ತಡವೂ ಕಾರಣವಾಗಿತ್ತು.  ಎಸ್ ಸಿ ಮತ್ತು ಎಸ್ ಟಿ ವರ್ಗದ ವಿದ್ಯಾರ್ಥಿಗಳು ಐಏಎಸ್ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವುದು ಸರ್ವೇ ಸಾಧಾರಣವಾಗಿತ್ತು.  ನನ್ನ ಜೊತೆ ಪ್ರಾಜೆಕ್ಟ್ ಮಾಡಿದ ಕೆಲವು ಎಸ್ ಟಿ ಪಂಗಡದ ವಿದ್ಯಾರ್ಥಿಗಳೇ ನನಗೆ ಇದನ್ನು ತಿಳಿಸಿದರು. ಅವರೂ ಐಏಎಸ್ ತಯಾರಿ ಮಾಡಿಕೊಳ್ಳುತ್ತಿದ್ದವರೇ! ಈಗ ಅವರು ದೊಡ್ಡ ಅಧಿಕಾರಿಗಳಾಗಿರಬಹುದು. ಪ್ರಸಕ್ತ  ವಿದ್ಯಾರ್ಥಿಗಳು ಕೂಡಾ ಅದೇ ಸಾಲಿಗೆ ಸೇರಿದವರು. ತರಬೇತಿಯ ಸಮಯ ಐಏಎಸ್ ತಯಾರಿ ಮಾಡಿಕೊಳ್ಳಲು ಪ್ರಶಸ್ತವಾಗಿತ್ತು.  ಇದೇ ರೀತಿ ಹೆಚ್ಚಿನ ಅಂಕ ಗಳಿಸಿ ಅಮೆರಿಕಾಗೆ ಓದಲು ಹೋಗುವ ಕನಸು ಕಾಣುತ್ತಿದ್ದವರು ತರಬೇತಿ ಸಮಯದಲ್ಲಿ ಜೀ.ಆರ್.ಈ. ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವುದು ಸಾಮಾನ್ಯ.

 ವಿದ್ಯಾರ್ಥಿಗಳು ತಮ್ಮ ಸೂಪರ್ವೈಸರ್ ಬಳಿಗೆ ನನ್ನನ್ನು ಕರೆದೊಯ್ದರು. ಅವರು ಐವತ್ತರ ವಯಸ್ಸಿನ ಒಬ್ಬ ಹಿರಿಯ ಅಧಿಕಾರಿ.  ಅವರ ಹೆಸರು ಮರೆತಿದ್ದೇನೆ. ನನ್ನನ್ನು ವಿಶ್ವಾಸದಿಂದ ಮಾತಾಡಿಸಿದರು. ತಮ್ಮ ಕ್ಯಾಂಪಸ್ ತೋರಿಸಿದರು. ಅಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ವಾಸ್ತವ್ಯಕ್ಕಾಗಿ ಅಪಾರ್ಟ್ಮೆಂಟ್ ಕಟ್ಟಡಗಳಿವೆ. ಅವರ ಮಕ್ಕಳಿಗಾಗಿ ಶಾಲೆ ಇದೆ. ಅಂಗಡಿ ಮುಗ್ಗಟ್ಟುಗಳಿವೆ.  ಈ ಪುಟ್ಟ ಜಗತ್ತಿನಲ್ಲಿ ಕೆಲವರಿಗೆ ಇರುವುದು ಅಸಾಧ್ಯ ಎನ್ನಿಸಬಹುದು. ವೀಕೆಂಡ್ ಬಂದಾಗ ಜನ ಲಕ್ನೋ, ಅಲಾಹಾಬಾದ್,  ಗೊಂಡಾ ಮುಂತಾದ ಕಡೆಗೆ ಸುತ್ತಾಡಲು, ಶಾಪಿಂಗ್ ಇತ್ಯಾದಿ ಮಾಡಲು ಹೋಗುತ್ತಾರೆ ಎಂದು ಅವರು ವಿವರಿಸಿದರು.  ಹೆಂಡತಿ ಮಕ್ಕಳಿಗೆ ಸರಿ ಹೊಂದದು ಎಂಬ ಕಾರಣಕ್ಕಾಗಿ ಎಷ್ಟೋ ಜನ ಕೆಲಸ ಬಿಟ್ಟು ಹೋಗುತ್ತಾರೆ ಎಂದು ಹೇಳುವಾಗ ಅವರ ಧ್ವನಿಯಲ್ಲಿ ವ್ಯಥೆ ಇತ್ತು.  ಮಕ್ಕಳ ಶಾಲೆ ಇಷ್ಟವಾಗದವರು ಅದೇ ಕಾರಣ ನೀಡಿ ಒಂದೆರಡು ವರ್ಷ ತರಬೇತಿ ಪಡೆದು ಬೇರೆ ಕೆಲಸಕ್ಕೆ ಹೊರಟು ಹೋಗುತ್ತಾರೆ. ಆಗ ಐಟಿಐ ಕಂಪನಿಯು ಆಲ್ಕಾಟೆಲ್ ಎಂಬ ಒಂದು ಫ್ರೆಂಚ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆಲ್ಕಾಟೆಲ್ ನೀಡಿದ ಆಧುನಿಕ ಪಿಸಿಬಿ ತಯಾರಿಕಾ ಯಂತ್ರಗಳು ಅಲ್ಲಿದ್ದವು. ಆದರೆ ಈ ಬಾಂಧವ್ಯದಿಂದ ಐಟಿಐಗಿಂತ ಆಲ್ಕಾಟೆಲ್ ಹೆಚ್ಚು ಲಾಭ ಪಡೆದಂತಿತ್ತು. ಇಲ್ಲಿ ಒಂದೆರೆಡು ವರ್ಷ ಕೆಲಸ ಮಾಡಿದವರು ಇಲ್ಲಿ ರಾಜೀನಾಮೆ ಕೊಟ್ಟು ಆಲ್ಕಾಟೆಲ್ ಸೇರುವುದು ಸಾಮಾನ್ಯ ಎಂದು ನನ್ನ ಅತಿಥೇಯ ಅಧಿಕಾರಿ ವ್ಯಥೆಯಿಂದ ಹೇಳಿಕೊಂಡರು.  

ಇಂಥ ಸ್ಥಳದಲ್ಲಿ ಇಷ್ಟು ಆಧುನಿಕ ಉದ್ಯಮವನ್ನು ಸ್ಥಾಪಿಸಿದ ಸರಕಾರದ ಉದ್ದೇಶವನ್ನು ಕುರಿತು ಮಾತು ಹೊರಳಿತು.  ಜನರಿಗೆ ಫ್ಯಾಕ್ಟರಿಯಲ್ಲಿ ಉದ್ಯೋಗ ಸಿಕ್ಕಲಿ, ಬೆಳವಣಿಗೆಯು ಗ್ರಾಮೀಣ ಭಾರತಕ್ಕೂ ಬರಲಿ ಎಂಬುದು ಸರಕಾರರ ಕನಸು. ಉದ್ಯಮ ಸ್ಥಾಪಿಸಲು ಬಹಳ ದೊಡ್ಡ ಮೊತ್ತಕ್ಕೆ ಜಮೀನನ್ನು ಮಾರಿದವರ ಲಾಭವೂ ಇಲ್ಲೆಲ್ಲೋ ಒಂದು ಎಳೆಯಾಗಿ ಸೇರಿಕೊಂಡಿತ್ತೆಂಬುದು ಅವರ ಮಾತಿನಿಂದ ಊಹಿಸಬಹುದಾಗಿತ್ತು. ಸರಕಾರದ ಎಷ್ಟೋ  ಪ್ರಯತ್ನಗಳು ಹೀಗೆ ವ್ಯರ್ಥವಾಗಿವೆ. ಐಐಟಿ ಖರಗ್ ಪುರ ಒಂದು ಉದಾಹರಣೆ. ಖರಗ್ ಪುರ ಐಐಟಿಯಲ್ಲಿ ಎಷ್ಟೇ ಅತ್ಯುನ್ನತ ತಂತ್ರಜ್ಞಾನ ಬಂದರೇನು, ಖರಗ್ ಪುರ ಹಾಗೇ ಇದ್ದುಬಿಟ್ಟಿದೆ! ಕಲ್ಕತ್ತಾದಿಂದ ಖರಗ್ ಪುರಕ್ಕೆ ಪ್ರಯಾಣ ಮಾಡಿದಾಗ ಉದ್ದಕ್ಕೂ ಕಾಣುವ ಬಡತನದ ಚಿತ್ರಗಳು ನಮ್ಮ ಅಂತಃಸಾಕ್ಷಿಯನ್ನು ಚುಚ್ಚುತ್ತವೆ.

ಐಟಿಐ ಅಧಿಕಾರಿ ನನ್ನ ಜೊತೆಗೆ ಗೆಸ್ಟ್ ಹೌಸಿನಲ್ಲಿ ಊಟ ಮಾಡಿದರು. ನೀವು ಇದೇ ಮೊದಲ ಸಲ ಇಲ್ಲಿಗೆ ಬಂದಿದ್ದೀರಿ, ಗೊಂಡಾದಲ್ಲಿರುವ ಹನುಮಾನ್ ಗಢೀ ಮಂದಿರ ಬಹಳ ಹೆಸರುವಾಸಿ.  ನೋಡಿಕೊಂಡು ಹೋಗಿ. ನಿಮ್ಮ ವಿದ್ಯಾರ್ಥಿಗಳ ಜೊತೆ ಹೋಗಿ. ನಾವು ಕಾರ್ ವ್ಯವಸ್ಥೆ ಮಾಡುತ್ತೇವೆ ಎಂದರು. ನಾನು ಅಲ್ಲಿಂದ ನೈನಿಗೆ ಹೋಗಬೇಕೆಂಬ ವಿಷಯ ಅವರಿಗೆ ಹೇಳಿದೆ. ನನ್ನ ಟ್ರೇನ್ ರಾತ್ರಿ ಹೊರಡುವುದರಿಂದ ಸಾಕಷ್ಟು ಸಮಯವಿದೆ ಎಂದರು. ನನಗೂ ಅಲ್ಲಿ ಬೇರೆ ಕೆಲಸವಿರಲಿಲ್ಲ. ಹೀಗಾಗಿ ದೇವಸ್ಥಾನಕ್ಕೆ ಹೋಗುವ ಕಾರ್ಯಕ್ರಮ ಗಟ್ಟಿಯಾಯಿತು.


* * *

ಮಧ್ಯಾಹ್ನ ನಾನು ಮತ್ತು ಇಬ್ಬರು ವಿದ್ಯಾರ್ಥಿಗಳು ಕಾರಿನಲ್ಲಿ ಹನುಮಾನ್ ಗಢೀ ದೇವಸ್ಥಾನಕ್ಕೆ ಹೋದೆವು. ದೇಗುಲದ ಮುಂದೆ ರಸ್ತೆಯಲ್ಲಿ ಪೂಜಾಸಾಮಾಗ್ರಿಗಳನ್ನು ಮಾರುವ ಅಂಗಡಿ ಗಳ ಸಾಲಿತ್ತು. ಉತ್ತರಭಾರತದಲ್ಲಿ ದೇವರ ಪ್ರಸಾದವನ್ನು ನಾವೇ ಕೊಡೊಯ್ಯಬೇಕು. ಅರ್ಥಾತ್ ನಮಗೆ ಬೇಕಾದ ಪ್ರಸಾದವನ್ನು ನಾವೇ ಅಂಗಡಿಯಲ್ಲಿ ಕೊಂಡು ಪೂಜಾರಿಗೆ ಕೊಟ್ಟರೆ ಅವನು ಅದರಲ್ಲಿ ಸ್ವಲ್ಪ ತೆಗೆದಿಟ್ಟುಕೊಂಡು ಉಳಿದದ್ದನ್ನು ಪ್ರಸಾದವೆಂದು ನಮಗೆ ಹಿಂದಿರುಗಿಸುತ್ತಾನೆ. ಹೀಗಾಗಿ ಪ್ರಸಾಧ ಇಂಥದ್ದೇ ಇರಬೇಕೆಂದಿಲ್ಲ. ಬೂಂದಿ, ಜಿಲೇಬಿ, ಕೇಕ್ - ಹೀಗೆ ಏನೇ ಆಗಬಹುದು! 

ನಾನು ಅಂಗಡಿಯಲ್ಲಿ ಒಂದಿಷ್ಟು ಸಿಹಿ ಖರೀದಿಸಿದೆ. ಅದನ್ನು ಅವರು ರಟ್ಟಿನ ಪೊಟ್ಟಣದಲ್ಲಿ ಹಾಕಿಕೊಟ್ಟರು. ಹನುಮಾನ್ ಮಂದಿರದಲ್ಲಿ ಅಂಥ ನೂಕು ನುಗ್ಗಲೇನೂ ಇರಲಿಲ್ಲ. ದೇವರ ದರ್ಶನಕ್ಕೆ ನಮ್ಮ ಸರದಿ ಬೇಗನೇ ಬಂತು. ಪೂಜಾರಿ ನಮ್ಮ ಕೈಯಿಂದ ಪೊಟ್ಟಣ ಪಡೆದು ನಮಗೆ ಪ್ರಸಾದ ವಾಪಸು ಕೊಟ್ಟ. ದಕ್ಷಿಣ ಭಾರತದಲ್ಲಿ ಕೊಡುವಂತೆ ಮಂಗಳಾರತಿ, ತೀರ್ಥ ಇವೆಲ್ಲ ಉತ್ತರಭಾರತದಲ್ಲಿ ರೂಢಿಯಿಲ್ಲ. ನಾವು ಹೊರಗೆ ಬಂದೆವು. ಸುತ್ತಲೂ ಪ್ರದಕ್ಷಿಣೆಗೆ ಪ್ರಾಕಾರವಿದೆ. ಅಲ್ಲಿಯ ದೃಶ್ಯ ನೋಡಿ ನಾನು ಹೌಹಾರಿದೆ. ಜನ ತಾವು ತಂದಿದ್ದ ಪ್ರಸಾದವನ್ನು ತಿಂದು ಡಬ್ಬಗಳನ್ನು ಅಲ್ಲೇ ಎಸೆದು ಹೋಗಿದ್ದರು. ನೊಣಗಳು ಸಹಸ್ರಾರು ಸಂಖ್ಯೆಯಲ್ಲಿ ಹಾರಾಡುತ್ತಿದ್ದವು! ನನಗೆ ಕಸಿವಿಸಿಯಾಯಿತು. ಕನಿಷ್ಠ ದೇವಸ್ಥಾನದ ಪ್ರಾಂಗಣವನ್ನು ಶುದ್ಧವಾಗಿಟ್ಟುಕೊಳ್ಳಬಾರದೇ! ಅಲ್ಲಿ ಪ್ರಸಾದದ ಡಬ್ಬಗಳನ್ನು ಎಸೆಯಬಾರದು ಎಂಬ ಫಲಕವೂ ಕಾಣಲಿಲ್ಲ. 

ನಾವು ವಾಪಸ್ ಹೊರಟು ಬಂದೆವು. ನನ್ನನ್ನು ರೇಲ್ವೆ ಸ್ಟೇಷನ್ನಿಗೆ ಕರೆದು ತಂದರು. ಹೀಗಾಗಿ ಗೊಂಡಾ  ಪ್ರೈವೇಟ್ ಬಸ್ ಪ್ರಯಾಣದಿಂದ ಬಚಾವಾದೆ! ನನ್ನ ರೈಲು ಈಗಾಗಲೇ ಪ್ಲಾಟ್ ಫಾರ್ಮಿಗೆ ಬಂದು ನಿಂತಿತ್ತು. ಹೊರಡಲು ಇನ್ನೂ ಸುಮಾರು ಒಂದು ಗಂಟೆ ಸಮಯವಿದ್ದರೂ! ನಾನು ನನ್ನ ಸೀಟು ಹುಡುಕಿ ಕುಳಿತೆ.  ಹೆಚ್ಚಿನ ಜನಸಂದಣಿ ಇರಲಿಲ್ಲ. ಪಕ್ಕದ ಬೋಗಿಯಲ್ಲಿ ಬಹಳ ಜನ ಜಮಾಯಿಸಿದ್ದಂತೆ ತೋರುತ್ತಿತ್ತು. ಅದು ಮೂರನೇ ದರ್ಜೆಯ ಬೋಗಿ. ಅದೇನು ಮದುವೆಯ ದಿಬ್ಬಣವೋ ಏನೋ ಗೊತ್ತಾಗಲಿಲ್ಲ. ಜನ ಮಾತಾಡಿಕೊಂಡು ನಗುವುದು ನಮಗೂ ಕೇಳುತ್ತಿತ್ತು. ಈ ಭಾಗದ ಜನ ಮಾತಾಡುವ ಹಿಂದಿ ಸ್ವಲ್ಪ ವಿಭಿನ್ನ. ರಾಗಬದ್ಧ. ಎಲ್ಲದಕ್ಕೂ ವಾ ಎಂದು ಸೇರಿಸುವ ಪದ್ಧತಿ. ಉದಾಹರಣೆಗೆ ಬಸ್ ಎನ್ನುವುದು ಬಸ್ವಾ ಆಗುತ್ತದೆ. ಇದು ನನಗೆ ಬಸ್ಸಿನಲ್ಲೂ ಅನುಭವಕ್ಕೆ ಬಂದಿತ್ತು. ನಮ್ಮ ಬಸ್ ಬಸವನಂತೆ ನುಗ್ಗಿ  ನಾಗಾಲೋಟದಿಂದ ಓಡುತ್ತಿದ್ದಾಗ  ನನ್ನ ಪ್ರಾಣವಾ ನನ್ನ ಬಾಯ್ ವಾಗೆ ಬಂದಂತಾಗುತ್ತಿತ್ತು.

ರೈಲು ಕದಲುವ ಸೂಚನೆಯೇ ಕಾಣಲಿಲ್ಲ.  ಚಾಯ್ ವಾ ಬಂತು. ಬಿಸಿ ಚಹಾ ಸ್ವಲ್ಪ ಚೈತನ್ಯ ತಂದಿತು. ರೈಲಿನ ಒಳಗೆ ಕತ್ತಲಾಗುತ್ತಿತ್ತು. ದೀಪವೂ ಇರಲಿಲ್ಲ. ನಾನು ಸೀಟಿನಲ್ಲೇ ಕುಳಿತು ಒಂದಿಷ್ಟು ನಿದ್ದೆ ಮಾಡಿದೆ.

ನನ್ನ ನಿದ್ದೆಗೆ ಭಂಗ ಬಂದಿದ್ದು ರೈಲು ಹೊರಟಾಗಲೇ. ಯಾವುದೇ ತರಾತುರಿ ಇಲ್ಲದೆ ರೈಲು ನಿಧಾನವಾಗಿ ಹೋಗುತ್ತಿತ್ತು. ಅದೇನು ಎಕ್ಸ್ಪ್ರೆಸ್ ಗಾಡಿಯಲ್ಲ. ಪ್ಯಾಸೆಂಜರ್ ಟ್ರೇನ್. ನಮ್ಮ ಟ್ರೇನ್ ವಾ ಜೊತೆಗೆ ಬಸ್ ವಾ ಸ್ಪರ್ಧೆ ಹೂಡಿದ್ದರೆ ಖಂಡಿತಾ ಬಸವನಿಗೇ ಗೆಲುವು! 

ಅಷ್ಟರಲ್ಲಿ ಒಂದು ಆಶ್ಚರ್ಯ. ಒಮ್ಮೆಲೇ ಪಕ್ಕದ ಬೋಗಿಯಿಂದ ಹಾಡುಗಾರಿಕೆ ಕೇಳಿತು! ಒಬ್ಬಿಬ್ಬರಲ್ಲ. ಸುಮಾರು ಎಂಟು ಹತ್ತು ಮಹಿಳೆಯರು ಒಟ್ಟಿಗೆ ಹಾಡುತ್ತಿದ್ದರು. ಅದೇನು ಸಿನಿಮಾ ಹಾಡುಗಳಲ್ಲ. ಭಾವಗೀತೆಗಳೂ ಅಲ್ಲ. ತುಲಸೀದಾಸರ ರಾಮಚರಿತಮಾನಸ! ಅವರು ಭಾವಪೂರ್ಣವಾಗಿ ಹಾಡುತ್ತಿದ್ದರು. ಒಂದು ತಂಡದವರು ಹಾಡಿ ನಿಲ್ಲಿಸಿದಾಗ ಇನ್ನೊಂದು ತಂಡದವರು ಮುಂದುವರೆಸುತ್ತಿದ್ದರು. ಇಂಥದ್ದನ್ನು ನಾನು ಹಿಂದೆಯೂ ಕೇಳಿರಲಿಲ್ಲ. ನಂತರವೂ ಕೇಳಿಲ್ಲ! ಅವರು ಅದೆಷ್ಟು ಹೊತ್ತು ಹಾಡಿದರೋ! ನನಗೆ ನಿದ್ದೆ ಬಂತು. ರೈಲು ತಡವಾದ್ದರಿಂದ  ಬೆಳಗ್ಗೆ ನಸುಕಿನಲ್ಲೇ ನೈನಿ ಸ್ಟೇಷನ್ನಿಗೆ ತಲುಪುವ ಸಂಭವ ಈಗ ಇಲ್ಲವಾಗಿತ್ತು.

ಅಂತೂ ಹೇಗೋ ಎಚ್ಚರವಾದಾಗ ಇನ್ನೂ ಬೆಳಕು ಹರಿದಿರಲಿಲ್ಲ. ನಾನು ನೈನಿ ಸ್ಟೇಷನ್ ಯಾವಾಗ ಬರುತ್ತದೆ ಎಂದು ಎದ್ದಿದ್ದ ಇನ್ನೊಬ್ಬ ಪ್ರಯಾಣಿಕರನ್ನು ಕೇಳಿದೆ. ಇನ್ನೂ ಎರಡು ಗಂಟೆಯಾದರೂ ಬೇಕು ಎಂದರು. ಕೊನೆಗೂ ನಾನು ನೈನಿ ಸ್ಟೇಷನ್ ಮುಟ್ಟಿದಾಗ ಸುಮಾರು ಎಂಟು ಗಂಟೆಯಾಗಿತ್ತು. ನೈನಿಯ ಐಟಿಐನಲ್ಲಿ ಗೆಸ್ಟ್ ಹೌಸ್ ಇರಲಿಲ್ಲ. ನಾನು ಒಂದು ಹೋಟೆಲಿನಲ್ಲಿ ರೂಮ್ ಬಾಡಿಗೆ ತೆಗೆದುಕೊಳ್ಳಬೇಕಾಯಿತು. ಸ್ನಾನ ಮತ್ತು ಉಪಾಹಾರ ಮುಗಿಸಿ ನಾನು ಅಲ್ಲಿಯ ಆಟೋ ರಿಕ್ಷಾ ಹಿಡಿದು ಐಟಿಐ ಫ್ಯಾಕ್ಟರಿಗೆ ಹೊರಟೆ. ಅಲ್ಲಿ ಆಟೋ ಎಂದರೆ ಬೆಂಗಳೂರಿನ ಆಟೋ ಹಾಗಲ್ಲ. ಹಲವಾರು ಜನ ಒಟ್ಟಿಗೆ ಕೂತು ಸಾಗುವ ಆಟೋ.  ನಾನು ಐಟಿಐ ಮುಟ್ಟಿದಾಗ ಹತ್ತು ಗಂಟೆ ಮೀರಿತ್ತು. ರಿಸೆಪ್ಷನ್ನಿನಲ್ಲಿ ವಿದ್ಯಾರ್ಥಿಯ ಹೆಸರು ಹೇಳಿದಾಗ ಅವನನ್ನು ಕರೆಸಿದರು. ಇಲ್ಲೂ ಅದೇ ಬಗೆಯ ತರಬೇತಿ ನೀಡಲಾಗುತ್ತಿತ್ತು. ವಿದ್ಯಾರ್ಥಿಯು ನನಗೆ ತಾನು ಏನೇನು ವಿಷಯಗಳನ್ನು ನೋಡಿ ತಿಳಿದುಕೊಂಡೆ ಎಂದು ವಿವರಿಸಿದ.  ತನ್ನ ಪ್ರಾಜೆಕ್ಟ್ ಪುಸ್ತಕ ತೋರಿಸಿದ. ನಾನು ಅವನಿಗೂ ಅದೇ ಪ್ರಶ್ನೆ ಕೇಳಿದೆ. ನೀನೇಕೆ ಪ್ರಾಜೆಕ್ಟ್ ಮಾಡಲು ಪ್ರಯತ್ನಿಸಲಿಲ್ಲ? ಅವನು "ಸರ್, ಇಲ್ಲಿ ಅದಕ್ಕೆ ಅವಕಾಶ ಇಲ್ಲ" ಎಂದು ಉತ್ತರಿಸಿದ. 

ಅವನ ಸೂಪರ್ವೈಸರ್ ಜೊತೆ ಭೇಟಿಯಾಯಿತು. ಅವರೂ ನನ್ನನ್ನು ಆದರದಿಂದ ಕಂಡರು. ಚಹಾ ತರಿಸಿಕೊಟ್ಟರು. ನನ್ನ ಪ್ರಯಾಣ ಹೇಗಿತ್ತು ಎಂದು ವಿಚಾರಿಸಿಕೊಂಡರು. ಅವರು ಕ್ವಾಲಿಟಿ ಕಂಟ್ರೋಲ್ ವಿಭಾಗದಲ್ಲಿದ್ದರು. ತಯಾರಿಸಿದ ಉತ್ಪನ್ನಗಳ ಗುಣಮಟ್ಟ ನೋಡಿ ಯಾವುದು ಉತ್ತಮ ಗುಣಮಟ್ಟದ್ದಲ್ಲವೋ ಅವನ್ನು ತಿರಸ್ಕರಿಸುವುದು ಈ ವಿಭಾಗದ ಕೆಲಸ.  ಹಾಗೆ ತಿರಸ್ಕರಿಸಿದ ಯೂನಿಟ್ಟುಗಳನ್ನು ಪ್ರತ್ಯೇಕವಾಗಿರಿಸಿ ಅವುಗಳನ್ನು ಕೂಲಂಕಷವಾಗಿ ಪರೀಕ್ಷಿಸಿ ಗುಣಮಟ್ಟದ ಅವನತಿಗೆ ಮೂಲ ಕಾರಣವನ್ನು ಹುಡುಕಲಾಗುತ್ತದೆ. ಇದು ಕೆಲವರ ಕಳಪೆ ಕಾರ್ಯಮಟ್ಟದತ್ತ ಬೆರಳು ಮಾಡಬಹುದು.

ನಾವು ಮಾತಾಡುತ್ತಾ ಕುಳಿತಿದ್ದಾಗ ಕೆಲವು ಕೆಲಸಗಾರರು ಬಂದರು. ಅವರ ನಡುವೆ ಮಾತುಕತೆಯಾಯಿತು. ಅಧಿಕಾರಿಗಳು ಅವರನ್ನು ಬೈದರು. ನೀವು ಹಾಗೇಕೆ ಮಾಡಿದಿರಿ ಎಂದು ಕೆಲಸಗಾರರನ್ನು ಕೇಳಿದರು. ಬಾಯಿತುಂಬಾ ಪಾನ್ ಹಾಕಿಕೊಂಡು ಜಗಿಯುತ್ತಿದ್ದ ಒಬ್ಬ ಕೆಲಸಗಾರ ದೇಶಾವರಿ ನಗುತ್ತಾ ಏನೋ ಹೇಳಿದ. ನನಗೆ ಗೊತ್ತಾಗಿದ್ದು ಇಷ್ಟು.  ಗುಣ ನಿಯಂತ್ರಣ ವಿಭಾಗದವರು ತಿರಸ್ಕರಿಸಿದ ಉತ್ಪನ್ನಗಳನ್ನು ಯಾರೋ ಮತ್ತೆ ವಾಪಸು ತಂದು ಇಡುತ್ತಿದ್ದರು! ಅಧಿಕಾರಿಗಳಿಗೆ ಇದರ ಸುಳಿವು ಸಿಕ್ಕಿತ್ತು. 

ಇಂಥ ಕೆಲಸಗಾರರಿದ್ದರೆ ಯಾವ ಗುಣಮಟ್ಟ ಕಾಯಲು ಸಾಧ್ಯ! ಪರೀಕ್ಷಿಸಿ ತಿರಸ್ಕರಿಸಲಾದದ್ದನ್ನು ಪುನಃ ಪರೀಕ್ಷಿಸಿದರೆ ಅದು ಪಾಸಾದೀತೆಂದುಕೊಂಡವರು! ಹೇಗೋ ಅದು ಗುಣಮಟ್ಟ ಪಡೆದೇ ಬಿಡಬಹುದು ಎಂದುಕೊಂಡವರು!  ನನ್ನ ಮುಂದೆ ಇದೆಲ್ಲ ಚರ್ಚೆಯಾಗಿದ್ದು ನನಗೆ ಮುಜುಗರವೂ ಆಯಿತು.

ಕೊನೆಗೂ ನನ್ನ ಕೆಲಸ ಮುಗಿಯಿತು. ಅಧಿಕಾರಿಗಳು ನನಗೆ ಫ್ಯಾಕ್ಟರಿಯನ್ನು ತೋರಿಸಿದರು. ಊಟವಾದ ನಂತರ ನಾನು ಹೊರಟೆ.  ಸದ್ಯ ನೈನಿ ಜೈಲು ನೋಡಿಕೊಂಡು ಹೋಗುತ್ತೀರಾ ಎಂದು ಅವರು ಕೇಳಲಿಲ್ಲ! ನೈನಿಯಿಂದ ಅಲಾಹಾಬಾದಿಗೆ  ಬಂದು ಅಲ್ಲಿಂದ ನವದೆಹಲಿಗೆ ಟ್ರೇನ್ ಹಿಡಿದೆ.  

ನಾನು ವಿದ್ಯಾರ್ಥಿಗಳ ಕೆಲಸವನ್ನು ಕುರಿತು ಕೊಡಬೇಕಾದ ರಿಪೋರ್ಟ್ ಕೊಟ್ಟೆ.   ಮುಂದಿನ ವರ್ಷ ಈ ಬಗೆಯ ತನಿಖೆಯಿಂದ ಎಷ್ಟು ಸಹಾಯವಾಗುತ್ತದೆ ಎಂಬ ಚರ್ಚೆ ನಡೆಯಿತು. ಒಂದು ದಿನದ ಭೇಟಿಯಿಂದ ಏನೂ ಆಗದು ಇತ್ಯಾದಿ ದೂರುಗಳು ಬಂದವು. ಕೆಲವರು ಇಂಥ ಭೇಟಿಯಿಂದ ನಮಗೆ ಭಾರತದ ಉದ್ಯಮಗಳೊಂದಿಗೆ ಸಂಪರ್ಕ ಇಟ್ಟುಕೊಳ್ಳುವುದು ಸಾಧ್ಯ ಎಂದು ವಾದಿಸಿದರು. ಆದರೆ ಪ್ರತಿವರ್ಷ ಐಐಟಿ ವಿವಿಧ ಸ್ಥಳಗಳಿಗೆ ಹೋಗಲು ಉಪಾಧ್ಯಾಯರಿಗೆ ಸಾಕಷ್ಟು ಟಿಎ ಡಿಎ ಕೊಡಬೇಕಾಗಿತ್ತು ಎನ್ನುವ  ಕಾರಣವೇ ಬಲವಾಯಿತು. ಹೀಗಾಗಿ ಈ ತರಬೇತಿ ತನಿಖೆ ಪರಂಪರೆಗೆ ಕಡಿವಾಣ ಬಿತ್ತು. 


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)