ವಾಘಾ - ಒಂದು ನೆನಪು
ಶೂನ್ಯರೇಖೆಯ ನೆನಪು ಸಿ ಪಿ ರವಿಕುಮಾರ್ ಕೆ ಲವು ವರ್ಷಗಳ ಹಿಂದೆ ನಾನು ವಾಘಾ ಬಾರ್ಡರ್ ನೋಡಲು ಹೋಗಿದ್ದೆ. ಅಮೃತಸರಕ್ಕೆ ಹೋದವರು ಅಲ್ಲಿಂದ ಸುಮಾರು ಮೂವತ್ತು ಕಿಲೋಮೀಟರ್ ದೂರದಲ್ಲಿರುವ ಬಾರ್ಡರ್ ನೋಡಲು ಹೋಗುವುದು ಸಾಮಾನ್ಯ. ಅಮೃತಸರದಲ್ಲಿ ಸಿಖ್ ಧರ್ಮದ ಅನುಯಾಯಿಗಳ ಪವಿತ್ರಸ್ಥಾನವಾದ ಸ್ವರ್ಣ ಮಂದಿರವಲ್ಲದೆ ಜಲಿಯಾನ್ ವಾಲಾ ಬಾಗ್ ಕೂಡಾ ಇದೆ. ಇಂದು ಜಲಿಯಾನ್ ವಾಲಾ ಬಾಗ್ಅನ್ನು ಇಂದು ಒಂದು ಪ್ರೇಕ್ಷಣೀಯ ಸ್ಥಾನವಾಗಿ ಮಾರ್ಪಡಿಸಲಾಗಿದೆ. ಈ ಉದ್ಯಾನವನದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಒಂದು ದುರಂತ ನಡೆದುಹೋಯಿತು. ಸ್ವರಾಜ್ಯ ಕುರಿತು ಭಾಷಣ ಕೇಳಲು ಬಂದಿದ್ದ ಸಹಸ್ರಾರು ಜನ ತಮ್ಮ ಪಾಡಿಗೆ ಶಾಂತಿಯಿಂದ ಸಭೆಯಲ್ಲಿ ಕುಳಿತಿದ್ದಾಗ ಜೆನೆರಲ್ ಡಯರ್ ಎಂಬ ಬ್ರಿಟಿಷ್ ಅಧಿಕಾರಿ ಐವತ್ತು ಸೈನಿಕರೊಂದಿಗೆ ಅಲ್ಲಿ ಬಂದ. ಸ್ವರಾಜ್ಯದ ಕೂಗು ಬಲವಾಗುತ್ತಲೇ ಇದ್ದ ಕಾಲದಲ್ಲಿ ಬ್ರಿಟಿಷ್ ಆಳ್ವಿಕೆಗೆ ಅಧೈರ್ಯ ಉಂಟಾಗಿದ್ದು ಆಶ್ಚರ್ಯವೇನಲ್ಲ. ಅವರ ಆಳ್ವಿಕೆಯ ವಿರುದ್ಧ ನಡೆಯುತ್ತಲೇ ಇದ್ದ ಪ್ರತಿಭಟನೆಗಳು, ದಂಗೆಗಳು ಅವರನ್ನು ಕಂಗೆಡಿಸಿದ್ದವು. ಡಯರ್ ತಾಳ್ಮೆ ಕಳೆದುಕೊಂಡು ತನ್ನ ಸೈನಿಕರಿಗೆ ಗೋಲೀಬಾರು ಮಾಡಲು ಆದೇಶ ನೀಡಿದ. ಗುಂಡಿಗೆ ಬಲಿಯಾದವರು ಒಂದು ಕಡೆಯಾದರೆ ಜನ ಹೆದರಿ ಓಡುವಾಗ ಕಾಲ್ತುಳಿತಕ್ಕೆ ಸಿಕ್ಕು ಸತ್ತವರು ಒಂದು ಕಡೆ. ಉದ್ಯಾನವನದಲ್ಲಿರುವ ದೊಡ್ಡ ಬಾವಿಗೆ ಎಷ್ಟೋ ಜನ ಆತ್ಮರಕ್ಷಣೆಗಾಗ...