ಮಧ್ಯಾಹ್ನದ ಮಳೆ (ಮಕ್ಕಳ ಪದ್ಯ)
ಸೂರ್ಯನೆಲ್ಲಿ ಹೋದನು ಹೇಳಮ್ಮಾ
ಮೋಡಗಳಿವು ಬಂದವು ಎಲ್ಲಿಂದ?
ಒಮ್ಮೆಲೇ ಸೂರ್ಯನಿಗೇತಕೆ ಬಂಧ!
ಬ್ರೇಕಿಂಗ್ ನ್ಯೂಸ್ ಬರುತಿದೆಯೇನಮ್ಮಾ
ಹಚ್ಚು ಟಿವಿ ಹಚ್ಚು!
ನಡೆಯುತ್ತಿದೆಯೇನಮ್ಮಾ ಯುದ್ಧ?
ಏನದು ಬಾನೊಳು ಗುಡುಗುಡು ಶಬ್ದ!
ನೋಡಮ್ಮಾ ಈ ರೊಯ್ಯನೆ ಗಾಳಿ
ನುಗ್ಗುವ ಹಾಗೆ ಸೊಕ್ಕಿದ ಗೂಳಿ
ಗುಟುರು ಹಾಕಿ ಬರುತಿದೆ ಸನ್ನದ್ಧ!
ಮುಚ್ಚು ಕದವ ಮುಚ್ಚು!
ಧೋ ಧೋ ಮಳೆ ಸುರಿಯುತ್ತಿದೆ ಹೇಗೆ
ಮರಗಳೆಲ್ಲ ಉಯ್ಯಾಲೆಯ ಹಾಗೆ
ತೂಗಾಡುತ್ತಿವೆ ಅತ್ತಿಂದಿತ್ತ!
ಗಿಡಗಳು ಬಾಗಿವೆ ಸೊಟ್ಟಂಪಟ್ಟ!
ಕಾಣದು ಏನೂ ಕಿಟಕಿಯ ಹೊರಗೆ,
ಎಲ್ಲಿ ದೀಪ ಸ್ವಿಚ್ಚು!
ಕೊನೆಗೂ ನಿಂತಿತು ಮಳೆ ಸುರಿಸುರಿದು
ಶುಭ್ರಾಕಾಶವು ಬರಿದೋ ಬರಿದು
ಶಾಂತವಾಗಿಹವು ಗಿಡಮರಬಳ್ಳಿ
ಸೂರ್ಯ ನಗುತಿಹನು ಆಗಸದಲ್ಲಿ
ಏಳು ಬಣ್ಣಗಳ ಕಮಾನು ತೆರೆದು!
ಹೊರಡುವೆ, ಆಟದ ಹೊತ್ತು!ಸಿ. ಪಿ. ರವಿಕುಮಾರ್
ಬರವಣಿಗೆಯ ಶೈಲಿ ತುಸು ಬದಲಾಗಬೇಕಿತ್ತು, ನನ್ನ ಅನಿಸಿಕೆ, ಹಳೆಯ ಮಾದರಿ ಆಗಿದೆ
ಪ್ರತ್ಯುತ್ತರಅಳಿಸಿ