ವಾಘಾ - ಒಂದು ನೆನಪು

ಶೂನ್ಯರೇಖೆಯ ನೆನಪು

ಸಿ ಪಿ ರವಿಕುಮಾರ್

ಕೆಲವು ವರ್ಷಗಳ ಹಿಂದೆ ನಾನು ವಾಘಾ ಬಾರ್ಡರ್ ನೋಡಲು ಹೋಗಿದ್ದೆ.  ಅಮೃತಸರಕ್ಕೆ ಹೋದವರು ಅಲ್ಲಿಂದ ಸುಮಾರು ಮೂವತ್ತು ಕಿಲೋಮೀಟರ್ ದೂರದಲ್ಲಿರುವ ಬಾರ್ಡರ್ ನೋಡಲು ಹೋಗುವುದು ಸಾಮಾನ್ಯ.  ಅಮೃತಸರದಲ್ಲಿ ಸಿಖ್ ಧರ್ಮದ ಅನುಯಾಯಿಗಳ ಪವಿತ್ರಸ್ಥಾನವಾದ ಸ್ವರ್ಣ ಮಂದಿರವಲ್ಲದೆ ಜಲಿಯಾನ್ ವಾಲಾ ಬಾಗ್ ಕೂಡಾ ಇದೆ. ಇಂದು  ಜಲಿಯಾನ್ ವಾಲಾ ಬಾಗ್ಅನ್ನು  ಇಂದು ಒಂದು ಪ್ರೇಕ್ಷಣೀಯ ಸ್ಥಾನವಾಗಿ ಮಾರ್ಪಡಿಸಲಾಗಿದೆ.  ಈ ಉದ್ಯಾನವನದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಒಂದು ದುರಂತ ನಡೆದುಹೋಯಿತು. ಸ್ವರಾಜ್ಯ ಕುರಿತು ಭಾಷಣ ಕೇಳಲು ಬಂದಿದ್ದ ಸಹಸ್ರಾರು ಜನ ತಮ್ಮ ಪಾಡಿಗೆ ಶಾಂತಿಯಿಂದ ಸಭೆಯಲ್ಲಿ ಕುಳಿತಿದ್ದಾಗ ಜೆನೆರಲ್ ಡಯರ್ ಎಂಬ ಬ್ರಿಟಿಷ್ ಅಧಿಕಾರಿ ಐವತ್ತು ಸೈನಿಕರೊಂದಿಗೆ ಅಲ್ಲಿ ಬಂದ. ಸ್ವರಾಜ್ಯದ ಕೂಗು ಬಲವಾಗುತ್ತಲೇ ಇದ್ದ ಕಾಲದಲ್ಲಿ  ಬ್ರಿಟಿಷ್ ಆಳ್ವಿಕೆಗೆ ಅಧೈರ್ಯ ಉಂಟಾಗಿದ್ದು ಆಶ್ಚರ್ಯವೇನಲ್ಲ. ಅವರ ಆಳ್ವಿಕೆಯ ವಿರುದ್ಧ ನಡೆಯುತ್ತಲೇ ಇದ್ದ ಪ್ರತಿಭಟನೆಗಳು, ದಂಗೆಗಳು ಅವರನ್ನು ಕಂಗೆಡಿಸಿದ್ದವು. ಡಯರ್ ತಾಳ್ಮೆ ಕಳೆದುಕೊಂಡು ತನ್ನ ಸೈನಿಕರಿಗೆ ಗೋಲೀಬಾರು ಮಾಡಲು ಆದೇಶ ನೀಡಿದ. ಗುಂಡಿಗೆ ಬಲಿಯಾದವರು ಒಂದು ಕಡೆಯಾದರೆ  ಜನ ಹೆದರಿ ಓಡುವಾಗ ಕಾಲ್ತುಳಿತಕ್ಕೆ ಸಿಕ್ಕು ಸತ್ತವರು ಒಂದು ಕಡೆ.  ಉದ್ಯಾನವನದಲ್ಲಿರುವ ದೊಡ್ಡ ಬಾವಿಗೆ ಎಷ್ಟೋ ಜನ ಆತ್ಮರಕ್ಷಣೆಗಾಗಿ ಹಾರಿ ಪ್ರಾಣ ಕಳೆದುಕೊಂಡರು. ಇಂದಿಗೂ ಆ ಬಾವಿಯನ್ನು ನೋಡಬಹುದು. ಕಟ್ಟಡಗಳ ಮೇಲೆ ಇಂದಿಗೂ ಗುಂಡಿನ ದಾಳಿಯ ಗುರುತುಗಳು ಉಳಿದಿವೆ.


ಖಾಕಿ ಡ್ರೆಸ್ ತೊಟ್ಟ ಭಾರತೀಯ ಸೈನಿಕ ಮತ್ತು ಕಪ್ಪು ಡ್ರೆಸ್ ತೊಟ್ಟ ಪಾಕೀಸ್ತಾನಿ ಸೈನಿಕ ಪರಸ್ಪರ ಕೈ ಕುಲುಕುವ ರೀತಿ 


ಪಂಜಾಬಿನ ವಾಘಾದಲ್ಲಿ ಭಾರತ-ಪಾಕೀಸ್ತಾನ ಗಡಿ ಪ್ರದೇಶವಿದೆ. ಎರಡೂ ದೇಶಗಳ ನಡುವೆ ಹಾಕಿದ ಗೆರೆಗೆ ಶೂನ್ಯರೇಖೆ ಎನ್ನುತ್ತಾರೆ.  ಪಾಕೀಸ್ತಾನದಿಂದ ಭಾರತಕ್ಕೆ, ಭಾರತದಿಂದ ಪಾಕೀಸ್ತಾನಕ್ಕೆ ಬಸ್ ಮೊದಲಾದ ವಾಹನಗಳ ಮೂಲಕ ಬರುವವರು ಇಲ್ಲಿ ಪಾಸ್ ಪೋರ್ಟ್ ತೋರಿಸಿ ಕಸ್ಟಮ್ಸ್ ತೆರಿಗೆ ತೆತ್ತು ಹೋಗಬೇಕು. ಇದಲ್ಲದೆ ವಾಘಾ ಗಡಿಯಲ್ಲಿ ಪ್ರತಿನಿತ್ಯ ಒಂದು ವಿಶೇಷ ಕಾರ್ಯಕ್ರಮ ನಡೆಯುತ್ತದೆ. ಇದನ್ನು ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಆ ಕಡೆ ಪಾಕೀಸ್ತಾನದವರು, ಈ ಕಡೆ ಭಾರತದವರು.  ನಾವು ಕುಳಿತಿದ್ದ ಜಾಗದಿಂದ ಒಂದು ಐವತ್ತು ಹೆಜ್ಜೆ ಮುಂದೆ ಹೋದರೆ ಪಾಕೀಸ್ತಾನ! ಕಾರ್ಯಕ್ರಮ ಪ್ರಾರಂಭವಾಗುವ ಮುನ್ನವೇ ಎರಡೂ ಕಡೆ ಸಂಗೀತ ಕೇಳಿಬರುತ್ತದೆ. ಸಿನಿಮಾ ಸಂಗೀತವೇ ಹೆಚ್ಚು ಕೇಳುತ್ತದೆ.  ತಿನಿಸುಗಳು, ಪಾನೀಯಗಳ ವಿಕ್ರಯ ನಡೆಯುತ್ತದೆ. ಕೆಲವು ಮಂದಿಗೆ ಹುರುಪು ಬಂದು ನರ್ತನ ಪ್ರಾರಂಭಿಸುತ್ತಾರೆ. ಇದಕ್ಕೆ ಎರಡೂ ಕಡೆಯಿಂದ ಪ್ರೋತ್ಸಾಹಕರ ಚಪ್ಪಾಳೆ ಕೇಳುತ್ತದೆ. ಕೆಲವು ಸಲ ಜನ ಅಣಕಿಸುವುದು ಇತ್ಯಾದಿ ಏನಾದರೂ ಕುಚೇಷ್ಟೆಯನ್ನೂ ಪ್ರಾರಂಭಿಸುತ್ತಾರೆ.

ಗಡಿ ಪ್ರದೇಶದಲ್ಲಿರುವ ಸೈನಿಕರ ಬಗ್ಗೆ ಹೇಳಲೇಬೇಕು. ಇವರ ಸರಾಸರಿ ಎತ್ತರವೇ ಆರು ಅಡಿ ಎನ್ನಬಹುದು. ಎಲ್ಲರೂ ಸುದೃಢಕಾಯರು.  ಕೆಲವರು ಕುದುರೆಗಳ ಮೇಲೆ ಕುಳಿತು ಸುರಕ್ಷಣೆಯ ಕಡೆ ಗಮನ ಇಟ್ಟಿರುತ್ತಾರೆ. ಸಂಜೆ ಸೂರ್ಯ ಕಂತುವ ಮುನ್ನ ಗಡಿಯ ಎರಡೂ ಕಡೆ ಸೈನಿಕರು ಮಾರ್ಚ್ ಪಾಸ್ಟ್ ಮಾಡುತ್ತಾರೆ. ಎರಡೂ ಕಡೆಯ ಸೈನಿಕರ ಪೋಷಾಕುಗಳು ವಿಭಿನ್ನ.  ಆ ಕಡೆ ಪಾಕೀಸ್ತಾನದ ಧ್ವಜ ಹಾರಾಡುತ್ತಿದ್ದರೆ ಈ ಕಡೆ ಭಾರತದ ತ್ರಿವರ್ಣ.  ಗಡಿಯಲ್ಲಿರುವ ಕಬ್ಬಿಣದ ಬಾಗಿಲು ತೆರೆಯುತ್ತದೆ. ಆ ಕಡೆಯಿಂದ ಒಬ್ಬ ಸೈನಿಕ - ಈ ಕಡೆಯಿಂದ ಒಬ್ಬ ಸೈನಿಕ ಪರಸ್ಪರರತ್ತ ಮಾರ್ಚ್ ಮಾಡುತ್ತಾ ಹೋಗಿ ಪರಸ್ಪರ ಕೈ ಕುಲುಕುತ್ತಾರೆ. ಆದರೆ ಅವರು ಮುಗುಳ್ನಗುವುದಿಲ್ಲ.  ಕೈ ಕುಲುಕುವ ಕ್ರಿಯೆಯೂ ಸ್ವಲ್ಪ ವಿಚಿತ್ರವಾಗಿರುತ್ತದೆ - ಒಬ್ಬರು ಇನ್ನೊಬ್ಬರಿಗೆ ಕಾಲಿನಿಂದ ಒದೆಯುವಂತೆ ಎಂದರೆ ತಪ್ಪಲ್ಲ. ಅನಂತರ ಎರಡೂ ಕಡೆ ಏಕಕಾಲದಲ್ಲಿ ಬಾವುಟ ಇಳಿಸಿ ಮಡಿಸಲಾಗುತ್ತದೆ. ಇದಾದ ನಂತರ ಕಬ್ಬಿಣದ ಗೇಟ್ ಮತ್ತೆ ಮುಚ್ಚುತ್ತದೆ. ಜನ "ಮುಗಿಯಿತು" ಎಂದು ಮೇಲೇಳುತ್ತಾರೆ.

ಒಮ್ಮೆ ಒಂದೇ ದೇಶದವರಾಗಿದ್ದು ದುರ್ಘಟನೆಯಲ್ಲಿ ಬೇರಾದ ಮಕ್ಕಳಂತಿರುವ ಎರಡೂ ದೇಶಗಳ ಜನರಲ್ಲಿ ಕೆಲವರು ಹೀಗೆ ಪ್ರತಿ ದಿನವೂ ಬಂದು ತಮ್ಮ ತಮ್ಮ ದೇಶದ ಪ್ರತಿಯಾಗಿ ಪ್ರೇಮದ ಜೊತೆಗೇ ಆ ಇನ್ನೊಂದು ದೇಶದ ಜನರ ಪ್ರತಿಯಾಗಿಯೂ "ಅವರೂ ನಮ್ಮ ಹಾಗೇ ಇದ್ದಾರಲ್ಲ!" ಎಂಬ ಆತ್ಮೀಯತೆಯನ್ನು ಸ್ವಲ್ಪ ಸಮಯಕ್ಕಾದರೂ ಬೆಳೆಸಿಕೊಳ್ಳುತ್ತಾರೆ.  ಸ್ವಲ್ಪ ಸಮಯಕ್ಕಾದರೂ ತಮ್ಮ ಹೃದಯದಲ್ಲಿರುವ ಕಬ್ಬಿಣದ ಗೇಟ್ ಗಳನ್ನು ತೆರೆಯುತ್ತಾರೆ.

* * *

ಪ್ರಸಿದ್ಧ ಲೇಖಕ ಮತ್ತು ಚಿತ್ರನಿರ್ದೇಶಕ ಗುಲ್ಜಾರ್ ಬರೆದ "ಶೂನ್ಯರೇಖೆ" ಎಂಬ ಕವಿತೆಯಿದೆ. ಗುಲ್ಜಾರ್ ಹುಟ್ಟಿದ್ದು ಇಂದಿನ ಪಾಕಿಸ್ತಾನದ ದೀನಾ ಎಂಬ ಊರಿನಲ್ಲಿ.  ಭಾರತದ ವಿಭಜನೆಗೆ ಮುಂಚೆ ಅವರ ತಂದೆ  ಪಾಕಿಸ್ತಾನದಲ್ಲಿದ್ದ  ತಮ್ಮ ನೆಲೆಯನ್ನು ತ್ಯಜಿಸಿ ಕುಟುಂಬದೊಂದಿಗೆ ಭಾರತಕ್ಕೆ ಬಂದು ದೆಹಲಿಯಲ್ಲಿ ನೆಲೆಸಿದರು. ಮುಂದೆ ಗುಲ್ಜಾರ್ ಕವಿತೆಗಳನ್ನು ಬರೆಯತೊಡಗಿ ಮುಂಬೈಗೆ ಚಿತ್ರರಂಗದಲ್ಲಿ ಕೆಲಸ ಮಾಡಲೆಂದು ಹೋದಾಗ ಅವರ ತಂದೆಗೆ ಅದು ಇಷ್ಟವಿರಲಿಲ್ಲ. "ಇದರಲ್ಲಿ ನಿನಗೆ ಏನು ಸಂಪಾದನೆ ಇದ್ದೀತು? ನಿನ್ನ ಅಣ್ಣನ ಮೇಲೆ ನೀನು ಹೊರೆಯಾಗುತ್ತೀಯ," ಎಂದು ಅವರು ಮುನಿಸಿಕೊಂಡು ಹೇಳಿದ್ದರು. ತಂದೆ ಕಾಲವಾದ  ಸುದ್ದಿ ಗುಲ್ಜಾರ್ ಗೆ ತಲುಪಿದ್ದು ಐದು ದಿನಗಳ ತರುವಾಯ. ಅವರು ದೆಹಲಿಗೆ ಬಂದಾಗ ತಂದೆಯ ದೇಹವನ್ನು ಆಗಲೇ ಮಣ್ಣು ಮಾಡಿ ಆಗಿತ್ತು. ಇದು ಗುಲ್ಜಾರ್ ಅವರಿಗೆ ಅತ್ಯಂತ ನೋವಿನ ಸಂಗತಿಯಾಗಿತ್ತು.

ಮುಂದೆ ಗುಲ್ಜಾರ್ ಬಿಮಲ್ ರಾಯ್ ಜೊತೆ ಕೆಲಸ ಮಾಡಲಾರಂಭಿಸಿದರು.  ಬಿಮಲ್ ರಾಯ್ ಅವರಲ್ಲಿ ಗುಲ್ಜಾರ್ ತಮ್ಮ ತಂದೆಯನ್ನು ಕಂಡರು. ತಮ್ಮ ಕೊನೆಯ ಚಿತ್ರ "ಅಮೃತ ಕುಂಭ"ದ ಚಿತ್ರೀಕರಣದ ವೇಳೆ ಬಿಮಲ್ ರಾಯ್ ಕ್ಯಾನ್ಸರ್ ರೋಗಕ್ಕೆ ತುತ್ತಾದರು. ಇದನ್ನು ವಸ್ತುವಾಗಿಟ್ಟುಕೊಂಡು ಗುಲ್ಜಾರ್ ಒಂದು ಕತೆ ಕೂಡಾ ಬರೆದಿದ್ದಾರೆ.  ಬಿಮಲ್ ರಾಯ್ ಸತ್ತಾಗ ಅವರ ಅಂತ್ಯ ಕ್ರಿಯೆಯನ್ನು ಗುಲ್ಜಾರ್ ಮಾಡಿದರು. "ಹೀಗೆ ಐದು ವರ್ಷಗಳ ನಂತರ ನಾನು ತಂದೆಯ ಅಂತ್ಯ ಕ್ರಿಯೆ ಮಾಡಿದೆ" ಎಂದು  ಗುಲ್ಜಾರ್ ಬರೆದಿದ್ದಾರೆ.

ಒಂದು ಚಿತ್ರೀಕರಣದ ಸಂದರ್ಭದಲ್ಲಿ ಎಂಬತ್ತರ ಅಂಚಿನ ಗುಲ್ಜಾರ್ ಪಾಕಿಸ್ತಾನಕ್ಕೆ ಎಪ್ಪತ್ತು ವರ್ಷಗಳ ನಂತರ ಮತ್ತೆ ಹೋಗಿದ್ದರು. ತಾವು ಇದ್ದ ಮನೆ, ದೀನಾದಲ್ಲಿರುವ ರೈಲ್ವೆ ಸ್ಟೇಷನ್ ಮೊದಲಾದವುಗಳನ್ನು ಮತ್ತೆ ನೋಡಿದ ಗುಲ್ಜಾರ್ ಗದ್ಗದಿತರಾದರು. ತಂದೆಯ ನೆನಪು ಅವರನ್ನು ಕಾಡಿತು.  ಈ ಕವಿತೆಯನ್ನು ಆಗ ಬರೆದಿದ್ದು.

ಶೂನ್ಯ ರೇಖೆ 
ಮೂಲ ಹಿಂದಿ ಕವಿತೆ: ಗುಲ್ಜಾರ್ 

ಹೆಜ್ಜೆಗಳನ್ನು ಅಳೆಯುತ್ತಾ  ನಾನು ವಾಘಾದಲ್ಲಿ
ಶೂನ್ಯರೇಖೆಯ ಮೇಲೆ ಬಂದು ನಿಂತಾಗ
ನನ್ನ ನೆರಳು ಪಾಕೀಸ್ತಾನದಲ್ಲಿತ್ತು.
ಸೂರ್ಯ ನನ್ನ ಬೆನ್ನಿಗಿದ್ದ.
ಎದುರಿಗೆ ನನ್ನ ಅಬ್ಬೂ ಗೋಚರಿಸಿದರು.
ನನ್ನನ್ನು ನೋಡಿದವರೇ
ಕೈಯಲ್ಲಿದ್ದ ಕೋಲನ್ನು ನೆಲಕ್ಕೆ ಊರಿ
ಮುಗುಳ್ನಕ್ಕು ಮಾತಾಡಿಸಿದರು:

"ಅಲ್ಲಿ ನನ್ನ ಮೇಲೆ ಮಣ್ಣು ಹಾಕಿದ ಮೇಲೆ
 ನಾನು ಇಲ್ಲಿ ನನ್ನ ಮನೆಗೆ ಮರಳಿ ಬಂದೆ;
 ನನಗೆ ವಿದಾಯ ಹೇಳಲು
 ನೀನು ಬಂದೇ ಬರುತ್ತೀಯ
 ಅಂತ ನನಗೆ ಭರವಸೆ ಇತ್ತು.
 ನನ್ನ ಸಾವಿನ ಸುದ್ದಿ ನಿನಗೆ ಸಮಯಕ್ಕೆ ಮುಟ್ಟಿರಲಿಲ್ಲ!"

ಕೋಲನ್ನು ನೆಲಕ್ಕೆ ಮತ್ತೊಮ್ಮೆ ಬಡಿದು
ನನ್ನ ಕಡೆ ಕೈ ಚಾಚಿ ನುಡಿದರು -
"ನಡೆ, ದೀನಾಗೆ ಹೋಗೋಣ."

* * *

ನೆನ್ನೆ ಈ ವಾಘಾ ಗಡಿಯಲ್ಲೂ ಒಂದು ದುರಂತ ನಡೆದಿದೆ.  ಮೂರು ದಿನಗಳ ಕಾಲ ವಾಘಾ ಗಡಿಯ ಗೇಟ್ ತೆರೆಯುವುದಿಲ್ಲವಂತೆ. ಯಾವುದು ದೊಡ್ಡ ದುರಂತ - ಜಲಿಯಾನ್ ವಾಲಾ  ದುರಂತವೋ, ನಲವತ್ತೇಳರ ವಿಭಜನೆಯೋ,  ಅಥವಾ ನೆನ್ನೆ ವಾಘಾದಲ್ಲಿ ನಡೆದುದ್ದೋ ಎಂದು ಯೋಚಿಸುತ್ತಿದ್ದೇನೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)