ಒಂದು ಪತ್ರ
ಒಂದು ಪತ್ರ
ಮೂಲ ಪಂಜಾಬಿ ಕವಿತೆ - ಅಮೃತಾ ಪ್ರೀತಂ
ಇಂಗ್ಲಿಷ್ ಭಾಷಾಂತರ - ಡಿ ಎಚ್ ಟ್ರೇಸಿ ಮತ್ತು ಮೋಹನ್ ಟ್ರೇಸಿ
ಕನ್ನಡಕ್ಕೆ - ಸಿ.ಪಿ. ರವಿಕುಮಾರ್
ನಾನು ಅಟ್ಟದ ಮೇಲೆ ಬಿದ್ದಿರುವ ಪುಸ್ತಕ.
ಸ್ತೋತ್ರಮಂಜರಿಯೋ ಕಾಮಸೂತ್ರವೋ
ಗುಪ್ತರೋಗಗಳಿಗೆ ಮನೆಮದ್ದು ದೀಪಿಕೆಯೋ
ನಾನಿದಾವುದೂ ಅಲ್ಲ.
ಹಾಗೇನಾದರೂ ಇದ್ದಿದ್ದರೆ
ಯಾರಾದರೂ ಓದುತ್ತಿದ್ದರು ಆಗಾಗ್ಗೆ
ಅಟ್ಟಕ್ಕೇರಿಸುತ್ತಿರಲಿಲ್ಲ ಹೀಗೆ.
ಕ್ರಾಂತಿಕಾರಿಗಳ ಯಾವುದೋ ಸಭೆಯಲ್ಲಿ
ಕೈಗೊಂಡ ನಿರ್ಣಯದ
ಹಸ್ತಪ್ರತಿ ನಾನು.
ಪೊಲೀಸರ ಮುದ್ರೆಯೂ ಇದೆ
ಮುಖಪುಟದ ಮೇಲೆ.
ಬರೆದಿಟ್ಟರೇನು
ಜಾರಿಗೆ ಬಂದರಲ್ಲವೇ ಬೆಲೆ?
ಔಪಚಾರಿಕ ನಿಮಿತ್ತಕ್ಕಾಗಿ ಮಾತ್ರ
ಉಳಿಸಿದ್ದಾರೆ ನನ್ನ ತಲೆ.
ಈಗ ನನ್ನನ್ನು ಹುಡುಕಿಕೊಂಡು ಬರುತ್ತವೆ
ಗುಬ್ಬಚ್ಚಿಗಳ ಜೋಡಿ
ಕಚ್ಚಿಕೊಂಡು ಕೊಕ್ಕಿನಲ್ಲಿ ಹುಲ್ಲುಕಡ್ಡಿ.
ನನ್ನ ಮೇಲೆ ಕೂಡುತ್ತವೆ
ನೀಡುತ್ತವೆ
ಮುಂದಿನ ಪೀಳಿಗೆಯೊಂದು ಬರುವ ಸೂಚನೆ
ಎಷ್ಟು ಒಳ್ಳೆಯದು ಮುಂದಿನ ಪೀಳಿಗೆಯ ಆಲೋಚನೆ!
ಹಾರಿಹೋಗುತ್ತವೆ ಗುಬ್ಬಿಗಳು, ರೆಕ್ಕೆಗಳಿವೆಯಲ್ಲ ಅವಕ್ಕೆ
ಸಭೆಯ ನಿರ್ಣಯಗಳಿಗಿಲ್ಲ ಪುಕ್ಕರೆಕ್ಕೆ
ಮುಂದಿನ ಪೀಳಿಗೆಯೂ ಇರದು ನಿರ್ಣಯಕ್ಕೆ.
ಒಮ್ಮೊಮ್ಮೆ ನಾನು ಯೋಚಿಸುತ್ತೇನೆ ಭವಿಷ್ಯವನ್ನು ಕುರಿತು.
ಚಿಂತೆಯಿಂದ ಕಿತ್ತುಬರುತ್ತದೆ ನನ್ನನ್ನು ಬಂಧಿಸಿದ ಕಟ್ಟು.
ದೀರ್ಘ ನಿಟ್ಟುಸಿರಿಟ್ಟು ಉಸಿರೆಳೆದುಕೊಂಡಾಗ
ಗುಬ್ಬಿಗಳ ಹಿಕ್ಕೆಯ ಕಡುಘಾಟು.
ಓ ಭೂಮಿಯೇ, ನಿನ್ನ ಮುಂದಿನ ಪಾಡು!
ನಾನೀಗ ನಿನ್ನ ಸ್ಥಿತಿಯಲ್ಲೇ ಇದ್ದೇನೆ ನೋಡು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ