ಪ್ರವಾಸ ಪ್ರಯಾಸ
ನಾನು ದೆಹಲಿ ಐಐಟಿ ಸೇರಿದ ಹೊಸತು. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಇಂದೂಲ್ಕರ್ ನನ್ನನ್ನು ಕರೆದು "ನೋಡಿ, ಪ್ರತಿವರ್ಷ ಬಿ.ಟೆಕ್ ವಿದ್ಯಾರ್ಥಿಗಳು ಬೇಸಗೆ ತರಬೇತಿಗಾಗಿ ಯಾವುದಾದರೂ ಕಂಪನಿಗೆ ಹೋಗುತ್ತಾರೆ. ಅವರ ಪ್ರಾಜೆಕ್ಟ್ ನೋಡಿ ಅವರಿಗೆ ಸಲಹೆ ಕೊಡಲು ನಮ್ಮ ಕಡೆಯಿಂದ ಒಬ್ಬ ಉಪಾಧ್ಯಾಯರು ಹೋಗಬೇಕು. ಇಲ್ಲಿ ಲಿಸ್ಟ್ ಇದೆ. ನಿಮಗೆ ಇಷ್ಟವಾದದ್ದು ಯಾವುದಾದರೂ ಕಂಪನಿ ಇದ್ದರೆ ಆರಿಸಿಕೊಳ್ಳಿ" ಎಂದರು. ಈಗಾಗಲೇ ಬೆಂಗಳೂರು, ಬಾಂಬೆ, ಮದ್ರಾಸ್ ಮುಂತಾದ ಸಿಟಿಗಳಲ್ಲಿರುವ ಕಂಪನಿಗಳನ್ನು ಯಾರೋ ಆರಿಸಿಕೊಂಡುಬಿಟ್ಟಿದ್ದರು. ನನಗೆ ಆಗಿನ್ನೂ "ಸಾರಿ ಸರ್, ಇವು ಯಾವುದೂ ನನಗಿಷ್ಟವಿಲ್ಲ" ಎನ್ನುವಷ್ಟು ತಿಳಿವಳಿಕೆ ಇರಲಿಲ್ಲ. ನನಗೆ ಆಗ ಇನ್ನೂ ಮದುವೆ ಆಗಿರಲಿಲ್ಲ. ಹೀಗಾಗಿ ಇವನು ಎಲ್ಲಿಗಾದರೂ ಹೋಗಲು ತಯಾರಾಗುತ್ತಾನೆ ಎಂದು ಅವರಿಗೆ ಅನ್ನಿಸಿರಬಹುದು! ನನಗೆ ಸಿಕ್ಕ ಎರಡು ಇಂಡಸ್ಟ್ರಿಗಳಲ್ಲಿ ಒಂದು ಉತ್ತರಪ್ರದೇಶದ ಗೊಂಡಾ ಎಂಬ ಕಡೆ ಇರುವ ಐಟಿಐ ಮತ್ತು ಇನ್ನೊಂದು ಅಲಾಹಾಬಾದಿನ ಹತ್ತಿರ ಇರುವ ನೈನಿ ಎಂಬಲ್ಲಿರುವ ಐಟಿಐ! ಗೊಂಡಾ ಎಂಬ ಹೆಸರೇ ನಾನು ಕೇಳಿರಲಿಲ್ಲ. ಇದಾವುದೋ ಗೊಂಡಾರಣ್ಯದ ಅವಶೇಷವೇನೋ ಎಂದು ನನಗೆ ಅನ್ನಿಸಿತು. ನೈನಿ ಎಂಬ ಹೆಸರು ಕೇಳಿದ್ದು ಮಸುಕಾಗಿ ನೆನಪಿತ್ತು. ಆಗ ಇಂಟರ್ನೆಟ್ ಇರಲಿಲ್ಲ. ಅನಂತರ ನೈನಿ ಪ್ರಸಿದ್ಧವಾಗಿರುವುದು ಅಲ್ಲಿಯ ಜೈಲಿಗೆ ಎಂದು ತಿಳಿಯಿತು. ಅಲಾಹಾಬಾದಿನಲ್ಲ