ಪ್ರವಾಸ ಪ್ರಯಾಸ

 ನಾನು ದೆಹಲಿ ಐಐಟಿ ಸೇರಿದ ಹೊಸತು. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಇಂದೂಲ್ಕರ್ ನನ್ನನ್ನು ಕರೆದು "ನೋಡಿ, ಪ್ರತಿವರ್ಷ ಬಿ.ಟೆಕ್ ವಿದ್ಯಾರ್ಥಿಗಳು ಬೇಸಗೆ ತರಬೇತಿಗಾಗಿ ಯಾವುದಾದರೂ ಕಂಪನಿಗೆ ಹೋಗುತ್ತಾರೆ. ಅವರ ಪ್ರಾಜೆಕ್ಟ್ ನೋಡಿ ಅವರಿಗೆ ಸಲಹೆ ಕೊಡಲು ನಮ್ಮ ಕಡೆಯಿಂದ ಒಬ್ಬ ಉಪಾಧ್ಯಾಯರು ಹೋಗಬೇಕು. ಇಲ್ಲಿ ಲಿಸ್ಟ್ ಇದೆ. ನಿಮಗೆ ಇಷ್ಟವಾದದ್ದು ಯಾವುದಾದರೂ ಕಂಪನಿ ಇದ್ದರೆ ಆರಿಸಿಕೊಳ್ಳಿ" ಎಂದರು. ಈಗಾಗಲೇ ಬೆಂಗಳೂರು, ಬಾಂಬೆ, ಮದ್ರಾಸ್ ಮುಂತಾದ ಸಿಟಿಗಳಲ್ಲಿರುವ ಕಂಪನಿಗಳನ್ನು ಯಾರೋ ಆರಿಸಿಕೊಂಡುಬಿಟ್ಟಿದ್ದರು. ನನಗೆ ಆಗಿನ್ನೂ "ಸಾರಿ ಸರ್, ಇವು ಯಾವುದೂ ನನಗಿಷ್ಟವಿಲ್ಲ" ಎನ್ನುವಷ್ಟು ತಿಳಿವಳಿಕೆ ಇರಲಿಲ್ಲ.  ನನಗೆ ಆಗ ಇನ್ನೂ ಮದುವೆ ಆಗಿರಲಿಲ್ಲ. ಹೀಗಾಗಿ ಇವನು ಎಲ್ಲಿಗಾದರೂ ಹೋಗಲು ತಯಾರಾಗುತ್ತಾನೆ ಎಂದು ಅವರಿಗೆ ಅನ್ನಿಸಿರಬಹುದು! ನನಗೆ ಸಿಕ್ಕ ಎರಡು ಇಂಡಸ್ಟ್ರಿಗಳಲ್ಲಿ ಒಂದು ಉತ್ತರಪ್ರದೇಶದ ಗೊಂಡಾ ಎಂಬ ಕಡೆ ಇರುವ ಐಟಿಐ ಮತ್ತು ಇನ್ನೊಂದು ಅಲಾಹಾಬಾದಿನ ಹತ್ತಿರ ಇರುವ ನೈನಿ ಎಂಬಲ್ಲಿರುವ ಐಟಿಐ!  ಗೊಂಡಾ ಎಂಬ ಹೆಸರೇ ನಾನು ಕೇಳಿರಲಿಲ್ಲ. ಇದಾವುದೋ ಗೊಂಡಾರಣ್ಯದ ಅವಶೇಷವೇನೋ ಎಂದು ನನಗೆ ಅನ್ನಿಸಿತು. ನೈನಿ ಎಂಬ ಹೆಸರು ಕೇಳಿದ್ದು ಮಸುಕಾಗಿ ನೆನಪಿತ್ತು. ಆಗ ಇಂಟರ್ನೆಟ್ ಇರಲಿಲ್ಲ. ಅನಂತರ ನೈನಿ ಪ್ರಸಿದ್ಧವಾಗಿರುವುದು ಅಲ್ಲಿಯ ಜೈಲಿಗೆ ಎಂದು ತಿಳಿಯಿತು. ಅಲಾಹಾಬಾದಿನಲ್ಲಿ ಹುಟ್ಟಿದ ನೆಹರೂ ಮತ್ತು ಅವರ ಕುಟುಂಬದವರನ್ನು ಬ್ರಿಟಿಷರು ಬಂಧಿಸಿದಾಗ ಇಡುತ್ತಿದ್ದದ್ದು ನೈನಿ ಜೈಲಿನಲ್ಲಿ. 


ಈ ಗೊಂಡಾ ಮತ್ತು ನೈನಿಗೆ ಹೇಗೆ ಹೋಗಬೇಕು ಎಂಬುದೂ ನನಗೆ ಗೊತ್ತಿರಲಿಲ್ಲ. ಹೇಳುವವರೂ ಯಾರೂ ಇರಲಿಲ್ಲ. ಎಲ್ಲವನ್ನೂ ಇಂಟರ್ನೆಟ್ ಮೂಲಕ ತಿಳಿದುಕೊಳ್ಳುವ ಇಂದಿನ ದಿನಗಳಲ್ಲಿ ಇಂಥ ಪರಿಸ್ಥಿತಿ ನಿಮಗೆ ಊಹಿಸಲೂ ಸಾಧ್ಯವಿಲ್ಲ. ನಾನು ನನ್ನ ಲ್ಯಾಬ್ ಅಸಿಸ್ಟೆಂಟ್ ಆಗಿದ್ದ ಫತೇಹ್ ಸಿಂಗ್ ಅವರನ್ನು ಕೇಳಿದೆ. ಅವನು ವಿಚಾರಿಸಿ "ಗೊಂಡಾ ಇರುವುದು  ಉತ್ತರಪ್ರದೇಶದ ಅಯೋಧ್ಯಾ ಹತ್ತಿರ. ಅಲ್ಲಿಗೆ ಟ್ರೇನ್ ಹೋಗುತ್ತದೆ" ಎಂದು ತಿಳಿಸಿದ. ಅಲ್ಲಿಂದ ಅಲಾಹಾಬಾದಿಗೆ ಇನ್ನೊಂದು ಟ್ರೇನ್ ಹೋಗುತ್ತದೆ ಎಂದು ಗೊತ್ತಾಯಿತು.  ರಾತ್ರಿ ರೈಲು ಪ್ರಯಾಣದ ನಂತರ ಸ್ನಾನ ಇತ್ಯಾದಿಗೆ ಐಟಿಐ ಗೆಸ್ಟ್ ಹೌಸ್ ಸೌಕರ್ಯ ಕಲ್ಪಿಸುತ್ತದೆ ಎಂದು ತಿಳಿಯಿತು. ಆಗೆಲ್ಲಾ ರೈಲ್ವೆ ರಿಸರ್ವೇಶನ್  ಒಂದು ದೊಡ್ಡ ಯಜ್ಞದಂತೆ. ಪುಣ್ಯವಶಾತ್ ಒಬ್ಬ ಲ್ಯಾಬ್ ಅಸಿಸ್ಟೆಂಟ್ ನನ್ನ ಟಿಕೆಟ್ ರಿಸರ್ವ್ ಮಾಡಿಸಿಕೊಂಡು ಬಂದ. ನಾನು ಬರುವ ದಿನ ಯಾವುದು ಎಂದು ತಿಳಿಸಿ ಗೆಸ್ಟ್ ಹೌಸಿನಲ್ಲಿ ಕೋಣೆ ಬೇಕಾಗುತ್ತದೆ ಎಂದು ಐಟಿಐಗೆ  ಕಾಗದ ಬರೆದು ಕಳಿಸಿದ್ದಾಯಿತು.  


ಉತ್ತರಭಾರತದ ಕೆಟ್ಟ ಬೇಸಗೆ. ನಾನು ರಾತ್ರಿಯ ರೈಲಿನಲ್ಲಿ ಕಂಡರಿಯದ ಗೊಂಡಾಗೆ ಹೊರಟೆ.  ಈ ರೈಲುಗಳಲ್ಲಿ ಸಮಯದ ನಿಯಮಗಳು ಅಷ್ಟೇನೂ ಪಾಲಿಸುವುದಿಲ್ಲ. ತೂಕಡಿಸುತ್ತಾ ರೈಲು ಹೊರಟಿತು. ನನಗೆ ಅಸಿಸ್ಟೆಂಟ್  ಏಸಿ ದ್ವಿತೀಯ ಟಯರ್ ಸೀಟ್ ಕಾದಿರಿಸಿದ್ದ. ನನಗೆ ಮೇಲಿನ ಸೀಟ್ ಸಿಕ್ಕಿತು. ದಿಂಬು, ಚಾದರಗಳನ್ನು ಒಬ್ಬ ಕಾರ್ಮಿಕ ಕೊಟ್ಟು ಹೋದ. ಗೊಂಡಾ ಜಂಕ್ಷನ್ ಎಷ್ಟು ಹೊತ್ತಿಗೆ ತಲುಪುತ್ತದೆ ಎಂದು ನಾನು ಟಿಟಿಯನ್ನು ಕೇಳಿದೆ. ಬೆಳಗಿನ ಐದು ಎಂದೋ ಏನೋ ಹೇಳಿದ. ನನಗೆ ಈ ಸ್ಟೇಷನ್ ತಪ್ಪಿದರೇನು ಗತಿ ಎಂದು ನಿದ್ದೆಯೂ ಸರಿಯಾಗಿ ಬರಲಿಲ್ಲ. ಆಗ ಮೊಬೈಲ್ ಇರಲಿಲ್ಲ, ಫೋನಿನಲ್ಲಿ ಅಲಾರಂ ಹಾಕಿಕೊಂಡು ನಿದ್ರಿಸುವ ಸೌಕರ್ಯ ಇರಲಿಲ್ಲ. ರೈಲು ಅಲ್ಲಲ್ಲಿ ನಿಲ್ಲುತ್ತಿತ್ತು. ಜನ ಏರುವುದು, ಇಳಿಯುವುದು, ತಗ್ಗಿದ ದನಿಯಲ್ಳಿ ಮಾತಾಡುವುದು ಕೇಳುತ್ತಿತ್ತು.


ರೈಲು ಕೊನೆಗೂ ಗೊಂಡಾ ಜಂಕ್ಷನ್ ತಲುಪಿತು. ಬೆಳಗಿನ ಆರು ಗಂಟೆಯಾಗಿತ್ತೇನೋ. ಆಗಲೇ ಬೆಳಕಾಗಿತ್ತು. ನಾನು ಇಳಿದೆ. ಈಗ ಐಟಿಐಗೆ ಹೋಗುವುದು ಹೇಗೆ? ಆಗ ಓಲಾ, ಊಬರ್ ಇವೆಲ್ಲಾ ಯಾವುದೂ ಇರಲಿಲ್ಲ. ನಾನು ರೈಲ್ವೆ ಅಧಿಕಾರಿಯೊಬ್ಬರಿಗೆ ವಿಳಾಸ ತೋರಿಸಿದೆ. ಇಲ್ಲೇ ಬಸ್ ಸಿಕ್ಕುತ್ತದೆ ಎಂದರು. ಬಸ್ ನಿಲ್ದಾಣ ಅಲ್ಲೇ ಹತ್ತಿರದಲ್ಲಿತ್ತು. ನಾನು ಹೋದಾಗ ಒಂದು ಬಸ್ ನಿಂತಿತ್ತು.  ನಾನು ಓಡಿ ಹೋಗಿ ಇದು ಐಟಿಐಗೆ ಹೋಗುತ್ತದೆಯೇ ಎಂದು ಕೇಳಿದೆ. ಬೈಠೋ ಎಂದು ಕಂಡಕ್ಟರ್ ಹೇಳಿದಾಗ ನನ್ನ ಆನಂದಕ್ಕೆ ಪಾರವೇ ಇಲ್ಲ. ನಾನು ಕಿಟಕಿ ಬದಿಯ ಸೀಟ್ ಹುಡುಕಿ ಕುಳಿತೆ. ಜನ ಕಡಿಮೆ ಇದ್ದರು. ಕಂಡಕ್ಟರ್ ಟಿಕೆಟ್ ಎಂದು ಬಂದಾಗ ಇದು ಯಾವಾಗ ಹೊರಡುತ್ತೆ ಎಂದು ಕೇಳಿದೆ. ಇನ್ನೇನು ಹೊರಡುತ್ತೆ ಎಂದು ಮುಂದೆ ಹೋದ.


ಅಭೀ ಅಂದರೆ ಅಭೀ ಅಲ್ಲ, ಸ್ವಲ್ಪ ಹೊತ್ತಿನಲ್ಲಿ ಎಂದು ನನಗೆ ನಂತರ ತಿಳಿಯಿತು. ಅನಂತರ ಈ ಸ್ವಲ್ಪ ಹೊತ್ತೆಂದರೆ ಅಷ್ಟೇನೂ ಸ್ವಲ್ಪವಲ್ಲ ಎಂದೂ ತಿಳಿಯಿತು. ಬಸ್ ತುಂಬುವವರೆಗೂ ಅದು ಕದಲುವುದಿಲ್ಲ ಎಂದು ಗೊತ್ತಾಯಿತು. ತುಂಬುವುದು ಎಂದರೆ ಉಸಿರಾಡಲು ಕೂಡಾ ಸಾಧ್ಯವಾದಷ್ಟು ಎಂದೂ ತಿಳಿಯಿತು. ಒಂದು ಬಸ್ಸಿನಲ್ಲಿ ಇಷ್ಟೊಂದು ಜನರನ್ನು ತುರುಕಬಹುದು ಎಂದು ನನಗೆ ಕಲ್ಪನೆಯೇ ಇರಲಿಲ್ಲ. 


ಕೊನೆಗೂ ಬಸ್ ಕದಲಿತು. ಸದ್ಯ ನನಗೆ ಕಿಟಕಿ ಸೀಟ್ ಸಿಕ್ಕಿದ್ದರಿಂದ ಒಂದಿಷ್ಟು ಗಾಳಿಯಾಡಿ ನನಗೆ ಜೀವ ಬಂದಹಾಗಾಯಿತು. ಬಸ್ಸು ಎಲ್ಲ ಕಡೆಗೂ ನಿಂತು ನಿಂತು ಸಾಗಿತು. ಕಂಡಕ್ಟರ್ ಇನ್ನೂ ಜನರನ್ನು ಹತ್ತಿಸಿಕೊಳ್ಳುತ್ತಲೇ ಇದ್ದ!  ನನ್ನ ಸ್ಟಾಪ್ ಯಾವಾಗ ಬರುತ್ತೆ ಎಂದು ನಾನು ಅಕ್ಕಪಕ್ಕರವರನ್ನು ಕೇಳುತ್ತಲೇ ಇದ್ದೆ. ಕೊನೆಗೂ ಬಸ್ಸಿನಲ್ಲಿ ಇಕ್ಕಟ್ಟು ಕಡಿಮೆಯಾಗತೊಡಗಿತು. ನನ್ನ ಸ್ಟಾಪ್ ಕೂಡಾ ಬಂತು. ನಾನು ಇಳಿದಾಗ ಆಗಲೇ ಸೂರ್ಯ ಮೇಲೇರಿದ್ದ. ಒಂಬತ್ತು ಗಂಟೆಯಾಗಿತ್ತೇನೋ! ಮೈಯೆಲ್ಲಾ ಬೆವರು. ನಾನು ಗೆಸ್ಟ್ ಹೌಸ್ ಹುಡುಕಿಕೊಂಡು ಹೊರಟೆ.


(ಮುಂದುವರೆಸುತ್ತೇನೆ.)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)