ಆದದ್ದಾಯಿತು, ಮರೆತು ನಡೆ ಮುಂದೆ!


ಆದದ್ದಾಯಿತು, ಮರೆತು ನಡೆ ಮುಂದೆ! 


ಜೀವನದಲ್ಲೊಂದಿದ್ದಿತು ತಾರೆ 

ಸುರಿಸುತ್ತಿದ್ದಿತು ಚೆಲುವಿನ ಧಾರೆ 

ಅಸ್ತಂಗತವಾಯಿತೆ? ಹೋದರೆ ಹೋಯ್ತು,

ಬಡವಾಯಿತೆ  ಅಂಬರದ ಕಲಾಪತ್ತು? 

ಎಷ್ಟು ಉರುಳುವುವೋ ಮಣಿ-ತಾರೆ! 

ಜಗಮಗಿಸುವುದಾದರೂ ಜರಿಸೀರೆ

ಮರಳಿ ಸಿಗುವುದೇ ಕೆಳಗುರುಳಿದ ತಾರೆ?

ಅದಕಳುವುದೇ ಅಂಬರ ಎಂದಾರೆ?

ಆದದ್ದಾಯಿತು, ಮರೆತು ನಡೆ ಮುಂದೆ!


ಜೀವನದಲ್ಲಿತ್ತೊಂದು ಸುಕುಮಾರ ಕುಸುಮ 

ಸಮರ್ಪಿಸಿಕೊಂಡೆಯಲ್ಲ ಅದಕ್ಕೆ ಹೃದಯ 

ಒಣಗಿ ಹೋಯಿತು ಆ ಹೂವು ಒಂದು ದಿನ 

ಅದರಿಂದ ಬರಿದಾಯಿತೇ ಹೇಳು, ಮಧುವನ?

 ಒಣಗುತ್ತವೆ ನಿತ್ಯವೂ ಮಧುವನದಲ್ಲಿ 

ಅದೆಷ್ಟು ಹೂವು, ಅದೆಷ್ಟು  ಬಳ್ಳಿ?

ಒಣಗಿ ಉರುಳಿದ ಹೂವು  ಅರಳುವುದೇ ಮರಳಿ?

ಮಿಡಿವುದೇ ವನವು ಒಂದಾದರೂ ಕಂಬನಿ?

ಆದದ್ದಾಯಿತು, ಮರೆತು  ನಡೆ ಮುಂದೆ!


ಜೀವನದಲ್ಲಿತ್ತೊಂದು  ಮಧು ಹೀರುವ ಬಟ್ಟಲು 

ಸುತ್ತುತ್ತಿತ್ತು ನಿನ್ನ ಬದುಕು ಅದರ ಸುತ್ತಲೂ  

ಒಂದು ದಿನ ಕೆಳಗೆ ಬಿದ್ದು ಚೂರಾಯಿತು 

ಚೂರಾಗಲೇ ಬೇಕಲ್ಲ ಯಾವುದೇ ಗಾಜು?

ಮದಿರಾಲಯದ ಅಂಗಳದಲ್ಲಿ ನಿತ್ಯವೂ ಹೀಗೆ 

ಅಲ್ಲಾಡಿ ಕೆಳಬಿದ್ದು ಮುರಿಯುವ  ಮಧುಪಾತ್ರೆ

ಮಣ್ಣಾಗಿ ಹೋಗುವುವು ಮಣ್ಣಲ್ಲಿ ಬೆರೆತು 

ಶೋಕಿಸದು ಮದಿರಾಲಯವು ಒಂದಿನಿತೂ

ಆದದ್ದಾಯಿತು, ಮರೆತು  ನಡೆ ಮುಂದೆ!


ಮೃದುವಾದ ಮಣ್ಣಿಂದ ಮಾಡಿರುವ  ಮಡಕೆ

ಒಡೆಯುವುದು ಒಂದು ದಿನ  ಬಂದಾಗ ಘಳಿಗೆ 

ಮಣ್ಣಿನ ಕುಡಿಕೆಯದು ಕೂಡಾ ಅಲ್ಪಾಯುಷ್ಯ  

ಬಿದ್ದು ಚೂರಾಗುವುದೆಂದು ಬರೆದಿಹುದು ಭಾಷ್ಯ 

ಆದರೂ ಬರಿದಾಗಿಲ್ಲ ನೋಡು ಮದಿರಾಲಯ 

ಗಡಿಗೆ ಇದೆ, ಬಟ್ಟಲಿವೆ, ಅವಿಚಲಿತ ಅದರ ಲಯ!

ಮಧು ಸವಿಯುತ್ತವೆ ಈ ಗಡಿಗೆಗಳು ಬಟ್ಟಲು 

ಹತ್ತುತ್ತವೆ ಮಾದಕತೆಯ ಒಂದೊಂದೇ ಮೆಟ್ಟಿಲು!

ಬಟ್ಟಲಿಗೆ ಅಳುವ ಮಧುಕರನು ಹಸಿಮಡಕೆ 

ಚೀರಾಟವಿಲ್ಲ ಮಧುವಿನಿಂದ ಸುಟ್ಟವನಿಗೆ!

ಆದದ್ದಾಯಿತು, ಮರೆತು  ನಡೆ ಮುಂದೆ!



ಮೂಲ ಹಿಂದಿ -ಕವಿತೆ  ಹರಿವಂಶರಾಯ್ ಬಚ್ಚನ್ 

ಕನ್ನಡ ಅನುವಾದ - ಸಿ. ಪಿ. ರವಿಕುಮಾರ್  (c) 2022

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)