ವಿಜ್ಞಾನ ಲಿಮರಿಕ್

 (1)

ಹೆಚ್ಚು ಮರ ಸಿಕ್ಕಷ್ಟೂ ಹೆಚ್ಚು ಸಿಕ್ಕುವುದು O2

ಚುನಾವಣೆಗೆ ನಿಂತವರಿಗೆ ಹೇಳಿ ಈ  ಗುಟ್ಟು!

ನೆಡಿಸಿ ಮರಗಳ ಸಾಲು

ಕಡುಬೇಸಗೆಯಲ್ಲೂ ನೆಳಲು

ಕೊಟ್ಟವರನ್ನು ಆರಿಸೋಣ ನಮ್ಮ ಮತ ಕೊಟ್ಟು


(2)

ಸಾಗರದ ಮೇಲೆ ಬಂದಾಗ ಸೂರ್ಯ

ಪ್ರಾರಂಭ ಫೋಟೋಸಿಂಥೆಸಿಸ್ ಕಾರ್ಯ

ಸಮುದ್ರದಲ್ಲಿರುವ ಅಸಂಖ್ಯ ಫೋಟೋಪ್ಲಾಂಕ್ಟನ್

ನೀಡುತ್ತವಲ್ಲ ಉಪಉತ್ಪನ್ನವಾಗಿ ಆಕ್ಸಿಜನ್!

ಅರವತ್ತು ಪರ್ಸೆಂಟ್ O2 ಹಾಕಿದ್ದು ಇವರೇ, ಮರೆತೀಯ!!

(3)

ನೀನು ಮಾಡಿದ ದೋಸೆಯ ಘಮ ತೇಲಿ ಬಂದಾಗ, ಪ್ರಿಯೇ

ಜೊಲ್ಲು ಸುರಿಯುವುದು ಒಂದು ಸಾಮಾನ್ಯ ಪ್ರತಿಕ್ರಿಯೆ!

ಜೊಲ್ಲು ಇಲ್ಲದೆ ದೋಸೆಯ ರುಚಿ ಏನೇನೂ

ತಿಳಿಯಲಾರದು ಪ್ರಿಯೇ ಮಾನವನ ಬ್ರೇನು

ಆಹಾರ ಕರಗಿದಾಗ ಜೊಲ್ಲಿನಲ್ಲಿ ಪ್ರಾರಂಭ  ನಾಲಗೆಯ ಆಸ್ವಾದ ಪ್ರಕ್ರಿಯೆ!

(4)

ಹೀಲಿಯಮ್ಮನ್ನು ಮೈನಸ್ ೨೬೯ ಡಿಗ್ರಿ

ಸೆಲ್ಸಿಯಸ್ ತಾಪಮಾನದಲ್ಲಿ ಇಡಿರಿ

ಬೀಕರಿನ ಗೋಡೆ ಹತ್ತಿ ಉಪದ್ರವ

ಮಾಡಿ ಗುರುತ್ವವಿಲ್ಲದ ಸೂಪರ್ ದ್ರವ

ಗಾಜಿನಣುಗಳ ಮೂಲಕವೂ ಸೋರುವುದು ಕಣ್ರೀ!


(5)

ಸಾಗರದ ಮೇಲೆ ನಗುವ ಅಸಂಖ್ಯ ನಕ್ಷತ್ರ

ನೋಡುತ್ತಿವೆ ಪಯೋನಿಧಿ ಎಂಬ ಪುಣ್ಯಕ್ಷೇತ್ರ:

ಅಲ್ಲಿ ಫೈಟೋಪ್ಲಾಂಕ್ಟನ್ ಎಂಬ ಅಸಂಖ್ಯ ಸೂಕ್ಷ್ಮಾಣು

ದಿನವಿಡೀ ಮೌನವಾಗಿ ಮಾಡುತ್ತಿರುವ ತಪವೇನು?

ಕಾರ್ಬನ್ ಡೈಯಾಕ್ಸೈಡ್ ಶೇಖರಿಸಿಟ್ಟು ನೀಡುತ್ತಿವೆ ಆಕ್ಸಿಜನ್ ಮಾತ್ರ!


(6)

ಚಂದ್ರ ಭೂಮಿಯ ಭಾಗವೇ ಆಗಿದ್ದನಂತೆ 

ದುರ್ಘಟನೆಯೊಂದು ಪ್ರತ್ಯೇಕತೆ ತಂತಂತೆ 

ಎಲ್ಲಿಂದಲೋ ಬಂದ ಮಹಾಶಿಲೆಯೊಂದು

ಅಂತಿಂಥದದಲ್ಲ ಮಂಗಳಗ್ರಹದಷ್ಟೆ ಹಿರಿದು

ಬಡಿದು ಭೂಮಿಯ ಹಣೆಗೆ ಬೇರಾದದ್ದು ಚಂದ್ರನ ಜಾತಕ(ತೆ)


ಅಂದಿನಿಂದಲೂ ಭೂಮಿಯ ಕಡೆ ನೋಡುತ್ತಾ

ತಿರುಗುತ್ತಲೇ ಇದ್ದಾನೆ ತನ್ನ ತಾಯಿಯ ಸುತ್ತ

ತನ್ನ ಅಕ್ಷದ ಮೇಲೆ ಚಂದ್ರ ಸುತ್ತುವ ವೇಗ

ಭೂಮಿ ಸುತ್ತುವ ವೇಗವೇ ಆಗಿರುವಾಗ

ನಮಗೆ ಕಾಣುವುದು ಚಂದ್ರನ ಒಂದು ಮುಖ ಮಾತ್ರ!

(7)

ಗುರು ಗ್ರಹದ ಮೇಲೆ ನಿಂತು ನೋಡಿದರೆ ಏನು ಗಮ್ಮತ್ತು

ಒಂದಲ್ಲ ಎರಡಲ್ಲ ಗುರುವಿಗೆ ಚಂದ್ರರು ಪೂರಾ ಎಂಬತ್ತು

ಯಾವ ಚಂದ್ರನಿಗೆ ಹೋಲಿಸುವರೋ ಕವಿಗಳು ಅಲ್ಲಿ

ಚಂದ್ರಮುಖಿ ಎಂದು ಸುಂದರಿಯನ್ನು ಕವಿತೆಗಳಲ್ಲಿ!

ಕವಿಗಳಿದ್ದರೆ ತಾನೇ ಗುರುವಿನ ನೆಲದಲ್ಲಿ! ಒಂಟಿ ಪ್ಲಾನೆಟ್ಟು.

(8)

ಬಲ್ಲಿರಿ ನೀವು ಭೋಜ್ಯ, ವ್ಯಾಜ್ಯ, ತ್ಯಾಜ್ಯ

ಬಲ್ಲಿರಾ ಜ್ಯಾ, ಕೋಟಿಜ್ಯಾ, ಉತ್ಕ್ರಮಜ್ಯಾ!

ಸೊನ್ನೆ ಕೋನದಿಂದ ಹೊರಟ OA ಎಂಬ ಬಾಣ 

ತಿರುಗಿ ಅಪಪ್ರದಕ್ಷಿಣ OB ಆಗಿ ತೀಟಾ ಆದಾಗ  ಕೋನ

ಬಿ ಎಷ್ಟು ದೂರ x ಅಕ್ಷದಿಂದ, ಅದೇ ಜ್ಯಾ ಎಂದನೊಬ್ಬ ನಮ್ಮ ಪೂರ್ವಜ್ಜ್ಯಾ!

( 9)

ಮಖಿ 


ಒಂದು ವೃತ್ತ ಸುತ್ತಿ ಬಂದರೆ ಪ್ರದಕ್ಷಿಣೆ ಎರಡು pie ತಿಂದ ಮೇಲೆ, ರೀ,

ನೀವು ಸುತ್ತಿದ್ದು ಮುನ್ನೂರ ಅರವತ್ತು ಡಿಗ್ರಿ, ಸುಟ್ಟಿದ್ದು ನಗಣ್ಯ ಕ್ಯಾಲರಿ!

ಎರಡು ಪೈ ರೇಡಿಯನ್ಸ್ ಮುನ್ನೂರಾ ಅರವತ್ತು ಡಿಗ್ರಿಗೆ ಸಮ ಉಂಟು

ಹೀಗಾಗಿ ಒಂದು ರೇಡಿಯನ್ನಿಗೆ ಸಮ ೩ ಡಿಗ್ರಿ ಹದಿನೈದು ಮಿನಿಟು 

ಈ ಮೊತ್ತಕ್ಕೆ ಹೆಸರೂ ಇತ್ತು ಮಖಿ ಎಂದು, ಅದು ಆರ್ಯಭಟನ ಕಾಲ ರೀ!


(10)


ಅವನು ಹುಟ್ಟಿದ ತಾರೀಕು ಮಾರ್ಚ್ ಏಳು.

ಅವನ ಹೆಂಡತಿಯ ಜನ್ಮದಿನ ಜುಲೈ ಐದು.

ಮಗ ಹುಟ್ಟಿದ್ದು ಫೆಬ್ರುವರಿ ಹದಿಮೂರು 

ಎಲ್ಲ ಸಂಖ್ಯೆಗಳೂ ಅವಿಭಾಜ್ಯ ಎಂದವನ ದೂರು!

ಹೀಗಿರಲು ಅವನಿಗೆ ಹುಟ್ಟಿದಳು ಮಗಳು 

ಎಂಟನೇ ತಾರೀಕು ಏಪ್ರಿಲ್ ತಿಂಗಳು.

ಆನಂದಕ್ಕೆ ಪಾರವಿಲ್ಲವಾಗಿ ಆ ಸಂಖ್ಯಾಪ್ರೇಮಿ

ಮಗಳಿಗೆ  ಇಟ್ಟಿರುವ ಹೆಸರು ಭಾಜ್ಯಲಕ್ಷ್ಮಿ

(೧೧)

A+ B =C ಎಂಬ ಸರಳ ಸಮೀಕರಣದಲ್ಲಿ

A, B,C ಧನಪೂರ್ಣಾಂಕಗಳ ಇಷ್ಟ ಬಂದಂತೆ ತುಂಬಿಕೊಳ್ಳಿ

ಬರೆಯಿರಿ ಕೈ ಸೋಲುವವರೆಗೆ

ಹೊಸ ಸಮೀಕರಣ ಬಗೆಬಗೆ

A^ 2+B^2=C^2 ಎಂದು ಬದಲಿಸಿದಾಗ ಸಮೀಕರಣ

ಧನಪೂರ್ಣಾಂಕ A, B,C  ಹುಡುಕಲು ಆಗಿರಬೇಕು ಜಾಣ

ಮೂರು, ನಾಲ್ಕು, ಐದು! ಆರು ಎಂಟು, ಹತ್ತು!

ಒಂಬತ್ತು, ಹನ್ನೆರಡು, ಹದಿನೈದು! ಇತ್ಯಾದಿ ಬರೆದು ಕೈ ಸುಸ್ತು

ಬರೆಯುವ ಹಠ ತೊಡುವ ಮುನ್ನ, ತಾಳಿ!

ಅಸಂಖ್ಯ ಇಂಥ ಪೈಥಾಗೊರಸ್ ತ್ರಿವಳಿ!

A^3+B^3=C^3 ಎಂಬ ಧನಪೂರ್ಣಾಂಕಗಳ ಸಮೀಕರಣ

ಎಷ್ಟಿವೆ ಎಂದು ಕೇಳಿದನು ಗಣಿತಜ್ಞ ಫರ್ಮಾ

ದುರದೃಷ್ಟವಶಾತ್ ಈ ಸಂಖ್ಯೆ ಸೊನ್ನೆ

ಪ್ರಯತ್ನಿಸಿ ಬೇಕಾದರೆ, ಬರೆಯಿರಿ ಪ್ರೋಗ್ರಾಮನ್ನೇ!

n ಎಂಬುದು ಎರಡಕ್ಕಿಂತ ಹೆಚ್ಚಾದಾಗ (ಮೇಲೆ ಹೇಳಿದ್ದರ ಸಾರ)

A^n+B^n=C^n  ಎಂಬುದಕ್ಕಿಲ್ಲ ಯಾವ  ಧನಪೂರ್ಣಾಂಕ ಪರಿಹಾರ

ಇದನ್ನೇ ಕರೆಯುವರು ಫರ್ಮಾನ ಕೊನೆಯ ಪ್ರಮೇಯ ಅಂತ

ಬೇಕಾದರೆ ಹೊಸ ಹೆಸರು ಕೊಡಬಹುದು:  "ಫರ್ಮಸಿದ್ಧಾಂತ"

(೧೨)

ವಾರದಲ್ಲಿ  ಏಳು, ತಿಂಗಳಿಗೆ ಮೂವತ್ತು ದಿವಸ

ವರ್ಷ ಒಂದಕ್ಕೆ ಹನ್ನೆರಡು ಮಾಸ

ಗುಣಿಸಿದರೆ ಏಳು, ಮೂವತ್ತು, ಹನ್ನೆರಡನ್ನು ಪರಸ್ಪರ

ಸಿಕ್ಕುವ ೨೫೨೦ ಪಡೆದಿದೆ ಒಂದು ವಿಶಿಷ್ಟ ವರ!

ಒಂದರಿಂದ ಹತ್ತರವರೆಗೆ ಎಲ್ಲಾ ಸಂಖ್ಯೆ

ಭಾಗಿಸುತ್ತವೆ ನಿಶ್ಷೇಷ, ಪ್ರಯತ್ನಿಸಿ ನಿಶ್ಶಂಕೆ!

ಇಂಥ ಸಂಖ್ಯೆಗಳಲ್ಲಿ ೨೫೨೦ ಕನಿಷ್ಠ ಎಂಬುದೇ ನೋಡಿ ಅದರ ವಿಶೇಷ!


(೧೩)

ಒಬ್ಬನಾರೋ ಕಿಡಿಗೇಡಿ ಬಂದು ಕೇಳಿದ : "ರಸೆಲ್ ಮಹಾಶಯ!

೨ + ೨ = ೫ ಎಂದಾದರೆ ನೀನು ಪೋಪ್ ಎಂದು ಸಾಧಿಸಬಲ್ಲೆಯಾ?"

"ಆಗಲಿ" ಎಂದು ರಸೆಲ್ ಹೀಗೆ ಮುಂದುವರೆಸಿದ ವಾದವನ್ನು-

"ಸಮೀಕರಣದ ಎರಡೂ ಕಡೆ ೨ ಕಳೆದಾಗ ಬರುವುದೇನು?"

"೨=೩" ಎಂದು ಉತ್ತರಿಸಿದಾಗ ಶಿಷ್ಯ, ರಸೆಲ್ ಮುಖದಲ್ಲಿ ನಗೆಮುಗುಳು:

 "ಈಗ ಎರಡೂ ಕಡೆಯಿಂದ ಕಳೆದರೆ ಒಂದನ್ನು, ಏನಾಯಿತು ಹೇಳು?"

"೧=೨" ಎಂದನು ಶಿಷ್ಯ ಜಾಗರೂಕತೆಯಿಂದ

"ಹೌದು! ಅದನ್ನು ೨=೧ ಎಂದೂ ಬರೆಯಬಹುದಾ?"

"ಬರೆಯಬಹುದು" ಎಂದು ಉತ್ತರಿಸಿದ ಶಿಷ್ಯ. "ಏನು ಸಾಧಿಸಿತು ಅದರಿಂದ?"

"ನೋಡು ನಾನು ಮತ್ತು ಪೋಪ್ ಇಬ್ಬರು, ಆದರೆ ೨=೧ ಆದ್ದರಿಂದ

ನಾನು ಮತ್ತು ಪೋಪ್ ಒಬ್ಬರೇ ಅಲ್ಲವೇ?" ಎಂದ ರಸೆಲ್ ನಕ್ಕು

ಶಿಷ್ಯನು ಬಿದ್ದಿದ್ದ ತನ್ನ ಬಲೆಯಲ್ಲಿ ತಾನೇ ಸಿಕ್ಕು.

(೧೪)

ವಜ್ರಗಳು ಫ್ರೀ!  ವಜ್ರಗಳು ಫ್ರೀ? ಹೇಳಲೇ ಎಲ್ಲೆಂಬ ಗುಟ್ಟು?

ನೀವು ತಂದದ್ದರಲ್ಲಿ ಅರ್ಧ ನನಗೆಂಬುದಷ್ಟೇ ಷರತ್ತು

ನೆಪ್ಚೂನಿನ ಮೇಲೆ ಒತ್ತಡ ಅಬ್ಬಾ ಭೂಮಿಗಿಂತ ಸಹಸ್ರ!

ಕಾರ್ಬನ್ ವಜ್ರವಾಗಿ ಸುರಿಯುವುದು ವಜ್ರಗಳ ವರ್ಷ!

ಹೋಗಿ ಎಷ್ಟು ಬೇಕೋ ತನ್ನಿ ಸಿಕ್ಕಾಗ ಪುರುಸೊತ್ತು


(೧೫)

ಶೀರ್ಷಾಸನ ಮಾಡುತ್ತಾ ಹಠಯೋಗಿಗಳ ಹಾಗೆ 

ತೂಗುತ್ತವಲ್ಲ ಮರಗಳಲ್ಲಿ, ಕಾಲು ಮೇಲೆ ತಲೆ ಕೆಳಗೆ

ಎಷ್ಟು ಪ್ರಭಾವಿ ಗೊತ್ತೇ ಬಾವಲಿಗಳ ತಪೋಸಿದ್ಧಭಾಗ್ಯ

ಯಾವ ವೈರಸ್ ಬಾಧಿಸದು, ಅಂತಹ ಪರಿಪೂರ್ಣ ಆರೋಗ್ಯ!

ಶೀರ್ಷಾಸನ ಮಾಡಲು ನಿಮಗೆ  ಬೇರೆ ಪ್ರೇರಣೆ ಬೇಕೆ!

(೧೬)

ತೂಕ ಇಳಿಸಿ ಎಂದು ಹೇಳಿದಾಗ ವೈದ್ಯ

ಡಾಕ್ಟ್ರೇ ತಾಳಿ ಅದು ಹೇಗೆ ಸಾಧ್ಯ

ಮಾನವ ದೇಹದಲ್ಲಿ ಅರ್ಧದಷ್ಟು ಕೋಶ

ಬ್ಯಾಕ್ಟೀರಿಯಾಗಳೇ ಇರುವುದು ನನ್ನದೇ ದೋಷ?!

ನನ್ನ ತೂಕ ನಲವತ್ತು ಕೇಜಿ ಉಳಿದದ್ದು ಬ್ಯಾಕ್ಟೀರಿಯಾ ಎಂದರು ಮಿಸ್ ಆದ್ಯ


(೧೮)

ತೇಗುವ ಅಭ್ಯಾಸ ಇದ್ದರೆ ನಿಮಗೆ, ಸಾರಿ
ನಿಮಗೆ ಅಂತರಿಕ್ಷ ಯಾನ ಸರಿ ಹೋಗಲ್ಲಾರಿ
ತಡೆಯುತ್ತದೆ ಭೂಮಿಯ ಗುರುತ್ವ ಬಲ 
ಮೇಲೇರದಂತೆ ತಿಂದ ಆಹಾರ ಕುಡಿದ ಜಲ
ಬಾಹ್ಯಾಕಾಶದಲ್ಲಿ ತೇಗಿದರೆ ಫಜೀತಿಗೆ ದಾರಿ

(೧೯)
ಇಂಗ್ಲೆಂಡಿನ ಬ್ರಾಡ್ಫರ್ಡ್ ಎಂಬಲ್ಲಿ ನಡೆಯಿತು ಈ ಕಥೆ
ವರ್ಷ ೧೮೫೮, ದಿವಸ ಅಕ್ಟೋಬರ್ ಮೂವತ್ತು 
ಪೆಪ್ಪರ್ ಮಿಂಟ್ ಮಾರುವ ಬಿಲ್ಲಿ ಅಂದೂ ಎಂದಿನಂತೆ
ಕೊಂಡು ತಂದಿದ್ದ ಜೋಸೆಫ್ ನೀಲ್ ಬೇಕರಿಯಿಂದ ಕೈಚೀಲ ಹೊತ್ತು
ಹನ್ನೆರಡು ಪೌಂಡ್ "ಹಂಬಗ್" ಪೆಪ್ಪರ್ಮಿಂಟ್ ಸೀ,
ಗಿರಾಕಿಗಳ ಸಮೂಹ ಕೊಳ್ಳಲು ಕಾದಿತ್ತು
ತಿಂದವರ ಆರೋಗ್ಯ ಹಠಾತ್ ಬಿಗಡಾಯಿಸಿ
ಇಪ್ಪತ್ತೊಂದು ಜನರಿಗೆ ಕಾದಿತ್ತು ಮೃತ್ಯು.
ಸಕ್ಕರೆಗಿಂತ ಬೆಲೆ ಕಡಿಮೆ ಎಂದು ಜಿಪ್ಸಮ್ ಪುಡಿ
ಕಲಬೆರಕೆ ಮಾಡುತ್ತಿದ್ದ ನೀಲ್, ಆವೊತ್ತೂ
ಕರೆದು ಸಹಾಯಕನನ್ನು, "ಆರ್ಚರ್, ನಡಿ,
ಹಾಜ್ಸನ್ ಫಾರ್ಮಸಿಯಿಂದ ತಾ ಜಿಪ್ಸಮ್ ಹಿಟ್ಟು"
ಎಂದು ಕಳಿಸಿ ತಾನು ಪ್ರಾರಂಭಿಸಿದ ಉಳಿದ ತಯಾರಿ.
ಹಾಜ್ಸನ್ನನಿಗೆ ಅಂದು ಅನಾರೋಗ್ಯ ಕಾಡುತ್ತಿತ್ತು,
ಸಹಾಯಕ ಗೊಡಾರ್ಡ್ ಮೇಲಿತ್ತು ಅಂಗಡಿಯ ಜವಾಬ್ದಾರಿ,
ತಿಳಿಯದೇ ಅಳೆದುಕೊಟ್ಟ ಆರ್ಸೆನಿಕ್ ಆಕ್ಸೈಡ್ ಕೂಡಾ ಬೆಳ್ಳಗಿತ್ತು.
ಒಂದೊಂದು ಸಿಹಿಯಲ್ಲೂ ಇತ್ತು ೫೮೦ ಮಿಲಿಗ್ರಾಂ ವಿಷ
ಇಬ್ಬರನ್ನು ಸಾಯಿಸಲು ಸಾಕಷ್ಟು.
ಬಲಿ ತೆಗೆದುಕೊಂಡಿತು ಜೀವಗಳನ್ನು ಹಣದ ಆಮಿಷ
ಕಲಬೆರಕೆ ತರುವುದು ಮಹಾವಿಪತ್ತು.

(೨೦)
ತಂಗ ವೇಲ್  ಹೆಂಡತಿ ನೀಲ ವೇಲ್
ಕೋಪ ಮಾಡಿಕೊಂಡರು ಗಂಡನ ಮೇಲ್
ಏಕೆಂದರೆ ನಗುತ್ತಿದ್ದರು ತಂಗವೇಲ್ 
ಓದುತ್ತಾ ಯಾರೋ ಕಳಿಸಿದ ಇಮೇಲ್
ಸುಮಾರು ಇನ್ನೂರು ಟನ್ ಭಾರ ಇರುವುದು ನೀಲ ವ್ಹೇಲ್

(೨೧)
ನಿಮಿಷಕ್ಕೆ ಇಪ್ಪತ್ತು ಸಲ 
ಮುಚ್ಚಿ ತೆರೆಯುವ ಕಣ್ ರೆಪ್ಪೆ
ಕಂಪ್ಯೂಟರ್ ಬಳಸುವಾಗ 
ಏಳು ಸಲ ಮಾತ್ರ ಮಿಟುಕುವುದಂತೆ
ಅನಿಮೇಶನ್ ಕಾರ್ಟೂನ್ ನೋಡುತ್ತಾ
ಅನಿಮೇಶನಯನರಾದರೆ ಮಕ್ಕಳು ಅದು ಅವರ ತಪ್ಪೇ!

(೨೨)
ಗಣಿತದ ಮೇಷ್ಟ್ರು ಮತ್ತೊಂದು ಸೊನ್ನೆ ಸುತ್ತಿದರು.
ಪ್ರಮೇಯದ ಪ್ರೂಫ್ ತಪ್ಪೆಂದು ಅವರ ದೂರು
"ಸರ್ ನಮ್ಮ ತಂದೆಯ ಪ್ರೆಸ್ಸಿನಲ್ಲೊಂದು ಖಾಲಿ ಇದೆ ಕೆಲಸ!
ನಿಮಗೆ ಬಲು ಸುಲಭ!  ಮೇಲಾದಾಯ, ನಿರಾಯಾಸ!
ಪ್ರೂಫ್ ರೀಡಿಂಗ್ ಕೆಲಸ, ಆಸಕ್ತಿ ಇದೆಯಾ, ತಿಳಿಸಿರಿ ಜರೂರು!"

(೨೩)

ಶಾರ್ಕ್ ಮೀನಿನ ಹಲ್ಲು ಎಷ್ಟು ಗಟ್ಟಿ ಗೊತ್ತೇ
ಎಷ್ಟಪ್ಪ ಎಂದರೆ ಮನುಷ್ಯನ ಹಲ್ಲಷ್ಟೆ!
ಕಳೆದು ಕೊಳ್ಳದು ಏಕೆ ಹಲ್ಲು ಹಾಗಾದರೆ ಶಾರ್ಕ್ ಮೀನು
ಏಕೆಂದರೆ ಉಪ್ಪು ಕಡಲು ಆಲ್ಕಲೈನು!
ಆಸಿಡ್ ಇದ್ದರೆ ತಾನೇ ಹಲ್ಲು ಶಿಥಿಲವಾಗತ್ತೆ!

(೨೪)
ಶನಿಗ್ರಹವು ತೊಟ್ಟಿರುವ ಉಂಗುರಗಳ ನೋಡಿ
ಚಿನ್ನದ್ದೋ ಬೆಳ್ಳಿಯದೋ ಕೇಳಬೇಡಿ
ವ್ಯೋಮದಿಂದ ಬಿದ್ದ ತಾರಾಂಶ, ಧೂಮಕೇತುಗಳ ಅವಶೇಷ
ಹಾಗೂ ಲಕ್ಷಾಂತರ ಐಸ್ ಗಡ್ಡೆಗಳು ತೊಟ್ಟು ಧೂಳಿನ ವೇಷ
ತೇಲುತ್ತಿವೆ ಶನಿಯ ಗುರುತ್ವಕ್ಕೆ ಚೂರು ಚೂರಾಗಿ!

(೨೫)
ಗುರುವಿನ ಒಂದು ಚಂದ್ರನ ಹೆಸರು ಯುರೋಪಾ
ಅಲ್ಲೇನಿದೆ ಎಂಬ ಕುತೂಹಲ ನಾಸಾಗೆ ಯಾಕೋಪಾ
ಇದೆಯಂತೆ ಎವರೆಸ್ಟ್ ಗಿರಿಗಿಂತ ಇಪ್ಪತ್ತು ಪಟ್ಟು
ದೊಡ್ಡ ಉಪ್ಪುನೀರಿನ ಬುಗ್ಗೆ ಇದೆ ಎಂಬ ಗುಟ್ಟು
ನಿಮಗೆ ಹೇಳಿರುವೆ ನೀವೂ ನಮ್ಮವರಲ್ಲವೇ ಪಾಪ!

(೨೬)
ಒನ್ ಬೈ ಟೂ ಪ್ಲಸ್ ಒನ್ ಬೈ ತ್ರೀ
ಎಷ್ಟೆಂದು ಕೇಳಿದರು ಮೇಷ್ಟ್ರು ದತ್ತಾತ್ರಿ
ಕೊನೆ ಬೆಂಚಿನಲ್ಲಿ ತೂಕಡಿಸುತ್ತಿದ್ದ ಮುತ್ತು
ಟೂ ಪ್ಲಸ್ ಫೈವ್ ಎಂದು ಉದುರಿಸಿದ ಮುತ್ತು
ಮೇಷ್ಟ್ರು ತಲೆ ಮೇಲೆ ಕೈಹೊತ್ತು 
ನಡಿ ಬೆಂಚ್ ಮೇಲೆ ಹತ್ತು
ಎಂದಾಗ "ಇಲ್ಲ ಸಾರ್, ಬೆಂಚ್ ಮೇಲೆ ಆರೇ 
ಹುಡುಗರು ಕೂತಿದ್ದಾರೆ ನೋಡಿ ಬೇಕಾದರೆ"
ಎಂದು ಮೇಷ್ಟ್ರಿಗೆ ಕಾಟ ಕೊಟ್ಟ ಇನ್ನಷ್ಟು.

ಕೂಡುವಾಗ ಡಿನಾಮಿನೇಟರ್ ಒಂದೇ ಇರಬೇಡವೆ
ಎಂದು ಕೂಗಿದರೆ ಮೇಷ್ಟ್ರು ಮುತ್ತು ಕೇಳಿದ "ಕೂಡಲೇ?"
ಇಲ್ಲ, ಬೆಂಚಿನ ಮೇಲೇ ಆಗಿರು ನ್ಯೂಮರೇಟರು
ಎಂದು ಬೆವರೊರೆಸಿಕೊಂಡು ಕೂತರು ಮೇಷ್ಟ್ರು
ಇನ್ನೊಂದು ಸಲ ಹೇಳಿಕೊಡುತ್ತೇನೆ ಕೇಳು
ವಾರದಲ್ಲಿ ನೋಡಿ ದಿನಗಳಿವೆ ಏಳು
ಐದು ದಿನ ಅಲ್ಲವೇ ನಿಮಗೆ ಸ್ಕೂಲು
ಫ್ರಾಕ್ಷನ್ ಮಾಡಿ ಹೇಳಿದರೆ ಐದು ಬೈ ಏಳು.
ಮೇಲಿರುವ ಐದು ನ್ಯೂಮರೇಟರ್
ಕೆಳಗಿನ ಏಳು ಡಿನಾಮಿನೇಟರ್ 
ಎಂದು ಚಾಕ್ ಬಳಸಿ ಹಾಕಿದರು  ಸುತ್ತು.

ಮಾಡುವಾಗ  ಫ್ರಾಕ್ಷನ್ ಕೂಡುವ ಲೆಕ್ಕ
ಡಿನಾಮಿನೇಟರ್ ಒಂದೇ ಇರಬೇಕು ಪಕ್ಕಾ
ಒನ್ ಬೈ ಟೂ ಪ್ಲಸ್ ಟೂ ಬೈ ತ್ರೀ - ಇಲ್ಲಿ ನೋಡಿದರೆ
ಎರಡರಲ್ಲೂ ಡಿನಾಮಿನೇಟರ್ ಬೇರೆಬೇರೆ
ಫ್ರಾಕ್ಷನ್ ಬರೆದಾಗ ಒಂದು ಶುಭ ಸುದ್ದಿ 
ಡಿನಾಮಿನೇಟರ್ ಬದಲಿಸಬಹುದು ಉಪಯೋಗಿಸಿ ಬುದ್ಧಿ
ಒನ್ ಬೈ ಟೂ ಅಂದರೂ ಒಂದೇ
ಟೂ ಬೈ ಸಿಕ್ಸ್ ಅಂದರೂ ಒಂದೇ
ಮೇಲೆ ಕೆಳಗೆ ಎರಡೂ ಕಡೆ ಮೂರರಿಂದ ಗುಣಿಸಿದರೆ ಕರಾಮತ್ತು.

ಈಗ ಟೂ ಬೈ ತ್ರೀ ವಿಷಯಕ್ಕೆ ಬರೋಣ
ಅಲ್ಲಿ ಡಿನಾಮಿನೇಟರ್ ಆರು ಮಾಡು ನೋಡೋಣ
ಮೇಲೆ ಮತ್ತು ಕೆಳಗೆ ಎರಡರಿಂದ ಗುಣಿಸಿದರೆ 
ಫೋರ್ ಬೈ ಸಿಕ್ಸ್ ಬಂತಲ್ಲ, ಏನು ತೊಂದರೆ!
ಈಗ ನೋಡು ಒನ್ ಬೈ ಟೂ ಪ್ಲಸ್ ಟೂ ಬೈ ತ್ರೀ ಹೋಗಿ
ತ್ರೀ ಬೈ ಸಿಕ್ಸ್ ಪ್ಲಸ್ ಫೋರ್ ಬೈ ಸಿಕ್ಸ್ ಆಗಿ
ಕೂಡಬಹುದು ಮೇಲಿನ ಮೂರು ಮತ್ತು ನಾಕು
ಕೆಳಗಿನ ಆರು ಹಾಗೇ ಇಡಬೇಕು
ಆಗ ಬರುವುದು ನೋಡು ಸೆವೆನ್ ಬೈ ಸಿಕ್ಸ್
ಅಷ್ಟೇ ನೋಡು, ಸುಲಭ ಸಕ್ಸೆಸ್!
ಎಂದು ಮೇಷ್ಟ್ರು ಮೇಲೆತ್ತಿದರು ಹೆಬ್ಬೆಟ್ಟು.

(೨೭)
ಅಯ್ಯೋ ಟೀ ಮಾಡಿಕೊಡುವುದು ಮರೆತೇಬಿಟ್ಟೆ ಎಂದು
ಐಓಟೀ ಸಾಧನವು ಸುರಿಸಿತು ಕೃತಕಾಶ್ರು ಬಿಂದು
ಯಾಕೋ ಇವತ್ತು ಮೈಯಲ್ಲಿಲ್ಲ ಸ್ವಾಸ್ಥ್ಯ
ನೀಡುತ್ತಿದೆ ಬ್ಲೂ ಟೂತ್ ನೋವು ಪ್ರತಿನಿತ್ಯ
ಎಷ್ಟು ಕೂಗಿಕೊಂಡರೂ ಕಿತ್ತಲಿಯ ಟ್ರಾನ್ಸ್ಮಿಟರು
ಕೇಳಿಸಿಕೊಳ್ಳದು ಸ್ಟೋವಿನ ರಿಸೀವರ್ರು
ಉಕ್ಕಿಹೋಯಿತು ಚಹಾ ಮಾಡಲು ಇಟ್ಟ ಹಾಲು
ಸಕ್ಕರೆ, ಚಹಾಪುಡಿ ಎಲ್ಲ ಅಡುಗೆಕಟ್ಟೆಯ ಪಾಲು
ಬೇಕೇ ಬೇಕೆಂದರೆ ಚಹಾ, ಮಾಡುವೆ ಒಂದು ಕೆಲಸ
ಪಕ್ಕದ ಹೋಟೆಲಿನಿಂದ ತರಿಸಿಕೊಡುವೆ ಈ ದಿವಸ...
ಬೇಡ ಬಿಡು, ಚಹಾ ತಾನೇ, ಮಾಡಿಕೊಳ್ಳುವೆ ನಾನೇ
ಮರೆತಿದೆ ಮಾಡುವ ವಿಧಾನ, ರೆಸಿಪಿ ಎಲ್ಲಿಟ್ಟೆನೋ ಕಾಣೆ
ಹೇಳಿಬಿಡು ಒಮ್ಮೆ,  ಹಚ್ಚುವುದು ಹೇಗೆಂದು ಗ್ಯಾಸ್ ಒಲೆ
ಎಲ್ಲಿದೆ ಹಾಲು, ಎಲ್ಲಿ ಸಕ್ಕರೆ, ಎಲ್ಲಿದೆ ಹೇಳು ಚಹಾ ಎಲೆ.

(೨೮)
ನಮ್ಮ ಅನಲಿಟಿಕಲ್ ಜಾಮಿಟ್ರಿ ಪ್ರೊಫೆಸರ್ ಶ್ರೀ ಅಮರ
ಒಮ್ಮೆ ವಿದ್ಯಾರ್ಥಿಯೊಂದಿಗೆ ಹೂಡಿದರು ವಾಕ್ ಸಮರ
ಪಾಯಿಂಟ್ ಒನ್ ಪಾಯಿಂಟ್ ಟೂ ಎಂದು ಹೇಳುತ್ತಾ
ಪಾಯಿಂಟ್ ತ್ರೀಗೆ ಬಂದಾಗ ವಿಮಾನದಲ್ಲಿ ಹಾರಾಡುತ್ತಾ
ಮೂರು ಪಾಯಿಂಟ್ = ಪ್ಲೇನ್ ಎಂದು ನೀಡಿದರು ವಿವರ!

(೨೯)

ಬೇಸರಿಸಿ ಹೇಳಿದರು ಮೇಷ್ಟ್ರು ಮುರಿಯುತ್ತ ಚಾಕ್ ಉ
ನೀವೆಲ್ಲ  ಗಣಿತದಲ್ಲಿ ವಿಪರೀತ ವೀಕು
ಇನ್ನೂ ಆಲ್ಜೀಬ್ರಾ ಸರಿಯಾಗಿ ಕಲಿತಿಲ್ಲ ನೀವು
ಈ ವಯಸ್ಸಿಗೆ ಟ್ರಿಗನಾಮೆಟ್ರಿ ಮಾಡ್ತಿದ್ದೆವು ನಾವು!
ಒಬ್ಬಂನೆಂದ:  ನಮ್ಮ ದುರದೃಷ್ಟ! ನಿಮಗೆ ಒಳ್ಳೆ ಟೀಚರ್ ಸಿಕ್ಕಿರಬೇಕು!


(೩೦)

ಇದೆಯಂತೆ ಒಂದು ಗ್ರಹ ಕ್ಯಾಂಕ್ರಿ ೫೫ ಇ

ನಲವತ್ತು ಬೆಳಕುವರ್ಷಗಳ ದೂರದಲ್ಲಿ

ಬರೀ ವಜ್ರವೇ ಅಂತೆ ಇಡೀ ಗ್ರಹ

ಹೇಗೆ ಹೊಳೀತಿದ್ಯೋ ಅಹಹಾ

ಲೈಕ್ ಎ ಡೈಮಂಡ್ ಇನ್ ದ ಸ್ಕೈಯಿ!


(೩೧)

ಉಬ್ಬುತ್ತಾ ಉಬ್ಬುತ್ತಾ ನಭದಲ್ಲಿ ತಾರೆ
ಆಸ್ಫೋಟಿಸಿ ಕುಸಿದಾಗ ತನ್ನ ಮೇಲೆ ತಾನೇ
ವಿಪರೀತವಾಗಿ ಅದರ ಗುರುತ್ವ
ಎಲ್ಲವನ್ನೂ ಸೆಳೆದುಕೊಂಡು  ಓಂ ಸ್ವಾಹಾ!ಇ

ದಕ್ಕೇ ನೋಡಿ ಕಪ್ಪುರಂಧ್ರ ಅಂತಾರೆ


(೩೨)

ಟೀ ಕಪ್ಪಿನೊಳಗೆ ಸುರಿದರೆ ಬಿಸಿ ಚಹಾ

ಎಲ್ಲಿ ಹೋಯಿತೋ ಎಲ್ಲ ಮಂಗಮಾಯ!

ಎಲ್ಲವನ್ನೂ ನುಂಗಿಬಿಡುವ ಈ ಅದ್ಭುತ

ಏನಿದರ ಗೂಢವಿಜ್ಞಾನ ಎನ್ನುತ್ತಾ

ನೋಡಿದರೆ ಮೇಲೆತ್ತಿ ಕಾಣಿಸಿತು ಕಪ್ಪು - ರಂಧ್ರ 

(೩೩)

ಊರಲ್ಲಿ ಮೂರು ಸೆಂಟಿಮೀಟರ್ ಮಳೆ ಎಂಬಲ್ಲಿದೆ ಏನೋ ಮುದ್ರಣ ದೋಷ

ಆರಡಿಯ ಅಪ್ಪನಿಗಿಂತಲೂ ಎತ್ತರದಲ್ಲಿದೆಯಲ್ಲ ಆಕಾಶ!

ಎಂದ ವಿದ್ಯಾರ್ಥಿಯ ಕಿವಿಹಿಂಡಿ ಮೇಷ್ಟ್ರು ಹೀಗೆ ತಿದ್ದಿದರು

ಊರ ವಿಸ್ತೀರ್ಣದ ಮೇಲೆ ಸಂಗ್ರಹಿಸಿ ಇಟ್ಟರೆ ಮಳೆನೀರು

ಮೂರು ಸೆಂಟಿಮೀಟರ್ ಎತ್ತರ ನಿಲ್ಲುವುದು ಕಣೋ, ಸಂತೋಷ!

(೩೪)

ಶ್ರೀಮಾನ್ ಫೋಟಾನ್ ಹೊರಟಾಗ ಭೂಮಿಯತ್ತ
ಓಡಿಬಂದರು ಹಿಂದೆ ಡ್ರೆಸ್ ಸರಿಮಾಡಿಕೊಳ್ಳುತ್ತ
ಶ್ರೀಮತಿ ಫೋಟಾನ್! ರೀ ನಾನೂ ಬರ್ತೀನಿ ತಾಳಿ!
ಹದಿನೈದು ಕಿಲೋಮೀಟರ್ ನಡಿಗೆ, ಏನು ಅವಸರ ಹೇಳಿ!
ನಿಮ್ಮ ಸಹಚಾರಿಣಿಯಲ್ಲವೇ ನಾನು, ಪ್ರಾಣಕ್ವಾಂಟಾ!

(೩೫)

ದೂಡದಿದ್ದರೆ  ಶಕ್ತಿ  ಇದ್ದಲ್ಲೇ ಇರುವ ವಸ್ತು

ಶಕ್ತಿ ತಡೆಯದಿದ್ದರೆ  ಚಲಿಸುವುದಿಲ್ಲದೇ ಸುಸ್ತು

ವೇಗ ಬದಲಿಸಲು ಶಕ್ತಿ ಬೇಕೇ ಬೇಕು 

ಇದ್ದರೆ ಸಾಲದು ಕಾರಿನಲ್ಲಿ ಬ್ರೇಕು

ಚಲನೆಯ ನಿಯಮಕ್ಕೆ ಹೀಗೆ ನ್ಯೂಟನ್ ನೀಡಿದ ತಥಾಸ್ತು

(೩೬)

ನೋಡಿದೆನು ಒಂದು ದಿನ

ಗೋಡೆಯ ಮೇಲೊಂದು ನೊಣ

ಬೀಳದೇಕೆ ನೊಣ ಕೆಳಗೆ?

ಯೋಚಿಸಿದೆ ಒಳಗೊಳಗೇ

ಗ್ರಾವಿಟಿಗೆ ಅಪವಾದ

ಸೃಷ್ಟಿಸಿ ಪವಾಡ

ಮಾಡಿದೆಯೋ ಏನೋ! ಕೇಳಿ ನ್ಯೂಟನ್ನ.


(ರಾಬರ್ಟ್ ಕೋವನ್ ಅವರ ಲಿಮರಿಕ್ ಆಧರಿಸಿ)


(೩೭)

ಪರೀಕ್ಷೆಯಲ್ಲಿ ತನಗೆ ಸೊನ್ನೆ ಶತಸಿದ್ಧ

ಎಂದೇ ಅವನು ಅಂದುಕೊಂಡಿದ್ದ

ಇಪ್ಪತ್ತಕ್ಕೆ ಇಪ್ಪತ್ತು ಮಾರ್ಕ್ಸ್ ಬಂದಿದ್ದು ನೋಡಿ

ಅಪ್ಪನಿಗೆ ತೋರಿಸಲು ಹೋದ ಓಡೋಡಿ

ಮೈನಸ್ ಚಿಹ್ನೆಯನ್ನು ನೋಡದೇ ತಿಂದ ಇಪ್ಪತ್ತು ಗುದ್ದ

(೩೮)

ಆಕ್ಸಿಜನ್ ಅಣುವನ್ನು ನೋಡಿ ಓ ಬಂದ್ರಾ!

ಸ್ವಾಗತ! ಎಂದು ಜೋಕ್ ಹಾರಿಸಿತು ತಾಮ್ರ

ಕೂಡಲಾರೆ ಕಣಪ್ಪ ಹೆಚ್ಚು ಹೊತ್ತು

ಅರ್ಜೆಂಟ್ ಆಕ್ಸಿಡೇಶನ್ ಕೆಲಸವಿತ್ತು

"ಸೀ ಯು" ಎಂದು ಕೈ ಮುಗಿಯಿತು ಓ ಬಾಗಿ, ವಿನಮ್ರ.

(೩೯)

ಥರ್ಮೋಡೈನಮಿಕ್ಸ್  ಲಾಸ್ ಓದಿ ಕೊಂಡೆಯಾ ಎಂದು

ಅಪ್ಪ ಕೇಳಿದಾಗ ಭುಜ ಹಾರಿಸಿದ ಪೂರ್ಣೇ೦ದು

ಪೂರ್ಣ ಇಂದುವಿನಷ್ಟೇ ಬಂದಾಗ ಅಂಕ

ಅಪ್ಪ ಹೇಳಿದರು ತೋರುತ್ತ ಬಿಂಕ

ಥರ್ಮೋ ರಕ್ಷತಿ ರಕ್ಷಿತಃ ಕಣೋ ಎಂದು, ನೊಂದು ನೊಂದು!

(೪೦)

ರಸಾಯನ ಶಾಸ್ತ್ರ ಅಧ್ಯಾಪಕರು ಶ್ರೀ ಎಚ್.ಎನ್.

(ಹಿರೇಹಳ್ಳಿ ನಾರಾಯಣ ಎಂಬುದಕ್ಕೆ ಅಬ್ರೀವಿಯೇಶನ್)

ಪ್ರಶ್ನೆ ಕೇಳಿದನು ಹಿಂದಿನ ಸಾಲಿನ ಶೇಷಾದ್ರಿ

ಸರ್ ಗಂಗೆಗೆ ಗಂಗೋತ್ರಿ, ಯಮುನೆಗೆ ಯಮುನೋತ್ರಿ

ಎಚ್.ಎನ್.ಗೆ ಏನಿರಬಹುದು ಸಾರ್ ಹೇಳಿ ನೋಡೋಣ ಆರಿಜಿನ್

(೪೧)

ಪರಭಾಷೆಯಲ್ಲಿ ಕಂಡ ನಗೆಹನಿಯನ್ನು ಒಡನೆಯೇ 

ಅನುವಾದಿಸಿ ತನ್ನ ಭಾಷೆಗೆ ಹಂಚುವನಲ್ಲ ಅವನು

ಫ್ಲೂರೆಸೆಂಟ್ ವಸ್ತುವಿನಂತೆ ಏಕೆಂದರೆ -

ಸಿದ್ಧಿಸಿದೆ ಅವನಿಗೆ

ಹೀರಿ ಚೈತನ್ಯವನ್ನು ಒಂದು ತರಂಗಾಂತರದಲ್ಲಿ

ಇನ್ನೊಂದು ತರಂಗಾಂತರದಲ್ಲಿ ಹೊಮ್ಮಿಸುವ ಕ್ಷಮತೆ.

ನಗೆಹನಿಗಳ ಹರಿವು ನಿಲ್ಲುವುದೋ ಯಾವಾಗ

ಬತ್ತುವುದು ಕೂಡಲೇ ಅವನು ಚಿಮ್ಮಿಸುವ ನಗೆಯೊರತೆ.


ಮೌನವಾಗಿ ಹೀರಿ ತನ್ನೆಡೆಗೆ ಬಂದ ಎಲ್ಲಾ ಬರಹ

ಸಾವಧಾನವಾಗಿ ಎಲ್ಲವನ್ನೂ ಓದಿ 

ತಡವಾದರೂ ಹೊತ್ತಿಕೊಂಡು ನೀಡುತ್ತಾನಲ್ಲ ಬೆಳಕು

ಅವನು ಫಾಸ್ಫಾರೆಸೆಂಟ್ ವಸ್ತುವಿನ ತರಹ.

ನಿಂತರೂ ಅವನೆಡೆ ಬರುವ ಬರಹ, ಅನ್ನಿಸಿಕೆ, ಅಭಿಪ್ರಾಯ

ಬಹುಹೊತ್ತು ಬೆಳಗುವುದು ಅವನ ಪ್ರಭಾವಲಯ.

(೪೨)

ಕೌಂಟ್ ಅವೊಗಾಡ್ರೋ ಹೇಗೆ ಮಾಡಿದನೋ ಕೌಂಟು

ಎಂದು ನನಗೆ ಅನುಮಾನ ಆಗಾಗ ಬರುವುದುಂಟು

ನನ್ನ ಮನಸ್ಸು ಕಲ್ಪಿಸಿಕೊಳ್ಳುವುದು ಈ ಚಿತ್ರ

ಕೌಂಟ್ ತುಂಬಿಸಿದ್ದಾನೆ ಎರಡು ಅನಿಲಪಾತ್ರ

ಎರಡೂ ಅನಿಲಗಳು ಪರಸ್ಪರ ವಿಭಿನ್ನ,

ಒಂದು ಕೆಂಪು ಇನ್ನೊಂದು ಹಸಿರು ಬಣ್ಣ!


ಎರಡಕ್ಕೂ ಸಮಾನ ಒತ್ತಡ ಮತ್ತು ತಾಪಮಾನ

ಮತ್ತು ಎರಡೂ ಪಾತ್ರೆಗಳದ್ದು ಒಂದೇ ಪರಿಮಾಣ

ಎರಡೂ ಪಾತ್ರೆಗಳಲ್ಲಿರುವ ಅಣುಗಳನ್ನೆಣಿಸಲು ಪಾಪ

ಇಬ್ಬರು ಲ್ಯಾಬ್ ಸಹಾಯಕರು ಪಡುತಿಹರು ಪರಿತಾಪ ...


ಆಗ ನಡೆದು ಬರುತ್ತಾನೆ ವಿಜೃಂಭಣೆಯಿಂದ ಅವೊಗಾಡ್ರೋ

ಸರಿಯಾಗಿದೆಯಾ ಲೆಕ್ಕ ಇನ್ನೊಂದು ಸಲ ನೋಡ್ರೋ!

ತುಟಿಯಲ್ಲೆ ಪಿಟಿಪಿಪಿಟಿಸಿ ಮನದಲ್ಲೇ ಮಣಮಣಿಸಿ

ಮತ್ತೊಮ್ಮೆ ಮಗದೊಮ್ಮೆ ಎಣಿಸೆಣಿಸಿ ಪುನರೆಣಿಸಿ


ಉತ್ತರ ಬರೆದು ಕೊಟ್ಟಾಗ ಇಬ್ಬರೂ ಸಹಾಯಕರು

ಇಬ್ಬರಿಗೂ ಒಂದೇ ಬಂದಿದೆಯಲ್ಲ ಆನ್ಸ್ವರ್ರು!

ಹೊಡೆದಿರಾ ಹೇಳಿ ಒಬ್ಬರಿಂದೊಬ್ಬರು ಕಾಪಿ 

ಎಂದಾಗ ಸಹಾಯಕರು ಇಲ್ಲ ಇಲ್ಲ ಕದಾಪಿ!


ಎಂದಾಗ ನಕ್ಕು ಹೀಗೆ ಹೇಳಿದ ಕೌಂಟು

ನಿಮ್ಮ ಮೇಲೆ ನನಗೆ ನಂಬಿಕೆ ಉಂಟು

ಇಬ್ಬರ ಉತ್ತರವೂ ಒಂದೇ ಇರಲು ಹೇಗೆ ಸಾಧ್ಯ ಆದರೂ!

ಏನೋ ಮಹತ್ತರ ಸಂಶೋಧನೆ ಮಾಡಿದ್ದೀರಿ ಇಬ್ಬರೂ!


ಹೀಗೆ ಬಂದಿರಬೇಕು ಅವೊಗಾಡ್ರೋ ನಿಯಮ ಎಂದು

ನನಗೆ ಆಗಾಗ ಹೋಗುವುದು ಅನುಮಾನ ಬಂದು.

(೪೩)

ಇದ್ದನೊಬ್ಬ ಕಾರ್ಲ್ ವಿಲ್ಹೆಲ್ಮ್ ಶೀಲ

ಕಾಲ ಎಳೆಯಿತು ಪಾಪ ಅವನ ಕಾಲ!


ಕಾಯಿಸಿ ಮರ್ಕ್ಯುರಿಕ್ ಆಕ್ಸೈಡ್ ಒಲೆಯ ಮೇಲಿಟ್ಟು

ಸಂಭ್ರಮಿಸಿದ ಅನಿಲವೊಂದು ಹೊಮ್ಮಿದಾಗ ಬೇರ್ಪಟ್ಟು

ಬೆಂಕಿಯನ್ನು ಇನ್ನಷ್ಟು ಭುಗಿಲೆನ್ನಿಸುವ ಅನಿಲ!

ಬೆಂಕಿಗಾಳಿ ಎಂದೇ ಕರೆದನು  ಕಾರ್ಲ್ ಶೀಲ.


ಅವನೇನೋ ಪೇಪರ್ ಬರೆದು ಕಳಿಸಿದನು ಬೇಗ

ಅಚ್ಚು ಮಾಡಲು ಬೇಕಾಯಿತು ಎರಡು ವರ್ಷದ ಯಾಗ!

ಅಷ್ಟರಲ್ಲಿ ಪ್ರೀಸ್ಟ್ಲೀ ಮತ್ತು ಲೆವಾಸಿಯೇ ಪ್ರತ್ಯೇಕ

ಅಚ್ಚು ಮಾಡಿದರು ಇದೇ ಅನಿಲದ ಬಗ್ಗೆ ಲೇಖ!


ಮರ್ಕ್ಯುರಿ ಇತ್ಯಾದಿ ವಿಷವಸ್ತುಗಳ ಸೇವನೆ

ಬೇಡಿತು ಕಾರ್ಲ್ ಶೀಲನ ಜೀವವನೆ.


ಕಾರ್ಲ್ ಶೀಲನು ಕಂಡು ಹಿಡಿದ  ಬೆಂಕಿಗಾಳಿ 

ಓ ಯಾವುದದು ನೀವೇ ಊಹೆ ಮಾಡಿ ಹೇಳಿ.

(೪೪)

ಯಾವ ಧಾತು ಇಡೀ ಜಗತ್ತಿನಲ್ಲಿ ಅತ್ಯಂತ ಹೆಚ್ಚು

ಪ್ರಶ್ನೆಯಲ್ಲೇ ಉತ್ತರವಿದೆ, ಪತ್ತೆ ಹಚ್ಚು!

ಸೂರ್ಯ ಮೊದಲಾದ ತಾರೆಗಳಲ್ಲಿ ಈ ಧಾತುವೇ ಇಂಧನ:

ಇದರೆರಡು ಪರಮಾಣುಗಳ  ಗಾಢ ಪ್ರೇಮಬಂಧನ

ಹೀಲಿಯಂನಲ್ಲಿ ಕೊನೆಗೊಂಡು ಉಂಟಾಗುವ ಫ್ಯೂಷನ್ ಕಿಚ್ಚು!

(೪೫)

ಹಿಂದೊಮ್ಮೆ ಕುಡಿವ ನೀರಿನಲ್ಲಿ ಬ್ಯಾಕ್ಟೀರಿಯಾ

ಹರಡುತ್ತಿದ್ದವು ಜ್ವರ: ಟೈಫಾಯ್ಡ್, ಡಿಫ್ತೀರಿಯಾ!

ಜಾನ್ ಲೇಲ್ ಎಂಬ ವೈದ್ಯ ನ್ಯೂಜೆರ್ಸಿ ನೀರು ಸರಬರಾಜಿಗೆ

ಏನೋ ಬೆರೆಸಿ ಶುದ್ಧಗೊಳಿಸಿದ ಮೊಟ್ಟಮೊದಲ ಬಾರಿಗೆ

ಇಂದೂ ಬೆರೆಸುವರು ಜಲಶುದ್ಧಿಗೆ! ಏನು, ಹೇಳಬಲ್ಲೆಯಾ?

(೪೬)

ನಿಮ್ಮ ಸೋಡಿಯಂ ಕ್ಲೋರೈಡ್ ತಿಂದಿರುವೆ ಒಡೆಯಾ 

ಎಂದು  ಗಬ್ಬರನ ಮುಂದೆ ಹಲ್ಲು ಗಿಂಜಿದನು ಕಾಲಿಯಾ

ಅಬ್ಬರಿಸಿದ ಗಬ್ಬರ್, "ಈಗ ತಿನ್ನು ಗುಂಡಿನ ಏಟು!"

"ತಿನ್ನಿಸಬಹುದಿತ್ತಲ್ಲ ಸೋಡಿಯಂ ಕ್ಲೋರೇಟು?"

ಎಂದು ಕೆಮಿಸ್ಟ್ರಿ ಪ್ರೊಫೆಸರ್ ಮೃತ್ಯುಂಜಯ ನೀಡಿದರು ಐಡಿಯಾ

(೪೭)

ರುಚಿಗೆ ತಕ್ಕಷ್ಟು ಉಪ್ಪು 

ರೆಸಿಪಿಯಲ್ಲಿದೆ  ತಪ್ಪು

ಯಾವ ಉಪ್ಪೆಂದು ನೀವು ತಿಳಿಸಿಲ್ಲ ನಮಗೆ

ನನ್ನ ಲ್ಯಾಬಿನಲ್ಲಿದೆ ಉಪ್ಪುಗಳು ನೂರಾರು ಬಗೆ 

ಕೆಲವು ಆರ್ಗಾನಿಕ್ಕು ಹಲವು ಇನಾರ್ಗಾನಿಕ್ಕು

ಕೆಲವು ವಿಷಪದಾರ್ಥ, ಕೆಲವು ಮಿದುಳಿಗೆ ಟಾನಿಕ್ಕು 

ಹೀಗೆ ಬರೆದರೆ ಹೇಗೆ, ರುಚಿಗೆ ತಕ್ಕಷ್ಟು ಎಂದು!

ಎಲ್ಲಿಡಬೇಕು ನಾನು ಡೆಸಿಮಲ್ ಬಿಂದು?

ಎಂದು ಕಾಮೆಂಟ್ ಹಾಕಿ ಸರಳಾ ಮೇಡಂ ಹೆಚ್ಚಿದರು ಸೊಪ್ಪು.

(೪೮)

ಅಡುಗೆ ಮನೆಯಲ್ಲಿ ಮಿಸೆಸ್ ಸಾವಿತ್ರಿ

ಬಳಸುವುದೇಕೆ ಎನ್ನೆ ಎಚ್ ಸೀ ಓ ತ್ರೀ 

ಮೃದುವಾದ ದಪ್ಪ ಸೆಟ್ ದೋಸೆ 

ತಿನ್ನಬೇಕೆಂದು ಪತಿ ಪಟ್ಟಾಗ ಆಸೆ

ಪಾಪ, ಎಣ್ಣೆ ಹೆಚ್ಚಾಗಿ ಸೀದು ಹೋಯ್ತ್ರೀ!


(೪೯)

ಸೋಡಾ ಸೋಡಿಯಂ ಎಂಬುದರ ರೂಪಾಂತರ

ಕೆಲವರಿಗೆ ಸೋಡಾ ಎಂದರೆ ಬೇಕೆನ್ನಿಸುವುದು ಮಧ್ಯಂತರ!

ಸೋಡಿಯಂ ಕಾರ್ಬೊನೇಟ್ : ವಾಷಿಂಗ್ ಸೋಡಾ,

ಸೋಡಿಯಂ ಬೈಕಾರ್ಬೋನೇಟ್ : ಅಡುಗೆ ಸೋಡಾ!

ಬದಲಾಯಿಸಿದರೆ ಒಂದಕ್ಕೊಂದು ತುಂಬಾ ಅವಾಂತರ!


(೫೦)

ಮೇಷ್ಟ್ರು ಹೇಳುತ್ತಿದ್ದರು ಒಂದಾದ ಮೇಲೆ ಒಂದು

ದಿನನಿತ್ಯ ಬಳಸುವ ಆರ್ಗಾನಿಕ್ ಕಾಂಪೌಂಡು!

"ನೀನೊಂದು ಕೊಡು ಉದಾಹರಣೆ" ಎಂದು

ಕೇಳಿದಾಗ ಕಿಟ್ಟಿ ಕೈಯೆತ್ತಿ ನಿಂದು

"ಕುಡಿದರೆ ವಿಪರೀತ ಎಥನಾಲು ರಾತ್ರಿ

ಬೆಳಗ್ಗೆ ಎದ್ದಾಗ ತಲೆ ನೋವು ಖಾತ್ರಿ

ಅಸಿಟೋ ಸ್ಯಾಲಿಸಿಲಿಕ್ ಆಸಿಡ್ ಅಥವಾ ಆಸ್ಪಿರಿನ್ನು

ತರಲು ಕಳಿಸುತ್ತಾರೆ ಮನೆಯಲ್ಲಿ ಒಬ್ಬರನ್ನು"

ಇನ್ನೂ ಏನೇನು ಹೇಳುವನೋ ಕಿಟ್ಟಿ

ಎಂದು ಮೇಷ್ಟ್ರ ಕಾಲು ಥರಥರಗುಟ್ಟಿ

ಬೈದರು, "ಸಾಕು ಕೂತ್ಕೋ, ತಲೆಹರಟೇನ್ ತಂದು!"

(೫೧)

ಉಂಗುರ


ಸಿ ಎಂಬ ಪ್ರಾಣಿಗೆ ನಾಲ್ಕು ಕೈ

ಎಚ್ ಎಂಬ ಪ್ರಾಣಿಗೆ ಒಂದೇ 

ಸೇರಿದರು ಒಂದೆಡೆಗೆ ಆರು ಸಿ

ಮತ್ತು ಆರು ಎಚ್ (ಯಾರದೋ ಬರ್ತ್ ಡೇ)


ಕೂಡಬೇಕು ಇವರು ಊಟಕ್ಕೆ

ಎಲ್ಲರೂ ಹಿಡಿದು ಇನ್ನೊಬ್ಬರ ಕೈ

ಹೇಗೆ ಕೂಡಿಸಬೇಕೆಂದು

ತಲೆ ಕೆಡಿಸಿಕೊಂಡ ಕೆಕ್ಯೂಲೆ


ಕೊನೆಗೂ ಹೊಳೆಯಿತು ಅವನಿಗೆ

ಒಂದು ಆಸನ ವ್ಯವಸ್ಥೆ

ಕೂರಿಸಿದ ಆರು ಸಿ ಅಕ್ಕಪಕ್ಕ ವರ್ತುಲದಲ್ಲಿ

ನಡುವೆ ಇಟ್ಟು ಅವರಿಗೆ ತಟ್ಟೆ


ಆರು ಎಚ್ ಕರೆದು ಕೂಡಿಸಿದ 

ಒಂದೊಂದಾಗಿ ಆರು ಸೀಗಳ ಹಿಂದೆ

ಎಚ್ ವರ್ತುಲದ ಹೊರಭಾಗರಲ್ಲಿ

ಜೋಡಿಸಿದ ತಟ್ಟೆ ಅವರ ಮುಂದೆ


ಪ್ರತಿಯೊಂದು ಸಿ ಹಿಡಿಯಿತು 

ಎಡಗಡೆಯ ಸೀಯನ್ನು ಎರಡು ಕೈಯಲ್ಲಿ

ಬಲಗಡೆಯ ಸೀಯನ್ನು ಹಿಡಿಯಿತು

ಒಂದೇ ಒಂದು ಕೈಯಲ್ಲಿ


ಉಳಿದ ಇನ್ನೊಂದು ಕೈಯಿಂದ 

ಪ್ರತಿಯೊಂದು ಸೀ ಪ್ರಾಣಿ

ಹಿಡಿಯಿತು ಹಿಂದೆ ಕೂತ

ಎಚ್ ಅನಿಮಲ್ಲಿನ ಪಾಣಿ


ಈಗ ಎಲ್ಲರೂ ಕುಳಿತರು ಶಾಂತ

ಮಾತಾಡುತ್ತ ಪರಸ್ಪರ, ನೋಡುತ್ತ ಟೇಬಲ್ಲು!

ತಿನ್ನಲು ಯಾರ ಕೈಗೂ ಬಿಡುವಿಲ್ಲ

ಹೀಗಾಗಿ ಎಲ್ಲಾ ಅಚಲ, ಸ್ಟೇಬಲ್ಲು!


ಸೀ ಎಂದರೆ ಕಾರ್ಬನ್ ಪರಮಾಣು

ಎಚ್ ಹೈಡ್ರೋಜನ್ ಪರಮಾಣು

ಈ ವಿಶಿಷ್ಟ ವ್ಯವಸ್ಥೆಯಲ್ಲಿ ಮಾತ್ರ

ಕೂರಬಹುದು ಆರು ಕಾರ್ಬನ್ ಆರು ಹೈಡ್ರೋಜನ್ನು


ಒಂದು ಬೆಂಜೀನ್ ಅಣು, ಸೀ ಸಿಕ್ಸ್ ಎಚ್ ಸಿಕ್ಸ್ ,

ಹೇಗೆ ಕೂಡಿಸಬಹುದೆಂದು ತಲೆ ಕೆಡಿಸಿಕೊಂಡಾಗ ಜಗತ್ತೇ

ಕೆಕ್ಯೂಲೆಗೆ ಗಳಿಸಿಕೊಟ್ಟಿತು ಕೀರ್ತಿ

ಅವನ ಬೆಂಜೀನ್ "ಉಂಗುರಾಕಾರ ವ್ಯವಸ್ಥೆ"

(೫೨)

ಬ್ಯೂಟೇನು ಪ್ರೋಪೇನು

ಇವೆಲ್ಲ ಏನು ಗೊತ್ತೇನು?

ಗೊತ್ತಿದ್ದರೂ ನಿನಗೆ ಉತ್ತರ

ಮೌನ ವಹಿಸಿದರೆ, ಎಚ್ಚರ!

ನಿನ್ನ ಸ್ಕಲ್ ಆಗುವುದು ಪೀಸ್ ನೂರಾರು 

ಎಂದಾಗ ವಿಕ್ರಮನು ಯೋಚಿಸದೆ ಚೂರೂ

"ಅಡುಗೆ ಮನೆ ಗ್ಯಾಸ್ ಸಿಲಿಂಡರ್ ಒಳಗೆ"

ಎಂದು ಒಪ್ಪಿಸಿಬಿಟ್ಟ ಆನ್ಸರ್ ಮರುಘಳಿಗೆ

ಕೂಡಲೇ ಎಲ್ ಪೀ ಜೀ ಮಾದರಿಯಲ್ಲಿ ಮೇಲೇರಿ

ತನ್ನ ಮರ ಸೇರಿತು ಬೇತಾಳ, ,"ಸಾರಿ!

ನಮ್ಮ ಕಾಂಟ್ರಾಕ್ಟ್ ಏನೆಂದು ಮರೆತು ಬಿಟ್ಯೇನು!

ಯೋಚಿಸದೆ ಥಟ್ ಅಂತ ಉತ್ತರ ಕೊಟ್ಯೇನು!!"

(೫೩)

ಒಂದು ದಿನ  ಒಬ್ಬ ಆಟಂ ಕಳೆದುಕೊಂಡ

ಹೊರಜೋಬಲ್ಲಿದ್ದ ಎಲೆಕ್ಟ್ರಾನ್ ಒಂದ

ಧನಾತ್ಮಕ ಯೋಚನೆಯ ಪರಿಣಾಮವಾಗಿ

ಮತ್ತೆ ಸಿಕ್ಕಿದಳವನ ಎಲೆಕ್ಟ್ರಾನ್ ಬೆಡಗಿ

ಅವನೆಂದ: ಎಲ್ಲವೂ ಹಳೆಯ ಋಣಾನುಬಂಧ!

(೫೪)

ಬಿಗ್ ಬ್ಯಾಂಗ್ ಅಥವಾ ಮಹಾವಿಸ್ಫೋಟ ಥಿಯರಿ

ಏನೆಂದು ಕೇಳಿದಿರಾ ಹೇಳುವೆನು ತಡೆಯಿರಿ

ಯಾರೋ ಹೇಳಿರಬೇಕು

ದೇವರಿಗೊಂದು ಜೋಕು

ಚೊಂಬಿನಿಂದ ಹಾಲು ಕುಡಿಯುತ್ತಿರುವಾಗ (ನನ್ನ ಸಂಶಯ ರೀ)

(೫೫)

ಶ್ರೋಡಿಂಜರ್ ಎಂಬ ಭೌತಜ್ಞನ ಬೆಕ್ಕು :

ಎಲ್ಲ ಬೆಕ್ಕುಗಳಂತೆ ಬಾಲ ಇತ್ತೇ ಅದಕ್ಕೂ?

ಹೇಗಿದೆ ನೋಡಿ ಕ್ವಾಂಟಮ್ ಮೆಕ್ಯಾನಿಕ್ಸ್ ಬೆರಗು

ನಾವು ಖುದ್ದಾಗಿ ಬೆಕ್ಕನ್ನು ನೋಡುವವರೆಗೂ

ಶ್ರೋಡಿಂಜರ್ ಬೆಕ್ಕಿಗೆ ಬಾಲ ಇರಲಿಲ್ಲ ಮತ್ತು ಇತ್ತು

(೫೬)ಡೆಕಾಗ್ರಾಂ ಎಂದರೆ ಹತ್ತು ಗ್ರಾಂ ಕಣೋ ರಾಮು

ಕಿಲೋಗ್ರಾಂ ಎಂದರೆ ಒಂದು ಸಾವಿರ ಗ್ರಾಮು

ಮಿಲಿಗ್ರಾಂ ಎಂದರೇನೆಂದು ತಿಳಿದುಕೋ ಬೇಗ

ಒಂದು ಗ್ರಾಮಿನ ಸಾವಿರದ ಒಂದನೇ ಭಾಗ

ಎಂದು ಬರೆದರು ಮೇಷ್ಟ್ರು ಬೋರ್ಡಿನ ಮೇಲೆ

ಮಿಲಿ ಸೆಂಟಿ ಡೆಸಿ ಯೂನಿಟ್ ಡೆಕಾ ಹೆಕ್ಟೋ ಕಿಲೋ ಸರಮಾಲೆ

ಏನಾದರೂ ಪ್ರಶ್ನೆ ಇದೆಯಾ ಕೇಳಿ

ಎಂದು ನಿಲ್ಲಿಸಿದಾಗ ಮೇಷ್ಟ್ರು ವಾಗ್ದಾಳಿ

ಕೇಳಿದನೊಬ್ಬ: ಸಾರ್ ಎಷ್ಟು ಗ್ರಾಂ ಸೇರಿ ಒಂದು ಇನ್ಸ್ಟಾಗ್ರಾಮು?

(೫೮)

ವೇಗ ಸಿಟಿ


ಟ್ರಾಫಿಕ್ ಪೊಲೀಸ್ ನಿಲ್ಲಿಸಿ ಕೇಳಿದನು: ನಿಮ್ಮ

ಕಾರ್ ಯಾವ ಸ್ಪೀಡಲ್ಲಿತ್ತು ಗೊತ್ತೇನಮ್ಮ?

ಸಾರ್ ಕ್ಷಮಿಸಿ ಹೇಳಲಾರೆ ನಿಖರವಾಗಿ ಇಂತಿಷ್ಟು

ತಡೆ  ಒಡ್ಡುತ್ತದೆ ಕ್ವಾಂಟಮ್ ಲಿಮಿಟ್ಟು 

ಯಾವುದೇ ವಸ್ತುವಿನ ವೇಗ ಅಕ್ಯುರೇಟಾಗಿ 

ಅಳೆಯಲಾರದು ಎಂದು ಬಹಳ ಸ್ವೀಟಾಗಿ

ಹೇಳಿದರೂ ಐನೂರು ತೆರಲೇ ಬೇಕಾಯ್ತು, ಕರ್ಮ!

(೫೯)

ಒಂದು ಟ್ರಾಜಿಡಿ


ಜೊತೆಗೇ ಇದ್ದವು ತಾಮ್ರ, ಸಲ್ಫೇಟು 

ನೀರಲ್ಲಿ ಬಿದ್ದಾಗ ಬದಲಾದವು ಫೇಟು

ಧನದ ಚೀಲ ಹೊತ್ತಿದ್ದ ತಾಮ್ರ ಈಜುತ್ತಾ ಹೋಗಿ

ಸೇರಿದನು ಕ್ಯಾಥೋಡ್ ಬಾರ್ ಕೆಟ್ಟಆಕರ್ಷಣೆಗೆ ಒಳಗಾಗಿ

ಇತ್ತ ಸಲ್ಫೇಟ್ ಪಾಪ ಋಣ ತೀರಿಸಲು

ಧನಿಕ ಆನೋಡ್ ಮನೆಯಲ್ಲಿ ಆಳಾಗಿ ಸೇರಿದಳು

ತಾಮ್ರದ ಹಣವೆಲ್ಲ ಸೇರಿ ಕ್ಯಾಥೋಡ್ ಬಾರ್  ಪಾಪ

ಕ್ಯಾಥೋಡ್ ಮಾಲೀಕನ ಕೋಟಲ್ಲಿ ಕಾಪರ್ರೋ ಕಾಪ

ಎಲ್ಲಿಯವರೆಗೆ ನಡೆಯುವುದು ಈ ಆಟ ರೀ!

ಎಲ್ಲಿಯವರೆಗೆ ಕ್ಯಾಥೋಡ್ ಆನೋಡಿಗೆ ಜೋಡಿಸಿದೆಯೋ ಬ್ಯಾಟರಿ

ಮತ್ತು ಇದೆಯೋ ನೀರಿನಲ್ಲಿ ಕಾಪರ್ ಸಲ್ಫೇಟ್ ಲವಣ

ನಡೆಯುತ್ತದೆ ಪಾಪರ್ ಆಗುವವರೆಗೂ ಕಾಪರ್ ಗ್ರಹಣ!

ಎಲೆಕ್ಟ್ರಿಸಿಟಿಯಲ್ಲಿ ಹೀಗೆ ಜೋಡಿ ಬೇರಾಗುವ ಟ್ರಾಜಿಡಿ

ನೋಡಿ ಎಲೆಕ್ಟ್ರಾಲಿಸಿಸ್ ಎಂದು ಹೆಸರಿಟ್ಟ ಮೈಕಲ್ ಫ್ಯಾರಡೆ 


(೬೦)

ಹುಟ್ಟಿದಾಗ ಮಗು ಅತ್ತರೂ

ಸುರಿಸುವುದಿಲ್ಲ ಕಣ್ಣೀರು

ಒಂದು ತಿಂಗಳ ಕಾಲ ಬೇಕಂತೆ ಅತ್ತು

ಉದುರಿಸಲು ಕಣ್ಣಿಂದ ಹನಿಮುತ್ತು

ಹೇಗೆ ಕಂಡು ಹಿಡಿದರೋ ಇದನ್ನೆಲ್ಲ

ಪ್ರತಿದಿವಸ ಚೂಟಿದರೇ ಮಗುವಿನ ಗಲ್ಲ

ಎಂದೆಲ್ಲಾ ಯೋಚಿಸಿ ಭಯವಾಗಿ ಕುಡಿದೆ ತಣ್ಣೀರು!

(೬೧)

ಹೇಳುವೆನು ನಾನು ನಿಮಗೊಂದು ರಹಸ್ಯ

ಕೇಳಿ! ಮೂಗಿನ ತುದಿಯ ಮೇಲೆ ಬೆರಳಿಡುವ ವಿಷ್ಯ!

ಇದೆಯಲ್ಲ ನಿಮ್ಮ ಮೂಗು ಅದು ಎಷ್ಟು

ವಾಸನೆಗಳನ್ನು ಹಿಡಿಯಬಲ್ಲದು ಗುರುತು?

ವಿಜ್ಞಾನಿಗಳು ಊಹಿಸಿ ನೀಡಿದ್ದಾರೆ ಉತ್ತರ!

ಅಬ್ಬಬ್ಬಾ ಒಂದು ಟ್ರಿಲಿಯನ್ ಹತ್ತಿರ ಹತ್ತಿರ!

ಅದಕ್ಕೇ ನೋಡಿ ನನ್ನ ಫ್ರೆಂಡ್ ಚಂದ್ರ

ಆಘ್ರಾಣಿಸಿ ಕೇಳುವನು "ದೋಸೆ ಎಸ್ಸೆಲ್ವೀ ಇಂದ ತಂದ್ರಾ?"

ಅಷ್ಟೇ ಅಲ್ಲ ಯಾವ ಎಸ್ಸೆಲ್ವೀ ಉಪಾಹಾರ

ಎಂದೂ ಊಹಿಸಿ ಬಿಡುವುದೇ ಚಮತ್ಕಾರ!

ಯಾವ ಕಾಂಡಿಮೆಂಟ್ ಅಂಗಡಿಯದು ನಿಪ್ಪಟ್ಟು

ಆರ್ಗಾನಿಕ್ ಅಲ್ಲವೋ ಹೌದೋ ರಾಗಿ ಹುರಿಹಿಟ್ಟು

ಸೆನ್ಸರ್ ಉದ್ಯಮದಲ್ಲಿದ್ದಿದ್ರೆ ಇರ್ತಿತ್ತು ಎಂಥಾ ಭವಿಷ್ಯ!


#ವಿಜ್ಞಾನಹಾಸ್ಯ

#ವಿಜ್ಞಾನಹಾಸ್ಯ

#ವಿಜ್ಞಾನಹಾಸ್ಯ

#ವಿಜ್ಞಾನಹಾಸ್ಯ


#ವಿಜ್ಞಾನಹಾಸ್ಯ

#ವಿಜ್ಞಾನಹಾಸ್ಯ

#ವಿಜ್ಞಾನಹಾಸ್ಯ  #ಅರ್ಥಆಯಿತಾ

C.p. Ravikumar 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)