ರೈಲ್ವೆ ಮಕ್ಕಳು
ಮೂಲ: ಸೀಮಸ್ ಹೀನಿ ಅನುವಾದ: ಸಿ. ಪಿ. ರವಿಕುಮಾರ್ ರೈಲು ಹಾದುಹೋಗಲು ಕೊರೆದ ಬೆಟ್ಟದ ದಾರಿಯ ಏರನ್ನು ಏರಿದಾಗ ಯಾವ ಎತ್ತರದಲ್ಲಿದ್ದಿತು ಎಂದರೆ ನಮ್ಮ ಕಣ್ಣು ಹೊಳೆಯುವ ಟೆಲಿಗ್ರಾಫ್ ತಂತಿಗಳ ಮಟ್ಟದಲ್ಲಿತ್ತು ಮತ್ತು ಕಾಣುತ್ತಿತ್ತು ಕಂಬಗಳ ಮೇಲಿದ್ದ ಬಿಳಿ ಪಿಂಗಾಣಿ ಬಟ್ಟಲುಗಳ ಕತ್ತು. ಸುಂದರ ಕೈಬರವಣಿಗೆಯಂತೆ ತಂತಿಗಳು ಹರಡಿಕೊಂಡಿದ್ದವು ಇಕ್ಕೆಡೆ ಮೈಲಿಗಟ್ಟಲೆ ಪೂರ್ವಕ್ಕೆ ಮತ್ತು ಮೈಲಿಗಟ್ಟಲೆ ಪಶ್ಚಿಮಕ್ಕೆ ಬಾಗಿದ್ದವು ಮೇಲೆ ಕುಳಿತಿದ್ದ ಪಕ್ಷಿಗಳ ಭಾರಕ್ಕೆ. ಚಿಕ್ಕವರಾಗಿದ್ದೆವು ನಾವು. ಗೊತ್ತಿರಲು ಲಾಯಕ್ಕಾದ ಏನೂ ನಮಗೆ ಗೊತ್ತಿರಲಿಲ್ಲ ಎಂದೇ ನಂಬಿದ್ದೆವು. ತಂತಿಗಳ ಮೇಲೆ ಕೂಡಿದ ಮುತ್ತಿನ ಮಳೆಹನಿಗಳ ಒಳಗೆ ಸೇರಿ ಚಲಿಸುತ್ತವೆಯೇನೋ ಟೆಲಿಗ್ರಾಂ ಪದಗಳು ಎಂದು ಕಲ್ಪಿಸಿಕೊಂಡಿದ್ದೆವು. ಪ್ರತಿಯೊಂದು ಹನಿಮುತ್ತಿನ ಒಳಗೂ ಸೇರಿಕೊಂಡಿತ್ತು ಆಗಸದ ಬೆಳಕಿನ ಬೀಜ ಮತ್ತು ತಂತಿಯ ಪ್ರಭೆ ಮತ್ತು ಗಾತ್ರದಲ್ಲಿ ತೀರಾ ಕುಗ್ಗಿದ ನಾವು ಎಷ್ಟೆಂದರೆ ನಾವು ತೂರಿಕೊಳ್ಳಬಹುದಾಗಿತ್ತು ಸೂಜಿಯ ಕಣ್ಣಿನಲ್ಲಿ, ಅಷ್ಟು.