ನಮ್ಮ ತರುವಾಯ

 ಮೂಲ : ಕಾನೀ ವಾನೆಕ್  (ಅಮೇರಿಕಾ ಸಂಸ್ಥಾನ)
ಅನುವಾದ : ಸಿ. ಪಿ. ರವಿಕುಮಾರ್





"ಇದು ಆರಂಭದ ಘಟ್ಟದಲ್ಲಿದ್ದೇವೋ ಅಂತ್ಯದ ಘಟ್ಟದಲ್ಲೋ ನಾನರಿಯೆ."
-- ಟೋಮಾಸ್  ಟ್ರಾನ್ಸ್‌ಫಾರ್ಮರ್

ಮಳೆ ಬೀಳತೊಡಗಿದೆ ಸೂರಿನ ಮೂಲಕ.
ನೇಸರಿನ ಕೆಳಗೆ ಬೆಳೆದು ತೊಳಗಿದ ಪ್ರತಿಯೊಂದರ ಮೂಲಕ,
ಬೆಳಗ್ಗೆ ತೆರೆದು, ಇರುಳು ಮುಚ್ಚಿ,
ಇಡೀ ದಿವಸ ತಮ್ಮ ಪುಟಗಳನ್ನು ಬೆಳಕಿಗೆ ಒಡ್ಡಿದ ಪುಸ್ತಕಗಳು,

ನೌಕೆಗಳ ಚಿತ್ರಗಳು,
ಅಲ್ಲಿ ಬಲಿಷ್ಠ ತೋಳುಗಳು,
ಜಾಣ್ಮೆಯಿಂದ ಹೊಳೆವ ಮುಖಗಳು,
ಹೊಲಗಳು, ಕೊಟ್ಟಿಗೆಗಳು,
ಮೊಟ್ಟೆಗಳನ್ನು ತುಂಬಿಸಿಟ್ಟ ಬುಟ್ಟಿ,
ಪಿಯಾನೋ ಬಳಿ ಬಿದ್ದಿರುವ ಬೆಳ್ಳಿಯ ಕೊಳಲು,

ಕಲ್ಪಿಸಿಕೊಂಡದ್ದು, ಕಂಡುಹಿಡಿದದ್ದು ಎಲ್ಲವನ್ನೂ
ಪಿಸುಗುಟ್ಟಿದ್ದು, ಹಾಡಿದ ಪ್ರತಿಯೊಂದನ್ನೂ
ನಿಶಬ್ದಗೊಳಿಸಿದೆ  ಕೊರೆಯುವ ಮಳೆ. 

ಸಮಾಧಿಯ ಕಲ್ಲುಗಳ ಬಣ್ಣ ತೊಟ್ಟಿದೆ ಆಗಸ,
ಬೀಳುವ ಮಳೆಗೆ ಉಪ್ಪಿನ ರುಚಿಯಿದೆ,
ಮೇಲೇಳುತ್ತಿದೆ ಬೀದಿಗಳಲ್ಲಿ ವಿನಾಶಕ ಹೆದ್ದೆರೆಯಂತೆ.
ಲಕ್ಷ, ಕೋಟಿ ವರ್ಷಗಳ ಮಾತಾಡುತ್ತಿದ್ದೆವಲ್ಲವೇ ನಾವು,
ಮಾತಾಡಿ ಆಡಿ ಇನ್ನಷ್ಟು ಆಡಿದೆವು.

ಅನಂತರ ಬಿತ್ತು ಒಂದು ಹನಿ
ಗಿಟಾರ್ ಶಬ್ದರಂಧ್ರದೊಳಗೆ,
ನಂತರ ಮತ್ತೊಂದು
ಇನ್ನೂ ಸರಿಪಡಿಸದ ಹಾಸಿಗೆಯ ಮೇಲೆ. 
ನಮ್ಮ ತರುವಾಯ ಮಳೆ ನಿಲ್ಲಬಹುದು ಅಥವಾ
ಬೀಳುತ್ತಲೇ ಇರಬಹುದು
ಸ್ವಯಂ ತನ್ನ ಮೇಲೆ ಕೂಡಾ.



ಕವಿತೆಯ ಸ್ವಾರಸ್ಯ: ಪ್ರಳಯದ ದೃಶ್ಯವನ್ನು ಈ ಕವಯಿತ್ರಿ ಚಿತ್ರಿಸುತ್ತಿದ್ದಾರೆ. ಈಕೆ ಉದ್ಧರಿಸುವ ಟೊಮಾಸ್ ಟ್ರಾನ್ಸ್‌ಫಾರ್ಮರ್ ಒಬ್ಬ ಸ್ವೀಡಿಷ್ ಕವಿ. ಅವನು ಸ್ವೀಡನ್ನಿನ ದೀರ್ಘ ಚಳಿಗಾಲದ ಮೇಲೆ ಪದ್ಯಗಳನ್ನು ರಚಿಸಿದ್ದಾನೆ.  ಅಯ್ಯೋ ಪ್ರಳಯವಾಗಲು ಇನ್ನೂ ತುಂಬಾ ದಿವಸಗಳಿವೆ, ಸೂರ್ಯನ ಬೆಳಕು ನಂದಿಹೋಗಲು ಇನ್ನೂ ಕೋಟ್ಯಂತರ ವರ್ಷಗಳಿವೆ ಎಂದು ನಾವು ಹೇಳುತ್ತಲೇ ಇರುತ್ತೇವೆ. ಆದರೆ ಆ ಕೊನೆಯ ದಿನ ಬಂದೇ ಬಿಟ್ಟಾಗ ಮಳೆ ಪ್ರಾರಂಭವಾಗಿದೆ. "ಮಾತಾಡಿ ಆಡಿ  ಇನ್ನಷ್ಟು ಆಡಿದೆವು" ಎಂಬುದರ ಸ್ವಾರಸ್ಯವೇನು? ಇಲ್ಲಿ ಕವಯಿತ್ರಿ ಆಡುತ್ತಿರುವುದು ಜಗತ್ತು ಮುಳುಗುವ ಪ್ರಳಯದ ಕುರಿತೋ ಅಥವಾ ನಮ್ಮ ಮೂರ್ಖತನದಿಂದ ನಾವು ತಂದುಕೊಂಡ ಅಂತ್ಯವನ್ನು ಕುರಿತೋ? ಜಗತ್ತಿನಲ್ಲಿ ಹಿಂಸೆ/ಭಯೋತ್ಪಾದಕತೆ ಹರಡಲು ಮಾತೇ ಕಾರಣ ಎನ್ನುವುದನ್ನು ಕುರಿತು ಯೋಚಿಸಿ.  ಮೊದಲ ಹನಿ  ಗಿಟಾರ್ ಶಬ್ದರಂಧ್ರದಲ್ಲೇ ಯಾಕೆ ಬೀಳುತ್ತದೆ? ಇಂಥದ್ದರ ಸಂಭವನೀಯತೆ ಎಷ್ಟು? ಇಂಥದ್ದು ಅಸಂಭವ ಎಂದುಕೊಂಡು ನಾವು ಮಾತಾಡುತ್ತಿರುತ್ತೇವೆ. ಆದರೆ ಅದು ಒಂದುದಿನ ಸಂಭವವಾಗಿಬಿಡಬಹುದು.  ಮಳೆ ಪ್ರಾರಂಭವಾದಾಗ ಸುತ್ತಲೂ ಇರುವ ಎಲ್ಲವೂ ಮುಳುಗತೊಡಗುತ್ತವೆ. ಫಲವಂತಿಕೆಯ ಸಂಕೇತಗಳಾದ ಹೊಲ ಕೊಟ್ಟಿಗೆ, ಮೊಟ್ಟೆಯ ಬುಟ್ಟಿ. ನೌಕೆಯನ್ನು ನಡೆಸುವ ಬಲಿಷ್ಠ ತೋಳುಗಳ ಚಿತ್ರ ಕೂಡಾ ಮುಳುಗುತ್ತಿದೆ. ಇದರ ಸ್ವಾರಸ್ಯ ಏನಿರಬಹುದು? ಹಿಂದೊಮ್ಮೆ ಪ್ರಳಯವಾದಾಗ ನೋವಾ ಒಂದು ದೋಣಿಯಲ್ಲಿ ಜೀವರಾಶಿಗಳನ್ನು ಪಾರುಮಾಡಿದ ಕಥೆಯನ್ನು ನೆನೆಸಿಕೊಳ್ಳಿ.  ಮನುಷ್ಯನು "ಕಲ್ಪಿಸಿಕೊಂಡ, ಕಂಡುಹಿಡಿದ ಎಲ್ಲವೂ" ಪ್ರಳಯದಲ್ಲಿ ಮುಳುಗುತ್ತಿವೆ. ನಮ್ಮ ತರುವಾಯ ಉಳಿಯುವುದು ಏನು? ಎಲ್ಲವನ್ನೂ ವಿನಾಶಗೊಳಿಸುವ ಮಳೆ ಮಾತ್ರ ಎನ್ನುವುದು ಕವಯಿತ್ರಿಯ ಉತ್ತರ. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)