“ಪತ್ರ” (ಸಣ್ಣಕತೆ)

“ಪತ್ರ”

ಮೂಲ ಗುಜರಾತಿ ಕಥೆ - ಧೂಮಕೇತು

ಕನ್ನಡಕ್ಕೆ – ಸಿ. ಪಿ. ರವಿಕುಮಾರ್


ಆಕಾಶ ಶುಭ್ರವಾಗಿತ್ತು; ತಾರೆಗಳು ಬೆಳಗುತ್ತಿದ್ದವು. ಇರುಳು ಹಿಂದೆ ಜರುಗುತ್ತಾ ನಸುಕಿಗೆ ಸ್ಥಳ ಮಾಡಿಕೊಡುತ್ತಿತ್ತು.  ಸಾಯುವ ಮುನ್ನ ಒಬ್ಬ ಮನುಷ್ಯ ಹೇಗೆ ತನ್ನ ಸೌಖ್ಯದ ದಿನಗಳನ್ನು ನೆನೆಸಿಕೊಂಡು ಒಂದಷ್ಟು ಸಮಾಧಾನ ತಂದುಕೊಳ್ಳುತ್ತಾನೋ, ಹೇಗೆ ಮರಣೋನ್ಮುಖನಾದ ಮನುಷ್ಯನ ಮುಖದ ಮೇಲೆ ಕಂಡೂ ಕಾಣದಂತೆ ಮುಗುಳ್ನಗುವೊಂದು ಮೂಡಿ ಮಾಯವಾಗುತ್ತದೋ, ಇನ್ನೇನು ಬರಲಿರುವ ಸೂರ್ಯನ ರಶ್ಮಿಗಳ ಆಗಮನದಿಂದ ಮಾಯವಾಗಿಹೋಗುವ ಮುನ್ನ ತಾರೆಗಳು ಅದೇ ರೀತಿಯಲ್ಲಿ ಮುಗುಳ್ನಗು ಸೂಸುತ್ತಿದ್ದವು.  ಅದೊಂದು ಚಳಿಗಾಲದ ನಸುಕು. ಬೀಸುತ್ತಿದ್ದ ಕುಳಿರ್ಗಾಳಿ ನಡುಕ ಹುಟ್ಟಿಸುವಂತಿತ್ತು.  ಕೆಲವು ಮನೆಗಳಲ್ಲಿ ಬೆಳಗಿನ ಕೆಲಸಗಳು ಈಗಾಗಲೇ ಪ್ರಾರಂಭವಾಗಿದ್ದವು. ಹೆಂಗಸರು ಬೀಸುವ ಕಲ್ಲು ತಿರುಗಿಸುತ್ತಾ ಹಾಡಿಕೊಳ್ಳುವ ಸದ್ದು ಕೇಳುತ್ತಿತ್ತು. ವಯಸ್ಸಾದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಒಂಟಿಯಾಗಿ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ನಡೆದುಹೋಗುತ್ತಿದ್ದ.  ಚಳಿಗಾಳಿಯನ್ನು ಎದುರಿಸಲು ಹಳೆಯ ಬಟ್ಟೆಯನ್ನು ಮೈಗೆ ಸುತ್ತಿಕೊಂಡಿದ್ದ.  ಎಲ್ಲೆಲ್ಲೂ ಗಾಢವಾದ ಮೌನ ಮುಸುಕಿಕೊಂಡಿತ್ತು. ನಡುವೆ ಎಲ್ಲೋ ಒಂದು ನಾಯಿ ಬೊಗಳಿದ ಸದ್ದು, ಕೆಲಸಕ್ಕೆ ಹೊರಟ ಹೆಂಗಸರು ಮಾತಾಡಿಕೊಂಡ ಸದ್ದು, ಅಥವಾ ತಮ್ಮ ಗೂಡುಗಳಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿಗಳ ಸದ್ದು ಒಮ್ಮೆಲೇ ಕೇಳಿ ಆನಂತರ ಮತ್ತೆ ನಿಶಬ್ದವು ಮನೆಮಾಡಿಕೊಳ್ಳುವುದು.  ಚಳಿಗೆ ಮರಗಟ್ಟಿದವರಂತೆ ಜನ ಇನ್ನೂ ಮಲಗಿದ್ದರು. ಚಳಿಯ ಮಾಯೆಯು ಕೇಡಿಗನು ತನ್ನ ಬಲಿಪಶುವಿನತ್ತ ಬೀರುವ ಮೋಸದ ನಗುವಿನಂತಿತ್ತು. ಆದರೆ ಇದಾವುದರಿಂದಲೂ ವಿಚಲಿತನಾಗದೇ ಆ ವಯಸ್ಸಾದ ವ್ಯಕ್ತಿ ನಡೆಯುತ್ತಾ ಊರಿನ ಬಾಗಿಲಿನಿಂದ ಹೊರಕ್ಕೆ ಬಂದ. ಅವನಿಗೆ ನಡೆಯಲು ಕಷ್ಟವಾಗುತ್ತಿತ್ತು ಎಂದು ಅವನನ್ನು ನೋಡಿದರೆ ಗೊತ್ತಾಗುತ್ತಿತ್ತು.  ಅವನ ನಡೆಗೋಲು ಅವನ ಏಕಮಾತ್ರ ಸಂಗಾತಿಯಾಗಿತ್ತು.

ದಾರಿಯ ಎರಡೂ ಕಡೆಗೆ ಮರಗಳು ಮತ್ತು ಸಾರ್ವಜನಿಕ ಉಪವನಗಳಿದ್ದವು. ಈಗ ಆಗಸವು ಇನ್ನಷ್ಟು ಕಪ್ಪಾದಂತೆ ತೋರಿತು. ಮುದುಕನ ಸುಕ್ಕುಗಟ್ಟಿದ ಚರ್ಮವನ್ನು ಕುಳಿರ್ಗಾಳಿಯು ಕಚ್ಚಿತು. ಉಪವನದ ತುದಿಯಲ್ಲಿ ಒಂದು ಅಷ್ಟೇನೂ ಹಳೆಯದಲ್ಲದ ಕಟ್ಟಡವಿತ್ತು. ಅದರ ಬಾಗಿಲು-ಕಿಟಕಿಗಳ ಸಂದುಗಳಿಂದ ಬೆಳಕು ಹಾದು ಬರುತ್ತಿತ್ತು. 

ಕಟ್ಟಡದ ಮುಂದಿದ್ದ ಮರದ ಕಮಾನನ್ನು ಕಂಡ ಕೂಡಲೇ ಮುದುಕನ ಕಣ್ಣುಗಳು ಮಿಂಚಿದವು. ಕಟ್ಟಡದ ಮುಂದೆ “ಪೋಸ್ಟ್ ಆಫೀಸ್” ಎಂಬ ನಾಮಫಲಕ ತೂಗುಹಾಕಲಾಗಿತ್ತು. ಅವನು ಕಟ್ಟಡದ ಮುಂದಿದ್ದ ವೆರಾಂಡದಲ್ಲಿ ಹೋಗಿ ಕುಳಿತ. ಒಳಗೆ ಕೆಲವು ಮಂದಿ ಕೆಲಸ ಮಾಡುತ್ತಿದ್ದರು. ಅವರ ಅಸ್ಪಷ್ಟ ಧ್ವನಿಗಳು ಅವನಿಗೆ ಕೇಳಿಸಿದವು. 

ಯಾರೋ “ಪೋಲಿಸ್ ಸೂಪರಿಂಟೆಂಡೆಟ್” ಎಂದು ಕೂಗಿದ್ದು ಕೇಳಿಸಿತು. ಅವನು ಧಡಪಡಿಸಿ ಮೇಲೇಳಲು ಪ್ರಯತ್ನಿಸಿದರೂ ಆಗದೆ ಹಿಂದಕ್ಕೊರಗಿದ.  ಮುಪ್ಪು ಅವನನ್ನು ಇಡಿಯಾಗಿ ನುಂಗದಿದ್ದರೂ ಸಾಕಷ್ಟು ಶಿಥಿಲಗೊಳಿಸಿತ್ತು. ಅವನ ನಂಬಿಕೆ ಮತ್ತು ಆಸೆಗಳು ಮೆಲ್ಲನೆ ಮುಂದಡಿಯಿಡುತ್ತಿದ್ದ ಮತಿಭ್ರಮಣೆಗೆ ಅಡ್ಡವಾಗಿ ನಿಂತಿದ್ದವು.

ಕಟ್ಟಡದ ಒಳಗಿದ್ದ ಮನುಷ್ಯ ವಿಳಾಸಗಳನ್ನು ಗಟ್ಟಿಯಾಗಿ ಓದುತ್ತಾ ಅಂಚೆಪೇದೆಯ ಕೈಗೆ ಪತ್ರಗಳನ್ನು ಹಂಚುತ್ತಿದ್ದ.  ಕಲೆಕ್ಟರ್, ಪೋಲಿಸ್ ಸೂಪರಿಂಟೆಂಡೆಂಟ್, ದಿವಾನ್ ಸಾಹೇಬ್, ಗ್ರಂಥಪಾಲಕರು – ಇವರೆಲ್ಲರಿಗೂ ಪತ್ರಗಳು ಬಂದಿದ್ದವು.

ಹೆಸರುಗಳನ್ನು ಗಟ್ಟಿಯಾಗಿ ಓದಿ ಹೇಳುವಾಗ ನಡುವೆ ಯಾರೋ “ಗಾಡೀವಾನ್ ಅಲಿ” ಎಂದು ಕರೆದಂತಾಯಿತು. ಇದನ್ನು ಕೇಳಿದವನೇ ಅವನು ಧಡಕ್ಕನೇ ಮೇಲೆದ್ದ.  ದೇವರಿಗೆ ಕೃತಜ್ಞತೆ ಅರ್ಪಿಸುತ್ತಾ ಅವನು ಬಾಗಿ ವಂದಿಸಿದ. ನಂತರ ಕಾತರದಿಂದ ಮುಂದೆ ಹೆಜ್ಜೆಯಿಟ್ಟ.

ಗೋಕುಲ್ ಭಾಯಿ!” ಎಂದು ಉದ್ಗರಿಸಿದ.

ಗೋಕುಲ್ ಭಾಯಿಗೆ ಇವನು ಯಾರೆಂಬ ಕುತೂಹಲ.

ಅಲಿ ತನ್ನ ಪತ್ರಕ್ಕಾಗಿ ಕೈ ಮುಂದೆ ಚಾಚಿದ.

“ಈತ ಪ್ರತಿದಿನ ತನಗೆ ಪತ್ರ ಬಂದಿದೆಯೇ ಅಂತ ಬಂದು ಕೇಳುತ್ತಾನೆ, ಅದು ಬರುವುದಿಲ್ಲ, ಇವನು ಬಿಡುವುದಿಲ್ಲ,” ಎಂದು ಒಬ್ಬ ಕಾರಕೂನ ಪೋಸ್ಟ್ ಮಾಸ್ಟರಿಗೆ ಹೇಳುತ್ತಿದ್ದ.

ಮತ್ತೊಮ್ಮೆ ಅತೀವ ನಿರಾಸೆಯಿಂದ ಮುದುಕ ಬೆಂಚಿಗೆ ಹಿಂದುರಿಗಿದ. ಐದು ವರ್ಷಗಳಿಂದ ಇದು ಅವನ ನಿತ್ಯಚರ್ಯೆಯಾಗಿಹೋಗಿತ್ತು.

ತನ್ನ ಯೌವ್ವನದಲ್ಲಿ ಅಲಿ ಒಬ್ಬ ನುರಿತ ಶಿಕಾರನಾಗಿದ್ದ. ಈ ಕಲೆ ಕರಗತವಾಗತೊಡಗಿದಂತೆ ಶಿಕಾರಿ ಒಂದು  ವ್ಯಸನವಾಗಿ ಮಾರ್ಪಟ್ಟಿತು.  ಮಿಕವನ್ನು ಪತ್ತೆಹಚ್ಚಿ ಅದನ್ನು ಗುರಿಯಿಟ್ಟು ಕೊಲ್ಲುತ್ತಿದ್ದ. ಗೆಳೆಯರೊಂದಿಗೆ ಕೆರೆಗೆ ತೆರಳಿ ಮೀನು ಹಿಡಿಯುವುದು ಅವನ ಇನ್ನೊಂದು ಶೋಕಿಯಾಗಿತ್ತು.

ವಯಸ್ಸಾಗತೊಡಗಿದಂತೆ ಅವನ ಗುರಿ ತಪ್ಪತೊಡಗಿತು. ಅವನು ಬೇಟೆಯಾಡುವುದನ್ನು ನಿಲ್ಲಿಸಿದ. ಇದಾದ ಮೇಲೆ ಅವನಿಗೆ ಒಂದು ದೊಡ್ಡ ಆಘಾತ ಕಾದಿತ್ತು. ಅವನ ಒಬ್ಬಳೇ ಮಗಳು ಮಿರಿಯಂನ ಮದುವೆ ಒಬ್ಬ ಸೈನಿಕನೊಂದಿಗೆ ನಡೆದು ಅವಳು ತನ್ನ ಗಂಡನೊಂದಿಗೆ ಬೇರೆ ಊರಿಗೆ ಹೊರಟು ನಿಂತಳು.  ಇಂಥ ದಿನವೊಂದು ಬರುತ್ತದೆಂದು ಅವನಿಗೆ ಗೊತ್ತಿದ್ದರೂ ಅವನು ಅಗಲುವಿಕೆಗೆ ಸಿದ್ಧನಾಗಿರಲಿಲ್ಲ.
ಬೇಟೆಗಾರನ ನಿಷ್ಕಾರುಣ್ಯವು ಈಗ ಕರಗಿ ಮಾಯವಾಗಿತ್ತು. ಮಿರಿಯಂ ಮನೆಬಿಟ್ಟು ಹೋದದ್ದು ಅವನನ್ನು ಅಲ್ಲಾಡಿಸಿಬಿಟ್ಟಿತು. ಅವನು ಹಸಿರು ಹೊಲಗಳತ್ತ ನೋಡುತ್ತಾ ಕುಳಿತುಬಿಡುತ್ತಿದ್ದ. ತನ್ನ ಸ್ಥಿತಿಯನ್ನು ಕುರಿತು ಅವನು ಆಳವಾಗಿ ಯೋಚಿಸಿದ. ಜಗತ್ತನ್ನು ಪ್ರೇಮವೇ ಬಂಧಿಸಿದೆ ಎಂಬ ನಿರ್ಣಯಕ್ಕೆ ಅವನು ತಲುಪಿದ. ಮಿಲನ ಮತ್ತು ಅಗಲುವಿಕೆ ಇವೆರಡೂ ಜಗತ್ತಿನ ಪರಿಪಾಠಗಳೇ ಎಂದು ಅವನು ಅಂದುಕೊಂಡ. ಆದರೆ ಮಗಳು ಮಿರಿಯಂಳನ್ನು ಬಿಟ್ಟಿರುವುದು ಅವನಿಗೆ ಅಸಾಧ್ಯವಾಯಿತು. ಅವನು ಅದೆಷ್ಟೋ ಸಲ ಮರದ ಕೆಳಗೆ ಕುಳಿತು ಅತ್ತು ತನ್ನ ಎದೆಯನ್ನು  ಹಗುರ ಮಾಡಿಕೊಂಡ.  ಮಿರಿಯಂ ತನಗೆ ಒಂದು ಪತ್ರವನ್ನಾದರೂ ಬರೆದಾಳು ಎಂಬ ಆಸೆಯಿಂದ ಪ್ರತಿದಿನ ಬೆಳಕಾಗುವ ಮುನ್ನವೇ ಅಂಚೆ ಕಚೇರಿಗೆ ಹೋಗಿಬರುವುದು ಅವನ ದಿನಚರಿಯಾಯಿತು.  ಪತ್ರ ಬಾರದಿದ್ದರೂ ಅವನ ಭರವಸೆ ಮಾತ್ರ ಕುಗ್ಗಲಿಲ್ಲ.

ಅನಾಕರ್ಷಕವಾದ ಅಂಚೆಕಚೇರಿ ಕಟ್ಟಡವು ಅವನನ್ನು ಪ್ರತಿದಿನ ತನ್ನತ್ತ ಸೆಳೆಯುತ್ತಿತ್ತು. ಪ್ರತಿದಿನ ಅವನು ವೆರಾಂಡದಲ್ಲಿ ಅದೇ ಬೆಂಚಿನ ಮೇಲೆ ಅದೇ ಸ್ಥಾನದಲ್ಲಿ ಕುಳಿತುಕೊಳ್ಳುತ್ತಿದ್ದ. ಅವನ ಈ ನಿತ್ಯಚರ್ಯೆಯು ಅನೇಕ ಹೃದಯಹೀನ ಆಪಹಾಸ್ಯಕ್ಕೂ  ಎಡೆಮಾಡಿಕೊಟ್ಟಿತು. ಕೆಲವು ಸಲ ಅಂಚೆಕಚೇರಿಯ ಕೆಲಸಗಾರರು ಕೀಟಲೆಗೆಂದು ಅವನ ಹೆಸರನ್ನು ಕರೆಯುತ್ತಿದ್ದರು. ಅವನು ಎಲ್ಲಿಲ್ಲದ ದುಗುಡದಿಂದ ಕಚೇರಿಯ ಕಿಟಕಿಯತ್ತ ಧಾವಿಸುತ್ತಿದ್ದ. ಅಲ್ಲಿ ಹೋದಾಗ “ಇಲ್ಲ, ಯಾವ ಪತ್ರವೂ ಇಲ್ಲ,” ಎಂದು ಅವನನ್ನು ಅಟ್ಟುತ್ತಿದ್ದರು. ಅತೀವ ನಿರಾಸೆಯಾದರೂ ಅವನು ಮರುದಿನ ಅಷ್ಟೇ ಭರವಸೆಯೊಂದಿಗೆ  ವಾಪಸಾಗುತ್ತಿದ್ದ.
 
ಕಚೇರಿಯ ಕೆಲಸಗಾರರು ಬೇರೆ ಬೇರೆ ಕಚೇರಿಗಳಿಂದ ಬಂದು ತಮ್ಮ ಪಾಲಿನ ಅಂಚೆಯನ್ನು ಕೊಂಡೊಯ್ಯುವುದನ್ನು ಅಲಿ ಗಮನಿಸುತ್ತಿದ್ದ.  ಅವರು ತಮ್ಮತಮ್ಮ ಪೋಸ್ಟ್ ಮಾಸ್ಟರರನ್ನು ಕುರಿತು ಕೆಟ್ಟದಾಗಿ ಮಾತಾಡುತ್ತಾ ಹರಟೆ ಕೊಚ್ಚುತ್ತಿದ್ದರು.  ತಮ್ಮ ಶುಭ್ರವಾದ ಬಿಳಿ ಉಡುಪು ಮತ್ತು ತಲೆಯ ಮೇಲೆ ಸುತ್ತಿದ ಪೇಟದ ಕಾರಣ ಅವರನ್ನು ಕಂಡರೆ ಸ್ವಲ್ಪ ದಿಗಿಲಾಗುತ್ತಿತ್ತು.   ಪೋಸ್ಟ್ ಮಾಸ್ಟರ್ ಮಹಾಶಯ ಮಹಾದ್ಗಾಂಭೀರ್ಯದಿಂದ ಒಳಗೆ ಕುಳಿತಿದ್ದ. ಆತನ ಮುಖ ನಿರ್ಭಾವವಾಗಿತ್ತು. ಒಮ್ಮೆಯಾದರೂ ಅವನು ಮುಗುಳ್ನಕ್ಕಿದ್ದು ಕಾಣಲಿಲ್ಲ. 

ಆ ದಿನವೂ ಬೇರೆ ದಿನಗಳಿಗಿಂತ ವಿಭಿನ್ನವಾಗೇನೂ ಇರಲಿಲ್ಲ. ಪೋಸ್ಟ್ ಮಾಸ್ಟರ್ ತನ್ನ ಸೀಟಿನ ಮೇಲೆ ಅಂಟಿಕೊಂಡಂತೆ ಕೂತಿದ್ದ.

“ಪೋಲೀಸ್ ಕಮಿಷನರ್!” ಎಂದು ಕೂಗಿದಾಗ ಒಬ್ಬ ಮನುಷ್ಯ ಮೇಲೆದ್ದು ಪತ್ರಗಳನ್ನು ಪಡೆದುಕೊಳ್ಳಲು ಮುಂದಾದ.

“ಸೂಪರಿಂಟೆಂಡೆಂಟ್!” ಎಂಬ ಕರೆ ಬಂತು. ಇನ್ನೊಬ್ಬ ಮನುಷ್ಯ ಮುಂದೆ ಬಂದು ಪತ್ರಗಳನ್ನು ಪಡೆದ. ಇದೇ ರೀತಿ ಪತ್ರಗಳನ್ನು ಪಡೆದುಕೊಳ್ಳುವವರ ದೊಡ್ಡ ಪಟ್ಟಿಯೇ ಇತ್ತು.

ಎಲ್ಲರ ಸರದಿ ಮುಗಿದ ನಂತರ ಅಲಿ ಎದ್ದು ನಿಂತು ಅಂಚೆ ಕಚೇರಿಗೊಂದು ಸಲಾಂ ಹೊಡೆದು ಮನೆಗೆ ವಾಪಸಾದ. ಅವನು ವಾಸ್ತವವನ್ನು ನೋಡಿಯೂ ಒಪ್ಪಿಕೊಳ್ಳದವರ ಗುಂಪಿಗೆ ಸೇರಿದವನು.

ಒಮ್ಮೆ ಪೋಸ್ಟ್ ಮಾಸ್ಟರಿಗೆ ಇವನೊಬ್ಬ ಹುಚ್ಚನೇ ಎಂಬ ಅನುಮಾನ ಬಂದಿತ್ತು. 

ಒಬ್ಬ ಕಾರಕೂನ  ಪೋಸ್ಟ್ ಮಾಸ್ಟರಿಗೆ ಹೀಗೊಬ್ಬ ಮುದುಕ ಬಾರದ ಪತ್ರಕ್ಕಾಗಿ ಐದು ವರ್ಷಗಳಿಂದ ತಪ್ಪದೆ ಬಂದು ಹೋಗುತ್ತಾನೆ ಎಂದು ವಿವರಿಸಿದ.

ಪೋಸ್ಟ್ ಮಾಸ್ಟರ್ “ನಿತ್ಯ ಪತ್ರ ಬರೆಯಲು ಯಾರಿಗೆ ಸಮಯವಿದೆ?” ಎಂದು ಉತ್ತರವಿತ್ತರು.

“ಯೌವ್ವನ ಇದ್ದಾಗ ಇವನು ಅದೆಷ್ಟು ಪ್ರಾಣಿಗಳನ್ನು ಕೊಂದು ರಕ್ತ ಹರಿಸಿದ್ದಾನೋ! ಆ ಪಾಪ ಸುತ್ತಿಕೊಳ್ಳದೇ ಇರುತ್ತದೆಯೇ? ಈಗ ಅದರ ಫಲ ಅನುಭೋಗಿಸುತ್ತಾ ಇದಾನೆ.”

“ಅಯ್ಯೋ, ತಲೆ ಕೆಟ್ಟವರು ಹೀಗೇ – ವಿಚಿತ್ರವಾಗಿ ಆಡುತ್ತಿರುತ್ತಾರೆ,” ಎಂದು ಪೋಸ್ಟ್ ಮಾಸ್ಟರ್ ನಿರ್ವಿಕಾರವಾಗಿ ಹೇಳಿದರು.

ಇದಾದ ನಂತರ ಹುಚ್ಚರ ಬಗ್ಗೆ ಚರ್ಚೆ ನಡೆಯಿತು. ಎಲ್ಲರೂ ತಮಗೆ ಗೊತ್ತಿದ್ದ ಮನೋವಿಕಲರ ಕತೆಗಳನ್ನು ಹೇಳಿದರು.  ಇಡೀ ದಿನ ಮಣ್ಣಿನ ಗೋಪುರಗಳನ್ನು ಮಾಡುವುದರಲ್ಲೇ ಮಗ್ನನಾದವನ ಕತೆ, ನದಿಯ ತೀರದಲ್ಲಿ ಕುಳಿತು ನೀರು ಮೊಗೆಯುತ್ತಾ ಒಂದು ಕಲ್ಲಿನ ಮೇಲೆ ಅಭಿಷೇಕ ಮಾಡುತ್ತಾ ಕಾಲ ಕಳೆಯುವವನ ಕತೆ, ಮೆಟ್ಟಿಲು ಹತ್ತಿ ಇಳಿಯುವುದನ್ನೇ   ಕಾಯಕ ಮಾಡಿಕೊಂಡವನ ಕತೆ, ಸದಾ ಹಾಡಿಕೊಳ್ಳುತ್ತಿದ್ದವನ ಕತೆ, ತನ್ನ ಕಪಾಳಕ್ಕೆ ತಾನೇ ಹೊಡೆದುಕೊಂಡು ಅಳುತ್ತಿದ್ದವನ ಕತೆ.

ಮನೋರೋಗಗಳ ಚರ್ಚೆಯಲ್ಲಿ ಕಚೇರಿ ಮುಳುಗಿತು. ಕಚೇರಿಗಳಲ್ಲಿ ದುಡಿಯುವವರಿಗೆ ತಮ್ಮ ಏಕತಾನತೆಯನ್ನು ಮುರಿಯಲು ಹೀಗೊಂದು ಕಾರಣ ಸಿಕ್ಕಿದರೆ ಸಾಕು.  ಪೋಸ್ಟ್ ಮಾಸ್ಟರಿಗೆ ಈ ವಿಷಯದಲ್ಲಿ ತನ್ನದೇ ನಿಲುವಿತ್ತು.  “ಹುಚ್ಚರು ತಮ್ಮದೇ ಜಗತ್ತಿನಲ್ಲಿ ಬದುಕುತ್ತಾರೆ. ಅವರಿಗೆ ತಲೆ ನೆಟ್ಟಗಿರುವವರೇ ಹುಚ್ಚರಂತೆ ಕಾಣುತ್ತಾರೆ. ಕವಿಗಳು ಹೇಗೆ ತಮ್ಮದೇ ಜಗತ್ತಿನಲ್ಲಿ ಕಳೆದುಹೋಗಿರುತ್ತಾರೋ ಹುಚ್ಚರೂ ಹಾಗೇ!” ಎಂದು ಜೋರಾಗಿ ನಕ್ಕರು.

ಹಠಾತ್ತನೆ ಒಂದು ದಿನ ಅಲಿ ಅಂಚೆಕಚೇರಿಗೆ ಬರುವುದು ನಿಂತುಹೋಯಿತು. ಅಂಚೆಕಚೇರಿಯಲ್ಲಿ ಬಹಳಷ್ಟು ಜನ ಇದನ್ನು ಗಮನಿಸಲಿಲ್ಲ. ಕೆಲವರು ಮಾತ್ರ ಯೋಚನೆಗೀಡಾದರು. ಹಲವಾರು ದಿನಗಳ ತರುವಾಯ ಅವನು ಕೊನೆಗೂ ಏದುಬ್ಬುಸ ಪಡುತ್ತಾ ಹಾಜರಾದ.  ತೀರಾ ಸುಸ್ತಾದ ಹಾಗೆ ಕಂಡ. ಅಂದು ಅವನನ್ನು ಅದಾವುದೋ ಅತೀವವಾದ ತುರ್ತು ಕಾಡುತ್ತಿದ್ದಂತೆ ತೋರಿತು. ಅವನು ಪೋಸ್ಟ್ ಮಾಸ್ಟರ್ ಬಳಿಗೆ ನೇರವಾಗಿ ಹೋಗಿ ತನಗೆ ಮಿರಿಯಂ ಬರೆದ ಪತ್ರ ಬಂದಿದೆಯೇ ಎಂದು ಕೇಳಿದ.

ಪೋಸ್ಟ್ ಮಾಸ್ಟರ್ ಹೊರಡುವ ತರಾತುರಿಯಲ್ಲಿದ್ದರು. ಇವನ ಪ್ರಶ್ನೆಯಿಂದ ಅವರಿಗೆ ಇರುಸುಮುರುಸಾಯಿತು.  “ಏನಯ್ಯಾ, ಮಿರಿಯಂ ಯಾವ ದೊಡ್ಡ ಮನುಷ್ಯಳು? ಅವಳ ಹೆಸರು ನಮ್ಮ ಅಂಚೆಕಚೇರಿಯಲ್ಲಿ ರಿಜಿಸ್ಟರ್ ಆಗಿದೆಯೇ?” ಎಂದರು.

ಸಾಹೇಬರೇ, ಅವಳ ಹೆಸರನ್ನು ಬರಕೊಳ್ಳಿ. ಅವಳ ಪತ್ರ ಬಂದರೆ ನನಗೆ ತಲುಪಿಸಿ. ನನ್ನ ಆರೋಗ್ಯ ನೆಟ್ಟಗಿಲ್ಲ. ನನ್ನದೇನು  ಖೈರಿಯತ್ತು?”

ಪೋಸ್ಟ್ ಮಾಸ್ಟರರ ಸೈರಣೆ ಮೀರಿತು. ಅವರು ದೊಡ್ಡ ಧ್ವನಿಯಲ್ಲಿ ಅಲಿಗೆ ಬೈದುಬಿಟ್ಟರು.

“ಹೋಗಯ್ಯಾ ಆಚೆಗೆ! ನಮಗೆ ಪತ್ರ ಬಂದರೆ ನಾವೇನು ತಿಂದು ಹಾಕುತ್ತೇವೆಯೇ?” ಎನ್ನುತ್ತಾ ಅವರು ದಾಪುಗಾಲು ಹಾಕುತ್ತಾ ಹೊರಟುಬಿಟ್ಟರು.

ಅಲಿಗೆ ಈ ಆಘಾತದಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಯಿತು. ಅವನ ಭರವಸೆಯ ಎಳೆ ಈಗ ತೀರಾ ಶಿಥಿಲವಾಗಿತ್ತು. ಆದರೆ ತುಂಡಾಗಿರಲಿಲ್ಲ.

ಹಿಂದಿನಿಂದ ಯಾರದೋ ಹೆಜ್ಜೆಗಳ ಸಪ್ಪಳ ಕೇಳಿಸಿತು. ಅಲಿ ಹಿಂದಕ್ಕೆ ತಿರುಗಿದ. ಅತ್ತ ಬರುತ್ತಿದ್ದವನು ಒಬ್ಬ ಕಾರಕೂನ. ಅಲಿ ಅವನನ್ನು ಬಹಳ ವಿಶ್ವಾಸದಿಂದ ಮಾತಾಡಿಸಿ ತನ್ನ ಅಹವಾಲು ಹೇಳಿಕೊಂಡ.  ಕಾರಕೂನ ಸುಮ್ಮನಿದ್ದ.  ಅಲಿ ತನ್ನ ಜೋಬಿಗೆ ಕೈಹಾಕಿ ಒಂದು ಪುಟ್ಟ ಪೆಟ್ಟಿಗೆ ಹೊರತೆಗೆದ. ಅದರಲ್ಲಿ ಐದು ಚಿನ್ನದ ನಾಣ್ಯಗಳಿದ್ದವು. ಯಾವುದೇ ಪುನರಾಲೋಚನೆ ಇಲ್ಲದೆ ಅವನು ನಾಣ್ಯಗಳನ್ನು ಕಾರಕೂನನ ಕೈಗೆ ಹಾಕಿದ.  ಆತ ಇದನ್ನು ಕಂಡು ಆಶ್ಚರ್ಯ ಚಕಿತನಾದ.

“ಇರಲಿ, ಇಟ್ಟುಕೊಳ್ಳಪ್ಪ. ಇವುಗಳಿಂದ ನನಗೆ ಏನೂ ಉಪಯೋಗವಿಲ್ಲ. ನಿನಗೆ ಏನಾದರೂ ಉಪಯೋಗವಾದೀತು, ಇಟ್ಟುಕೋ. ಆದರೆ ನೀನು ಒಂದು ಕೆಲಸ ಮಾಡಿಕೊಡಬೇಕು.

ಕಾರಕೂನ ಅಲಿಯ ಮುಖವನ್ನೇ ನಿಟ್ಟಿಸಿದ.

ಅಲಿ ಆಕಾಶದ ಕಡೆಗೆ ಬೆರಳು ಮಾಡಿ “ಅಲ್ಲಿ ಏನಿದೆ ಹೇಳು!” ಎಂದ.

“ಸ್ವರ್ಗ ಎಂದು ಕಾರಕೂನ ಉತ್ತರಿಸಿದ.

ಅಲಿ ದೇವರ ಹೆಸರು ಹೇಳಿ ತಾನು ನೀಡುತ್ತಿರುವ ಉಡುಗೊರೆಗೆ ಒಂದು ಗಾಂಭೀರ್ಯದ ಹೊದಿಕೆ ಹೊದಿಸಿದ. “ಪತ್ರ ಬಂದಾಗ ನನಗೆ ಖಂಡಿತ ತಲುಪಿಸಬೇಕು.” ಎಂದು ಬೇಡಿಕೊಂಡ.

ಎಲ್ಲಿಗೆ ತಲುಪಿಸಬೇಕು?” ಕಾರಕೂನ ವಿಸ್ಮಿತನಾಗಿ ಕೇಳಿದ.

“ನನ್ನ ಗೋರಿಕಲ್ಲಿಗೆ.”

ಕಾರಕೂನನಿಗೆ ಇನ್ನಷ್ಟು ಆಶ್ಚರ್ಯವಾಯಿತು.

ನಿರದ್ವೇಗದಿಂದ ಅಲಿ ನುಡಿದ – “ನನ್ನ ಆಯುಷ್ಯ ತೀರುತ್ತಾ ಬಂತು. ಇನ್ನೆಷ್ಟು ದಿವಸ ಬದುಕಿದ್ದೇನು? ಸಾಯುವ ಮುನ್ನ ನನ್ನ ಮಗಳು ಮಿರಿಯಂ ಮುಖವನ್ನು ನೋಡದೇ ಸಾಯುತ್ತಿದ್ದೇನಲ್ಲ ಅಂತ ಕೊರಗುತ್ತಿದ್ದೇನೆ.”  ಅವನ ಮುಖದಲ್ಲಿ ದುಃಖ  ಹೆಪ್ಪುಗಟ್ಟಿತ್ತು. ಕಾರಕೂನ ಚಿನ್ನದ ನಾಣ್ಯಗಳೊಂದಿಗೆ ಮನೆಯ ಕಡೆ ನಿಧಾನವಾಗಿ ಹೆಜ್ಜೆ ಹಾಕಿದಾಗ ಅಲಿಯ ಕಣ್ಣುಗಳಿಂದ ನೀರು ಧಾರೆಯಾಗಿ ಸುರಿಯಿತು. ಅವನು ಬಿಕ್ಕಿ ಬಿಕ್ಕಿ ಅಳತೊಡಗಿದ.

ಇದಾದ ನಂತರ ಅಲಿ ಅಂಚೆಕಚೇರಿಗೆ ಬರುವುದು ನಿಂತುಹೋಯಿತು. ಆದರೆ ಯಾರೂ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ.  ಅವನು ಹೇಗಿದ್ದಾನೆಂದು ನೋಡಲು ಯಾರೂ ಹೋಗಲಿಲ್ಲ.

ಮುಂದೊಂದು ದಿನ ಪೋಸ್ಟ್ ಮಾಸ್ಟರಿಗೆ ಆತಂಕದ ಕ್ಷಣಗಳು ಬಂದೊದಗಿದವು. ಬೇರೊಂದು ಊರಿನಲ್ಲಿದ್ದ ಅವರ ಮಗಳು ಕಾಯಿಲೆ ಬಿದ್ದಳು.  ಪೋಸ್ಟ್ ಮಾಸ್ಟರಿಗೆ ಮನಸ್ಸೇ ನಿಲ್ಲಲೊಲ್ಲದು. ಮಗಳು ಹೇಗಿದ್ದಾಳೋ ಏನು ಕತೆಯೋ. ಅಂದಿನ ಅಂಚೆಪತ್ರಗಳ ರಾಶಿ ಬಂದು ಅವನ ಮೇಜಿನ ಮೇಲೆ ಬಿದ್ದಿತ್ತು. ಅವುಗಳಲ್ಲಿ ಒಂದು ಕವರ್ ಅಂಚೆಯೂ ಇತ್ತು. ಅತೀವ ಅಪೇಕ್ಷೆಯೊಂದಿಗೆ ಪೋಸ್ಟ್ ಮಾಸ್ಟರ್ ಅದನ್ನು ಸೆಳೆದುಕೊಂಡರು. ಆದರೆ ಕವರ್ ಮೇಲೆ ಗಾಡೀವಾನ್ ಅಲಿ ಎಂಬ ಹೆಸರು ಬರೆದಿತ್ತು.  ಕೈಗೆತ್ತಿಕೊಂಡ ಬಿಸಿ ಪಾತ್ರೆಯನ್ನು ಕೆಳಗೆ ಬೀಳಿಸುವಂತೆ ಪೋಸ್ಟ್ ಮಾಸ್ಟರ್ ಆ ಪತ್ರವನ್ನು ಕೆಳಕ್ಕೆ ಹಾಕಿಬಿಟ್ಟರು. ಮಗಳನ್ನು ಕುರಿತಾದ ಆತಂಕವು ಅವರ ದುರಹಂಕಾರವನ್ನು ದೂರ ಮಾಡಿತ್ತು. ಅವರು ಈಗ ಮೆತ್ತಗಾಗಿ ಹೋಗಿದ್ದರು. ಅಲಿ ಯಾವ ಪತ್ರಕ್ಕಾಗಿ ಅಷ್ಟೊಂದು ಆಸೆಯಿಂದ ಕಾಯುತ್ತಿದ್ದನೋ ಇದು ಅದೇ ಪತ್ರವೆಂದು ಅವರಿಗೆ ಅರಿವಾಯಿತು.  ಕವರ್ ಮೇಲೆ ಮಿರಿಯಂ ಹೆಸರು ಬರೆದಿತ್ತು.

ಪೋಸ್ಟ್ ಮಾಸ್ಟರ್ ಕೂಡಲೇ ಅಲಿಯಿಂದ ನಾಣ್ಯಗಳನ್ನು ಕೊಡುಗೆಯಾಗಿ ಪಡೆದ ಲಕ್ಷ್ಮೀದಾಸ್ ಎಂಬ ಕಾರಕೂನನಿಗೆ ಬರಹೇಳಿದರು. ಪತ್ರವನ್ನು ಅವನ  ಕೈಗೆ ಕೊಡುತ್ತಾ “ನೋಡು, ಅಲಿಗೆ ಪತ್ರ ಬಂದಿದೆ! ಎಲ್ಲಿದ್ದಾನೆ ಅವನು?” ಎಂದು ಕೇಳಿದರು.  

ತಾನು ವಿಚಾರಿಸುತ್ತೇನೆ ಎಂದು ಲಕ್ಷ್ಮೀ ದಾಸ್ ಅವರಿಗೆ ಭರವಸೆ ನೀಡಿದ.

ಮಗಳಿಂದ ಪತ್ರ ಬಾರದ ಕಾರಣ ತಂದೆಯ ಮನಸ್ಸು ವಿಹ್ವಲವಾಗಿತ್ತು. ಅವಳು ಹೇಗಿದ್ದಾಳೋ ಎಂಬ ಚಿಂತೆಯಲ್ಲಿ ಅವರಿಗೆ ರಾತ್ರಿ ನಿದ್ದೆಯೇ ಬರಲಿಲ್ಲ. ಬೆಳಗಿನ ಮೂರು ಗಂಟೆಯವರೆಗೆ ಹಾಸಿಗೆಯಲ್ಲಿ ಹೊರಳಾಡಿ ಕೊನೆಗೆ ನಾಲ್ಕು ಗಂಟೆಗೆ ಕಚೇರಿಗೆ ಹೊರಟರು. ಅವರಿಗೆ ಏನೆನ್ನಿಸಿತೋ   ಅವರು ಅಲಿಯ ಪತ್ರವನ್ನು ತಾವೇ ಹೋಗಿ ಖುದ್ದಾಗಿ ತಲುಪಿಸುವ ನಿರ್ಧಾರ ಮಾಡಿದರು.

ಪೋಸ್ಟ್ ಮಾಸ್ಟರ್ ಮನಸ್ಸಿನಲ್ಲಿ ಅಲಿಯನ್ನು ಕುರಿತು ಸಹಾನುಭೂತಿ ಮಹಾಪೂರದಂತೆ ಹರಿಯಿತು. ಐದು ವರ್ಷಗಳಿಂದ ಪತ್ರಕ್ಕಾಗಿ ಕಾಯುತ್ತಿರುವ ಅಲಿಯ ತಪ್ತ ಮನಸ್ಥಿತಿ ಹೇಗಿದ್ದೀತು ಎಂಬುದರ ಅರಿವು ಅವರಿಗೆ  ಒಂದೇ ರಾತ್ರಿಯ ಕಾಯುವಿಕೆ ತಂದುಕೊಟ್ಟಿತು.

ಕಚೇರಿಯ ಬಾಗಿಲನ್ನು ಯಾರೋ ಮೆಲ್ಲನೆ ತಟ್ಟಿದರು. ಬೆಳಗಿನ ನಾಲ್ಕು ಗಂಟೆಗೆ ಹೀಗೆ ಬಾಗಿಲು ತಟ್ಟುವವರು ಅಲಿ ಅಲ್ಲದೆ ಬೇರಾರೂ ಇರಲು ಸಾಧ್ಯವಿಲ್ಲ ಎಂದು ಪೋಸ್ಟ್ ಮಾಸ್ಟರ್ ಎದ್ದುನಿಂತರು. ತಮ್ಮ ಮನಸ್ಸಿನಿಂದ ಅಪರಾಧೀ ಭಾವನೆಯ ಭಾರವನ್ನು ಕೆಳಗಿಳಿಸುವ ಸಮಯ ಬಂದೊದಗಿತ್ತು. ಅವರು ಕೂಡಲೇ ಹೋಗಿ ಬಾಗಿಲು ತೆರೆದರು.  ಅಲಿಯನ್ನು ಬಹಳ ಆದರದಿಂದ ಬರಮಾಡಿಕೊಂಡರು. ವಯಸ್ಸು, ಚಿಂತೆ ಮತ್ತು ದುಃಖಗಳಿಂದ ಜರ್ಜರಿತವಾಗಿಹೋಗಿದ್ದ ಮುದುಕನಿಗೆ ಅವನ ಪತ್ರವನ್ನು ತಲುಪಿಸಿದರು. ನಡೆಗೋಲನ್ನು ಕೈಯಲ್ಲಿ ಹಿಡಿದು ಅಲಿ ಬಾಗಿ ನಿಂತಿದ್ದ. ಅವನ ಕಣ್ಣುಗಳಿಂದ ನೀರು ಚಿಮ್ಮಿತು. ಬಹಳ ಕಷ್ಟ ಪಟ್ಟು ತನ್ನ ಭಾವನೆಗಳನ್ನು ಅದುಮಿಡಲು ಅವನು ಪ್ರಯತ್ನಿಸಿದರೂ ಅವನ ಮುಖದಿಂದ ಅತೀವವಾದ ಕರುಣಾಭಾವವು ಹೊಮ್ಮುತ್ತಿತ್ತು. ಕೊನೆಗೆ ಸಾವರಿಸಿಕೊಂಡು ಮುಖವನ್ನು ಮೇಲೆತ್ತಿ ಪೋಸ್ಟ್ ಮಾಸ್ಟರ್ ಕಡೆಗೆ ನೋಡಿದಾಗ ಅವನ ಕಣ್ಣುಗಳಿಂದ ಕುಕ್ಕುವಂಥ ಪ್ರಕಾಶವೊಂದು ಹೊಮ್ಮಿತು. ಪೋಸ್ಟ್ ಮಾಸ್ಟರ್ ಬೆಚ್ಚಿ ಹಿಂದೆ ಸರಿದರು.

ಆಗತಾನೇ ಒಳಗೆ ಬಂದ ಲಕ್ಷ್ಮೀ ದಾಸ್ ಪೋಸ್ಟ್ ಮಾಸ್ಟರ್ ಅವರ ಮಾತುಗಳನ್ನು ಕೇಳಿಸಿಕೊಂಡು “ಸಾಹೇಬರೇ, ಯಾರ ಜೊತೆ ಮಾತಾಡುತ್ತಿದ್ದಿರಿ? ಅಲಿ ಎನ್ನುತ್ತಿದ್ದಿರಿ?” ಎಂದು ಪ್ರಶ್ನಿಸಿದ.  ಆದರೆ ಪೋಸ್ಟ್ ಮಾಸ್ಟರ್ ಉತ್ತರಿಸಲಿಲ್ಲ. ಅಲಿ ಪ್ರವೇಶಿಸಿ ನಿರ್ಗಮಿಸಿದ ಬಾಗಿಲಿನ ಕಡೆಗೇ ನೋಡುತ್ತಾ  ಮೂಕರಾಗಿ ನಿಂತುಬಿಟ್ಟರು. ಸಾವರಿಸಿಕೊಳ್ಳಲು ಅವರಿಗೆ ಸ್ವಲ್ಪ ಹೊತ್ತು ಬೇಕಾಯಿತು. ನಂತರ “ಹೌದು, ಅಲಿ ಬಂದಿದ್ದ,” ಎಂದು ಉತ್ತರಿಸಿದರು.

“ಅದು ಸಾಧ್ಯವೇ ಇಲ್ಲ! ಅಲಿ ಸತ್ತು ಹೋದ. ಅವನ ಪತ್ರ ನನಗೆ ಕೊಡಿ.”

ಪೋಸ್ಟ್ ಮಾಸ್ಟರಿಗೆ ಆಘಾತವಾಯಿತು. ವಿಸ್ಮಯ ಮತ್ತು ದುಃಖಗಳಿಂದ ಅವರು ತತ್ತರಿಸಿಹೋದರು. “ಇದು ನಿಜವೇ? ಅಲಿ ಸತ್ತು ಹೋದನೇ?”

ಅಲ್ಲಿಗೆ ಬಂದ ಇನ್ನೊಬ್ಬ ಕಾರಕೂನ “ಹೌದು ಸಾಹೇಬರೆ, ಅವನು ಸತ್ತು ಆಗಲೇ ಮೂರು ತಿಂಗಳಾದವು” ಎಂದ.

ಪೋಸ್ಟ್ ಮಾಸ್ಟರಿಗೆ ಏನೂ ತೋರಲಿಲ್ಲ. ಅಲಿಯ ರೂಪವು ಅವರ ಕಣ್ಣಮುಂದೆ ಇನ್ನೂ ಕಟ್ಟಿತ್ತು. ಮಿರಿಯಂ ಬರೆದ ಪತ್ರವು ಬಟವಾಡೆಯಾಗದೆ ಅಲ್ಲೇ ಕೆಳಗೆ ಬಿದ್ದಿತ್ತು.

ಅಂಚೆಕಚೇರಿ ಬಹಳ ಬೇಗ ದೈನಂದಿನ ಚಟುವಟಿಕೆಗಳಿಂದ ತುಂಬಿಹೋಯಿತು. ಕಾರಕೂನ ಎಂದಿನಂತೆ ಪತ್ರಗಳ ಮೇಲಿದ್ದ ವಿಳಾಸಗಳನ್ನು ಗಟ್ಟಿಯಾಗಿ ಓದಿ ಹೇಳತೊಡಗಿದ. 

ಕಚೇರಿಗೆ ಬರುವ ಪತ್ರಗಳನ್ನು ಪೋಸ್ಟ್ ಮಾಸ್ಟರ್ ಈಗ ಬೇರೆ ದೃಷ್ಟಿಯಿಂದ ನೋಡಲು ಪ್ರಾರಂಭಿಸಿದರು. ಈ ಪತ್ರಗಳು ಕೇವಲ ನಿರ್ಜೀವ ಕಾಗದಗಳಲ್ಲ, ಅವು ಭಾವನೆಗಳಿಂದ ತುಂಬಿವೆ; ಜೀವನವನ್ನು ಕಾಯ್ದುಕೊಳ್ಳುವ ಸೆಲೆ ಅವುಗಳಲ್ಲಿ ಅಡಗಿದೆ.

ಸಂಜೆಯಾದಾಗ ಪೋಸ್ಟ್ ಮಾಸ್ಟರ್ ಲಕ್ಷ್ಮೀದಾಸ್ ಜೊತೆಗೆ ಅಲಿಯ ದಫನಸ್ಥಾನಕ್ಕೆ ಹೋದರು. ಗೋರಿಕಲ್ಲಿನ ಮೇಲೆ ಹೂಗುಚ್ಛಗಳನ್ನು ಇಡುವಂತೆ ಅವರು ಮಿರಿಯಂ ಬರೆದ ಪತ್ರವನ್ನು ಜೋಪಾನವಾಗಿ ಇಟ್ಟು ಮರಳಿದರು.  

ಪೋಸ್ಟ್ ಮಾಸ್ಟರ್  ತಲೆಯಲ್ಲಿ ಇನ್ನೂ ಬೆಳಗಿನ ಘಟನೆ ಕೊರೆಯುತ್ತಿತ್ತು. “ಲಕ್ಷ್ಮೀ ದಾಸ್, ಇವತ್ತು ಬೆಳಗ್ಗೆ ಕಚೇರಿಗೆ ಬಂದವರಲ್ಲಿ ನೀನೇ ಮೊದಲಿಗನಾ?” ಎಂದು ಕೇಳಿದರು.  

ಅವನು ಹೌದೆಂದು ಉತ್ತರಿಸಿದ.

ಪೋಸ್ಟ್ ಮಾಸ್ಟರ್ ಏನೋ ಅಸ್ಪಷ್ಟವಾಗಿ ಗೊಣಗಿದರು. ಅವರ ಮನಸ್ಸು ಇನ್ನೂ ವಿಕ್ಷುಬ್ಧವಾಗಿತ್ತು. ಅಲ್ಲಿ ಬಿಡಿಸಲಾರದ ಒಗಟುಗಳು ತುಂಬಿಕೊಂಡಿದ್ದವು. 

ಲಕ್ಷ್ಮೀ ದಾಸ್ ಇದನ್ನು ಗಮನಿಸಿ “ಯಾಕೆ ಸಾಹೇಬರೆ? ಏನಾಯಿತು?” ಎಂದು ಕುತೂಹಲದಿಂದ ಕೇಳಿದ.

ಪೋಸ್ಟ್ ಮಾಸ್ಟರ್ ಉತ್ತರಿಸಲಿಲ್ಲ. ಅವರು ಮನೆಯೊಳಗೆ ಹೋದರು. ಒಬ್ಬ ದುಃಖಿ ತಂದೆಯನ್ನು ಉಪೇಕ್ಷಿಸಿ ಮಾತಾಡಿದ್ದಕ್ಕೆ, ಅವನನ್ನು ಅಪಹಾಸ್ಯ ಮಾಡಿದ್ದಕ್ಕೆ ಅವರಿಗೆ ಪಶ್ಚಾತ್ತಾಪವಾಯಿತು. ಅಲಿಯ ಪರಿಸ್ಥಿತಿಯನ್ನು ನೆನೆದಾಗ ತಮ್ಮ ಭುಜಗಳ ಮೇಲೆ  ದೊಡ್ಡದೊಂದು ದುಃಖದ ಹೊರೆ ಕುಳಿತಂತೆ ಭಾಸವಾಯಿತು. ಅಲಿ ತನ್ನ ಮಗಳ ಪ್ರೀತಿ-ಸಾಂತ್ವನಗಳನ್ನು ಪಡೆಯದೇ ಸತ್ತುಹೋದನಲ್ಲ ಎಂದು  ಅವರಿಗೆ ಅತೀವ ನೋವಾಯಿತು. ತನ್ನ ಮಗಳ ಕಷ್ಟವನ್ನು ನೆನೆದಾಗ ಅವರ ದುಃಖ ಇಮ್ಮಡಿಯಾಯಿತು. ಅವರು ನಿಧಾನವಾಗಿ ಹೋಗಿ ಒಲೆಯ ಮುಂದೆ ಕುಸಿದು ಕುಳಿತರು.

ಕಾಮೆಂಟ್‌ಗಳು

  1. "ಪತ್ರ" ಎಂಬ ಧೂಮಕೇತು ಅವರ ಗುಜರಾತಿ ಕಥೆಯ ಅನುವಾದವನ್ನು ಇವತ್ತು ಹಂಚಿದ್ದೇನೆ. ಇದನ್ನು ಹೋಲುವ ಇನ್ನೊಂದು ಕಥೆ "ಬಾಬಾ ನೂರ್." ಅದನ್ನು ಬರೆದವರು ಅಹ್ಮದ್ ನದೀಮ್ ಕಾಜಿಮಿ. ಈ ಕತೆಯಲ್ಲೂ ಬಾಬಾ ನೂರ್ ಎಂಬ ವೃದ್ಧನೊಬ್ಬ ಪ್ರತಿನಿತ್ಯ ತನಗೆ ಮಗನಿಂದ ಪತ್ರ ಬಂದಿದೆಯೇ ಎಂದು ಕೇಳಿಕೊಂಡು ದೂರದಲ್ಲಿರುವ ಅಂಚೆಕಚೇರಿಗೆ ಬರುತ್ತಾನೆ. ಈತನನ್ನು ಕಂಡರೆ ಮಕ್ಕಳಿಗೆ ಅಸಡ್ಡೆ; ಆದರೆ ಅವನನ್ನು ಹತ್ತಿರದಿಂದ ನೋಡಿದವರಿಗೆ ತುಂಬಾ ಆದರ ಮತ್ತು ಭಕ್ತಿ. ಮಕ್ಕಳಿಗಾಗಿ ಒಂದು ಶಾಲೆಯನ್ನು ತೆರೆಯಲು ತನ್ನ ಹದಿನೈದು ಕೋಣೆಗಳ ಭವ್ಯ ಮನೆಯನ್ನೇ ದಾನ ಮಾಡುತ್ತಾನೆ. ತನ್ನ ಏಕಮಾತ್ರ ಪುತ್ರನ ಹೆಸರಿನಲ್ಲಿ ಶಾಲೆ ಪ್ರಾರಂಭಿಸುತ್ತಾನೆ. ಹಳ್ಳಿಯ ಅದೆಷ್ಟೋ ಜನರಿಗೆ ಇವನಿಂದ ಉಪಕಾರವಾಗಿದೆ. ಹಾವು ಕಚ್ಚಿದ ಒಬ್ಬ ಹುಡುಗಿಯನ್ನು ತನ್ನ ಮೋಟಾರ್ ಕಾರಿನಲ್ಲಿ ಕೂಡಿಸಿಕೊಂಡು ರಾತ್ರೋರಾತ್ರಿ ಪಟ್ಟಣದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. ಅವನಿಗೆ ಪ್ರತಿದಿನ ಇಷ್ಟು ದೂರ ನಡೆದುಕೊಂಡು ಹೋಗಿಬರಲು ಶಕ್ತಿಯಾದರೂ ಎಲ್ಲಿಂದ ಬರುತ್ತದೆ ಎಂದು ಎಲ್ಲರೂ ಆಶ್ಚರ್ಯ ಪಡುವಂತೆ ಅವನು ಬದುಕಿದ್ದಾನೆ. ಅವನಿಗೆ ಹುಚ್ಚು ಎಂದು ಮಕ್ಕಳು ಅವನನ್ನು ಹಾಸ್ಯ ಮಾಡುತ್ತಾರೆ. ಒಬ್ಬ ಕ್ಷೌರಿಕ ಅವರ ಬಗ್ಗೆ ಒಂದು ಕಥೆ ಹೇಳುತ್ತಾನೆ. ಒಮ್ಮೆ ಬಾಬಾ ನೂರ್ ಅವರಿಗೆ ವಿಪರೀತ ಜ್ವರ ಬಂದು ಒಂಟಿಯಾಗಿ ಮನೆಯಲ್ಲಿ ಮಲಗಿದ್ದಾರೆ. ಅಕಸ್ಮಾತ್ ಅವರ ಮನೆಗೆ ಅಂದು ಕ್ಷೌರಿಕ ಹೋಗುತ್ತಾನೆ. ಜ್ವರದಲ್ಲಿ ಮಲಗಿದ ಬಾಬಾ ಅವರನ್ನು ಕಂಡು ಏನಾದರೂ ಔಷಧ ಮಾಡಿದಿರಾ ಎಂದು ಕೇಳುತ್ತಾನೆ. ಬಾಬಾ ಹತ್ತಿರದಲ್ಲಿರುವ ಪವಿತ್ರ ಗ್ರಂಥವನ್ನು ತಲೆಯ ಮೇಲೆ ಇಡುವಂತೆ ಕೇಳುತ್ತಾರೆ. ಅವನು ಹಾಗೆ ಮಾಡಿದಾಗ ಅವರು ಒಂದಿಷ್ಟು ಮಂತ್ರಗಳನ್ನು ಹೇಳುತ್ತಾರೆ. ಕ್ಷೌರಿಕ ಹಕೀಮರನ್ನು ಕರೆತರಲು ಹೋಗುತ್ತಾನೆ. ಮರಳಿದಾಗ ಅಲ್ಲಿ ಬಾಬಾ ನೂರ್ ಮಂಚ ಖಾಲಿಯಾಗಿದೆ. ವಿಚಾರಿಸಿದಾಗ ಅವರು ಎಂದಿನಂತೆ ಪತ್ರ ಬಂದಿದೆಯೇ ಎಂದು ವಿಚಾರಿಸಲು ಅಂಚೆಕಚೇರಿಗೆ ನಡೆದುಕೊಂಡು ಹೋದರೆಂದು ಪಕ್ಕದ ಮನೆಯವರು ಹೇಳುತ್ತಾರೆ. "ಇಲ್ಲ, ಅವರಿಗೆ ಯಾವುದೇ ಕಾಯಿಲೆ ಇದ್ದಂತೆ ಇರಲಿಲ್ಲ" ಎನ್ನುವ ಉತ್ತರ ಬರುತ್ತದೆ.
    ಬಾಬಾ ನೂರ್ ಅವರಿಗೆ ವಯಸ್ಸಾಗುತ್ತಿದೆ, ಮರೆವು ಬಂದಿದೆ ಎಂದು ಜನ ಅವರ ಹಿಂದೆ ಆಡಿಕೊಳ್ಳುತ್ತಾರೆ. ಆದರೆ ಹಾವು ಕಚ್ಚಿದ ಘಟನೆಯನ್ನು ಅವರು ನೆನಪಿಟ್ಟುಕೊಂಡು ಹೇಳಿದಾಗ ಎಲ್ಲರೂ ಚಕಿತರಾಗುತ್ತಾರೆ. ಇದಕ್ಕೆ ಕಾರಣ ಕೊನೆಯಲ್ಲಿ ಬಯಲಾಗುತ್ತದೆ. ಅಂಚೆಕಚೇರಿಯ ಮುನ್ಷಿ ಕೆಲವು ವರ್ಷಗಳ ಹಿಂದೆ ರಾತ್ರಿ ಅವರ ಮನೆಗೆ ತೆರಳಿ ಒಂದು ಅಶುಭ ಸಮಾಚಾರವನ್ನು ಹೇಳಬೇಕಾದ ಪ್ರಸಂಗ ಬಂದಿರುತ್ತದೆ. ಅವರ ಏಕಮಾತ್ರ ಪುತ್ರ ದೇಶ ವಿಭಜನೆಯ ಸಮಯದಲ್ಲಿ ನಡೆದ ದಂಗೆಗಳಲ್ಲಿ ಸಿಡಿದ ಬಾಂಬ್ ಒಂದಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾನೆ. ಅವನ ಶರೀರ ಕೂಡಾ ಪ್ರಾಪ್ತವಾಗದಂತೆ ಛಿದ್ರವಿಛಿದ್ರವಾಗಿದೆ. ಈ ಸುದ್ದಿಯನ್ನು ಕೇಳಿದ ಬಾಬಾ ನೂರ್ ಏನೂ ಮಾತಾಡದೆ ಮುನ್ಷಿಯನ್ನೇ ನಿಟ್ಟಿಸುತ್ತಾರೆ. ಮುನ್ಷಿ ಮತ್ತೊಮ್ಮೆ "ನಿಮ್ಮ ಮಗ ಸತ್ತುಹೋಗಿದ್ದಾನೆ, ಬಾಬಾ" ಎಂದು ಸ್ಪಷ್ಟೀಕರಣ ನೀಡುತ್ತಾನೆ. ಅದಕ್ಕೂ ಬಾಬಾ ಸ್ಪಂದಿಸುವುದಿಲ್ಲ. ಇದಾದ ಮರುದಿನದಿಂದಲೇ ಅವರ ಪ್ರತಿದಿನದ ಅಂಚೆಕಚೇರಿಯ ಯಾತ್ರೆ ಪ್ರಾರಂಭವಾಗುತ್ತದೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಈಗಾಗಲೇ ನಾನಿದನ್ನು ಅನೇಕ ಬಾರಿ ಓದಿದ್ದೇನೆ, ಕೆಲವುಸಲ ಬ್ಲಾಗಿನಲ್ಲಿ ಹುಡುಕಾಡಿ ಓದಿದ್ದೇನೆ, ಮತ್ತು ಈಗಲೂ ಓದಿದೆ ಸರ್

      ಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)