ಕವಿ ತೆರೆದ ಬಾಗಿಲು
ಸಿ. ಪಿ. ರವಿಕುಮಾರ್
ಕೆ. ಎಸ್. ನರಸಿಂಹಸ್ವಾಮಿ ಅವರ ನೂರನೇ ಹುಟ್ಟುಹಬ್ಬವನ್ನು ಇವತ್ತು ಆಚರಿಸಲಾಗುತ್ತಿದೆ. ಅವರನ್ನು ನಾನು ಸ್ವಲ್ಪ ಹತ್ತಿರದಿಂದ ನೋಡಿದ್ದರಿಂದ ಕೆಲವು ನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎನಿಸುತ್ತಿದೆ.ನನ್ನ ತಂದೆ ಸಿ.ಎಚ್. ಪ್ರಹ್ಲಾದರಾವ್ ಅವರಿಗೆ ಕೆ. ಎಸ್. ನ. ಅವರ ಪರಿಚಯವಿತ್ತು. ನಾವು ಆಗ ಜಯನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆವು; ನಮ್ಮ ತಂದೆ ತಮ್ಮ ಕೆಲಸದಿಂದ ನಿವೃತ್ತಿಯಾಗುವ ಕೆಲವು ವರ್ಷಗಳ ಹಿಂದೆ ಸ್ವಂತ ಮನೆ ಕಟ್ಟಿಸುವ ಯೋಚನೆ ಮಾಡಿದರು. ಮನೆಯ ಕೆಲಸ ಪ್ರಾರಂಭವಾಗಿತ್ತು. ಕೆ. ಎಸ್. ನ. ಕೂಡಾ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರು ಏಜೀಸ್ ಕಚೇರಿಯಲ್ಲಿ ಗುಮಾಸ್ತರಾಗಿದ್ದರು. ನಮ್ಮ ತಂದೆ ಕಾಫಿ ಬೋರ್ಡ್ ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಪ್ರತಿದಿನ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದರು. ಆಗ ಸರಕಾರೀ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಒಂದು ವಿಶೇಷ ಬಸ್ ಹೊರಡುತ್ತಿತ್ತು.
ನಮ್ಮ ಮನೆಯ ಗೃಹಪ್ರವೇಶ ಸಮಾರಂಭಕ್ಕೆ ಸಂಜೆ ಕೆ. ಎಸ್. ನ. ಮತ್ತು ಇನ್ನೊಬ್ಬ ಕವಿ-ಮಿತ್ರರಾದ ಹಿ. ಮ. ನಾಗಯ್ಯ ಇಬ್ಬರೂ ಬಂದಿದ್ದು ನನಗೆ ನೆನಪಿದೆ. ಕೆ. ಎಸ್. ನ. ಅವರದ್ದು ಯಾವಾಗಲೂ ಒಂದೇ ಬಗೆಯ ಉಡುಗೆ. ಬಿಳಿ ಜುಬ್ಬಾ, ಬಿಳಿ ಪಂಚೆ. ನೆರೆಯುತ್ತಿದ್ದ ದಟ್ಟವಾದ ಕೂದಲು. ಕನ್ನಡಕದ ಹಿಂದೆ ಮಿಂಚುವ ಕಣ್ಣುಗಳು. ಗಟ್ಟಿಯಾದ ಧ್ವನಿ. ನಸ್ಯ ಹಾಕುವ ಚಟ! ಕಾಫಿ ಅವರಿಗೆ ಪ್ರಿಯವಾದ ಪಾನೀಯ. ನಮ್ಮ ತಾಯಿ ಅವರಿಗೆ ಮಾಡಿಕೊಟ್ಟ ಫಿಲ್ಟರ್ ಕಾಫಿಯನ್ನು ಹೊಗಳುತ್ತಿದ್ದರು.
ಒಂದು ದಿನ ನನ್ನ ತಂದೆ ನನ್ನನ್ನು ಕರೆದು, "ನೋಡು, ಕೆ.ಎಸ್. ನರಸಿಂಹಸ್ವಾಮಿ ಅವರ ಮನೆಗೆ ಹೋಗಿ ಇದನ್ನು ಕೊಟ್ಟು ಬಾ," ಎಂದು ಕೈಯಲ್ಲಿ ಒಂದು ಲಕೋಟೆ ಕೊಟ್ಟರು. ಅದರಲ್ಲಿ ಸ್ವಲ್ಪ ಹಣವಿತ್ತು. ಕೆ.ಎಸ್.ನ. ಅವರಿಗೆ ಯಾವುದೋ ಕೆಲಸಕ್ಕೆ ಬೇಕಾಗಿದ್ದ ಸಾಲ. ನಾನು ಅವರ ಮನೆ ಹುಡುಕಿ ಬಾಗಿಲು ತಟ್ಟಿದೆ. ಮಹಡಿಯ ಮೇಲೆ ಬಹಳ ಪುಟ್ಟ ಮನೆ. ಕವಿಗಳು ಸ್ವತಃ ಬಾಗಿಲು ತೆರೆದರು. ನಾನು ನನ್ನ ಪರಿಚಯ ಹೇಳಿದೆ. "ಗೊತ್ತು, ಗೊತ್ತು!" ಎಂದು ಒಳಗೆ ಕರೆದರು. ನಾನು ಅವರಿಗೆ ಲಕೋಟೆ ಕೊಟ್ಟಾಗ ಅವರ ಮುಖ ಅರಳಿತು. "ಕೂತುಕೋ - ಕಾಫಿ ತೊಗೊಂಡು ಹೋಗು!" ಎಂದು ನಾನು ಬೇಡವೆಂದರೂ ಅಡಿಗೆ ಮನೆಗೆ ಹೋದರು. ಅವರ ಹೆಂಡತಿ ಮನೆಯಲ್ಲಿ ಇದ್ದಂತೆ ತೋರಲಿಲ್ಲ. ಸ್ವಲ್ಪ ಹೊತ್ತಿನ ನಂತರ ಕೈಯಲ್ಲಿ ಒಂದು ಲೋಟ ಹಿಡಿದು ಕವಿಗಳು ಬಂದರು. "ಇವಳು ಮನೆಯಲ್ಲಿಲ್ಲ. ನಾನೇ ಮಾಡಿದ ಕಾಫಿ!" ಎಂದು ನನ್ನ ಕೈಯಲ್ಲಿ ಲೋಟ ಕೊಟ್ಟರು. ಅವರು ಸ್ವಂತ ಮಾಡಿದ ಕಾಫಿಯನ್ನು ಕುಡಿದವರು ಬಹಳ ಜನ ಇರಲಾರರು. ಕವನ ಬರೆಯುವ ಕೈ ಕಾಫಿ ಮಾಡಲಾರದೆ ಎಂದು ನೀವು ಕೇಳಬಹುದು. ಪಾಪ, ಅವರಿಗೆ ಕಾಫಿ ಮಾಡಲು ಬರುತ್ತಿರಲಿಲ್ಲವೆಂದೇ ತೋರುತ್ತದೆ - ಕಾಫಿಯಲ್ಲಿ ಗಸಿ ಹಾಗೇ ಇತ್ತು. ಸಕ್ಕರೆಯೂ ಇದ್ದಂತೆ ಕಾಣಲಿಲ್ಲ! ಆದರೇನು, ನನಗೆ ಅದು ಅಮೃತದಂತೆ ತೋರಿತು!
ಮುಂದೆ ಅವರ "ತೆರೆದ ಬಾಗಿಲು" ಕವನ ಸಂಗ್ರಹ ಬಿಡುಗಡೆಯಾದಾಗ ಸಾಹಿತ್ಯ ಪರಿಷತ್ತಿಗೆ ನನ್ನನ್ನು ನನ್ನ ತಂದೆ ಕಳಿಸಿದರು; ಅವರಿಗೆ ಆ ದಿನ ಮೈಯಲ್ಲಿ ಸ್ವಸ್ಥವಿರಲಿಲ್ಲ. ಸಮಾರಂಭ ಬಹಳ ಚೆನ್ನಾಗಿತ್ತು. ಅನೇಕ ಸಾಹಿತಿಗಳನ್ನು ನೋಡುವ ಮತ್ತು ಅವರ ಮಾತುಗಳನ್ನು ಕೇಳುವ ಅವಕಾಶ ನನಗೆ ಸಿಕ್ಕಿತು. ಸುಮಾರು ಹದಿನೈದು ವರ್ಷಗಳವರೆಗೆ ಯಾವ ಪುಸ್ತಕವನ್ನೂ ಪ್ರಕಟಿಸದೆ ಇಷ್ಟೊಂದು ದೀರ್ಘಾವಧಿಯ ನಂತರ ಕೆ. ಎಸ್. ನ. "ತೆರೆದ ಬಾಗಿಲು" ಕವನ ಸಂಗ್ರಹವನ್ನು ಹೊರತಂದರು. ಈ ಕವನಸಂಗ್ರಹ ನನ್ನನ್ನು ಆಕರ್ಷಿಸಿತು. ಅವರ ಹಳೆಯ ಕವಿತೆಗಳನ್ನು ನಾನು ಸ್ವಲ್ಪ ಓದಿದ್ದೆ; ಆದರೆ "ತೆರೆದ ಬಾಗಿಲು" ತನ್ನ ಹೊಸತನದಿಂದ ಆಪ್ಯಾಯವಾಯಿತು. ಕೆ. ಎಸ್. ನ. ಅವರನ್ನು "ಮೈಸೂರು ಮಲ್ಲಿಗೆ" ಕವಿ ಎಂದು ನಾವು ಪಟ್ಟ ಕಟ್ಟಿ ಅವರಿಗೆ ಸ್ವಲ್ಪ ಅನ್ಯಾಯ ಮಾಡಿದ್ದೇವೆ. ಜನಪ್ರಿಯ ಕವಿತೆಗಳ ಜೊತೆ ಜೊತೆಗೇ ಅವರು ಬಹಳ ಗಂಭೀರವಾದ ಮತ್ತು ಸತ್ತ್ವಶಾಲಿಯಾದ ಕವಿತೆಗಳನ್ನು ಬರೆದಿದ್ದಾರೆ. ಹಿಂದೊಮ್ಮೆ ಅವರ ಮನೆಗೆ ನಾನು ಹೋಗಿದ್ದಾಗ "ತೆರೆದ ಬಾಗಿಲು" ನನ್ನನ್ನು ಅವರ ಕಾವ್ಯಸೌಧಕ್ಕೆ ಮತ್ತೊಮ್ಮೆ ಆಹ್ವಾನ ನೀಡಿತು. ಅವರು ನನ್ನ ಮೆಚ್ಚಿನ ಕವಿಗಳಾದರು.
ಅದೇ ಹೊತ್ತಿಗೆ ಕ್ರೈಸ್ಟ್ ಕಾಲೇಜ್ ಕನ್ನಡ ಸಂಘದವರು ಒಂದು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದರು. ನಾನು ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದ ದಿನಗಳು. ಈ ಸ್ಪರ್ಧೆಯಲ್ಲಿ ನಾನು "ತೆರೆದ ಬಾಗಿಲು" ಕವಿತೆಗಳ ವಿಮರ್ಶೆಯನ್ನು ಪ್ರಬಂಧರೂಪದಲ್ಲಿ ಬರೆದು ಭಾಗವಹಿಸಿದೆ. ಅದಕ್ಕೆ ಎರಡನೇ ಬಹುಮಾನ ಬಂತು. ವಿಶೇಷವೆಂದರೆ ಕನ್ನಡ ಸಂಘದ ಶ್ರೀ ಶ್ರೀನಿವಾಸ ರಾಜು ಅವರು ಬಹುಮಾನಿತ ಪುಸ್ತಕಗಳನ್ನು ಒಂದು ಪುಟ್ಟ ಪುಸ್ತಕದ ರೂಪದಲ್ಲಿ ಪ್ರಕಟಿಸಿ ವಿಜೇತರಿಗೆ ಐವತ್ತು ಪ್ರತಿಗಳನ್ನು ಕೊಟ್ಟರು. ಹೊಸ ಬರಹಗಾರರನ್ನು ಪ್ರೋತ್ಸಾಹಿಸಲು ಇದಕ್ಕಿಂತ ಒಳ್ಳೆಯ ವಿಧಾನ ಬೇಕೇ? ಕೆ. ಎಸ್. ನ. ಅವರಿಗೆ ನನ್ನ ತಂದೆಯ ಮೂಲಕ ಒಂದು ಪ್ರತಿ ಹೋಯಿತು. ಅವರ ಪ್ರತಿಕ್ರಿಯೆ ಏನೋ ನೇರವಾಗಿ ಗೊತ್ತಾಗಲಿಲ್ಲ - ಅದಕ್ಕಾಗಿ ನಾನು ಸ್ವಲ್ಪ ದಿನ ಕಾಯಬೇಕಾಯಿತು. ಒಂದು ಸಲ ಅವರು ಮನೆಗೆ ಬಂದಿದ್ದಾಗ "ನಮ್ಮ ರವಿ ಕೂಡಾ ಕವಿತೆ ಬರೆಯುತ್ತಾನೆ," ಎಂದು ನಮ್ಮ ತಂದೆ ಅವರ ಮುಂದೆ ಹೇಳಿದರು. "ಒಳ್ಳೆಯದು" ಎಂದು ನನ್ನ ಕಡೆ ತಿರುಗಿ "ಕವಿತೆಗಳನ್ನು ಚೆನ್ನಾಗಿ ಓದು. ವಾಲ್ಟರ್ ಡಿಲಮೇರ್, ಬ್ರೌನಿಂಗ್, ಬರ್ನ್ಸ್, ಇವರನ್ನೆಲ್ಲಾ ಚೆನ್ನಾಗಿ ಓದಿಕೋ," ಎಂದು ನನಗೆ ಸಲಹೆ ಕೊಟ್ಟರು.
ನ್ಯಾಷನಲ್ ಕಾಲೇಜಿನಿಂದ ಪಿ.ಯು.ಸಿ. ಮುಗಿಸಿ ನಾನು ಇಂಜಿನಿಯರಿಂಗ್ ಸೇರಿದೆ. ಒಂದು ದಿನ ಆಕಾಶವಾಣಿಯ "ಯುವವಾಣಿ" ಕಾರ್ಯಕ್ರಮದ ಆಯೋಜಕರಿಂದ ನನಗೆ ಆಹ್ವಾನ ಬಂದಿತು. ಕವಿ ಕೆ. ಎಸ್. ನರಸಿಂಹಸ್ವಾಮಿ ಅವರ ಸಂದರ್ಶನದ ಕಾರ್ಯಕ್ರಮದಲ್ಲಿ ನಾನೊಬ್ಬ ಸಂದರ್ಶಕನಾಗಬೇಕೆಂಬ ಆಹ್ವಾನ! ಬಹುಶಃ ನನ್ನ ಪ್ರಬಂಧದ ಪ್ರತಿಗೂ ಈ ಆಹ್ವಾನಕ್ಕೂ ಏನಾದರೂ ಸಂಬಂಧ ಇರಬಹುದೇನೋ! ಸಂದರ್ಶನದ ದಿವಸವೂ ಬಂತು. ನಾನು ಪ್ರಶ್ನೆಗಳನ್ನು ಗುರುತು ಹಾಕಿಕೊಂಡು ಸಿದ್ಧನಾಗಿ ಹೋದೆ. ಇನ್ನೊಬ್ಬ ಸಂದರ್ಶಕಿಯಾಗಿ ಸುಧಾ ಪತ್ರಿಕೆಯ ಉಪಸಂಪಾದಕಿ ವಿಜಯಶ್ರೀ ಬಂದಿದ್ದರು. ಸಂದರ್ಶನಕ್ಕೆ ಮುಂಚೆ ಕವಿಗಳ ಜೊತೆ ಸ್ವಲ್ಪ ಸಮಯ ಕಳೆಯುವ ಅವಕಾಶ ದೊರೆಯಿತು. ಸಂದರ್ಶನ ಚೆನ್ನಾಗಿ ಬಂತು; ಕೆ. ಎಸ್. ನ. ನನ್ನ ಪ್ರಶ್ನೆಗಳಿಗೆ (ನಾನು ಪ್ರಶ್ನೆಗಳನ್ನು ಅವರಿಗೆ ಮುಂಚೆ ತಿಳಿಸಿರಲಿಲ್ಲ) ಕಾವ್ಯಮಯವಾದ ಉತ್ತರಗಳನ್ನು ಕೊಟ್ಟರು. ನನ್ನ ಅಪೇಕ್ಷೆಯ ಮೇರೆಗೆ ಕವಿತೆಯ ಕೆಲವು ಸಾಲುಗಳನ್ನು ಓದಿದರು. ರಿಕಾರ್ಡಿಂಗ್ ಮುಗಿದ ಮೇಲೆ ನನ್ನ ಬೆನ್ನು ತಟ್ಟಿ ಒಳ್ಳೆಯ ಮಾತಾಡಿದರು.
ಇದಾದ ನಂತರ ಅವರನ್ನು ಮುಖತಃ ಕಂಡು ಮಾತಾಡುವ ಅವಕಾಶ ಸಿಕ್ಕಲಿಲ್ಲ. ಹನುಮಂತನಗರದಲ್ಲಿ ಅವರಿಗೆ ಸರಕಾರವು ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಬಾಡಿಗೆ ಮನೆಗಳ ಬವಣೆ ತಪ್ಪಿತು. ಅವರ "ಮನೆಯಿಂದ ಮನೆಗೆ" ಕವಿತೆಯಲ್ಲಿ ಬಾಡಿಗೆ ಮನೆಯಿಂದ ಬಾಡಿಗೆ ಮನೆಗೆ ಅಲೆಯುವ ಕವಿಯ ಬವಣೆಯ ವಿಷಯ ಬರುತ್ತದೆ; "ಅಲ್ಲಿದೆ ನಮ್ಮ ಮನೆ, ಇಲ್ಲಿಗೆ ಬಂದೆವು ಸುಮ್ಮನೆ" ಎಂಬ ಅರ್ಥದ ಸಾಲುಗಳೂ ಕವಿತೆಯಲ್ಲಿ ಬಂದು ಹಾಸ್ಯಮಯವಾಗಿ ಪ್ರಾರಂಭವಾಗುವ ಕವಿತೆಗೆ ಒಂದು ಗಂಭೀರವಾದ ಚೌಕಟ್ಟು ದೊರೆಯುತ್ತದೆ. ಪ್ರೇಮಗೀತೆಗಳಿಗಾಗಿ, ಯುಗಾದಿ/ದೀಪಾವಳಿಯ ಸಂದರ್ಭಗಳಲ್ಲಿ ಅವರು ತಪ್ಪದೇ ಬರೆಯುತ್ತಿದ್ದ ಸಾಂಪ್ರದಾಯಿಕ ಕವಿತೆಗಳಿಗಾಗಿ ಅವರು ಪ್ರಸಿದ್ಧರಾದ್ದರಿಂದ ಅವರ ಕವಿತೆಗಳ ಹಿನ್ನೆಲೆಯಲ್ಲಿ ಕೇಳುವ ಧ್ವನಿಗಳನ್ನು ನಾವು ಕೇಳಿಸಿಕೊಳ್ಳದೆ ಕವಿಗೆ ಅನ್ಯಾಯವಾಗಿದೆ ಎಂದು ನನ್ನ ಅಭಿಪ್ರಾಯ. ಅವರ ಗಂಭೀರ ಕವಿತೆಗಳನ್ನು ಕುರಿತು ಮುಂದೆಂದಾದರೂ ಬರೆಯುತ್ತೇನೆ.
ಪೂರ್ತಿ ಲೇಖನವನ್ನು ಓದಿದೆ ಸರ್
ಪ್ರತ್ಯುತ್ತರಅಳಿಸಿ