ಗಾಂಧಿ, ಜುರಾಸಿಕ್ ಪಾರ್ಕ್ ಮತ್ತು ಆಟೆನ್ ಬರೋ



"ಗಾಂಧಿ" ನಿರ್ದೇಶಿಸಿದ ಆಟೆನ್ ಬರೋಗೆ  ಜುರಾಸಿಕ್ ಪಾರ್ಕ್ ಪಾತ್ರಕ್ಕೆ ಗಾಂಧಿಯೇ ಪ್ರೇರಣೆಯಾಗಿದ್ದರೇನೋ!

ಸಿ ಪಿ ರವಿಕುಮಾರ್

ರಿಚರ್ಡ್ ಆಟೆನ್ ಬರೋ ಅವರು ತೊಂಬತ್ತು ವರ್ಷಗಳ ತಮ್ಮ ಸುದೀರ್ಘ ಪಯಣ ಮುಗಿಸಿದರೆಂಬ ಸುದ್ದಿ ಬಂದಿದೆ.  ಭಾರತೀಯರಿಗೆ  ಅವರು "ಗಾಂಧಿ" ಚಿತ್ರದ ನಿರ್ಮಾಪಕ-ನಿರ್ದೇಶಕರೆಂದು ಚಿರಪರಿಚಿತರು.  ಎಂಬತ್ತರ ದಶಕದಲ್ಲಿ ಈ ಚಿತ್ರ ಬಿಡುಗಡೆಯಾದಾಗ ಅದನ್ನು ನೋಡಲು ನಾನು ನನ್ನ ತಂದೆಯವರ ಜೊತೆ ಹೋಗಿದ್ದು ನೆನಪಾಗುತ್ತಿದೆ. ಆಗ ನನ್ನ ತಂದೆಯವರ ಆರೋಗ್ಯ ಅಷ್ಟು ಚೆನ್ನಾಗಿರಲಿಲ್ಲ. ಹೊರಗೆ ಹೋಗಿ ಬಂದರೆ ಒಂದು ಬದಲಾವಣೆ ಇರುತ್ತದೆಂದು ಅವರನ್ನು "ಗಾಂಧಿ" ಚಿತ್ರ ನೋಡಲು ಹೋಗೋಣವೇ ಎಂದು ಕರೆದೆ.  ಆಶ್ಚರ್ಯಕ್ಕೆ ಅವರು ಒಪ್ಪಿಕೊಂಡರು.  ಹತ್ತಿರ ಇದ್ದ ಬೆಂಗಳೂರು ಡ್ರೈವ್-ಇನ್ ಥಿಯೇಟರಿನಲ್ಲಿ ಹಿಂದಿ ಭಾಷೆಯಲ್ಲಿ ಚಿತ್ರ ನೋಡಲು ಹೊರಟೆವು. ಈಗ ಈ ಚಿತ್ರಮಂದಿರ ಇಲ್ಲ.

ದೊಡ್ಡ ತೆರೆಯ ಮೇಲೆ ಗಾಂಧಿ ಚಿತ್ರವನ್ನು ನೋಡಿದಾಗ ರೋಮಾಂಚನವಾಯಿತು.  ಚಿತ್ರ ಪ್ರಾರಂಭವಾಗುವುದು ಗಾಂಧೀಜಿಯ ಹತ್ಯೆಯ ಸನ್ನಿವೇಶದಿಂದ.  "ಹೇ ರಾಮ್!" ಎಂದು ಗಾಂಧೀಜಿ ಕುಸಿದಾಗ ಕಥೆ ಹಿಂದಕ್ಕೆ ಹಾರುತ್ತದೆ. ಅಪಾರ್ಥೇಡ್ ನಾಡಾದ ದಕ್ಷಿಣ ಆಫ್ರಿಕಾದಲ್ಲಿ ಒಬ್ಬ ಬಿಳಿದೊರೆಯ ಜೊತೆ ಪ್ರಯಾಣ ಮಾಡುವ ಧಾರ್ಷ್ಟ್ಯ ತೋರಿಸಿದ ಒಬ್ಬ ಮಧ್ಯವಯಸ್ಕ ಭಾರತೀಯನನ್ನು ರೈಲಿನಿಂದ ಹೊರಗೆ ತಳ್ಳಿದ ಘಟನೆ. ಮುಂದೆ ಇದೇ ಕಂದು ತೊಗಲಿನ ಮನುಷ್ಯ ದಕ್ಷಿಣ ಆಫ್ರಿಕಾದಲ್ಲಿ ದುಡಿಯುತ್ತಿದ್ದ ಇನ್ನಿತರ ಭಾರತೀಯ ಮೂಲದ ಜನರನ್ನು ಸಂಘಟಿಸಿದ್ದು, ಹೊರದೇಶದವರಿಗೆ ಅಲ್ಲಿಯ ಸರಕಾರದವರು ಕೊಟ್ಟಿದ್ದ "ಪಾಸ್" ಗಳನ್ನು ಅವು ಹೀನಾಯಕರ ಎಂದು ಪ್ರತಿಭಟಿಸಿ ಸುಟ್ಟಿದ್ದು, ಆಗ ಲಾಠಿ ಹೊಡೆತಕ್ಕೆ ಅವನು ಕುಸಿದಿದ್ದು, ಜೈಲು ಸೇರಿದಾಗ ಜೆನೆರಲ್ ಸ್ಮಟ್ಸ್ ಗೆ ಚಪ್ಪಲಿ ಹೊಲಿದುಕೊಟ್ಟಿದ್ದು.  ಟಾಲ್ಸ್ ಟಾಯ್ ಫಾರ್ಮ್ ನಲ್ಲಿ ಭಿನ್ನ ಜಾತಿಯವನೆಂದು ಗಾಡಿಯ ಕೋಚ್ ಮನ್ ಗೆ ಕಸ್ತೂರಬಾ ಊಟ ಬಡಿಸಲು ನಿರಾಕರಿಸಿದ್ದು, ಆಗ ಗಾಂಧಿ ಅವರ ಮೇಲೆ ಕೈ ಎತ್ತಲು ಹೋಗಿ ಪಶ್ಚಾತ್ತಾಪ ಪಟ್ಟಿದ್ದು.

ಗಾಂಧಿ ಭಾರತಕ್ಕೆ ಮರಳಿದಾಗ ಗೋಖಲೆ ಅವರನ್ನು ಎದುರುಗೊಂಡು ಅವರಿಗೆ ಸ್ವರಾಜ್ಯ ಚಳುವಳಿಯ ಮುಂದಾಳುವಾಗಲು ಪ್ರೇರೇಪಿಸಿದ್ದು, ಭಾರತವನ್ನು ಅರ್ಥ ಮಾಡಿಕೊಳ್ಳಲು ಗಾಂಧಿ ತಮ್ಮ ಮಡದಿಯೊಂದಿಗೆ ರೈಲಿನಲ್ಲಿ ದೇಶದ ಉದ್ದಗಲ ಪ್ರಯಾಣಿಸಿದ್ದು, ಮಾನ ಮುಚ್ಚಲು ಕೂಡಾ ಬಟ್ಟೆ ಇಲ್ಲದ ಒಬ್ಬ ಹೆಂಗಸನ್ನು ಕಂಡಾಗ ತಮ್ಮ ಉತ್ತರೀಯವನ್ನು ತೇಲಿಬಿಟ್ಟು ಆನಂತರ ತಾವೂ ಅರೆಬತ್ತಲು ಫಕೀರರಂತೆ ಜೀವಿಸಲು ಪ್ರಾರಂಭಿಸಿದ್ದು.

ಚಂಪಾರಣ್ಯಕ್ಕೆ ಭೇಟಿ ಕೊಟ್ಟಾಗ ಅಲ್ಲಿ ರೈತರ ಮೇಲೆ ನಡೆಯುತ್ತಿದ್ದ ಶೋಷಣೆಯನ್ನು ನೋಡಿ ಗಾಂಧೀಜಿ ಮತ್ತು ಕಸ್ತೂರಬಾ ಕರಗಿ ಹೋಗಿದ್ದು.  ಅಮೃತಸರದಲ್ಲಿ ಜಾಲಿಯಾನ್ ವಾಲಾ ಬಾಗ್ ಘಟನೆಯಲ್ಲಿ ಸಹಸ್ರಾರು ಮಂಡಿಯನ್ನು ಗುಂಡಿಕ್ಕಿ ಕೊಂದ ಸ್ಥಳಕ್ಕೆ ಗಾಂಧಿ ಭೇಟಿ ನೀಡಿದ್ದು.  ಬ್ರಿಟಿಷ್ ಸರಕಾರವನ್ನು ಅಲ್ಲಾಡಿಸಲು ಸತ್ಯಾಗ್ರಹದ ಮಾರ್ಗವನ್ನು ಅನುಸರಿಸಿದ್ದು. ಚೌರಿಚೌರಾ ಘಟನೆಯ ನಂತರ ನಾವಿನ್ನೂ ಸ್ವರಾಜ್ಯಕ್ಕೆ ಸಿದ್ಧರಾಗಿಲ್ಲ ಎಂದು ಸ್ವಾತಂತ್ರ್ಯ ಸಂಗ್ರಾಮವನ್ನು ನಿಲ್ಲಿಸಿದ್ದು.   ದುಂಡು ಮೇಜಿನ ಪರಿಷತ್ತಿಗೆ ಪ್ರಯಾಣ ಮಾಡಿದ್ದು.  ಉಪ್ಪಿನ ಸತ್ಯಾಗ್ರಹ ಎಂಬ ಅದ್ಭುತ ಕಲ್ಪನೆಯನ್ನು ಹುಟ್ಟು ಹಾಕಿ ಜನರಿಗೆ ಸ್ವರಾಜ್ಯದ ಅರ್ಥವನ್ನು ಮನವರಿಕೆ ಮಾಡಿಕೊಟ್ಟಿದ್ದು.  ಕಸ್ತೂರಬಾ ಅವರನ್ನು ಕಳೆದುಕೊಂಡು ಅನಾಥಪ್ರಜ್ಞೆ ಅನುಭವಿಸಿದ್ದು.

ಕೊನೆಗೂ ಸ್ವರಾಜ್ಯ ಕೈಗೆ ಬಂದಿತೆನ್ನುವ ವೇಳೆಗೆ ಭಾರತದ ವಿಭಜನೆಯ ಮಾತು ಕೇಳಿ ಆಘಾತ ಹೊಂದಿದ್ದು, ಇನ್ನೇನೂ ಮಾಡಲಾರದೇ ಒಪ್ಪಿಗೆ ಸೂಚಿಸಿದ್ದು,  ಭಾರತದ ಎಲ್ಲ ಕಡೆ ಸಿಡಿದೆದ್ದ ಹಿಂಸೆಯಿಂದ ಅತೀವ ದುಃಖದ ನಡುವೆಯೂ ನವಖಲಿಗೆ ಧಾವಿಸಿದ್ದು. ಉಪವಾಸಕ್ಕೆ ಕುಳಿತು ಜನರನ್ನು ಕೊನೆಗೂ ಬಗ್ಗಿಸಿದ್ದು.

ಗಾಂಧೀಜಿಯ ಜೀವನದ ಕಥೆಯನ್ನು ಹೀಗೆ ತೆರೆಯ ಮೇಲೆ ಅನನ್ಯವಾಗಿ ಸೆರೆ ಹಿಡಿದ ಖ್ಯಾತಿ ಸರ್ ರಿಚರ್ಡ್ ಆಟೆನ್ ಬರೋ ಅವರದ್ದು. ಅವರಿಗೆ ಭಾರತೀಯರು ಎಂದಿಗೂ ಕೃತಜ್ಞರಾಗಿರುತ್ತಾರೆ.  ಚಿತ್ರ ನೋಡಿ ಮರಳಿ ಬರುವಾಗ "ಉಪ್ಪಿನ ಸತ್ಯಾಗ್ರಹದ ಸನ್ನಿವೇಶವನ್ನು ಅದೆಷ್ಟು ನಾಟಕೀಯವಾಗಿ ಸೃಷ್ಟಿಸಿದ್ದಾರೆ! ಅದ್ಭುತ!" ಎಂದು ಹೊಗಳುತ್ತಾ ಬಂದಿದ್ದು ನನಗೆ ಇನ್ನೂ ನೆನಪಿದೆ.

ರಿಚರ್ಡ್ ಆಟೆನ್ ಬರೋ ಸ್ವತಃ ಶ್ರೇಷ್ಠ ನಟ. ಜುರಾಸಿಕ್ ಪಾರ್ಕ್ ಚಿತ್ರದಲ್ಲಿ ಡೈನೋಸಾರ್ ಗಳನ್ನು ಪುನರ್ ಸೃಷ್ಟಿಸುವ  ದೈತ್ಯ ಕಲ್ಪನೆಯನ್ನು ಹುಟ್ಟುಹಾಕಿದ ಪಾರ್ಕಿನ ಶ್ರೀಮಂತ ಒಡೆಯನಾಗಿ ಅವರ ಅಭಿನಯವನ್ನು ಯಾರು ಮರೆಯಲು ಸಾಧ್ಯ? ಜುರಾಸಿಕ್ ಪಾರ್ಕ್ ಕಲ್ಪನೆ ನೋಡನೋಡುತ್ತಲೇ ಒಂದು ದುಃಸ್ವಪ್ನವಾದಾಗ ಪಾರ್ಕಿನ ಒಡೆಯ ಕಂಗಾಲಾಗುತ್ತಾನೆ; ಅವನ ಮೊಮ್ಮಕ್ಕಳೇ ಪ್ರಾಣಾಪಾಯದಲ್ಲಿ ಸಿಲುಕಿದ್ದಾರೆ. ಅವನು  ಏನೇನೋ ಕಲ್ಪನೆ ಇಟ್ಟುಕೊಂಡು ಸೃಷ್ಟಿಸಿದ ಜುರಾಸಿಕ್ ಪಾರ್ಕ್ ಅವನ ಕಣ್ಮುಂದೆಯೇ ನಾಶವಾಗುತ್ತಿದೆ.  ಬಹುಶಃ ಗಾಂಧಿಯೂ ಇದೇ ಬಗೆಯ ಹತಾಶೆಯನ್ನು ಸ್ವಾತಂತ್ರ್ಯದ ಹೊಸ್ತಿಲಲ್ಲಿ ಅನುಭವಿಸಿರಬಹುದು.  "ಗಾಂಧಿ" ನಿರ್ದೇಶಿಸಿದ ಆಟೆನ್ ಬರೋಗೆ  ಜುರಾಸಿಕ್ ಪಾರ್ಕ್ ಪಾತ್ರಕ್ಕೆ ಗಾಂಧಿಯೇ ಪ್ರೇರಣೆಯಾಗಿದ್ದರೇನೋ!

ಗಾಂಧಿ, ಜುರಾಸಿಕ್ ಪಾರ್ಕ್ ಮತ್ತು ಆಟೆನ್ ಬರೋ



ಏನೇನೋ ಕಲ್ಪಿಸಿಕೊಂಡು ಕಟ್ಟಿದ
ಜುರಾಸಿಕ್ ಪಾರ್ಕ್
ನೋಡನೋಡುತ್ತಲೇ
ನಿರ್ನಾಮವಾಗುತ್ತಿದೆ -
ಒಂದು ಡೈನೋಸಾರ್
ಇನ್ನೊಂದನ್ನು ತಿನ್ನುತ್ತಿದೆ -
ಹತಾಶನಾಗಿ ನೋಡುತ್ತಿದ್ದಾನೆ
ಕುಂಟುಹೆಜ್ಜೆ ಹಾಕುವ
ಪಾರ್ಕಿನ ಒಡೆಯ.


ಸ್ವರಾಜ್ಯದ ಭವ್ಯ ಕಲ್ಪನೆಯ
ಹೊಸ್ತಿಲಲ್ಲೇ
ವಿಭಜನೆಯ ಕೊಡಲಿ ಪೆಟ್ಟಿಗೆ
ಚಿಮ್ಮಿದ ನೆತ್ತರನ್ನು
ನೋಡುತ್ತಾ
ಹೀಗೇ ಹತಾಶರಾಗಿದ್ದರೇ ಗಾಂಧಿ?


ಗಾಂಧಿಯೇ ಪ್ರೇರಣೆಯಾಗಿದ್ದರೇ
ಆಟೆನ್ ಬರೋನ
ಜುರಾಸಿಕ್ ಪಾರ್ಕ್ ಪಾತ್ರಕ್ಕೆ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)